Site icon Vistara News

ಧವಳ ಧಾರಿಣಿ ಅಂಕಣ: Gandhi Jayanthi: ಅಹಿಂಸೆಗೊಂದು ಅಸ್ಮಿತೆಯನ್ನು ಕೊಟ್ಟ ಸನಾತನಿ

Mahatma gandhi biirthday

ಗಾಂಧಿ ಎನ್ನುವುದು ಒಂದು ಯುಗಧರ್ಮ

ಮಹಾತ್ಮಾ ಗಾಂಧಿಯವರು (Mahatma Gandhi) ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದ ಮೇಲೆ ಭಾರತದ ಸ್ವಾತಂತ್ರ್ಯ ಹೋರಾಟದ (Freedom struggle) ದಿಕ್ಕೇ ಬದಲಾಯಿತು. ಇಲ್ಲಿಗೆ ಬರುವಾಗಲೇ ಗಾಂಧಿಯವರ ಮೇಲೆ ಅನೇಕ ನಿರೀಕ್ಷೆಗಳಿದ್ದವು. ಹಾಗಂತ ಗಾಂಧಿಯವರಿಗೆ ಈ ಹಾದಿ ಸುಲಭದ ಸಾಧನವಾಗಿರಲಿಲ್ಲ. ದಕ್ಷಿಣ ಆಫ್ರಿಕಾದಲ್ಲಿನ ಗಾಂಧೀಜಿಯವರ ಹೋರಾಟ ಸ್ವಾತಂತ್ರ್ಯ ಹೋರಾಟವಾಗಿರದೇ, ಅದು ಆರ್ಥಿಕ ಮತ್ತು ಸಾಮಾಜಿಕ ವಿಷಯಗಳಿಗೆ ಸೀಮಿತವಾಗಿತ್ತು. ವರ್ಣಬೇಧ ನೀತಿಯ ವಿರುದ್ಧ ಹೋರಾಟ ಮಾಡುವುದಾಗಿತ್ತು. ಅವರ ಸತ್ಯಾಗ್ರಹ ಮತ್ತು ಗುರಿ ಸಾಧಿಸುವ ವಿಚಾರದಲ್ಲಿ ರಾಜಿಯಿಲ್ಲದಿರುವಿಕೆ ಗಾಂಧಿಯವರ ಪ್ರಧಾನ ಅಂಶವಾಗಿತ್ತು. ಗಾಂಧಿ ಸಂಘಟಿಸಿದ ಹೋರಾಟದ ಗುರಿ, ದುಡಿಯಲು ಹೋದ ಭಾರತೀಯರ ಬದುಕಿನ ನಿಕೃಷ್ಟ ಪರಿಸ್ಥಿತಿಯನ್ನು ಬದಲಾಯಿಸುವುದು ಗುರಿಯಾಗಿತ್ತು.

ಈ ಹೊತ್ತಿನಲ್ಲಿ ಅವರು ಕಂಡುಕೊಂಡ ಸಂಗತಿಯೆಂದರೆ ಭಾರತೀಯ ಕೂಲಿಗಳಲ್ಲಿ ತಮ್ಮ ಧರ್ಮದ ಕುರಿತು ಇರುವ ಅಜ್ಞಾನ. ಆದರೆ ಇಲ್ಲಿಂದ ಹೋದ ಇಸ್ಲಾಮಿಯರಿಗೆ ತಮ್ಮ ಧರ್ಮದ ಆಚರಣೆಯ ಕುರಿತು ನಂಬುಗೆ ಮತ್ತು ತಿಳುವಳಿಕೆ ಇತ್ತು. ಈ ದೌರ್ಬಲ್ಯವನ್ನು ಕಂಡುಕೊಂಡ ಮಿಷನರಿಗಳು ಹಿಂದುಗಳನ್ನು ಇಸಾಯಿ ಮತಕ್ಕೆ ಮತಾಂತರಿಸುತ್ತಿದ್ದರು. ಮತಾಂತರಿತನ ಸಾಮಾಜಿಕ ಸ್ಥಿತಿಯಲ್ಲಿ ಮಾತ್ರ ಯಾವ ಸುಧಾರಣೆಯೂ ಆಗುತ್ತಿರಲಿಲ್ಲ. ಇತ್ತ ಮೂಲ ಧರ್ಮವೂ ಇಲ್ಲದೇ, ಅತ್ತ ಸಮಾಜದ ಮನ್ನಣೆಯೂ ಇಲ್ಲದೇ ಅವರು ಕೊಳಗೇರಿಗಳಲ್ಲಿ ದಿನಗಳನ್ನು ಕಳೆಯುತ್ತಿದ್ದರು. ಭಾರತೀಯರ ಆಚರಣೆಗಳ ಕುರಿತು ಸ್ವತಃ ಗಾಂಧೀಜಿಯವರಿಗೂ ಪೂರ್ತಿ ಅರಿವಿರಲಿಲ್ಲ. ಅವರ ಮೇಲೆ ತುಂಬಾ ಪ್ರಭಾವವನ್ನು ಬೀರಿದ ಕೃತಿಯಾದ ಭಗವದ್ಗೀತೆಯ (Bhagavad geetha) ಕುರಿತು ಅವರಿಗೆ ತಿಳುವಳಿಕೆ ಬಂದಿದ್ದೇ ಸರ್ ಅರ್ನಾಲ್ಡ ಎಡ್ವಿನ್ನರ “The Song Celestial” ಓದಿದ ಮೇಲೆ. ಅರ್ನಾಲ್ಡರ ಈ ಕೃತಿ ಪಾಶ್ಚಾತ್ಯರಿಗೆ ಭಗವದ್ಗೀತೆಯ ಮಹತ್ವದ ಕುರಿತು ಪರಿಚಯಿಸಿದೆ. ಈ ಸಂಗತಿ ಗಾಂಧೀಜಿಯವರಿಗೆ ತಿಳಿದಿರುವುದೂ ಸಹ ಇಂಗ್ಲೆಂಡಿನಲ್ಲಿ ಥಿಯೋಸೋಫಿಸ್ಟ್ ಸೊಸಾಯಿಟಿಯ ಸದಸ್ಯರಾದ ಓಲ್ಕಾಟ್ ಸಹೋದರರಿಂದ. ಈ ಸಹೋದರರು ಸಂಸ್ಕೃತದಲ್ಲಿನ ಗೀತೆಯನ್ನು ಅರ್ನಾಲ್ಡರ The Song Celestial ಜೊತೆ ಅಭ್ಯಾಸ ಮಾಡುತ್ತಿದ್ದರು. ಗಾಂಧಿ ಭಾರತೀಯರಾಗಿರುವುದರಿಂದ ಸಹಜವಾಗಿ ಅವರಿಗೆ ಸಂಸ್ಕೃತದ ಅರಿವು ಇರಬಹುದೆಂದು ಅವರ ಹತ್ತಿರ ಸಹಾಯವನ್ನು ಯಾಚಿಸಿದರು. ಆದರೆ ಗಾಂಧೀಜಿಗೆ ಭಗವದ್ಗೀತೆಯ ಕುರಿತು ಅಷ್ಟೇನೂ ಗೊತ್ತಿರಲಿಲ್ಲ. ಈ ಕುರಿತು ಅವರು ತಮ್ಮ ಆತ್ಮಕಥೆಯಲ್ಲಿ “ನಾನು ಸಂಸ್ಕೃತದಲ್ಲಾಗಲೀ, ಗುಜರಾತಿಯಲ್ಲಾಗಲೀ, ಭಗವದ್ಗೀತೆಯನ್ನು ಓದಲು ಸಾಧ್ಯವಾಗುವುದಿಲ್ಲವೆನ್ನುವ ವಿಷಯದ ಕುರಿತು ನಾಚಿಕೆ ಪಟ್ಟುಕೊಂಡೆ” ಎಂದು ಬರೆದುಕೊಂಡಿದ್ದಾರೆ.

ಆದರೆ ಈ ದೌರ್ಬಲ್ಯವನ್ನು ಅವರು ಗೀತೆಯನ್ನು ಮೂಲ ಸಂಸ್ಕೃತದಲ್ಲಿಯೇ ಓದುವ ಹಟವನ್ನಾಗಿ ಪರಿವರ್ತನೆಗೊಳಿಸಿಕೊಂಡಿದ್ದು ಮಾತ್ರವಲ್ಲ ಅದರ ಪ್ರತಿಯೊಂದು ಪದ್ಯಗಳನ್ನೂ ಮನನ ಮಾಡಿಕೊಂಡರು. ಇದರೊಟ್ಟಿಗೆ ಬೈಬಲ್ ಮತ್ತು ಕುರಾನ್‌ಗಳನ್ನೂ ಸಹ ಅಭ್ಯಾಸ ಮಾಡಿದರು. ಗೀತೆ ಅವರ ಮೇಲೆ ಪ್ರಭಾವ ಬೀರಿರುವುದಕ್ಕೆ ಮುಖ್ಯ ಕಾರಣ “ಮೋಕ್ಷವನ್ನು ಸಾಧಿಸುವುದಕ್ಕೆ ಸನ್ಯಾಸ ಅಥವಾ ವೈರಾಗ್ಯ ಮಾತ್ರವೇ ಹಾದಿಯಲ್ಲ. ವ್ಯಕ್ತಿಯೋರ್ವ ಈ ಪ್ರಪಂಚದಲ್ಲಿ ಬದುಕಿರುತ್ತಲೇ, ಗೀತೆಯಲ್ಲಿನ ಉಪದೇಶದಂತೆ ತನ್ನ ಕರ್ತವ್ಯವನ್ನು ಮಾಡಿ ಅದರ ಫಲವನ್ನು ತ್ಯಾಗ ಮಾಡುವ ನಿಷ್ಕಾಮ ಕರ್ಮವನ್ನು ಮಾಡುವುದರ ಮೂಲಕ ಮಹೋನ್ನತ ಗುರಿಯನ್ನು ತಲುಪಬಹುದು. ಸ್ಥಿತಪ್ರಜ್ಞೆಯನ್ನು ರೂಢಿಸಿಕೊಳ್ಳುವ ಮೂಲಕ ತಾನು ಮಾಡುವ ಕೆಲಸವನ್ನು ನಿರ್ಲಿಪ್ತ ಭಾವದಿಂದ, ನಿರ್ಮೋಹದಿಂದ, ವಿಷಯಸುಖಗಳಿಗೆ ಅಂಟಿಕೊಳ್ಳದೇ ದೇವರಿಗೆ ಸಮರ್ಪಿತ ಎನ್ನುವ ಭಾವದಿಂದ ಜ್ಞಾನಿಯಾಗಬಹುದು” ಎನ್ನುವುದಾಗಿದೆ. ಈ ಮೂಲಕ ಅವರು ಸ್ವತಃ ಸತ್ಯದ ಉತ್ಕಟ ಅನ್ವೇಷಕ ಮತ್ತು ಕರ್ಮಯೋಗಿ ಮತ್ತು ಕ್ರಿಯಾತ್ಮಕ ವ್ಯಕ್ತಿಯಾಗಲು ಪ್ರಯತ್ನಿಸಿದರು. ಭಗವದ್ಗೀತೆಯನ್ನು ಅವರು ಅಭ್ಯಸಿದದಂತೆ ಅವರು ಪ್ರಪಂಚದ ಇನ್ನಿತರ ಮತಗ್ರಂಥಗಳನ್ನೂ ಓದಿದರು. ಕ್ರಿಸ್ತನ ಬೆಟ್ಟದ ಮೇಲಿನ ಉಪದೇಶ “The Sermon on the Mount”, ಗಾಂಧಿಯವರ ಹೃದಯವನ್ನು ತಟ್ಟಿದ ಕೃತಿ. ಅದರ ಉಪದೇಶವನ್ನು ಗಾಂಧಿ ಗೀತೆಯೊಂದಿಗೆ ತುಲನೆ ಮಾಡುತ್ತಾರೆ. “ಯಾರಾದರೂ ನಿಮಗೆ ಬಲಗೆನ್ನೆಗೆ ಹೊಡೆದರೆ ಅವನಿಗೆ ಇನ್ನೊಂದು ಕೆನ್ನೆಯನ್ನು ತೋರಿಸಿ. ಆತ ನಿಮ್ಮ ಮೇಲಂಗಿಯನ್ನು ತೆಗೆದುಕೊಂಡರೆ ಆತನಿಗೆ ಅದನ್ನು ಕೊಟ್ಟುಬಿಡಿʼʼ ಎನ್ನುವ ಉದಾತ್ತ ಉಪದೇಶಗಳು ಅವರನ್ನು ಸೆಳೆದವು.

“The Sermon on the Mount” ಓದಿದ ಮೇಲೆ ಗಾಂಧೀಜಿಗೆ ಹಿಂದೂ ಧರ್ಮದ ಮೇಲಿನ ತಮ್ಮ ನಂಬುಗೆ ಇನ್ನಷ್ಟು ಗಟ್ಟಿಯಾಯಿತು. ಗೀತೆಯನ್ನು ಏಷ್ಯಾದ ಬೆಳಕು ಎಂದು ಅವರು ಕರೆದರು. ಕೆಲವು ವರ್ಷಗಳ ನಂತರ ತಮ್ಮನ್ನು ಭೇಟಿಯಾದ ಮಿಶನರಿ ಗುಂಪೊಂದಕ್ಕೆ ಅವರು “ನಾನು ಅರ್ಥೈಸಿಕೊಂಡ ಹಿಂದು ಧರ್ಮ ತನಗೆ ಸಂಪೂರ್ಣ ತೃಪ್ತಿ ನೀಡಿದೆ. ಸರ್ಮನ್ ಆಫ್ ಮೌಂಟನ್ನಿನಲ್ಲಿಯೂ ದೊರೆಯದ ಸಮಾಧಾನ ತನಗೆ ಭಗವದ್ಗೀತೆಯಲ್ಲಿ ದೊರೆತಿದೆ” ಎಂದು ತಮ್ಮ ಎಂದಿನ ಮೃದುಭಾಷೆಯಲ್ಲಿ ಖಚಿತವಾಗಿ ಹೇಳಿದ್ದರು. ಹಾಗಾಗಿ ಗಾಂಧಿಯವರಿಗೆ ಧರ್ಮ ಮತ್ತು ರಾಜಕೀಯ ಗುರಿಸಾಧನೆ ಒಂದನ್ನೊಂದು ಬಿಟ್ಟಿರಲಾರದ ವಿಷಯವಾಗಿತ್ತು. ತನ್ನನ್ನು ಸನಾತನಿ ಎಂದು ಕೊಳ್ಳುತ್ತಲೇ ಅವರು ಎಲ್ಲರನ್ನೂ ಪ್ರೀತಿಸಿದರು, ಎಲ್ಲರ ವಿಶ್ವಾಸವನ್ನು ಗಳಿಸಿದರು. ಗೋಪಾಲಕೃಷ್ಣ ಗೋಖಲೆಯವರು ಗಾಂಧಿಜಿಯವರನ್ನು ಆಗ್ರಹದ ಮೂಲಕ ಭಾರತಕ್ಕೆ ಮರಳುವಂತೆ ಮಾಡಿರುವುದು ಗಾಂಧಿಯವರ ಈ ಮನಸ್ಥಿತಿಯನ್ನು ಅರ್ಥಮಾಡಿಕೊಂಡಿರುವುದೇ ಆಗಿದೆ.

mahatma gandhi

1915ರಲ್ಲಿ ಗಾಂಧಿ ಭಾರತಕ್ಕೆ ಬರುವ ಮುನ್ನ ಲಂಡನ್ನಿಗೆ ಹೋಗಿ ಮೂರು ತಿಂಗಳುಗಳ ಕಾಲ ಇಲ್ಲಿನ ಸ್ಥಿತಿಯ ಕುರಿತು ಗೋಖಲೆಯವರಲ್ಲಿ ವಿಚಾರ ವಿಮರ್ಶೆ ನಡೆಸಿಯೇ ಬಂದಿದ್ದರು. ಮೊದಲೇ ತಿಳಿಸಿದಂತೆ ಭಾರತದಲ್ಲಿ ಗಾಂಧಿ ಎದುರಿಸಬೇಕಾಗಿರುವುದು ಕೇವಲ ಸಾಮಾಜಿಕ ಅಥವಾ ಆರ್ಥಿಕ ಪರಿಸ್ಥಿತಿಯಾಗಿರಲಿಲ್ಲ. ಸಂಪೂರ್ಣ ಸ್ವಾತಂತ್ರ್ಯದ ಕುರಿತು ದೇಶದಾದ್ಯಂತ ಜಾಗೃತಿ ಮೂಡಿಸಬೇಕಿತ್ತು. ಕಾಂಗ್ರೆಸ್ ಪಕ್ಷ ಆಗ ನಗರವಾಸಿಗಳ ಮತ್ತು ನವ ಇಂಗ್ಲೀಷ ಬಲ್ಲವರ ಪಕ್ಷವಾಗಿತ್ತು. ಅದಾಗಲೇ ಪಕ್ಷದಲ್ಲಿ ಮಂದಗಾಮಿಗಳು ಮತ್ತು ತೀವ್ರಗಾಮಿಗಳ ನಡುವಿನ ತಿಕ್ಕಾಟ ಜೋರಾಗಿತ್ತು. ಟಿಳಕರ ಪೂರ್ಣ ಸ್ವರಾಜ್ಯದ ಘೋಷಣೆಯಿಂದ ವಿಚಲಿತಗೊಂಡ ಬ್ರಿಟಿಷ ಆಡಳಿತ ಕಾಂಗ್ರೆಸ್ಸನ್ನು ಬಗ್ಗುಬಡಿಯಲು ಆಲೋಚಿಸಿತು. ಒಡೆದು ಆಳುವುದರಲ್ಲಿ ನಿಷ್ಣಾತರಾದ ಅವರು ತಮ್ಮ ಕುತಂತ್ರದ ಜಾಲವನ್ನು ಹಣೆಯಲು ಪ್ರಾರಂಭಿಸಿದರು. ಕುಖ್ಯಾತ ವೈಸ್‌ರಾಯ್ ಕರ್ಝನ್ ಮಹಾಶಯ ಕಾಂಗ್ರೆಸ್ಸು ಮುನ್ನೆಲೆಗೆ ಬರುವುದನ್ನು ತಡೆಯಲು ಒಳಗಿಂದೊಳಗೇ ಮುಸ್ಲಿಮರನ್ನು ಎತ್ತಿ ಕಟ್ಟಿ ಹೊಸ ರಾಜಕೀಯ ಪಕ್ಷವನ್ನು ಕಟ್ಟುವಂತೆ ಪ್ರೇರೇಪಿಸಿದ. ಇದು ನಂತರ ಲಾ. ಮಿಂಟೋ ವೈಸರಾಯ್ ಆಗಿರುವ ಕಾಲಕ್ಕೆ ಮುಸ್ಲಿಂ ಲೀಗಿನ ಸ್ಥಾಪನೆಗೆ ಕಾರಣವಾಯಿತು. ಕಾಂಗ್ರೆಸ್ಸಿನ ಕುರಿತು ಕರ್ಝನ್ Congress was tottering to its fall and one of the biggest ambitions in my life is to give it a peaceful demise’ (ಕಾಂಗ್ರೆಸ್ಸು ತನ್ನ ಪತನದತ್ತ ವಾಲುತ್ತಿದೆ ಮತ್ತು ನನ್ನ ಜೀವನದ ಬಹುದೊಡ್ಡ ಮಹಾತ್ವಾಕಾಂಕ್ಷೆಯೆಂದರೆ ಅದರ ಶಾಂತಿಯುತ ಅವನತಿಯನ್ನು ಕಾಣುವುದಾಗಿದೆ) ಎಂದಿದ್ದ. ಬ್ರಿಟಿಷರ ಒಡೆದಾಳುವ ನೀತಿ ಇಲ್ಲಿ ತನ್ನ ಕೆಲಸಮಾಡಿತ್ತು. ಸ್ವಾತಂತ್ರ್ಯದ ಹೋರಾಟವೇ ಛಿದ್ರವಾಗಿಹೋಗುವ ಹಂತಕ್ಕೆ ಬಂದಿತ್ತು.

ಈ ಎಲ್ಲಾ ಸಮಸ್ಯೆಗಳನ್ನು ಗಾಂಧಿ ಲಂಡನ್ನಿನಲ್ಲಿ ಇರುವಾಗಲೇ ಸೂಕ್ಷ್ಮವಾಗಿ ಅಧ್ಯಯನ ಮಾಡಿ ಬಂದಿದ್ದರು. ಭಾರತಕ್ಕೆ ಬಂದವರೇ ಅವರು ಈ ಹೋರಾಟಕ್ಕೆ ಹೊಸ ಅಸ್ಮಿತೆಯನ್ನು ಒದಗಿಸಿದರು. ದಕ್ಷಿಣ ಆಫ್ರಿಕಾದಲ್ಲಿ ಯಶಸ್ಸನ್ನು ಪಡೆದ ಸತ್ಯಾಗ್ರಹದ ಶಕ್ತಿಯ ಪೂರ್ಣ ಪರಿಚಯವನ್ನು ಈ ದೇಶದ ಜನತೆಗೆ ಪರಿಚಯಿಸಿದರು. ಜೀವನದಲ್ಲಿ ಎಲ್ಲದರಲ್ಲಿಯೂ ವಿಫಲನಾದ, ಆತ್ಮವಿಶ್ವಾಸ ವಿಲ್ಲದ, ತನ್ನೆಲ್ಲಾ ಸಿಟ್ಟನ್ನು ತನ್ನ ಹೆಂಡತಿಯಮೇಲೆ ತೀರಿಸಿಕೊಳ್ಳುತ್ತಿದ್ದ ಓರ್ವ ಸಣಕಲು ವ್ಯಕ್ತಿ ಪ್ರಪಂಚದ ಇತಿಹಾಸದಲ್ಲಿಯೇ ಶಾಂತಿದೂತನಾಗಿ ಬೆಳೆದ ರೀತಿ ಅನನ್ಯವಾದುದು. ಪ್ರಪಂಚದ ಎಲ್ಲಾ ವಿಶ್ವವಿದ್ಯಾಲಯಗಳು Behavioral Scienceನ ಮೇಲೆ ನಡೆಸುವ ಅಧ್ಯಯನದಲ್ಲಿ ಗಾಂಧೀಮಾರ್ಗ ಮಹತ್ವದ ಸ್ಥಾನ ಪಡೆಯುತ್ತದೆ. ಈ ಕಾರ್ಯದಲ್ಲಿ ಗಾಂಧಿಯವರಿಗೆ ಅನೇಕ ಕ್ಲಿಷ್ತಕರ ಸವಾಲುಗಳು ಎದುರಾದವು. ಬ್ರಿಟಿಷರ ಆಡಳಿತ, ಇಲ್ಲಿನ ತುಂಡರಸರ ಸಂಸ್ಥಾನಗಳು, ವಿಭಿನ್ನ ಭಾಷೆ, ಇವೆಲ್ಲವೂ ದಕ್ಷಿಣ ಆಫ್ರಿಕಾಕ್ಕಿಂತ ಭಿನ್ನ. ಅವರ ಮುಂದೆ ಸ್ವಾತಂತ್ರ್ಯ ಹೋರಾಟದ ಜೊತೆಗೆ ಸಾಮಾಜಿಕ ಸುಧಾರಣೆಗಳಾದ ಅಸ್ಪ್ರಶ್ಯತೆಯ ನಿವಾರಣೆ, ಗುಡಿಕೈಗಾರಿಕೆಗಳ ಪುನರುಜ್ಜೀವನ, ಗ್ರಾಮೀಣ ಆರ್ಥಿಕತೆಗೆ ಚೈತನ್ಯ ನೀಡುವುದು ಹೀಗೆ ಹಲವು ಸವಾಲುಗಳಿದ್ದವು. ಭಾರತಕ್ಕೆ ಬೇಕಿರುವುದು ಕೇವಲ ರಾಜಕೀಯ ಸ್ವಾತಂತ್ರ್ಯವಲ್ಲ; ಸಮಾನತೆಯ ಸ್ವಾತಂತ್ರ್ಯ, ಹಳ್ಳಿಯ ಗುಡಿಸಲಿನಲ್ಲಿ ವಾಸಿಸುತ್ತಿರುವ ಕಟ್ಟಕಡೆಯ ವ್ಯಕ್ತಿ ತನ್ನ ಆತ್ಮಾಭಿಮಾನವನ್ನು ಬೆಳೆಸಿಕೊಂಡಾಗ ಭಾರತ ಬೆಳಗಬಲ್ಲದು ಎನ್ನುವುದನ್ನು ಅವರು ಮನಗಂಡಿದ್ದರು. ಭಾರತದ ರಾಜಕಾರಣದ ಒಳಹೊರಗನ್ನು ಅರಿತ ಅವರು ತಾನು ಯಾವ ಗುಂಪಿಗೂ ಸೇರದವನಲ್ಲವೆನ್ನುವುದನ್ನು ಮೊದಲು ತೋರಿಸಬೇಕಾಗಿತ್ತು. ಅದಕ್ಕಾಗಿ ಅವರು ಗೋಖಲೆಯವರ ಆಗ್ರಹಕ್ಕೆ ಮಣಿಯದೇ 1915 ಮೇ ತಿಂಗಳ 25ರಂದು ಅಹಮದಾಬಾದಿನಲ್ಲಿ (ಕೊಛ್ರಬಾ ಪ್ರದೇಶದಲ್ಲಿ) ತಮ್ಮ ಆಶ್ರಮವನ್ನು ಸ್ಥಾಪಿಸಿದ ಹಿನ್ನೆಲೆ ಇದಾಗಿದೆ.

ಅವರಿಗೆ ತನ್ನನ್ನು ಮೊದಲು ಭಾರತೀಯನನ್ನಾಗಿ ಪರಿವರ್ತಿಸಿಕೊಳ್ಳಬೇಕಿತ್ತು. ಗಾಂಧಿ ಯಾವ ಪ್ರಯೋಗವನ್ನೇ ಮಾಡಲಿ, ಮೊದಲು ಅದನ್ನು ತನ್ನ ಮೇಲೆಯೇ ಪ್ರಯೋಗಿಸಿಕೊಳ್ಳುತ್ತಿದ್ದರು. ಅಂತರಂಗದ ಸರಳತನವೆನ್ನುವುದು ಎರಡನೆಯ ಹಂತದಲ್ಲಿ ಬಹಿರಂಗದಲ್ಲಿಯೂ ಅಭಿವ್ಯಕ್ತವಾದರೆ ಅದು ಸಮಾಜವನ್ನು ತಟ್ಟುತ್ತದೆ. ಹಾಗಾಗಿ ಅವರು ಈಗ ತನ್ನ ಉಡುಪಿನ ವಿಷಯದ ಕುರಿತು ಆಲೋಚಿಸಿದರು. ದಕ್ಷಿಣ ಆಫ್ರಿಕಾದಲ್ಲಿ ಗಾಂಧಿ ವಕೀಲರಾಗಿದ್ದಾಗ ಕೋಟು ಹ್ಯಾಟು ಬೂಟಿನಲ್ಲಿ ಇರುತ್ತಿದ್ದರೆ ಟ್ರಾನ್ಸ್_ವ್ಯಾಲಿನಲ್ಲಿ ಸತ್ಯಾಗ್ರಹದ ಹೋರಾಟದೊಂದಿಗೆ ಅವರ ಉಡುಪಿನಲ್ಲಿಯೂ ಸರಳತೆ ಕಾಣಿಸತೊಡಗಿತು. ಭಾರತೀಯರಂತೆ ಇದ್ದರೆ ಹೋರಾಟಕ್ಕೆ ಅನುಕೂಲ ಎಂದು ಅವರು ಆಧುನಿಕ ಉಡುಪನ್ನು ತ್ಯಜಿಸಿ, ಲುಂಗಿ ಮೇಲೊಂದು ಅಂಗಿ ಮತ್ತು ತಲೆಗೆ ರುಮಾಲನ್ನು ಧರಿಸತೊಡಗಿದರು. ಭಾರತಕ್ಕೆ ಬರುವಾಗಲೂ ಇದೇ ಅವರ ಉಡುಪಾಗಿತ್ತು. ಇಲ್ಲಿಯೂ ಅವರು ಪ್ರಯಾಣಿಸುವಾಗ ಮೂರನೆಯ ದರ್ಜೆಯಲ್ಲಿ ಪ್ರಯಾಣಿಸುತ್ತಿದ್ದರು. ಈ ಉಡುಪಿನಲ್ಲಿಯೂ ಅವರಿಗೆ ಏನೋ ಕೊರತೆ ಕಾಣಿಸಿತು. 21. ಸಪ್ಟೆಂಬರ್ 1921ರಂದು ಅವರು ತಮಿಳುನಾಡಿನ ಮಧುರೆಗೆ ಹೋಗುವಾಗ ತುಂಬು ಧೋತಿಯನ್ನು, ಟೋಪಿಯನ್ನು ಧರಿಸಿದ ಗಾಂಧೀಜಿ ರೈಲಿನಲ್ಲಿ ಜನಸಾಮಾನ್ಯರು ತುಂಡು ಬಟ್ಟೆಗೂ ಗತಿಯಿಲ್ಲದಿರುವ ಪರಿಸ್ಥಿತಿಯನ್ನು ಕಣ್ಣಾರೆ ಕಂಡರು. ಈ ಚಿಂತೆ ಅವರನ್ನು ಕಾಡಿತು. ಅದನ್ನೇ ವಿಚಾರಮಾಡುತ್ತಾ ಮಧುರೈನ ವೆಸ್ಟ್ ಮಾಸಿ ಸ್ಟ್ರೀಟ್‌ನಲ್ಲಿರುವ ಮನೆಯ (ಡೋರ್ ನಂ. 251) ಮೇಲಿನ ಮಹಡಿಯ ಭಾಗದಲ್ಲಿ ತಂಗಿದ್ದ ಗಾಂಧಿಯವರನ್ನು 22 ಸಪ್ಟೆಂಬರ್ 1021 ಬೆಳಿಗ್ಗೆ ಎದುರುಗೊಳ್ಳಲು ಹೋದವರಿಗೆ ಅಚ್ಚರಿ ಕಾದಿತ್ತು. ಗಾಂಧಿ ಹೊಸ ಅವತಾರದಲ್ಲಿ ಕಾಣಿಸಿಕೊಂಡರು. ಇಂದು ಕಾಣುವ ಗಾಂಧಿಯ ತುಂಡು ಬಟ್ಟೆಯ ಬಡ ಭಾರತೀಯನ ರೂಪದಲ್ಲಿ ಅವರು ಕಾಣಿಸಿಕೊಂಡರು.

mahatma gandhi

ಅಲ್ಲಿಯ ತನಕ ಗಾಂಧಿಜಿಯ ಮನಸ್ಸಿನಲ್ಲಿದ್ದುದ್ದು ಈ ದೇಶದ ಸಾಮಾನ್ಯ ಜನ ತನ್ನವರು ಎನ್ನುವ ಭಾವನೆ. ಇಲ್ಲಿಂದ ಮುಂದೆ ತಾನು ಇವರಲ್ಲೊಬ್ಬ ಎನ್ನುವ ಭಾವನೆ ಮೂಡಿ ಬಂತು. ಇದು Sympathy ಅಥವಾ empathy ಎರಡನ್ನೂ ಮೀರಿದ ಸಾಮಾನ್ಯರಲ್ಲಿ ಸಾಮಾನ್ಯರಾಗುವ ಅದ್ವೈತೀ ಭಾವ. ಎಂಥ ಮಹತ್ವದ ಸನ್ನಿವೇಶದಲ್ಲಿಯೂ ಗಾಂಧಿ ತನ್ನ ಈ ಉಡುಪನ್ನು ಬಿಡಲಿಲ್ಲ. ಅವರು ತುಂಡುಡುಗೆಯಲ್ಲಿ ಸಾರ್ವಜನಿಕವಾಗಿ ಮೊದಲು ಕಾಣಿಸಿಕೊಂಡ ಪ್ರದೇಶಕ್ಕೆ ಈಗ “ಗಾಂಧಿ ಪೊಟ್ಟಲ್ (ತೆರೆದ ಮೈದಾನ)” ಎಂದು ಹೆಸರಿಸಲಾಗಿದೆ. ಎಂತಹ ಸಂದರ್ಭದಲ್ಲಿಯೂ ಅವರ ಈ ಉಡುಪು ಬದಲಾಗಲಿಲ್ಲ. ದುಂಡುಮೇಜಿನ ಸಮ್ಮೇಳನದ ಲಂಡನ್ನಿನಲ್ಲಿ ಆದಾಗ ಬಕ್ಕಿಂಗ್ಹ್ಯಾಮ್ ಅರಮನೆಯಲ್ಲಿ ಪಂಚಮ ಜಾರ್ಜ್ ಚಹಾಕೂಟವನ್ನು ಏರ್ಪಡಿಸಿದ್ದನು. ಗಾಂಧೀಜಿಯವರ ಅರೆಬತ್ತಲೆ ಉಡುಗೆ ಶಿಷ್ಟಾಚಾರಕ್ಕೆ ವಿರುದ್ಧವಾಗಿತ್ತು. ಗಾಂಧಿ ರಾಜನನ್ನು ಭೇಟಿಯಾಗಲು ತಾನು ಪುನಃ ಬಟ್ಟೆ ಧರಿಸುವುದಿಲ್ಲ ಎಂದು ಅಚಲವಾದ ನಿರ್ಧಾರ ಕೈಗೊಂಡರು ಬ್ರಿಟನ್‌ನಿಂದಾಗಿ ಭಾರತೀಯ ಬಡವರು ಇನ್ನೂ ಬೆತ್ತಲೆಯಾಗಿದ್ದಾರೆ ಎನ್ನುವುದನ್ನು ಅವರು ಜಗತ್ತಿಗೆ ತೋರಿಸಿಕೊಟ್ಟರು. ಇದೇಕೆ ಹೀಗೆ ಎಂದು ಪತ್ರಕರ್ತರು ಪ್ರಶ್ನೆ ಕೇಳಿದಾಗ “ರಾಜನು ತಮ್ಮಿಬ್ಬರಿಗೂ ಸಾಕಾಗುವಷ್ಟು ಬಟ್ಟೆಯನ್ನು ತೊಟ್ಟಿದ್ದಾನೆ” ಎನ್ನುವ ಉತ್ತರವನ್ನು ಅವರು ಕೊಟ್ಟರಂತೆ.

ಗಾಂಧಿಯೆನ್ನುವ ವ್ಯಕ್ತಿತ್ವ ದೇಶ ಕಾಲವನ್ನು ಮೀರಿ ವ್ಯಾಪಿಸಿರುವ ಒಂದು ದೊಡ್ಡ ಸಂದೇಶ. ಅವರ ಬದುಕೇ ಅನೇಕ ವಿಸ್ಮಯ, ಗೂಢ ಮತ್ತು ಪ್ರಭಾವಳಿಗಳಿಂದ ತುಂಬಿಹೋಗಿದೆ. ಬದುಕಿನಲ್ಲಿ ಅವರಿಗೆ ತನ್ನ ಗುರಿಯತ್ತ ಸಾಗುವುದಕ್ಕೆ ಬೇಕಾದ ಶಕ್ತಿಯನ್ನು ಕೊಟ್ಟಿರುವ ಅಂಶಗಳ ಕುರಿತು ಅವಲೋಕನ ಮಾಡುವುದಾದರೆ ಅದು ಅವರೊಳಗಿನ ಆಧ್ಯಾತ್ಮ ವಿದ್ಯೆ ಎನ್ನುವುದು ಸಂದೇಹಾತೀತ. ರಾಮ ತಾನು ಕೈಗೊಂಡ ಅನೇಕ ಕಾರ್ಯಗಳಿಗೆ ವಿವರಣೆಯನ್ನು ಕೊಡುತ್ತಾ ಹೋಗಲಿಲ್ಲ. ಗಾಂಧೀಜಿಯವರೂ ಸಹ ತಾನು ಕೈಗೊಂಡ ಅನೇಕ ಸಂಕೀರ್ಣ ವಿಷಯಗಳಿಗೆ ಅದು ಹೀಗೆ ಎಂದು ವಿವರಣೆಯನ್ನು ಯಾವತ್ತೂ ಕೊಡಲಿಲ್ಲ. ರಾಮನಂತೆ ಗಾಂಧಿಯವರದ್ದೂ ಸಹ ಅನುಕರಣೀಯ ನಡೆ. ಗೀತೆಯ ನಂತರ ಅವರ ಮೇಲೆ ಪ್ರಭಾವವನ್ನು ಬೀರಿದ ವ್ಯಕ್ತಿ ಶ್ರೀರಾಮನ ಕುರಿತು ಅವರು ಹೀಗೆ ಹೇಳಿದ್ದಾರೆ;

“My Rama, the Rama of our prayers is not the historical Rama, the son Dasharatha, the King of Ayodhya. He is the eternal, the unborn, the one without a second. Him alone I worship. His aid alone I see, and so should you. He belongs equally to all. I, therefore, see no reason why a Mussalman or anybody should object to taking His name. But he is in no way bound to recognize God as Ramanama. He may utter to himself Allah or Khuda so as not to mar the harmony of the sound. (Mahatma Gandhi in Harijan, dated 28-4-1946, p111)

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: Ganesh Chaturthi: ಶುದ್ಧ ಭಕ್ತಿಗೆ ಒಲಿಯುವ ಕರುಣಾಮಯ ಮೂರ್ತಿ

ತನ್ನ ನಂಬಿಕೆಯನ್ನು ಇನ್ನೊಬ್ಬರು ನಂಬಬೇಕೆಂದು ಅವರು ಯಾವತ್ತಿಗೂ ಬಯಸುತ್ತಿರಲಿಲ್ಲ. ಈ ಸಂದರ್ಭದಲ್ಲಿ ಓರ್ವ ಪತ್ರಕರ್ತ ಅವರಿಗೆ ರೋಗಿಗೆ ಅಗತ್ಯವಿರುವ ಶಸ್ತ್ರಚಿಕಿತ್ಸೆಯನ್ನು ರಾಮನಾಮದಿಂದ ನಿವಾರಿಸಿಕೊಳ್ಳಬಹುದೇ ಎಂದು ಕೇಳಿದ. “ಇಲ್ಲ, ಅದು ಸಾಧ್ಯವಿಲ್ಲ. ಮುರಿದು ಹೋದ ಕಾಲನ್ನು ಕೂಡಿಸಲು ಸಾಧ್ಯವಾಗದಿರಬಹುದು. ಆದರೆ ದೇವರದೇ ಸೃಷ್ಟಿಯಾದ ಮನುಷ್ಯ ತನ್ನ ಒಂದು ಕಾಲು ಹೋದ ಮಾತ್ರಕ್ಕೆ ಚಿಂತಿಸುತ್ತಾ ಕೂರಲಾರ ಎನ್ನುವದು ಅವರ ನಿಲುವಾಗಿತ್ತು. ದಕ್ಷಿಣ ಆಫ್ರಿಕಾದಲ್ಲಿ ರೈಲಿನಿಂದ ಅವರನ್ನು ಹೊರದೂಡುವಾಗ ಅವರು ಬಾಯಲ್ಲಿ ರಾಮನಾಮ ಜಪಿಸುತ್ತಿದ್ದರಂತೆ.

ಸನಾತನ ಧರ್ಮದಲ್ಲಿ ಅಪಾರ ನಂಬುಗೆಯಿದ್ದ ಗಾಂಧೀಜಿಯವರಿಗೆ ಹರಿಶ್ಚಂದ್ರ ತನ್ನ ಸತ್ಯದಿಂದಲೇ ವಿಶ್ವಾಮಿತ್ರನನ್ನು ಸೋಲಿಸಿದ ಕ್ರಿಯೆ ಕೇವಲ ನಾಟಕವಾಗಿ ಗೋಚರಿಸಲಿಲ್ಲ. ಎದುರಾಳಿಯ ಮೇಲೆ ವಿಜಯ ಸಾಧಿಸಿ ಮೆರೆವುದಕ್ಕಿಂತ ತನ್ನನ್ನು ತಾನು ಗೆಲ್ಲುವದರಿಂದಲೇ ಜೀವನದಲ್ಲಿ ದ್ವೇಷವಿಲ್ಲದ ನಿಷ್ಕಲ್ಮಷ ಪ್ರೇಮವನ್ನು ಸಾಧಿಸಬಹುದು ಎನ್ನುತ್ತಿದ್ದರು. ಈ ಕಾರಣದಿಂದಲೇ ಅವರು ಸತ್ಯಾಗ್ರಹ ಎನ್ನುವ ಹೊಸ ಹಾದಿಯನ್ನು ಕಂಡುಕೊಂಡಿದ್ದು. ಸತ್ಯಾಗ್ರಹ ಎನ್ನುವದು ಒಂದು ಆತ್ಮ ಶಕ್ತಿ, ಇದರ ಅನುಷ್ಠಾನಕ್ಕೆ ಅವಶ್ಯವಿರುವದು ಸ್ವಯಂ ಶಿಸ್ತು, ಸ್ವಯಂ ನಿಯಂತ್ರಣ ಮತ್ತು ಸ್ವಯಂ ಶುದ್ಧತೆ; ಅದೇ ಆತ್ಮನಿರ್ಭರತೆ. ಈ ಹೊರಾಟದಲ್ಲಿ ಪಾಲ್ಗೊಳ್ಳುವವನೇ ಸತ್ಯಾಗ್ರಹಿ. ಆತನಲ್ಲಿ ಸತ್ಯವೆನ್ನುವ ಅಸ್ತ್ರವಲ್ಲದೇ ಬೇರೇನೂ ಇರುವದಿಲ್ಲ. ಮನಃ ಪರಿವರ್ತನೆಯೇ ಸತ್ಯಾಗ್ರಹದ ಮುಂದಿರುವ ಗುರಿ ಹೊರತೂ ದ್ವೇಷವಲ್ಲ. ಸತ್ಯಾಗ್ರಹವೆನ್ನುವದನ್ನು ಅವರಿಗೆ ಬದುಕಿನ ನವಮಾರ್ಗದ ಅನ್ವೇಷಣೆಯಾಯಿತು. ಮುಂದಿನ ಹೋರಾಟವಾದ ಅಹಿಂಸಾ ಮಾರ್ಗವನ್ನು ಕಂಡುಕೊಳ್ಳಲು ಸಹಕಾರಿಯಾಯಿತು.

ಸ್ವತಃ ಗಾಂಧಿಯವರೇ “ಅಹಿಂಸೆಯು ನನ್ನ ನಂಬುಗೆಯ ಮೊದಲ ಅಕ್ಷರ. ಹಾಗೆಯೇ ನನಗದು ಅಂತಿಮ ಧರ್ಮವೂ ಹೌದು ಎಂದು ಯಂಗ್ ಇಂಡಿಯಾ ಪತ್ರಿಕೆಯಲ್ಲಿ (೦3.೦3.1922) ಬರೆದುಕೊಂಡಿದ್ದಾರೆ. ತನ್ನ ಜೀವಮಾನವನ್ನು ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವ್ಯಕ್ತಿ ಓರ್ವ ಆ ಸ್ವಾತಂತ್ರ್ಯ ಬಂದಾಗ ಸಂಭ್ರಮಿಸುವುದನ್ನು ಬಿಟ್ಟು ಕಲಕತ್ತಾದ ಬೀದಿಗಳಲ್ಲಿ ಶಾಂತಿ ಸ್ಥಾಪನೆಗೆ ಹೆಣಗಾಡುವ ಮಹಾತ್ಮಾ ಗಾಂಧಿ ಭಾರತದ ಆರ್ಷ ಧರ್ಮ ಹೇಳುವ “ಸಹನಾ ವವತು, ಸಹನೌ ಭುನಕ್ತು, ಸಹ ವೀರ್ಯಂ ಕರವಾವಹೈ, ತೇಜಸ್ವಿನಾವಧೀತಮಸ್ತು ಮಾ ವಿದ್ವಿಷಾವಹೈ, ಓಂ ಶಾಂತಿ ಶಾಂತಿಃ ಶಾಂತಿಃ” ಎನ್ನುವುದರ ಮೂರ್ತರೂಪವಾಗಿದ್ದರು.

ಗಾಂಧಿಯೆನ್ನುವುದು ಒಂದು ಯುಗಧರ್ಮ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಪ್ರಕೃತಿಯಿಂದ ವ್ಯಕ್ತನಾಗಿ ಅವ್ಯಕ್ತದ ಮಾರ್ಗ ತೋರುವ ಮೂರ್ತಿ: ಮೃಣ್ಮಯಿ

Exit mobile version