Site icon Vistara News

ಧವಳ ಧಾರಿಣಿ ಅಂಕಣ: ಗುರುಶಿಷ್ಯ ಪರಂಪರೆ: ತತ್ತ್ವದರ್ಶನದ ಹಾದಿಯನ್ನು ತೋರಿಸುವ ಜ್ಞಾನದ ಬೆಳಕು

guru and shishya

ನೈಷಾ ತರ್ಕೇಣ ಮತಿರಾಪನೇಯಾ ಪ್ರೋಕ್ತಾSನ್ಯೇನೈವ ಸುಜ್ಞಾನಾಯ ಪ್ರೇಷ್ಠ I
ಯಾಂ ತ್ವಮಾಪಃ ಸತ್ಯಧೃತಿರ್ಬತಾಸಿ ತ್ವಾದೃಙ್ನೋ ಭೂಯಾನ್ನಚಿಕೇತಃ ಪ್ರಷ್ಟಾ II ಕ. ಉ. 2-9 II

ಇದನ್ನು ತರ್ಕದಿಂದ ಪಡೆಯಲಾಗದು. ಅನನ್ಯಾನುಭವವುಳ್ಳ ಆಚಾರ್ಯನೇ ಈ ಪರಮಾರ್ಥವನ್ನು ತಿಳಿಸಿಕೊಡಬಲ್ಲನೆಂಬುದನ್ನು ನೀನು ಮನಗಂಡೆಯಲ್ಲ. ನೀನು ಸತ್ಯವಾದ ಆತ್ಮದ ವಿಷಯವನ್ನು ಬಯಸಿ ಮಿಕ್ಕೆಲ್ಲವನ್ನೂ ಕಡೆಗಣಿಸಿದೆಯಲ್ಲ, ನಚಿಕೇತನೆ, ನಿನ್ನಂತೆ ತತ್ತ್ವವನ್ನು ಕೇಳತಕ್ಕ ಶಿಷ್ಯನೋ, ಪುತ್ರನೋ ನನಗೆ ಸಿಗಲಿ. ಇಂಥ ನಿಜವಾದ ಅಧಿಕಾರಿಯಾದ ಶಿಷ್ಯನು ಸಿಕ್ಕಿರುವುದರಿಂದ ನಾನೇ ಧನ್ಯ. (ಭಾವಾರ್ಥ)

ಭಾರತೀಯ ಗುರುಪರಂಪರೆಯಲ್ಲಿ ಗುರು ತನಗೆ ಶಿಷ್ಯನಾಗಿರುವವ ಇಂಥವ ಸಿಗಲಿ ಎಂದು ಹಂಬಲಿಸುವ ಒಂದು ಮಹತ್ವದ ವಿಷಯ ಇಲ್ಲಿ ವ್ಯಕ್ತವಾಗಿದೆ. ಇಲ್ಲಿ ಗುರು ಸಾಮಾನ್ಯವಾದವನಲ್ಲ. ಸಾಕ್ಷಾತ್ ಮೃತ್ಯು. ಬಾಲಕನಾದರೋ ಇನ್ನೂ ಹಾಲುಗಲ್ಲದ ಹುಡುಗ. ಯಮ ಸಾವಿನ ಸಂಕೇತ. ಈತ ಚಿಗುರೊಡೆಯುವ ಆಶಾಭಾವದ ಪ್ರತಿನಿಧಿ. ಪ್ರಕೃತಿಸಹಜವಾಗಿ ಬಾಳಬೇಕಾದ ಹುಡುಗ ಸಾವಿನ ರಹಸ್ಯವನ್ನು ಸಾವಿನೊಡೆಯನ ಹತ್ತಿರ ಕೇಳುತ್ತಿದ್ದಾನೆ. ಅತ್ತರೂ, ಬೇಡವೆಂದು ಬೊಬ್ಬೆಹಾಕಿದರೂ ಬಿಡದೇ ಎಳೆದೊಯ್ಯುವ ಮೃತ್ಯು ಅವನಿಗೆ ಸಾವನ್ನು ಕೊಡಲಾರೆ ಎನ್ನುತ್ತಿದ್ದಾನೆ. ಸಾವನ್ನು ಗೆಲ್ಲುವದೆಂದರೆ ಸಾವಿನ ರಹಸ್ಯ ತಿಳಿದುಕೊಳ್ಳುವುದು. ಸಾವೇ ರಹಸ್ಯವಾಗಿರುವಾಗ ಅದನ್ನು ಕೊಟ್ಟರೆ ಸಾವಿಗೆ ಅಂಜದವರು ಇರಲಾರರು ಎನ್ನುವುದು ಒಡೆಯನ ಚಿಂತೆ. ನಚಿಕೇತ ಯಮನ ನಡುವೆ ನಡೆಯುವ ಈ ಜಿಜ್ಞಾಸುತನದಲ್ಲಿ ಗೆಲ್ಲುವುದು ಯಮನೂ ಅಲ್ಲ; ನಚಿಕೇತನೂ ಅಲ್ಲ. ಅಲ್ಲಿ ಸ್ಥಾಪಿತವಾಗುವುದು ಗುರುಶಿಷ್ಯ ಪರಂಪರೆ.

ಈ ದೇಶದಲ್ಲಿ ವಿದ್ಯೆಯೆನ್ನುವುದು ಹರಿದುಕೊಂಡು ಬಂದಿರುವುದೇ ಈ ರೀತಿ ಮೌಖಿಕ ಪರಂಪರೆಯ ಮೂಲಕ. ಗ್ರಾಮೀಣ ಸೊಗಡಿನ ಪಾಡ್ದನವಾಗಲೀ, ಮಾರಿಯಮ್ಮ, ಜಟಕ ಯಕ್ಷರ ಆರಾಧನೆಯಾಗಲಿ, ಮನೆಮದ್ದಾಗಲೀ, ಅಥವಾ ವೇದೋಪನಿಷತ್ತಾಗಲೀ, ಇದಕ್ಕೆ ಹೊರತಲ್ಲ. ಗುರುವಿಗೆ ತಾನು ತನ್ನ ಗುರುವಿನಿಂದ ಪಡೆದ ಜ್ಞಾನವನ್ನು ತನ್ನ ನಂತರ ಯೋಗ್ಯ ಅಧಿಕಾರಿಗೆ ಕೊಡಬೇಕೆನ್ನುವ ತವಕವಿರುತ್ತದೆ. ಈ ವಿಷಯದಲ್ಲಿ ಆತ ತನ್ನವರು ಬೇರೆಯವರು ಎನ್ನುವ ಮೋಹವನ್ನು ಇಟ್ಟುಕೊಳ್ಳುವುದಿಲ್ಲ. ಗುರು ಶಿಷ್ಯ ಪರಂಪರೆ ಕೇವಲ ಸಂಹಿತೆಗಳಿಗೋ, ಕಟ್ಟುಪಾಡುಗಳಿಗೋ ಸಂಬಂಧ ಕಲ್ಪಿಸಿದ್ದಲ್ಲ. ಅದು ಅನಾದಿಯಿಂದ ಇಲ್ಲಿಯತನಕ ಅಪಾರವಾದ ಜ್ಞಾನರಾಶಿಯನ್ನು ಕಾಪಿಟ್ಟು ಕಿಂಚಿತ್ತೂ ಊನವಾಗದ ರೀತಿಯಲ್ಲಿ ಯಥಾವತ್ತಾಗಿ ದಾಟಿಸಿಕೊಂಡ ಬಂದ ಹರಿವು. ಸಂವಹನ ಕ್ರಿಯೆಯಲ್ಲಿ ವಿಷಯಗಳನ್ನು ವ್ಯಕ್ತಪಡಿಸುವಲ್ಲಿ ಲಿಪಿ ಅನೇಕ ಸಲ ಸೋಲುತ್ತದೆ. ಮಾತನಾಡುವ ಭಾಷೆ ಕೇವಲ ಸಂವಹನವನ್ನು ಮಾಡುತ್ತದೆ. ಭಾಷೆ ವ್ಯಾಕರಣದ ನಿಯಮದಲ್ಲಿ ಸಿಲುಕಿದಾಗ ಛಂದಸ್ಸಾಗುತ್ತದೆ. ಈ ಛಂದಸ್ಸಿಗೆ ಲಯ ಮತ್ತು ಮಾತ್ರಾಕಾಲಗಳನ್ನು ಜೋಡಿಸಿದಾಗ ಅದು ಕಾವ್ಯವಾಗುತ್ತದೆ. ಕಂದನ ತೊದಲು ನುಡಿ ವಿದ್ಯೆಯಾಗಿ ಜ್ಞಾನವನ್ನು ತೋರುವುದು ಈ ರೀತಿಯಾಗಿ. ಜಾನಪದರು ಹಾಡುವ ಕ್ರಿಯೆಯಲ್ಲಿಯೂ ಒಂದು ವಿಶಿಷ್ಟ ಧಾಟಿಯಿರುವುದನ್ನು ಗಮನಿಸಬಹುದು. ದೇವಿಮಹಾತ್ಮೆ ಯಕ್ಷಗಾನದಲ್ಲಿ ದೇವಿಯ ಪಾತ್ರವನ್ನು ಮಾಡುವ ವ್ಯಕ್ತಿಯ ಸಂಭಾಷಣೆ ಯಕ್ಷಗಾನದ ಶೃತಿಗಿಂತ ವಿಶಿಷ್ಟವಾದ ಅರಾಧನಾ ಭಾವದಲ್ಲಿರುತ್ತದೆ. ಅದು ತಪ್ಪಿತೆಂದರೆ ಆಟವೇ ಹಾಳಾಯಿತೆಂದು ಪ್ರೇಕ್ಷಕರು ಆಕ್ಷೇಪ ವ್ಯಕ್ತಪಡಿಸುವುಂಟು. ಇಂತಹವುಗಳನ್ನು ಧ್ವನಿ ವೈರುಧ್ಯದಿಂದಲೇ ಒಬ್ಬರಿಂದೊಬ್ಬರಿಗೆ ದಾಟಿಸಬೇಕು. ಸಾಂಪ್ರದಾಯಿಕವಾದ ಧಾಟಿಯನ್ನು ಮೀರಿ ಇಲ್ಲಿ ಮಾತಿಗೆ ಅವಕಾಶವಿಲ್ಲ. ವೇದಗಳಲ್ಲಿನ ಸ್ವರಗಳು. ಋಕ್, ಯಜುಸ್, ಸಾಮ, ಅಥರ್ವಗಳ ಸ್ವರವಿನಿಯೋಜನೆ, ಪ್ರಸ್ಥಾನಗಳು ಬೇರೆ ಬೇರೆ. ಇವೆಲ್ಲವೂ ಏಕಸೂತ್ರದಲ್ಲಿ ಹರಿದು ಬಂದಿರುವದು ಗುರು ಶಿಷ್ಯ ಪರಂಪರೆಗಳ ಮೂಲಕ. ಪ್ರಪಂಚದ ಎಲ್ಲಾ ಸಂಸ್ಕೃತಿಗಳು ಇಂದಿನ ತನಕ ಜೀವಂತವಾಗಿದ್ದರೆ ಅದು ಮೌಖಿಕವಾಗಿಯೇ. ಅದನ್ನೇ ಶೃತಿ-ಸ್ಮೃತಿ ಎನ್ನುತ್ತಾರೆ. ಹೀಗೆ ಇವುಗಳನ್ನು ಉಳಿಸಿಕೊಂಡು ಬಂದ ಗುರು ಶಿಷ್ಯ ಪರಂಪರೆಯನ್ನು ನೆನಪಿಸುವುದಕ್ಕಾಗಿ ಸಂಕೇತವಾಗಿ ಆಷಾಢಮಾಸದ ಪೂರ್ಣಿಮೆಯ ದಿನವನ್ನು ಆಚರಿಸುತ್ತಾರೆ.

ಈ ಗುರುಶಿಷ್ಯ ಸಂಬಂಧವೆನ್ನುವುದು ಉಪನಿಷತ್ತಿನಲ್ಲಿ ವ್ಯಾಪಕವಾಗಿದೆ. ಈಗೆಲ್ಲ ವಟುಗಳಿಗೆ ಬ್ರಹ್ಮೋಪದೇಶವನ್ನು ತಂದೆ ಮಾಡುತ್ತಾನೆ. ಆದರೆ ವೇದಗಳ ಕಾಲದಲ್ಲಿ ಬ್ರಹ್ಮೋಪದೇಶವನ್ನು ಗುರು ಶಿಷ್ಯನಿಗೆ ತನ್ನ ಆಶ್ರಮಕ್ಕೆ ವಿದ್ಯೆಯನ್ನು ಕಲಿಯಲು ಬಂದಾಗ ಮಾಡುತ್ತಿದ್ದ. ಇದಕ್ಕೆ ಛಾಂದೋಗ್ಯ ಉಪನಿಷತ್ತಿನಲ್ಲಿ ಬರುವ ಉದ್ಧಾಲಕ ಮತ್ತು ಶ್ವೇತಕೇತುವಿನ ವಿಷಯವನ್ನು ಉದ್ಧರಿಸಬಹುದು. ಉದ್ಧಾಲಕ ತನ್ನ ಮಗ ಶ್ವೇತಕೇತುವಿಗೆ ಉಪನಯನದ ಕಾಲ ಮೀರುತ್ತಿದೆಯೆಂದು ತಿಳಿದು ಗುರುಗಳ ಹತ್ತಿರ ಬ್ರಹ್ಮೋಪದೇಶಕ್ಕಾಗಿ ಕಳುಹಿಸಿದನು ಎನ್ನುವುದು ಶಂಕರ ಭಾಷ್ಯದಲ್ಲಿದೆ. ಅದೇ ರೀತಿ ಸತ್ಯಕಾಮ ಜಾಬಾಲಿಗೂ ಆತನ ಗುರು ಹಾರೀತ ಗೌತಮರೇ ಉಪನಯನವನ್ನು ಮಾಡಿ ವಿದ್ಯೆಯನ್ನು ಕಲಿಸುತ್ತಾರೆ. ತಂದೆಯೂ ಗುರುಸ್ಥಾನದಲ್ಲಿರುವ ಕಾರಣ ಕಾಲಕ್ರಮೇಣ ತಂದೆಯೇ ಬ್ರಹ್ಮೋಪದೇಶವನ್ನು ಮಾಡಿ ಗುರುಕುಲಕ್ಕೆ ಕಳಿಸುವ ಪದ್ಧತಿ ರೂಢಿಗೆ ಬಂದಿರಬೇಕು. ಗುರುವಾದವ ತನ್ನ ಹತ್ತಿರ ಬಂದು ಕೇಳಿದವರಿಗೆಲ್ಲ ತನ್ನಲ್ಲಿರುವ ಜ್ಞಾನವನ್ನು ಹಂಚುತ್ತಿರಲಿಲ್ಲ. ಅದಕ್ಕೆ ಆತ ಸಮರ್ಥನಾಗಿದ್ದಾನೆಯೋ ಎಂದು ಮೊದಲು ಪರೀಕ್ಷೆ ಮಾಡುತ್ತಾನೆ. ಇದಕ್ಕೆ ಉದಾಹರಣೆಯನ್ನು ಪ್ರಶ್ನೋಪನಿಷತಿನಲ್ಲಿ ಗಮನಿಸಬಹುದಾಗಿದೆ.

ಹಿಂದೆ ಸುಕೇಶ, ಸತ್ಯಕಾಮ, ಸೌರ್ಯಾಯಣಿ, ಕೌಸಲ್ಯ ಮತ್ತು ಕಬಂಧಿ ಇವರು ಪಿಪ್ಪಲಾದನೆನ್ನುವ ಋಷಿಯ ಹತ್ತಿರ ಬ್ರಹ್ಮ, ಜೀವ, ಜಗತ್ತು ಇವುಗಳ ರಹಸ್ಯವನ್ನು ತಿಳಿಯಲು ಬರುತ್ತಾರೆ. ಹಾಗೇ ಬರುವಾಗ ಅವರು ತರುವುದು ಹಣವಲ್ಲ; ಯಜ್ಞಕ್ಕೆ ಬೇಕಾದ ಸಮಿತ್ತುಗಳನ್ನು ಹಿಡಿದುಕೊಂಡು ಅವರು ಬರುತ್ತಾರೆ. ಹಾಗಂತ ಬಂದ ತಕ್ಷಣ ಗುರು ಅವರಿಗೆ ಗೂಢವಿದ್ಯೆಯ ರಹಸ್ಯವನ್ನು ಹೇಳಿಕೊಡುವುದಿಲ್ಲ. ತಿಳಿಯುವ ಆಸಕ್ತಿ ಶಿಷ್ಯನಲ್ಲಿ ಇದೆಯೋ ಎನ್ನುವುದನ್ನು ಪರೀಕ್ಷೆ ಮಾಡಿ ಅವರು ತಿಳಿದುಕೊಳ್ಳುವುದಕ್ಕೆ ಸಮರ್ಥರು ಎಂದು ಅನಿಸಿದರೆ ಸ್ವಲ್ಪವೇ ತಿಳಿಸಿ ಶಿಷ್ಯರಲ್ಲಿ ಕುತೂಹಲ ಹುಟ್ಟಿಸುತ್ತಾನೆ. ಮುಂದಿನದನ್ನು ಶಿಷ್ಯರೇ ಹುಡುಕಿಕೊಳ್ಳುವಂತೆ ಪ್ರೇರೇಪಿಸುತ್ತಾನೆ. ಕುತೂಹಲದಿಂದ ಪ್ರಶ್ನೆ ಮಾಡಿದರೆ ಪಾಠ ಮುಂದುವರಿಯುತ್ತದೆ. ವಿಷಯವನ್ನು ಸುಲಿದ ಬಾಳೆಯ ಹಣ್ಣಿನಂದದಿ ಶಿಷ್ಯನಿಗೆ ಗುರು ಹೇಳುವುದಿಲ್ಲ. ಆತ ಅಸ್ತಿತ್ವವನ್ನು ಹುಡುಕಿಕೊಳ್ಳುವಂತಹ ಅರಿವನ್ನು ತುಂಬುತ್ತಾನೆ.

ತನ್ನ ಮಗನೇ ಆಗಿದ್ದರೂ ಆತನ ಗುಣಾವಗುಣಗಳನ್ನು ಗುರು ನಿರ್ಮಮಕಾರದಿಂದ ನೋಡುತ್ತಿದ್ದ. ತೈತ್ತರೀಯ ಉಪನಿಷತ್ತಿನಲ್ಲಿ ಭೃಗು ಬ್ರಹ್ಮದ ಕುರಿತು ಅರಿಯಬೇಕೆಂದು ತನ್ನ ತಂದೆ ವರುಣನಲ್ಲಿ ಕೇಳಿಕೊಳ್ಳುತ್ತಾನೆ. ವರುಣ ಅವನಿಗೆ ಹೇಳುವುದು “ಅನ್ನ, ಪ್ರಾಣ, ಚಕ್ಷು, ಶ್ರೋತೃ, ಮನಸ್ಸು ಮತ್ತು ವಾಕ್ಕು” ಎನ್ನುವ ಶಬ್ದಗಳನ್ನು ಮಾತ್ರ. ಭೃಗುವೇ ಆ ಕುರಿತು ತಪಸ್ಸನ್ನಾಚರಿಸಿ (ಚಿಂತನೆಯನ್ನು ಮಾಡಿ) ಕಲಿಯುವ ವಿಷಯ ಬರುತ್ತದೆ. ಬ್ರಹ್ಮಾನಂದ ವಲ್ಲಿಯಲ್ಲಿ ಗುರು ಬ್ರಹ್ಮವೆಂದರೆ “ಸತ್ಯಮ್ ಜ್ಞಾನಮನಂತಂ ಬ್ರಹ್ಮ” ಎಂದಷ್ಟೆ ಹೇಳುತ್ತಾನೆ. ಮಹಾಭಾರತಕ್ಕೆ ಬಂದಾಗ ದ್ರೋಣಾಚಾರ್ಯರು ಏಕಲವ್ಯನಿಗೆ ಅಸ್ತ್ರ ಶಸ್ತ್ರವಿದ್ಯೆಯನ್ನು ಕಲಿಸಲು ತಿರಸ್ಕರಿರುವ ವಿಷಯ ಬರುತ್ತದೆ. ಅದರೆ ಅದೇ ದ್ರೋಣಾಚಾರ್ಯರು ಬ್ರಹ್ಮಶಿರವೆನ್ನುವ ಅಸ್ತ್ರದ ರಹಸ್ಯವನ್ನು ಅರ್ಜುನನಿಗೆ ಹೇಳಿಕೊಡುತ್ತಾರೆ. ತಮ್ಮ ಮಗ ಅಶ್ವತ್ಥಾಮನಿಗೆ ಅದರ ವಿವರವನ್ನು ತಿಳಿಸುವುದಿಲ್ಲ ಎನ್ನುವುದನ್ನು ಮರೆತು ಬಿಡುತ್ತೇವೆ. ಏಕಲವ್ಯ ಜ್ಞಾನ ಪಿಪಾಸುವಾಗಿ ಬಂದಿದ್ದರೆ ಅದನ್ನು ದ್ರೋಣರು ಅದನ್ನು ನಿರಾಕರಿಸುತ್ತಿರಲಿಲ್ಲ. ಆ ಕಾಲದಲ್ಲಿ ಸೂತನಾದ ಸಂಜಯ, ದಾಸಿಪುತ್ರ ವಿದುರ ಇವರೆಲ್ಲರೂ ವೇದಗಳನ್ನು ಚನ್ನಾಗಿ ತಿಳಿದುಕೊಂಡಿದ್ದರು ಎನ್ನುವುದನ್ನು ಗಮನಿಸಬಹುದಾಗಿದೆ.

Bhagavadgeetha

ಗುರು ಎನ್ನುವುದು Teacher ಎನ್ನುವುದಕ್ಕೆ ಪರ್ಯಾಯವಲ್ಲ. Teacher ಬಾಹ್ಯ ಪ್ರಪಂಚದ ಪ್ರಕ್ರಿಯೆಯನ್ನು ಮಾತ್ರ ಕಲಿಸುತ್ತಾನೆ. ಗುರು ವಸ್ತುವಿನ ಅತಿತ್ವದ ಹುಡುಕಾಟವನ್ನು ಸ್ವತಃ ಶಿಷ್ಯನೇ ಹುಡುಕಿಕೊಳ್ಳುವಂತಹ ಅರಿವನ್ನು ತುಂಬುತ್ತಾನೆ. ಒಂದು ವೇಳೆ ಶಿಷ್ಯ ಕೇಳಿದ ಪ್ರಶ್ನೆಗೆ ಉತ್ತರ ಗುರುವಿಗೆ ತಿಳಿಯದಿದ್ದರೆ ಆತ ಶಿಷ್ಯನನ್ನು ಗದರಿಸಿ ಕೂರಿಸುತ್ತಿರಲಿಲ್ಲ. ಅದನ್ನು ತಿಳಿದವರ ಹತ್ತಿರ ಶಿಷ್ಯರನ್ನು ಕಳುಹಿಸುತ್ತಿದ್ದ, ಇಲ್ಲವೇ ತಾನೇ ಕಲಿತು ಶಿಷ್ಯರಿಗೆ ಕಲಿಸುತ್ತಿದ್ದ. ಛಾಂದೋಗ್ಯದಲ್ಲಿ ಉದ್ಧಾಲಕನಿಗೆ ದೇವಯಾನ ಮತ್ತು ಪಿತೃಯಾನದ ಹಾದಿ ತಿಳಿದಿಲ್ಲವಾಗಿತ್ತು. ಪ್ರವಾಹಣ ಜೈವಾಲಿ ಎನ್ನುವ ರಾಜನಿಗೆ ಆ ರಹಸ್ಯ ತಿಳಿದಿತ್ತು. ಅದೇ ರೀತಿ ಅವನಿಗೆ ವೈಶ್ವಾನರ ವಿದ್ಯೆಯ ಕುರಿತೂ ಅರಿವಿರಲಿಲ್ಲ. ಅದು ಅಶ್ವಪತಿ ಮಹಾರಾಜನಿಗೆ ತಿಳಿದಿತ್ತು. ಈ ಎರಡೂ ಸಂದರ್ಭಗಳಲ್ಲಿ ಉದ್ಧಾಲಕ ಸ್ವತಃ ತಾನೇ ಈ ರಾಜರುಗಳಲ್ಲಿ ಹೋಗಿ ಅವರ ಶಿಷ್ಯವೃತ್ತಿಯನ್ನು ಕೈಕೊಂಡು ಕಲಿತುಕೊಂಡು ವಿದ್ಯೆಯನ್ನು ಯಾಚಿಸಿಕೊಂಡು ಬಂದವರಿಗೆ ಕಲಿಸಿದ ವಿಷಯ ಬರುತ್ತದೆ.

ಗುರು ಶಿಷ್ಯರ ಬಗ್ಗೆ ಒಂದು ಮಹತ್ವದ ಉದಾಹರಣೆಯನ್ನು ಕೊಡಬೇಕೆಂದರೆ ಅದು ಸಾರಥಿಯಾಗಿ ಬಂದವ ಸೂತ್ರವನ್ನು ತಿಳಿಸಿದ ವಿಷಯ. ಕೃಷ್ಣ ಗೀತಾಚಾರ್ಯನಾಗಿ ಗೋವು ತನ್ನ ಕರುವನ್ನು ಉಪಾದಾನವನ್ನಾಗಿ ಇರಿಸಿಕೊಂಡು ಯಜಮಾನನಿಗೆ ಹಾಲು ಕೊಡುವಂತೆ, ಅರ್ಜುನನನ್ನು ನಿಮಿತ್ತವಾಗಿರಿಸಿಕೊಂಡು ಜಗತ್ತಿಗೆ ನೀಡಿದ ಜ್ಞಾನ. ಅಷ್ಟೆಲ್ಲವನ್ನು ತಿಳಿಸಿಯೂ ಕೊನೆಗೆ “ತಾನು ಹೇಳಿದ್ದೇನೆಂದು ನಂಬಿ ಅನುಸರಿಸಬೇಕಿಲ್ಲ; ನೀನೇ ಚೆನ್ನಾಗಿ ವಿಮರ್ಶಿಸಿ, ನಿನಗೆ ಯುಕ್ತ ಅಂತನಿಸಿದರೆ ಪಾಲಿಸು” ಎನ್ನುತ್ತಾನೆ. ತನ್ನ ಅಭಿಪ್ರಾಯವನ್ನು ಶಿಷ್ಯ ಕಣ್ಣುಮುಚ್ಚಿ ಅನುಸರಿಸಬೇಕಿಲ್ಲದ ವಾತಾವರಣವಿತ್ತು. ಗುರು ಹೇಳಿರುವುದೆಲ್ಲವನ್ನೂ ಚಾಚೂ ತಪ್ಪದೇ ಅನುಸರಿಸಬೇಕಾಗಿಯೂ ಇರಲಿಲ್ಲ. ಒಂದು ವೇಳೆ ಗುರು ತನ್ನ ಶಿಷ್ಯನಿಗೆ ಅಧರ್ಮ ಮಾರ್ಗದಲ್ಲಿ ನಡೆ ಎಂದು ಬೋಧಿಸಿದರೆ ಅದನ್ನು ಪಾಲಿಸಬೇಕಿರಲಿಲ್ಲ. ಮಹಾಭಾರತದಲ್ಲಿ ಅಂಬೆ ಎನ್ನುವವಳ ಕಾರಣಕ್ಕೆ ಭೀಷ್ಮ ಮತ್ತು ಆತನ ಗುರು ಪರಶುರಾಮರ ಯುದ್ಧದ ವಿಷಯ ಬರುತ್ತದೆ. ಪರಶುರಾಮ ಭೀಷ್ಮನ ಹತ್ತಿರ “ಅಂಬೆಯನ್ನು ಮದುವೆಯಾಗತಕ್ಕದ್ದು, ಇದು ಗುರುವಾಜ್ಞೆ, ತಪ್ಪಿದರೆ ನಿನ್ನನ್ನು ಸಂಹರಿಸುವೆ” ಎಂದು ಬೆದರಿಸಿದಾಗ ಭೀಷ್ಮ ಅದಕ್ಕೊಪ್ಪದೇ,

Bhagavadgeetha

ಗುರೋರಪ್ಯವಲಿಪ್ತಸ್ಯ ಕಾರ್ಯಾಕಾರ್ಯಮಜಾನತಃ I
ಉತ್ಪಥಪ್ರತಿಪನ್ನಸ್ಯ ಪರಿತ್ಯಾಗೋ ವಿಧೀಯತೆ II ಉ.ಪ. 178-48 II

ಗುರುವೇ ಆಗಿದ್ದರೂ ಅವನು ಅಹಂಕಾರಿಯಾಗಿದ್ದರೆ; ಕಾರ್ಯಾಕಾರ್ಯವಿವೇಚನೆಯಿಲ್ಲದವನಾಗಿದ್ದರೆ; ಅಪಮಾರ್ಗವನ್ನು ಅನುಸರಿಸುತ್ತಿದ್ದರೆ ಅಂತವರನ್ನು ಪರಿತ್ಯಜಿಸಬೇಕು ಎಂದಿದ್ದಾನೆ. ಹಾಗಾಗಿ ಗುರು ಹೇಳುವ ಧರ್ಮಮಾರ್ಗಕ್ಕನುಗುಣವಾಗಿರುವ ಸತ್ಯವನ್ನು ಮಾತ್ರ ಶಿಷ್ಯ ಒಪ್ಪಬೇಕು ಎನ್ನುವುದು ಇಲ್ಲಿನ ಪರಂಪರೆ. ಸಂದರ್ಭ ಬಂದರೆ ನಿನ್ನನ್ನು ವಧಿಸಲೂ ಹಿಂದೆಮುಂದೆ ನೋಡುವುದಿಲ್ಲವೆಂದು ಭೀಷ್ಮ ತನ್ನ ಗುರುವನ್ನು ಎಚ್ಚರಿಸುತ್ತಾನೆ. ಆದರೆ ಇದೇ ಭೀಷ್ಮ ಯುದ್ಧದ ಮೊದಲು “ನನಗೆ ಗೆಲುವಾಗಲೆಂದು ಹರಸಿ” ಎಂದು ಪರಶಿರಾಮರ ಆಶೀರ್ವಾದ ಕೊರುತ್ತಾನೆ. ಗುರುಶಿಷ್ಯರೆಂದರೆ ಜ್ಞಾನದ ಅನ್ವೇಷಣೆಯ ಭಾಗವಾಗಿದ್ದರು. ಸಮಷ್ಟಿ ಹಿತದ ಕಲ್ಪನೆ ಅವರಲ್ಲಿತ್ತು. ವ್ಯಷ್ಟಿ ಪರಮೇಷ್ಠಿಯಾಗುವ ಹಾದಿಯನ್ನು ಗುರು ತೋರಿಸುತ್ತಿದ್ದ. ಅದನ್ನು ಶಿಷ್ಯ ಮುಂದುವರಿಸಿಕೊಂಡು ಹೋಗುತ್ತಿದ್ದ. ಶಿಷ್ಯನಾದವ ಪ್ರಶ್ನಿಸಬೇಕು, ಗುರು ಅದಕ್ಕೆ ಉತ್ತರ ಕೊಡಬೇಕು.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ʼನೇತಿ ನೇತಿ’- ವಾಸ್ತವ ಮತ್ತು ತೋರಿಕೆಯಲ್ಲಿ ಸತ್ಯದ ಹುಡುಕಾಟ

ಶಿಕ್ಷಾವಲ್ಲಿಯಲ್ಲಿ ತನ್ನಲ್ಲಿರುವ ಎಲ್ಲಾ ವಿದ್ಯೆಯನ್ನು ಶಿಷ್ಯನಿಗೆ ಧಾರೆ ಎರೆದ ಗುರು ಆತ ಆಶ್ರಮದಿಂದ ತಿರುಗಿ ಹೋಗುವ ಹೊತ್ತಿನಲ್ಲಿ ಕೊಡುವ ಕಿವಿಮಾತು ಜಗತ್ಪ್ರಸಿದ್ಧ. “ಸತ್ಯಂ ವದ ಧರ್ಮಂ ಚರ ಸ್ವಾಧ್ಯಾಯಾನ್ಮಾ ಪ್ರಮದಃ… ಪ್ರಜಾತಂತು ಮಾ ವ್ಯವಚ್ಛೇತ್ಸಿಃ” ಸತ್ಯವನ್ನೇ ನುಡಿ, ಧರ್ಮವನ್ನು ಆಚರಿಸು, ಸ್ವಾಧ್ಯಾಯಯದಲ್ಲಿ ಪ್ರಮಾದ ಮಾಡಬೇಡ… ಪ್ರಜಾತಂತುವನ್ನು ವಿಚ್ಛಿನ್ನಗೊಳಿಸದಿರು” ಎನ್ನುವ ಮಾತುಗಳನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳಬೇಕೆನಿಸುತ್ತದೆ. ಗೃಹಸ್ಥನಾಗಬೇಕು, ಅತಿಥಿಸತ್ಕಾರವನ್ನು ಬಿಡಕೂಡದು ಎನ್ನುವ ಮಹಾನ್ ಕರೆಯನ್ನು ನೀಡುವ ಒಂದು ಆದರ್ಶ ಅದು. ಗುರು ಮತ್ತು ಶಿಷ್ಯರ ಬಾಂಧವ್ಯವನ್ನು ಇದಕ್ಕಿಂತಲೂ ಚೆನ್ನಾಗಿ ಮತ್ತೆ ಹೇಗೆ ಹೇಳಬಹುದೆನಿಸುವಷ್ಟರ ಮಟ್ಟಿಗೆ ಈ ಉಪದೇಶವಿದೆ. ಪ್ರಪಂಚದ ಮೊತ್ತಮೊದಲ ಘಟಿಕೋತ್ಸವದ ವರ್ಣನೆ ಅದು. ಬೌದ್ಧ ಮತ್ತು ಜೈನ ಧರ್ಮದಲ್ಲಿಯೂ ಗುರು ಶಿಷ್ಯರ ಸಂಬಂಧ ಹೀಗೆ ಇದೆ. ಸಿಖ್ ಧರ್ಮವಂತೂ ಗುರುವೇ ಪರಮ ಸತ್ಯವೆಂದು ನಂಬಿ ʼಗ್ರಂಥಸಾಹೇಬʼವನ್ನು ಅನುಸರಿಸುತ್ತದೆ.

ಗುರು ಶಿಷ್ಯರ ವಿಚಾರದಲ್ಲಿ ಅನೇಕ ಹೆಸರುಗಳನ್ನು ಗಮನಿಸಬಹುದಾಗಿದೆ. ಅವುಗಳು ವಸಿಷ್ಠ-ವಿಶ್ವಾಮಿತ್ರ ಮತ್ತು ರಾಮ, ದ್ರೋಣಾಚಾರ್ಯ ಅರ್ಜುನ, ಚಾಣಕ್ಯ ಚಂದ್ರಗುಪ್ತ, ಶಂಕರಾಚಾರ್ಯ ಮತ್ತು ಅವರ ನಾಲ್ಕು ವೃದ್ಧ ಶಿಷ್ಯರು, ರಾಮಕೃಷ್ಣ ಪರಮಹಂಸ ಮತ್ತು ವಿವೇಕಾನಂದರು, ಅರಿಸ್ಟಾಟಲ್ ಮತ್ತು ಪ್ಲೇಟೋ ಹೀಗೆ ಅನೇಕರನ್ನು ಹೆಸರಿಸಬಹುದಾಗಿದೆ. ವ್ಯಾಸರ ಹೆಸರು ಇಲ್ಲಿ ಬರುವದಿಲ್ಲ. ಆದರೂ ಗುರುಪೂರ್ಣಿಮೆಯನ್ನು ವೇದವ್ಯಾಸರ ನೆನಪಿನಲ್ಲಿ ಆಚರಿಸಲಾಗುತ್ತದೆ. ಮಹಾಭಾರತದ ಪ್ರಕಾರ ಪರಾಶರ ಮಹರ್ಷಿ ಮತ್ತು ಸತ್ಯವತಿಯರ ಸಂಪರ್ಕದಿಂದ ದ್ವೈಪಾಯನ ಎನ್ನುವ ಹೆಸರಿನಿಂದ ವ್ಯಾಸರು ಜನಿಸಿದ್ದು ಗುರುಪೂರ್ಣಿಮೆಯಂದು. ಇನ್ನೊಂದು ನಂಬುಗೆಯ ಪ್ರಕಾರ ವ್ಯಾಸರು ಬ್ರಹ್ಮಸೂತ್ರವನ್ನು ಆಷಾಢ ಶುದ್ಧ ಪ್ರತಿಪದೆಯಿಂದ ಆರಂಭಿಸಿ ಪೌರ್ಣಮಿಯ ದಿನ ಆ ಬೃಹತ್ ಗ್ರಂಥವನ್ನು ಪೂರ್ತಿಗೊಳಿಸಿದರು ಎಂದಿದೆ. ವೇದಗಳ ನಿಜತತ್ತ್ವವಾದ “ಅಥಾತೋ ಬ್ರಹ್ಮ ಜಿಜ್ಞಾಸಃ” ಎಂದು ಬ್ರಹ್ಮವನ್ನು ಕಂಡುಕೊಳ್ಳಲು ಇರುವ ಮಹತ್ತರವಾದ ಮಂಥನವನ್ನು ಲೋಕಕ್ಕೆ ಕೊಟ್ಟವರು ವ್ಯಾಸರು. ಹರಿಹಂಚಾಗಿದ್ದ ವೇದಗಳನ್ನು ತಮ್ಮ ನಾಲ್ಕು ಪ್ರಮುಖ ಶಿಷ್ಯರಾದ ಪೈಲ, ವೈಶಂಪಾಯನ, ಜೈಮಿನಿ ಮತ್ತು ಸುಮಂತ ಇವರುಗಳ ಮೂಲಕ ಒಂದು ಕ್ರಮಬದ್ಧ ವ್ಯವಸ್ಥೆಗೆ ಅಳವಡಿಸಿದವರು. ಅದನ್ನು ಋಕ್, ಯಜಸ್ಸು, ಸಾಮ ಹಾಗೂ ಅಥರ್ವಗಳೆನ್ನುವ ನಾಲ್ಕು ಶಾಖೆಗಳಾಗಿ ವಿಂಗಡಿಸಿದವರು. ವೇದೋಪನಿಷತ್ತುಗಳನ್ನು ಅಧ್ಯಯನಕ್ಕೆ ಅನುಕೂಲವಾಗುವಂತೆ ವಿಭಾಗಿಸಿರುವುದರಿಂದ ಮತ್ತು ಕಪ್ಪಗಾಗಿಯೂ ಇರುವುದರಿಂದ ಅವರನ್ನು ವೇದವ್ಯಾಸರೆಂದೂ ಕೃಷ್ಣದ್ವೈಪಾಯನರೆಂದೂ ಕರೆಯುತ್ತಾರೆ. ಮಹಾಭಾರತವಂತೂ ಸಮಗ್ರ ವೇದೋಪನಿಷತ್ತುಗಳ ಸಾರವಾಗಿ ಜನಸಾಮಾನ್ಯರಿಗೂ ಧರ್ಮಾಧರ್ಮಗಳ ಅರಿವು ಮೂಡಿಸಲು ಕಾರಣವಾಗಿವೆ. “ವ್ಯಾಸೋಚ್ಛಿಸ್ಟಂ ಜಗತ್ ಸರ್ವಂ” ಎನ್ನುವದು ಈ ಕಾರಣಕ್ಕಾಗಿಯೇ. ಯತಿಪರಂಪರೆಗಳಿಗೆ ಚಾತುರ್ಮಾಸ್ಯ ವ್ರತವನ್ನು ರೂಢಿಸಿದವರೂ ಅವರೇ. ವೇದಗಳನ್ನು ಅಧ್ಯಯನಕ್ಕೆ ಅನುಕೂಲವಾಗುವಂತೆ ವಿಭಾಗ ಮಾಡುವ ಕ್ರಿಯೆ ಪ್ರತಿಯೊಂದು ಮಹಾ ಯುಗದಲ್ಲಿಯೂ ನಡೆಯುತ್ತಲೇ ಇರುತ್ತದೆ. ಪ್ರತೀ ಮಹಾ ಯುಗಕ್ಕೂ ಒಬ್ಬೊಬ್ಬ ವ್ಯಾಸರು ಈ ಕೆಲಸವನ್ನು ಮಾಡುತ್ತಾರೆ. ಈ ಮಹಾಯುಗದಲ್ಲಿ ಬರುವ ವ್ಯಾಸರು ಕೃಷ್ಣದ್ವೈಪಾಯನರು. ಇನ್ನು ಮುಂದಿನ ಮಹಾಯುಗದಲ್ಲಿ ಅಶ್ವತ್ಥಾಮ ವ್ಯಾಸನಾಗುತ್ತಾನೆ ಎನ್ನುವ ವಿಷಯ ಪುರಾಣಗಳಲ್ಲಿದೆ. ಈ ಎಲ್ಲಾ ಕಾರಣಗಳಿಂದಾಗಿಯೇ ಗುರುಪೂರ್ಣಿಮೆಯನ್ನು ವ್ಯಾಸ ಪೂರ್ಣಿಮೆಯನ್ನಾಗಿ ಆಚರಿಸುತ್ತಾರೆ.

ಅಖಂಡ ಮಂಡಲಾಕಾರಂ ವ್ಯಾಪ್ತಂ ಯೇನ ಚರಾಚರಮ್
ತತ್ಪದಂ ದರ್ಶಿತಂ ಯೇನ ತಸ್ಮೈ ಶ್ರೀ ಗುರವೇ ನಮಃ

ಅಖಂಡ ಮಂಡಲಾಕಾರವಾದ ಚರಾಚರ ಜಗತ್ತನ್ನು ವ್ಯಾಪಿಸಿರುವ ತತ್ತ್ವವು ಯಾರಿಂದ ತೋರಿಸಲ್ಪಟ್ಟಿತೋ ಅಂತಹ ಶ್ರೀ ಗುರುವಿಗೆ ನಮಸ್ಕಾರ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಅತಿಥಿ ಸತ್ಕಾರವೇ ದೈವದ ಸೇವೆ ಎಂದ ದಂಪತಿ; ಮುದ್ಗಲ ಮತ್ತು ಮುದ್ಗಲಾನಿ

Exit mobile version