ಮೋಹಪಾಶದ ಅಧಿಕಾರ ಯಾವತ್ತಿಗೂ ಸ್ಥಿರವಲ್ಲ
ಧವಳ ಧಾರಿಣಿ ಅಂಕಣ: ನ ಹಿ ರಾಜ್ಞಃ ಸುತಾಃ ಸರ್ವೇ ರಾಜ್ಯೇ ತಿಷ್ಠನ್ತಿ ಭಾಮಿನಿ
ಸ್ಥಾಪ್ಯಮಾನೇತು ಸರ್ವೇಷು ಸುಮಹಾನನಯೋ ಭವೇತ್ ৷৷ರಾ. ಅ.8.23৷৷
ಪ್ರಿಯ ಹೆಣ್ಣೇ, ರಾಜನ ಮಕ್ಕಳೆಲ್ಲರಿಗೂ ರಾಜ್ಯದಲ್ಲಿ ಬಾಧ್ಯತೆಯಿರುವುದಿಲ್ಲ. ಹಾಗೇ ಹುಟ್ಟಿದ ಮಕ್ಕಳೆಲ್ಲರಿಗೂ ಪಟ್ಟವನ್ನು ಗಟ್ಟಿದಲ್ಲಿ ಅದು ಸಂಪ್ರದಾಯಕ್ಕೂ ರಾಜನೀತಿಗೂ ವಿರುದ್ಧವಾಗುತ್ತದೆ. ಈರ್ಷ್ಯಾಸೂಯೆಗಳುಂಟಾಗಿ ದೊಡ್ಡ ಅನರ್ಥಕ್ಕೆ ಕಾರಣವಾಗುತ್ತದೆ.
ಮಂಥರೆಯ ಈ ಮಾತು ರಾಜತ್ವವೆನ್ನುವುದು ಪಿತ್ರಾರ್ಜಿತವಾದ ಸಂಪತ್ತಲ್ಲ. ಅದನ್ನು ಮಕ್ಕಳಿಗೆಲ್ಲ ಸಮನಾಗಿ ಹಂಚುವ ವ್ಯವಹಾರವೂ ಅಲ್ಲ, ಅದು ಅರ್ಹರಿಗೆ ಮಾತ್ರ ಸಲ್ಲಬೇಕಾಗುತ್ತದೆ ಎನ್ನುವ ವೇದವಾಣಿಯನ್ನು ದೃಢೀಕರಿಸುತ್ತದೆ. ಮಂಥರೆಯ ಪಾತ್ರ ರಾಮಾಯಣದಲ್ಲಿ ಚಿಕ್ಕ ಮತ್ತು ಮಹತ್ವದ ಪಾತ್ರ. ಇನ್ನೇನು ತನ್ನ ಮನಸ್ಸಿನಂತೆ ನಡೆಯುತ್ತದೆ ಎನ್ನುವ ಕನಸಿನ ವಿಹಾರದಲ್ಲಿರುವ ದಶರಥನ ಸೌಧವನ್ನು ನುಚ್ಚುನೂರು ಮಾಡಿದವಳು ಅವಳು. ಆಕಾರದಲ್ಲಿ ಈಕೆ ಕುಬ್ಜೆ, ಕುರೂಪಿ ಇರಬಹುದು; ಸಿಕ್ಕ ಸಣ್ಣ ಅವಕಾಶದಲ್ಲಿ ರಾಮಾಯಣದಲ್ಲಿ ಬರುವ ಎಲ್ಲ ಪಾತ್ರಗಳಿಗೂ ಮಹತ್ತರ ತಿರುವನ್ನು ಕೊಟ್ಟವಳು ಈಕೆ.
ವಾಲ್ಮೀಕಿಯ ಕಾವ್ಯದಲ್ಲಿ ಈಕೆಯ ಪೂರ್ವಾಪರಗಳ ಕುರಿತು ವಿವರಗಳೇನೂ ಸಿಗುವುದಿಲ್ಲ. ಈಕೆಯ ಪ್ರವೇಶದ ಹೊತ್ತಿಗೆ ಈಕೆಯ ಹೆಸರನ್ನು ವಾಲ್ಮೀಕಿ ಹೇಳುವುದಿಲ್ಲ. “ಜ್ಞಾತಿದಾಸಿ ಯತೋ ಜಾತಾ ಕೈಕೇಯ್ಯಾಸ್ತು ಸಹೋಷಿತಾ” (ಎಲ್ಲಿಯೋ ಹುಟ್ಟಿ ಎಲ್ಲಿಯೋ ಬೆಳೆದು ಕೈಕೇಯಿಯ ಜನನ ಕಾಲದಿಂದಲೇ ಅವಳೊಡನೆ ಇರುವ ಕುಟುಂಬದ ಆಳು) ಎಂದು ಅವಳ ಕುರಿತು ಹೇಳುತ್ತಾನೆ. ಯಾವ ಪಾತ್ರವನ್ನೂ ವಾಲ್ಮೀಕಿ ಕೀಳಾಗಿ ನೋಡುವುದಿಲ್ಲ. ಆದರೆ ಮಂಥರೆಯ ಪಾತ್ರವನ್ನು ಆತ ಅಷ್ಟು ಇಷ್ಟಪಟ್ಟಿಲ್ಲ, ಅದಕ್ಕೆ ಕಾವ್ಯದ ಕ್ರಮದಂತೆ ಪಾತ್ರದ ಪ್ರವೇಶದಲ್ಲಿ ಆತ ಜ್ಞಾತಿದಾಸಿ ಯತೋ ಜಾತಾ, ಎಂದು ಹೇಳಿರುವುದು. ಅಯೋಧ್ಯೆಯ ಜನಪದವನ್ನು ವಿವರಿಸುವಾಗ ಅಲ್ಲಿನ ಜನರ ಸದ್ಗುಣಗಳ ಕುರಿತು ವಿವರವಾಗಿ ಹೇಳಿದ್ದಾನೆ. ಅಲ್ಲಿನ ನಾರಿಯರನ್ನು ವರನಾರಿಯರು ಎಂದು ವರ್ಣಿಸಿದ್ದಾನೆ. ಅಂತಹ ಕೋಸಲಸೀಮೆಯಲ್ಲಿ ಮಂಥರೆಯಂತವಳು ಇರಲು ಸಾಧ್ಯವಿಲ್ಲವೆನ್ನುವುದನ್ನು ತಿಳಿಸುವುದು ಕವಿಯ ಉದ್ದೇಶ. ರಾಮನ ಪಟ್ಟಾಭಿಷೇಕವನ್ನು ಎಲ್ಲರೂ ಸಂಭ್ರಮಿಸುವಾಗ, ಲೋಕಪ್ರಿಯವಾದ ಪಟ್ಟಾಭಿಷೇಕವನ್ನು ಹಾಳು ಮಾಡುವವರು ಪುಣ್ಯಸ್ಥಳವಾದ ಅಯೋಧ್ಯೆಯಲ್ಲಿ ಹುಟ್ಟಿರಲು ಸಾಧ್ಯವೇ ಇಲ್ಲವೆನ್ನುವ ಅರ್ಥವನ್ನೂ ಮಾಡಬಹುದು.
ಎರಡನೆಯ ಶ್ಲೋಕದಲ್ಲಿ ಆಕೆಯ ಹೆಸರು ಮಂಥರೆ ಎಂದು ಹೇಳಿರುವುದು ಕಾವ್ಯದ ಮುಂದುವರಿಕೆಗೆ ಸಹಾಯವಾಗಲಿ ಎಂದು. ಈ ನಡೆ ಬಹುಶಃ ನಂತರ ರಾಮಾಯಣವನ್ನು ಬರೆದ ಕವಿಗಳಿಗೆ ಅಷ್ಟು ಇಷ್ಟವಾಗಿಲ್ಲ. ಪದ್ಮಪುರಾಣ ಈಕೆಯನ್ನು “ಮಂಥರಾನಾಮ ಕಾರ್ಯಾರ್ಥಮಪ್ಸರಾ ಪ್ರೇಷಿತಾ ಸುರೈಃ – ದೇವತೆಗಳು ರಾವಣವಧೆಯ ಕಾರ್ಯವನ್ನು ಸುಗಮಗೊಳಿಸುವ ಕಾರಣಕ್ಕೆ ಅಪ್ಸರೆಯೊಬ್ಬಳನ್ನು ಭೂಲೋಕಕ್ಕೆ ಕಳುಹಿಸಿದರು ಎಂದು ವಿವರಿಸಿದೆ. ಆನಂದ ರಾಮಾಯಣವೂ ಆಕೆಯನ್ನು ಶಾಪಗ್ರಸ್ತ ಅಪ್ಸರೆ ಎನ್ನುತ್ತದೆ. ಕೆಲವು ಕಥೆಗಳಲ್ಲಿ ಆಕೆ ಅಶ್ವಪತಿಗೆ ಅರಣ್ಯದಲ್ಲಿ ಸಿಕ್ಕ ಅನಾಥ ಮಗು ಎಂದು ತಿಳಿಸುತ್ತದೆ. ಆಕೆಯ ಶರೀರವನ್ನು ಅದಾಗಲೇ ಇರುವೆಗಳು ಮುತ್ತಿದ್ದವು, ಆ ಕಾರಣದಿಂದ ಆಕೆ ಕುಬ್ಜೆಯಾಗಿ ಉಳಿದಳು. ಕುವೆಂಪು “ರಾಮಾಯಣ ದರ್ಶನಂ”ದಲ್ಲಿ ಮಂಥರೆಯ ಕುರಿತು ಅಶ್ವಪತಿ ಮಹಾರಾಜ “ತಂದನೂರಿಗವಳಂ ದಾರಿಯಲಿ ನಡೆವ ಮಾರಿಯಂ ಮನೆಗೆ ತರುವಂತೆ” ಎಂದು ವರ್ಣಿಸುತ್ತಾರೆ.
ತಾಯಿಯಿಲ್ಲದ ಕೈಕೇಯಿಯನ್ನು ಆಕೆ ತನ್ನ ಮಗಳಂತೆ ನೋಡಿಕೊಳ್ಳುತ್ತಿದ್ದಳು. ಕೈಕೆಯೂ ಬಾಲ್ಯದಲ್ಲಿ ತಾಯಿಯಿಲ್ಲದೇ ಬೆಳೆದವಳು. ಆಕೆಗೆ ತಾಯಿಯ ಪ್ರೇಮವನ್ನು ಕೊಟ್ಟವಳು ಮಂಥರೆ. ಲೋಕವೆಲ್ಲವೂ ಆಕೆಯನ್ನು ಅನಿಷ್ಠೆ, ಗೂಬೆ, ಕುಬ್ಜೆ ಎಂದು ತಿರಸ್ಕರಿಸುತ್ತಿದ್ದರೆ ಆಕೆಯನ್ನು ಅಷ್ಟೇ ಪ್ರೀತಿಯಿಂದ ನೋಡಿಕೊಂಡಳು ಕೈಕೆ. ಈ ಆಶ್ರಯವೆನ್ನುವುದು ಅವಳ ಬದುಕಿಗೆ “ಮಳೆಹೊಯ್ದ ತೆರನಾಯ್ತು ಮಂಥರೆಯ ಮರುಧರೆಗೆ, ಚೈತ್ರನಾಗಮವಾಯ್ತು ಮಂಥರೆಯ ಶಿಶಿರಕ್ಕೆ” (ರಾ.ದ. ಕುವೆಂಪು) ದಶರಥನೊಡನೆ ಕೈಕೇಯಿಯ ವಿವಾಹವಾದ ಮೇಲೆ ಅವಳ ಸಂಗಡವೇ ಅಯೋಧ್ಯೆಗೆ ಬಂದವಳು. ಕೈಕೇಯಿಯ ಅಂತರಂಗದ ಗುಟ್ಟುಗಳು ಈಕೆಗೆ ಗೊತ್ತಿತ್ತು. ಬಾಲ್ಯದಿಂದಲೂ ಮಂಥರೆ ಆಕೆಯ ಲಾಲನೆ ಪಾಲನೆ ಮಾಡಿರುವುದರಿಂದ ತಾಯಿಯಿಲ್ಲದವಳಿಗೆ ಈಕೆಯ ಮೇಲೆ ವಿಶೇಷ ಮಮತೆ ಮೂಡಿತ್ತು ಎನಿಸುತ್ತದೆ. ವೃದ್ಧಪತಿಯನ್ನು ಸದಾ ತನ್ನ ವಶದಲ್ಲಿ ಇರಿಸಿಕೊಳ್ಳಲು ಕೈಕೇಯಿಗೆ ಸಲಹೆ ನೀಡಿದವಳೇ ಮಂಥರೆ. ಕೌಸಲ್ಯೆಯನ್ನು ಕಂಡರೆ ಆಕೆಗೆ ಆಗುತ್ತಲೇ ಇರಲಿಲ್ಲ.
ವಾಲ್ಮೀಕಿ ರಾಮಾಯಣದ ನಂತರ ನನ್ನನ್ನು ಬಹುವಾಗಿ ಕಾಡಿದುದು ಕುವೆಂಪು ಅವರ “ರಾಮಾಯಣ ದರ್ಶನಂ”. ಇಲ್ಲಿ ಪಾತ್ರಗಳು ರಸದಲ್ಲಿ ಮುಳುಗೇಳುತ್ತವೆ. “ಮಮತೆಯ ಸುಳಿ ಮಂಥರೆ” ಎನ್ನುತ್ತಾ ಕೈಕೆಯ ಕುರಿತು, ವಿಶೇಷವಾಗಿ ಭರತನ ಮೇಲಿರುವ ಆಕೆಯ ಪ್ರೇಮವನ್ನು ಓದಿದ ಮೇಲೆ ಆಕೆಯನ್ನು ಬೈಯ್ಯುವ ಮನಸ್ಸು ಯಾರಿಗೂ ಬರಲಾರದು. ರಾಮಾಯಣದ ನಡೆಯೆಲ್ಲವೂ ವಿಧಿಯ ಹಸ್ತದ ಸೂತ್ರಗಳು, ಮಂಥರೆ ಈ ರಾಮಾಯಣವೆನ್ನುವ ಮೊಸರನ್ನು ಕಡೆದು ನವನೀತವನ್ನು ಕೊಡುವ ಕಡೆಗೋಲು ಎನ್ನುವ ಭಾವವನ್ನು ಕುವೆಂಪುವಿನಂತೆ ವರ್ಣಿಸಲು ಮತ್ಯಾರಿಗೂ ಸಾಧ್ಯವಾಗಲಿಕ್ಕಿಲ್ಲ. ಬೆಣ್ಣೆ ಕಡೆದುಕೊಟ್ಟ ಕಡೆಗೋಲನ್ನು ತೊಳೆದು ಒಣಗಿಸುವ ಹಾಗೇ ಮಂಥರೆಯ ಬದುಕಾಯಿತು. ಹೀಗೆ ನಿಟ್ಟಿಸಿರು ಬಿಡುವಾಗ ಕುವೆಂಪು ರಾಮಯಾಣದ ವಿಶೇಷವನ್ನು ಬಣ್ಣಿಸುವುದು ಹೀಗೆ.
ನೆಯ್ದಾಳುತಿದೆ ಜಗವನೊಂದತಿ ವಿರಾಣ್ ಮನಂ,
ಸೂಕ್ಷ್ಮಾತ್ಮಿಸೂಕ್ಷ್ಮತಂತ್ರದಿ ಬಿಗಿದು ಕಟ್ಟಿಯುಂ
ಜೀವಿಗಳಿಚ್ಛೆಯಾ ಸ್ವಾತಂತ್ರ್ಯಭಾವಮಂ
ನೀಡಿ. ಮಂಥರೆ ಸೀತೆ ರಾಮ ರಾವಣರೆಲ್ಲರುಂ
ಸೂತ್ರಗೊಂಬೆಗಳಲ್ತೆ ಆ ವಿಧಿಯ ಹಸ್ತದಲಿ?
ಮಥಿಸಿದುದು ದಶಸಿರನ ವಿಧಿ ಮಂಥರೆಯ ಮನದಿ
ರಾಮಾಯಣದ ಅಂತಿಮ ಗುರಿಯಾಗಿರುವ ರಾವಣ ವಧೆಯೆನ್ನುವ ಹಾರುಗೋಲಿಗೆ ಚಿಮ್ಮುಹಲಗೆಯಾಗುವವಳು ಮಂಥರೆ ಎನ್ನುವದನ್ನು ಮಾರ್ಮಿಕವಾಗಿ ವರ್ಣಿಸಲಾಗಿದೆ. ದಶರಥನ ಕನಸಿನ ವಿಹಾರವನ್ನು ಭಂಗಗೊಳಿಸಿದವಳು ಇವಳು.
ಅಶ್ವಪತಿ ಮಹಾರಾಜ ಮತ್ತು ಜನಕ ಮಹಾರಾಜನಿಗೆ ಹೇಳಿ ಕಳುಹಿಸುವಷ್ಟು ಸಮಯವಿಲ್ಲದಿದ್ದರೂ ಬೇರೆ ಎಲ್ಲರಿಗೂ ಹೇಳಿಕೆ ಕಳುಹಿಸಿ ಅವರು ಬಂದು ಬಿಡಾರವನ್ನು ಹೂಡಿಯಾಗಿತ್ತು! ಸುಮಾರು ಒಂbತ್ತರಿಂದ ಹನ್ನೆರಡು ವರ್ಷಗಳ ಕಾಲ ಅಯೋಧ್ಯೆಯ ರಕ್ಷಣೆಯನ್ನು ಹೊತ್ತ ರಾಮ ಸಹಜವಾಗಿಯೇ ಜನಮಾನಸದಲ್ಲಿ ತನ್ನ ಪ್ರಭಾವವನ್ನು ಬೀರಿದ್ದ. ಅಯೋಧ್ಯೆಯಲ್ಲಿ ಮಾರನೆಯ ದಿನವೇ ಶ್ರೀರಾಮನಿಗೆ ಪಟ್ಟಾಭಿಷೇಕವೆನ್ನುವ ವಿಷಯವನ್ನು ಕೇಳಿದೊಡನೆ ಪ್ರಜೆಗಳ ಸಂಭ್ರಮ ಮೇರೆ ಮೀರಿತ್ತು. ಪರ್ವಕಾಲದಲ್ಲಿ ಉಕ್ಕಿಬರುವ ಸಮುದ್ರರಾಜನ ನಿನಾದದಂತೆ ಮೂಲೆ ಮೂಲೆಗಳಿಂದ ತಂಡ ತಂಡವಾಗಿ ಪ್ರಜಾಸಮೂಹ ಅಯೋಧ್ಯೆಯತ್ತ ಆಗಮಿಸುತ್ತಿದ್ದವರ ಸಂಭ್ರಮ ನಗರಿಯ ತುಂಬೆಲ್ಲ ಕೇಳಿಬರುತ್ತಿತ್ತು. ಯಕ್ಷಗಾನದ ಪಾರ್ತಿಸುಬ್ಬ ರಾಮಾಭಿಷೇಕದ ಕಾಲದ ಅಯೋಧ್ಯೆಯ ಸಂಭ್ರಮವನ್ನು ವಾರ್ದಿಕ ಷಟ್ಪದಿಯಲ್ಲಿ ವರ್ಣಿಸುವುದು ಹೀಗೆ:
ಕುಶನೆ ಕೇಳಿಂತಯೋಧ್ಯಾಪುರದ ಸಂಭ್ರಮವ
ವಶವಲ್ಲ ಹೇಳಿ ತುದಿಗಾಣಿಸುವಡರಿದೆಮೆಗೆ
ಪಸರಿಸಿತು ಮಂದಿ ಕುದುರೆಗಳ ಸಂದಣಿಯಿಂದ ನಾನಾರವಂಗಳಿಂದ I
ವಸುಧೆ ಹಿಗ್ಗಿದಳು ಕೆಂಧೂಳೆದ್ದು ನಭಗಳಂ
ಮುಸುಕಿ ದಿಗ್ಗಜ ಬೆದರೆ ಕೂರ್ಮನೆದೆಗೆಟ್ಟ ಫಣಿ
ಕುಸಿದ ಸುರರಾಕಾಶದಲ್ಲಿ ಜಯಜಯವೆಂದು ದೇವದುಂದುಭಿ ಮೊಳಗಿತು II
ಪಾರ್ತಿಸುಬ್ಬನ ರಾಮಾಯಣವಾಗಲಿ ಇನ್ನಿತರ ಕವಿಗಳ ಯಕ್ಷಗಾನ ಪ್ರಸಂಗಗಳು ಯಕ್ಷಗಾನ ವಲಯದಿಂದ ಆಚೆಗೆ ವಿದ್ವಾಂಸರ ದೃಷ್ಟಿಗೆ ಬೀಳದೇ ಇರುವದು ಕನ್ನಡ ಸಾಹಿತ್ಯಲೋಕಕ್ಕೆ ದೊಡ್ಡ ನಷ್ಟವಾಗಿದೆ.
ಹೀಗೆ ಅಯೋಧ್ಯೆಗೆ ಅಯೋಧ್ಯೆಯೇ ಸಂಭ್ರಮಿಸುತ್ತಿರುವಾಗ ಆಕಸ್ಮಿಕವಾಗಿ ಉಪ್ಪರಿಗೆಯನ್ನು ಹತ್ತಿದ ದಾಸಿಯೋರ್ವಳು ಇದೇನು ಸಂಭ್ರಮ ಎಂದು ಚಕಿತಳಾಗಿ ಇನ್ನೊಬ್ಬ ದಾಸಿಯ ಹತ್ತಿರ ಕೇಳಿದಳು ಎಂದು ವಾಲ್ಮೀಕಿ ಇವಳ ಪಾತ್ರದ ಪ್ರವೇಶ ಮಾಡಿಸುತ್ತಾನೆ. ರಾಮಪಟ್ಟಾಭಿಷೇಕದ ವಿಷಯ ಯಾವಾಗ ಕಿವಿಗೆ ಬಿತ್ತೋ ತಕ್ಷಣ ಮಂಥರೆಗೆ ಆಗಬಾರದ್ದು ಆಗಿಹೋಯಿತೆನ್ನುವ ಸಂಕಟವುಂಟಾಯಿತು. ಉರುಳುತ್ತಲೇ ಕೈಲಾಸಶಿಖರಾಕಾರದ ಪ್ರಾಸಾದದಿಂದ ಕೆಳಗಿಳಿದು ಬಂದು ಕೈಕೇಯಿಯ ಅರಮನೆಗೆ ಹೋದವಳೇ, ಅವಳನ್ನು ಕರ್ಕಶ ಧ್ವನಿಯಿಂದ ಕೂಗಿ “ಮೂರ್ಖಳೆ, ಎದ್ದೇಳು, ಇನ್ನೂ ಮಲಗಿರುವೆ ಯಾಕೆ” ಎನ್ನುತ್ತಾ ಆಕೆಯನ್ನು ಬೈಯುತ್ತಾ ಎಬ್ಬಿಸುತ್ತಾಳೆ. ಆಗ ತಾನೇ ರಾತ್ರಿ ಮುಸುಕಿದ ಸಮಯ, ಕೈಕೆ ನಿದ್ರೆ ಮಾಡುತ್ತಿದ್ದಳು. ಆಕೆಯನ್ನು ಎಬ್ಬಿಸುವಾಗ “ಭಯವು ನಿನ್ನನ್ನು ಸುತ್ತುವರಿದು ನಿಂತಿದೆ” ಎನ್ನುವ ಕಾವ್ಯಮಯ ಭಾಷೆ ಈ ಭಾಗದ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿದೆ. ಒಂದರ್ಥದಲ್ಲಿ ತನ್ನ ಸೌಂದರ್ಯದ ಕುರಿತು ಹೆಮ್ಮೆ ಪಡುತ್ತಾ ತಾನು ರಾಜನ ಮುದ್ದಿನ ಮಡದಿ ಎನ್ನುವ ಆತ್ಮವಿಶ್ವಾಸದಲ್ಲಿ ಕೈಕೆ ಬೇರೇನನ್ನೂ ಯೋಚಿಸಿಲ್ಲ ಎನ್ನುವದು ಸ್ಪಷ್ಟ.
ಅಶ್ವಪತಿ ಮಹಾರಾಜ ವೃದ್ಧನಾದ ದಶರಥನಿಗೆ ಕೈಕೆಯನ್ನು ಕೊಡುವಾಗ ಅವಳ ಮನೋಭಾವನೆಯನ್ನು ಕೇಳಲೇ ಇಲ್ಲ. ಹಾಗಂತ ಇವಳು ಆ ಕುರಿತು ಬೇಸರವನ್ನೇನೂ ಮಾಡಲೂ ಇಲ್ಲ. ಚಕ್ರವರ್ತಿಯ ಕೈಹಿಡಿದ ಆಕೆಗೆ ಏನೂ ತಿಳಿಯದ ಮುಗ್ಧಳೇನೂ ಆಗಿರಲಿಲ್ಲವೆನ್ನುವದಕ್ಕೆ ಅವಳು ಧಶರಥನ ಸಂಗಡ ಶಂಬರನೊಡನೆ ನಡೆದ ಯುದ್ಧದಲ್ಲಿ ಭಾಗವಹಿಸಿದ ಘಟನೆಯನ್ನು ನೆನಪಿಸಬಹುದು. ಅವಳನ್ನು ಭರತ “ಆತ್ಮ ಕಾಮಾ ಸದಾ ಚಂಡಿ” ಎನ್ನುವ ಮೂಲಕವಾಗಿ ತನ್ನ ಸೌಂದರ್ಯದ ಕುರಿತು ಹೆಮ್ಮೆ ಮತ್ತು ಹಟಸ್ವಭಾವದವಳು ಎನ್ನುವುದಾಗಿ ವರ್ಣಿಸುತ್ತಾನೆ. ಅಶ್ವಪತಿ ಮತ್ತು ದಶರಥನ ನಡುವೆ ರಾಜ್ಯದ ಉತ್ತರಾಧಿಕಾರಿಯಾಗಿ ಕೈಕೇಯಿಯ ಸಂತಾನಕ್ಕೆ ನೀಡುವ ವಿಷಯ ದಶರಥ, ಸುಮಂತ್ರ ಮತ್ತು ಅಶ್ವಪತಿಗೆ ಬಿಟ್ಟರೆ ಮತ್ತೆ ಯಾರಿಗೂ ತಿಳಿದಿಲ್ಲ. ಅರಸನಿಗೆ ತಾನು ಬೇಕಾದವಳು ಎನ್ನುವ ಜಂಬ ಸಹಜವಾಗಿ ಕೈಕೇಯಿಯಲ್ಲಿದ್ದ ಕಾರಣ ಆಕೆ ಇನ್ನಿತರ ರಾಣಿಯರ ಮತ್ತು ಅರಮನೆಯಲ್ಲಿ ಅಧಿಕಾರವನ್ನು ಚಲಾಯಿಸುತ್ತಿದ್ದಳು. ಆಕೆಯ ಗಿಣಿಗಳು ಕೌಸಲ್ಯೆಯ ದಾಸಿಯರೇನಾದರು ಬಂದರೆ ಅವರನ್ನು ಕಚ್ಚು ಎಂದು ಹೇಳುತ್ತಿದ್ದವಂತೆ. ಬಹುಶಃ ಇದು ಕೈಕೇಯಿ ಹೇಳಿಕೊಟ್ಟ ಪಾಠವಾಗಿರಲಿಕ್ಕಿಲ್ಲ. ಮಂಥರೆ ಕಲಿಸಿದ್ದಾಗಿರಬಹುದು. ಅಶ್ವಮೇಧ, ಪುತ್ರಕಾಮೇಷ್ಠಿ ಯಾಗಗಳಲ್ಲಿ ಪ್ರಧಾನಳಾಗಿ ಕೌಸಲ್ಯೆ ಕುಳಿತಾಗಲೂ ಕೈಕೆ ಅದಕ್ಕೆ ಪ್ರತಿರೋಧವನ್ನು ಹೇಳಲಿಲ್ಲವೆನ್ನುವುದು ಸ್ವಭಾವತಃ ಆಕೆಯಲ್ಲಿ ಸಂಶಯ ಸ್ವಭಾವವಿರಲಿಲ್ಲ ಎನ್ನುವುದನ್ನು ತಿಳಿಸುತ್ತದೆ.
ಭರತನಿಗಿಂತಲೂ ರಾಮನನ್ನು ಹೆಚ್ಚಿಗೆ ಹಚ್ಚಿಕೊಂಡ ಕೈಕೇಯಿಗೆ ಮಂಥರೆ “ಅನಿಷ್ಟಳೇ, ರಾಜ ನಿನ್ನನ್ನು ನಿಜವಾಗಿಯೂ ಇಷ್ಟಪಡುತ್ತಿಲ್ಲ” ಮುಂತಾದ ಸಾವಿರ ಬಗೆಯಲ್ಲಿ ಚಾಡಿ ಹೇಳಿದರೂ ಆಕೆ ರಾಮನ ಪಟ್ಟಾಭಿಷೇಕದ ವಿಷಯವನ್ನು ಕೇಳಿ ಸಂತೋಷವನ್ನೇ ವ್ಯಕ್ತಪಡಿಸುತ್ತಾಳೆ. ಭರತ ಇಲ್ಲದಿದ್ದಾಗ ರಾಮನಿಗೆ ಪಟ್ಟಕಟ್ಟುವುದು ಒಂದು ಸಂಚು, ಮುಂದೆ ರಾಮ ಭರತನನ್ನು ಕೊಲ್ಲಿಸಬಹುದು ಎಂದಾಗಲೂ ಆಕೆಯ ಮನಸ್ಸನ್ನು ತಿರುಗಿಸಲಾಗಿಲ್ಲ. ರಾಜ್ಯ ಭರತನ ಸಂತತಿಗೂ ಸಿಗದ ಕಾರಣವನ್ನು ಇಲ್ಲಿ ಪ್ರಾರಂಭದಲ್ಲಿಯೇ ನೀಡಲಾಗಿದೆ. ಅದನ್ನು ಎತ್ತಿ ಹಿಡಿಯುತ್ತಾ ದಶರಥ ಭರತನಿಲ್ಲದ ವೇಳೆಯಲ್ಲಿ ರಾಮನಿಗೆ ಪಟ್ಟಾಭಿಷೇಕಕ್ಕೆ ಏರ್ಪಾಡು ಮಾಡಿರುವುದು ಒಂದು ಸಂಚು ಎನ್ನುವುದನ್ನು ಸಂದರ್ಭಕ್ಕನುಗುಣವಾಗಿ ಕಥೆಯನ್ನು ಕಟ್ಟಿ ಹೇಳಿದವಳೇ ಕೊನೆಯ ಅಸ್ತ್ರವಾಗಿ “ನೀನು ಕೌಸಲ್ಯೆಯ ದಾಸಿಯಾಗುವೆ, ಭರತನ ಪ್ರಾಣ ಈ ಎಲ್ಲಾ ಕಾರಣಗಳಿಂದ ಅಪಾಯದಲ್ಲಿದೆ” ಎನ್ನುವ ಮಾತುಗಳು ಆಕೆಯನ್ನು ತಿರುಗಿಸುತ್ತವೆ.
ಪ್ರಪಂಚದ ಎಲ್ಲಾ ಹೆಣ್ಣುಜೀವಿಗಳು ತನಗೆ ಬರುವ ಎಂತಹ ಕಷ್ಟಗಳನ್ನಾದರೂ ಸಹಿಸಿಕೊಳ್ಳುತ್ತವೆ. ಆದರೆ ತನ್ನ ಮಕ್ಕಳಿಗೆ ಅಪಾಯ ಬಂತೆಂದರೆ ಆಕೆ ಸಮಗ್ರ ಜಗತ್ತನ್ನೇ ಎದುರಿಸಲೂ ಹಿಂದೆಮುಂದೆ ನೋಡುವದಿಲ್ಲ. ಮಂಥರೆ ದುರ್ಬೋಧಿಸಿದಂತೆಲ್ಲ ಕೈಕೆ ಬದಲಾಗುವದು ಕ್ರಿಯೆಗೆ ಒಂದು ಸಹಜ ಪ್ರತಿಕ್ರಿಯೆಯಷ್ಟೆ. ಈಗ ಮಂಥರೆಯೇ ಅವಳಿಗೆ ವರಗಳ ಕುರಿತು ಜ್ಞಾಪಿಸಿ ಕೋಪಾಗಾರಕ್ಕೆ ಹೋಗಲು ಸಲಹೆ ನೀಡುವದು. ಇಲ್ಲಿಂದ ಮುಂದೆ ಕೈಕೆ ರಣಚಂಡಿಯಾಗಿ ಬದಲಾಗುವದನ್ನು ನೋಡಬಹುದು. ಈ ರೀತಿಯ ಸ್ವಭಾವವನ್ನು ಗ್ರೀಕ್ ನಾಟಕಗಳಲ್ಲಿ ಬರುವ Character of Hamartia (ದುರಂತದೋಷ) ಅಂದರೆ ಸೌಮ್ಯವಾಗಿರುವ ಪಾತ್ರ ತಕ್ಷಣ ಋಣಾತ್ಮಕವಾಗಿ ಬದಲಾಗಿ ಸಂಪೂರ್ಣ ದುರಂತಕ್ಕೆ ಕಾರಣವಾಗುವುದು. ಮಂಥರೆಯ ದುರ್ಬೀಜ ಚನ್ನಾಗಿಯೇ ಕೆಲಸ ಮಾಡಿತು.
ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಶ್ರೀರಾಮ ಪಟ್ಟಾಭಿಷೇಕದ ಕನಸಿನ ವಿಹಾರ
ರಾಮಾಯಣದಲ್ಲಿ ಮಂಥರೆಯ ಪಾತ್ರವನ್ನು ಓರ್ವ ವಿಷಬೀಜವೆಂದು ಸುಲಭಕ್ಕೆ ಹೇಳಿಬಿಡಬಹುದು. ಅಥವಾ ಇವಕ್ಕೆಲ್ಲ ಕಾರಣ ಆಕೆ ಶಾಪಗ್ರಸ್ತಳಾಗಿರುವುದು ಎನ್ನುವ ಸಮಾಧಾನವನ್ನು ಪಟ್ಟುಕೊಳ್ಳಬಹುದು. ಆದರೆ ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಪ್ರಪಂಚವೇ ಆಕೆಯನ್ನು ಕುಬ್ಜೆ, ಅನಿಷ್ಟೆ ಎಂದು ಹೀಗೆಳೆವಾಗ ಮರುಭೂಮಿಯಲ್ಲಿ ಸಿಕ್ಕ ನೀರಿನಂತೆ ಕೈಕೇಯಿಯ ಲಾಲನೆ ಪಾಲನೆಯಲ್ಲಿ ಆಕೆ ತನ್ನ ನೋವನ್ನು ಮರೆತವಳು. ಅಶ್ವಪತಿ ಕೈಕೇಯಿಯ ತಾಯಿಯನ್ನು ಕೈಕೆ ಕೈಗೂಸಾಗಿರುವಾಗಲೇ ಕಾಡಿಗೆ ಅಟ್ಟಿದ್ದ. ಅದಕ್ಕೆ ಕಾರಣ ಅರಸನಿಗೆ ಪ್ರಾಣಿ ಪಕ್ಷಿಗಳ ಭಾಷೆ ಅರ್ಥವಾಗುತ್ತಿತ್ತು. ಅದನ್ನು ತನಗೆ ಹೇಳಲೇ ಬೇಕೆನ್ನುವ ಹಟಹಿಡಿದ ಕಾರಣಕ್ಕೆ ಆಕೆಯನ್ನು ಹಸಿ ಬಾಣಂತಿಯಾಗಿರುವಾಗಲೇ ಕಾಡಿನಲ್ಲಿ ಬಿಟ್ಟಿದ್ದ. ತಾಯಿಯಿಲ್ಲದ ತಬ್ಬಲಿಗೆ ತಾಯಿಯಾದವಳು ಮಂಥರೆ. ಅವಳ ಪಾಲಿಗೆ ಕೈಕೆಗೆ ಏನಾದರೂ ಆಯಿತೆಂದರೆ ಸಹಿಸಲಾರದ ಸಂಗತಿ. ತನ್ನ ಮಕ್ಕಳಿಗಿಂತಲೂ ಮೊಮ್ಮಕ್ಕಳ ಮೇಲೆ ಅಜ್ಜಿಯಂದಿರಿಗೆ ಮಮತೆ ಹೆಚ್ಚಿರುತ್ತದೆ. ಈ ಕಾರಣದಿಂದ ಭರತನ ಏಳಿಗೆಯನ್ನು ಬಯಸಿದರೆ ಅದು ಸಹಜವೂ ಹೌದು. ರಾಮನ ಮೇಲಿನ ಹುಚ್ಚು ಮಮತೆಯ ಕಾರಣಕ್ಕೆ ಆತನಿಗೆ ಶತಾಯು ಗತಾಯು ಪಟ್ಟಗಟ್ಟಬೇಕೆನ್ನುವುದು ದಶರಥನ ಇಚ್ಚೆಯಾದರೆ, ಕೈಕೆಯಿಯ ಸಂತಾನವೇ ಪಟ್ಟವೇರಬೇಕೆನ್ನುವ ಮೋಹ ಮಂಥರೆಯಲ್ಲಿದೆ. ಹೀಗೆ ಲೋಕದ ಒಳಿತಿಗಲ್ಲ, ತಮಗೆ ಬೇಕಾದವರು ಪಟ್ಟವೇರಲಿ ಎನ್ನುವ ಸ್ವಾರ್ಥ ಇಲ್ಲಿ ಕೆಲಸ ಮಾಡಿದೆ.
ರಾಜತ್ವವೆನ್ನುವುದು ವಿಷ್ಣುವಿನ ಪ್ರತಿನಿಧಿಯಾಗಿ ಇರುವ ಸ್ಥಾನ. ರಾಮನಂತಹ ಪರಿಪೂರ್ಣ ವ್ಯಕ್ತಿ ಇಂಥಹ ಮನಸ್ಥಿತಿಯಲ್ಲಿ ಪಟ್ಟವನ್ನೇರಿದರೆ ಅದು ಒಂದು ದೋಷವೇ. ಕಾವ್ಯದ ಪ್ರಾರಂಭದಲ್ಲಿ ನಾರದರ ಹತ್ತಿರ ವಾಲ್ಮೀಕಿ ಕೇಳಿಕೊಂಡಂತೆ ಹದಿನಾರು ಗುಣ ಸಂಪನ್ನನಾದ ರಾಮ ದಶರಥನ ಇಚ್ಛೆಯಂತೆ ಪಟ್ಟಕ್ಕೆ ಏರಿದ್ದರೆ ಅದೊಂದು ದೋಷವಾಗಿಬಿಡುತ್ತಿತ್ತು. ಅಧಿಕಾರವೆನ್ನುವುದು ಭೋಗವಲ್ಲ, ಹೊಣೆಗಾರಿಕೆಯಾಗಿ ನೋಡಬೇಕು. ಮಾನುಶಃ ಲೀಲೆಯಲ್ಲಿ ಗುಣವಂತನಾದ ವ್ಯಕ್ತಿಯ ಕುರಿತು ರಾಮಾಯಣವನ್ನು ರಚಿಸಲಾಗಿದೆ. ಗುಲಗಂಜಿಯಷ್ಟು ದೋಷವಿದ್ದರೂ ಕವಿ ವಾಲ್ಮೀಕಿ ತನ್ನ ಮನಸ್ಸಿನಲ್ಲಿ ಪಡಿಮೂಡಿದಾಕೃತಿಗೆ ತಾನೇ ಮುಗ್ಧನಾಗಲಾರ.
ವೇದೋಪನಿಷದಗಳ ಭೂತಗನ್ನಡಿಯೊಳಗೆ
ಪಡಿಮೂಡಿದಾಕೃತಿಗೆ ತಾನೆ ಮುಗ್ಧ
ಮತ್ಸ್ಯ ಕೂರ್ಮ ವರಾಹ ಮೆಟ್ಟಿಲುಗಳೇರುತ್ತ
ಹುತ್ತಗಟ್ಟಿದ್ದ ಕೈ ಕಡೆದ ನೋಟ;
ಅಡಿಗರು ಕಡೆದ ಪಾತ್ರದ ನೆನಪನ್ನು ಇಲ್ಲಿ ಮಾಡಿಕೊಳ್ಳಬೇಕು.
ಅಂತರಂಗದ ಅರಸಿ ಕೋಪಾಗಾರವನ್ನು ಸೇರಿದರೆ ದಶರಥ ಮಹಾರಾಜ ತನ್ನ ಕಾರ್ಯ ಈಡೇರಿತೆಂದು ಸಂತೋಷದ ಅತಿರೇಕಕ್ಕೆ ಹೋಗಿದ್ದ. ಮದವೇರಿದ ಆತ ಅದನ್ನು ಇಳಿಸಿಕೊಳ್ಳುವ ಬಯಕೆಯ ಸಲುವಾಗಿ ಹೊರಟಿದ್ದ.
ವಿವರ ಮುಂದಿನ ಸಂಚಿಕೆಯಲ್ಲಿ…..
ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಶ್ರೀರಾಮ ಪಟ್ಟಾಭಿಷೇಕ ಸಂಕಲ್ಪದ ಹಿಂದಿನ ಗೂಢಗಳು