Site icon Vistara News

ಧವಳ ಧಾರಿಣಿ ಅಂಕಣ | ಮಾತೃತ್ವ ಮತ್ತು ಮಿತ್ರೆಯಾಗಿ ಸ್ಥಿತಪ್ರಜ್ಞತೆಯನ್ನು ತೋರಿದ ಮಹಾರಾಣಿ ಸುಮಿತ್ರೆ

saumitra

ಭಾಗ- 1

ಕಾವ್ಯವೆನ್ನುವುದು ಕಥೆಯನ್ನು ರಸವನ್ನಾಗಿಸಿ ಹೇಳುವ ವಿಧಾನ. ಅದರಲ್ಲಿಯೂ ಮಹಾಕಾವ್ಯವಾದ ರಾಮಾಯಣದ ಪ್ರತಿಯೊಂದು ಪಾತ್ರವೂ ಮತ್ತು ಪ್ರಯೊಂದು ಘಟನೆಗಳು ರಸದ ಹೊಳೆಯನ್ನೇ ಹರಿಸಿಬಿಟ್ಟಿವೆ. ರಾಮಾಯಣವನ್ನು ಕಾವ್ಯವನ್ನಾಗಿ ನೋಡುವಾಗ ಅದು ರಾಮನ ಅಯನ ಅಂದರೆ ರಾಮ ಕೇಂದಿತ್ರವನ್ನಾಗಿರಿಸಿಕೊಂಡ ಕಾವ್ಯ. ಈ ಅಯನದಲ್ಲಿ ವಾಲ್ಮೀಕಿ ವ್ಯಕ್ತವಾಗಿ ಹೇಳಿರುವ ಸಂಗತಿಗಳನ್ನು ಬಿಟ್ಟರೆ ಉಳಿದ ಸಂಗತಿಗಳನ್ನು ರಸಭಾವ ಕೆಡದಂತೆ ಪರೋಕ್ಷವಾಗಿ ವಿವರಿಸಿದ್ದಾರೆ. ಅಂತಹ ಪಾತ್ರಗಳಲ್ಲಿ ಸುಮಿತ್ರೆ, ಊರ್ಮಿಳೆ ಇವರೆಲ್ಲರೂ ಬರುತ್ತಾರೆ.

ವಾಲ್ಮೀಕಿ ಸುಮಿತ್ರೆಯ ಕುರಿತು ಹೆಚ್ಚೇನೂ ಹೇಳಿಲ್ಲವೆನ್ನುವ ಮಾತ್ರಕ್ಕೆ ಈ ಪಾತ್ರಕ್ಕೆ ಮಹತ್ವವಿಲ್ಲವೆಂದು ಆಗಲಾರದು. ಆಕೆ ದಶರಥನ ಮೂರು ಜನ ರಾಣಿಯರಲ್ಲಿ ಮಧ್ಯಮದವಳಾದರೂ ಸುಮಿತ್ರೆಗೆ ಅವಳದೇ ಆದ ವ್ಯಕ್ತಿತ್ವವಿರುವುದನ್ನು ರಾಮಾಯಣದಲ್ಲಿ ಅಲ್ಲಲ್ಲಿ ಕಾಣಬಹುದು. ಈಕೆಯ ಹೆಸರಿನಲ್ಲಿಯೇ ಸು ಮತ್ತು ಮಿತ್ರಾ ಎನ್ನುವ ಎರಡು ಶಬ್ಧಗಳಿವೆ. ‘ಸು’ ಎಂದರೆ ಒಳ್ಳೆಯದು ಮತ್ತು ಮಿತ್ರ ಎಂದರೆ ಸ್ನೇಹಿತ ಎಂದರ್ಥ. ಮಿತ್ರ ಎನ್ನುವದಕ್ಕೆ ಸ್ನೇಹ ಸಮಗ್ರತೆಯ ಭಾವದಲ್ಲಿರುವವ, ತಾಟಸ್ಥ್ಯ, ಸಮಭಾವದಿಂದ ಒಳಿತು ಮತ್ತು ಕೆಡಕುಗಳನ್ನೆಲ್ಲವನ್ನೂ ಸಮಾನವಾಗಿ ಕಾಣುವವ ಎನ್ನುವ ಅರ್ಥವೂ ಇದೆ.

ಅದಕ್ಕೆ ತಕ್ಕಂತೆ ಈಕೆ ದಶರಥನ ಅರಮನೆಯಲ್ಲಿ ಎಲ್ಲರಿಗೂ ತನ್ನ ಒಳ್ಳೆಯ ಗುಣಗಳಿಂದಾಗಿ ಮೆಚ್ಚಿಗೆಯನ್ನು ಗಳಿಸಿಕೊಂಡಿದ್ದಳು. ಪಟ್ಟದರಸಿಯಾದ ಕೌಸಲ್ಯೆ ಪ್ರೌಢಳು, ಕೈಕೇಯಿಯ ಕಾರಣದಿಂದ ಅವಜ್ಞೆಗೊಳಗಾಗಿ ವಿಷಯಾಸಕ್ತಿಯನ್ನು ಕಳೆದುಕೊಂಡು ಮಗ ರಾಮನಿಂದಾಗಿ ಜೀವನದಲ್ಲಿ ಬದುಕುವ ಹಂಬಲವನ್ನಿಟ್ಟುಕೊಂಡವಳು. ಕೈಕೆ ಎಲ್ಲರಿಗೂ ತಿಳಿದಿರುವಂತೆ ರಾಮಾಯಣದ ಮಹಾಚಂಡೀ. ಈ ಇಬ್ಬರ ನಡುವಿನ ಸುಮಿತ್ರೆ ಹೇಗಿರಬಹುದೆನ್ನುವ ಕುತೂಹಲ ಕಾಡುವದು ಸಹಜ.

ವಾಲ್ಮೀಕಿ ದಶರಥನ ಮಡದಿಯರ ಗುಣಗಳು ಹೇಗಿದ್ದಿರಬಹುದೆನ್ನುವದನ್ನು ದೂರದಲ್ಲಿ ಅಜ್ಜನ ಮನೆಯಲ್ಲಿ ಇರುವ ಭರತನ ಬಾಯಿಂದ ಹೇಳಿಸುತ್ತಾರೆ. “ಆರ್ಯಾ ಚ ಧರ್ಮನಿರತಾ ಧರ್ಮಜ್ಞಾ ಧರ್ಮದರ್ಶಿನೀ– ಪೂಜ್ಯಳಾದ, ಧರ್ಮದಲ್ಲಿಯೇ ಸದಾ ನಿರತಳಾದ, ಇತರರಲ್ಲಿ ಸದಾ ಸದ್ಗುಣಗಳನ್ನೇ ಕಾಣುವ, ಧೀಮಂತಳಾದ” ಎನ್ನುವ ಮೂಲಕ ಗೌರವಮಿಶ್ರಿತ ಪ್ರಬುದ್ಧ ಸ್ತ್ರೀಯಾಗಿ ಕೌಸಲ್ಯೆ ಎದುರಿಗೆ ಕಾಣಿಸುತ್ತಾಳೆ. ಸುಮಿತ್ರೆಯ ವಿಷಯಕ್ಕೆ ಬರುವಾಗ ಭರತ ಹೇಳುವ ಮಾತು:

ʼಕಚ್ಚಿತ್ಸುಮಿತ್ರಾ ಧರ್ಮಜ್ಞಾ ಜನನೀ ಲಕ್ಷ್ಮಣಸ್ಯ ಯಾ
ಶತ್ರುಘ್ನಸ್ಯ ಚ ವೀರಸ್ಯ ಸಾರೋಗಾ ಚಾಪಿ ಮಧ್ಯಮಾ৷৷2.70.9৷৷

“ಧರ್ಮಜ್ಞಳಾದ, ವೀರರಾದ ಲಕ್ಷ್ಮಣ ಶತ್ರುಘ್ನರ ತಾಯಿಯಾದ, ನನ್ನ ಮಧ್ಯಮ ತಾಯಿ ಸುಮಿತ್ರಾ ಆರೋಗ್ಯದಿಂದ ಇರುವಳೇ?” ಎಂದು ಕೇಳುತ್ತಾನೆ.

ಭರತ ಧರ್ಮಜ್ಞನೆನ್ನುವ ಪದವನ್ನು ಬಳಸುವದು ಕೌಸಲ್ಯೆ ಮತ್ತು ಸುಮಿತ್ರೆಗೆ ಮಾತ್ರವೆನ್ನುವದು ಗಮನಿಸಬೇಕಾದ ಸಂಗತಿ. ಈ ಮಾತುಗಳು ಸುಮಿತ್ರೆಯ ಕುರಿತು ಅಯೋಧ್ಯೆಯಲ್ಲಿ ಯಾವ ಭಾವ ಇತ್ತು ಎನ್ನುವದನ್ನು ವ್ಯಕ್ತಪಡಿಸುತ್ತದೆ. ಯಾವ ಬಗೆಯ ಮನೋವಿಕಾರಕ್ಕೂ ಒಳಗಾಗದೇ ಪಾಲಿಗೆ ಬಂದಿರುವದನ್ನು ಪಂಚಾಮೃತವೆಂದು ಸ್ವೀಕರಿಸಿ ಸುಖದಲ್ಲಿ ಹಿಗ್ಗದೇ ಕಷ್ಟಗಳಿಗೆ ಕುಗ್ಗದೇ ಕೆಡುಕುಂಟುಮಾಡುವ ಜನರಿಂದ ಮೌನವಾಗಿ ದೂರ ಸರಿದು, ಒಳಿತು ಮಾಡುವವರನ್ನು ಆದರಿಸುವ, ಸದಾ ಕಾಲ ತಾನು ಮರೆಯಲ್ಲಿಯೇ ಇದ್ದು ತನ್ನ ಮಕ್ಕಳು ಸದಾಕಾಲ ತಮ್ಮ ಕರ್ತವ್ಯದಲ್ಲಿ ತೊಡಗಿಕೊಳ್ಳಲೇ ಬೇಕೆಂದು ಹಂಬಲಿಸುವ ಒಂದು ವ್ಯಕ್ತಿತ್ವವಿದ್ದರೆ ಅದು ಸುಮಿತ್ರೆ.

ಈಕೆ ರಾಮಾಯಣದ ಗತಿಗೆ ನೇರವಾಗಿ ಪ್ರೇರಣೆಯನ್ನು ಒದಗಿಸುವವಳಲ್ಲವಾಗಿಲ್ಲದಿರುವುದರಿಂದಲೂ ಏನೋ ಎಲ್ಲೋ ಕೆಲವು ಕಡೆ ಕಂಡಂತಾಗಿ ತಕ್ಷಣ ಮರೆಯಾಗಿಬಿಡುತ್ತಾಳೆ. ಧೀರರಾದ ಲಕ್ಷ್ಮಣ ಶತ್ರುಘ್ನರ ತಾಯಿ ಎನ್ನುವಲ್ಲಿ ಈ ಮಹಾತಾಯಿಯ ವ್ಯಕ್ತಿತ್ವದ ಅನಾವರಣವಾಗುತ್ತದೆ. ರಾಮಾಯಣದಲ್ಲಿ ಸುಮಿತ್ರೆಯ ಹಿನ್ನೆಲೆ ಕಂಡುಬರುವುದಿಲ್ಲ. ಆದರೆ ಮಹಾಭಾರತದ ವನಪರ್ವದಲ್ಲಿ ಈಕೆ ಮಗಧ ದೇಶದ ರಾಜನಾದ ಶೂರಸೇನನ ಮಗಳು ಎಂದಿದೆ. ಅಪರೂಪಕ್ಕೊಮ್ಮೆ ರಾಮಾಯಣದಲ್ಲಿ ಕಾಣಿಸಿಕೊಳ್ಳುವ ಈಕೆ ಹಾಗೆ ಬಂದಾಗಲೆಲ್ಲಾ ಆಡುವ ಕೆಲವೇ ಮಾತುಗಳಲ್ಲಿ ತನ್ನ ಧರ್ಮಪರಾಯಣತೆಯನ್ನೂ, ಸಹನಾಶೀಲತೆಯನ್ನೂ, ಕರ್ತವ್ಯಪಾಲನೆಯಲ್ಲಿ ಇರಬೇಕಾದ ಬದ್ಧತೆಯನ್ನೂ ತೋರಿಸುತ್ತಾಳೆ.

ಅಯೋಧ್ಯೆಯ ಅರಮನೆಗೆ ದಶರಥನ ಕೈಹಿಡಿದು ರಾಣಿಯಾಗಿ ಬಂದ ಆಕೆ ಕೈಕೇಯಿ ಕಿರಿಯ ರಾಣಿಯಾಗಿ ಬರುವತನಕ ನೆಮ್ಮದಿಯ ಬದುಕನ್ನು ಕಂಡಿರಬಹುದು. ಹಿರಿಯ ರಾಣಿ ಕೌಸಲ್ಯೆ ಮತ್ತು ಈಕೆಯ ನಡುವೆ ಸೌಹಾರ್ದಯುತ ಸಂಬಂಧ ಚೆನ್ನಾಗಿಯೇ ಇತ್ತು. ಆದರೆ ಕೈಕೇಯಿಯನ್ನು ಮದುವೆಯಾದ ಮೇಲೆ ಅಂತಃಪುರದ ಸ್ಥಾನಮಾನಗಳೆಲ್ಲವೂ ಪಲ್ಲಟವಾಯಿತು. ದಶರಥ ಕಿರಿಯ ರಾಣಿಯ ಕೈಗೊಂಬೆಯಾಗಿದ್ದ. ಸ್ವತಃ ಕೌಸಲ್ಯೆಯೇ ತನ್ನ ದಿನನಿತ್ಯದ ವೆಚ್ಚಕ್ಕಾಗಿ ಜಿಪುಣತನ ತೋರಿಸಬೇಕಾಗಿ ಬಂದಿತ್ತು. ಅಂತಹ ಹೊತ್ತಿನಲ್ಲಿಯೂ ಮೌನವಾಗಿ ಇದನ್ನೆಲ್ಲವನ್ನು ನುಂಗಿಕೊಂಡು ಇದ್ದವಳು ಈಕೆ. ದಶರಥನಿಗೆ ಕೈಕೇಯಿಯ ಮೇಲಿರುವುದು ಅಂತರಂಗದ ಪ್ರೀತಿಯಲ್ಲವಾಗಿತ್ತು. ಅವಳ ಹಠಮಾರಿ ಬುದ್ಧಿ, ಸಿಡುಕುತನಕ್ಕೆ ಆತ ಹೆದರುತ್ತಿದ್ದ. ಆತ ಗೌರವಿಸುತ್ತಿರುವುದು ಕೌಸಲ್ಯೆಯನ್ನು ಮತ್ತು ಸುಮಿತ್ರೆಯನ್ನು ಎನ್ನುವದನ್ನು ಪಾಯಸ ಪ್ರಕರಣದಲ್ಲಿ ಗಮನಿಸಬಹುದು.

ಋಷ್ಯಶೃಂಗನ ಯಜ್ಞದಲ್ಲಿ ದೇವತೆಗಳು ನೀಡಿದ ಪಾಯಸವನ್ನು ತನ್ನ ರಾಣಿಯರಿಗೆ ಹಂಚಬೇಕಾಗಿ ಬಂದಾಗ ರಾಮಾಯಣದಲ್ಲಿ ಒಂದು ಮಹತ್ವದ ಸಂಗತಿ ನಡೆಯುತ್ತದೆ. ಯಜ್ಞದಿಂದ ಎದ್ದ ಮಹಾಪುರುಷ ಪಾಯಸವನ್ನು ದಶರಥನಿಗೆ ನೀಡಿ “ಇದಂ ತು ನೃಪಶಾರ್ದೂಲ ಪಾಯಸಂ ದೇವನಿರ್ಮಿತಮ್” ಎಂದು ಹೇಳಿದ್ದಲ್ಲದೇ ಅದನ್ನು ತನ್ನ ರಾಣಿಯರಿಗೆ ನೀಡುವಂತೆ ತಿಳಿಸಿದ್ದ. ದೇವತೆನಿರ್ಮಿತವಾದ ಈ ಪಾಯಸವನ್ನು ವರದ ರೂಪದಲ್ಲಿ ಕೊಟ್ಟಾಗ ದಶರಥ ನೇರವಾಗಿ ಹೋಗಿದ್ದು ಕೌಸಲ್ಯೆಯಿದ್ದಲ್ಲಿಗೆ. ಆಕೆಗೆ ಪಾಯಸದ ಅರ್ಧಭಾಗವನ್ನು ಸಂತೋಷದಿಂದ ಕೊಟ್ಟ. ಉಳಿದ ಪಾಯಸದಲ್ಲಿ ಅರ್ಧಭಾಗ ಮಾಡಿ ಅದನ್ನು ಸುಮಿತ್ರೆಗೆ ಕೊಟ್ಟ. ಉಳಿದ ಕಾಲುಭಾಗದಲ್ಲಿ ಮತ್ತೆ ಅರ್ಧಭಾಗ ಮಾಡಿ ಅದನ್ನು ಕೈಕೇಯಿಗೆ ಕೊಟ್ಟ. ಈಗ ಪಾಯಸದಲ್ಲಿ ಎಂಟನೆಯ ಒಂದು ಭಾಗ ಮಾತ್ರ ಉಳಿದಿತ್ತು. ಆಗ ಮನಸ್ಸಿನಲ್ಲಿಯೇ ಏನನ್ನೋ ಯೋಚಿಸಿ ಆ ಭಾಗವನ್ನು ಪುನಃ ಸುಮಿತ್ರೆಗೆ ಕೊಟ್ಟ. ಪಾಯಸವನ್ನು ಪ್ರತ್ಯೇಕ ಪ್ರತ್ಯೇಕವಾಗಿ ಕೊಟ್ಟ ಎಂದು ವಾಲ್ಮೀಕಿ ಸೂಕ್ಷ್ಮವಾಗಿ ಈ ಹಂಚಿಕೆಯ ರಾಜಕೀಯವನ್ನು ಹೇಳುತ್ತಾರೆ. ಈ ಘಟನೆಯಿಂದ ರಾಜನಿಗೆ ಸುಮಿತ್ರೆಯ ಮೇಲೆ ವಿಶೇಷ ಆದರವಿತ್ತು ಎನ್ನುವದು ತಿಳಿಯುತ್ತದೆ. ಅದೂ ಅಲ್ಲದೇ ಪ್ರಾಯ ಮೀರಿದ ಕೌಸಲ್ಯೆಯಲ್ಲಿ ಪಾಯಸ ಪರಿಣಾಮ ಬೀರುವದೋ ಇಲ್ಲವೋ ಎನ್ನುವ ಕಾರಣವೂ ಇದ್ದೀತು. ಒಟ್ಟಿನಲ್ಲಿ ಕೌಸಲ್ಯೆಯಷ್ಟೇ ಸುಮಿತ್ರೆಯೂ ಗುಣಗ್ರಾಹಿಯಾಗಿ ದಶರಥನ ಮನಸ್ಸಿನಲ್ಲಿ ಉಳಿದುಕೊಂಡಿದ್ದಳು ಎನ್ನಬಹುದಾಗಿದೆ.

ಸುಮಿತ್ರೆಯ ದರ್ಶನ ರಾಮಾಯಣದಲ್ಲಿ ಮೊದಲು ಆಗುವದು ರಾಮ ವನವಾಸಕ್ಕೆ ಹೋಗುವ ಸಿದ್ಧತೆಯನ್ನು ನಡೆಸಿ ಆತನೊಂದಿಗೆ ಲಕ್ಷ್ಮಣನೂ ಹೊರಟು ನಿಂತಾಗ. ತನ್ನಣ್ಣನ ಮೇಲಿನ ಪ್ರೀತಿ ಲಕ್ಷ್ಮಣನಿಗೆ ಎಷ್ಟಿತ್ತೆಂದರೆ ಆತ ಅರಣ್ಯಕ್ಕೆ ರಾಮನನ್ನನುಸರಿಸಿ ಹೋಗುವ ವಿಷಯವನ್ನು ತನ್ನ ಪತ್ನಿ ಊರ್ಮಿಳೆಗಾಗಲಿ, ತಾಯಿ ಸುಮಿತ್ರೆಗಾಗಲೀ ಹೇಳುವ ಗೋಜಿಗೂ ಹೋಗಿರಲಿಲ್ಲ. ಮೊದಲೇ ಭರತನೊಟ್ಟಿಗೆ ಕಿರಿಯ ಮಗ ಶತೃಘ್ನ ಕೇಕಯ ರಾಜ್ಯಕ್ಕೆ ಹೋಗಿದ್ದ. ಲಕ್ಷ್ಮಣ ಸದಾ ರಾಮನ ಸಂಗಡವೇ ಇರುತ್ತಿದ್ದ. ದೂರವಿದ್ದ ಮಗನನ್ನು ಲಾಲಿಸಲಾಗಲಿಲ್ಲ. ಹತ್ತಿರವಿದ್ದ ಪುತ್ರ ಸದಾ ತನ್ನರಮನೆಯಿಂದಲೇ ದೂರವಿರುತ್ತಿದ್ದ. ಪುತ್ರಶೋಕದಿಂದ ಬಹಳ ವರ್ಷಗಳ ಕಾಲ ಬಳಲಿ ಆಮೇಲೆ ಇಬ್ಬರು ಮಕ್ಕಳ ತಾಯಿಯಾದರೂ ಸದಾ ಪುತ್ರವಿಯೋಗವೇ ಆಕೆಗಿತ್ತು. ಆದರೂ ಆಕೆ ಈ ಕಾರಣಕ್ಕಾಗಿ ನೊಂದುಕೊಂಡಿರಲಿಲ್ಲ. ಅರಮನೆ ತುಂಬಾ ಮಕ್ಕಳು ಓಡಾಡುತ್ತಿರುತ್ತಾರಲ್ಲಾ ಎನ್ನುವದು ಆಕೆಗೆ ಸಮಾಧಾನವನ್ನು ಕೊಟ್ಟಿತ್ತು.

ಇಂತಹ ಹೊತ್ತಿನಲ್ಲಿ ಲಕ್ಷ್ಮಣ ರಾಮನ ಸಂಗಡ ಅರಣ್ಯಕ್ಕೆ ಹೊರಟು ತಾಯಿಗೆ ನಮಸ್ಕರಿಸುತ್ತಾನೆ. ಸಹಜವಾಗಿಯೇ ತಾಯಿಯಾಗಿ ಆಕೆಗೆ ಸಂಕಟವಾಗಿದೆ. ʻರುದತೀ ಮಾತಾʼ- ಸುಮಿತ್ರೆಗೆ ಆ ನಾರುಮಡಿಯನ್ನುಟ್ಟು ಧನುರ್ಬಾಣಗಳನ್ನು ಹಿಡಿದ ತನ್ನ ಮಗ ಹೊರಡುವ ಹೊತ್ತಿನಲ್ಲಿ ಬಂದು ತನಗೆ ನಮಸ್ಕರಿಸಿದನಲ್ಲ ಎನ್ನುವ ನೋವು ಉದ್ಭವಿಸಿರಬೇಕು. ಅಳುವನ್ನು ತಡೆಯಲಾಗಲಿಲ್ಲ ಅವಳಿಗೆ. ಮಾತೃ ಹೃದಯದಲ್ಲಿ ಅಪಾರವಾದ ದುಃಖವಿದ್ದರೂ ಸದಾ ಎಲ್ಲರ ಹಿತವನ್ನು ಬಯಸುತ್ತಿರುವ ಆಕೆ ಮಗನ ಅಗಲುವಿಕೆಯ ನೋವನ್ನು ತೋರ್ಪಡಿಸಿಕೊಳ್ಳಲಿಲ್ಲ. ಮಹಾ ಪರಾಕ್ರಮಿಯಾದ ಲಕ್ಷ್ಮಣನ ನೆತ್ತಿಯನ್ನು ಆಘ್ರಾಣಿಸಿದಳಂತೆ.

ಇದನ್ನೂ ಓದಿ | ಧವಳ ಧಾರಿಣಿ ಅಂಕಣ | ವರ್ಷಕ್ಕೆ ಒಂದಲ್ಲ, ನಾಲ್ಕು ನವರಾತ್ರಿ ಹಬ್ಬಗಳು!

ಇತ್ತ ದಶರಥನನ್ನೂ ಸೇರಿಸಿ ಅರಮನೆಯವರೆಲ್ಲರೂ ದೊಡ್ಡದಾಗಿ ಅಳುತ್ತಿದ್ದಾರೆ. ಕೌಸಲ್ಯೆಯ ದುಃಖವಂತೂ ಎದೆಕರಗಿಸುತ್ತದೆ. ಸುಮಂತ್ರನಂತಹ ಮಹಾಮಂತ್ರಿಯೂ ಧೃತಿಗೆಟ್ಟು ನಿಂತಿದ್ದಾರೆ. ಅಂತಹ ಹೊತ್ತಿನಲ್ಲಿ ಮನಸ್ಸಿನ ಸ್ಥಿಮಿತ ಕಳೆದುಕೊಳ್ಳದವಳು ಎಂದರೆ ಸುಮಿತ್ರೆ ಮಾತ್ರ. ಮನಸ್ಸಿನಲ್ಲಿರುವ ಜ್ವಾಲಾಮುಖಿಯನ್ನು ಅದುಮಿಟ್ಟುಕೊಂಡು ಹೊರಗಡೆ ಗಂಭೀರಳಾಗಿ “ಸೃಷ್ಟಸ್ತ್ವಂ ವನವಾಸಾಯ ಸ್ವನುರಕ್ತಃ ಸುಹ್ಯಜ್ಜನೇ I ಸತ್ಪುರುಷರಲ್ಲಿ ವಿಶೇಷವಾಗಿ ಅನುರಕ್ತನಾಗಿರುವ ನೀನು ವನವಾಸಕ್ಕಾಗಿಯೇ ಬ್ರಹ್ಮನಿಂದ ಸೃಷ್ಟಿಸಲ್ಪಟ್ಟಿರುವೆ. ಈ ಕಾರ್ಯದಲ್ಲಿ ನೀನು ಹೋಗುವಾಗ ಸೀತಾ ಸಹಿತ ರಾಮನ ರಕ್ಷಣೆಯ ವಿಚಾರದಲ್ಲಿ ಅಜಾಗರೂಕನಾಗಬೇಡʼʼ ಎನ್ನುವ ಮಾತನ್ನು ಹೇಳುತ್ತಾಳೆ. ರಾಮಾಯಣದಲ್ಲಿ ಕವಿ ಮುಂದೆ ಆಗಬಹುದಾದ ಸೀತಾಪಹರಣದ ವಿಘ್ನವನ್ನು ಇಲ್ಲಿ ಸುಮಿತ್ರೆಯ ಬಾಯಿಂದ ಸೂಕ್ಷ್ಮವಾಗಿ ಹೇಳಿಸಿದ್ದಾನೆ.

ಓರ್ವ ತಾಯಿ ತನ್ನ ಮಗ ತನ್ನಣ್ಣನ ಸೇವೆಗಾಗಿಯೇ ಹುಟ್ಟಿದ್ದಾನೆ; ಅದು ವಿಧಿಲಿಖಿತ, ತಪ್ಪಿಸಲಾಗದು ಎನ್ನುವದು ಆಕೆಯ ನಿಲುವು. ಸಿದ್ಧಾಶ್ರಮಕ್ಕೆ ವಿಶ್ವಾಮಿತ್ರರು ರಾಮ ಲಕ್ಷ್ಮಣರನ್ನು ಕರೆದುಕೊಂಡು ಹೋಗುವಾಗ ʻಕರ್ತವ್ಯಂ ದೈವಮಾಹ್ನಿಕಂʼ ಎಂದು ಕರ್ತವ್ಯಪರಾಯಣತೆಯ ಕುರಿತು ಭೋಧಿಸಿದ್ದರು. ಸಿದ್ಧಾಶ್ರಮದಲ್ಲಿ ರಾಕ್ಷಸರ ಸಂಹಾರ ರಾಮನಿಂದ ಆಗಬೇಕಾಗಿರುವುದು ವಿಶ್ವಾಮಿತ್ರರ ಸಂಕಲ್ಪವಾಗಿತ್ತು. ರಾಮರಾಜ್ಯದ ರೂವಾರಿ ಅವರು. ಆದರೆ ಈ ಕರ್ತವ್ಯ ಪರಾಯಣತೆಯನ್ನು ಸುಮಿತ್ರೆ ತನ್ನ ಮಗನಿಗೆ ಹೇಳುವ ಈ ಸನ್ನಿವೇಶವನ್ನು ಗಮನಿಸುವಾಗ ಅಯೋಧ್ಯೆಯ ದಶರಥ, ಕೌಸಲ್ಯೆ ವಶಿಷ್ಠರ ಸಹಿತವಾಗಿ ಎಲ್ಲರೂ ಸುಮಿತ್ರೆಯ ಎದುರು ಕುಬ್ಜರಾಗಿ ಬಿಡುತ್ತಾರೆ.

ಮುಂದಿನ ಭಾಗದಲ್ಲಿ ಮಗ ಲಕ್ಷ್ಮಣನನ್ನು ಕಳುಹಿಸುವ ಸಂದರ್ಭದಲ್ಲಿಯೂ ಹೇಗೆ ತನ್ನ ಧರ್ಮಪರಾಯಣತೆಯನ್ನು ಕಾಯ್ದುಕೊಂಡಿದ್ದಳೆಂದು ನೋಡೋಣ.

ಇದನ್ನೂ ಓದಿ | ಧವಳ ಧಾರಿಣಿ ಅಂಕಣ | ಕರುಣೆಯೇ ಎದೆಯೊಳಗೆ ತುಂಬಿಕೊಂಡ ಮಮತಾಮಯಿ ಮಾತೆ ಕೌಸಲ್ಯಾದೇವಿ

Exit mobile version