Site icon Vistara News

ಧವಳ ಧಾರಿಣಿ ಅಂಕಣ: ರಾಮಪಟ್ಟಾಭಿಷೇಕ ಭಂಗ

king dasharatha kaikeyi dhavala dharini column

ಪ್ರಾಣಕ್ಕಿಂತ ಪ್ರಿಯಳಾದ ಸತಿಯಿಂದ ಪ್ರಾಪ್ತವಾದ ಪುತ್ರ ವಿಯೋಗ

ಧವಳ ಧಾರಿಣಿ ಅಂಕಣ: ಸ ಕೈಕೇಯ್ಯಾ ಗೃಹಂ ಶ್ರೇಷ್ಠಂ ಪ್ರವಿವೇಶ ಮಹಾಯಶಾಃ
ಪಾಣ್ಡುರಾಭ್ರಮಿವಾಕಾಶಂ ರಾಹುಯುಕ್ತಂ ನಿಶಾಕರಃ ৷৷ಅ.ಯೋ.10.11৷৷

ಬಿಳಿಯದಾದ ಮೋಡಗಳಿಂದ ಕೂಡಿದ ಆಕಾಶದಲ್ಲಿ ರಾಹುವಿಗೆ ಗ್ರಾಸವಾಗುವ ಸಲುವಾಗಿ ಚಂದ್ರನು ಪ್ರವೇಶಿಸುವಂತೆ ಮಹಾಯಶೋವಂತನಾದ ರಾಜನು ಭವ್ಯವಾದ ಕೈಕೇಯಿಯ ಅಂತಃಪುರವನ್ನು ಪ್ರವೇಶಿಸಿದನು.

ಕವಿಸಮಯವೆನ್ನುವದು ರಾಮಾಯಣ ಕಾವ್ಯದ ವಿಶೇಷ. ವಾಲ್ಮೀಕಿ ಕಾವ್ಯವನ್ನು ಕೇವಲ ಉಅಪದೇಶಕ್ಕಾಗಿಯಲ್ಲ, ಅದನ್ನು ತಾಳವಾದ್ಯಗಳೊಂದಿಗೆ ರಾಗವಾಗಿ ಹಾಡಲು ಅನುಕೂಲವಾಗುವಂತೆ ಬರೆದಿದ್ದಾನೆ. ಹಾಡುಗಾರಿಕೆಯಲ್ಲಿ ವರ್ಣನೆಗೆ ಮಹತ್ವ ಬರುತ್ತದೆ. ಕಾವ್ಯದ ಮುಂಗಾಣ್ಕೆ ಅಲ್ಲಲ್ಲಿ ವ್ಯಕ್ತವಾಗುತ್ತಾ ಹೋಗುತ್ತದೆ. ಕೈಕೇಯಿಯ ಅರಮನೆಗೆ ಹೋಗುವ ರಾಜನ ಕುರಿತು ವರ್ಣಿಸುವಾಗ ಬಿಳಿಯದಾದ ಮೋಡ, ರಾಹು, ಆಕಾಶ, ಚಂದ್ರ ಎನ್ನುವ ಉಪಮೆಗಳ ಮೂಲಕ ಹೇಳಿದ್ದಾನೆ. ಆಕಾಶ ಎನ್ನುವುದು ಮನಸ್ಸಿನಲ್ಲಿ ಆಸೆಗಳ ವಿಸ್ತಾರದವನ್ನು ಸೂಚಿಸಿದೆ. ಬಿಳಿಯದಾದ ಮೋಡವೆನ್ನುವದು ಅರ್ಥಪೂರ್ಣವಾದ ಉಪಮೆ. ನೀರಿನಿಂದ ಯುಕ್ತವಾದ ಮೋಡ ಕಪ್ಪಾಗಿರುತ್ತದೆ. ಮನಸ್ಸಿನಲ್ಲಿ ತನ್ನ ಮಗನ ಪಟ್ಟಾಭಿಷೇಕದ ಕುರಿತು ಯಾವ ಆಸೆಯನ್ನೇ ಇರಿಸಿಕೊಳ್ಳಲಿ, ಅದೆಲ್ಲವೂ ನೀರಿಲ್ಲದ ಮೋಡದಂತೆ ವ್ಯರ್ಥವಾಗಿ ಹಾರಿಹೋಗುತ್ತದೆ ಎನ್ನುವುದನ್ನು ಹೇಳುತ್ತಾನೆ. ರಾಹು ಮತ್ತು ಕೇತುಗಳು ಭಾರತೀಯ ಖಗೋಳಶಸ್ತ್ರದ ಪ್ರಕಾರ ಎರಡು ವಿರುದ್ಧದಿಕ್ಕುಗಳಲ್ಲಿರುವ ಬಿಂದುಗಳು. ಈ ಬಿಂದುವಿಗೆ ಸೂರ್ಯಚಂದರು ಬಂದಾಗ ಗ್ರಹಣವಾಗುತ್ತದೆ. ಚಂದ್ರ ಮನಸ್ಸಿನ ಕಾರಕ. ಸಂತೊಷ ಮತ್ತು ಕಾಮವಿಕಾರಗಳು ಮನಸ್ಸಿನಲ್ಲಿ ಉತ್ಪನ್ನವಾಗುವಂತವು. ಚಂದ್ರ ತನ್ನ ಪರಿಭ್ರಮಣದಲ್ಲಿ ರಾಹುವಿನ ಬಿಂದುವಿಗೆ ಬಂದಾಗ ಗ್ರಹಣವಾಗಿ ತನ್ನ ಕಾಂತಿಯನ್ನು ಕಳೆದುಕೊಳ್ಳುತ್ತಾನೋ ಅದೇರಿತಿ ರಾಜ ತನ್ನೆಲ್ಲ ಕನಸನ್ನು ಕಳೆದುಕೊಂಡು ನಿಶ್ಚಿತವಾಗಿ ಮರಣದತ್ತ ಸಾಗಲು ಬಂದಿದ್ದಾನೆ ಎನ್ನುವುದನ್ನು ಉಪಮಾಮಲಂಕಾರದಲ್ಲಿ ಕವಿ ವರ್ಣಿಸಿದ್ದಾನೆ.

ದಶರಥನ ಪಾತ್ರವನ್ನು ವಿವೇಚಿಸುವಾಗ ಮೊದಲಿನಿಂದಲೂ ಕಂಡುಬಂದ ಅಂಶವೆಂದರೆ ಮಹಾನ್ ರಾಜರ್ಶಿಯಾಗಿದ್ದ ದೊರೆ ರಾಮನ ಕುರಿತು ಕಡುಲೋಭಿಯಾಗಿ ಪರಿವರ್ತನೆಯಾಗಿರುವುದನ್ನು ಗಮನಿಸಬಹುದು. ದಶರಥನ ವ್ಯಕ್ತಿತ್ವವೆನ್ನುವುದು ಸಂಕೀರ್ಣವೇನೂ ಅಲ್ಲ. ಶೂರನಾಗಿದ್ದ; ಸೂರ್ಯವಂಶದ ಧ್ಯೇಯೋದ್ಧಶವಾದ ಧರ್ಮಸ್ಥಾಪನೆಯ ವಿಷಯದಲ್ಲಿ ಸದಾ ನಿರತನಾಗಿದ್ದ. ಅದೇ ಕಾಲಕ್ಕೆ ಅಯೋಧ್ಯೆಯ ಸಿಂಹಾಸನವೆನ್ನುವುದು ಗಣತಂತ್ರವ್ಯವಸ್ಥೆಯಲ್ಲಿ ಇತ್ತು. ರಾಜರಾಗುವವರು ಯಾರೇ ಆದರೂ ಅದಕ್ಕೆ ಪ್ರಜೆಗಳ ಒಪ್ಪಿಗೆ ಪಡೆಯಬೇಕಾಗಿತ್ತು. ಪ್ರಾಚೀನ ಗ್ರೀಸಿನಲ್ಲಿದ್ದ ರೀತಿಯ ಗಣತಂತ್ರವ್ಯವಸ್ಥೆ ಅಯೋಧ್ಯೆಯಲ್ಲಿ ಇತ್ತು ಎನ್ನುವುದಕ್ಕೆ ವಾಲ್ಮೀಕಿಯ ರಾಮಾಯಣವನ್ನು ಮತ್ತು ಮತ್ತು ಪ್ಲೇಟೋವಿನ “The Republic” ಕೃತಿಯನ್ನು ತುಲನೆ ಮಾಡಿದಾಗ ಅನಿಸುತ್ತದೆ. ಅದನ್ನು ಕೇವಲ ತೋರಿಕೆಗಾಗಿ ಆಚರಣೆಯಲ್ಲಿ ಇಟ್ಟು ತನಗೆ ಬೇಕಾದಂತೆ ಉತ್ತರಾಧಿಕಾರಿಯನ್ನು ಆರಿಸುವ ತಂತ್ರವನ್ನು ದಶರಥ ಅನುಸರಿಸಿರುವುದು ರಾಮನಿಗೆ ಪಟ್ಟಗಟ್ಟಬೇಕೆನ್ನುವ ಸಂದರ್ಭದಲ್ಲಿ ಕಾಣಬಹುದು. ಆತನ ಚಾಣಾಕ್ಷನಡೆಯ ಒಳಗಿರುವದು ತನ್ನದು ಎನ್ನುವ ಮೋಹದ ಅರಿವು ಎನ್ನುವುದು ಯಾರ ಗಮನಕ್ಕೂ, ಹೆಚ್ಚೇನು ರಾಮನ ಅರಿವಿಗೂ ಬಾರದ ಹಾಗೆ ನಡೆದುಕೊಂಡಿದ್ದಾನೆ. ಪರಿಪೂರ್ಣ ವ್ಯಕ್ತಿತ್ವದ ರಾಮನಂತಹ ದೊರೆ ತಮಗೆ ಸಿಗುತ್ತಾನೆ ಎನ್ನುವ ಕಾರಣಕ್ಕೆ ಪ್ರಜೆಗಳು ಸಂಭ್ರಮಿಸುವುದು ಸಹಜವೇ ಆಗಿದೆ. ತಾನು ಅಶ್ವಪತಿಗೆ ಕೊಟ್ಟ ಮಾತುಗಳು ಹೀಗೆ ಮರೆಯಾದ ಕಾರಣ ಅದು ದೊರೆಗೆ ಅಪರಿಮಿತ ಸಂತೋಷವನ್ನು ಕೊಟ್ಟಿದೆ. ಇಳಿವಯಸ್ಸಿನಲ್ಲಿ ಕಿರಿಯ ಚಲುವೆಯಾದ ಕೈಕೇಯಿಯ ಹಿಂದೆ ಬಿದ್ದಿದ್ದ ದೊರೆಗೆ ವೃದ್ದಾಪ್ಯದಲ್ಲಿ ಮಕ್ಕಳಾದ ಮೇಲೆ ರಾಮ ಎನ್ನುವ ಕುರುಡು ಮೋಹ ಆವರಿಸಿಕೊಂಡಿತ್ತು. ಆತನ ಕುರಿತು ಮಂಥರೆ ಹೇಳುವ ಮಾತು

ಧರ್ಮವಾದೀ ಶಠೋ ಭರ್ತಾ ಶ್ಲಕ್ಷ್ಣವಾದೀ ಚ ದಾರುಣಃ
ಶುದ್ಧಭಾವೇ ನ ಜಾನೀಷೇ ತೇನೈವ ಮತಿಸಂಧಿತಾ৷৷ಬಾ.ಕಾಂ.7.24৷৷

ನಿನ್ನ ಗಂಡನು ಮೇಲೆಮೇಲೆ ಧರ್ಮಸಮ್ಮತವಾದ ಮಾತುಗಳನ್ನು ಆಡುತ್ತಿದ್ದರೂ ಅಂತರಂಗದಲ್ಲಿ ಬಹಳ ಕಪಟಸ್ವಭಾವದವನು. ಬಾಯಲ್ಲಿ ಮೃದುವಾದ ಮಾತುಗಳನ್ನು ಆಡುತ್ತಿದ್ದರೂ ನಂಬಿಸಿ ಮೋಸಮಾಡುವುದು ಹೇಗೆಂದು ಯೋಚಿಸುತ್ತಿರುತ್ತಾನೆ. ಕರುಣೆಯೆನ್ನುವುದೇ ಇಲ್ಲ, ಬಹಳ ಋಜುಸ್ವಭಾವದವಳಾದ ನೀನು ಆತನ ಕಪಟವನ್ನು ಅರಿಯದೇ ಹೋದೆಯಲ್ಲವೇ.

ಮಂಥರೆ ಇಲ್ಲಿ ಕೈಕೇಯಿಯ ಮನಸ್ಸನ್ನು ತಿರುಗಿಸಲು ಹೇಳಿರುವಳಾದರೂ ಪಾಯಸವನ್ನು ತನ್ನ ರಾಣಿಯರಿಗೆ ಹಂಚುವಲ್ಲಿಂದ ಹಿಡಿದು ರಾಮಪಟ್ಟಾಭಿಷೇಕದ ವರೆಗೆ ದಶರಥ ಏಕಪಕ್ಷೀಯವಾಗಿ ತೆಗೆದುಕೊಂಡ ತೀರ್ಮಾನವನ್ನು ಗಮನಿಸಿದಾಗ ನಮ್ಮ ದೌರ್ಬಲ್ಯ ಶತ್ರುಗಳಿಗೆ ಆಯುಧ ಎನ್ನುವ ನೀತಿಶಾಸ್ತ್ರದ ಮಾತನ್ನು ನೆನಪಿಸುತ್ತದೆ. ಅಂತೂ ತನ್ನ ಕಾರ್ಯವಾದ ರಾಮನ ಪಟ್ಟಾಭಿಷೇಕದ ವಿಷಯದಲ್ಲಿ ಯಾವ ತೊಂದರೆಯಿಲ್ಲದೇ ಸಾಂಗವಾಗಿ ನಡೆಯುವುದು ಎನ್ನುವ ನಂಬಿಕೆಯೊಂದಿಗೆ ಸಂತೊಷವೆನ್ನುವುದು ಅತಿರೇಕಕ್ಕೆ ಹೋಗಿತ್ತು. ಸಂತೋಷ ಅತಿರೇಕಕ್ಕೆ ಹೋದಾಗ ಅದು ಮದಕ್ಕೆ ತಿರುಗುತ್ತದೆ. ಮದವೆನ್ನುವುದು ಕಾಮಕ್ಕೆ ಮೂಲ. ಅದನ್ನು ಇಳಿಸಿಕೊಳ್ಳಲು ಸಂಗಾತಿಯನ್ನು ಹುಡಿಕಿಕೊಳ್ಳುವುದು ಜೀವಿಗಳ ಸಹಜ ಕ್ರಿಯೆ. ಅರಸನಿಗೆ ತನ್ನ ಆಲೋಚನೆಯನ್ನು ಹಂಚಿಕೊಳ್ಳುವ ಸಂಗಾತಿಯ ಅಗತ್ಯ ತುರ್ತಾಗಿ ಎದುರಾಯಿತು. ವಶಿಷ್ಠರಲ್ಲಿಯಾಗಲಿ, ವಾಮದೇವರಲ್ಲಿಯಾಗಲಿ ಇದನ್ನೆಲ್ಲವನ್ನು ಹಂಚಿಕೊಳ್ಳಲು ಅವರೇನು ಸಾಮಾನ್ಯದವರಾಗಿರಲಿಲ್ಲ.

ರಾಮ ಯುವರಾಜ ಪಟ್ಟಕ್ಕೆ ಅರ್ಹನಾಗಿದ್ದರೂ, ಅಯೋಧ್ಯೆಯಲ್ಲಿ ಆ ಸಾಯಂಕಾಲ ನಡೆದ ಸಿದ್ಧತೆ ದಶರಥನ ವೈಯಕ್ತಿಕ ಕಾಮನೆಯ ಫಲವಾಗಿತ್ತು. ಪ್ರಜೆಗಳು ರಾಮನನ್ನು ರಾಜನ್ನಾಗಿ ನೋಡಲು ಬಯಸಿದ್ದರೆನ್ನುವುದು ನಿಜವಾದರೂ ಇಲ್ಲಿಮೊದಲ ಸಾರಿ ರಾಮನ ಪಟ್ಟಾಭಿಷೇಕಕ್ಕಾಗಿ ದಶರಥ ಹೇಗೆಲ್ಲಾ ಮಂಡಿಗೆಯನ್ನು ಹಾಕಿದ್ದ ಎನುವುದನ್ನು ಹಿಂದಿನ ಭಾಗಗಳಲ್ಲಿ ನೋಡಿದ್ದೇವೆ. ರಾಮನನ್ನು ಕೇವಲ ಮಗನಾಗಿ ಮಾತ್ರ ನೋಡಿದ್ದಾನೆಯೇ ಹೊರತು ವಿಶ್ವಾಮಿತ್ರ, ವಶಿಷ್ಠರು, ಪರಶುರಾಮ ಮೊದಲಾದವರಿಗೆ ರಾಮನ ಅವತಾರದ ಹಿಂದಿರುವ ದೈವತ್ವದ ದರ್ಶನ ಅರಸನಿಗೆ ಸಾಯುವವರೆಗೂ ಆಗಲೇ ಇಲ್ಲ. ರಾಮನಿಗೆ ಪಟ್ಟಗಟ್ಟುವ ತನ್ನ ಮನಸ್ಸಿನ ಮಂಡಿಗೆ ಯಶಸ್ವಿಯಾದ ವಿಷಯವನ್ನು ವಿವರವಾಗಿ ವರ್ಣಿಸಿ ಹೇಳಲು ಕಿರಿಯ ರಾಣಿಯಷ್ಟು ಆಪ್ತರು ಬೇರೆ ಯಾರೂ ಇಲ್ಲ. ಕೌಸಲ್ಯೆಗೆ ಹೇಳಿದರೆ ಆಕೆಗೆ ಸಂತೋಷವೇನೋ ಆಗಬಹುದಾದರೂ ಆಕೆಯಲ್ಲಿ ಕಾಮದ ಆಕರ್ಷಣೆ ದೊರೆಗೆ ಬತ್ತಿಹೋಗಿತ್ತು. ಸುಮಿತ್ರೆಯೂ ಅಷ್ಟೇ. ಚಿಕ್ಕವಯಸ್ಸಿನ ಕೈಕೆಯಿಯನ್ನು ಚೆನ್ನಾಗಿ ಮರಳುಮಾಡಿ ಇಟ್ಟುಕೊಂಡಿದ್ದ. ತನಗೆ ಬೇಕಾದ ಹಾಗೆ ಸುಖವನ್ನು ಅವಳಿಂದ ಪಡೆಯುತ್ತಿದ್ದ. ಆಕೆ ರಾಜನಿಗೋಸ್ಕರ ಅಲಂಕರಿಸಿಕೊಂಡು ನಗುಮುಖದಿಂದ ಯಾವತ್ತಿಗೂ ಸ್ವಾಗತಿಸಲು ಸಿದ್ಧಳಾಗಿರುತ್ತಿದ್ದಳು. ಕೈಕೇಯಿ ಮಂಥರೆಯ ಮಾತಿನಿಂದ ಪ್ರಭಾವಿತಳಾಗಿ ರಾಜನನ್ನು ಮಣಿಸಲೇ ಬೇಕೆಂದು ಕೋಪಾಗಾರವನ್ನು ಸೇರಿದರೆ ಇಳಿವಯಸ್ಸಿನ ರಾಜ “ರಾಮಾಭಿಷೇಕದ ಸಂತೋಷದ ವಾರ್ತೆಯನ್ನು ಕೈಕೇಯಿಗೆ ತಿಳಿಸಿ ರತಿಸುಖವನ್ನು ಪಡೆಯಬೇಕೆಂದು ಬಯಸಿ ಅತ್ಯಾಸೆಯಿಂದ ಕೈಕೇಯಿಯ ಅಂತಃಪುರಕ್ಕೆ ಧಾವಿಸಿ ಬರುತ್ತಾನೆ”.

ಕೈಕೇಯಿ ಅಂತಃಪುರದಲ್ಲಿ ಇಲ್ಲವಾಗಿರುವುದನ್ನು ಕಂಡವನಿಗೆ ವ್ಯಾಕುಲವಾಯಿತು. ಪ್ರತಿಹಾರಿ ಹೇಳಿದ “ದೇವ ದೇವಿ ಬೃಶಂ ಕ್ರುದ್ಧಾ ಕ್ರೋಧಾಗಾರಮಭಿದ್ರುತಾ-ಪರಮ ಕ್ರುದ್ಧೆಯಾಗಿ ದೇವಿ ಕೋಪಾಗಾರವನ್ನು ಸೇರಿದ್ದಾಳೆ” ಎನ್ನುವ ಮಾತನ್ನು ಕೇಳಿ ಕಂಗಾಲಾದ. ಕೋಪಾಗಾರಕ್ಕೆ ಧಾವಿಸಿ ನೋಡಿದರೆ ತನ್ನ ಪ್ರೇಯಸಿ ಅಸ್ತವ್ಯಸ್ತವಾಗಿ ನೆಲದ ಮೇಲೆ ಮಲಗಿದ್ದಾಳೆ. ಪ್ರಿಯತಮೆಯನ್ನು ಆಕಾಶದಿಂದ ಚ್ಯುತಳಾದ ಅಪ್ಸರೆಯಂತೆ ಕಂಡವನಿಗೆ ಎದೆಯೊಡೆದು ಹೋಯಿತು. “ನಿಷ್ಕಳಂಕನಾದ ದಶರಥ ಪಾಪಸಂಕಲ್ಪವನ್ನು ಹೊತ್ತ ಕೈಕೇಯಿಯನ್ನು ಕಂಡ” ಎನ್ನುವ ಮಾತು ಇಲ್ಲಿ ಬರುತ್ತದೆ. ಸಂಕಲ್ಪವೆನ್ನುವುದು ಹೊಸ ಕಾರ್ಯಕ್ಕೆ ಹೇತು. ಮುಂದಿನ ಘಟನೆಗೆ ಇಲ್ಲಿ ನಾಂದಿಯಾಗುತ್ತಿದೆ. ಧರ್ಮಮಾರ್ಗದಲ್ಲಿ ಸದಾ ನಡೆಯುತ್ತಿದ್ದ ಅರಸ ಕಾಮಮೋಹಿತನಾಗಿ ಕೈಕೇಯಿಯನ್ನು ಸಮಾಧಾನ ಮಾಡಲು ಹೇಳುವ ಮಾತುಗಳು ಸೂರ್ಯವಂಶಕ್ಕೆ ಹೇಳಿಸಿದ್ದಲ್ಲ.

ಅವಧ್ಯೋ ವಧ್ಯತಾಂ ಕೋ ವಾ ವಧ್ಯಃ ಕೋವಾ ವಿಮುಚ್ಯತಾಮ್.
ದರಿದ್ರಃ ಕೋ ಭವದಾಢ್ಯೋ ದ್ರವ್ಯವಾನ್ಕೋSಪ್ಯಕಿಂಚನಃ৷৷ಅ. ಕಾಂ.10.33৷৷

ಕಾಮವೆನ್ನುವುದು ಎಂತವರನ್ನೂ ತಲೆಕೆಡಿಸಿಬಿಡುತ್ತದೆ. ಕಾಮದ ಹುಚ್ಚಿನಲ್ಲಿರುವ ದಶರಥ ತನ್ನ ಸುಖಕ್ಕಾಗಿ ಏನನ್ನು ಮಾಡಲೂ ಹೇಸದ ಸ್ಥಿತಿಗೆ ತಲುಪಿದ್ದಾನೆ. ವಧಾರ್ಹನಲ್ಲದವನನ್ನು ವಧಿಸಲೇ, ಮರಣದಂಡನೆಗೆ ಗುರಿಯಾದವನನ್ನು ಬಿಡಿಸಲೇ, ದರಿದ್ರನನ್ನು ಶ್ರೀಮಂತನನ್ನಾಗಿ ಮಾಡಲೇ, ಶ್ರೀಮಂತನನ್ನು ದರಿದ್ರನನ್ನಾಗಿ ಮಾಡಲೇ; ನಿನ್ನ ಪ್ರೀತಿಗಾಗಿ ಏನನ್ನೂ ಮಾಡಲೂ ತಾನು ಸಿದ್ಧ ಎನ್ನುವ ಮಾತುಗಳು ದೊರೆತನಕ್ಕೆ ತಕ್ಕುದಲ್ಲ. ಆತ ಅವಳನ್ನು ಸಮಾಧಾನಿಸುತ್ತಾ “ಪ್ರಿಯತಮೆಯಲ್ಲಿ ನನಗೆ ನಿನಗಿಂತ- ಮನುಜರಲ್ಲಿ ರಾಮನಿಗಿಂತ ಹೆಚ್ಚಿನವರು ಯಾರೂ ಇಲ್ಲ” ಎನ್ನುವಲ್ಲಿ ರಾಮನ ಹೆಸರನ್ನು ಕೇಳಿದ ಆಕೆಗೆ ಮತ್ತುಷ್ಟು ಉರಿ ಹತ್ತಿತು. ದೊರೆ ಮನ್ಮಥನ ಬಾಣಕ್ಕೆ ಈಡಾಗಿರುವುದನ್ನು ಪಕ್ಕಾ ಮಾಡಿಕೊಂಡಳು. ಸ್ವಲ್ಪ ಹೊತ್ತು ಕಾಡಿಸಬೇಕು ಎಂದು ಸುಮ್ಮನಾದವಳು. ದಶರಥನಿಗೆ ಸಹಿಸಲಾಗಿಲ್ಲ. ಆಕೆಯ ರೂಪಲಾವಣ್ಯಕ್ಕೆ ಸೋತಿದ್ದ. ಅವಳ ನೋವನ್ನು ಬಗೆಹರಿಸುವುದು ತನ್ನ ಆದ್ಯ ಕರ್ತವ್ಯವೆಂದು ಬಗೆದ.. ಅದು ತನಕ ತಾನು ಗಳಿಸಿದ ಸುಕೃತದ ಮೇಲೆ ಆಣೆಯಿಟ್ಟು ಅವಳ ಬಯಕೆಯನ್ನು ಈಡೇರಿಸುವೆ ಎಂದು ಅಂಗಲಾಚಿದ.

dhavala dharini king dasharatha

ಆದರೂ ಸುಮ್ಮನಿದ್ದ ಕೈಕೇಯಿಗೆ ಕೊನೆಯದಾಗಿ “ನನ್ನ ರಾಮನಾಣೆಗೂ ನೀನು ಹೇಳುವ ಕಾರ್ಯವನ್ನು ಮಾಡುತ್ತೇನೆ” ಎಂದು ಪ್ರತಿಜ್ಞೆ ಮಾಡಿಬಿಟ್ಟ. ಗಾಳದಲ್ಲಿ ಚಿಕ್ಕಮೀನನ್ನು ಚುಚ್ಚಿ ದೊಡ್ಡಮೀನನ್ನು ಸೆಳೆಯುವಂತೆ ಚಕ್ರವರ್ತಿಯನ್ನು ಮಟ್ಟುಹಾಕಿ ತನ್ನ ಕಾರ್ಯಸಾಧಿಸಲು ಇದೇ ಸಮಯವೆಂದು ತಿಳಿದ ಕೈಕೇಯಿ ಬಯಕೆಯನ್ನು ಹೇಳುವ ಮುನ್ನ ರಾಜನಲ್ಲಿನ ಧರ್ಮಪ್ರಜ್ಞೆಯನ್ನು ಜಾಗ್ರತಗೊಳಿಸಲು “ನೀನು ಮಾಡಿದ ಈ ಪ್ರತಿಜ್ಞೆಯನ್ನು ಮೂವತ್ತುಮೂರು ಕೋಟಿ ದೇವತೆಗಳು ಕೇಳಲಿ, ಚಂದ್ರಸೂರ್ಯರೂ ಕೇಳಲಿ, ಆಕಾಶವೂ ಇದಕ್ಕೆ ಸಾಕ್ಷಿಯಾಗಲಿ, ನವಗ್ರಹಗಳು, ಹಗಲು-ರಾತ್ರಿಗಳು, ಎಂಟುದಿಕ್ಕುಗಳು,ಗಂಧರ್ವರಾಕ್ಷಸರನ್ನೊಳಗೊಂಡಿರುವ ಸ್ವರ್ಗ-ಮರ್ತ್ಯ-ಪಾತಾಳ, ನಿಶಾಚರರೂ, ಪಿಶಾಚಗಳೂ, ಭೂತಗಣಗಳೂ, ಗೃಹದೇವತೆಗಳೂ ಸಹಿತ ಎಲ್ಲರೂ ನೀನು ಹೇಳಿದ ಈ ಪ್ರತಿಜ್ಞಾವಾಕ್ಯಕ್ಕೆ ಸಾಕ್ಷಿಗಳಾಗಲಿ” ಎಂದವಳೇ ಆತನನ್ನು ಸಂಪೂರ್ಣವಾಗಿ ಖೆಡ್ಡಾಕ್ಕೆ ತೋಡುವ ಈ ಮಾತನ್ನು ಆಡುತ್ತಾಳೆ.

ಸತ್ಯಸಂಧೋ ಮಹಾತೇಜಾಃ ಧರ್ಮಜ್ಞಃ ಸುಸಮಾಹಿತಾಃ.
ವರಂ ಮಮ ದದಾತ್ಯೇಷಃ ತನ್ಮೇ ಶ್ರೃಣ್ವನ್ತು ದೈವತಾಃ৷৷ಅಯೋ.11.16৷৷

ಎಲೈ ದೇವತೆಗಳಿರಾ! ನೀವೆಲ್ಲರೂ ಕೇಳಿರಿ. ಸತ್ಯಸಂಧನಾದ ಮಹಾತೇಜಸ್ವಿಯಾದ, ಧರ್ಮಜ್ಞನಾದ ಧಶರಥನು ಸಮಾಧಾನಚಿತ್ತನಾಗಿ ತಾನು ಪ್ರತಿಜ್ಞೆ ಮಾಡಿರುವಂತೆ ನನಗೆ ವರವನ್ನು ದಯಪಾಲಿಸಲಿದ್ದಾನೆ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ರಾಮಾಯಣದ ಕವಿಗೆ ಕಾಡಿದ ಮೂರು ಚಿಂತೆಗಳು

ವ್ಯಾಧನ ಧ್ವನಿಯಿಂದ ಆಕರ್ಷಿತಳಾಗಿ ಬಲೆಗೆ ಬೀಳುವ ಜಿಂಕೆಯಂತೆ ರಾಜನು ತನ್ನ ವಿನಾಶಕ್ಕಾಗಿ ಧರ್ಮಪಾಶವನ್ನು ಕುತ್ತಿಗೆಗೆ ಬಿಗಿದುಕೊಂಡಿದ್ದು ಹೀಗೆ. ಅವನಿಗೆ ಮುಂದೆ ಮಾತಾಡಲು ಅವಕಾಶಕೊಡದಂತೆ ಆತನನ್ನು ಬಿಗಿದಪ್ಪಿ ತನಗೆ ಹಿಂದೆ ಕೊಟ್ಟಿದ್ದ ವರಗಳನ್ನು ಅಪೇಕ್ಷಿಸಿ ಅದಕ್ಕೆ ರಾಜ ಬೇರೆ ಏನನ್ನಾದರೂ ಹೇಳಬಾರದೆಂದು, “ರಾಮನಿಗೆ ಪಟ್ಟಾಭಿಷೇಕಕ್ಕೆ ಯಾವೆಲ್ಲಾ ಸಿದ್ಧತೆಗಳಾಗಿವೆಯೋ ಅದೇ ಸಾಂಬಾರಪದಾರ್ಥಗಳಿಂದ ಭರತನಿಗೆ ಪಟ್ಟಾಭಿಷೇಕವಾಗಬೇಕು. ಎರಡನೇಯ ವರವನ್ನೂ ಹೇಳಿಯೇಬಿಡುವೆ.

ನವ ಪಞ್ಚ ಚ ವರ್ಷಾಣಿ ದಣ್ಡಕಾರಣ್ಯಮಾಶ್ರಿತಃ
ಚೀರಾಜಿನಜಟಾಧಾರೀ ರಾಮೋ ಭವತು ತಾಪಸಃ.

ಹದಿನಾಲ್ಕು ವರುಷಗಳ ಕಾಲ ರಾಮನು ದಂಡಕಾರಣ್ಯಕ್ಕೆ ಹೋಗಿ ಅಲ್ಲಿ ಅವನು ಜಟಾಧಾರಿಯಾಗಿ ನಾರಮುಡಿಯನ್ನುಟ್ಟು ಕೃಷ್ಣಾಜಿನವನ್ನು ಧರಿಸಿ ತಾಪಸನಂತೆ ಇರಬೇಕು.

ಕೈಕೇಯಿ ಇಷ್ಟಕ್ಕೇ ನಿಲ್ಲಿಸುವುದಿಲ್ಲ. “ಆದ್ಯ ಚೈವ ಹಿ ಪಶ್ಯೇಯಂ ಪ್ರಯಾನ್ತಂ ರಾಘವಂ ವನಮ್- ರಾಘವನು ಚೀರಾಜಿನ-ಜಟಾಧಾರಿಯಾಗಿ ಕಾಡಿಗೆ ಹೋಗುವುದನ್ನು ಈಗಲೇ ನಾನು ನೋಡಬೇಕು, ಸತ್ಯವಚನನಾದ ನೀನು ಈಗಲೇ ನಡೆಸಿಕೊಡು” ತನ್ನ ಇಬ್ಬರು ಪ್ರಿಯರಲ್ಲಿ ಒಬ್ಬನಾದ ರಾಮನಿಗೆ ಆಘಾತಕಾರಿಯಾದ ವಿಷಯಗಳನ್ನು ಹೇಳುವ ಮಾತುಗಳು ದಶರಥನ ಕಾಮದ ಪಿತ್ಥವನ್ನು ಜರ್ರನೆ ಇಳಿಸಿಯೇಬಿಟ್ಟಿತು; ಜೊತೆಗೆ ಆತನ ಮನೋಧೈರ್ಯವನ್ನೂ ಸಹ! ಲೋಕದ ಎಲ್ಲಾ ರಾಜರನ್ನು, ಪ್ರಜೆಗಳನ್ನು ಮತ್ತು ವಶಿಷ್ಠರಾದಿಯಾಗಿರುವ ಎಲ್ಲಾ ಋಷಿಗಳನ್ನು ತನ್ನ ಇಷ್ಟಕ್ಕೆ ಒಗ್ಗಿಕೊಳ್ಳುವಂತೆ ತಂತ್ರವನ್ನು ಹೂಡಿದ ಅರಸನ ಇಚ್ಛೆ ಇಲ್ಲಿ ತರಗೆಲೆಗಳಂತೆ ಗಾಳಿಗೆ ಹಾರಿಹೋಯಿತು. ಯಾವ ಉದ್ಧೇಶಕ್ಕಾಗಿ ಕೈಕೇಯಿಯ ಅರಮನೆಗೆ ಬಂದಿದ್ದನೋ ಅವೆಲ್ಲವೂ ನೀರಿನಲ್ಲಿ ಹೋಮ ಮಾಡಿದಂತೆ ಕದಡಿಹೋಯಿತು. ಅವನ ಜೀವನದಲ್ಲಿ ರಾಮನಿಗೆ ಪಟ್ಟಾಭಿಷೇಕವನ್ನು ಮಾಡಿವದೊಂದೇ ಗುರಿ ಇದ್ದಿದ್ದು. ತನ್ನ ಪ್ರೀತಿಯ ರಾಣಿಯಿಂದಲೇ ಹೀಗೆ ವಿಘ್ನಬರಬಹುದೆಂದು ರಾಜ ಎಣಿಸಿರಲಿಲ್ಲ. ಅಂಥ ಸ್ವಲ್ಪ ಅನುಮಾನ ಬಂದಿದ್ದರೂ ಆತ ಕೈಕೇಯಿಯ ಅರಮನೆಗೆ ಬರುತ್ತಲೇ ಇರಲಿಲ್ಲ. ಒಮ್ಮೆಲೇ ಎಚ್ಚರತಪ್ಪಿ ಬಿದ್ದ. ತನ್ನ ರಾಜತ್ವಕ್ಕೆ ಧಿಕ್ಕಾರ ಹಾಕಿಕೊಂಡ. ಕೊನೆಗೆ ಅನಿವಾರ್ಯವಾಗಿ ಕೈಕೇಯಿಗೆ ನಮಸ್ಕರಿಸಿಕೊಂಡು “ನಿನ್ನ ಕಾಲನ್ನು ಬೇಕಾದರೂ ಹಿಡಿಯುತ್ತೇನೆ, ರಾಮನನ್ನು ರಕ್ಷಿಸು. ವರದಾನವೆನ್ನುವ ಒಂದು ಪ್ರತಿಜ್ಞೆಯಲ್ಲಿ ನನ್ನನ್ನು ಸಿಕ್ಕಿಹಾಕಿಸಿ ನಿರಪರಾಧಿಯನ್ನು ಕಾಡಿಗಟ್ಟಿದ ದೋಷ ನನಗೆ ಬಾರದಿರಲಿ” ಎಂದು ನೆಲದಲ್ಲಿ ಹೊರಳಾಡತೊಡಗಿದ.

ಮೂಂದಿನ ಭಾಗದಲ್ಲಿ ತನ್ನ ಕರ್ಮಫಲವನ್ನು ತಾನು ಉಂಡ ಮಹಾರಾಜ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ರಾಮಾಯಣದ ಮಹಾ ಮಥನದ ಕಡೆಗೋಲು ಮಂಥರೆ

Exit mobile version