Site icon Vistara News

ಧವಳ ಧಾರಿಣಿ ಅಂಕಣ: ಸೃಷ್ಟಿಯ ಹಿಂದಿರುವ ಪೂರ್ಣತೆಯೇ ಅರ್ಧನಾರೀಶ್ವರತ್ವ

shivaratri

Shivaratri: ಲೋಕದ ಒಳಿತಿಗಾಗಿ ವಿಷವುಂಡು ಅಮೃತ ಹಂಚಿದ ಅಷ್ಟಮೂರ್ತಿ: ಮಹಾದೇವ

ವಾಗರ್ಥಾವಿವ ಸಂಪೃಕ್ತೌ ವಾಗರ್ಥಃ ಪ್ರತಿಪತ್ತಯೇ
ಜಗತಃ ಪಿತರೌ ವಂದೇ ಪಾರ್ವತೀಪರಮೇಶ್ವರೌ

(ಶಬ್ದ-ಅರ್ಥಗಳಂತೆ ನಿತ್ಯ ಸಂಬಂಧವುಳ್ಳ, ಜಗತ್ತಿಗೆ ತಂದೆತಾಯಿಗಳಾಗಿರುವ, ಪಾರ್ವತೀ ಮತ್ತು ಪರಮೇಶ್ವರರನ್ನು ಶಬ್ದ ಮತ್ತು ಅರ್ಥಗಳ ಜ್ಞಾನಕ್ಕಾಗಿ ನಮಿಸುವೆನು.)

ಕಾಳಿದಾಸನ ರಘುವಂಶದ ಮಂಗಳಾಚರಣೆಯ ಶ್ಲೋಕ ಇದು. ಶಬ್ದ ಮತ್ತು ಅರ್ಥಗಳು ಜಗತ್ತಿನ ತಂದೆತಾಯಿಗಳಾದ ಪಾರ್ವತೀ ಪರಮೇಶ್ವರರಂತೆ ಇರಬೇಕು ಎನ್ನುವ ಉಪಮೆಯ ಮೂಲಕ ಕಾಳಿದಾಸ ಶಬ್ದಾರ್ಥಕ್ಕೆ ಹೊಸ ಉಪಮೆಯನ್ನು ನೀಡುತ್ತಾನೆ. ಶಿವೆಯನ್ನು ಬಿಟ್ಟು ಶಿವನಿಲ್ಲ, ಅದೇ ರೀತಿ ತಾನು ಬರೆಯುವ ನಾಟಕದ ಪ್ರತೀ ಪದಕ್ಕೂ ಅರ್ಥಗಳಿಗೂ ತನ್ನ ಮನಸ್ಸಿನಲ್ಲಿ ಏನು ಹೇಳಬೇಕೆಂದು ಬಯಸಿದ್ದೆನೋ ಅದು ಯಥಾವತ್ತಾಗಿ ಓದುಗನ ಮನಸಿಗೂ ತಲುಪಲಿ ಎನ್ನುವುದು ಕವಿಯ ಉದ್ದೇಶ.

ಇಲ್ಲಿ ವಿಮರ್ಶಕರು ಕಾಳಿದಾಸ ಈ ಕಾವ್ಯದ ಮೂಲಕ ಕೇವಲ ಶಿವನನ್ನಷ್ಟೇ ಅಲ್ಲದೇ ಚಮತ್ಕಾರಿಕ ಶ್ಲೋಕದ ಮೂಲಕ ವಿಷ್ಣುವನ್ನೂ ಸ್ತುತಿಸುತ್ತಾನೆ ಎಂದು ಅಭಿಪ್ರಾಯಪಡುತ್ತಾರೆ. ಇಲ್ಲಿ ಬರುವ “ಪಿತರೌ” ಎನ್ನುವುದನ್ನು ಏಕ ಶೇಷವೃತ್ತಿ ಸಮಾಸ ಮಾಡಿದರೆ ತಂದೆ ತಾಯಿ ಇಬ್ಬರೂ ಎಂದಾಗುತ್ತದೆ. ಸಾಮಾನ್ಯವಾಗಿ ನಾವು ಅರ್ಥ ಮಾಡಿಕೊಳ್ಳುವುದರ ವಿಧಾನ ಹೀಗೇ ಇರುತ್ತದೆ. ಆದರೆ ಸಂಸ್ಕೃತದ ವಿಮರ್ಶಕರು ಇರುವುದಕ್ಕಿಂತ ಇಲ್ಲದ್ದನ್ನು ಹುಡುಕಿ ತೆಗೆಯುವದರಲ್ಲಿ ನಿಪುಣರು. ಅದರಲ್ಲಿಯೂ ಆ ಕಾಲದಲ್ಲಿ ಶೈವ ಮತ್ತು ವೈಷ್ಣವ ಎನ್ನುವ ಬದ್ಧವೈರಿಗಳ ಕೈಗೆ ಈ ಶ್ಲೋಕ ಸಿಕ್ಕಿರಬೇಕು. ಇಲ್ಲಿ ಇದನ್ನು “ಪಿತೃ” ಎನುವ ಶಬ್ದವನ್ನಷ್ಟೇ ತೆಗೆದುಕೊಂಡರೆ ಅದಕ್ಕೆ ಔ ಸೇರಿದಾಗ ಪಿತರೌ-ಇಬ್ಬರು ಎನ್ನುವ ದ್ವಿವಚನ ಬರುತ್ತದೆ. ಹಾಗಾಗಿ ಇಬ್ಬರು ತಂದೆಯರು ಎನ್ನುವುದು ಹೇಗಾಗುತ್ತದೆ ಎಂದೋರ್ವ ಕಾಲೆಳೆದ. ಅದಕ್ಕೆ ಮತ್ತೊಬ್ಬ- ಆತನೂ ವ್ಯಾಕರಣ ನಿಪುಣನೇ- ತಾನು ಇದಕ್ಕೆ ಪರಿಹಾರ ತೋರುತ್ತೇನೆ ಎಂದು “ಪಾರ್ವತೀಪ ರಮೇಶ್ವರೌ” ಎಂದು ವಿಭಜಿಸಿ “ಈಗ ಸರಿಯಾಯಿತೇ” ಎಂದು ಕೇಳಿದ. ಪಾರ್ವತೀಪ ಎಂದರೆ ಪಾರ್ವತಿಯ ಪತಿ ಎಂದಾಗುತ್ತದೆ. ಹಾಗೆಯೇ ರಮೇಶ್ವರ ಎಂದರೆ ರಮೆಯ ಪತಿ ಅಂದರೆ ವಿಷ್ಣುವಿನ ಪತಿ ಎಂದೂ ಆಗುತ್ತದೆ.

ಬಹುಶಃ ಆ ಕಾಲದಲ್ಲಿ ಶೈವ ಮತ್ತು ವಿಷ್ಣು ಭಕ್ತರ ನಡುವಿನ ಕೋಳಿ ಜಗಳದಲ್ಲಿ ಈ ಶ್ಲೋಕ ತಮ್ಮದು ತಮ್ಮದು ಎಂದು ಎರಡೂ ಕಡೆಯ ಭಕ್ತರೂ ಸಮಾಧಾನ ಮಾಡಿಕೊಂಡಿರಬೇಕು. ಸಂಸ್ಕೃತದ ವಿಶೇಷವೇನೆಂದರೆ ಇಲ್ಲಿ ಶಬ್ದವನ್ನು ವಿಭಜಿಸಿ ನಮಗೆ ಬೇಕಾದಂತೆ ಅರ್ಥ ಮಾಡಿಕೊಳ್ಳುವ ಸೌಲಭ್ಯಗಳಿವೆ. ಹೀಗೆ ಮಾಡಿದರೆ “ಶಬ್ದ-ಅರ್ಥಗಳಂತೆ ನಿತ್ಯ ಸಂಬಂಧವುಳ್ಳ, ಜಗತ್ತಿಗೆ ತಂದೆಗಳಾಗಿರುವ, ಪಾರ್ವತಿಯ ಪತಿ ಪರಮೇಶ್ವರ ಮತ್ತು ರಮಾಪತಿ ವಿಷ್ಣು ಈ ಈರ್ವರನ್ನು ಶಬ್ದ-ಅರ್ಥಗಳ ಜ್ಞಾನಕ್ಕಾಗಿ ನಮಿಸುವೆನು” ಎಂದಾಗುತ್ತದೆ. ಒಟ್ಟಾರೆಯಾಗಿ ಈ ಇಬ್ಬರು ಭಕ್ತರ ಜಗಳದಲ್ಲಿ ಬಡಪಾಯಿ ಪಾರ್ವತಿಯನ್ನು ಅಲಕ್ಷ್ಯ ಮಾಡಿ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಅಭಿವ್ಯಕ್ತಗೊಳಿಸಿದ್ದಾರೆ ಎಂದು ಹೊಸ ಟೀಕೆಯನ್ನು ಪ್ರಾರಂಭಿಸಬಹುದೇನೋ.

ಅದೇನೇ ಇರಲಿ ಜಗತ್ತಿಗೆ ತಂದೆತಾಯಿಗಳಂತಿರುವ ಪಾರ್ವತೀ ಪರಮೇಶ್ವರರನ್ನೇ ಈ ಶ್ಲೋಕದ ಮೂಲಕ ನಮಿಸೋಣ. ಕಾಳಿದಾಸನ ಉದ್ದೇಶ ಇದಕ್ಕಿಂತ ಬೇರೆಯಾಗಿ ಇರಲಿಕ್ಕಿಲ್ಲ. ಏಕೆಂದರೆ ಈ ಇಬ್ಬರೂ ಒಂದಾಗಿರುವುದರಿಂದ ಲೋಕಕಂಟಕನಾದ ತಾರಕಾಸುರನ ವಧೆಯಾಯಿತು. ಶಿವನ ತಪಸ್ಸು ಭಂಗವಾಗಿ ಮತ್ತೆ ಗೃಹಸ್ಥನಾದ. ಮನ್ಮಥ ಅನಂಗನಾಗಿ ಮನಸ್ಸಿನಲ್ಲಿ ನೆಲೆಯೂರಿದ. ಆತನನ್ನು ಹೊಂದಲು ರತಿ ಮುಂದೆ ಕೃಷ್ಣಾವತಾರದವರೆಗೆ ಕಾಯುವಂತಾಯಿತು. ಪಾರ್ವತೀ-ಪರಮೇಶ್ವರರು ದಾಂಪತ್ಯದ ಆದರ್ಶ, ಒಬ್ಬರನ್ನು ಬಿಟ್ಟು ಒಬ್ಬರಿಲ್ಲ. ಅವರು ಹೇಗಿದ್ದಾರೆಯೆಂದರೆ ಶಿವನನ್ನು ಅರ್ಧನಾರೀಶ್ವರ ಎನ್ನುತ್ತಾರೆ. ಶಿವಪುರಾಣದಲ್ಲಿ ಇದಕ್ಕೆ ಒಂದು ಕಥೆಯಿದೆ.

ಬ್ರಹ್ಮ ಸೃಷ್ಟಿಕಾರ್ಯಕ್ಕೆಂದು ನಿಯುಕ್ತನಾದವ. ಆತ ಪ್ರಪಂಚವನ್ನೆಲ್ಲವನ್ನೂ ಸೃಷ್ಟಿಮಾಡಿದ. ಆದರೆ ಆತ ಮಾಡಿದ ಸೃಷ್ಟಿ ಮುಂದೆ ಮತ್ತೆ ಪುನಃ ಸೃಷ್ಟಿ ಮಾಡಲಿಲ್ಲ. ಬ್ರಹ್ಮ ಸೃಷ್ಟಿಯೆನ್ನುವುದು ಅಲ್ಲಿಯೇ ನಿಂತು ಹೋಗುತ್ತಿತ್ತು. ಬ್ರಹ್ಮನಿಗೆ ಸೃಷ್ಟಿಕಾರ್ಯ ನಿಯತಕರ್ಮವಾಗಿತ್ತು. ಅದರಿಂದ ಆನಂದ ಇತ್ತೋ ಇಲ್ಲವೋ ತಿಳಿದಿಲ್ಲ. ಏಕೆಂದರೆ ಬ್ರಹ್ಮವೆನ್ನುವುದೇ ರಸರಹಿತ. ಆನಂದವುಕ್ಕುವುದು ರಸವಿದ್ದಾಗ ಮಾತ್ರ. ಹಾಗಾಗಿ ಸೃಷ್ಟಿ ಎನ್ನುವುದು ನಿರಂತರವಾಗಿ ಆಗಬೇಕು, ಹಾಗೇ ನಿರಂತರವಾಗಿ ಆಗಬೇಕಾದರೆ ಆ ಕ್ರಿಯೆಯಲ್ಲಿ ಆನಂದವಿರಬೇಕು. ಆನಂದವೆನ್ನುವುದು ಒಬ್ಬರೇ ಇದ್ದಾಗ ಆವಿರ್ಭವಿಸುವುದಿಲ್ಲ. ಅದಕ್ಕೆ ಇಬ್ಬರು ಬೇಕು. ಇಬ್ಬರಲ್ಲಿಯೂ ಆನಂದ ಉಕ್ಕಬೇಕಾದರೆ ಇಬ್ಬರಲ್ಲಿಯೂ ಇಲ್ಲದೇ ಇರುವುದನ್ನು ಪರಸ್ಪರ ಹಂಚಿಕೊಳ್ಳಬೇಕು. ಇದು ಪಡೆವ ಮತ್ತು ಕೊಡುವ ಆನಂದ. ತನ್ನ ಸೃಷ್ಟಿಯೆಲ್ಲವೂ ತನ್ನಂತೆ. ಅವುಗಳೂ ಒಂದೊಂದೇ ಇರುವುಂತವುಗಳು. ಒಬ್ಬರಿಗೂ ಮತ್ತೊಬ್ಬರಿಗೂ ಪರಸ್ಪರ ಸಂಬಂಧವಿಲ್ಲ. ಬಹುವಾಗಿದ್ದರೂ ಏಕಾಂತದದಿಂದಲೇ ಇರುತ್ತವೆ. ಹಾಗಾಗಿ ಸೃಷ್ಟಿ ಬೆಳೆಯದೇ ಕೊಳೆಯುತ್ತಿವೆ.

ಬ್ರಹ್ಮ ತಲೆ ಕೆರೆದುಕೊಂಡ. ಏಕೆಂದರೆ ಇರುವಾತ ತಾನು ಒಬ್ಬನೇ. ದುಡಿಮೆಗಾರನೂ ತಾನೊಬ್ಬನೆ. ದುಡಿಮೆಯಲ್ಲಿ ಬರೀ ನೀರಸ. ಸೃಷ್ಟಿಯೆನ್ನುವುದು ನಿರಂತರವಾಗಿ ಆನಂದದಿಂದ ಆಗಬೇಕು. ಆದಿಯಲ್ಲಿ ಒಂಟಿಯಾಗಿ ಜನಿಸಿದ ಬ್ರಹ್ಮ ತಾನೇನು ಮಾಡುವುದು ಎಂದು ತಿಳಿಯದೇ ಕುಳಿತಾಗ “ತಪಃ ತಪಃ” ಎಂದು ಹೇಳಿರುವುದು ಅಶರೀರವಾಣಿ. ಈಗ ಆತ ಅಶರೀರವಾಣಿಗಾಗಿ ಕಾದ. ಸರಿಯಾದ ಲಯದೊಂದಿಗೆ ಚಿಂತಿಸಿ ತಪವನ್ನಾಚರಿಸಿದ. ಆಗ ಆತನಿಗೆ ನಭದಿಂದ ನುಡಿಯೊಂದು “ನಭೋವಾಣಿ ತದಾಭೂದ್ವೈ ಸೃಷ್ಟಿಂ ಮಿಥುನಜಾಂ ಕುರು I” “ಇನ್ನುಮೇಲೆ ನೀನು ಮಿಥುನವನ್ನು (ಸ್ತ್ರೀ-ಪುರುಷ ರೂಪವಾದ) ಸೃಷ್ಟಿ ಮಾಡು” ಎಂದು ಆದೇಶಿಸಿತು. ಅದರಂತೆ ಬ್ರಹ್ಮನು ಸ್ತ್ರೀ ಪುರುಷರನ್ನು ಸೃಷ್ಟಿ ಮಾಡಬೇಕೆಂದು ಸಂಕಲ್ಪಿಸಿದ.

ಬ್ರಹ್ಮನಿಗೆ ಏಕಾಏಕಿ ಮನಸ್ಸಿಗೆ ಅನಿಸಿರುವುದನ್ನು ಸೃಷ್ಟಿ ಮಾಡಲು ಸಾಧ್ಯವಿಲ್ಲ. ಇಲ್ಲದ್ದನ್ನು ಸೃಷ್ಟಿಸಲು ಸಾಧ್ಯವಿಲ್ಲ; ಇರುವುದನ್ನು ನಾಶಮಾಡಲು ಸಾಧ್ಯವಿಲ್ಲ ಎನ್ನುವ ತತ್ತ್ವ ಅವನಿಗೂ ಅನ್ವಯಿಸುತ್ತದೆ. ನಾಸಾದೀಯ ಈ ಕಲ್ಪದಲ್ಲಿನ ಪಾಪ ಪುಣ್ಯಗಳು ಮುಂದಿನ ಕಲ್ಪದಲ್ಲಿ ಬೀಜರೂಪವಾಗಿ ಸೃಷ್ಟಿಕಾರ್ಯಕ್ಕೆ ನೆರವಾಗುತ್ತವೆ ಎಂದು ವಿವರಿಸುತ್ತದೆ. ಬ್ರಹ್ಮನಿಗೆ ಪುರುಷ ಗೊತ್ತು. ಆದರೆ ಸ್ತ್ರೀತ್ವದ ಕುರಿತು ಅರಿವಿರಲಿಲ್ಲ. ಏಕೆಂದರೆ ಅವನಿಗೆ ಸ್ತ್ರೀಸ್ವರೂಪವನ್ನು ಅದುತನಕ ಶಿವ ಪ್ರಕಟಿಸಿರಲಿಲ್ಲ. ಬ್ರಹ್ಮನಿಗೆ ಶಿವನ ಅನುಗ್ರಹವಿಲ್ಲದೇ ಮೈಥುನೀಭಾವಕ್ರಮದಿಂದ (ಸ್ತ್ರೀಪುರುಷರುಗಳ ರೂಪವಾಗಿ) ಸೃಷ್ಟಿಸಲು ಸಾಧ್ಯವಿಲ್ಲವೆಂದು ಅನಿಸಿತು.

ಯಥಾಪ್ರಕಾರ ಬ್ರಹ್ಮ ಮತ್ತೆ ಪರಾಶರಶಕ್ತಿಯೆನಿಸಿದ ಸರ್ವಮಂಗಳೆಯೊಡಗೂಡಿದ ಪರಶಿವನನ್ನು ಪ್ರೀತಿಯಿಂದ ಹೃದಯದಲ್ಲಿ ಧ್ಯಾನಿಸುತ್ತಾ ತಪಸ್ಸನ್ನಾಚರಿಸಿದ. ಭಕ್ತರು ಏನನ್ನು ಕೇಳುತ್ತಾರೆಯೋ ಅದನ್ನು ಅದೇ ರೀತಿ ನೀಡುವುದು ದೇವರುಗಳ ಕ್ರಮ. ಹಾಗಾಗಿ ಶಿವ ಅರ್ಧದೇಹವು ಸ್ತ್ರೀಯಾಗಿಯೂ ಉಳಿದರ್ಧ ದೇಹವು ಪುರುಷನಾಗಿಯೂ ಇರುವ ಆಕೃತಿಯನ್ನು ತಾಳಿ ಬ್ರಹ್ಮನ ಮುಂದೆ ಪ್ರತ್ಯಕ್ಷನಾದ. ಬ್ರಹ್ಮ ತನ್ನ ಸೃಷ್ಟಿಕಾರ್ಯದ ಮಿತಿಯನ್ನು ಹೇಳುತ್ತಾ “ಕೇವಲ ತಾನೋರ್ವನೇ ಸೃಷ್ಟಿ ಮಾಡುವುದಷ್ಟೇ ಆಗಿದೆ. ತನ್ನಿಂದ ಆದ ಸೃಷ್ಟಿ ಮುಂದೆ ಬೆಳೆಯದೇ ಇದ್ದರೆ ಪ್ರಜೋತ್ಪತ್ತಿ ಹೇಗಾಗುವುದು; ಸ್ತ್ರೀ ಪುರುಷರಿಲ್ಲದೇ ಇದ್ದರೆ ಮೈಥುನ ಕ್ರಿಯೆ ನಡೆಯುವುದು ಹೇಗೆ” ಎಂದು ತನ್ನ ಸಮಸ್ಯೆಯನ್ನು ಮಹಾದೇವನ ಎದುರಿಗಿಟ್ಟ.

ಶಂಭು ಎಷ್ಟೆಂದರೂ ಬಲುಬೇಗ ಭಕ್ತರಿಗೆ ಒಲಿಯುವವ. ಅತ ಪ್ರಜಾಭಿವೃದ್ಧಿಗೋಸ್ಕರವೇ ತಪಸ್ಸನ್ನಾಚರಿಸಿದ ಬ್ರಹ್ಮನ ಇಚ್ಛೆಯನ್ನು ಪೂರ್ಣಗೊಳಿಸುವುದಕ್ಕೋಸ್ಕರ ತನ್ನ ದೇಹಾರ್ಧದಿಂದ ಶಿವೆಯನ್ನು ಬೇರೆಯಾಗಿ ಮಾಡಿದ. ಶಿವನ ದೇಹದಿಂದ ಈಚೆಗೆ ಬಂದ ಆ ಜಗನ್ಮಾತೆಯನ್ನು ಕಂಡು ಬ್ರಹ್ಮನು “ಓ ತಾಯೇ ನಿನ್ನ ದೇವದೇವನಾದ ಪತಿಯಿಂದ ಮೊದಲು ನಾನು ಸೃಷ್ಟಿಸಲ್ಪಟ್ಟೆನು. ಸೃಷ್ಟಿಕಾರ್ಯಕ್ಕಾಗಿಯೇ ಆ ದೇವ ನನ್ನನ್ನು ನಿಯಮಿಸಿದ್ದನು. ಮಂಗಲಕರಳೇ, ಈ ದೇವತೆಗಳನ್ನೆಲ್ಲಾ ನಾನು ಮನಸ್ಸಿನಿಂದಲೇ ನಿರ್ಮಿಸಿದೆನು. ಮತ್ತೆ ಮತ್ತೆ ಸೃಷ್ಟಿಸುತ್ತಿದ್ದರೂ ನನ್ನ ಸೃಷ್ಟಿ ಮಾತ್ರ ವೃದ್ಧಿಯನ್ನು ಪಡೆಯುವುದೇ ಇಲ್ಲ. ಹಾಗಾಗಿ ಪರಶಿವನ ನಭೋವಾಣಿಯಂತೆ ಇನ್ನು ಮುಂದೆ ಸ್ತ್ರೀಪುರುಷ ಸಂಯೋಗಜನ್ಯದಿಂದ ಸೃಷ್ಟಿಯನ್ನು ಮಾಡುವ ನನ್ನ ಸಂಕಲ್ಪ ಪೂರೈಸಿ ಕೊಡು. ನನ್ನ ಪ್ರಜೆಗಳೆಲ್ಲರೂ ಆನಂದದಿಂದ ಸಂತಾನ ಪಡೆಯುವಂತಾಗಲಿ. ಪುರುಷರಿಗೆ ಸಹಕಾರಿಯಾಗಲು ನಾರಿಕುಲವನ್ನು ಸೃಷ್ಟಿಸಲು ನನ್ನಿಂದ ಸಾಧ್ಯವಿಲ್ಲ. ಯಾವೆಲ್ಲಾ ಶಕ್ತಿಗಳೂ ನಿನ್ನಂದಲೇ ಉದ್ಭವಗೊಂಡವೋ ಅದೇ ರೀತಿ ಶಕ್ತಿಗಳಿಗೂ ಶಕ್ತಿಯಾದ ನೀನು ಸ್ತ್ರೀ ವರ್ಗವನ್ನು ಸೃಷ್ಟಿಸಲು ನನಗೆ ವರ ನೀಡು” ಎಂದು ಪ್ರಾರ್ಥಿಸಿದನು.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಧರ್ಮಪ್ರಜ್ಞೆ ಸದಾ ಜಾಗೃತವಾಗಿರುವ ಶೃಂಗಾರದ ಪ್ರತಿಮೆ

ಬ್ರಹ್ಮನಿಗೆ ಸಕಲ ಚರಾಚರ ಜಗತ್ತಿಗೆ ಕಾರಣ ಪುರುಷ ಶಿವನೆಂದು ತಿಳಿದಿದೆ. ತನ್ನಿಂದಲೇ ಸಂತಾನ ಆಗಲಿ ಎಂದು ಪ್ರಾರ್ಥಿಸುವುದಿಲ್ಲ. ಅದು ಶಿವ ಶಿವೆಯರ ದಾಂಪತ್ಯದಿಂದ ಆಗಬೇಕಾಗಿದೆ. ಹಾಗಾಗಿ ಎರಡನೆಯ ವರದಲ್ಲಿ ಆತ ಸಕಲ ಪ್ರಪಂಚವೆಲ್ಲದರ ಅಭಿವೃದ್ದಿಗೋಸ್ಕರ ಜಗನ್ಮಾತೆ ಶಿವನೊಂದಿಗೆ ಕಲೆಯಬೇಕು. ಅದಕ್ಕಾಗಿ ತನ್ನ ಮಗನಾದ ದಕ್ಷ ಪ್ರಜಾಪತಿಯ ಮಗಳಾಗಿ ಅವತರಿಸುವಂತೆ ಕೇಳಿಕೊಳ್ಳುತ್ತಾನೆ. ಆಗ ಜಗನ್ಮಾತೆ ಅವನಿಗೆ ಸ್ತ್ರೀವರ್ಗವನ್ನು ಸೃಷ್ಟಿಸಲು ಬೇಕಾದ ಶಕ್ತಿಯನ್ನು ಅನುಗ್ರಹಿಸಿದಳು. ತನ್ನಂತೆಯೇ ಇರುವ ಕಾಂತಿಮತಿಯಾದ ಶಕ್ತಿಯೊಬ್ಬಳನ್ನು ತನ್ನ ಹುಬ್ಬುಗಳ ನಡುವೆಯಿಂದ ಸೃಷ್ಟಿಸಿದಳು. ಅವಳನ್ನು ನೋಡಿದ ಮಹೇಶ್ವರನು ಆಕೆಗೆ “ಪರಮೇಷ್ಟಿಯಾದ ಬ್ರಹ್ಮನು ನಿನ್ನನ್ನು ಆರಾಧಿಸುತ್ತಿದ್ದಾನೆ. ಆತನಲ್ಲಿ ಪ್ರಸನ್ನಳಾಗು. ಸಂತೋಷದಿಂದ ಆತನ ಅಭಿಲಾಷೆಯನ್ನು ಈಡೇರಿಸು” ಎನ್ನುತ್ತಾನೆ. ಹೀಗೆ ಶಿವನಿಂದ ಆಜ್ಞಾಪಿತಳಾದ ಆ ನವೀನ ಶಕ್ತಿಯು ದಕ್ಷ ಪ್ರಜಾಪತಿಗೆ ಮಗಳಾಗಿ ಜನಿಸಿದಳು. ಹೀಗೆ ತನ್ನ ಶಕ್ತಿಯನ್ನು ಬ್ರಹ್ಮನಿಗೆ ಅನುಗ್ರಹಿಸಿದ ಶಿವೆ ಶಿವನ ದೇಹದಲ್ಲಿ ಐಕ್ಯಳಾದಳು. ಮುಂದೆ ದಕ್ಷ ಪ್ರಜಾಪತಿಯ ಮಗಳಾದ ದಾಕ್ಷಾಯಿಣಿ ಎನ್ನುವ ಹೆಸರನ್ನು ಪಡೆದ ಭವೆ ಈಶ್ವರನನ್ನೇ ಲಗ್ನವಾದಳು. ಹೀಗೆ ಅಂದಿನಿಂದ ಮೊದಲ್ಗೊಂಡು ಸ್ತ್ರೀಪುರುಷರ ಸಮಾಗಮವೇ ಸೃಷ್ಟಿಗೆ ನಿಮಿತ್ತವಾಯಿತು. ಶಿವನ ಅರ್ಧ ನಾರೀಶ್ವರ ಅವತಾರಕ್ಕೆ ಇರುವ ಹಿನ್ನೆಲೆಗೆ ಇದೇ ಕಾರಣ.

ಶಿವನ ರೂಪವೇ ಮನೋಹರ. ನೀಲಕಂಠನಾದ ಆತ ಚಂದ್ರಕಲೆಯುಳ್ಳವನು. ಸರ್ಪವನ್ನು ಜನಿವಾರವಾಗಿ ಧರಿಸಿದವನು. ತಾನು ಹುಲಿಯ ಚರ್ಮವನ್ನು ಉಟ್ಟುಕೊಂಡರೂ ಜಗತ್ತಿಗೆ ಆದರಣೀಯನು. ಜೀವಿಗಳ ಎಲ್ಲ ರೀತಿಯ ಭಯಗಳನ್ನು ಮುಕ್ತಗೊಳಿಸುವವನು. ಅವನು ಶರ್ವ, ಭವ, ರುದ್ರ, ಉಗ್ರ, ಭೀಮ, ಪಶುಪತಿ, ಈಶಾನ್, ಮಹಾದೇವ ಎನ್ನುವ ಅಷ್ಟಮೂರ್ತಿ ಸ್ವರೂಪನಾಗಿ ಈ ಜಗತ್ತಿನಲ್ಲಿ ನೆಲೆಸಿದ್ದಾನೆ. ಭೂಮಿ, ಜಲ, ಅಗ್ನಿ, ಮರುತ್ತು, ಆಕಾಶ, ಆತ್ಮ, ಸೂರ್ಯ, ಚಂದ್ರರುಗಳಿಗೆ ತನ್ನ ಎಂಟು ರೂಪಗಳಿಂದ ಅಧಿಷ್ಠಾನ (ಆಶ್ರಯ)ನೆನಿಸಿದ್ದಾನೆ. ಚರಾಚರಾತ್ಮಕ ಪ್ರಪಂಚವನ್ನು ವಿಶ್ವರಂಭರಾತ್ಮಕವಾದ ಶರ್ವ ಸ್ವರೂಪವು ಧರಿಸಿವೆ. ಜಗತ್ತಿನ ಜೀವನಕ್ಕೆ ಆಧಾರಭೂತವಾದ ನೀರು ಪರಮಾತ್ಮನಾದ ಶಿವನ ಭವವೆನ್ನುವ ಮೂರ್ತಿ. ಇನ್ನೊಬ್ಬರ ಪ್ರೇರಣೆಯಿಲ್ಲದೇ ತಾನಾಗಿಯೇ ಚಲಿಸುವ, ಎಲ್ಲರ ಹೊರಗೂ ಒಳಗೂ ಇದ್ದು ಎಲ್ಲರನ್ನು ಧರಿಸಿರುವುದೋ ಅದು ಶಿವನ ಮರುತ್ತು (ವಾಯು)ವೆನ್ನುವ ಮೂರ್ತಿ. ಸಮಗ್ರ ಜಗತ್ತನ್ನು ಆವರಿಸಿಕೊಂಡಿರುವ ಆಕಾಶವೂ ಆತನೇ. ದುಷ್ಟರಾದವರನ್ನು ಹುಟ್ಟಡಗಿಸುವ ಭೀಮ ಆತನ ಇನ್ನೊಂದು ಸ್ವರೂಪವು.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಶೃಂಗಾರದ ಪ್ರತಿರೂಪ ಮತ್ತು ಧರ್ಮಪ್ರಜ್ಞೆಯ ದಿಟ್ಟ ನಾರಿ ಶಕುಂತಲೆ

ಎಲ್ಲ ಆತ್ಮಗಳಿಗೂ ಅಧಿಷ್ಠಾನವೆನಿಸಿರುವ, ಎಲ್ಲ ದೇಹಗಳಲ್ಲಿಯೂ ಕ್ಷೇತ್ರಜ್ಞನಾಗಿರುವ ಆತ ಪಶುಪ್ರಾಯರಾದ ಜೀವರ ಸಂಸಾರ ಪಾಶವನ್ನು ಕತ್ತರಿಸಿ ಹಾಕುವವನಾಗಿರುವುದರಿಂದ ಆತ ಪಶುಪತಿಯೂ ಹೌದು. ಸೂರ್ಯನಲ್ಲಿರುವ ತೇಜಸ್ಸಿಗೆ ಕಾರಣ ಈತನಲ್ಲಿರುವ ಈಶಾನವೆನ್ನುವ ಮೂರ್ತಿ. ಅಮೃತಮಯವಾದ ಕಿರಣಗಳಿಂದ ಮನಸ್ಸನ್ನು ಮುದಗೊಳಿಸುವ ಪ್ರಭೆಯ ಚಂದ್ರ ಈತನ ಮಹಾದೇವನೆನ್ನುವ ಮೂರ್ತಿಯಾದರೆ ಸಕಲ ದೇಹಗಳಲ್ಲಿಯೂ ವ್ಯಕ್ತನಾಗಿರುವುದು ಈತನ ಪರಾತ್ಪರ ತತ್ತ್ವ. ಶಿವನ ಎಂಟನೆಯ ಸ್ವರೂಪವು. ಹೀಗೆ ಶಿವನ ಈ ಸ್ವರೂಪವು ಪ್ರಪಂಚಕ್ಕೆ ಮಂಗಲವಾಗಿರುವುದು. ಕೆಲವೊಂದು ನಂಬಿಕೆಗಳ ಪ್ರಕಾರ ಈ ದಿನ ಶಿವ ಸಮುದ್ರ ಮಥನದ ಕಾಲಕ್ಕೆ ಉದ್ಭವಿಸಿದ ವಿಷವನ್ನು ಹೀರಿ ಲೋಕವನ್ನು ಉಳಿಸಿದ ಕಾರಣದಿಂದ ಮಹಾಶಿವರಾತ್ರಿಯನ್ನು ಆ ನೆನಪಿಗೆ ಆಚರಿಸುತ್ತಾರೆ ಎಂದಿದೆ. ಆದರೆ ಈ ಕುರಿತು ಬೇರೆ ಬೇರೆ ಪುರಾಣಗಳಲ್ಲಿ ಬೇರೆ ಬೇರೆಯಾದ ಕಥೆಗಳಿವೆ. ಆತನ ಅರ್ಧನಾರೀಶ್ವರತ್ವ ಮಾತ್ರ ಗಂಡುಹೆಣ್ಣು ಸೇರಿ ಆಗುವ ಪೂರ್ಣಾತೆಯನ್ನು ವಿವರಿಸುತ್ತದೆ. ಅಂತೆಯೇ ಆತನನ್ನು ವೇದಗಳು ವರ್ಣಿಸುವುದು ಹೀಗೆ:

ವೃಷಸ್ಕಂಧಸಮಾರೂಢಂ ಉಮಾದೇಹಾರ್ಧ ಧಾರಿಣಮ್ I
ಅಮೃತೇನಾಪ್ಲುತಂ ಶಾಂತಂ ದಿವ್ಯಭೋಗ ಸಮನ್ವಿತಮ್ II

ಪರಮ ದೇವತೆಯಾದ ಉಮಾಳೊಂದಿಗೆ ಅರ್ಧ ಶರೀರವನ್ನು ಹಂಚಿಕೊಂಡಿದ್ದಾನೆ. ತನ್ನ ಭುಜಗಳ ಬಲಿಷ್ಠತೆಯನ್ನು ಸೂಚಿಸುವಂತೆ ಆಸೀನನಾಗಿದ್ದಾನೆ. ಅಮರತ್ವ ಮತ್ತು ಶಾಂತಿಯು ಮೈದಾಳಿದಂತಿದ್ದಾನೆ. ದಿವ್ಯಭೋಗದಿಂದ ಅನುಗ್ರಹೀತನಾಗಿದ್ದಾನೆ.

ಇಷ್ಟೆಲ್ಲಾ ಮಹಿಮಾನ್ವಿತನಾದ ಶಿವ ಒಲಿಯುವುದು ಜನಸಾಮಾನ್ಯರಿಗೆ. ರುದ್ರ ಎನ್ನುವ ಹೆಸರುಳ್ಳವನಾದರೂ ಆತ ಬೆದರಿಕೆಯನ್ನು ಹಾಕುವುವನಲ್ಲ. ಎಲ್ಲರ ರೋದನವನ್ನು ನೀಗಿಸುವವ. ಆತ ಶೀಘ್ರಗತಿಯಲ್ಲಿ ಆಕಾಶ ಮಾರ್ಗದಲ್ಲಿ ಸಾಗುತ್ತಾ ಇರುವಾಗ ಕಾಣಿಸಿಕೊಳ್ಳುವುದು ಸಾಮಾನ್ಯರಲ್ಲಿ ಸಾಮಾನ್ಯರಾದ ಗೋಪಾಲಕರಿಗೆ ಮತ್ತು ನೀರು ತರುವ ನೀರೆಯರಿಗೆ ಎನ್ನುವುದನ್ನು “ಅಸೌ ಯೋsವಸರ್ಪತಿ ನೀಲಗ್ರೀವೋ ವಿಲೋಹಿತಃ I ಉತೈನಂ ಗೋಪಾ ಅದೃಶನ್ನದೃಸನ್ನುದಹಾರ್ಯಃ I” ಎಂದು ರುದ್ರಾಧ್ಯಾಯದಲ್ಲಿ ವರ್ಣಿಸಲಾಗಿದೆ. ಮಂಗಲಕರನಾದ ಉಮಾಪತಿ ನಮ್ಮನ್ನೂ ಹರಸಲಿ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ | ರಾಮಕೃಷ್ಣ ಪರಮಹಂಸರ ತಪಸ್ಸಿನ ಸಾಫಲ್ಯದ ಫಲ ಸ್ವಾಮಿ ವಿವೇಕಾನಂದ

Exit mobile version