Site icon Vistara News

ಧವಳ ಧಾರಿಣಿ ಅಂಕಣ: ರಾಮಾಯಣದ ಕವಿಗೆ ಕಾಡಿದ ಮೂರು ಚಿಂತೆಗಳು

valmiki dhavala dharini column

ರಾಮಾಯಣದ ಪೂರ್ವರಂಗ ಮತ್ತು ಅಂತರಂಗ

ಧವಳ ಧಾರಿಣಿ ಅಂಕಣ: ಕೃತ್ವಾಪಿ ತನ್ಮಹಾಪ್ರಾಜ್ಞಸ್ಸಭವಿಷ್ಯಂ ಸಹೋತ್ತರಮ್
ಚಿನ್ತಯಾಮಾಸ ಕೋನ್ವೇತತ್ಪ್ರಯುಞ್ಜೀಯಾದಿತಿ ಪ್ರಭುಃ ৷৷ಬಾ.4.3৷৷

ಮಹಾ ಪ್ರಾಜ್ಞರು ಮತ್ತು ತ್ರಿಕಾಲವನ್ನು ಬಲ್ಲವರಾದ ವಾಲ್ಮೀಕಿ ಮಹರ್ಷಿಗಳು ಶ್ರೀರಾಮನ ಪಟ್ಟಾಭಿಷೇಕದ ನಂತರ ಭವಿಷ್ಯವನ್ನು ಹೇಳುವ ಉತ್ತರಕಾಂಡ ಸಹಿತವಾದ ರಾಮಾಯಣವನ್ನು ರಚಿಸಿದ ನಂತರ ನನ್ನಿಂದ ಇದರ (ರಾಮಾಯಣದ) ಉಪದೇಶವನ್ನು ಪಡೆದು ಸರಿಯಾಗಿ ಪ್ರಯೋಗಿಸಬಲ್ಲ ಸಮರ್ಥರು ಯಾರಿದ್ದಾರೆ ಎನ್ನುವ ಚಿಂತೆಗೊಳಗಾದರು (ಭಾವಾರ್ಥ).

ಕವಿಗೆ ಕಾವ್ಯವನ್ನು ರಚಿಸುವಾಗ ಹೇಗೆ ಮತ್ತು ಯಾಕೆ ಎನ್ನುವ ಚಿಂತೆ ಉಂಟಾಗುವುದು ಸಹಜದ ಕ್ರಿಯೆ. ಮನಸ್ಸಿನಲ್ಲಿ ಯಾವುದೋ ಅಮೂರ್ತವಾದ ಭಾವವನ್ನು ಇರಿಸಿಕೊಂಡು ಅದನ್ನು ಮೂರ್ತರೂಪಕ್ಕೆ ತರುವಾಗ ಕವಿ ಪ್ರಸವವೇದನೆಯನ್ನು ಅನುಭವಿಸುತ್ತಾನೆ. ಇಲ್ಲಿ ಕಾವ್ಯ ರೂಪುಗೊಳ್ಳುವಿಕೆಯೆನ್ನುವುದನ್ನು ಕೀಟವೊಂದು ಪತಂಗವಾಗಿ ಪರಿವರ್ತಿತವಾಗುವುದಕ್ಕೆ ಹೋಲಿಸಬಹುದು. ಕಾವ್ಯದ ವಸ್ತು ಮನಸ್ಸಿನಲ್ಲಿ ರೂಪುಗೊಳ್ಳುತ್ತಲೇ ಅದು ಹೊರ ಬರುವುದಕ್ಕೆ ಧ್ಯಾನಸ್ಥ ಸ್ಥಿತಿ ಬೇಕಾಗುತ್ತದೆ. ಮನಸ್ಸಿನಲ್ಲಿ ಮಥನ ನಡೆಯುತ್ತಾ ನಂತರದಲ್ಲಿ ಅದು ತನ್ನ ಸುತ್ತಲೂ ಕಟ್ಟಿದ ಗೂಡನ್ನು ತಾನೇ ಒಡೆದುಕೊಂಡು ಮನೋಹರವಾದ ಪಾತರಗಿತ್ತಿಯಾಗಿ ಹಾರತೊಡಗುತ್ತದೆ. ಮೊದಲು ಕವಿ ರಸಭಾವದಲ್ಲಿ ಲೀನವಾಗುತ್ತಾನೆ. ತುರೀಯಾವಸ್ಥೆಗೆ ತಲುಪುವಾಗ ಭಾವದ ಆವರಣದೊಳಗೆ ಸಿಕ್ಕಿಬೀಳುತ್ತಾನೆ. ಹುತ್ತಗಟ್ಟುವ ಕ್ರಿಯೆ ಎಂದರೆ ಇದೆ. ರತ್ನಾಕರನೆನ್ನುವ ಬೇಡ ಹೆಂಡತಿ ಮಕ್ಕಳನ್ನು ಸುಖವಾಗಿರಿಸಲು ಹಿಂಸಾವೃತ್ತಿಯನ್ನೇ ಮೈಗೂಡಿಸಿಕೊಂಡು ಬದುಕಿದವ. ಲೌಕಿಕದ ಸುಖವನ್ನು ಹಂಚಿಕೊಳ್ಳಲು ಬಯಸುವ ಅವರ ಕುಟುಂಬದವರು ಅದರಿಂದ ಉಂಟಾಗಬಹುದಾದಂತಹ ಪಾಪಕ್ಕೆ ಹೊಣೆಗಾರರಾಗಲು ಸಿದ್ಧರಿಲ್ಲದಾಗ ಆಘಾತಗೊಂಡ.

ಬದುಕೆನ್ನುವುದು ಆದರ್ಶವನ್ನು ಹುಡುಕುವುದಕ್ಕಾಗಿಯಲ್ಲ; ಆದರ್ಶವೇ ಬದುಕಾಗಬೇಕೆಂದು ಆಗ ಅನಿಸಿತು. ಅಂಗುಲಿಮಾಲ ಬುದ್ಧನಿಂದ ಪ್ರಭಾವಿತನಾಗಿರುವುದು ಇಂತಹುದೇ ಸಂದರ್ಭದಲ್ಲಿ. “ನಾನೃಷಿಃ ಕುರುತೇ ಕಾವ್ಯಂ” ಕವಿ ಜ್ಞಾನಿಯಷ್ಟೇ ಅಲ್ಲ, ಋಷಿಯೂ ಆಗಿರಬೇಕು. ಈ ಬದಲಾವಣೆಯ ಪರ್ವದಲ್ಲಿ, ತನಗಾಗಿ ಅಲ್ಲ ಲೋಕಕ್ಕಾಗಿ ಬದುಕಿದವ ಜಗತ್ತಿನಲ್ಲಿ ಇರಬಹುದೇ ಎನ್ನುವ ಸಂಶಯದ ಹುತ್ತ ಕಾಡಿದಾಗ ಹುಡುಕಾಟ ಪ್ರಾರಂಭವಾಯಿತು. ಆಗ ದರ್ಶನವಾಗಿರುವುದು ವೇದೋಪನಿಷತ್ತುಗಳಲ್ಲಿ ಅವಿತಿರುವ ಅಮೂರ್ತ ಜ್ಞಾನಭಂಡಾರ. ದರ್ಶನ ಆದರ್ಶವಾಗಬೇಕಾದರೆ ಅದಕ್ಕೊಂದು ಮೂರ್ತರೂಪ ಬೇಕು. ಅದೆಲ್ಲಿ ಎಂದು ಮತ್ತೆ ಮತ್ತೆ ಹಂಬಲಿಸುತ್ತಾ ಎಚ್ಚರವಾಗಿಯೂ ಎಚ್ಚರಗೊಳ್ಳದ ಸ್ಥಿತಿಯಲ್ಲಿ ಇದ್ದ. ಅಕ್ಷರವೆನ್ನುವುದು ಅವಿನಾಶಿ. ಅದು ಒಂದೂ ಅಲ್ಲದ ಬಹುತ್ವವೂ ಅಲ್ಲದ ವ್ಯಾಪಕತ್ವ. ಅದಕ್ಕೆ ಮತ್ತೊಂದು ಅಕ್ಷರ ಸೇರಿದಾಗ ಅದಕ್ಕೊಂದು ಮೂರ್ತರೂಪ ಬರುತ್ತದೆ. ಅದುವೇ ರಾಮ ಎನ್ನುವುದನ್ನು ಸಪ್ತರ್ಷಿಗಳೇ ಹೇಳಿದಾಗ ಮನಸ್ಸಿನೊಳಗೆ ಪಡಿಮೂಡಿತು ಆ ಆಕೃತಿ.

ಕವಿಸೃಷ್ಟಿಯನ್ನು “ನಿಯತಿಕೃತ ನಿಯಮರಹಿತ”ವೆಂದು ಹೇಳುತ್ತಾರೆ. ಲೋಕಾತೀತವಾದ ವಿಷಯಗಳನ್ನು ಅನುಭವಿಸುವಿಕೆಗೆ ದರ್ಶನವೆಂದು ಕರೆಯುತ್ತಾರೆ. ಅದು ಅಲೌಕಿಕ ಆನಂದವನ್ನು ನೀಡುತ್ತದೆ. ರತ್ನಾಕರ, ಪ್ರಾಚೇತಸ, ಋಕ್ಷ ಹೀಗೆ ಹಲವು ಹೆಸರುಳ್ಳ, ಆದರೆ ಹಿಂಸಾರತಿಯಲ್ಲಿ ಮನವಿಟ್ಟವನಿಗೆ ಸ್ವಾರ್ಥವನ್ನು ಬಿಟ್ಟು ಕೇವಲ ಕರ್ತವ್ಯವನ್ನೇ ತನ್ನ ಆಹ್ನಿಕವೆಂದುಕೊಂಡ ವ್ಯಕ್ತಿ ಇರಲು ಸಾಧ್ಯವೇ ಎನ್ನುವ ಸಂಶಯ ಬರುತ್ತಿತ್ತು. ಅನುಭವ ಪಕ್ವವಾಗಬೇಕಾದರೆ ಅದಕ್ಕೆ ನಿದರ್ಶನ ಬೇಕು. ನಾಟ್ಯದ ಭಾಷೆಯಲ್ಲಿ ಇದನ್ನು ಅಮೂರ್ತದಿಂದ ಮೂರ್ತಕ್ಕೆ ಮತ್ತು ಮೂರ್ತದಿಂದ ಅಮೂರ್ತಕ್ಕೆ ಎನ್ನುವ ಅವಸ್ಥೆಗಳಿಗೆ ತಲುಪುವ ಕ್ರಿಯೆ ಎನ್ನುತ್ತಾರೆ. ಸರಳವಾದ ರಂಗದ ಮೇಲೆ ತಾನು ಅನುಭವಿಸಿದ ವಿಷಯಗಳನ್ನು ನಟ ಕಣ್ಣಿಗೆ ಕಟ್ಟುವಂತೆ ಅಭಿನಯಿಸುತ್ತಾನೆ. ರಥ, ದೇವೇಂದ್ರನ ಸಭೆ, ಅರಣ್ಯ ಇವೆಲ್ಲವುಗಳ ಅಭಿನಯ ನಟನ ಸಾಮರ್ಥ್ಯದ ಮೇಲೆ ಪ್ರೇಕ್ಷಕನಿಗೆ ದರ್ಶನವಾಗಿ ಆತ ಪ್ರತ್ಯಕ್ಷವಾಗಿ ಅದನ್ನು ಅನುಭವಿಸಿ ತನ್ನನ್ನು ಸಂಪೂರ್ಣವಾಗಿ ಮರೆಯುತ್ತಾನೆ. ರಸದಲ್ಲಿ ಲೀನವಾಗುತ್ತಾನೆ. ಅಲ್ಲಿಗೆ ಪ್ರೇಕ್ಷಕನಿಗೆ ಮೂರ್ತಸ್ವರೂಪದಲ್ಲಿ ಕಾಣಿಸಿಕೊಂಡು ಆತನನ್ನು ತನ್ನೊಟ್ಟಿಗೆ ಅಮೂರ್ತಲೋಕಕ್ಕೆ ಒಯ್ಯುತ್ತದೆ. (ಯಕ್ಷಗಾನ ಇದಕ್ಕೆ ಸ್ಪಷ್ಟ ಉದಾಹರಣೆ). ಈ ಅನುಭವದ ಸಾಕ್ಷಾತ್ಕಾರಕ್ಕಾಗಿ ಋಷಿ ವಾಲ್ಮೀಕಿ ಹಂಬಲಿಸುತ್ತಿದ್ದ.

ರಾಮಾಯಣದ ಸಂದರ್ಭದಲ್ಲಿ ವಾಲ್ಮೀಕಿ ಮಹರ್ಷಿಗೆ ಮೂರುಸಲ ಚಿಂತೆಯುಂಟಾಗಿತ್ತು. ಬದುಕಬೇಕಾದರೆ ಹಿಂಸೆಯೇ ಮಾರ್ಗವೆಂದು ಅದೇ ಹಾದಿ ಹಿಡಿದು ಇದೀಗ ಆದರ್ಶದ ಬೆನ್ನು ಹತ್ತಿದವನಿಗೆ, ಎಲ್ಲಾ ಕಡೆಯೂ ಇದ್ದು ಎಲ್ಲದರಿಂದಲೂ ಅಂತರವನ್ನು ಕಾಯ್ದುಕೊಂಡಂತಹ ವ್ಯಕ್ತಿ ಈ ಲೋಕದಲ್ಲಿ ಇರಲು ಸಾಧ್ಯವೇ ಎನ್ನುವ ಸಂಶಯ ಬಿಟ್ಟೂ ಬಿಡದೇ ಕಾಡುತ್ತಿತ್ತು. ಒಂದು ವೇಳೆ ಇಲ್ಲದೇ ಹೋದರೆ…??? ಎನ್ನುವ ಚಿಂತೆಗೂ ಇದೇ ಕಾರಣವಾಗಿತ್ತು. ಮುನಿಪುಂಗವ ಆ ಕುರಿತೇ ತಪಸ್ಸು ಮಾಡುತ್ತಿದ್ದ; ಈ ವಿಷಯದ ಕುರಿತು ಸ್ಪಷ್ಟ ನಿದರ್ಶನವನ್ನು ಬಯಸುತ್ತಿದ್ದ. ಸಪ್ತರ್ಷಿಗಳೇನೋ ಮಹಾಮಹಿಮನ ವಿಷಯಗಳ ಕುರಿತು ರಾಮ ಎನ್ನುವ ಹೆಸರನ್ನು ಹೇಳಿದ್ದಾರೆ. ಲೋಕದಲ್ಲಿ ಸಂಭಾವಿತನಾಗಿ ಬದುಕುವದೆನ್ನುವದು ಒಂದು ಆದರ್ಶ ಸ್ಥಿತಿ (Utopian State). ಆದರ್ಶವೆನ್ನುವುದು ವಾಸ್ತವವೂ ಆಗಬಹುದೇ ಎನ್ನುವ ಚಿಂತೆ ನಿರಂತರವಾಗಿ ಕಾಡುತ್ತಿರುವಾಗಲೇ, ಇದಕ್ಕೆ ಉತ್ತರಿಸಬಲ್ಲವರು ಅಧ್ಯಯನ ಅಧ್ಯಾಪನಗಳಲ್ಲಿ ನಿರತರಾದ ತಪಸ್ವಿಗಳಾಗಿರಬೇಕು; ಏಕಾಗ್ರತೆಯನ್ನು ವಾಲ್ಮೀಕಿಗಿಂತಲೂ ಚನ್ನಾಗಿ ಸಾಧಿಸಿದವರಾಗಿರಬೇಕು. ಮಾತು ಬಲ್ಲವರಲ್ಲಿ ಶ್ರೇಷ್ಠರಾಗಿರಬೇಕು. ಅಂಥವರು ಯಾರಿದ್ದಾರೆ ಎನ್ನುವ ಪ್ರಶ್ನೆ ನಿರಂತರವಾಗಿ ವಾಲ್ಮೀಕಿಯನ್ನು ಕಾಡುತ್ತಿತ್ತು.

ಹೀಗಿರುತ್ತಿರುವಾಗ ಅವರಲ್ಲಿಗೆ ನಾರದ ಬರುತ್ತಾನೆ. ಮಹರ್ಷಿಯ ಪ್ರಶ್ನೆಗೆ ಉತ್ತರಿಸಲು ಇವರಿಗಿಂತಲೂ ಬೇರೆ ಯಾರು ಸಮರ್ಥರಿಲ್ಲ ಎಂದುಕೊಳ್ಳುತ್ತಾನೆ. (ತಪಸ್ಸ್ವಾಧ್ಯಾಯನಿರತಂ ತಪಸ್ವೀ ವಾಗ್ವಿದಾಂ ವರಮ್). ನೇರವಾಗಿ ಅವರಲ್ಲಿಯೇ ತನ್ನನ್ನು ಕಾಡುತ್ತಿರುವ ಚಿಂತೆಯನ್ನು ಹೇಳುತ್ತಾ “ಲೋಕದಲ್ಲಿ ಯಾವ ದೋಷವೂ ಇಲ್ಲದ ವ್ಯಕ್ತಿ ಎಂದರೆ ಆತನಲ್ಲಿ ಈ ಕೆಳಗಿನ ಹದಿನಾರು ಗುಣಗಳಿರಬೇಕು. (ಅವು ಕಲ್ಯಾಣವಂತ, ವೀರ್ಯವಂತ, ದರ್ಮಜ್ಞ, ಕೃತಜ್ಞ, ಸತ್ಯಭಾಷಿ, ದೃಢವ್ರತನಿಷ್ಠ, ಕುಲಾಚಾರಗಳನ್ನು ತಪ್ಪದೇ ನಡೆಸುಕೊಂಡು ಬರುವಾತ, ಭೂತದಯೆ, ಚತುರ್ದಶವಿದ್ಯೆಗಳಲ್ಲಿಯೂ ಪಾರಂಗತ, ಸರ್ವಕಾರ್ಯ ದುರಂಧರ, ಮೋಹಕರೂಪಿನವ, ಧೈರ್ಯವಂತ, ಕೋಪವನ್ನು ಗೆದ್ದವ, ಎಣೆಯಿಲ್ಲದ ಕಾಂತಿಯುಳ್ಳವ, ಅನಸೂಯ, ದೇವತೆಗಳಿಗೂ ಅಂಜದ ಪರಾಕ್ರಮಿ) ಇಂಥಹ ಮಾನವನು “ಕೋನ್ವಸ್ಮಿನ್ ಸಾಂಪ್ರತಂ ಲೋಕೇ- ಈ ಕಾಲದಲ್ಲಿ” ಇದ್ದಾನೆಯೇ; ಇದ್ದರೆ ಆತನ ಕುರಿತು ವಿವರಿಸಿ ಎಂದು ಕೇಳಿಕೊಳ್ಳುತ್ತಾರೆ. ಆಗ ನಾರದರು ಇಕ್ಷಾಕುವಂಶದಲ್ಲಿ ಜನಿಸಿದ ರಾಮ ರಾಮ ಎಂದು ಜನಗಳು ಕರೆಯುವ ನರಪುಂಗವನಿದ್ದಾನೆ ಎಂದು ಆತನ ಕುರಿತು ವಿವರಿಸುತ್ತಾರೆ.

ರಾಮಾಯಣದ ಕಥೆಯನ್ನು ಕೇಳಿದ ವಾಲ್ಮೀಕಿಗೆ ಮನಸ್ಸು ಪ್ರಪುಲ್ಲವಾಗಿದೆ. ಹಗುರವಾಗಿದೆ. ಪ್ರಪಂಚದಲ್ಲಿ ಎಲ್ಲವೂ ಸುಂದರವಾಗಿ ಕಾಣಿಸುತ್ತಿದೆ. ಹೀಗೆ ತಮಸಾ ನದಿಯಲ್ಲಿ ಸ್ನಾನ ಮಾಡಿ ಬರುವಾಗ ಬೇಡನೊಬ್ಬ ಮಿಥುನ ಸ್ಥಿತಿಯಲ್ಲಿದ್ದ ಜೋಡಿ ಕ್ರೌಂಚಪಕ್ಷಿಗೆ ಬಾಣ ಬಿಟ್ಟು ಗಂಡು ಹಕ್ಕಿಯನ್ನು ಕೊಂದುಬಿಟ್ಟ. ಹೆಣ್ಣು ಹಕ್ಕಿ ಅದನ್ನು ನೋಡಿ ಗೋಳಾಡತೊಡಗಿತು. ಅದರ ಸ್ಥಿತಿಯನ್ನು ನೋಡಿದ ಮುನಿಯ ಮನಸ್ಸಿನಲ್ಲಿ ಕರುಣಾರಸವು ಉಕ್ಕೇರಿತು. ಬೇಡನೆಡೆಗೆ ನೋಡಿ ಹೇಳಿದ ಮಾತು-

ಮಾ ನಿಷಾದ ಪ್ರತಿಷ್ಠಾಂ ತ್ವಮಗಮಶ್ಶಾಶ್ವತೀಸ್ಸಮಾಃ
ಯತ್ಕ್ರೌಞ್ಚಮಿಥುನಾದೇಕಮವಧೀ: ಕಾಮಮೋಹಿತಮ್ ৷৷ಬಾ. 15৷৷

“ಎಲೈ ನಿಷಾದನೇ! ಮಿಥುನದಲ್ಲಿ ನಿರತವಾಗಿದ್ದ ಕ್ರೌಂಚ ಪಕ್ಷಿಗಳಲ್ಲಿ ಒಂದನ್ನು ಹೊಡೆದು ಕೊಂದಿರುವುದರಿಂದ ನೀನು ಬಹಳ ಕಾಲದವರೆಗೆ ಸ್ಥಿರವಾಗಿ ಬದುಕಲಾರೆ”

ಒಂದು ಕಾಲದಲ್ಲಿ ಆ ಬೇಡನಂತೆ ತಾನೂ ಹಿಂಸಾವೃತ್ತಿಯನ್ನು ಅನುಸರಿಸುತ್ತಿದ್ದ ವಾಲ್ಮೀಕಿ ಈಗ ಅದನ್ನು ತ್ಯಜಿಸಿದ್ದಾರೆ. ಬೇಡನಿಗೆ ಶಾಪವನ್ನು ಕೊಡುವಾಗಲೂ ಸಾಯಿ ಎಂದು ಹೇಳುವದಕ್ಕಿಂತ “ಬಹಳ ಕಾಲ ಸ್ಥಿರವಾಗಿ ಬದುಕಲಾರೆ” ಎನ್ನುವ ಮಾತನ್ನು ಆಡುತ್ತಾನೆ. “ಸಾಯಿ ಎನ್ನುವುದಕ್ಕಿಂತ ಬದುಕಲಾರೆ” ಎನ್ನುವ ಮಾತುಗಳು ಬಹು ಅರ್ಥಪೂರ್ಣ! ರಾಮಾಯಣವನ್ನು ಕೇಳಿದ ಪ್ರಭಾವದಿಂದ ಹಿಂಸೆಯ ಲವಲೇಶವೂ ಮನಸ್ಸಿನಲ್ಲಿ ಇಲ್ಲ. ಮರುಕ್ಷಣದಲ್ಲಿಯೇ ಬೇಡನ ವೃತ್ತಿಯೇ ಬೇಟೆಯಾಡುವುದು, ತನ್ನ ಶಾಪ ಅಗತ್ಯವಿತ್ತೇ ಎನ್ನುವ ಇನ್ನೊಂದು ಚಿಂತೆ ಅವರನ್ನು ಕಾಡಿತು. ಹೆಣ್ಣು ಕ್ರೌಂಚದ ಶೋಕ ವಾಲ್ಮೀಕಿಯ ಮನವನ್ನು ಕಲಕಿತ್ತು. ಅದಕ್ಕೆ ಪ್ರತಿಯಾಗಿ “ಬಹಳ ಕಾಲ ಬದುಕಲಾರೆ” ಎನ್ನುವುದು ಉತ್ತರವಾಗಲಾರದು. ತನ್ನ ಶಾಪ ನಿಜವಾದರೆ ಬೇಡನ ಹೆಂಡತಿಗೆ ದುಃಖವಾಗದೇ ಇದ್ದೀತೆ ಎನ್ನುವ ಮನೋಭಾವವೂ ಇದ್ದಿರಬಹುದಾಗಿದೆ. ಹಿಂಸೆಗೆ ಇನ್ನೊಂದು ಹಿಂಸೆ ಉತ್ತರವಾಗಲಾರದು. ಹಾಗಾಗಿ ಚಿಂತೆಗೆ ಪರಿಹಾರವೆಂದರೆ ಶೋಕ ಶ್ಲೋಕವಾಗುವುದು. ಶೋಕವೆಂದರೆ ದುಃಖ; ಶೋಕಕ್ಕೆ ಕಾರಣ ವಿಯೋಗ. ರಾಮಾಯಣವೂ ವಿಯೋಗದ ಕಥೆಯೇ. ಇಲ್ಲಿ ತಂದೆಗೆ ಮಕ್ಕಳ ವಿಯೋಗ, ಅಣ್ಣನಿಗೆ ತಮ್ಮನ ವಿಯೋಗ, ಗಂಡನಿಗೆ ಹೆಂಡತಿಯ ವಿಯೋಗ. ಕ್ರೌಂಚವೆಂದರೆ ಕುಟಿಲ ಸ್ವರೂಪರಾದ ರಾಕ್ಷಸರು ಎನ್ನುವ ಅರ್ಥವೂ ಇದೆ. ಸೀತೆಯನ್ನು ರಾಮನಿಂದ ಅಗಲಿಸಿದ ಕಾರಣಕ್ಕೆ ಮಂಡೋದರಿಗೂ ಇಲ್ಲಿ ರಾವಣನ ವಿಯೋಗವನ್ನು ಅನುಭವಿಸಬೇಕಾಯಿತು ಎನ್ನುವದೂ ಆಗುತ್ತದೆ. ಕಾಮದಿಂದ ಸುಗ್ರೀವನ ಹೆಂಡತಿಯನ್ನು ಅಪಹರಿಸಿದ ವಾಲಿಯನ್ನು ರಾಮ ಕೊಂದು ಸುಗ್ರೀವನಿಗೆ ಆತನ ಪತ್ನಿ ಪುನಃ ಸಿಗುವಂತೆ ಮಾಡಿದ್ದಾನೆ.

ಕರುಣರಸದ ಸ್ಥಾಯಿಭಾವವೇ ಶೋಕ. ಈ ಸ್ಥಾಯಿಭಾವವನ್ನು ಶ್ಲೋಕವಾಗಿಸುವುದು ಎಂದರೆ ಸ್ತೋತ್ರರೂಪವಾದ ಪದ್ಯವನ್ನಾಗಿಸುವುದು. ಸ್ತೋತ್ರವೆಂದರೆ ಸದ್ಗುಣಗಳನ್ನು (ದೇವರನ್ನು) ಹೊಗಳುವುದು. ನಿಷಾದ ಎಂದರೆ ಪೀಡಿಸುವವ ಎನ್ನುವ ಅರ್ಥವೂ ಆಗುತ್ತದೆ. ಅಲ್ಪೀಭೂತವಾದ ಮಿಥುನದಿಂದ ಎಂದರೆ ರಾಜ್ಯಭ್ರಂಶವನವಾಸಾದಿ ಕ್ಲೇಷಗಳಿಂದ ಕೃಶರಾದ ಸೀತಾರಾಮರೆನ್ನುವವರಲ್ಲಿ ಒಬ್ಬಳಾದ ಸೀತೆಯನ್ನು ಅವಧೀಃ- ಅಗಲಿಸಿದ ಕಾರಣದಿಂದಾಗಿ ಬ್ರಹ್ಮವರದಿಂದ ಲಭಿಸಿದ ರಾಜ್ಯವನ್ನು ರಾವಣ ಇನ್ನು ಬಹಳಕಾಲದ ವರೆಗೆ ಅನುಭವಿಸಲಾರೆ. ತ್ರಿಲೋಕಕಂಟಕನಾದ ರಾವಣನನ್ನು ಶಪಿಸಿರುವುದರಿಂದ ಸಕಲ ಲೋಕಕ್ಕೂ ಸನ್ಮಂಗಳವುಂಟಾಯಿತು ಎನ್ನುವುದಾಗಿಯೂ ಅರ್ಥವನ್ನು ಮಾಡಬಹುದು. ಶೋಕರೂಪವಾಗಿ ಹೊರಬಂದ ಮಾತು ಅನುಷ್ಟುಪ್ ಛಂದಸ್ಸಿನಲ್ಲಿತ್ತು. ಅದೇ ಶ್ಲೋಕವಾಗಿ ಮಂಗಳಕರ ನಾಂದೀ ಪದ್ಯವಾಯಿತು ಎನ್ನುವ ಸಮಾಧಾನವೂ ಇದೀಗ ಮುನಿಯಲ್ಲಿ ಮೂಡಿತು. ತನ್ನ ಶಿಷ್ಯ ಭಾರದ್ವಾಜನಿಗೆ “ತನ್ನ ಮಾತು ಕೇವಲ ಪದಜಾಲವಾಗದಿರಲಿ. ಪ್ರಾಸಬದ್ಧವಾಗಿ ಬಂದಿರುವ ಇದು ತಂತಿಯ ವಾದ್ಯದೊಡನೆ ಹಾಡುವ ಲಯಬದ್ಧಶ್ಲೋಕವಾಗಿ ಪರಿಣಮಿಸಲಿ” ಎನ್ನುತ್ತಾನೆ. ಅದನ್ನು ಭಾರದ್ವಾಜ ಕಂಠಪಾಠ ಮಾಡುತ್ತಾನೆ.

ಇತ್ತ ಆಶ್ರಮಕ್ಕೆ ಬಂದರೆ, ಕವಿಯನ್ನು ನೋಡಲು ಬ್ರಹ್ಮನೇ ಬಂದಿರುತ್ತಾನೆ. ರಾಮಾಯಣದ ಕಾವ್ಯವನ್ನು ರಚಿಸು ಎಂದು ವರ ನೀಡುತ್ತಾನೆ. ವರದ ಫಲದಿಂದ ರಾಮಾಯಣದಲ್ಲಿ ನಡೆದ ವೃತ್ತಾಂತಗಳು, ಎಲ್ಲಾ ಪಾತ್ರಗಳ ರಹಸ್ಯಗಳು ವಾಲ್ಮೀಕಿಗೆ ಅಂಗೈಯಲ್ಲಿನ ನೆಲ್ಲಿಕಾಯಿಯಂತೆ ತೋರುತ್ತದೆ. ಎಲ್ಲಿ ಹೃದಯದ ಕಣ್ಣು ತೆರೆಯುತ್ತದೆಯೋ ಅಲ್ಲಿ ಕಾವ್ಯದ ರಸಸೃಷ್ಟಿಯಾಗುತ್ತದೆ. ಲೋಕದಲ್ಲಿ ಸಾಮಾನ್ಯವಾಗಿ ಕಂಡ ಸಂಗತಿಗಳು ಕವಿಗೆ ವಿಶೇಷ ರೂಪವಾಗಿ ಗೋಚರವಾಗುವುದು. ತೀ. ನಂ. ಶ್ರೀಕಂಠಯ್ಯನವರು ಕಾವ್ಯ ಹುಟ್ಟುವ ಹೊತ್ತನ್ನು “ತನ್ನೊಳಗೆ ತುಂಬಿರುವ ರಸಕ್ಕೆ ಅನುಗುಣವಾದ ಶಬ್ದಾರ್ಥಗಳನ್ನು ಕುರಿತು ಚಿಂತನೆಯಲ್ಲಿ ಕವಿಯ ಚೇತಸ್ಸು ನಿಶ್ಚಲವಾಗಿರುವಾಗ, ವಸ್ತುವಿನ ನಿಜಸ್ವರೂಪವನ್ನು ಮುಟ್ಟಿದ ಪ್ರಜ್ಞೆ ಅವನಲ್ಲಿ ಥಟ್ಟನೆ ಹೊಮ್ಮುತ್ತದೆ. ಇದೇ ಕವಿಯ ಪ್ರತಿಭೆ, ಪರಮೇಶ್ವರನ ಮೂರನೆಯ ಕಣ್ಣೆಂದೇ ಕೀರ್ತಿಸುತ್ತಾರೆ. ಇದರ ಮೂಲಕ ತ್ರಿಕಾಲದಲ್ಲಿ ನಡೆಯುವ ಸಂಗತಿಗಳನ್ನು ಸಾಕ್ಷಾತ್ತಾಗಿ ಕಾಣಬಲ್ಲನು(ಭಾ. ಕಾ. ಮೀ-10)” ಎಂದು ವಿವರಿಸುತ್ತಾರೆ. ವಾಲ್ಮೀಕಿ ಕುಳಿತಲ್ಲಿಯೇ ರಾಮಾಯಣದ ಎಲ್ಲಾ ವಿವರಗಳನ್ನು ಕಾಣುವದು ಈ ವಿಶೇಷದೃಷ್ಟಿಯಿಂದಲೇ. ಅದನ್ನೇ ಬ್ರಹ್ಮ ಆತನಿಗೆ ಕೊಟ್ಟ ವರ ಎಂದು ಅಲಂಕಾರಿಕವಾಗಿ ಹೇಳಲಾಗಿದೆ. ಸಕಲ ಚರಾಚರಗಳ ಸೃಷ್ಟಿಗೆ ಕಾರಣ ಬ್ರಹ್ಮ; ಆತನೇ ತನಗಿರುವ ಅಪೂರ್ವ ಕಾವ್ಯಸೃಷ್ಟಿಯನ್ನು ವಾಲ್ಮೀಕಿಗೆ ಅನುಗ್ರಹಿಸಿದ್ದಾನೆ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಶ್ರೀರಾಮ ಪಟ್ಟಾಭಿಷೇಕದ ಕನಸಿನ ವಿಹಾರ

ರಾಮಾಯಣವನ್ನು ರಚಿಸಿದ ಮುನಿಗೆ ತನ್ನ ಕಾವ್ಯದ ಮೇಲೆ ಮೋಹವುಂಟಾಯಿತು. ಮತ್ತೆ ಮತ್ತೆ ಕಾವ್ಯಾನುಸಂಧಾನವನ್ನು ಮಾಡತೊಡಗಿದ. ಕವಿಗೆ ಪ್ರತಿಯೊಂದು ಕೃತಿಯೂ ಮಕ್ಕಳಂತೆ. ಕೃತಿ ಆತನನ್ನು ಮೋಹಪರವಶತೆಗೆ ಈಡುಮಾಡುತ್ತದೆ. ವಾಲ್ಮೀಕಿಗೆ ತನ್ನ ಕಾವ್ಯ ಅದ್ವಿತೀಯವಾದುದೆನ್ನುವ ವಿಶ್ವಾಸ ಬಂದಿದೆ. ಈ ಮೊದಲು ಹದಿನಾರು ಗುಣಗಳುಳ್ಳ ಮನುಷ್ಯ ಇದ್ದಿರಬಹುದೇ ಎನ್ನುವ ಚಿಂತೆ ಅವರನ್ನು ಕಾಡಿತ್ತು. ನಂತರ ಹೆಣ್ಣು ಕ್ರೌಂಚದ ವಿರಹದ ಅಳುವನ್ನು ನೋಡಿ “ಹೆಚ್ಚು ಕಾಲ ಬದುಕಲಾರೆ” ಎನ್ನುವ ಶಾಪವನ್ನು ಕೊಟ್ಟ ಕಾರಣ ಚಿಂತೆ ಕಾಡಿತ್ತು. “ಸೃಷ್ಟಿ ಎನ್ನುವ ಶಬ್ಧದಲ್ಲಿ ಸಾವು ಎನ್ನುವುದು ಇರುವುದಿಲ್ಲ. ಸಾವಿನಲ್ಲಿ ಸೃಷ್ಟಿ ಇರುವುದಿಲ್ಲ, ಇವೆರಡೂ ಯಾವತ್ತಿಗೂ ಒಟ್ಟಿಗೆ ಇರಲಾರದು” ಬ್ರಹ್ಮನಿಗೆ ಸೃಷ್ಟಿಸುವುದು ತಿಳಿದಿದೆಯೇ ಹೊರತೂ ನಾಶದ ಅರಿವಿಲ್ಲ. ವಾಲ್ಮೀಕಿಗೆ ಈ ಕಾರಣಕ್ಕಾಗಿ ಬದುಕಲಾರೆ ಎನ್ನುವ ಮಾತು ಕವಿಸೃಷ್ಟಿಗೆ ವಿರುದ್ಧವಾಗಿ ತೋರಿದೆ. ಹಾಗಾಗಿ ಎರಡನೇ ಸಾರಿ ಚಿಂತೆಗೊಳಗಾದ. ಅದಕ್ಕೆ ಬ್ರಹ್ಮನೇ ಬಂದು ಸಮಾಧಾನ ಹೇಳಿ ನಂತರದಲ್ಲಿ ಮಹಾಕಾವ್ಯವನ್ನು ರಚಿಸಿದ ಬಳಿಕ “ಚಿನ್ತಯಾಮಾಸ ಕೋನ್ವೇತತ್ಪ್ರಯುಞ್ಜೀಯಾದಿತಿ ಪ್ರಭುಃ” ಇಂತಹ ಕಾವ್ಯವನ್ನು ಉಪದೇಶ ಪಡೆಯಬಲ್ಲ ಸಮರ್ಥರು ಯಾರಿದ್ದಾರೆ ಎನ್ನುವ ಚಿಂತೆ ಮೂರನೇ ಬಾರಿಗೆ ಉದ್ಭವಿಸಿತು. ಹೀಗೆ ಚಿಂತಿಸುತ್ತಾ ಕಣ್ಮುಚ್ಚಿ ಕುಳಿತಿರುವ ಹೊತ್ತಿನಲ್ಲಿ ಅವರ ಕಾಲನ್ನು ಯಾರೋ ಹಿಡಿದುಕೊಂಡಿದ್ದು ಗಮನಕ್ಕೆ ಬಂತು. ಯಾರೆಂದು ಕಣ್ಣುತೆರೆದು ನೋಡಿದರೆ ಬಾಲಕರಾದ ಲವ-ಕುಶರು.

ಇಲ್ಲಿ ಎರಡು ಸಂಗತಿಗಳನ್ನು ವಾಲ್ಮೀಕಿ ಹೇಳುವುದು ಬಲು ಮುಖ್ಯ. ಮೊದಲನೆಯದು ಅವರು ಮುನಿವೇಷಧಾರಿಗಳಾಗಿದ್ದರು, ಅವರು ಆಶ್ರಮವಾಸಿಗಳಾಗಿರಲಿಲ್ಲವೆಂದು ಮುನಿವೇಷಧಾರಿಗಳಾಗಿದ್ದರು ಎನ್ನುವುದರ ಮೂಲಕ ಸೂಚಿಸುತ್ತಾರೆ, ಎರಡನೆಯದು ಆ ಬಾಲಕರಿಗೆ ಹಾಡುವುದಕ್ಕೆ ಯೋಗ್ಯವಾದ ಶಾರಿರ ಸಂಪತ್ತು – “ಭ್ರಾತರೌ ಸ್ವರಸಮ್ಪನ್ನೌ ದದರ್ಶಾಶ್ರಮವಾಸಿನೌ” ಇತ್ತು ಎನ್ನುವುದು. ರಾಮಾಯಣವನ್ನು ವಾಲ್ಮೀಕಿ ರಚಿಸುವಾಗಲೇ ತನ್ನ ಕಾವ್ಯ ಹಾಡುವುದಕ್ಕೆ ಯೋಗ್ಯವಾಗಿ ಇರಬೇಕೆನ್ನುವುದನ್ನು ಬಯಸಿದ್ದರು. ರಾಮಾಯಣದಲ್ಲಿ ಅಧ್ಯಯನ ಮಾಧುರ್ಯವೂ ಇದೆ, ಗಾನ ಮಾಧುರ್ಯವೂ ಇದೆ. ನವರಸಭರಿತವಾಗಿದೆ ಎನ್ನುವುದು ಬಲು ಮುಖ್ಯ. ಕವಿಯ ಮನಸ್ಸನ್ನು ಅರಿತು ಹಾಡುವ ಯೋಗ್ಯರಾದ ಗಾಯಕರು ಸಿಕ್ಕಿದರೆಂದು ಮುನಿಗೆ ಸಂತೋಷವಾಯಿತು. ಶಿಷ್ಯರೂ ಅಷ್ಟೇ, ರಾಮಾಯಣವನ್ನು ಆಮೂಲಾಗ್ರವಾಗಿ ಕಲಿತು ಕವಿ ವಾಲ್ಮೀಕಿಯ ಮನಸ್ಸು ತೃಪ್ತಿಯಾಗುವಂತೆ ಮಹರ್ಷಿಗಳ ಸಭೆಯಲ್ಲಿ ಹಾಡಿ ತೋರಿಸಿದರು.

ಇಲ್ಲಿಗೆ ಮುನಿಯನ್ನು ಕಾಡಿದ ಮೂರನೆಯ ಚಿಂತೆ ಯೋಗ್ಯರಾದ ಗಾಯಕರು ಸಿಕ್ಕಿದರು ಎನ್ನುವ ಸಂತೋಷದಲ್ಲಿ ಪರಿವರ್ತಿತವಾಯಿತು.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ರಾಮಾಯಣದ ಮಹಾ ಮಥನದ ಕಡೆಗೋಲು ಮಂಥರೆ

Exit mobile version