Site icon Vistara News

ಧವಳ ಧಾರಿಣಿ ಅಂಕಣ | ಇಂದು ಗೀತಾಜಯಂತಿ | ವಿಷಾದದ ಅಂತಿಮ ಫಲವೇ ಯುದ್ಧವೆಂದು ಸಾರಿದ ವಿಷಾದಯೋಗ

dhavala dharini

ಧರ್ಮಕ್ಷೇತ್ರೇ ಕುರುಕ್ಷೇತ್ರೇ ಸಮವೇತಾ ಯುಯುತ್ಸವಃ I
ಮಾಮಕಾಃ ಪಾಂಡವಾಶ್ಚೈವ ಕಿಮಕುರ್ವತ ಸಂಜಯ II
(ಭ. ಗೀ. 1-1)

(ಎಲೈ ಸಂಜಯನೆ, ಧರ್ಮಕ್ಷೇತ್ರವಾದ ಕುರುಕ್ಷೇತ್ರದಲ್ಲಿ ಯುದ್ಧ ಮಾಡಬೇಕೆಂದು ಅಭಿಲಾಷೆಯುಳ್ಳವರಾಗಿ ಸೇರಿದ ನನ್ನವರೂ ಪಾಂಡವರೂ ಏನು ಮಾಡಿದರು?)

ಭಗವದ್ಗೀತೆಯ ಮೊದಲ ಅಧ್ಯಾಯವನ್ನು ಅರ್ಜುನ ವಿಷಾದಯೋಗವೆಂದು ಕರೆಯುತ್ತಾರೆ. ಇಲ್ಲಿ ಅರ್ಜುನನಿಗೆ ಯುದ್ಧದ ಕುರಿತಾದ ಗೊಂದಲಗಳು ಏಕಾಏಕಿ ಉದ್ಭವಿಸುತ್ತವೆ. ವಾಲ್ಮೀಕಿಗೂ ಕ್ರೌಂಚ ಪಕ್ಷಿಯ ವಧೆಯನ್ನು ಕಂಡಾಗ ವಿಷಾದ ಉಂಟಾಗಿತ್ತು. ಅದರಿಂದಾಗಿ ರಾಮಾಯಣ ಮಹಾಕಾವ್ಯವೇ ಹುಟ್ಟಿತು. ವಿಷಾದ ಎನ್ನುವದು ಆತ್ಮಾವಲೋಕನೆಯ ಕಾಲವೂ ಹೌದು. ಮಹಾಭಾರತದ ಅರ್ಜುನನ ವಿಷಾದವೂ ಆತ್ಮಾವಲೋಕನೆಯ ಕಾಲವೂ ಆಗಿದೆ. ಯಾವುದೇ ಮಹತ್ತರ ಬದಲಾವಣೆಗೆ ಒಂದು ತಿರುವು ಬೇಕಾಗಿರುತ್ತದೆ. ಆ ತಿರುವು ಅದು ತನಕದ ವಾಸ್ತವವನ್ನು ಮುರಿದುಹಾಕುತ್ತದೆ. ಈ ತಕ್ಷಣದ ಮತ್ತು ತೀಕ್ಷ್ಣ ಬದಲಾವಣೆಯನ್ನು ಆ ಬದಲಾವಣೆಯನ್ನು ಬಯಸಿದವರೇ ಅದನ್ನು ಒಪ್ಪಿಕೊಳ್ಳಬೇಕೇ ಎಂದು ಅನೇಕಸಾರಿ ಗೊಂದಲಕ್ಕೆ ಒಳಗಾಗುತ್ತಾರೆ.

ಇಲ್ಲಿ ಅರ್ಜುನ ಈ ಸ್ಥಿತಿಗೆ ಬಂದಿದ್ದಾನೆ. ಆ ಕಾರಣಕ್ಕಾಗಿಯೇ ಆತ ಕೃಷ್ಣನ ಹತ್ತಿರ “ಸೇನೇಯೊರುಭಯೋರ್ಮಧ್ಯೆ ರಥಂ ಸ್ಥಾಪಯಮೇಚ್ಯುತ” ತನ್ನ ರಥವನ್ನು ಉಭಯಸೇನೆಯ ನಡುವೆ ಸಮಾನದೂರದಲ್ಲಿ ನಿಲ್ಲಿಸು ಎಂದು ವಿನಂತಿಸಿಕೊಳ್ಳುತ್ತಾನೆ. ಜನ್ಮದಾರಭ್ಯ ಪಾಂಡವ ದ್ವೇಷವನ್ನು ಅನುಭವಿಸಿ ತನ್ನ ತಾಯಿಯೇ ಪರದೇಶಿಗಳಂತೆ ಇನ್ನೊಬ್ಬರ ಮನೆಯಲ್ಲಿ ಬದುಕಬೇಕಾದ ಪರಿಸ್ಥಿತಿಗೆ ಕಾರಣವಾದ, ಹೆಂಡತಿಯ ಮಾನಹರಣಕ್ಕೆ ಕಾರಣೀಕರ್ತರಾದ ಮಹಾ ಬಲವಂತರಾದ ತಮ್ಮ ವ್ಯಕ್ತಿತ್ವವನ್ನು ಕುಗ್ಗಿಸಿ ಜೀತದಾಳಾಗಿ ಅಜ್ಞಾತವಾಸದಲ್ಲಿ ಕಳೆಯಬೇಕಾಗಿ ಬಂದಿರುವದಕ್ಕೆ ಕಾರಣೀಕರ್ತರನ್ನು ಮತ್ತು ತಮ್ಮ ಮೇಲಿನ ಅಭಿಮಾನದಿಂದ ಬಂದು ಸೇರಿದ ತನ್ನ ಬಂಧುಗಳು ಬಾಂಧವರು ಸಹೋದರರುಗಳನ್ನೆಲ್ಲಾ ಹಾಗೂ ತನ್ನೆಲ್ಲಾ ಸೈನ್ಯವನ್ನು ಸಮಾನದೂರದಲ್ಲಿ ನಿಂತು ನೋಡುವ ಮನಃಸ್ಥಿತಿ ಅರ್ಜುನನಲ್ಲಿ ಉಂಟಾಗುತ್ತದೆ.

ಇದಕ್ಕೂ ಸ್ವಲ್ಪಮೊದಲು ನಿರಾಯುಧನಾಗಿ ಧರ್ಮರಾಜ ಕೌರವ ಸೇನೆಯನ್ನು ಹೊಕ್ಕು ಭೀಷ್ಮಾದಿಗಳಲ್ಲಿ ಆಶೀರ್ವಾದವನ್ನು ಬೇಡಿಕೊಂಡು ಬಂದು ಅದೇ ತಾನೇ ತನ್ನ ಸ್ಥಾನದಲ್ಲಿ ಸನ್ನದ್ಧನಾಗಿ ನಿಂತು ಕೊಂಡಿದ್ದ. ಸದಾ ಧರ್ಮದ ಕುರಿತು ಚಿಂತಿಸುವ ಧರ್ಮರಾಜನಿಗೆ ಕಾಡದ ಚಿಂತೆ ಅರ್ಜುನನಲ್ಲಿ ವಿಷಾದವಾಗಿ ಕಾಣಿಸಿಕೊಂಡಿತು. ಈ ಅರ್ಜುನ ವಿಷಾದ ಭಗವದ್ಗೀತೆಗೆ ಪೀಠಿಕೆಯಾಯಿತು. ಇಲ್ಲಿ ಪರಂತಪ (ಶತ್ರುಗಳಿಗೆ ತಾಪವನ್ನುಂಟುಮಾಡುವವ, ಭಗವಂತನನ್ನು ಜ್ಞಾನದೃಷ್ಟಿಯಿಂದ ನೋಡುವವ) ಎಂದು ಕರೆಯಿಸಿಕೊಳ್ಳುವ ಅರ್ಜುನನ ವಿಷಾದಕ್ಕಿಂತ ಇನ್ನೆರಡು ಪಾತ್ರಗಳ ವಿಷಾದ ತುಂಬಾ ಮಹತ್ವದ್ದು. ಇದು ಮಾನಸಿಕ ದೌರ್ಬಲ್ಯ ಹೌದಾದರೂ ವಿಷಾದಕ್ಕೆ ಮೂಲ ಕಾರಣ ಕೃಪೆಯ ಅತಿರೇಕಕ್ಕೆ ಅರ್ಜುನ ಸಿಲುಕಿದ್ದಾನೆ ಎಂದು ಡಿವಿಜಿಯವರು ಅಭಿಪ್ರಾಯಪಟ್ಟಿದ್ದಾರೆ. ಗೀತೆಯ ಮೊದಲ ಅಧ್ಯಾಯದಲ್ಲಿ ಕೃಷ್ಣನ ಮೂಲಕವಾಗಿ ವ್ಯಾಸರು ತೋರುವ ಮನೋ ವಿಭಿನ್ನತೆಯ ನಡತೆಯನ್ನು ಆಧುನಿಕ ಮನಶಾಸ್ತ್ರದ Maladaptive behaviour theoryಗೆ ಹೋಲಿಸಬಹುದಾಗಿದೆ. ಈ ಅಸಮರ್ಪಕ ನಡವಳಿಕೆಯನ್ನು ಇಲ್ಲಿ ಅರ್ಜುನ ತೋರುವದಕ್ಕಿಂತ ಮೊದಲೇ ಧೃತರಾಷ್ಟ್ರ ನಂತರದಲ್ಲಿ ದುರ್ಯೋಧನ ತೋರಿದ್ದಾರೆ.

ವ್ಯಾಸರ ʻಜಯʼವೆನ್ನುವ ಈ ಮಹಾಕಾವ್ಯ ಒಂದು ವಿಶಿಷ್ಟವಾದ ಹಲವು ರಸ, ಭಾವನೆಗಳ ಧಾರೆ. ಇಲ್ಲಿ ಮನುಷ್ಯ ಸಹಜವಾದ ಎಲ್ಲಾ ಗುಣಗಳೂ ದೋಷ ಮತ್ತು ದೌರ್ಬಲ್ಯಗಳೂ ಇವೆ. ರಾಮಾಯಣದಲ್ಲಿ ಶ್ರೀರಾಮ ತಾನು ದಶರಥನ ಮಗ, ಮನುಷ್ಯನಾಗಿಯೇ ಹುಟ್ಟಿದ್ದೇನೆ ಎನ್ನುತ್ತಾ ತನ್ನ ಗುಣಗಳಿಂದಲೇ ದೇವತ್ವವನ್ನು ಪಡೆದವ. ಅಲ್ಲಿ ಮನುಷ್ಯರಿಗೆ ದೇವತೆಗಳ ಅನುಗ್ರಹ ಹೆಚ್ಚಿನ ಸಂದರ್ಭಗಳಲ್ಲಿ ವರಗಳ ಮೂಲಕವಾಗಿ. ಆದರೆ ಮಹಾಭಾರತದಲ್ಲಿ ದೇವ ಮನುಷ್ಯರ ಸಂಬಂಧ ವರಗಳ ಜೊತೆ ಇನ್ನಷ್ಟು ಗಾಢವಾದದ್ದು. ಚಂದ್ರವಂಶದ ರಾಜರುಗಳ ಮತ್ತು ದೇವತೆಗಳ ನಡುವೆ ರಕ್ತಸಂಬಂಧಗಳಾಗಿವೆ. ಕೃಷ್ಣನ ಜೀವಿತದ ಕಾಲದಲ್ಲಿಯೇ ತಾನು ದೇವರ ಅವತಾರವೆಂದು ಕರೆಯಿಸಿಕೊಳ್ಳಲ್ಪಟ್ಟವನು. ಭಗವದ್ಗೀತೆಯಲ್ಲಂತೂ ಆತನೇ ತಾನೇ ಈ ಜಗಕ್ಕೆಲ್ಲ ಮೂಲಕಾರಣ, ವರ್ತಮಾನ ಮತ್ತು ಅಂತ್ಯವೂ ತಾನೇ ಎಂದು ಘೋಷಿಸಿಕೊಳ್ಳುತ್ತಾನೆ.

ಈ ಭಗವದ್ಗೀತೆಯ ಮೊದಲ ಅಧ್ಯಾಯ ಪ್ರಾರಂಭವಾಗುವದೇ “ಅರ್ಜುನ ವಿಷಾದಯೋಗ” ಎನ್ನುವದರ ಮೂಲಕ. ಇಲ್ಲಿ ವಿಷಾದವೂ ಒಂದು ಯೋಗವಾಗಿದೆ. ಯೋಗವೆಂದರೆ ಒಂದುಗೂಡಿಸುವದೆಂದರ್ಥ. ಕೇವಲ ಯುದ್ಧವನ್ನು ಪ್ರಚೋದಿಸುವ ಗ್ರಂಥವೆಂದು ಮೇಲುನೋಟಕ್ಕೆ ಅನಿಸಿದರೂ ವ್ಯಾಸರು ಈ ಯುದ್ಧದ ಮೂಲಕ ಜಿವಾತ್ಮನನ್ನು ಪರಮಾತ್ಮನಲ್ಲಿ ಸೇರಿಸುವದಕ್ಕಿರುವ ಮಹತ್ವದ ಸಾಧನವೆನ್ನುವದನ್ನು ತೋರಿಸಿಕೊಟ್ಟಿದ್ದಾರೆ. ಹಾಗಾಗಿಯೇ ಯುದ್ಧಭೂಮಿಯಾದ ಕುರುಕ್ಷೇತ್ರ ಧರ್ಮಕ್ಷೇತ್ರ. ಒಂದು ಕಾವ್ಯವಾಗಿ ಗೀತೆಯನ್ನು ಆ ಮೂಲಕ ಮಹಾಭಾರತವನ್ನು ಓದಿದರೆ ವ್ಯಾಸರ ಕಥನಕಟ್ಟುವ ತಂತ್ರಗಳು ಈ ಕಾಲಕ್ಕೂ ಬೆರಗುಹುಟ್ಟಿಸುತ್ತವೆ. ಮೂಲ ಮಹಾಭಾರತದ ʻಭೀಷ್ಮ ಪರ್ವʼದಲ್ಲಿನ ಹದಿನೆಂಟು ಅಧ್ಯಾಯಗಳಲ್ಲಿ ಕೃಷ್ಣ ಅರ್ಜುನನಿಗೆ ಗೀತೆಯನ್ನು ವಿವರಿಸಿದ್ದಾನೆ.

ಗೀತೆಯನ್ನುವ ಯೋಗದ ಪ್ರವೇಶವಾಗುವದು ದೃತರಾಷ್ಟ್ರ ಸಂಜಯನಿಗೆ ರಣರಂಗದಲ್ಲಿ ನಡೆಯುವ ವಾರ್ತಗಳ ಕುರಿತು ಧರ್ಮಕ್ಷೇತ್ರವಾದ ಕುರುಕ್ಷೇತ್ರದಲ್ಲಿ. ತನ್ನ ಮಕ್ಕಳು ಮತ್ತು ಪಾಂಡವರೂ ಏನು ಮಾಡಿದರು ಎನ್ನುವದನ್ನು ಕೇಳುವದರ ಮೂಲಕ ಪಾಂಡವರನ್ನು ತನ್ನವರಲ್ಲ ಎನ್ನುವದನ್ನೇ ಸೂಚಿಸುತ್ತಿದ್ದಾನೆ. ಮಹತ್ವದ ವಿಷಯ ಎಂದರೆ ಪಾರ್ಥಸಾರಥಿ ಅರ್ಜುನನನ್ನು ನಿಮಿತ್ತವಾಗಿರಿಸಿಕೊಂಡು 700 ಶ್ಲೋಕಗಳ ಮೂಲಕ ವೇದೋಪನಿಷತ್ತಿನ ಸಾರಗಳನ್ನು ಜಗತ್ತಿಗೆ ಬೋಧಿಸಿದ. ಪಾರ್ಥನನ್ನುಳಿದು ಪ್ರಪಂಚಕ್ಕೆ ತಿಳಿಸಿರುವದೂ ಸಹ ಧೃತರಾಷ್ಟ್ರನ ಸಾರಥಿಯಾದ ಸಂಜಯನ ಮೂಲಕವಾಗಿಯೇ. ಗೀತಾಚಾರ್ಯ ಮೊದಲ ಶ್ಲೋಕದಲ್ಲಿಯೇ ಯುದ್ಧಮೋಹಿ ಬೀಜವಿರುವದು ದುರ್ಯೋಧನನಲ್ಲಲ್ಲ, ಅದು ಧೃತರಾಷ್ಟ್ರನಲ್ಲಿಯೇ ಎನ್ನುವದನ್ನು ಸೂಕ್ಷ್ಮವಾಗಿ ಹೇಳುತ್ತಿದ್ದಾನೆ.

ಎಲ್ಲರೂ ಆರೋಪಿಸುವಂತೆ ಕೃಷ್ಣ ಯುದ್ಧಾಕಾಂಕ್ಷಿಯಾಗಿರಲಿಲ್ಲ. ಸಂಧಾನಕ್ಕೆಂದು ಬಂದ ಕೃಷ್ಣ ಕುಂತಿಯಲ್ಲಿ “ಮಮ ಪ್ರಾಣಾಹಿ ಪಾಂಡವಾಃ” ಎಂದು ಹೇಳಿದ್ದ. ಆ ಪಾಂಡವರಲ್ಲಿ ಅರ್ಜುನ ಎಂದರೆ ಕೃಷ್ಣನಿಗೆ ಹೆಂಡತಿ, ಮಕ್ಕಳು ಬಾಂಧವರು ಇವರೆಲ್ಲರಿಗಿಂತಲೂ ಮಿಗಿಲು. ಅರ್ಜುನನಲ್ಲಿ ತನ್ನ ಸ್ನೇಹ ಶಾಶ್ವತವಾಗಿರಲಿ ಎಂದು ಈಶ್ವರನಲ್ಲಿ ವರ ಬೇಡಿಕೊಂಡವ ಆತ. ತಾನೇ ಅಪೇಕ್ಷಿಸಿ ಪಾರ್ಥಸಾರಥಿಯಾದವ. ಅಂತಹ ಕೃಷ್ಣನೂ ಯುದ್ಧವೆನ್ನುವದು ಯಾವಕಾರಣಕ್ಕೂ ಒಳ್ಳೆಯದಲ್ಲ ಎಂದು ಅಂದುಕೊಂಡವ. ಆತ ಈ ಮಹಾ ಸಂಭಾವ್ಯ ಸಂಗ್ರಾಮವನ್ನು ತಪ್ಪಿಸಲು ಪ್ರಾಮಾಣಿಕವಾದ ಪ್ರಯತ್ನವನ್ನು ಮಾಡಿರುತ್ತಾನೆ. ಆತ ದುರ್ಯೋಧನನಿಗೆ ʻತ್ವಾಮೇವ ಸ್ಥಾಪಯಿಷನ್ತಿ ಯೌವರಾಜ್ಯೇ ಮಹಾರಥಾಃ I ಮಹಾರಾಜ್ಯೇ ಪಿತರಂ ಧೃತರಾಷ್ಟ್ರಂ ಜನೇಶ್ವರಮ್ IIʼ (ಮ. ಭಾ. ಉದ್ಯೋಗ ಪರ್ವ – 124-60) “ಮಹಾರಥರಾದ ಪಾಂಡವರು ನಿನ್ನನ್ನೇ ಯೌವರಾಜನನ್ನಾಗಿಯೂ ದೃತರಾಷ್ಟ್ರನನ್ನು ಮಹಾರಾಜನನ್ನಾಗಿಯೂ ನಿಯೋಜಿಸುತ್ತಾರೆ ಎಂದು ಸಂಧಾನಕಾರ್ಯವನ್ನು ವಿಫಲಗೊಳಿಸಬೇಡʼʼ ಎಂದು ಸಾರಿ ಸಾರಿ ವಿವೇಕವನ್ನು ಹೇಳಿದ್ದಾನೆ. ಯಾರ ವಿವೇಕವೂ ನಾಟದ ದುರ್ಯೋಧನ ಯುದ್ಧಕ್ಕೇ ಆತುಕೊಂಡಿದ್ದಾನೆ.

ಯುದ್ಧಕ್ಕೆ ಪಾಂಡವರು ಮತ್ತು ಕೌರವರು ತಮ್ಮ ಅಂತಿಮ ಹಣಾಹಣಿಗಾಗಿ ಎದುರುಬದುರು ನಿಂತಿದ್ದಾರೆ. ಮಾರ್ಗಶೀರ್ಷ ಶುದ್ಧ ಏಕಾದಶಿಯ ದಿವಸ ಅದು. ಸಂಧಾನ ಮಾಡಿಕೊಳ್ಳಿ ಎಂದ ಕೃಷ್ಣ ನಂತರದಲ್ಲಿ ಯುದ್ಧವೇ ಅಂತಿಮ ವಿಕಲ್ಪವಾದಾಗ ದಿಟ್ಟ ಧೋರಣೆಯನ್ನು ತೆಗೆದುಕೊಳ್ಳುತ್ತಾನೆ. ಧೃತರಾಷ್ಟ್ರನಿಗೆ ಯುದ್ಧ ಬೇಕು, ಅದನ್ನು ನೋಡುವೆಯೋ ದಿವ್ಯದೃಷ್ಟಿ ನೀಡುವೆ ಎಂದು ವ್ಯಾಸರು ಕೇಳಿದರೆ ನಿರಾಕರಿಸುತ್ತಾನೆ. ದಿವ್ಯದೃಷ್ಟಿ ಸಿಕ್ಕಿದ್ದರೆ ಆತನ ಧೋರಣೆ ಬದಲಾಗುತ್ತಿತ್ತೇನೋ. ತನ್ನ ಮಕ್ಕಳ ಜನನವನ್ನೂ ನೋಡದ ಕುರುಡನಿಗೆ ಮರಣವನ್ನು ನೋಡುವ ಧೈರ್ಯ ಸಾಲುವದಿಲ್ಲ. ಅದನ್ನೇ ಆತ “ನ ರೋಚಯೇ ಜ್ಞಾತಿವಧಂ ದ್ರಷ್ಟುಂ ಬ್ರಹ್ಮರ್ಷಿಸತ್ತಮ I ಯುದ್ಧಮೇತತ್ತ್ವಶೇಷೇಣ ಶ್ರುಣುಯಾಂ ತವ ತೇಜಸಾ” ಜ್ಞಾತಿವಧೆಯನ್ನು ಕಣ್ಣಿನಿಂದ ನೋಡಲಾರೆ; ಆದರೆ ಕೇಳುವ ಕುತೂಹಲ ಖಂಡಿತವಾಗಿಯೂ ಉಂಟು. ಹಾಗಾಗಿ ಆ ದೃಷ್ಟಿ ಸಂಜಯನಿಗೆ ದೊರಕುವಂತೇ ವರ ಕೇಳಿದ. ಸಾಯುವದು ತನ್ನ ಮಕ್ಕಳು ಎನ್ನುವ ಅಳಕು ಅವನಮನಸ್ಸಿನಲ್ಲಿ ಭಯವನ್ನುಂಟುಮಾಡಿದೆ, ಅದನ್ನು ಉದ್ಯೋಗ ಪರ್ವದಲ್ಲಿ ಆತ ತೋರಿಸಿಕೊಂಡಿದ್ದಾನೆ. ಆದರೂ ಅದನ್ನು ಜ್ಞಾತಿವಧೆ ಎನ್ನುವದರ ಮೂಲಕ ಪಾಂಡವರ ಸಾವನ್ನು ತನ್ನ ಮನಸ್ಸಿನಲ್ಲಿ ಬಯಸುತ್ತಿದ್ದಾನೆ.

ಇದನ್ನೂ ಓದಿ | ಧವಳ ಧಾರಿಣಿ ಅಂಕಣ | ಮಾತೃತ್ವ ಮತ್ತು ಮಿತ್ರೆಯಾಗಿ ಸ್ಥಿತಪ್ರಜ್ಞತೆಯನ್ನು ತೋರಿದ ಮಹಾರಾಣಿ ಸುಮಿತ್ರೆ

ಅನಾಹುತವನ್ನು ನೋಡುವದಕ್ಕೆ ಧೈರ್ಯಬೇಕು. ಕೇಳುವದಕ್ಕೆ ಅಷ್ಟೆಲ್ಲಾ ಧೈರ್ಯ ಬೇಕಿಲ್ಲ. ಹಾಗಾಗಿ ಆತ ಈ ದೃಷ್ಟಿ ಸಂಜಯನಿಗೆ ದೊರಕುವಂತೆ ವರ ಕೇಳಿದ. ಈ ಕಾರಣದಿಂದಾಗಿಯೇ ಸಾರಥಿಯಿಂದ ಬೋಧಿಸಿದ ಸರ್ವೋಪನಿಷತ್ತಿನ ಸಾರ ಸಾರಥಿಯ ಮೂಲಕವಾಗಿಯೇ ಪ್ರಪಂಚಮುಖಕ್ಕೆ ತಿಳಿಯುವಂತಾದುದು. ಮಹಾಭಾರತವನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ದಿವ್ಯದೃಷ್ಟಿ ಎಂದರೆ ತನ್ನದೇ ಆದ ವಾರ್ತಾವಾಹಕರ ಮೂಲಕವಾಗಿ ಶೀಘ್ರವಾಗಿ ರಣಭೂಮಿಯ ವಿಷಯ ತಿಳಿಯುವಂತೆ ಸಂಜಯ ಮಾಡಿಕೊಂಡಿರುವ ವ್ಯವಸ್ಥೆಯಾಗಿತ್ತು. ಆದರೆ ಕಾವ್ಯದ ಸೌಂದರ್ಯವನ್ನು ಆಸ್ವಾದಿಸಲು ದಿವ್ಯವಾದ ದೃಷ್ಟಿ ಎಂದಿಟ್ಟುಕೊಳ್ಳವದೇ ಸೊಗಸಾಗಿರುತ್ತದೆ.

ಮೊದಲೇ ತಿಳಿಸಿದ Maladptive behavior ಬೀಜ ದೃತರಾಷ್ಟ್ರನಲ್ಲಿ ಕಾಣಿಸುವದು ಯುದ್ಧಭೂಮಿಯಲ್ಲಲ್ಲ. ಅದು ಕೌರವಾದಿಗಳು ಹುಟ್ಟುವದಕ್ಕಿಂತ ಮೊದಲೇ ಕಾಣಿಸಿಕೊಂಡಿದೆ. ಶತಶೃಂಗ ಪರ್ವತದಲ್ಲಿ ಪಾಂಡುವಿಗೆ ಮಕ್ಕಳಾದ ವಿಷಯ ಅರಮನೆಗೆ ತಿಳಿದಿದೆ. ಈ ವಿಷಯ ತಿಳಿದ ಗಾಂಧಾರಿ ತನ್ನ ಗರ್ಭವನ್ನು ವಿಷಾದದಿಂದ ಕುಕ್ಕಿಕೊಳ್ಳುವದೂ ಸಹ ತನ್ನ ಮಗು ಅಧಿಕಾರದಿಂದ ವಂಚಿತನಾಗುತ್ತಾನಲ್ಲ ಎನ್ನುವ ಮನೋಭಾವನೆಯಿಂದಲೇ. ವ್ಯಾಸರ ಘೃತಭಾಂಡದ ಅನುಗ್ರಹದಿಂದ ನಂತರದಲ್ಲಿ ಕೌರವಾದಿಗಳ ಜನನವಾಗುತ್ತದೆ. ಆ ಸಂದರ್ಭದಲ್ಲಿ ಅನೇಕ ಅಪಶಕುನಗಳಾಗುತ್ತವೆ. ಎಷ್ಟೆಂದರೂ ಮಗ ಜನಿಸಿದ ಸಂಭ್ರಮದಲ್ಲಿರುವ ದೊರೆ ತನ್ನ ಮಂತ್ರಿಗಳನ್ನು ಮತ್ತು ವಿದುರನನ್ನೂ ಕರೆಯಿಸಿ ಹೇಳುವ ಮಾತು ತುಂಬಾ ಮಹತ್ವದ್ದು. ಇನ್ನೂ ಅರಿಯದ ತನ್ನ ಮಗು ಜನಿಸಿದ ಕೂಡಲೇ ಆತ ಮಂತ್ರಿಗಳಲ್ಲಿ ಕೇಳುವ ಮಾತು “ರಾಜಕುಮಾರರಲ್ಲಿಯೇ ಹಿರಿಯನಾದ ಯುಧಿಷ್ಠಿರನು ಚಂದ್ರಕುಲದ ವಂಶವರ್ಧಕನೆನ್ನುವದು ನಿಶ್ಚಯ. ಆತನಿಗೆ ಈ ರಾಜ್ಯಸಿಂಹಾಸನವೂ ಸೇರಲೇ ಬೇಕಾಗುತ್ತದೆ” ಎಂದಿದ್ದಾನೆ. ಮುಂದುವರಿದು “ತ್ವನನ್ತರಸ್ತಸ್ಮಾದಪಿ ರಾಜಾ ಭವಿಷ್ಯತಿ ಏತದ್ವಿಬ್ರೂತ ಮೇ ತಥ್ಯಂ ಯದತ್ರ ಭವಿತಾ ಧ್ರುವಮ್” (ಮ. ಭಾ. ಸಂ ಪ. 115-32) ಅವನ ನಂತರ ಜನಿಸಿರುವ ಈ ನನ್ನ ಮಗನೂ ರಾಜನಾಗಲೂ ಸಾಧ್ಯವಿದೆಯೇ ಎನ್ನುವ ಆಪ್ತಾಲೋಚನೆಯನ್ನು ಮಾಡುತ್ತಾನೆ. ಅಧಿಕಾರದ ಮೋಹವೆಂದರೆ ಹೀಗೆ. ಯಾವುದೋ ಕಾಲದಲ್ಲಿ ತನ್ನ ಅಧಿಕಾರ ಹೋಗಬಹುದೆನ್ನುವ ಕಾರಣಕ್ಕೆ ಆ ಮೊದಲೇ ಚಿಂತಿಸಿದ ಧೃತರಾಷ್ಟ್ರನ ಭಿತ್ತಿಯಲ್ಲಿಯೇ ಅಸಮರ್ಪಕ ನಡವಳಿಕೆಗಳ ಹುಟ್ಟು ಅಡಗಿದೆ. ತನ್ನ ಹೆಂಡತಿಯೇ ಮೊದಲೇ ಗರ್ಭವತಿಯಾದರೂ ಯುಧಿಷ್ಠರನೇ ಮೊದಲು ಜನಿಸಿದುದಕ್ಕೆ ಅಸಹನೆಯಿದೆ.

ಇದನ್ನೂ ಓದಿ | ಧವಳ ಧಾರಿಣಿ ಅಂಕಣ | ರಾಮಾಯಣದಲ್ಲಿ ಗುಣಗೌರವಗಳಿಗೆ ಮೆರುಗನ್ನಿತ್ತ ಪಾತ್ರ ಸುಮಿತ್ರೆ

ಅರಮನೆಗೆ ಬಂದು ಸೇರಿದ ಕುಂತಿಯ ಮಕ್ಕಳನ್ನು ಭೀಷ್ಮಾದಿಗಳು ಒಪ್ಪಿದರೂ ಧೃತರಾಷ್ಟ್ರನ ಅಂತರಂಗದಲ್ಲಿ ಇವರು ಪಾಂಡವರು ಎನ್ನುವ ಬೇಧವಿತ್ತು ಎನ್ನುವದನ್ನು ವ್ಯಾಸರು ಇಲ್ಲಿ ಸೂಕ್ಷ್ಮವಾಗಿ ವಿವರಿಸುತ್ತಾರೆ. ಕೌರವ ವಂಶದಿಂದ ಪಾಂಡವರು ಹೊರಗಿನವರು ಎನ್ನುವ ಬೀಜ ಅರಮನೆಯಲ್ಲಿಯೇ ಮೊಳೆತಿತ್ತು. ಐದು ಸರೋವರಗಳಿಂದ ಆವೃತವಾದ ಕುರುಕ್ಷೇತ್ರ ಪರುಶರಾಮರು ಕ್ಷತ್ರಿಯರ ಸಂಹಾರಮಾಡಿದ ಮೇಲೆ ತನ್ನ ಕೊಡಲಿಯನ್ನು ತೊಳೆದುಕೊಂಡ ಸ್ಥಾನ. ಯುದ್ಧಭೂಮಿಯಲ್ಲಿ ಭಾವನೆಗಳು ಕುರುಡಾಗಿರುತ್ತದೆ. ಮಾನವೀಯ ಸಂಬಂಧಗಳು ಕಾಣಿಸುವದಿಲ್ಲ, ಹೇಗಾದರೂ ಸರಿ ಎದುರಾಳಿಯನ್ನು ಸೋಲಿಸಲೇ ಬೇಕೆನ್ನುವ ಕ್ರೌರ್ಯದ ಯುದ್ಧೋನ್ಮಾದ ಅಟ್ಟಹಾಸದ ನಗೆಯನ್ನು ಬೀರುತ್ತಿರುತ್ತದೆ. ರಣಭೂಮಿಯಲ್ಲಿ ಇರುವ ಮುಖಗಳು ತಾನು ಮತ್ತು ತನ್ನದಲ್ಲ. ತನ್ನದಲ್ಲವೆನ್ನುವದೆಲ್ಲವೂ ಅಳಿಯಬೇಕೆನ್ನುವ ಮನಸ್ಥಿತಿಯ ವೈಭವೀಕರಣವೇ ಯುದ್ಧವಾಗಿರುತ್ತದೆ. ಕೇವಲ ಕಣ್ಣಲ್ಲ; ಮಾನವೀಯತೆಯೇ ಕುರುಡಾಗಿರುವ ಕ್ಷೇತ್ರದಲ್ಲಿ ಕುರುಡುದೊರೆ ಯುದ್ಧದ ವಾರ್ತೆಯನ್ನು ಕೇಳುಲು ಉತ್ಸುಕನಾಗಿದ್ದಾನೆ, ಕಣ್ಣು ದೃಶ್ಯವನ್ನು ಯಥಾವತ್ತಾಗಿ ನೋಡುತ್ತದೆ. ಆದರೆ ಕಿವಿಯಿಂದ ನಮಗೆ ಬೇಕಾದುದನ್ನು ಕೇಳಿ ಬೇಡವಾದುದನ್ನು ಕೇಳಿಸಿಕೊಳ್ಳದಂತೆ ಇರಲು ಸಾಧ್ಯ. ಹಾಗಾಗಿಯೇ ದೊರೆಗೆ ವಿದುರನ ನೀತಿಗಿಂತ ಕಣಿಕನ ಮಾತು ಇಷ್ಟವಾಯಿತು.

ಮಾಮಕಾಃ ಪಾಂಡವಾಶ್ಚೈವ ಎನ್ನುವಲ್ಲಿ ತನ್ನ ಮತ್ತು ತನ್ನದಲ್ಲದ ಎನ್ನುವ ಭಾವನೆಯನ್ನು ಸ್ಪಷ್ಟವಾಗಿ ಕಾಣಬಹುದು. ನಾನು ಎನ್ನುವದು ಹೋದರೆ ಹೋಗಬಹುದು ಎನ್ನುವ ಕನಕದಾಸರ ಮಾತನ್ನು ಇಲ್ಲಿ ನೆನಪಿಸಿಕೊಂಡರೆ ವ್ಯಾಸರು ಭಾರತ ಯುದ್ಧಕ್ಕೆ ಭೂಮಿಕೆಯನ್ನು ಹಾಕಿದ್ದೇ ದುರ್ಯೋಧನನ ಜನನದ ಕಾಲಕ್ಕೆ ಎನ್ನುವದು ಸ್ಪಷ್ಟವಾಗುತ್ತದೆ. ಗೀತೆಯ ಮೊಟ್ಟ ಮೊದಲ ಶ್ಲೋಕ ಆರಂಭವಾಗುವದೇ ಕಣ್ಣಿಲ್ಲದವನ ಪ್ರಶ್ನೆಯಿಂದ. ಧೃತರಾಷ್ಟ್ರನಿಗೆ ಹೊರಗಣ್ಣಷ್ಟೇ ಅಲ್ಲ, ಒಳಗಣ್ಣೂ ತನ್ನವರು ಎನ್ನುವ ಭಾವನೆಯಿಂದ ಕುರುಡಾಗಿತ್ತು. Maladptive behavior ದೃಷ್ಟಿಯಿಂದ ನೋಡಿದರೆ ಗೀತೆಯ ಮೊದಲ ಅಧ್ಯಾಯ ವಿಷಾದಯೋಗಕ್ಕಿಂತಲೂ ಅಸಮರ್ಪಕ ಮನೋಭಾವವದ ನಿರ್ವಹಣೆಯ ಕೊರತೆಯನ್ನು ಕೌರವನ ಪಾಳಯದಲ್ಲಿ ನೋಡಬಹುದಾಗಿದೆ. ಜಗತ್ತನ್ನೇ ಕಾಣದ ದೊರೆಗೂ ಅಧಿಕಾರದ ವ್ಯಾಮೋಹ ಒಂದೆಡೆ ಆದರೆ ಆತನ ಮಗ ದುರ್ಯೋಧನನದ್ದು ಮತ್ತೊಂದು ರೀತಿ ಎನ್ನುವದನ್ನು ಎರಡನೆಯ ಶ್ಲೋಕ ವಿವರಿಸುತ್ತದೆ. ಅದನ್ನು ಮುಂದಿನ ಭಾಗದಲ್ಲಿ ನೋಡೋಣ.

ಇದನ್ನೂ ಓದಿ | ಧವಳ ಧಾರಿಣಿ ಅಂಕಣ | ಭೋಗ ಮೀರಿದ ದೊರೆತನದ ಯೋಗ ಕಾಣಿಸಿದವನು

Exit mobile version