Site icon Vistara News

ಧೀಮಹಿ ಅಂಕಣ | ಪ್ರಾಚೀನ ಭಾರತದ ಸಂಪತ್ತು ಲೂಟಿಯಾಗಿರಬಹುದು, ಜ್ಞಾನವನ್ನು ಕದಿಯಲಾಗಲಿಲ್ಲ!

dhimahi column

ಈ ನಮ್ಮ ದೇಶ ಬೆಳೆದು ಬಂದದ್ದೇ ಜ್ಞಾನ ಪರಂಪರೆಯ ಮೇಲೆ. ನಮ್ಮಲ್ಲಿ ಹೇರಳವಾದ ಸಂಪತ್ತಿತ್ತು ಎಂದು ಬೀಗಿದವರಲ್ಲ. ಮೌಖಿಕ ಪರಂಪರೆಯನ್ನು ಉಳಿಸಿ ಬೆಳಿಸಿಕೊಂಡು ಬಂದವರು. ವಿದೇಶೀಯನೊಬ್ಬ ಭಾರತದ ಮೇಲೆ ದಾಳಿ ಮಾಡಿದ, ಆಕ್ರಮಣ ಮಾಡಿದ ಅಂದರೆ ಅದು ಅವನಿಗೆ ಸಂಪತ್ತಿನ ಮೇಲಿನ ಮೋಹ ಇತ್ತು, ಅದು ಭಾರತದಲ್ಲಿ ಸುಲಭವಾಗಿ ಸಿಗುತ್ತದೆ ಎನ್ನುವ ಮನವರಿಕೆ ಇತ್ತು. ಆದರೆ ಭಾರತೀಯ ಬೌದ್ಧಿಕತೆಯ ನಾಶ ಇಂದಿಗೂ ಸಾಧ್ಯವಾಗದಿರುವುದಕ್ಕೆ ಕಾರಣ ನಮ್ಮ ಸಾಮಾಜಿಕ ಮತ್ತು ರಾಜಕೀಯ ಬುನಾದಿ ಬೆಳೆದು ಬಂದ ಬಗೆ ಹಾಗಿತ್ತು. ಅದನ್ನೇ ಸ್ವಲ್ಪ ಮೆಲುಕು ಹಾಕಿರುವೆ.

ಹಿಂದೆ ಉಶೀನರ ಎನ್ನುವ ರಾಜರ್ಷಿಯೊಬ್ಬನಿದ್ದ. ಅವನ ಮಗ ಅಥವಾ ವಂಶದವನೇ ಶಿಬಿ ಎನ್ನುವವನು ವೈದಿಕ ಸೂಕ್ತ ದ್ರಷ್ಟಾರನಾಗಿದ್ದ. ಅವನ ಜೊತೆಗೆ ಗುರುತಿಸಿಕೊಂಡವರಲ್ಲಿ ಕಾಶಿಯ ಜನತೆಗೆ ರಾಜನಾಗಿದ್ದ ಪ್ರತರ್ದನ ಎನ್ನುವವನು. ಈತ ಸಹ ಸೂಕ್ತದ ಋಕ್ಕೊಂದಕ್ಕೆ ದ್ರಷ್ಟಾರನಾಗಿದ್ದ. ಇವರಿಬ್ಬರಲ್ಲದೇ ರೋಹಿದಶ್ವ ಎನ್ನುವವನ ಮಗನಾದ ವಸುಮನಾ ಎನ್ನುವ ಮೂರು ಜನ ಸೇರಿ ‘ಉತ್ತಿಷ್ಠತ’ ಎನ್ನುವ ಸೂಕ್ತವನ್ನು ರಚಿಸಿದ್ದಾರೆ. ಈ ಸೂಕ್ತದಲ್ಲಿ ಎರಡನೇ ಮಂತ್ರದ ದ್ರಷ್ಟಾರ ಕಾಶೀರಾಜನಾದ ಪ್ರತರ್ದನ ಎನ್ನುವವನು. ಈ ಪ್ರತರ್ದನ ತನ್ನ ಕಾಲದ ಅಂದರೆ ಈ ಸೂಕ್ತದ ಕಾಲದ ಸಾಮಾಜಿಕ ವ್ಯವಸ್ಥೆಯನ್ನು ಸ್ವಲ್ಪ ಪರಿಚಯಿಸುತ್ತಾನೆ. ‘ಕುಲಪಾ ನ ವ್ರಾಜಪತಿಂ’ ಎನ್ನುವ ಪದವನ್ನು ತನ್ನ ಮಂತ್ರದಲ್ಲಿ ಬಳಸುತ್ತಾನೆ.

ಒಂದೇ ವಂಶದಲ್ಲಿ ಹುಟ್ಟಿದ ಮಕ್ಕಳು ತಮ್ಮ ವಂಶದ ಯಜಮಾನನನ್ನು ಉಪಚರಿಸುವ ಕುರಿತು ಹೇಳಲಾಗಿದ್ದರೂ, ಕುಲಪಾ ಎನ್ನುವುದು ಸಾಮಾಜಿಕ ವ್ಯವಸ್ಥೆಯಲ್ಲಿ ಒಂದೇ ಕುಲದಲ್ಲಿ ಜನಿಸಿದ ಜನಾಂಗದ ಕುರಿತಾಗಿ ಹೇಳಲಾಗಿದೆ. ಇನ್ನು ವ್ರಾಜಪತಿ ಎನ್ನುವುದು ಕುಲದ ಯಜಮಾನರ ಕುರಿತಾಗಿ ಹೇಳಲಾಗಿದೆ. ಅಂದರೆ ಇಲ್ಲಿ ಒಂದು ಪ್ರದೇಶದ ಜನತೆ ಮತ್ತು ಅದರ ಯಜಮಾನ ಎಂದು ನಾವು ತೆಗೆದುಕೊಳ್ಳಬಹುದಾಗಿದೆ. ಒಂದು ಮನೆಯನ್ನು ಗೃಹ ಎಂದು ಆ ಕಾಲದಲ್ಲಿ ತೆಗೆದುಕೊಂಡು ಆ ಮನೆಯಲ್ಲಿರುವವರೆಲ್ಲ ಕುಲಪರು. ಮತ್ತು ಮನೆಯ ಯಜಮಾನ ವ್ರಾಜಪತಿ ಎನ್ನಿಸಿಕೊಂಡಿದ್ದ. ಸಾಮಾಜಿಕ ವ್ಯವಸ್ಥೆಯಲ್ಲಿ ಜವಾಬ್ದಾರಿಯ ಸ್ಥಾನವನ್ನು ಗುರುತಿಸಲಾಗಿತ್ತು. ಇನ್ನು ಹೇಗೆ ಯಾಜಮಾನ್ಯ ದೊರೆಯುತ್ತಿತ್ತು ಎನ್ನುವುದನ್ನು ಗಮನಿಸುವುದಾದರೆ ಮನುವಿನ ವಾಕ್ಯ ನೋಡಬೇಕು.

ಮನುವಿನ ಮಗನಾದ ನಾಭಾನೇದಿಷ್ಟ ಎನ್ನುವ ಋಷಿಯು ಸಾವರ್ಣಿ ಎನ್ನುವ ಹೆಸರಿನ ರಾಜನ ದಾನಸ್ತುತಿ ಮಾಡುವ ಋಕ್ಕೊಂದು ಋಗ್ವೇದದ ೧೦ನೇ ಮಂಡಲದ ೬೨ನೇ ‘ಯೇ ಯಜ್ಞೇನ’ ಎನ್ನುವ ಸೂಕ್ತ ಎನ್ನಿಸಿಕೊಂಡಿದೆ. ಇಲ್ಲಿ ‘ಸಹಸ್ರದಾ ಗ್ರಾಮಣೀರ್ಮಾ’ ಎಂದು ಬರುತ್ತದೆ. ಇದು ದಾನಸ್ತುತಿಯಾದುದರಿಂದ ಇಲ್ಲಿ ದಾನವನ್ನೇ ಹೇಳಿರುವುದಾದರೂ ಸಹ ಸಂಪತ್ತನ್ನು ಹೊಂದಿರುವ ಮತ್ತು ಆ ಸಂಪತ್ತನ್ನು ದಾನ ಮಾಡುವವನು ಗ್ರಾಮವೊಂದನ್ನು ಕಟ್ಟಿ ಬೆಳೆಸಿ ಆ ಗ್ರಾಮಕ್ಕೆ ಪ್ರಮುಖ ಎಂದೆನಿಸಿಕೊಳ್ಳುತ್ತಾನೆ. ಆತ ಜನರಿಗೆ ಮಾರ್ಗದರ್ಶಕನಾಗುತ್ತಾನೆ ಎನ್ನುವ ತಾತ್ಪರ್ಯವನ್ನು ಮಂತ್ರವೊಂದು ಕೊಡುತ್ತದೆ. ಅಂದರೆ ಒಂದು ಕಾಲಕ್ಕೆ ಈ ಭೂಮಿಯಲ್ಲಿ ದಾನ ಮಾಡಲು ಸಮರ್ಥನಾದವನು ಈ ಸಾಮಾಜಿಕ ವ್ಯವಸ್ಥೆಗೆ ಜವಾಬ್ದಾರನಾಗಿ ಮಾರ್ಗದರ್ಶಕನೆನ್ನಿಸಿಕೊಳ್ಳುತ್ತಿದ್ದ ಎನ್ನುವುದು ತಿಳಿದು ಬರುತ್ತದೆ. ಅಂದರೆ ದಾನಕ್ಕೆ ಸಾಮರ್ಥ್ಯ ಬರಲು ಆರ್ಥಿಕ ಸದೃಢತೆ ಇರಬೇಕು ಎನ್ನುವುದು ಇಲ್ಲಿ ಸ್ಪಷ್ಟವಾಗುತ್ತದೆ. ಹೀಗೇ ಆರ್ಥಿಕವಾಗಿ ಶ್ರೀಮಂತಿಕೆ ಮಾತ್ರವೇ ಗ್ರಾಮದ ಪ್ರಮುಖನಾಗಲು ಸಾಕೇ ಎನ್ನುವುದನ್ನು ವತ್ಸ ಮತ್ತು ದಕ್ಷಿಣಾ ಎನ್ನುವ ಋಷಿಕೆ ಕಟ್ಟಿಕೊಡುತ್ತಾರೆ.

ಇದನ್ನೂ ಓದಿ | ಧೀಮಹಿ ಅಂಕಣ | ಕಾಲದೇಶದ ಸ್ಮರಣೆಯ ಮಹಾಸಂಕಲ್ಪ

ಅಂಗಿರಸ ವಂಶದ ವತ್ಸ ಮತ್ತು ಪ್ರಜಾಪತಿಯ ಮಗಳಾದ ದಕ್ಷಿಣಾ ಎನ್ನುವ ಋಷಿಕೆಯು ಸೇರಿಕೊಂಡು ಋಗ್ವೇದ ಹತ್ತನೇ ಮಂಡಲದ ೧೦೭ನೇ ಸೂಕ್ತಕ್ಕೆ ದ್ರಷ್ಟಾರರಾಗುತ್ತಾರೆ. ಇವರು ತಮ್ಮ ಸೂಕ್ತದ ಋಕ್ಕೊಂದರಲ್ಲಿ ‘ದಕ್ಷಿಣಾವಾನ್ ಗ್ರಾಮಣೀರಗ್ರಮೇತಿ’ ಎನ್ನುತ್ತಾರೆ. ದಕ್ಷಿಣೆಯನ್ನು ಕೊಡಲು ಸಾಮರ್ಥ್ಯ ಹೊಂದಿರುವವನು ಎತ್ತರಕ್ಕೆ ಬೆಳೆದು ಗ್ರಾಮಣಿ ಎನ್ನಿಸಿಕೊಳ್ಳುತ್ತಾನೆ ಎನ್ನುವುದಾಗಿದೆ. ಅಂದರೆ ಸಂಪತ್ತನ್ನು ಹೊಂದಿದ್ದು, ಅದನ್ನು ವ್ಯಯಿಸಲು ಸಮರ್ಥನಾದವನು ಗ್ರಾಮದ ಮುಖ್ಯನಾಗುತ್ತಾನೆ. ಒಂದು ಸಾಮಾಜಿಕ ವ್ಯವಸ್ಥೆಯಲ್ಲಿ ಗಣ್ಯತೆಯನ್ನು ಪಡೆದುಕೊಳ್ಳುತ್ತಾನೆ ಎನ್ನುವುದು ಭಾಷ್ಯಕಾರರ ಅಭಿಮತ. ಅಂಥ ವ್ಯಕ್ತಿಯ ಕುರಿತು ಮುಂದಿನ ಋಕ್ಕಿನಲ್ಲಿ ಇನ್ನೂ ವಿಶೇಷವಾಗಿ ಹೇಳುತ್ತಾ, ಗ್ರಾಮಣಿಯ ಅರ್ಹತೆಯನ್ನು ಹೇಳಲಾಗಿದೆ. ‘ತಮೇವ ಋಷಿಂ’ ಎನ್ನುತ್ತಾರೆ ಅಂದರೆ ಆ ಗ್ರಾಮಣಿಯೇ ಋಷಿಯಾಗಿರುತ್ತಾನೆ. ಅವನದ್ದು ಋಷಿ ಸದೃಶ ಜೀವನ ಕ್ರಮವಿರುತ್ತದೆ. ಅಂಥವನನ್ನೇ ಬ್ರಾಹ್ಮಣರು ಎಂದು ಪ್ರಾಜ್ಞರು ತಿಳಿಯುತ್ತಾರೆ. ಆತ ಸಾಮಗಾನ ಮಾಡುವ ಸಾಮಗನಾಗಿರುತ್ತಾನೆ. ತನ್ನ ಪ್ರದೇಶಕ್ಕೆ ಆಪತ್ತು ಒದಗಿದಾಗ ಅದನ್ನು ನಿವಾರಿಸಿಕೊಳ್ಳಲು ಶಸ್ತ್ರ ಮಂತ್ರಗಳನ್ನು ಅಧ್ಯಯನ ಮಾಡಿದ ಪಾಠಕನಾಗಿರುತ್ತಾನೆ ಎನ್ನುವುದು ಈ ಋಕ್ಕಿನ ಮೊದಲಾರ್ಧದ ಅಭಿಪ್ರಾಯ. ಈತ ಅಗ್ನಿ, ವಾಯು ಮತ್ತು ಸೂರ್ಯನ ಕುರಿತಾಗಿ ಮತ್ತು ಅವರಿಂದ ಆಗುವ ಸಹಕಾರವನ್ನು ತಿಳಿದವನಾಗಿರುತ್ತಾನೆ ಎನ್ನುವಲ್ಲಿಗೆ, ಈ ಸೂಕ್ತ ದ್ರಷ್ಟಾರರ ಕಾಲಕ್ಕೆ ಈ ನೆಲದ ಸಾಮಾಜಿಕ ಮತ್ತು ರಾಜಕೀಯ ಆಡಳಿತ ಹೇಗಿತ್ತು ಎನ್ನುವ ಸ್ಪಷ್ಟ ಕಲ್ಪನೆ ಸಿಗುತ್ತದೆ.

ಅಂದರೆ, ಒಬ್ಬ ಸಮರ್ಥ ಆಡಳಿತಗಾರನಾಗಲು ಆತ ವಿದ್ಯಾವಂತನಾಗಿ ಅಧ್ಯಯನ ಮತ್ತು ಅಧ್ಯಾಪನಗಳಿಂದ ಭೂತ ಭವಿಷ್ಯ ವರ್ತಮಾನಗಳನ್ನು ತಿಳಿದಿರಬೇಕು, ಜೊತೆಗೆ ಉತ್ತಮ ಸಂಸ್ಕಾರ ಹೊಂದಿ ಸಾಂಸ್ಕೃತಿಕವಾಗಿಯೂ ಗುರುತಿಸಿಕೊಂಡಿರಬೇಕು, ತನ್ನ ಜನಪದದ ಜನಾಂಗಕ್ಕೆ ವಿರೋಧಿಗಳ ಆಕ್ರಮಣವಾಗದಂತೆಯೂ ನಿಗಾ ವಹಿಸಬೇಕಿತ್ತು. ಇವೆಲ್ಲದರ ಜೊತೆಗೆ ಪ್ರಾಕೃತಿಕ ಆಗುಹೋಗುಗಳನ್ನು ಗಮನಿಸಬೇಕಿತ್ತು. ಆತ ಮಾತ್ರ ಗ್ರಾಮಣಿ ಎಂದು ಅನ್ನಿಸಿಕೊಳ್ಳುತ್ತಿದ್ದ. ಇಲ್ಲಿ ಗ್ರಾಮ ಎನ್ನುವುದು ವ್ಯವಸ್ಥೆಯಾಗಿದ್ದರೆ ಗ್ರಾಮಣಿ ಮಾರ್ಗದರ್ಶಕನಾಗಿರುತ್ತಿದ್ದ. ಈ ಗ್ರಾಮಣಿಯ ಮುಂದಿನ ಹಂತವೇ ಮಹಾಜನಪದದ ಮುಖ್ಯಸ್ಥ ಎನ್ನುವುದು ರಾಜ ಎನ್ನುವ ಪದದಿಂದ ಗುರುತಿಸಲ್ಪಡುತ್ತದೆ ಎನ್ನುವುದನ್ನು ಸೂಕ್ಷ್ಮವಾಗಿ ತಿಳಿಸುವುದು ಕಣ್ವ ಎನ್ನುವ ಋಷಿ.

ಹಿಂದೆ ಘೋರ ಎನ್ನುವ ಋಷಿಯೊಬ್ಬನಿದ್ದ, ಈತನ ಮಗ ಕಣ್ವ ಎನ್ನುವವನು. ಈತ ಮರುತನನ್ನು ಸ್ತುತಿಸುವ ಸೂಕ್ತವೊಂದಿದೆ. ಅದರಲ್ಲಿ ಜುಜುರ್ವಾನ್ ಇವ ವಿಶ್ಪತಿಃ ಎನ್ನುವುದಾಗಿ ಬರುತ್ತದೆ. ಅಂದರೆ ವಯೋ ಸಹಜವಾದ ಮುದಿತನ ಮತ್ತು ರೋಗಾದಿಗಳಿಂದ ರ್ಜಝರಿತವಾದ ದೇಹ ಹೊಂದಿದ ಪ್ರಜಾಪಾಲಕನಾದ ರಾಜ ಎಂದು ಹೇಳಲಾಗಿದೆ. ಇಲ್ಲಿ ವಿಶ್ ಎನ್ನುವುದು ಜನಾಂಗ, ಅಥವಾ ಪ್ರಜೆಗಳಿಗೆ. ಯಜಮಾನ ಎನ್ನುವ ಅರ್ಥ. ಅಂದರೆ ಜನಾಂಗ ಒಂದರ ವಾಸಸ್ಥಾನದ ಅಧಿಪತಿಯನ್ನು ವಿಶ್ಪತಿ ಎಂದು ಕರೆಯುವುದು ಈ ಸೂಕ್ತದ್ರಷ್ಟಾರನ ಕಾಲದಲ್ಲಿ ಬಳಕೆಗೆ ಬಂದದ್ದು ಗಮನಿಸಬಹುದಾಗಿದೆ. ಇನ್ನು ಇದೇ ವಿಶ್ಪತಿಯನ್ನು ಅಥರ್ವವೇದದ ನಾಲ್ಕನೇ ಕಾಂಡದಲ್ಲಿ ವಿವರಿಸಲ್ಪಟ್ಟಿದೆ. ಅಲ್ಲಿ ಈ ಪದದ ಅರ್ಥ ತುಂಬಾ ಚಿಕ್ಕದಾಗಿ ನನಗೆ ಕಾಣಿಸುತ್ತದೆ. ತೈತ್ತಿರೀಯ ಸಂಹಿತೆ ೨:೧:೩ರಲ್ಲಿ ಬರುವುದೂ ಸಹ ರಾಜನ ಕುರಿತಾಗಿ ಅನ್ನಿಸದಿದ್ದರೂ ಜನಾಂಗದ ಒಂದು ಭಾಗದ ಮುಖ್ಯಸ್ಥ ಹೌದು. ಇನ್ನು ಸಾಮಾಜಿಕ ವ್ಯವಸ್ಥೆಯಲ್ಲಿ ಒಂದು ಕುಲವನ್ನೇ ವಿವರಿಸಿದ್ದು ಸಹ ಸಿಗುತ್ತದೆ.

ಇದನ್ನೂ ಓದಿ | ಧೀಮಹಿ ಅಂಕಣ: ಈ ನೆಲದ ಮೊದಲ ವೈದಿಕ ರಾಷ್ಟ್ರಗೀತೆ ಇದು! ಅಂದಿನ ಆಡಳಿತ ಹೀಗಿತ್ತು

ಋಗ್ವೇದದ ೮ನೇ ಮಂಡಲದ ೬ನೇ ಸೂಕ್ತದಲ್ಲಿ ಕಣ್ವ ಗೋತ್ರದ ವತ್ಸ ಎನ್ನುವ ಮಹರ್ಷಿ ‘ಯಾದ್ವಾನಾಂ’ ಎನ್ನುವ ಪದ ಬಳಕೆಮಾಡಿದ್ದಾರೆ. ಹಿಂದೆ ಪರಶು ಎನ್ನುವ ರಾಜರ್ಷಿ ಇದ್ದ. ಈತನ ಮಗನೇ ತಿರಿಂದಿರ. ಈತನನ್ನು ಕುರಿತು ಹೇಳುವಾಗ ಯಾದ್ವಾನಾಂ ಎನ್ನುವುದನ್ನು ಮಾನವ ಜನಾಂಗವನ್ನೇ ಉದ್ದೇಶಿಸಿ ಹೇಳುತ್ತಾ, ನೂರಾರು ಸಾವಿರಾರು ಸಂಖ್ಯೆಯ ಧನಗಳನ್ನು ನಾನೊಬ್ಬನೇ ಸ್ವೀಕರಿಸುವೆ ಎಂದು ತಿರಿಂದಿರ ಹೇಳುವುದನ್ನು ಗಮನಿಸಿದರೆ, ಮಾನವರೆಲ್ಲರಿಗೂ ಆತನೇ ಅಧಿಪತಿಯಾಗಿದ್ದಿರಬಹುದು. ಇಲ್ಲಿ ಸಾಯಣಾಚಾರ್ಯರು ‘ಯಾದ್ವಾನಾಂ’ ಎನ್ನುವುದನ್ನು ‘ಯದುಕುಲಜಾನಾಂ ಅನ್ಯೇಷಾಂ’ ಎನ್ನುತ್ತಾರೆ. ಯದುಕುಲದವರು ಅಂದರೆ ಪ್ರಾಚೀನ ಯದುಕುಲ ಇದು. ಮುಂದಿನ ಋಕ್ಕಿನಲ್ಲಿ ‘ಯಾದ್ವಂ ಜನಂ’ ಎಂದು ಬಂದಿದ್ದರಿಂದ ಯದುಕುಲಜರು ಅಥವಾ ಯದು ವಂಶೀಯ ಜನಾಂಗ ಎಂದು ಸಹ ತಿಳಿಯಬಹುದು. ವಿಶ್ವಾಮಿತ್ರರಂತೂ ಭರತಜನ, ಭರತಗೋಪ್ತಾ ಎನ್ನುತ್ತಾರೆ. ಪ್ರಸಿದ್ಧವಾದ ದಾಶರಾಜ್ಞ ಯುದ್ಧದಲ್ಲಿ ಈ ಭರತಜನ ಭಾಗವಹಿಸಿದ್ದರು. ಈ ಭರತಜನ ಎಲ್ಲರೂ ವಿಶ್ವಾಮಿತ್ರರ ವಂಶಿಕರು ಎನ್ನಲಾಗುತ್ತದೆ.

ಪ್ರಸಿದ್ಧನಾದ ಪುರುಕುತ್ಸನ ಮಗ ತ್ರಸದಸ್ಯು ಸ್ವತಃ ರಾಜನಾಗಿದ್ದರೂ ರಾಜರ್ಷಿಯಾಗಿ ತಂದೆಯಂತೆಯೇ ಸೂಕ್ತದ್ರಷ್ಟಾರನಾಗಿದ್ದ. ಈತನ ಸೂಕ್ತ ‘ಮಮದ್ವಿತಾ’ ಎಂದು ಪ್ರಸಿದ್ಧವಾಗಿದೆ. ಇಲ್ಲಿ ಈತ ಅದೆಷ್ಟು ಖಚಿತವಾದ ನುಡಿಗಳಿಂದ ರಾಷ್ಟ್ರವನ್ನು ಹೇಳುತ್ತಾನೆಂದರೆ, ‘ಮಮದ್ವಿತಾ ರಾಷ್ಟ್ರಂ ಕ್ಷತ್ರಿಯಸ್ಯ’ ಎನ್ನುತ್ತಾನೆ. ಅಂದರೆ ಈ ಭೂಮಿ ಮತ್ತು ಸ್ವರ್ಗಕ್ಕೆ ಕ್ಷತ್ರಿಯ ಬಲ ಹೊಂದಿದ ನಾನೇ ನಾಯಕ ಎನ್ನುವ ಭಾವ. ಕ್ಷತ್ರಿಯೋಚಿತವಾದ ಬಲದಿಂದ ಇವೆರಡನ್ನೂ ನಿರ್ಮಿಸಿದ್ದೇನೆ ಎನ್ನುತ್ತಾನೆ. ಸ್ವರ್ಗಕ್ಕೆ ತನ್ನ ಅಧಿಪತ್ಯ ಇಲ್ಲದಿದ್ದರೂ ಸಹ ಆತನ ನಿಷ್ಠೆ ಮತ್ತು ಬದ್ಧತೆ ಹಾಗಿತ್ತು. ಭಾರತ ಇಂದಿಗೂ ಸಹ ತನ್ನ ಪರಂಪರೆ ಮತ್ತು ಸಂಸ್ಕೃತಿಯನ್ನು ಉಳಿಸಿಕೊಂಡದ್ದು ಇಂತಹ ಪ್ರಾಚೀನರ ಪ್ರೇರಣೆ ಎಂದರೆ ತಪ್ಪಾಗಲಾರದು. ಎಷ್ಟೋ ಆಕ್ರಮಣಗಳು ನಡೆದಿರಬಹುದು, ನಮ್ಮಲ್ಲಿ ಸಂಪತ್ತಿದೆ ಎನ್ನುವ ಕಾರಣಕ್ಕೆ ದಾಳಿ ನಡೆಸಿದರು. ಆದರೆ ಎಂದಿಗೂ ಸಹ ನಮ್ಮ ಸಂಸ್ಕಾರ, ಪರಂಪರೆಗಳ ಮೇಲೆ ದಾಳಿ ನಡೆಸಲು ಸಾದ್ಯವಾಗಿಲ್ಲ. ನಮ್ಮ ಜ್ಞಾನ ಪರಂಪರೆ ಎಂದೆಂದಿಗೂ ಶಾಶ್ವತ. 

ಇದನ್ನೂ ಓದಿ : ಸವಿಸ್ತಾರ ಅಂಕಣ | ʼಸಪ್ತಬಂದಿʼಯಲ್ಲಿ ಬಂಧಿಯಾದ ಹಿಂದು ಸಮಾಜ ಮುಕ್ತವಾಗಬೇಕು ಎಂದವರು ಸಾವರ್ಕರ್

Exit mobile version