Site icon Vistara News

Economics: ನಾಡಿನ ಸಾಮಾನ್ಯರಿಗೂ ಅರ್ಥವಾಗಬೇಕಾಗಿರುವ ಅರ್ಥಶಾಸ್ತ್ರ

economy for everybody

:: ಡಾ. ಜಿ.ವಿ ಜೋಶಿ

ಪ್ರಜಾಪ್ರಭುತ್ವದ (democracy) ಬಲವರ್ಧನೆಗೆ ಅರ್ಥಶಾಸ್ತ್ರದ (economics) ಅಧ್ಯಯನ ಅಗತ್ಯವೆಂದು ತೋರಿಸುವ ಉದ್ದೇಶದಿಂದಲೇ ಆರ್ಥಿಕ ತಜ್ಞೆ ಬಾರ್ಬರಾ ವೂಟನ್‌ ದಶಕಗಳ ಹಿಂದೆಯೇ ʼʼಅರ್ಥಶಾಸ್ತ್ರದ ಅರಿವು ಇಲ್ಲದ ಯಾವುದೇ ವ್ಯಕ್ತಿ, ಪುರುಷನಾಗಲಿ ಅಥವಾ ಮಹಿಳೆಯಾಗಲಿ ಒಂದು ದೇಶದ ನಾಗರಿಕನೆಂದು ಹೇಳಿಕೊಳ್ಳಲು ಸಾಧ್ಯವಿಲ್ಲʼʼ ಎಂದು ಘೋಷಿಸಿದ್ದರಲ್ಲಿ ಸತ್ಯಾಂಶವಿದೆ. ಈಗ ಅರ್ಥಶಾಸ್ತ್ರ ಬೆಳೆದು 7೦೦ಕ್ಕೂ ಅಧಿಕ ಶಾಖೆ-ಉಪಶಾಖೆಗಳನ್ನು ಹೊಂದಿದೆ. ಇವುಗಳಲ್ಲಿ ʼಜನಸಾಮಾನ್ಯರಿಗಾಗಿ ಅರ್ಥಶಾಸ್ತ್ರ ʼ (economics for common man) ಕೂಡ ಸೇರಿಕೊ೦ಡಿದೆ.

ನವ ದೆಹಲಿಯಲ್ಲಿರುವ ಶಿಕ್ಷಣದ ಸಂಶೋಧನೆ ಮತ್ತು ತರಬೇತಿಗೆ ಸಂಬಂಧಿಸಿದ ರಾಷ್ಟ್ರೀಯ ಮಂಡಳಿಯ ಆಡಳಿತದಲ್ಲಿರುವ ಸಾಮಾಜಿಕ ವಿಜ್ಞಾನಗಳ ಶಿಕ್ಷಣ ವಿಭಾಗ ಭಾರತದಲ್ಲಿ ಅರ್ಥಶಾಸ್ತ್ರದ ಬೋಧನೆಗೆ ಬೇಕಾದ ಮಾಹಿತಿಯುಳ್ಳ ಕೈಪಿಡಿ ನೀಡಿ ಉಪಕಾರ ಮಾಡಿದ್ದು ಹೌದು. ಆದರೆ ಜನಸಾಮಾನ್ಯರಿಗೆ ಈ ಶಾಸ್ತ್ರದ ಬೋಧನೆಯ ಅಗತ್ಯವನ್ನು ಎಲ್ಲೂ ಪರಿಗಣಿಸದಿರುವುದು ಅಸಮಾಧಾನ ಹುಟ್ಟಿಸುವ ಸಂಗತಿ.

ಗಣಿತಶಾಸ್ತ್ರ, ಸಂಖ್ಯಾಶಾಸ್ತ್ರ ಮತ್ತು ಗಣಿತ ಆಧಾರಿತ ಅರ್ಥಶಾಸ್ತ್ರ (ಎಕಾನಮೆಟ್ರಿಕ್ಸ್‌)ಗಳ ಹೆಚ್ಚಿದ ಬಳಕೆ ಅರ್ಥಶಾಸ್ತ್ರಕ್ಕೆ ಮೆರಗು ತಂದಿದ್ದು ನಿಜ. ಆದರೆ ಜನಸಾಮಾನ್ಯರಿಗೆ ಹತ್ತಿರವಾಗಬೇಕಾದ ಸರಳವಾದ ಅರ್ಥಶಾಸ್ತ್ರದ ಅಗತ್ಯವನ್ನಾಗಲಿ, ಉಪಯೋಗವನ್ನಾಗಲಿ ಮರೆತು ಬಿಡುವುದು ಸರಿಯಲ್ಲ. ಹಿಂದೆ ತಮ್ಮ ಕ್ಷೇಮಾಭಿವೃದ್ಧಿ ಅರ್ಥಶಾಸ್ತ್ರದಲ್ಲಿ ಗಣಿತ ಆಧಾರಿತ ವಿಧಾನಗಳನ್ನು ಅಳವಡಿಸಿಕೊಂಡು ನೊಬೆಲ್‌ ಪಾರಿತೋಷಕ ಪಡೆದ ಅಮರ್ತ್ಯಸೇನ್ ಇತ್ತೀಚಿನ ದಿನಗಳಲ್ಲಿ ಈ ವಿಧಾನಗಳನ್ನು ಬಳಸದೇ ಅರ್ಥಶಾಸ್ತ್ರವನ್ನು ಶ್ರೀಮಂತಗೊಳಿಸಿದ್ದನ್ನು ಗಮನಿಸಬೇಕು. ಸಾಮಾನ್ಯ ಜನರನ್ನೂ ಇದು ತಲುಪಬೇಕೆಂದು ವಾದಿಸುವವರಲ್ಲಿ ಅಮರ್ತ್ಯಸೇನ್ ಪ್ರಮುಖರು.

ಅರ್ಥಶಾಸ್ತ್ರದಲ್ಲಿ ಧಾರಾಳವಾಗಿ ಬಳಕೆಯಾಗುತ್ತಿರುವ ಎಷ್ಟೋ ಪಾರಿಭಾಷಿಕ ಪದಗಳು ಜನಸಾಮಾನ್ಯರ ಬದುಕಿನ ನೆಲದಲ್ಲಿ ಹುಟ್ಟಿ ಬೆಳೆದರೂ ಜನಸಾಮಾನ್ಯರಿಗೇ ಅರ್ಥವಾಗದ ರೀತಿಯಲ್ಲಿ ಮುದ್ರಿತ ಪುಸ್ತಕಗಳಲ್ಲಿ ಉಳಿದುಕೊಂಡಿವೆ. ಅವು ತಲುಪಬೇಕಾದವರನ್ನು ಇನ್ನೂ ತಲುಪಿಲ್ಲವೆನ್ನುವುದು ನೋವು ಹುಟ್ಟಿಸುವ ಸತ್ಯ. ಹೀಗಾಗಿ ರಾಷ್ಟ್ರ ಮತ್ತು ರಾಜ್ಯ ಮಟ್ಟದ ಆರ್ಥಿಕ ನೀತಿಯಲ್ಲಿ ಬದಲಾವಣೆಯಾದಾಗ ಜನ ಸಾಮಾನ್ಯರಿಂದ ನಿರೀಕ್ಷಿತ ಪ್ರತಿಕ್ರಿಯೆ ಬಾರದಿರುವುದರಿಂದ ಅದು ಸೋಲುತ್ತದೆ, ಹಳೆಯ ಸಮಸ್ಯೆಗಳು ಮುಂದುವರಿಯುತ್ತವೆ. ಹೊಸ ಸಮಸ್ಯೆಗಳು ಹುಟ್ಟಿಕೊಳ್ಳುವ ಸಾಧ್ಯತೆ ಕೂಡ ಇದೆ.

ಈಗ ಸಾಮಾನ್ಯವಾಗಿ ದೀರ್ಘ ಚರಿತ್ರೆಯುಳ್ಳ ಆರ್ಥಿಕ ಬೆಳವಣಿಗೆ ಮತ್ತು ಆರ್ಥಿಕ ಅಭಿವೃದ್ಧಿ ನಡುವಣ ಭಿನ್ನತೆಯನ್ನು ಗುರುತಿಸುವ ಪ್ರಯತ್ನ ಇನ್ನಷ್ಟು ಸ್ಪಷ್ಟ ರೀತಿಯಲ್ಲಿ ಆಗಬೇಕು. ಒಮ್ಮೆ ಯುಪಿಎ ಸರಕಾರದಲ್ಲಿ ಪಿ.ಚಿದಂಬರಂ ವಿತ್ತ ಸಚಿವರಾಗಿದ್ದಾಗ ತಮ್ಮ ಬಜೆಟ್‌ ಭಾಷಣದ ಪ್ರಾರಂಭದಲ್ಲಿ ಈ ಭಿನ್ನತೆಯನ್ನು ಗುರುತಿಸಿದ್ದರು. ಆರ್ಥಿಕ ಬೆಳವಣಿಗೆ ಎಂದರೆ ರಾಷ್ಟ್ರದ ಒಟ್ಟು ಆಂತರಿಕ ಆದಾಯದಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದಾಗ ಆದ ಶೇಕಡಾವಾರು ಬದಲಾವಣೆಯ (ಸಾಮಾನ್ಯವಾಗಿ ಹೆಚ್ಚಳದ) ದರ. ಆರ್ಥಿಕ ಬದಲಾವಣೆಯ ಜತೆಗೆ ಆದ ಸಾ೦ಸ್ಥಿಕ ಬದಲಾವಣೆಗಳು (ಆದಾಯ ವಿತರಣೆಯಲ್ಲಾದ ಸುಧಾರಣೆ, ಜೀವನಮಟ್ಟದಲ್ಲಿ ಆದ ಪ್ರಗತಿ ಇತ್ಯಾದಿ) ಆರ್ಥಿಕ ಅಭಿವೃದ್ಧಿಯ ಸ್ವರೂಪಗಳು. ಈ ವ್ಯತ್ಯಾಸವನ್ನು ಜನಸಾಮಾನ್ಯರಿಗೂ ತಿಳಿಸುವ ಕಾರ್ಯ ನಡೆಯಬೇಕಾಗಿದೆ.

ಒಳಗೊಳ್ಳುವಿಕೆಯ ಅಭಿವೃದ್ಧಿಗೆ ಈಗ ಹೆಚ್ಚಿನ ಮಹತ್ವ ಬರುತ್ತಿರುವುದನ್ನು ಸಾಮಾನ್ಯ ಜನರೂ ಸರಿಯಾಗಿ ಗಮನಿಸುವುದು ಅಗತ್ಯ. ಕೇಂದ್ರ ಬಜೆಟ್‌ ಸಮಾಜದ ಎಲ್ಲಾ ವರ್ಗಗಳ ಮೇಲೆ ಒಂದಿಲ್ಲೊಂದು ರೀತಿಯಲ್ಲಿ ಪ್ರಭಾವ ಬೀರುತ್ತಿರುವುದರಿಂದಲೇ ಎಲ್ಲರೂ ಅದಕ್ಕೆ ಪ್ರತಿವರ್ಷ ಕಾದು ಕುಳಿತಿರುತ್ತಾರೆ. 2023-24ನೇ ಸಾಲಿನ ಬಜೆಟ್‌ನ ಪ್ರಾರಂಭದಲ್ಲೇ ಒಳಗೊಳ್ಳುವಿಕೆಯ ಅಭಿವೃದ್ಧಿಯ ಅಗತ್ಯವನ್ನು ತೋರಿಸಲಾಗಿದೆ, ಈ ತನಕ ಆದ ಅಭಿವೃದ್ಧಿ ಯ ಲಾಭಗಳಿಂದ ವಂಚಿತರಾದ ಸಾಮಾಜಿಕ ವರ್ಗಗಳಿಗೆ ಈ ಲಾಭಗಳನ್ನು ತಲುಪಿಸುವ ಪ್ರಕ್ರಿಯೆ ತೀವ್ರವಾದ ಆರ್ಥಿಕ ಅಸಮಾನತೆಯಿರುವ ನಮ್ಮ ಅರ್ಥಿಕತೆಯಲ್ಲಿ ಬೇಕಾದ ಒಳಗೊಳ್ಳುವಿಕೆಯ ಅಭಿವೃದ್ಧಿಯಾಗಿ ಹೊರಹೊಮ್ಮಲಿದೆ. ಇದು ದೇಶಾದ್ಯಂತ ಜನಸಾಮಾನ್ಯರಿಗೆ ತಿಳಿಯಬೇಕಾದ ಅಗತ್ಯವಿದೆ.

ರೆಪೊ ದರ, ರಿವರ್ಸ್‌ ರೆಪೊ ದರ, ಗುಣಕ, ವೇಗೋತ್ಕರ್ಷ-ಹೀಗೆ ಹಲವಾರು ಪದಗಳ ಬಳಕೆ ಕನ್ನಡದ ಪತ್ರಿಕೆಗಳಲ್ಲಿ ಆಗಾಗ ಆಗುತ್ತಲೇ ಇರುತ್ತದೆ. ಈ ಪರಿಕಲ್ಪನೆಗಳು ಸಾಮಾನ್ಯ ಓದುಗರಿಗೂ ಸುಲಭದಲ್ಲಿ ಅರ್ಥವಾಗುವ ರೀತಿಯಲ್ಲಿ ಬಳಕೆಯಾಗಬೇಕಾಗಿದೆ.

ಒಂದು ಕಾಲದಲ್ಲಿ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ರೂಢಿಯಲ್ಲಿದ್ದ ಸಂಪ್ರದಾಯವನ್ನು ಈಗ ನೆನಪಿಸಿಕೊಳ್ಳಬೇಕು. ಅರ್ಥಶಾಸ್ತ್ರದ ಆಧಾರ ಸ್ತಂಭಗಳಾದ ಆಡಂ ಸ್ಮಿತ್, ಡೇವಿಡ್‌ ರಿಕಾರ್ಡೊ ಮತ್ತು ಸರ್‌ ರಾಬರ್ಟ್‌ ಮಾಲ್ತಸ್‌ ಬರೆದ ಬೃಹತ್ಗ್ರಂಥಗಳು ಇಂಗ್ಲೆಂಡಿನ ಜನಸಾಮಾನ್ಯರಿಗೆ ತಿಳಿಯುವಂತಿದ್ದವು. ಗಂಡು ಮತ್ತು ಹೆಣ್ಣು ಮಕ್ಕಳ ವಿವಾಹ ಹೊಂದಾಣಿಕೆಯ ಮಾತುಕತೆಗಳಾಗುವಾಗ ಈ ಅರ್ಥಶಾಸ್ತ್ರಜ್ಞರ ಪುಸ್ತಕಗಳ ಪ್ರಸ್ತಾಪವಾಗಿ ಅವನ್ನು ಓದಿದವರಿಗೆ ವಿಶೇಷ ಮೆಚ್ಚುಗೆ ವ್ಯಕ್ತವಾಗುತ್ತಿತ್ತು. ಅವುಗಳಿಗೆ ಆ ಕಾಲದಲ್ಲಿದ್ದ ಜನಪ್ರಿಯತೆಗೆ ಬೇರೆ ಸಾಕ್ಷಿ ಬೇಕಿಲ್ಲ. ಇಂಥ ಸಾಮಾಜಿಕ ಮಹತ್ವವುಳ್ಳ ಪುಸ್ತಕಗಳು ಜನಸಾಮಾನ್ಯರ ನೆರವಿಗಾಗಿ ಕನ್ನಡದಲ್ಲಿ ಈಗ ಪ್ತಕಟವಾಗಬೇಕು.

ಸಾ೦ಪ್ರದಾಯಿಕ ಅರ್ಥಶಾಸ್ತ್ರದ ದಾರಿಯಲ್ಲೇ ಮುನ್ನಡೆದ ಇಂಗ್ಲಂಡಿನ ಹೆಸರುವಾಸಿ ಆರ್ಥಿಕ ತಜ್ಞ ಆಲ್ಪ್ರೆಡ್‌ ಮಾರ್ಷಲ್‌ ಬರೆದ ಗ್ರಂಥ ʼಅರ್ಥಶಾಸ್ತ್ರದ ತತ್ವಗಳುʼ ಪ್ರಕಟವಾಗಿದ್ದು 189೦ರಲ್ಲಿ. ಸಾಮಾನ್ಯ ಜನರಿಗಾಗಿ ಬರೆದ ಪುಸ್ತಕ ಅದು. ಬೇಡಿಕೆ, ಪೂರೈಕೆ, ಬೇಡಿಕೆ ಬೆಲೆ, ಪೂರೈಕೆ ಬೆಲೆ, ಗ್ರಾಹಕನ ಮಿಗತೆ, ಉತ್ಪಾದಕನ ಮಿಗತೆ, ಸಾಮಾನ್ಯ ಬೆಲೆ-ಹೀಗೆ ಅನೇಕ ಪರಿಕಲ್ಪನೆಗಳನ್ನು ಸಾಮಾನ್ಯ ಓದುಗರಿಗೆ ತಿಳಿಯುವ ರೀತಿಯಲ್ಲಿ ಮಾರ್ಷಲ್‌ ವಿವರಿಸಿದ್ದಾರೆ. ಸುಲಭವಾಗಿ ಗೋಚರಿಸಬಲ್ಲ ಉದಾಹರಣೆಗಳು ಪರಿಕಲ್ಪನೆಗಳಿಗೆ ಆಧಾರವಾಗಿದ್ದು ಅವು ಸುಂದರ ಪ್ರಭಾವಳಿಗಳ೦ತಿವೆ. ಗಣಿತ ಶಾಸ್ತ್ರದಲ್ಲಿ ಪರಿಣತಿ ಹೊಂದಿದ್ದರೂ ಅವರು ಗಣಿತ ಆಧಾರಿತ ವಿವರಣೆಗಳನ್ನು ತಮ್ಮ ಪುಸ್ತಕದ ಪ್ರಮುಖ ಭಾಗದಲ್ಲಿ ನೀಡದೆ ಕೊನೆಗೆ ಅನುಬಂಧದಲ್ಲಿಟ್ಟಿದ್ದಾರೆ. ಬೇಕಾದ ರೇಖಾ ಚಿತ್ರಗಳನ್ನು(ಆಕೃತಿಗಳನ್ನು) ಪುಸ್ತಕದ ಪ್ರಮುಖ ಭಾಗದಲ್ಲಿ ತೋರಿಸದೆ ಅಡಿ ಟಿಪ್ಪಣಿಗಳಲ್ಲಿ ಇಟ್ಟದ್ದು ಕೂಡ ತರಗತಿಗಳಲ್ಲಿ ಕುಳಿತು ಕಲಿಯದ ಓದುಗರ ಅನುಕೂಲಕ್ಕಾಗಿ.

ಇದನ್ನೂ ಓದಿ: ಮನಿ ಕಹಾನಿ ಅಂಕಣ: ಗಣಿತ ಅರ್ಥ ಆಗದಿದ್ದರೂ ಅರ್ಥಶಾಸ್ತ್ರ ಗೊತ್ತಿದ್ದರೆ ಸಾಕು!

ವರ್ಷ ಕಳೆದಂತೆ ಇಂಗ್ಲೀಷ್‌ ಬಲ್ಲವರೇ ಅರ್ಥಶಾಸ್ತ್ರದ ಪಾರಿಭಾಷಿಕ ಪದಗಳನ್ನು ತಿಳಿಯುವುದು ಬಿಗಿಯಾಗುತ್ತಿರುವಾಗ ಕನ್ನಡ ಭಾಷೆ ಮಾತ್ರ ಬಲ್ಲ ಕನ್ನಡಿಗರು ತಿಳಿಯುವುದು ಕಷ್ಟವೆಂದು ಬೇರೆ ಹೇಳಬೇಕಿಲ್ಲ. ಹೀಗಾಗಿ ಸಾಮಾನ್ಯ ಓದುಗರಿಗೆ ಆರ್ಥಿಕ ಸಂಗತಿಗಳನ್ನು, ಸಮಸ್ಯೆಗಳನ್ನು ಮತ್ತು ಸತ್ಯಗಳನ್ನು ತಿಳಿಸುವ ದೊಡ್ಡ ಅಭಿಯಾನ ಪ್ರಾರಂಭವಾಗಬೇಕು. ಈ ದಿಶೆಯಲ್ಲಿ ವಿವಿಧ ಮಾಧ್ಯಮಗಳು ಸಮಾಜದ ಹಿತದೃಷ್ಟಿಯಿಂದ ವಿಶೇಷ ಪ್ರಯತ್ನ ಮಾಡಬೇಕಾಗಿದೆ.

ಬೆಲೆಯೇರಿಕೆಯಂತಹ ಸಮಸ್ಯೆಗಳು ತೀವ್ರ ಸ್ವರೂಪ ಪಡೆದಾಗ ಅವುಗಳಿಗೆ ಪರಿಹಾರ ಕಾಣುವ ದೃಷ್ಟಿಯಿಂದ ಜೀವನ ಕ್ರಮಗಳನ್ನು ಸೂಚಿಸುವ ಕೆಲಸವನ್ನು ಟೀವಿ ವಾಹಿನಿಗಳು ಮಾಡಬಹುದು. ಕೆಲವು ಪರಿಕಲ್ಪನೆಗಳು ( ವಿತ್ತೀಯ ಕೊರತೆ, ಚಾಲ್ತಿ ಕೊರತೆ, ಆದಾಯ ಕೊರತೆ, ಇತ್ಯಾದಿ) ಪ್ರತಿವರ್ಷ ಬಜೆಟ್‌ ಸೀಸನ್‌ ಬಂದಾಗ ಮಹತ್ವ ಪಡೆದುಕೊಳ್ಳುತ್ತವೆ. ಸಮಯಕ್ಕೆ ಸರಿಯಾಗಿ ಇವುಗಳನ್ನು ಸಾಮಾನ್ಯರಿಗೆ ತಿಳಿಸುವ ಕಾರ್ಯ ಟೀವಿ ವಾಹಿನಿ- ಪತ್ರಿಕೆಗಳಿಂದಾಗಬೇಕು.

ರಾಜ್ಯ ಸರಕಾರ ಪ್ರತಿವರ್ಷ ಆರ್ಥಿಕ ಸಮೀಕ್ಷೆ ಪ್ರಕಟಿಸುತ್ತದೆ. ದುರ್ದೈವದಿಂದ ಇದು ಇಂಗ್ಲೀಷ್‌ ಆವೃತ್ತಿಯ ಶಬ್ದಶಃ ಅನುವಾದವಾಗಿರುವುದರಿಂದ ಸಾಮಾನ್ಯ ಕನ್ನಡಿಗರಿಗೆ ಈ ಸಮೀಕ್ಷೆ ತಿಳಿಯುವುದೇ ಕಷ್ಟ. ಸಮೀಕ್ಷೆಯ ಅನೇಕ ಪ್ರತಿಗಳಿಗೆ ಬೆಂಗಳೂರು ಬಿಡುವ ಭಾಗ್ಯವೇ ಬರುವುದಿಲ್ಲ. ವಿ.ವಿಗಳ ಮತ್ತು ಕಾಲೇಜುಗಳ ಗ್ರಂಥಾಲಯಗಳನ್ನು ಕೂಡ ಅವು ತಲುಪುವುದಿಲ್ಲ. ಸರಕಾರದ ಎಷ್ಟೋ ಯೋಜನೆಗಳ ಬಗೆಗೆ ಜನಸಾಮಾನ್ಯರಿಗೆ ಸರಿಯಾದ ಮಾಹಿತಿಯೇ ಇರುವುದಿಲ್ಲ. ಬೇಕಾದ ಮಾಹಿತಿಯನ್ನು ಸರಳ ಕನ್ನಡದಲ್ಲಿ ಚಿಕ್ಕ ಪುಸ್ತಕಗಳ ರೂಪದಲ್ಲಿ ಪ್ರಕಟಿಸಿ ಆರ್ಥಿಕಯೋಜನೆ, ಕಾರ್ಯಕ್ರಮಗಳನ್ನು ಸಾಮಾನ್ಯ ಜನರಿಗೆ ತಲುಪಿಸುವ ಕೆಲಸ ಗ್ರಾಮ ಪ೦ಚಾಯತ-ನಗರ ಸಭೆಗಳಿಂದಾದರೆ ಅನುಕೂಲ.

ಇದನ್ನೂ ಓದಿ: Fiscal Deficit: ಮೂಲೆಗೆ ಸರಿದ ವಿತ್ತೀಯ ಹೊಣೆಗಾರಿಕೆ ಮತ್ತು ನಿರ್ವಹಣೆ ಕಾನೂನು

Exit mobile version