Site icon Vistara News

Eid ul fitr 2023: ಹೊಸ ಬದುಕು, ಹೊಸ ಸಂಭ್ರಮದ ಆರಂಭವೇ ಈದ್‌ ಮುಬಾರಕ್

Eid mubarak

#image_title

‌ಇಮ್ರಾನ್‌ ಉಲ್ಲಾ, ಪಾವಗಡ

ಇಸ್ಲಾಮಿಕ್ ಕ್ಯಾಲೆಂಡರ್​ನಲ್ಲಿ 9ನೇ ತಿಂಗಳನ್ನು ರಂಜಾನ್ ತಿಂಗಳೆಂದು ಪರಿಗಣಿಸಲಾಗುತ್ತದೆ. ಈ ತಿಂಗಳ 30 ದಿನವೂ ಮುಸ್ಲಿಮರು ಬೆಳಗ್ಗೆಯಿಂದ ಸಂಜೆವರೆಗೆ ಉಪವಾಸವಿದ್ದು, ತಾವು ಗೊತ್ತಿದ್ದೋ, ಗೊತ್ತಿಲ್ಲದೆಯೋ ಮಾಡಿದ ಪಾಪವನ್ನು ದೂರ ಮಾಡಿಕೊಳ್ಳಲು ಅಲ್ಲಾಹುವಿನ ಕ್ಷಮೆ ಕೋರುತ್ತಾರೆ. ರಂಜಾನ್ ತಿಂಗಳು ಮುಗಿದು ಶವ್ವಾಲ್ ತಿಂಗಳ ಆರಂಭದ ಮೊದಲ ದಿನವೇ ಈದ್-ಉಲ್-ಫಿತರ್. ಇದು ಸಂಭ್ರಮ ಮತ್ತು ಹೊಸ ಬದುಕಿನ ಆರಂಭದ ಹಬ್ಬ.

ಸತತ ಒಂದು ತಿಂಗಳ ಕಾಲ ಉಪವಾಸ ಮುಗಿಸಿದ ಬಳಿಕ ಬರುವ ಹಬ್ಬವಿದು. ತಿಂಗಳೆಲ್ಲಾ ಕುರಾನ್ ಪಠಿಸಿ ತಾರಾವೇ ನಮಾಜ್ ಮಾಡುವುದು ರಂಜಾನ್‌ ವಿಶೇಷ. ಆ ಒಂದು ತಿಂಗಳಲ್ಲಿ ಐದು ತಾಕರಾತ್ ಅಂದರೆ ಇಡೀ ರಾತ್ರಿ ಜಾಗರಣೆ ಮಾಡಿ ಅಲ್ಲಾಹುವಿನ ವಿಚಾರಧಾರೆಗಳನ್ನು ಪಠಿಸುತ್ತಾರೆ. ಈ ಐದು ರಾತ್ರಿಯಲ್ಲಿ ಮನುಷ್ಯನ ತಮ್ಮ ಪಾಪಗಳನ್ನು ತೊಳೆದು ಹಾಕಲು ಇಡೀ ರಾತ್ರಿ ದೇವರಲ್ಲಿ ನಮಾಜ್ ಮಾಡುವ ಮೂಲಕ ದೇವರಲ್ಲಿ ಕ್ಷಮೆ ಕೋರಿದರೆ ಆತನ ಪಾಪಗಳಿಗೆ ಕ್ಷಮೆ ಸಿಗುತ್ತದೆ ಎನ್ನುವುದು ನಂಬಿಕೆ.

ಇಸ್ಲಾಮಿಕ್ ಕ್ಯಾಲೆಂಡರ್​ನ ಪ್ರಕಾರ ಶವ್ವಾಲ್ ಅಮಾವಾಸ್ಯೆಯನ್ನು ನೋಡುವುದರೊಂದಿಗೆ ಒಂದು ತಿಂಗಳ ಕಾಲ ಮಾಡಿದ ಉಪವಾಸದ ಅವಧಿಯು ಕೊನೆಗೊಳ್ಳುತ್ತದೆ. ಅಂದರೆ ರಂಜಾನ್​​ನ ಕೊನೆಯ ದಿನದಂದು ಚಂದ್ರ ದರ್ಶನವಾದ ನಂತರ ಈದ್-ಉಲ್-ಫಿತರ್ ಆಚರಣೆ ಮಾಡಲಾಗುತ್ತದೆ. ಈದ್-ಉಲ್-ಫಿತರ್ ಅನ್ನು ಉಪವಾಸ ಮುರಿಯುವ ಹಬ್ಬ ಎಂದು ಕೂಡ ಕರೆಯಲಾಗುತ್ತದೆ.

ರಂಜಾನ್​ ಹಬ್ಬವನ್ನು ಸೌದಿ ಅರೇಬಿಯಾ ಮತ್ತು ವಿಶ್ವದ ಅನೇಕ ಭಾಗಗಳಲ್ಲಿ ಆಚರಿಸಲಾಗುತ್ತದೆ. ಸೌದಿ ಅರೇಬಿಯಾದಲ್ಲಿ ಚಂದ್ರನನ್ನು ಯಾವಾಗಲೂ ಮೊದಲು ನೋಡಲಾಗುತ್ತದೆ. ಈ ವರ್ಷ, ಈದ್ ಮಾರ್ಚ್‌ 24 ಸಂಜೆ ಚಂದ್ರ ನೋಡಿ ಪ್ರಾರಂಭವಾಗಿ ಏಪ್ರಿಲ್ 21ರಂದು ಉಪವಾಸ ಕೊನೆಗೊಂಡು ಏಪ್ರಿಲ್ 22ರಂದು ಈದುಲ್ ಫಿತರ್ ಆಚರಣೆ ನಡೆಯುತ್ತಿದೆ.

ಇಸ್ಲಾಂ ಧರ್ಮದ ಪ್ರಕಾರ, ರಂಜಾನ್ ತಿಂಗಳಲ್ಲಿ ಮುಸ್ಲಿಮರ ಪವಿತ್ರ ಗ್ರಂಥವಾದ ಕುರಾನ್ ಅನ್ನು ಪ್ರವಾದಿ ಮುಹಮ್ಮದ್ ಬಹಿರಂಗಪಡಿಸಿದರು ಎಂದು ನಂಬಲಾಗುತ್ತದೆ. ಈದ್ ಇಸ್ಲಾಮಿಕ್ ಪ್ರಾರ್ಥನೆಯ ಮೂಲಕ ಆರಂಭವಾಗುತ್ತದೆ. ಈ ಪ್ರಾರ್ಥನೆಯ ನಂತರ ಧರ್ಮೋಪದೇಶ ನಡೆಯುತ್ತದೆ. ಬಳಿಕ ಮುಸ್ಲಿಮರು ಅಲ್ಲಾಹನನ್ನು ಕ್ಷಮೆ, ಕರುಣೆ, ಶಾಂತಿ ಕೋರುತ್ತಾರೆ ಮತ್ತು ಇದು ದೇವರ ಆರ್ಶೀವಾದ ಪಡೆಯಲು ಇರುವ ಮಾರ್ಗ ಎಂದು ನಂಬಲಾಗಿದೆ.

ಈದ್-ಉಲ್-ಫಿತರ್ ಜಗತ್ತಿನಾದ್ಯಂತ ಮುಸ್ಲಿಮರು ಆಚರಿಸುವ ಪ್ರಮುಖ ಆಚರಣೆಗಳಲ್ಲಿ ಒಂದಾಗಿದೆ. ಈ ದಿನ ಹೆಚ್ಚಿನ ಸಂಖ್ಯೆಯಲ್ಲಿ ಪ್ರಾರ್ಥನೆ ಮತ್ತು ಧರ್ಮೋಪದೇಶಗಳಿಗೆ ಹಾಜರಾಗುತ್ತಾರೆ. ಈ ದಿನ ಮುಸ್ಲಿಮರು ಮುಂಜಾನೆಯಿಂದ ಮುಸ್ಸಂಜೆಯವರೆಗೆ ಒಂದು ತಿಂಗಳ ಉಪವಾಸದ ನಂತರ ತಾವು ಇಷ್ಟಪಟ್ಟಂತೆ ತಿನ್ನಲು ಮುಕ್ತರಾಗಿದ್ದಾರೆ. ಪ್ರತಿ ಮನೆಯಲ್ಲೂ ಪುಲಾವ್, ಸಲಾನ್, ಬಿರಿಯಾನಿ, ಹಲೀಮ್, ನಿಹಾರಿ, ಚಾಪ್ಲಿ ಕಬಾಬ್​, ಕೋಫ್ಟೆ ಮತ್ತು ಇನ್ನು ಹೆಚ್ಚು ರುಚಿಕರವಾದ ಆಹಾರವನ್ನು ಸಿದ್ಧಪಡಿಸುತ್ತಾರೆ.

ಸಿಹಿ ತಿಂಡಿಗಳಾದ ಸೆವಿಯನ್, ಸಂಪೂರ್ಣ ಕೊರ್ಮಾ (ಹಾಲಿನಲ್ಲಿ ಬೇಯಿಸಿದ ಸಿಹಿಯಾದ ಪದಾರ್ಥ), ಶಾಹಿ ತುಕ್ಡಾ ಮತ್ತು ರೋಸ್ ಶರ್ಬತ್‌ಗಳನ್ನು ಕುಟುಂಬ ಸದಸ್ಯರು, ಅತಿಥಿಗಳು ಮತ್ತು ಬಾಂಧವರಿಗೆ ನೀಡಲಾಗುತ್ತದೆ. ಮುಸ್ಲಿಮರು ಈ ದಿನದಂದು ಹೊಸ ಬಟ್ಟೆ ಧರಿಸುತ್ತಾರೆ. ಈದ್ ಮುಬಾರಕ್ ಶುಭಾಶಯಗಳೊಂದಿಗೆ ತಮ್ಮ ಹತ್ತಿರದ ಮತ್ತು ಆತ್ಮೀಯರನ್ನು ಸ್ವಾಗತಿಸುತ್ತಾರೆ. ಈ ಸಂದರ್ಭದಲ್ಲಿ ಉಡುಗೊರೆಗಳು, ಆಹಾರ, ಸಿಹಿತಿಂಡಿಗಳನ್ನು ವಿತರಿಸಲಾಗುತ್ತದೆ ಮತ್ತು ಮಕ್ಕಳಿಗೆ ಹಿರಿಯರಿಂದ ಈಡಿ ಎಂದು ಕರೆಯಲ್ಪಡುವ ಹಣ ಮತ್ತು ಉಡುಗೊರೆಗಳನ್ನು ನೀಡಲಾಗುತ್ತದೆ.

ಇದನ್ನೂ ಓದಿ : Ramadan 2023 : ರಮ್ಜಾನ್ ಹಬ್ಬಕ್ಕೆ ದಿನಗಣನೆ: ಏನಿದರ ವಿಶೇಷತೆ? ಏಕಾಗಿ ಈ ಉಪವಾಸ?

Exit mobile version