ಗೌತಮ್ ಶಾಂತಿಲಾಲ್ ಅದಾನಿ! ಇಡೀ ಜಗತ್ತು ಈ ಬಿಲಿಯನೇರ್ ಉದ್ಯಮಿಯ ನಭೂತೋ ನ ಭವಿಷ್ಯತಿ ಎಂಬ ಬೆಳವಣಿಗೆಯನ್ನು ಬೆರಗಿನಿಂದ ನೋಡುತ್ತಿದೆ! ಶೀತಲ ಸಮರದ ಕಾಲಘಟ್ಟದಲ್ಲಿ ಅತ್ತ ಪಾಶ್ಚಿಮಾತ್ಯ ರಾಷ್ಟ್ರಗಳ ನ್ಯಾಟೊ ಗುಂಪಿಗೆ ಸೇರಿಕೊಳ್ಳದೆ, ಇತ್ತ ಪೂರ್ವದ ಕಮ್ಯುನಿಸ್ಟ್ ಬ್ಲಾಕ್‌ಗೂ ಸೇರಿಕೊಳ್ಳದೆ, ಅಭಿವೃದ್ಧಿಶೀಲ ಏಷ್ಯಾದ ರಾಷ್ಟ್ರಗಳಲ್ಲೊಂದಾಗಿದ್ದ, ಹಾವಾಡಿಗರ ದೇಶ ಎಂದು ಮೂಲೆಗುಂಪಾಗಿದ್ದ ಭಾರತದಲ್ಲಿ ಆತ ಸಂಪತ್ತಿನಲ್ಲಿ ಅಮೆಜಾನ್‌ನ ಮಾಲೀಕ ಜೆಫ್ ಬಿಜೋಸ್‌ನನ್ನೂ ಹಿಂದಿಕ್ಕಿದ್ದಾನೆ ಎಂದರೆ ದೊಡ್ಡಣ್ಣನಂತಿದ್ದವರಿಗೆ ಸ್ವಲ್ಪವಾದರೂ ಅಸೂಯೆಯಾಗದೆ ಇದ್ದೀತೇ? (Brand story) ಮತ್ತೊಂದು ಕಡೆ, ಅದಾನಿ ಗ್ರೂಪ್‌ನ ಷೇರುಗಳ ದರ ಸ್ಫೋಟದಿಂದ ಹೀಗಾಗಿದೆ. ಆದಾಯಕ್ಕಿಂತ ಹೆಚ್ಚು ಸಾಲ ಇದೆ. ಎಲ್ಲವೂ ಸಾಲದ ದುಡ್ಡು, ಹೀಗಾಗಿ ಈ ಷೇರುಗಳ ದರ ನೀರ ಮೇಲಿನ ಗುಳ್ಳೆಯಂತೆ ಒಂದಿಲ್ಲೊಂದು ದಿನ ಒಡೆದು ಹೋಗಲಿದೆ ಎಂಬ ಊಹಾಪೋಹಗಳೂ ಇವೆ. ಆದರೆ ಇದ್ಯಾವುದನ್ನೂ ಲೆಕ್ಕಿಸದೆ, ಕಾರ್ಪೊರೇಟ್ ಜಗತ್ತಿನಲ್ಲಿ ಒಂಟಿ ಸಲಗದಂತೆ ಮುನ್ನಡೆಯುತ್ತಿದ್ದಾರೆ ಗೌತಮ್ ಶಾಂತಿಲಾಲ್ ಅದಾನಿ..ಅವರನ್ನೀಗ ತಡೆಯುವವರೇ ಇಲ್ಲ. ಮುಟ್ಟಿದ್ದೆಲ್ಲಾ ಚಿನ್ನ!
ಅಮೆರಿಕ ಮೂಲದ ಕ್ರೆಡಿಟ್ ರೇಟಿಂಗ್ ಏಜೆನ್ಸಿ ಫಿಚ್ ಗ್ರೂಪ್. 108 ವರ್ಷಗಳ ಹಳೆಯ ಹಣಕಾಸು ಸೇವಾ ಕಂಪನಿಯಿದು. ಇದರ ಘಟಕವಾದ ಕ್ರೆಡಿಟ್‌ಸೈಟ್ಸ್, ಅದಾನಿ ಗ್ರೂಪ್ ಅತಿಯಾಗಿ ಸಾಲ ಮಾಡಿದ್ದು, ಮುಂದೊಮ್ಮೆ ಸಮೂಹದ ಒಂದೆರಡು ಕಂಪನಿಗಳು ದಿವಾಳಿಯಾದರೆ ಕಷ್ಟ ಕಟ್ಟಿಟ್ಟ ಬುತ್ತಿ ಎಂದು ವರದಿ ಬಿಡುಗಡೆಗೊಳಿಸಿತು. ಅದಾನಿ ಗ್ರೂಪ್ ಕಂಪನಿಗಳ ಷೇರು ದರ ಕುಸಿದು ಮಾರುಕಟ್ಟೆ ಮೌಲ್ಯದಲ್ಲಿ 94,000 ಕೋಟಿ ರೂ. ಕರಗಿತು. ಇನ್ನೇನು ಅದಾನಿ ಸಾಮ್ರಾಜ್ಯದ ಅವನತಿ ಶುರುವಾಯಿತೋ, ಎಂದು ಭಾವಿಸಿದ್ದವರು ಬೆವರುವಂತೆ, ಕೆಲ ದಿನಗಳಲ್ಲಿ ಕ್ರೆಡಿಟ್ ಸೈಟ್ಸ್ ಒಂದು ಸ್ಪಷ್ಟೀಕರಣ ಹೊರಡಿಸಿತು. ತನ್ನ ವರದಿಯ ಲೆಕ್ಕಾಚಾರಗಳಲ್ಲಿ ತಪ್ಪಾಗಿದೆ ಎಂದು ತಿಳಿಸಿತು. ತನ್ನ ಕಂಪನಿಗಳ ಆರೋಗ್ಯ ಸುಸ್ಥಿತಿಯಲ್ಲಿದ್ದು, ಸಾಲದ ನಿರ್ವಹಣೆಯಲ್ಲಿ ಕೂಡ ಯಾವುದೇ ಸಮಸ್ಯೆ ಇಲ್ಲ ಎಂದು ಅದಾನಿ ಗ್ರೂಪ್ ಹೇಳಿಕೆ ನೀಡಿತ್ತು. ಹೀಗೆ ಫಿಚ್ ಗ್ರೂಪ್‌ನಂಥ ಹಣಕಾಸು ಸೇವಾ ಸಂಸ್ಥೆಗೂ ಅದಾನಿ ಗ್ರೂಪ್ ಅನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಆದರೆ ಅಸಂಖ್ಯಾತ ಷೇರು ಹೂಡಿಕೆದಾರರು, ದೇಶಿ-ವಿದೇಶಿ ಮೂಲದ ಬ್ಯಾಂಕ್‌ಗಳು, ದೇಶ-ವಿದೇಶಗಳ ಸರ್ಕಾರಗಳು ಅದಾನಿ ಬ್ರಾಂಡ್‌ನ ಮೇಲೆ ಇಟ್ಟಿರುವ ವಿಶ್ವಾಸ ಮತ್ತು ನಂಬಿಕೆ ಕುತೂಹಲಕರ. ಸಂಸ್ಕೃತದ ಈ ಸುಭಾಷಿತ ನಮಗೆಲ್ಲ ಗೊತ್ತಿದೆ.
ಉದ್ಯಮಂ ಸಾಹಸಂ ಧೈರ್ಯಂ, ಬುದ್ಧಿಃ ಶಕ್ತಿಃ ಪರಾಕ್ರಮಃ | ಷಡೇತೇ ಯತ್ರ ವರ್ತಂತೇ, ತತ್ರ ದೇವಾಃ ಸಾಹಾಯಕೃತ್ ( ಅರ್ಥ: ಪರಿಶ್ರಮ, ಸಾಹಸ, ಧೈರ್ಯ, ಬುದ್ಧಿವಂತಿಕೆ, ಶಕ್ತಿ-ಪರಾಕ್ರಮ ಎಂಬ ಈ ಆರು ಬಗೆಯ ಗುಣ ವಿಶೇಷಗಳು ಇರುವಲ್ಲಿ ದೇವತೆಗಳೇ ಸಹಾಯ ಮಾಡುತ್ತಾರೆ). ಗೌತಮ್ ಅದಾನಿಯವರು ತೆಗೆದುಕೊಳ್ಳುತ್ತಿರುವ ಸಾಹಸಗಳೂ ಹಾಗೆಯೇ. ಭಾರತದ ಕಾರ್ಪೊರೇಟ್ ಇತಿಹಾಸದಲ್ಲಿ ಟಾಟಾ, ಬಿರ್ಲಾ, ರಿಲಯನ್ಸ್, ಹಿಂದೂಜಾ ದೊಡ್ಡ ಕೈಗಾರಿಕಾ ಬ್ರಾಂಡ್‌ಗಳು. ಆದರೆ ಅದಾನಿ ಗ್ರೂಪ್ ಸದ್ಯಕ್ಕೆ ಹೆಚ್ಚು ರಿಸ್ಕ್‌ಗಳನ್ನು ತೆಗೆದುಕೊಂಡು ಹೋಗುತ್ತಿದೆ. ರಿಸ್ಕ್ ಇದ್ದಲ್ಲಿ ರಿವಾರ್ಡ್ ಇದ್ದೇ ಇರುತ್ತದೆ. ಅದಾನಿ ಮಾತ್ರವಲ್ಲ, ಅವರ ಸೋದರರೂ ಯಶಸ್ವಿ ಉದ್ಯಮಿಗಳಾಗಿ ಮಿಂಚುತ್ತಿದ್ದಾರೆ. ಉದಾಹರಣೆಗೆ ಅವರ ಅಣ್ಣ ಹಾಗೂ ದುಬೈನಲ್ಲಿ ಉದ್ಯಮಿಯಾಗಿರುವ ವಿನೋದ್ ಶಾಂತಿಲಾಲ್ ಇದೀಗ ಅತಿ ಶ್ರೀಮಂತ ಅನಿವಾಸಿ ಭಾರತೀಯ ಎನ್ನಿಸಿದ್ದಾರೆ. ದುಬೈನಲ್ಲಿ ದಿನಕ್ಕೆ ಸರಾಸರಿ 102 ಕೋಟಿ ರೂ. ಗಳಿಸುತ್ತಾರೆ. ಸಂಪತ್ತಿನಲ್ಲಿ ಹಿಂದೂಜಾ ಸೋದರರು ಮತ್ತು ಲಕ್ಷ್ಮೀ ಮಿತ್ತಲ್ ಅವರನ್ನೂ ಹಿಂದಿಕ್ಕಿದ್ದಾರೆ.
ಮಾರುಕಟ್ಟೆ ಮೌಲ್ಯದಲ್ಲಿ ಟಾಟಾ, ರಿಲಯನ್ಸ್ ಅನ್ನೂ ಹಿಂದಿಕ್ಕಿದ ಅದಾನಿ ಗ್ರೂಪ್!
ಅದಾನಿ ಗ್ರೂಪ್ ಕಂಪನಿಗಳ ಷೇರು ಮಾರುಕಟ್ಟೆ ಮೌಲ್ಯ 20.11 ಲಕ್ಷ ಕೋಟಿ ರೂ. ಕಳೆದ ಒಂದು ವರ್ಷದಲ್ಲಿ ಇಮ್ಮಡಿಯಾಗಿದೆ. ಈಗ ಭಾರತದಲ್ಲಿ ಅತಿ ಹೆಚ್ಚು ಮಾರುಕಟ್ಟೆ ಬಂಡವಾಳ ಮೌಲ್ಯ ಇರುವ ಗ್ರೂಪ್ ಎಂದರೆ ಅದಾನಿ. ಇತ್ತೀಚೆಗೆ ಅಂಬುಜಾ ಸಿಮೆಂಟ್ ಮತ್ತು ಎಸಿಸಿ ಖರೀದಿಯ ಬಳಿಕ ಅದಾನಿ ಗ್ರೂಪ್ ಮಾರುಕಟ್ಟೆ ಬಂಡವಾಳ ಮೌಲ್ಯ 22.25 ಲಕ್ಷ ಕೋಟಿ ರೂ.ಗೆ ಏರಿದೆ. ಟಾಟಾ ಗ್ರೂಪ್‌ನದ್ದು 20.81 ಲಕ್ಷ ಕೋಟಿ ರೂ. ಮತ್ತು ಮುಕೇಶ್ ಅಂಬಾನಿಯವರ ರಿಲಯನ್ಸ್ ಗ್ರೂಪ್‌ನದ್ದು 17.07 ಲಕ್ಷ ಕೋಟಿ ರೂ. ಎಂಬುದನ್ನು ಇಲ್ಲಿ ಗಮನಿಸಬಹುದು.
ಫೋರ್ಬ್ಸ್ ಪ್ರಕಾರ ಗೌತಮ್ ಅದಾನಿ ಸಂಪತ್ತು 12.53 ಲಕ್ಷ ಕೋಟಿ ರೂ!
ಫೋರ್ಬ್ಸ್ ಕಂಪನಿಯು ಉದ್ಯಮ, ಹೂಡಿಕೆ, ತಂತ್ರಜ್ಞಾನ, ಉದ್ಯಮಶೀಲತೆ, ಲೈಫ್‌ಸ್ಟೈಲ್, ನಾಯಕತ್ವಕ್ಕೆ ಫೋಕಸ್ ನೀಡುವ ಜಾಗತಿಕ ಸಂಸ್ಥೆ. ಇದರ ಪ್ರಕಾರ ಪ್ರಸ್ತುತ ಜಗತ್ತಿನ ಎರಡನೇ ಅತಿ ದೊಡ್ಡ ಶ್ರೀಮಂತ ಗೌತಮ್ ಅದಾನಿ ಮತ್ತು ಕುಟುಂಬ. 154.7 ಶತಕೋಟಿ ಡಾಲರ್ ನಿವ್ವಳ ಸಂಪತ್ತು (ಅಂದಾಜು 12.53 ಲಕ್ಷ ಕೋಟಿ ರೂ.) ಫೋರ್ಬ್ಸ್ ಹೀಗೆ ವಿವರಿಸುತ್ತದೆ-
ಮೂಲಸೌಕರ್ಯ ಉದ್ದಿಮೆಯ ದಿಗ್ಗಜ ಗೌತಮ್ ಅದಾನಿ, ಮುಂದ್ರಾ ಬಂದರಿನ ಮಾಲೀಕ. ಇದು ಭಾರತದ ಅತಿ ದೊಡ್ಡ ಬಂದರು. ಗುಜರಾತ್‌ನಲ್ಲಿದೆ. ಅದಾನಿಯವರ ಆದಾಯ 13 ಶತಕೋಟಿ ಡಾಲರ್ ( ಅಂದಾಜು ೧.೩ ಲಕ್ಷ ಕೋಟಿ ರೂ.). ಅದಾನಿ ಗ್ರೂಪ್ ಮೂಲ ಸೌಕರ್ಯ, ಸರಕುಗಳು, ವಿದ್ಯುತ್ ಉತ್ಪಾದನೆ, ವಿತರಣೆ, ರಿಯಲ್ ಎಸ್ಟೇಟ್ ಉದ್ದಿಮೆಯಲ್ಲಿ ತೊಡಗಿಸಿಕೊಂಡಿದೆ. ಅದಾನಿ ಗ್ರೂಪ್ ಮುಂಬಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 74% ಪಾಲನ್ನು ಹೊಂದಿದೆ. ಇದು ಭಾರತದ ಎರಡನೇ ಅತ್ಯಂತ ಬ್ಯುಸಿ ಏರ್‌ಪೋರ್ಟ್. ಸಮೂಹ ಈಗ ದೇಶದ ಅತಿ ದೊಡ್ಡ ಏರ್‌ಪೋರ್ಟ್ ನಿರ್ವಾಹಕ.
ಜಗತ್ತಿನಲ್ಲೇ ಅತಿ ಹೆಚ್ಚು ಗ್ರೀನ್ ಎನರ್ಜಿ ಅಂದರೆ ನವೀಕರಿಸಬಹುದಾದ ಮೂಲಗಳಿಂದ ಇಂಧನ ಉತ್ಪಾದಿಸುವ ಗುರಿಯನ್ನು ಅದಾನಿ ಹೊಂದಿದ್ದಾರೆ. 2022ರ ಮೇನಲ್ಲಿ ಸಿಮೆಂಟ್ ಉದ್ದಿಮೆಗೆ ದೊಡ್ಡ ಪ್ರಮಾಣದಲ್ಲಿ ಪ್ರವೇಶಿಸಿದ್ದಾರೆ. ಹೋಲ್ಸಿಮ್‌ನ ಎರಡು ಬ್ರಾಂಡ್‌ಗಳನ್ನು (ಎಸಿಸಿ, ಅಂಬುಜಾ) ಖರೀದಿಸಿದ್ದಾರೆ ಎಂದು ವಿವರಿಸಿದ ಫೋರ್ಬ್ಸ್. ಅಷ್ಟೇ ಅಲ್ಲದೆ ಕೆಲ ಸ್ವಾರಸ್ಯಕರ ಸಂಗತಿಗಳನ್ನೂ ಪ್ರಸ್ತಾಪಿಸಿದೆ.
ಅದಾನಿಯವರು ಆಸ್ಟ್ರೇಲಿಯಾದಲ್ಲಿ ವಿವಾದಾತ್ಮಕ ಗಣಿಗಾರಿಕೆ ಯೋಜನೆಯನ್ನು ( Abbot Point) ಖರೀದಿಸಿದ್ದಾರೆ. ಇದು ಜಗತ್ತಿನ ಅತಿ ದೊಡ್ಡ ಕಲ್ಲಿದ್ದಲು ಗಣಿಗಳಲ್ಲೊಂದಾಗಿದೆ. ಇದನ್ನು ಸ್ವಾಧೀನಪಡಿಸಲು ಅದಾನಿ 9 ವರ್ಷಗಳನ್ನು ತೆಗೆದುಕೊಳ್ಳಬೇಕಾಯಿತು. ಅದಾನಿಯವರು ಕಾಲೇಜು ಶಿಕ್ಷಣವನ್ನು ಅರ್ಧಕ್ಕೇ ಬಿಟ್ಟು, ತಂದೆಯವರ ಜವಳಿ ವ್ಯಾಪಾರಕ್ಕೆ ಸಹಕರಿಸಿದ್ದರು. 1988ರಲ್ಲಿ ಸರಕುಗಳನ್ನು ರಫ್ತು ಮಾಡುವ ಸಂಸ್ಥೆಯನ್ನು ಸ್ಥಾಪಿಸಿದರು. 2008ರಲ್ಲಿ ಮುಂಬಯಿನ ತಾಜ್ ಹೋಟೆಲ್ ಮೇಲೆ ಉಗ್ರರ ದಾಳಿ ನಡೆದಾಗ ಸ್ವಲ್ಪ ದರದಲ್ಲೇ ಅದಾನಿ ದಾಳಿಯಿಂದ ಪಾರಾಗಿದ್ದರು. ” ಉದ್ಯಮಿಯಾಗುವುದು ನನ್ನ ಕನಸಾಗಿತ್ತು. ಏಕೆಂದರೆ ಇದು ವ್ಯಕ್ತಿಯ ದೃಢತೆಯನ್ನು ಪರೀಕ್ಷಿಸುತ್ತದೆ. ನಾನು ಯಾರೊಬ್ಬರಿಂದಲೂ ಆಜ್ಞೆಗಳನ್ನು ಪಡೆಯಲು ಬಯಸುವುದಿಲ್ಲʼʼ ಎನ್ನುತ್ತಾರೆ ಅದಾನಿ.
ಇದನ್ನೂ ಓದಿ: Brand story | ಕಾಲೇಜು ಡ್ರಾಪ್‌ಔಟ್ ಹುಡುಗ ಡಿಮಾರ್ಟ್ ಸ್ಟೋರ್ ತೆರೆದು ರಿಟೇಲ್ ಕಿಂಗ್ ಆಗಿದ್ದು ಹೇಗೆ?!
ಅದಾನಿ ಕಂಪನಿಗಳ ಷೇರು ಖರೀದಿಗೆ ಮುಗಿಬಿದ್ದ ಹೂಡಿಕೆದಾರರು!
ಗೌತಮ್ ಅದಾನಿ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಜಾಗತಿಕ ಬಿಲಿಯನೇರ್‌ಗಳ ಪಟ್ಟಿಯಲ್ಲಿ 40ರಿಂದ 2ನೇ ಸ್ಥಾನಕ್ಕೆ ಜಿಗಿದಿರುವುದು ರೋಚಕ ಮತ್ತು ಅನೂಹ್ಯ. ಕೋವಿಡ್ ಬಿಕ್ಕಟ್ಟಿನ ನಡುವೆಯೇ ಗೌತಮ್ ಅದಾನಿಯವರು ವಿಪತ್ತನ್ನು ಅವಕಾಶವನ್ನಾಗಿ ಪರಿವರ್ತಿಸಿ ತಮ್ಮ ಉದ್ದಿಮೆ ಸಾಮ್ರಾಜ್ಯವನ್ನು ಪ್ರಪಂಚ ಬೆರಗಾಗುವಂತೆ ವಿಸ್ತರಿಸುತ್ತಿದ್ದಾರೆ. ಅದು ಅದಾನಿ ನಾಯಕತ್ವ, ಗ್ರೂಪ್‌ನ ಕಂಪನಿಗಳ ಆಡಳಿತ ಮಂಡಳಿ, 23,000 ಉದ್ಯೋಗಿಗಳ ಪರಿಶ್ರಮದ ಫಲವದು. ಜತೆಗೆ ಹೂಡಿಕೆದಾರರು ಅದಾನಿ ಗ್ರೂಪ್ ಕಂಪನಿಗಳ ಷೇರುಗಳಲ್ಲಿ ಭಾರಿ ಆಸಕ್ತಿ, ನಂಬಿಕೆಯಿಂದ ಹೂಡಿದ್ದಾರೆ. ದೇಶ-ವಿದೇಶಗಳ ಬ್ಯಾಂಕ್‌ಗಳು ಅದಾನಿ ಗ್ರೂಪ್‌ಗೆ ಭಾರಿ ಸಾಲವನ್ನೂ ನೀಡಿವೆ. ಷೇರುಗಳನ್ನು ಅಡಮಾನ ಇಟ್ಟು ಸಾಲ ತೆಗೆದುಕೊಳ್ಳುವುದರಲ್ಲಿ ಕೂಡ ಅದಾನಿ ಹಿಂದೆ ಬಿದ್ದಿಲ್ಲ. ಅವರೊಬ್ಬ ಹೈ ರಿಸ್ಕ್ ತೆಗೆದುಕೊಳ್ಳುವ, ಅಮಿತ ಮಹತ್ತ್ವಾಕಾಂಕ್ಷೆಯ ಉದ್ಯಮಿ ಎಂಬುದನ್ನು ಕಳೆದ ಎರಡು ವರ್ಷಗಳಲ್ಲಿ ಸಾಬೀತುಪಡಿಸಿದ್ದಾರೆ.
ನಿಜ, ಕಳೆದ ಒಂದು ವರ್ಷದಲ್ಲಿ ಅದಾನಿ ಗ್ರೂಪ್‌ನ 7 ಕಂಪನಿಗಳ ಷೇರುಗಳ ದರದಲ್ಲಿ ಭಾರಿ ಏರಿಕೆಯಾಗಿದೆ. ಅದು ಹೀಗಿದೆ ನೋಡಿ: ಅದಾನಿ ಎಂಟರ್‌ಪ್ರೈಸಸ್ (89.14%), ಅದಾನಿ ಗ್ರೀನ್ ಎನರ್ಜಿ (79.90%), ಅದಾನಿ ಪೋರ್ಟ್ಸ್ ( 14.72%), ಅದಾನಿ ಪವರ್ ( 309.73%), ಅದಾನಿ ಟೋಟಲ್ ಗ್ಯಾಸ್ ( 111.36%) ಅದಾನಿ ಟ್ರಾನ್ಸ್‌ಮಿಶನ್ ( 122.91%) ಅದಾನಿ ವಿಲ್ಮರ್ (157.69)
ಷೇರುಪೇಟೆಗೆ ಆಧಾರವಾದ ಅದಾನಿ ಗ್ರೂಪ್ ಷೇರು: ಅದಾನಿ ಗ್ರೂಪ್ ಭಾರತೀಯ ಷೇರು ಮಾರುಕಟ್ಟೆಗೆ ಕೂಡ ಸಹಕರಿಸಿದೆ. ಈ ವರ್ಷ ಇದುವರೆಗೆ ಷೇರುಪೇಟೆಯಲ್ಲಿ ಹೆಚ್ಚಳವಾದ ಒಟ್ಟು ಮಾರುಕಟ್ಟೆ ಬಂಡವಾಳ ಮೌಲ್ಯದಲ್ಲಿ ( Market-cap) 79% ನಷ್ಟು ಅದಾನಿ ಗ್ರೂಪ್‌ನ ಏಳು ಕಂಪನಿಗಳ ಪಾಲಾಗಿದೆ. ಇದು ಷೇರು ಹೂಡಿಕೆದಾರರು ಮುಗಿಬಿದ್ದು ಅದಾನಿ ಸಮೂಹದ ಕಂಪನಿಗಳ ಷೇರುಗಳನ್ನು ಖರೀದಿಸಿರುವುದಕ್ಕೆ ಸಾಕ್ಷಿಯಾಗಿದೆ. ಭಾರತದ ಅತಿ ದೊಡ್ಡ ಷೇರು ವಿನಿಮಯ ಕೇಂದ್ರವಾದ ನ್ಯಾಶನಲ್ ಸ್ಟಾಕ್ ಎಕ್ಸ್‌ಚೇಂಜ್ ಆಫ್ ಇಂಡಿಯಾ (ಎನ್‌ಎಸ್‌ಇ) ನಿಫ್ಟಿ 50 ಸೂಚ್ಯಂಕಕ್ಕೆ 2022 ಸೆಪ್ಟೆಂಬರ್ 30ರಿಂದ ಸೇರ್ಪಡೆಯಾಗುತ್ತಿದೆ ಎಂದು ಎನ್‌ಎಸ್‌ಇ ಘೋಷಿಸಿದೆ. ಇದರೊಂದಿಗೆ ಷೇರು ಪೇಟೆಯಲ್ಲಿ ಅದಾನಿ ಗ್ರೂಪ್ ಷೇರುಗಳು ನಿರ್ಣಾಯಕವಾಗಿರುವುದು ಗಮನಾರ್ಹ.
ಇದನ್ನೂ ಓದಿ: Brand story | NDTV: ದೇಶದ ಮೊದಲ 24×7 ನ್ಯೂಸ್ ಚಾನೆಲ್ ಈಗ ಸುದ್ದಿಯಲ್ಲಿ!
ಷೇರುಗಳನ್ನು ಅಡಮಾನ ಇಟ್ಟು ಸಾಲ ಪಡೆಯುವ ಚಾಕಚಕ್ಯತೆ!
ಉದ್ಯಮಿಯಾಗಿ ಗೌತಮ್ ಅದಾನಿ ಅವರು ತಮ್ಮ ಕಂಪನಿಗಳ ಷೇರು ದರ ಜಿಗಿತದಿಂದ ಪಡೆಯಬಹುದಾದ ಅವಕಾಶಗಳು ಮತ್ತು ಸಾಧ್ಯತೆಗಳನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ. ಅದನ್ನು ತಪ್ಪು ಎನ್ನಲಾಗದು. ಉದಾಹರಣೆಗೆ ಎಸಿಸಿ ಮತ್ತು ಅಂಬುಜಾ ಸಿಮೆಂಟ್‌ನ ಸ್ವಾಧೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ಕೆಲ ದಿನಗಳಲ್ಲೇ (Adani) ಈ ಎರಡೂ ಕಂಪನಿಗಳ 13 ಶತಕೋಟಿ ಡಾಲರ್ ( ೯೬,೮೦೦ ಕೋಟಿ ರೂ.) ಮೌಲ್ಯದ ಷೇರುಗಳನ್ನು ಸಾಲಕ್ಕಾಗಿ ಅಡಮಾನ ಇಟ್ಟಿದ್ದಾರೆ ಅದಾನಿ! ಇದು ಅವರ ಮುಂದಾಲೋಚನೆ, ಮಹತ್ತ್ವಾಕಾಂಕ್ಷೆಗೆ ನಿದರ್ಶನ.
ಗ್ರೀನ್ ಎನರ್ಜಿಯಿಂದ ಮಾಧ್ಯಮದ ತನಕ ನಾನಾ ವಲಯಗಳಲ್ಲಿ ಮಹತ್ತ್ವಾಕಾಂಕ್ಷೆಯ ಡೀಲ್‌ಗಳನ್ನು ಕುದುರಿಸುತ್ತಿರುವ ಅದಾನಿ ಸಮೂಹ, ಈ ನಿಟ್ಟಿನಲ್ಲಿ ಸಾಲದ ವ್ಯವಸ್ಥೆಯನ್ನು ಮಾಡಿಕೊಳ್ಳುತ್ತಿದೆ. ಇದೀಗ ಹೋಲ್ಸಿಮ್‌ನಿಂದ ಎಸಿಸಿ ಮತ್ತು ಅಂಬುಜಾವನ್ನು ಖರೀದಿಸಿದ ಕೆಲ ದಿನಗಳಲ್ಲಿಯೇ ಅನುಕ್ರಮವಾಗಿ 57% ಮತ್ತು 63% ಷೇರುಗಳನ್ನು ಅಡಮಾನ ಇಟ್ಟಿದೆ.
ಅಂಬುಜಾ ಮತ್ತು ಎಸಿಸಿ ಕಂಪನಿಯ ಸ್ವಾಧೀನದೊಂದಿಗೆ ಅದಾನಿ ಗ್ರೂಪ್, ಸಿಮೆಂಟ್ ಉತ್ಪಾದನೆ ವಲಯದಲ್ಲಿ ಪ್ರಾಬಲ್ಯ ಸಾಧಿಸಲು ನಿರ್ಧರಿಸಿದೆ. 2027ರ ವೇಳೆಗೆ ಸಿಮೆಂಟ್ ಉತ್ಪಾದನೆಯನ್ನು ಇಮ್ಮಡಿಗೊಳಿಸಲು ಅದಾನಿ ಗ್ರೂಪ್ ತೀರ್ಮಾನಿಸಿದೆ. ಗೌತಮ್ ಅದಾನಿ ಯಾವೆಲ್ಲ ಚಾಕಚಕ್ಯತೆಯಿಂದ ಸಾಲ ಪಡೆಯುತ್ತಾರೆ ಮತ್ತು ಹೇಗೆ ಪಡೆಯುತ್ತಾರೆ ಎಂಬುದಕ್ಕೆ ಇದು ಉದಾಹರಣೆ.
ಈ ಎಲ್ಲ ಸಿನಿಮೀಯ ಶೈಲಿಯ ಅಭೂತಪೂರ್ವ ಬೆಳವಣಿಗೆಯ ಪರಿಣಾಮ ಗೌತಮ್ ಅದಾನಿ ಸ್ವತಃ ಸುದ್ದಿಯಲ್ಲಿದ್ದಾರೆ. ಅದಾನಿ ಗ್ರೂಪ್‌ನ ಕಂಪನಿಗಳ ವಹಿವಾಟು ವಿಸ್ತರಿಸುತ್ತಿದೆ. ಸಾಲದ ಮೊತ್ತ ಏರುತ್ತಿದೆ. ಆದರೆ ಸಮೂಹದ ಷೇರುಗಳ ಜಿಗಿತವೂ ಮುಂದುವರಿದಿದೆ! ಭಾರತದ ಮೂಲಸೌಕರ್ಯ ವಲಯದ ಉದ್ದಿಮೆಗಳಲ್ಲಿ, ಬಂದರು, ಏರ್ ಪೋರ್ಟ್, ವಿದ್ಯುತ್, ಗ್ರೀನ್ ಎನರ್ಜಿ, ಸಿಮೆಂಟ್ ಉತ್ಪಾದನೆ, ಇತ್ತೀಚೆಗೆ ಮಾಧ್ಯಮ ಕ್ಷೇತ್ರದಲ್ಲೂ ಅದಾನಿ ಗ್ರೂಪ್ ಮುಂದುವರಿಯುತ್ತಿದೆ. ಇದರ ಹಿಂದೆ ಅನೇಕಾನೇಕ ಆಯಾಮಗಳೂ ಇವೆ! ಅವುಗಳನ್ನು ನೋಡೋಣ.
ಫೋರ್ಬ್ಸ್ ಗೌತಮ್ ಅದಾನಿ ಅವರನ್ನು self-made billionaire ಎಂದು ಕರೆದಿದೆ. ಅಂದರೆ ಸ್ವಂತ ಪ್ರಯತ್ನದಿಂದ, ಪರಿಶ್ರಮದಿಂದ ಬಿಲಿಯನೇರ್ ಆದವರು. ನಿಜ. ಅದಾನಿ ಗ್ರೂಪ್‌ನ ದಿಗ್ಗಜ ಕಂಪನಿಗಳು, ಬಂದರುಗಳು, ಏರ್‌ಪೋರ್ಟ್, ವಿದ್ಯುತ್ ವಿತರಣೆ, ಉತ್ಪಾದನೆಯ ದಿಗ್ಗಜ ಕಂಪನಿಗಳನ್ನು ಕಂಡಾಗ 60 ವರ್ಷದ ಉದ್ಯಮಿಯ ಸಾಧನೆ, ಎಂಥವರಲ್ಲೂ ಸ್ಪೂರ್ತಿ ತುಂಬದಿರದು. ಏಕೆಂದರೆ ಗೌತಮ್ ಅದಾನಿ ಹುಟ್ಟಿನಿಂದಲೇ ಬಂಗಾರದ ಚಮಚವನ್ನು ಬಾಯಲ್ಲಿಟ್ಟುಕೊಂಡು ಬೆಳೆದವರಲ್ಲ. ಸಾಮಾನ್ಯ ಮಧ್ಯಮ ವರ್ಗದ ಕುಟುಂಬದಲ್ಲಿ 1962ರಲ್ಲಿ ಜನಿಸಿ, ಕಷ್ಟ ಕಾರ್ಪಣ್ಯಗಳ ಬಾಲ್ಯವನ್ನು ಕಳೆದವರು. ಕಾಲೇಜು ವಿದ್ಯಾಭ್ಯಾಸವನ್ನು ಪೂರ್ಣಗೊಳಿಸದೆ ಅಹಮದಾಬಾದ್‌ನಿಂದ ಮುಂಬಯಿಗೆ ಬಂದಿಳಿದಾಗ 20 ವರ್ಷ ಹುಡುಗನ ಬಳಿ ಇದ್ದುದು ಕೇವಲ 100 ರೂಪಾಯಿ ಮಾತ್ರ! ಆದರೆ ಆತನಲ್ಲಿ ಭವಿಷ್ಯದಲ್ಲಿ ಒಂದು ದಿನ ದೊಡ್ಡ ಉದ್ಯಮಿಯಾಗಬೇಕು ಎಂಬ ಅಚಲ ಸಂಕಲ್ಪ ಇತ್ತು! ಅದು ನಿಜವಾದ ಬಗೆ ಯಾವುದೇ ಸಿನಿಮಾ ಕಥೆಗಿಂತ ಕಡಿಮೆಯೇನಲ್ಲ…!
(ಇನ್ನೂ ಇದೆ)
ಇದನ್ನೂ ಓದಿ: Brand story | ಅಂದು ರಿಕ್ಷಾ ಚಾಲಕ, ಇಂದು ಬಿಸಿನೆಸ್ 500 ಕೋಟಿ ವಾರ್ಷಿಕ, ಅವರೇ ಬಿಂದು ಜೀರಾ ಮಾಲೀಕ!