Site icon Vistara News

Expert Opinion | ಲಂಡನ್‌ ಫೈರ್‌ನಂತಹ ಅವಘಡ ಬೆಂಗಳೂರಿನಲ್ಲಿ ಘಟಿಸುವ ಮೊದಲು ಜಾಗೃತರಾಗೋಣ

Ashok KM gowda PHOTO

ಅಶೋಕ್‌ ಕೆ.ಎಂ. ಗೌಡ
ಸಾಮಾನ್ಯವಾಗಿ ಮುಂಬೈಯಲ್ಲಿ ಮಳೆ ನೀರಿನ ಅನಾಹುತ, ಚೆನ್ನೈಯಲ್ಲಿ ಮಳೆ ನೀರು ತುಂಬಿಕೊಂಡಿತು ಎಂಬ ಮಾತುಗಳು ಕೇಳಿಬರುತ್ತವೆ. ಚೆನ್ನೈ ನಗರ ಸಮುದ್ರ ಮಟ್ಟದಿಂದ 6.7 ಮೀಟರ್‌ ಎತ್ತರದಲ್ಲಿದೆ. ಮುಂಬೈ 14 ಮೀಟರ್‌ ಎತ್ತರದಲ್ಲಿದೆ. ಆದರೆ ಸಮುದ್ರ ಮಟ್ಟಕ್ಕಿಂದ 900 ಮೀಟರ್‌ ಎತ್ತರದಲ್ಲಿರುವ, ಕೆಂಪೇಗೌಡರು ಕಟ್ಟಿದ ನಾಡು ಬೆಂಗಳೂರು. ಸಮುದ್ರದ ತೀರಕ್ಕಿಂತ ಎಷ್ಟು ಎತ್ತರವಿದ್ದರೂ ಏಕೆ ಬೆಂಗಳೂರಿನಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗುತ್ತಿದೆ ಎಂದು ಕೆಲವರು ಪ್ರಶ್ನಿಸುತ್ತಾರೆ. ಸಮುದ್ರ ಮಟ್ಟದಿಂದ ಬೆಂಗಳೂರು ಇಷ್ಟು ಎತ್ತರವಿದ್ದರೂ ನೀರು ಏಕೆ ನಿಲ್ಲುತ್ತಿದೆ?

ಇದಕ್ಕೆಲ್ಲ Global Warning ಕಾರಣವೇ? ರಾಜ ಕಾಲುವೆಗಳ ಒತ್ತುವರಿ ಸಮಸ್ಯೆಯೇ? ಕೆರೆಗಳನ್ನು ಮುಚ್ಚಿ ಬಡಾವಣೆ ನಿರ್ಮಿಸಿರುವ ಸಮಸ್ಯೆಯೇ? ಅನಧಿಕೃತ ಕಟ್ಟಡಗಳೇ? ಬಿಬಿಎಂಪಿಯ ಆಡಳಿತ ವೈಫಲ್ಯವೇ? ರಾಜಕಾರಣಿಗಳ ನಿರ್ಲಕ್ಷವೇ? ಅಧಿಕಾರಿಗಳ ನಿರ್ಲಕ್ಷವೇ?ವಿವಿಧ ಇಲಾಖೆಗಳ ನಡುವಿನ ಸಮನ್ವಯತೆ ಸಮಸ್ಯೆಯೇ?

15-16ನೇ ಶತಮಾನದಲ್ಲಿ ನಾಡಪ್ರಭು ಕೆಂಪೇಗೌಡರು ಒಂದು ಸುಂದರ ನಗರವನ್ನು ನಿರ್ಮಿಸಿದರು. ಅದರಲ್ಲಿ ಕುಲ ಕಸುಬುಗಳ ಪ್ರಕಾರವಾಗಿ ವಿಂಗಡಿಸಿದಂತಹ ಬೀದಿಗಳು ಇದ್ದವು, ನಗರಕ್ಕೆ ಯಾವುದೇ ರೀತಿಯ ಕೆರೆ, ನದಿ, ಸಮುದ್ರಗಳು ಇಲ್ಲವಾದ್ದರಿಂದ ಮಳೆ ನೀರಿನ ಕೊಯ್ಲಿನ (Rain Water Harvesting) ಆಧಾರದಲ್ಲಿ ಬೆಂಗಳೂರು ಮತ್ತು ಸುತ್ತಮುತ್ತ ನಗರಗಳು ನಿರ್ಮಾಣವಾಗಿದ್ದವು.

ಒಂದು ಕೆರೆಯಿಂದ ಇನ್ನೊಂದು ಕೆರೆಗೆ ಜೋಡಣೆ ಮಾಡಿ ಈ ಜೋಡಣೆ ಮುಖಾಂತರವಾಗಿ ಮಳೆ ನೀರನ್ನು ಸಂರಕ್ಷಣೆ ಮಾಡುವುದು, ಇದನ್ನು ರಾಜಕಾಲುವೆಗಳ ಮೂಲಕ ಜೋಡಣೆ ಮಾಡಿದ್ದರು. ಕೆಲವು ಪುಸ್ತಕಗಳನ್ನು ನಾವು ಓದಿದಾಗ ತಿಳಿಯುವುದೇನೆಂದರೆ, ಒಂದು ಕೆರೆಯ ನಿರ್ಮಾಣಕ್ಕಾಗಿ ಕನಿಷ್ಠ ಪಕ್ಷ ಮೂರರಿಂದ ಹತ್ತು ವರ್ಷ ತೆಗೆದುಕೊಳ್ಳುತ್ತಿದ್ದರು. ರಾಜಕಾಲುವೆಗಳ ನಿರ್ಮಾಣಕ್ಕಾಗಿ 5 ವರ್ಷಗಳಿಂದ 15 ವರ್ಷಗಳನ್ನು ತೆಗೆದುಕೊಂಡಿದ್ದರು ಎಂದು ಸೂಚಿಸಲಾಗಿದೆ.

ಪ್ರತಿಯೊಂದು ಯೋಜನೆಯೂ ಸಮಗ್ರತೆಯ ನೋಟವನ್ನು ಹೊಂದಿರುತ್ತಿದ್ದವು. ಪ್ರತಿ ಪಾಳೆಯಗಾರರು, ಜಮೀನ್ದಾರಿ ಜೋಡಿದಾರರು, ಸಾಮ್ರಾಟ ಮಹಾರಾಜರು ಒಂದೇ ದೃಷ್ಟಿಕೋನದಲ್ಲಿ ಕಾರ್ಯ ಮಾಡುತ್ತಿದ್ದರು ಎನ್ನುವುದೂ ಹಳೆಯ ಕೃತಿಗಳನ್ನು ಓದಿದಾಗ ತಿಳಿದುಬರುತ್ತದೆ. ಈ ಕಾರ್ಯದಲ್ಲಿ ಪ್ರತಿಯೊಬ್ಬರೂ ಸಾಮಾಜಿಕ ಕಳಕಳಿಯಿಂದಾಗಿ ಈ ಕೆರೆಗಳನ್ನು ನಿರ್ಮಿಸಿದರು. ತದನಂತರದಲ್ಲಿ ಹಳ್ಳಿಗಳನ್ನು ಕಟ್ಟಿದ್ದರು, ತದನಂತರದಲ್ಲಿ ದೇವಸ್ಥಾನಗಳನ್ನು ನಿರ್ಮಿಸಿದ್ದರು. ಅಂದರೆ ಅರ್ಥ ಯಾವುದೇ ಕಾರ್ಯವನ್ನೂ ಶಿಸ್ತಿನಿಂದ ಮಾಡಿದಾಗ ನಗರ ನಿರ್ಮಾಣ ಅಥವಾ ನಾಡಿನ ನಿರ್ಮಾಣ ಸಮಗ್ರವಾಗಿ ಆಗುತ್ತದೆ ಎಂದು ಅರ್ಥ.

ಕೆಂಪೇಗೌಡರು ಕಟ್ಟಿದಂತಹ ಈ ವೈಭವದ ನಮ್ಮ ನಗರ ಬೆಂಗಳೂರನ್ನು, ತದನಂತರದಲ್ಲಿ ಬಂದಂತಹ ರಾಜರು, ಒಡೆಯರುಗಳು, ಬ್ರಿಟಿಷರು ಸಹ ಅನೇಕ ರೀತಿಯ ತಮ್ಮದೇ ಕೊಡುಗೆಗಳ ಮೂಲಕ ಉಳಿಸಿಕೊಂಡರು. ಅನೇಕ ಗ್ರಾಮಗಳು ನಗರವಾದಾಗ ಒಂದು ನಗರ ಹುಟ್ಟಿಕೊಳ್ಳುವಂತೆಯೇ ಬೆಂಗಳೂರು ನಿರ್ಮಾಣವಾಯಿತು.

ಮೈಸೂರಿನಲ್ಲಿದ್ದ ಹೆಚ್ಚಿನ ತಾಪಮಾನ ತಡೆಯಲು ಆಗದ ಬ್ರಿಟಿಷರು ಬಂದು ನೆಲೆಸಿದ್ದು ಬೆಂಗಳೂರಿನಲ್ಲಿ. ಬೆಂಗಳೂರಿನ ವಾತಾವರಣವನ್ನು ನೋಡಿ ಅನೇಕ ಜನ ಮೇಧಾವಿಗಳು, ಬುದ್ಧಿವಂತರು ಸಹ ಬ್ರಿಟಿಷರೊಂದಿಗೆ ಬಂದು ಬೆಂಗಳೂರಿನಲ್ಲಿ ನೆಲೆಸಿದರು. ಇದರಿಂದಾಗಿ ಬುದ್ಧಿವಂತರ ನಗರ ಎಂದು ಸಹ ಬೆಂಗಳೂರನ್ನು ಕರೆಯಲಾಗುತ್ತಿತ್ತು.

ಇದರಿಂದಾಗಿಯೇ ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಕಾಲೇಜುಗಳು, ಮೆಡಿಕಲ್ ಕಾಲೇಜುಗಳು, ಭಾರತೀಯ ವಿಜ್ಞಾನ ಸಂಸ್ಥೆ, ಮುಂತಾದ ಪ್ರತಿಷ್ಠಿತ ಸಂಸ್ಥೆಗಳು ಸ್ಥಾಪನೆಗೊಂಡವು.
ನಂತರದ ಅಭಿವೃದ್ಧಿಯ ವೇಗದಲ್ಲಿ ಜವಾಹರಲಾಲ್‌ ನೆಹರೂ ಅವರು ಪ್ರುಮುಖ ಕಂಪನಿಗಳನ್ನು ಬೆಂಗಳೂರಿನಲ್ಲಿ ಸೃಷ್ಟಿಸಲು ನಿರ್ಣಯಿಸಿ ಎಚ್‌ಎಎಲ್‌, ಬಿಇಎಂಎಲ್‌, ಐಟಿಐ, ಬಿಎಚ್‌ಇಎಲ್‌, ಎಚ್‌ಎಚ್‌ಎಂಟಿ ಮುಂತಾದ ಕಂಪನಿಗಳು ಆರಂಭವಾದವು. ಇದರಿಂದಾಗಿ ಬೆಂಗಳೂರಿನಲ್ಲಿ ಜನ ಬಂದು ನೆಲೆಸಲು ಪ್ರಾರಂಭಿಸಿದರು.
1960ರಿಂದ 1980ರ ದಶಕದಲ್ಲಿ ನಿಧಾನ ಪ್ರಗತಿಯಲ್ಲಿದ್ದಂತಹ ಬೆಂಗಳೂರಿಗೆ ವೇಗ ಕೊಟ್ಟದ್ದು 1992ರ, LPG ಎಂದೇ ಖ್ಯಾತಿ ಪಡೆದ ಉದಾರೀಕರಣ, ಖಾಸಗೀಕರಣ ಹಾಗೂ ಜಾಗತೀಕರಣದ ಕಾಲಘಟ್ಟದಲ್ಲಿ.ಈ ಸಮಯದಲ್ಲಿ ಪ್ರಾರಂಭವಾಗಿದ್ದ ಅನೇಕ ಸಾಫ್ಟ್‌ವೇರ್‌ ಕಂಪನಿಗಳ ಬೀಡಾಗಿ ಬೆಂಗಳೂರು ಈಗ ರೂಪುಗೊಂಡಿದೆ.

ಬೇಡಿಕೆ ಮತ್ತು ಪೂರೈಕೆಯ ಭರಾಟೆ

ಇಲ್ಲಿಯವರೆಗೂ ಅಧಿಕೃತವಾಗಿ ನಿರ್ಮಾಣಗೊಂಡಿದ್ದಂತಹ ಬಡಾವಣೆಗಳು, ಬೇಡಿಕೆ ಮತ್ತು ಪೂರೈಕೆಯ ಭರಾಟಗೆ ಸಿಕ್ಕಿ ಅನೇಕ ರೀತಿಯ ಮಾರ್ಪಾಡುಗಳನ್ನು ಮಾಡಿಕೊಳ್ಳುತ್ತಾ ಹೋದವು.ಅನಧಿಕೃತವಾಗಿ ಲೇಔಟ್‌ಗಳು, ಅಪಾರ್ಟ್‌ಮೆಂಟ್‌ಗಳು ಬೆಂಗಳೂರಿನಾದ್ಯಂತ ತಲೆಯೆತ್ತಲು ಆರಂಭಿಸಿದವು.

ಕರ್ನಾಟಕ, ತಮಿಳುನಾಡು ಮತ್ತು ಆಂಧ್ರದಿಂದ ಬಂದಂತಹ ಕೆಲವೇ ಜನ ಇದ್ದಂತಹ ಬೆಂಗಳೂರಿಗೆ, ಉತ್ತರ ಭಾರತದ ನಗರಗಳು ಗ್ರಾಮೀಣ ಪ್ರದೇಶಗಳು ಹಾಗೆಯೇ ಅನೇಕ ರಾಷ್ಟ್ರಗಳಿಂದಲೂ ಜನರು ಬಂದು ನೆಲೆಸಿದರು.

ಕಾನ್ಪುರ, ಪಟನಾ ಮುಂತಾದ ನಗರಗಳು ಯಾವುದೇ ರೀತಿಯ ನಿಯಂತ್ರಣವಿಲ್ಲದೆ ಬೆಳೆದಿದ್ದವು. ತಾಂತ್ರಿಕ ಪರಿಭಾಷೆಯಲ್ಲಿ ಹೇಳುವುದಾದರೆ, ರಸ್ತೆಗಳ ಶೇಕಡಾವಾರು ಗುಣಮಟ್ಟದ ಅಂತಾರಾಷ್ಟ್ರೀಯ ಮಾನದಂಡವಿದೆ. ಇದರ ಪ್ರಕಾರ, 28%ಗಿಂತ ಹೆಚ್ಚಿನ ಗುಣಮಟ್ಟವನ್ನು ಹೊಂದಿರಬೇಕು. ಆದರೆ ಕಾನ್ಪುರ, ಪಟನಾ ಮುಂತಾದ ನಗರಗಳು ಕೇವಲ 15% ಗುಣಮಟ್ಟ ಹೊಂದಿದ್ದವು. ಆದರೆ ಬೆಂಗಳೂರು ಇದೆಲ್ಲದಕ್ಕಿಂತ ಸಾಕಷ್ಟು ಮುಂದಿತ್ತು. ಹಾಗಾಗಿ ಬೇರೆ ರಾಜ್ಯದ ಜನರೂ ಇತ್ತ ಆಕರ್ಷಿತರಾದರು.

ಇದರಿಂದ ಡೆವಲಪರ್‌ಗಳು, ಬಿಲ್ಡರ್‌ಗಳು ಬೈಲಾ ಉಲ್ಲಂಘನೆ ಮಾಡಿ, ಅಪಾರ್ಟ್‌ಮೆಂಟ್‌ ಹಾಗೂ ಲೇಔಟ್‌ ನಿರ್ಮಿಸಿದರು. ಇದೇ ಸ್ವರ್ಗವೆಂದು ಜನರು ಭಾವಿಸಿದರು. ಬೇಡಿಕೆಯನ್ನು ಪೂರೈಸಲು ಅನೇಕ ಬಡಾವಣೆಗಳು ಈ ರೀತಿ ನಿರ್ಮಾಣಗೊಳ್ಳಲು ಪ್ರಾರಂಭವಾದವು. ಹಾಗೆಯೇ ಕಟ್ಟಡಗಳು ಸಹ ಯಾವುದೇ ರೀತಿಯ ಸರ್ಕಾರಿ ಅನುಮೋದಿತ ನಿಯಮಾನುಸಾರ ನಿರ್ಮಾಣಗೊಳ್ಳಲೇ ಇಲ್ಲ. ನಕಲಿ ಒಪ್ಪಿಗೆಗಳು ನಿತ್ಯಜೀವನದಲ್ಲಿ ಹಾಸುಹೊಕ್ಕಾಗಿಬಿಟ್ಟವು.

ಇದನ್ನೂ ಓದಿ | Bengaluru Rain | ರಾಜಧಾನಿ ಮುಳುಗಿದ್ದು ಕಾಂಗ್ರೆಸ್‌ನಿಂದ: ಸಿಎಂ ಬೊಮ್ಮಾಯಿ ಆರೋಪ

ದಾಸೇಗೌಡರ ವರದಿ ಕಸದ ಬುಟ್ಟಿಗೆ ಸೇರಿತು

ಬೆಂಗಳೂರಿನಲ್ಲಿ ನೀರಿನ ಹರಿವನ್ನು ಸರಾಗಗೊಳಿಸಲು ನಾಲ್ಕು ದಶಕದ ಹಿಂದೆಯೇ ಪ್ರಯತ್ನಗಳನ್ನು ನಡೆಸಲಾಗಿತ್ತು. 1983ರಲ್ಲಿ ನಗರ ನಿರ್ಮಾಣ ಸರಿ ತೂಗುವುದಕ್ಕಾಗಿ ರಾಜ ಕಾಲುವೆಗಳನ್ನು ಸರಿಯಾದ ರೀತಿಯಲ್ಲಿ ಸರ್ವೇ ಮಾಡಿಸಿ, ಅದಕ್ಕೆ ಸೂಕ್ತವಾದ ಗಡಿಗಳನ್ನು ನಿರ್ಮಿಸಿ, ಒತ್ತುವರಿ ಆಗಿರುವ ರಾಜಕಾರಣಿಗಳನ್ನು ತೆರವುಗೊಳಿಸಲು ನಿರ್ಧರಿಸಲಾಯಿತು. ಬೆಂಗಳೂರಿನಲ್ಲಿ ಇರುವ ಎಲ್ಲ ಕೆರೆಗಳನ್ನೂ ಸರ್ವೇ ಮಾಡಿಸಿ, ಅದರ ಹದ್ದುಬಸ್ತು ಸರಿಪಡಿಸಲು ನಿರ್ಣಯಿಸಲಾಗಿತ್ತು.

ಅಂದಿನ ಬೆಂಗಳೂರು ಸಿಟಿ ಕಾರ್ಪೊರೇಷನ್‌ಗೆ ಈ ಅಧಿಕಾರವನ್ನು ನೀಡಿ, ಅಂದಿನ ಚೀಫ್ ಇಂಜಿನಿಯರ್ ಆಗಿದ್ದ ದಾಸೇಗೌಡರಿಗೆ ಜವಾಬ್ದಾರಿಯನ್ನು ನೀಡಲಾಗಿತ್ತು. ದಾಸೇಗೌಡರ ನೇತೃತ್ವದಲ್ಲಿ ಸರ್ವೇ ಕಾರ್ಯ ಕೈಗೊಂಡು ವರದಿಯನ್ನು ಸಲ್ಲಿಸಲಾಗಿತ್ತು. ಆದರೆ ಅಂದಿನ ಸರ್ಕಾರಗಳು ವರದಿಯನ್ನು ಪರಿಗಣನೆಗೆ ತೆಗೆದುಕೊಳ್ಳದೆ ಕಸದ ಡಬ್ಬಿಗೆ ಎಸೆಯಿತು ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.

ತಮ್ಮದೇ ತಪ್ಪನ್ನು ಸರಿಪಡಿಸಿಕೊಂಡ ಬಿಲ್ಡರ್‌ಗಳು

ನಗರದಲ್ಲಿ ಐಟಿಬಿಟಿ ಕ್ರಾಂತಿಯ ನಂತರ ರಿಯಲ್‌ ಎಸ್ಟೇಟ್‌ ಮುಂಚೂಣಿಗೆ ಬಂದಿತು. ಅನಧಿಕೃತ ನಿರ್ಮಾಣಗಳು, ಅನಧಿಕೃತ ಲೇಔಟ್‌ಗಳು ನಗರದಾದ್ಯಂತ ಮೂಡಲಾರಂಭಿಸಿದವು. ಡೆವಲಪರ್‌ಗಳು ದುಡ್ಡು ಮಾಡುವುದರ ಜತೆಗೆ ರಾಜಕಾರಣಕ್ಕೂ ಬಂದರು. ಅವರೇ ಈ ಹಿಂದೆ ಮಾಡಿದ್ದ ಅನಧಿಕೃತ, ಕಾನೂನುಬಾಹಿರ ಕೆಲಸಗಳನ್ನು ಸಕ್ರಮ ಮಾಡಿಕೊಂಡರು.

ರಾಜಕಾಲುವೆ, ಕೆರೆಗಳ ಒತ್ತುವರಿ ಎಂದೂ ಸರಿಯಾಗಿ ತೆರವು ಆಗಲೇ ಇಲ್ಲ. ಬಿಬಿಎಂಪಿ ಬೈಲಾ ಸೇರಿ ಎಲ್ಲ ಕಾನೂನುಗಳೂ ಮೂಕಪ್ರೇಕ್ಷಕವಾಗಿದ್ದವು. ಹಣ ಕೊಟ್ಟರೆ ಅಧಿಕಾರಿಗಳು ಬಾಯಿ ಮುಚ್ಚಿಕೊಳ್ಳುತ್ತಾರೆ ಎಂದು ತಿಳಿದ ಬಿಲ್ಡರ್‌ಗಳು G+3 ಅನುಮತಿ ಬದಲಿಗೆ G+ 5/6/7 ಕಟ್ಟಡಗಳನ್ನು ನಿರ್ಮಾಣ ಮಾಡಲು ಆರಂಭಿಸಿದರು. ರಸ್ತೆಗಳಲ್ಲಿಯೇ ಕಟ್ಟಡಗಳನ್ನು ನಿರ್ಮಿಸಲಾಯಿತು.

ಕಾರಣರು ಯಾರು?

15ನೇ ಶತಮಾನದಲ್ಲಿ ಲಂಡನ್‌ ಫೈರ್‌ ಎನ್ನುವ ಒಂದು ಮಾನವ ನಿರ್ಮಿತ ವಿಕೋಪವು ಅರ್ಧ ಲಂಡನ್ ನಗರವನ್ನು ಸುಟ್ಟು ಹಾಕಿತ್ತು. ಅಲ್ಲಿನ ಆಡಳಿತಗಾರರು ನಿರ್ಧಾರ ಕೈಗೊಳ್ಳುವಿಕೆಯನ್ನು ವಿಳಂಬ ಮಾಡಿದ್ದು ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿ ಅನೇಕರು ಪ್ರಾಣ ತೆತ್ತಿದ್ದರು.

ನೆನಪಿರಲಿ, ಬೆಂಗಳೂರು ಇಂದು ಕೇವಲ ಮಳೆಯಿಂದ ತತ್ತರಿಸಿದೆ. ಇನ್ನು ಮುಂದಿನ ದಿನಗಳಲ್ಲಿ ಬೆಂಕಿಯಲ್ಲಿ ತತ್ತರಿಸುವ ದಿನ ಬರಬಹುದು. ಮುಂದೆ ಪರಿಸ್ಥಿತಿ ಬಂದಾಗ ನೋಡಿಕೊಳ್ಳೋಣ ಎನ್ನುವ ಬೇಜವಾಬ್ದಾರಿಯುತ ಅಧಿಕಾರಿಗಳು, ರಾಜಕಾರಣಿಗಳು, ನಾಗರಿಕರು ಇದಕ್ಕೆಲ್ಲ ಹೊಣೆಯಾಗಲಿದ್ದಾರೆ.

ಇಂದೇ ನಗರವನ್ನು ಸರಿಯಾಗಿ ಕಟ್ಟೋಣ. ಸರಿಯಾದ ರೀತಿಯಲ್ಲಿ ಕಾನೂನುಗಳನ್ನು ಪಾಲನೆ ಮಾಡೋಣ. ಕಾನೂನು ಉಲ್ಲಂಘನೆ ಆಗಿರುವ ಕಡೆಗಳಲ್ಲಿ, ನೊಯ್ಡಾದ ಅವಳಿ ಕಟ್ಟಡಗಳ ಮೇಲೆ ಕೈಗೊಂಡಂತಹ ಕ್ರಮಗಳಿಗೆ ಆಗ್ರಹಿಸೋಣ

ಸರ್ಕಾರವನ್ನು ದೂರುವುದಿಂದಷ್ಟೇ ಪ್ರಯೋಜನವಿಲ್ಲ. ನಮ್ಮ ಕಟ್ಟಡಗಳು ಯಾವ ರೀತಿ ನಿರ್ಮಾಣವಾಗಿವೆ ಎಂದು ಪರೀಕ್ಷಿಸಿಕೊಳ್ಳಬೇಕು. 3rd party consultantಗಳ ಮೂಲಕ ಪರಿಶೀಲನೆ ಕೈಗೊಂಡರೆ ಅನೇಕ ಅಕ್ರಮಗಳು ಹೊರಬರುತ್ತವೆ. ಸರ್ಕಾರ ಕ್ರಮ ಕೈಗೊಳ್ಳುವ ಮುನ್ನ ನಾಗರಿಕರೇ ಸರಿಪಡಿಸಿಕೊಳ್ಳಬಹುದು.

ಇದನ್ನೂ ಓದಿ | Bengaluru Rain | ವಿಲ್ಲಾದಲ್ಲಿ ಶ್ವಾನ ವಿಲವಿಲ, ಎನ್‌ಡಿಆರ್‌ಎಫ್ ತಂಡದಿಂದ ರಕ್ಷಣೆ

Exit mobile version