Site icon Vistara News

ಗ್ಲೋಕಲ್‌ ಲೋಕ ಅಂಕಣ: ಚಾಟ್ ಜಿಪಿಟಿ ಮತ್ತು ಉದ್ಯೋಗ; ಹೋಗೋದೆಷ್ಟು, ಬರೋದೆಷ್ಟು?

chatgpt ai

ಈಗಾಗಲೇ ಅಲೆ ಎಬ್ಬಿಸಿದ, ಟೆಕ್ ಲೋಕದ ಬಲು ಜನಜನಿತ ಪದ ʻಚಾಟ್ ಜಿಪಿಟಿʼ(chatgpt). ಎಐ (AI- ಕೃತಕ ಬುದ್ಧಿಮತ್ತೆ) ಆಧಾರಿತ ಅದೆಷ್ಟೋ ಸಾಧನಗಳು ಸೊಲ್ಯೂಷನ್‌ಗಳಾಗಿ ರೂಪುಗೊಂಡು ಎಷ್ಟೋ ವರ್ಷಗಳಿಂದ ಆವಿಷ್ಕಾರಗೊಳ್ಳುತ್ತಿದ್ದರೂ ಚಾಟ್ ಜಿಪಿಟಿ ಒಂದು ಮೈಲಿಗಲ್ಲು. ಏಕೆಂದರೆ ಈಗಾಗಲೇ ಬಳಕೆಯ ದೃಷ್ಟಿಯಿಂದ ಅತಿ ಕಡಿಮೆ ಸಮಯದಲ್ಲಿ ಬಲು ಯಶಸ್ಸನ್ನು ಕಂಡಿರುವ ಸಾಧನವಿದು.

ಹಾಗಿದ್ದರೆ ಈ ಚಾಟ್ ಜಿಪಿಟಿ ಎನ್ನುವುದೇ ಎಲ್ಲದಕ್ಕೂ ಉತ್ತರವೇ ಎಂದು ಆಲೋಚಿಸಿದರೆ ಖಂಡಿತ ಅಲ್ಲ. ಮೊದಲೇ ಹೇಳಿದ ಹಾಗೆ ಇದು ಒಂದು ಮಹತ್ವದ ಮೈಲಿಗಲ್ಲು ಅಷ್ಟೇ. ಎಐ ಆಧಾರಿತ ಸಾಧನಗಳು ಹಾಗು ಸಾಂಪ್ರದಾಯಿಕ ಕೆಲಸಗಳ ಮೇಲೆ ಬೀರುವ ಅದರ ಪ್ರಭಾವಗಳನ್ನು ಇಲ್ಲಿ ನೋಡೋಣ.

ಕೆಲ ದಶಕಗಳ ಹಿಂದೆ ಟೈಪ್ ರೈಟರ್‌ಗಳು ಮೊದಲು ಬಂದಾಗ ಬರಹ ಕೇಂದ್ರಿತ ಕೆಲಸಗಳಿಗೆ ತೊಂದರೆ ಉಂಟಾಯಿತು. ರೋಬೊಟ್ಸ್ ಆವಿಷ್ಕಾರಗೊಂಡಾಗ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರರು ತಮ್ಮ ಕೆಲಸದ ಬಗ್ಗೆ ಆತಂಕದಲ್ಲಿದ್ದರು. ಕಂಪ್ಯೂಟರ್ ಪರಿಚಯವಾದಾಗ ಜನ ಕ್ಯಾಲ್ಕುಲೇಟರ್ ಬಳಸುವುದನ್ನು ಕಮ್ಮಿ ಮಾಡಿದರು. ಐಟಿ ಉದ್ಯಮದಲ್ಲಿ ಸಾಂಪ್ರದಾಯಿಕ ಸ್ಟೋರೇಜ್ ಸಿಸ್ಟಮ್‌ಗಳನ್ನೂ ಕ್ಲೌಡ್ ಸಂಗ್ರಹ ವ್ಯವಸ್ಥೆ ಏಕಾಏಕಿ ತಲೆಕೆಳಗೆ ಮಾಡುತ್ತಿದೆ. ಈಗ ಮೊಬೈಲ್ ಕ್ರಾಂತಿಯಿಂದ ಆಗುತ್ತಿರುವ ಪರಿಣಾಮಗಳು ನಮ್ಮ ಕಣ್ಣು ಮುಂದೆಯೇ ಇವೆ.

ಹೀಗೆ ಈ ಮೇಲಿನ ಉದಾಹರಣೆಗಳ ಸಾಲಿನಲ್ಲಿ ಚಾಟ್ ಜಿಪಿಟಿ ಸೇರಿಕೊಳ್ಳುತ್ತದೆ. ಆದರೆ ಈಗಲೇ ಇರುವ ಕೆಲಸಗಳು ಹಾಗು ಅದರ ಬಳಕೆಗಳನ್ನು ವಿಕಸಿಸುವಲ್ಲಿ ಮೇಲಿನ ಉದಾಹರಣೆಗಳು ಬಲು ಮುಖ್ಯವಾದವು. ಐತಿಹಾಸಿಕವಾಗಿ ಉತ್ಪಾದಕತೆ/ ಪ್ರೊಡಕ್ಟಿವಿಟಿ ವೃದ್ಧಿಸುವ ಹಾಗು ಎಫಿಶಿಯೆನ್ಸಿ/ ದಕ್ಷತೆ ಹೆಚ್ಚಿಸುವ ಸಾಧನಗಳು ಆವಿಷ್ಕೃತಗೊಂಡರೆ ಒಂದು ವರ್ಗದ ಕೆಲಸಗಾರರು ತಮ್ಮ ಕೆಲಸ ಕಳೆದುಕೊಳ್ಳುವುದು ಸಹಜ. ಆದರೆ ಇದು ತಮ್ಮ ಕೌಶಲ್ಯಾಭಿವೃದ್ಧಿ/ ಅಪ್ ಸ್ಕಿಲ್ ಮಾಡಿಕೊಳ್ಳಲು ಪ್ರೇರೇಪಿಸುತ್ತದೆ.

ಅಂತೆಯೇ ಒಂದು ಜಾಗತಿಕ ರಿಪೋರ್ಟ್ ಪ್ರಕಾರ ಪ್ರಸ್ತುತ ಇರುವ ಎಲ್ಲ ಕೆಲಸಗಳಲ್ಲೂ ಶೇಕಡಾ 35% ಆಟೋಮೇಷನ್ ಮಾಡಬಹುದಾದಂತಹುದು. ಅಂದರೆ 2030ರ ಸುಮಾರಿಗೆ 40-60 ಲಕ್ಷ ಕೆಲಸಗಳು ಈ ಆಟೋಮೇಷನ್ ಅಡಿ ಮಾಯವಾಗಬಹುದು. ಇದಕ್ಕೆ ಕಾರಣ ಆಗಬಹುದಾದ ಪ್ರಮುಖ ಸಾಧನವೇ ಎಐ ಆಧಾರಿತ ಚಾಟ್ ಜಿಪಿಟಿ.

ಚಾಟ್ ಜಿಪಿಟಿ ಬದಲಿಸಬಹುದಾದಂತಹ ಒಂದು ಪ್ರಮುಖ ವಿಷಯವೆಂದರೆ ‘ಬ್ಯಾಕ್ ಎಂಡ್ ಕೋಡಿಂಗ್ʼ. ಪ್ರಸ್ತುತ ಇರುವ ಕೋಡಿಂಗ್ ಅವಶ್ಯಕತೆಗೆ ಅನುಗುಣವಾಗಿ ಇರುವ ಜನ ಬಹಳಷ್ಟು ಸಮಯ ಈ ಬ್ಯಾಕ್ ಎಂಡ್ ಕೋಡಿಂಗ್ ಮಾಡಲು ಬಳಸುತ್ತಾರೆ. ಆದರೆ ಯಾವದೇ ಪ್ಲಾಟ್‌ಫಾರಂ ಆಗಲಿ, ಯಾವುದೇ ಅಪ್ಲಿಕೇಶನ್ ಆಗಲಿ, ಕ್ಷಣಾರ್ಧದಲ್ಲಿ ಶೇಕಡಾ 85% ನಿಖರತೆಯೊಂದಿಗೆ ಚಾಟ್ ಜಿಪಿಟಿ ಕೋಡ್ ಬರೆಯುತ್ತದೆ. ಶೇಕಡಾ 15% ತಮ್ಮ ಪ್ರಾಜೆಕ್ಟ್ ಅನುಕೂಲಗಳಿಗೆ ತಕ್ಕಂತೆ ಅಳವಡಿಸಿಕೊಳ್ಳುವ ಮಾನವ ಕೇಂದ್ರಿತ ಕೆಲಸಗಳು ಉಳಿಯುತ್ತವೆ.

ಕಾಲ ಕ್ರಮೇಣ ನಮ್ಮ ಮೊಬೈಲ್ ವರ್ಷನ್‌ಗಳು ಅಪ್‌ಗ್ರೇಡ್ ಆದಂತೆ ಚಾಟ್ ಜಿಪಿಟಿ ಕೂಡ ಆವಿಷ್ಕಾರಗೊಳ್ಳಲಿದೆ. ಇದರ ಬಲು ಮುಖ್ಯ ವಿಷಯವೆಂದರೆ ʻಮಷೀನ್ ಲರ್ನಿಂಗ್ʼ. ಮತ್ತಷ್ಟು ಡೇಟಾ ಕ್ರೋಡೀಕರಿಸಿದಷ್ಟು ಎಐ ಮತ್ತಷ್ಟು ತೀಕ್ಷ್ಣ ಹಾಗು ಬಲಿಷ್ಠಗೊಳ್ಳುತ್ತ ಹೋಗುತ್ತದೆ. ಗೂಗಲ್ ಮಾದರಿಯ ಚಾಟ್ ಜಿಪಿಟಿ ಎಂಜಿನ್‌ಗಳು ಮತ್ತಷ್ಟು ಪ್ರೌಢವಾಗುತ್ತವೆ.

ಇದನ್ನೂ ಓದಿ: ಗ್ಲೋಕಲ್‌ ಲೋಕ ಅಂಕಣ: ಎಐ ಇದೆ, ಚಾಟ್ ಜಿಪಿಟಿ ಬಂದಿದೆ, ಮುಂದೇನು?

ಯಾವುದೇ ಆವಿಷ್ಕಾರ ಹೊಸ ಅವಕಾಶಗಳನ್ನು ಸೃಷ್ಟಿಸುವುದು ಸರ್ವೇ ಸಾಮಾನ್ಯ. ಅಂತೆಯೇ ಚಾಟ್ ಜಿಪಿಟಿ ಕೂಡ ಹೆಚ್ಚು ಬಳಸಿದಂತೆ ಹೆಚ್ಚು ಅಪ್ಲಿಕೇಶನ್‌ಗಳು ಹೊರ ಹೊಮ್ಮುತ್ತವೆ. ಕೇವಲ ಡೇಟಾ ಆಧಾರಿತ ಔಟ್‌ಪುಟ್ ಕೊಡುವ ಚಾಟ್ ಜಿಪಿಟಿಯ ಬದಲು ಮಾನವ ಕೇಂದ್ರಿತ ನಿರ್ಣಯ/ ಡಿಸಿಷನ್ ಟ್ರೀ ಭಾಗದಲ್ಲಿ ಹೆಚ್ಚು ಕೆಲಸಗಳು ಕೇಂದ್ರೀಕೃತ ಗೊಳ್ಳುತ್ತವೆ.

ಡೇಟಾ ಕ್ಯುರೇಟ್ ಮಾಡುವ, ಇರುವ ಡೇಟಾ ಮೂಲಕ ಪರಿಷ್ಕರಿಸುವ ಹಾಗು ಸೊಲ್ಯೂಷನ್ ಶಿಫಾರಸು ಮಾಡುವ ಕೆಲಸ ಮಾನವರೇ ಮಾಡಬೇಕು. ಹಾಗಾಗಿ ಹೆಚ್ಚು ಹೆಚ್ಚು ಉದ್ಯಮಗಳು ಎಐ ಅಡಾಪ್ಟ್ ಮಾಡಿಕೊಂಡಷ್ಟು ಮತ್ತಷ್ಟು ಮಾನವ ಆಧಾರಿತ ಕೆಲಸಗಳು ಹುಟ್ಟಿಕೊಳ್ಳುತ್ತವೆ ಅಥವಾ ಇರುವ ರೋಲ್ಸ್ ಮತ್ತಷ್ಟು ಡಿಫೈನ್ ಹಾಗು ರಿಫೈನ್ ಆಗುತ್ತಾ ಬರುತ್ತದೆ.

ಒಟ್ಟಿನಲ್ಲಿ ಎಐ ಆಧಾರಿತ ಚಾಟ್ ಜಿಪಿಟಿ ವೃದ್ಧಿಯಾದಷ್ಟು ಮತ್ತಷ್ಟು ಆಟೋಮೇಷನ್ ಕೆಲಸಗಳಿಗೆ ಕತ್ತರಿ ಹಾಕುತ್ತ, ಮಾನವ ಕೇಂದ್ರಿತ ಡಿಸಿಷನ್ ಮತ್ತು ಪ್ರಾಂಪ್ಟ್‌ಗಳನ್ನೂ ವಿಕಸಿಸುವ ಕೆಲಸಗಳಿಗೆ ಅನುವು ಮಾಡಿಕೊಡುವುದಂತೂ ಖಂಡಿತ.

ಇದನ್ನೂ ಓದಿ: ಗ್ಲೋಕಲ್‌ ಲೋಕ ಅಂಕಣ | ಮೆಟಾವರ್ಸ್ ಮುಂದಿರುವ ಸವಾಲುಗಳು

Exit mobile version