Site icon Vistara News

ಗೋ ಸಂಪತ್ತು | ಅಮೃತ್ ಮಹಲ್… ದಿ ವಾರಿಯರ್ ಬ್ರೀಡ್!!

Amrit Mahal ಗೋ ಸಂಪತ್ತು
Amrit Mahal ಗೋ ಸಂಪತ್ತು

ಈ ದೇಶದ ಗೋತಳಿಗಳಲ್ಲೇ ಅತ್ಯಂತ ಪ್ರಸಿದ್ಧ ಹಾಗೂ ಐತಿಹಾಸಿಕ ಪ್ರಸಿದ್ಧ ತಳಿಯೊಂದಿದೆ. ಈ ತಳಿ ಪ್ರಸಿದ್ಧಿಯಾಗಿದ್ದೇ ತನ್ನ ಹೋರಾಟ ಮನೋಭಾವದಿಂದ. ಯುದ್ಧಗಳಲ್ಲಿ ಇದನ್ನು ಕಂಡರೇನೆ ಶತ್ರುಸೈನ್ಯ ದಿಕ್ಕಾಪಾಲಾಗಿ ಓಡುತ್ತಿತ್ತು. ತನ್ನ ಕೆಚ್ಚದೆಯ ಕಿಚ್ಚಿನಿಂದಲೇ ಗೆಲುವು ತಂದುಕೊಡುತ್ತಿದ್ದ ಈ ತಳಿಯನ್ನು “ವಾರಿಯರ್ ಬ್ರೀಡ್” ಎಂಬುದಾಗಿ ಕರೆಯುತ್ತಿದ್ದರು. ಅದೇ ಪ್ರಪಂಚದ ಏಕೈಕ ಕೆಲಸಗಾರ ಮತ್ತು ಹೋರಾಟದ ತಳಿ ಎಂಬ ಹೆಗ್ಗಳಿಕೆ ಹೊಂದಿರುವ ಅಮೃತ್ ಮಹಲ್ (Amruth Mahal) ತಳಿಗಳು.

ಪ್ರಪಂಚದಲ್ಲೇ ಮೊಟ್ಟ ಮೊದಲು ಅಭಿವೃದ್ಧಿ ಪಡಿಸಲಾದ ದನದ ತಳಿಯಿದು. ಇಂಗ್ಲೆಂಡಿನಲ್ಲಿ ಅತ್ಯಂತ ಹಳೆಯ ತಳಿಯೆಂದು ಗುರುತಿಸಲ್ಪಡುವ “ಶಾರ್ಟ್‌ಹಾರನ್‌”ಗಿಂತ ಮೊದಲೇ ಈ ತಳಿಯನ್ನು ಇಲ್ಲಿ ಅಭಿವೃದ್ಧಿಪಡಿಸಲಾಗಿತ್ತು ಎನ್ನುತ್ತವೆ ದಾಖಲೆಗಳು. ಹಿಂದೆ ಈ ತಳಿ ಹಾಲು ಕೊಡುವುದಕ್ಕೂ ಮತ್ತು ಹೊಲ ಉಳುವುದಕ್ಕೂ ಸೈ ಎನಿಸಿಕೊಂಡಿತ್ತು. ಇಂದು ಕೇವಲ ಮೂರ್ನಾಲ್ಕು ಲೀಟರ್ ಹಾಲನ್ನು ನೀಡುವ ಈ ತಳಿ ಒಂದೆರಡು ದಶಮಾನಗಳ ಹಿಂದೆ ಸುಮಾರು 15 ರಿಂದ 16 ಲೀಟರ್ ಹಾಲನ್ನು ನೀಡುತ್ತಿದ್ದುದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಹಾಗೆಯೇ ಇವು ದಣಿವಿಲ್ಲದೆ ಸತತ 16 ಗಂಟೆಗೂ ಹೆಚ್ಚು ಕಾಲ ಕೆಲಸ ಮಾಡುವ ಶಕ್ತಿಯನ್ನು ಹೊಂದಿರುವುದೂ ಸಾಬೀತಾಗಿದೆ.

ಕ್ರಿ.ಶ.1572 ರಿಂದ 1600 ರಲ್ಲಿ ಶ್ರೀರಂಗಪಟ್ಟಣದಲ್ಲಿದ್ದ ವಿಜಯನಗರದ ರಾಯಭಾರಿ ತಮ್ಮ ಆಡಳಿತದ ಸುಭದ್ರತೆ, ಸುರಕ್ಷಣೆ ಮತ್ತು ಅನುಕೂಲಕ್ಕಾಗಿ ವಿಜಯನಗರದ ಕರುಹಟ್ಟಿಯಿಂದ ಕೆಲವು ಉತ್ತಮ ದನಗಳ ಹಿಂಡನ್ನು ತರಿಸಿಕೊಂಡರು. ನಂತರ ಈ ದನಗಳು ಮತ್ತು ಆಗ ಮೈಸೂರಿನಲ್ಲಿದ್ದ ಸ್ಥಳೀಯ ದನಗಳು ಸೇರಿ ಅವುಗಳಿಂದ ಉತ್ಪನ್ನವಾದ ಪೀಳಿಗೆಯೇ ಇಂದು ಲೋಕ ಪ್ರಸಿದ್ಧವಾದ ಅಮೃತಮಹಲ್ ದನಗಳೆಂದು ಮೈಸೂರಿನ ಚರಿತ್ರೆಯಿಂದ ತಿಳಿದುಬರುತ್ತದೆ.

ಈ ತಳಿ ನಮ್ಮ ದೇಶದಲ್ಲಿರುವ ಸಾಕಷ್ಟು ಗೋತಳಿಗಳಲ್ಲಿಯೇ ವಿಶೇಷವಾಗಿ ಕಂಡುಬರುತ್ತದೆ. ತನ್ನ ಸದೃಢ ದೇಹ, ಬಿಗುವಾದ ಮೈಕಟ್ಟು, ಚೂಪಾದ ಕೊಂಬು, ತೀಕ್ಷ್ಣವಾದ ನೋಟದಿಂದಲೇ ನೋಡುವವರ ಎದೆ ನಡುಗಿಸುವ ತಾಕತ್ತು ಈ ತಳಿಯ ದನಗಳದ್ದು. ಸಾಕಿದವರನ್ನು ಬಿಟ್ಟು ಬೇರೆ ಯಾರೇ ಇದರ ಹತ್ತಿರ ಸುಳಿಯುವುದಕ್ಕೆ ಒಂದು ಕ್ಷಣ ಯೋಚಿಸಬೇಕು. ಇವುಗಳಿಗೆ ನೆನೆಪಿನ ಶಕ್ತಿ ಹೆಚ್ಚು. ಒಂದರ್ಥದಲ್ಲಿ ಇವುಗಳು ಭಾವನಾ ಜೀವಿಗಳು. ಇಂತಹ ಅಮೃತ್ ಮಹಲ್ ದನಗಳಿಗೆ ಸಂಬಂಧಿಸಿದಂತೆ ಸಾಕಷ್ಟು ರೋಚಕ ಕಥೆಗಳಿವೆ.

ಕಾಡಿಗೆ ಮೇಯುವುದಕ್ಕೆ ಹೋಗಿ ಹಿಂತಿರುಗಿ ಬರುವಾಗ ತಮ್ಮ ಕೊಂಬಿಗೆ ಹುಲಿ ಅಥವಾ ಚಿರತೆಯನ್ನು ಸಿಕ್ಕಿಸಿಕೊಂಡು ಬರುತ್ತಿದ್ದವು ಎಂದೆಲ್ಲಾ ಬಣ್ಣಿಸಲಾಗುತ್ತದೆ. ಯಾವುದೇ ಕ್ರೂರ ಪ್ರಾಣಿಗಳೂ ಇವನ್ನು ಸುಲಭದ ತುತ್ತಾಗಿಸುವುದು ಸಾಧ್ಯವಿರಲಿಲ್ಲ. ಮನೆಯಲ್ಲಿ ಒಂದು ನಾಯಿಗಿಂತ ಹೆಚ್ಚಿನ ಪೌರುಷದ ಕೆಲಸವನ್ನು ಈ ತಳಿಗಳೇ ನಿರ್ವಹಿಸುತ್ತಿದ್ದವು. ಇಂತಹ ಪೌರುಷ ಮತ್ತು ತಾಕತ್ತನ್ನು ನೋಡಿಯೇ ರಾಜ ಮಹಾರಾಜರು ಈ ತಳಿಗಳನ್ನು ಅರಮನೆಯಲ್ಲಿ ಸಾಕಿಕೊಳ್ಳುತ್ತಿದ್ದರು. ಎಷ್ಟರ ಮಟ್ಟಿಗೆ ಎಂದರೆ ಇವುಗಳದ್ದೇ ಒಂದು ಪ್ರತ್ಯೇಕ ಸೈನ್ಯವನ್ನೇ ಯುದ್ಧಕ್ಕೆ ಸಿದ್ಧಗೊಳಿಸಿಡುತ್ತಿದ್ದರು.

1777ರಲ್ಲಿ ಹೈದರಾಬಾದಿನ ನಿಜಾಮ ತನ್ನ ಬೃಹತ್ ಸೈನ್ಯದೊಂದಿಗೆ ಅಂದಿನ ಮೈಸೂರು ರಾಜ್ಯದ ಚಿತ್ರದುರ್ಗದ ಕೋಟೆಗೆ ಮುತ್ತಿಗೆ ಹಾಕಿದಾಗ, ಅವನ ಬಳಿ ಸರಿ ಸುಮಾರು 3000ಕ್ಕೂ ಹೆಚ್ಚು ಶಸ್ತ್ರ ಸಜ್ಜಿತ ಕೆಚ್ಚೆದೆಯ ಸಿಪಾಯಿಗಳು, ಬೃಹತ್ ಶಸ್ತ್ರಾಸ್ತ್ರದ ಖಜಾನೆ, ಬಲಿಷ್ಠ ಆನೆ, ಕುದುರೆ ದಳ ಮತ್ತು ಸಾಕಷ್ಟು ಅನುಭವವಿರುವ ಪದಾಥಿ ದಳವೇ ಇತ್ತು. ಇಂತಹ ಅತ್ಯಂತ ಬಲಿಷ್ಠ ನಿಜಾಮನ ಸೈನ್ಯ ಇದ್ದಕ್ಕಿದ್ದಂತೆಯೇ ನಿರೀಕ್ಷಿಸಿರದ ರೀತಿಯಲ್ಲಿ ಧೂಳೀಪಟವಾಗಿ ಸೋಲೊಪ್ಪಿಕೊಂಡು ಪಲಾಯನ ಮಾಡಿಬಿಡುತ್ತದೆ. ಅದಕ್ಕೆ ಪ್ರಮುಖ ಕಾರಣ ಮೈಸೂರು ಸೈನ್ಯದಲ್ಲಿದ್ದ ಇದೇ ವಾರಿಯರ್ ಬ್ರೀಡ್‌ಗಳು.

ಅಂದಿನ ರಾಜನಾದ ಹೈದರಾಲಿಯ ಕೆಲವೇ ಕೆಲವು ಸೈನಿಕರು ಬೃಹತ್ ನಿಜಾಮನ ಸೈನ್ಯದ ಜೊತೆ ಕಾದಾಡುತ್ತಾ ಇನ್ನೇನು ಕಾದಾಡಲು ಸಾಧ್ಯವಾಗದೇ ಸೊಲೊಪ್ಪಿಕೊಳ್ಳುವ ಸಂದರ್ಭದಲ್ಲಿ ಹೈದರಾಲಿಗೆ ನೆನಪಾಗುವುದೇ ತನ್ನ ಮೆಚ್ಚಿನ ಈ 237 ತಳಿಗಳು. ಕೂಡಲೇ ಅವುಗಳನ್ನೇ ಆತ ರಣರಂಗಕ್ಕೆ ನುಗ್ಗಿಸುತ್ತಾನೆ. ನಂತರ ಇವು ರಣರಂಗದಲ್ಲಿ ಮಾಡಿದ್ದು ಅಚ್ಚರಿಯ ಸಾಹಸಗಾಥೆ. ಸೋಲಿನ ದವಡೆಯಿಂದ ಜಯ ತಂದುಕೊಟ್ಟಿದ್ದಲ್ಲದೆ ನಿಜಾಮನ ಸೈನ್ಯ ಇದರ ಕೊಂಬು ಮತ್ತು ಕಾಲಿಗೆ ಸಿಕ್ಕಿ ಯಾವೊಂದು ಸೈನಿಕ ದಳದವರೂ ಮಾಡಲಾರದಷ್ಟು ನಷ್ಟವನ್ನು ಕೆಲವೇ ಕೆಲವು ತಳಿಗಳು ಮಾಡಿಬಿಟ್ಟಿರುತ್ತವೆ.

ಯುದ್ಧದ ಸಮಯದಲ್ಲಿ ಇವುಗಳ ಹಿಂಡನ್ನು ವೈರಿ ಪಡೆಯ ಮೇಲೆ ನುಗ್ಗಿಸಿದರೆ ಸಾಕು. ಎದುರಿಗೆ ಸಿಕ್ಕಸಿಕ್ಕವರನ್ನೆಲ್ಲಾ ಧ್ವಂಸಗೊಳಿಸಿಕೊಂಡು ಇವುಗಳು ಮುಂದೆ ಸಾಗುತ್ತಿದ್ದವು. ಹೀಗೆ ನಷ್ಟಗೊಂಡ ಎದುರಾಳಿಗಳನ್ನು ನಂತರ ಹಿಂದೆ ಬರುವ ಸೈನಿಕರು ಸುಲಭವಾಗಿ ಸಂಹಾರ ಮಾಡುತ್ತಿದ್ದರು. ಕೆಲವೊಮ್ಮೆ ರಾತ್ರಿ ವೇಳೆ ಇವುಗಳ ಕೊಂಬಿಗೆ ಉರಿಯುತ್ತಿರುವ ಪಂಜುಗಳನ್ನು ಕಟ್ಟಿ ವೈರಿಗಳ ಪಾಳಯಗಳ ಮೇಲೆ ಓಡಿಸಲಾಗುತ್ತಿತ್ತು. ಹೀಗೆ ಹೇಗೆಂದರೆ ಹಾಗೆ ಇವುಗಳು ಓಡುವ ಮೂಲಕ ಅಲ್ಲಿದ್ದ ಸೈನಿಕರ ದಿಕ್ಕನ್ನೇ ತಪ್ಪಿಸುತ್ತಿದ್ದವು.

ಅಕಸ್ಮಾತ್ ಆಗಿ ಉಂಟಾಗುತ್ತಿದ್ದ ಈ ಘಟನೆಯಿಂದ ಶತ್ರು ಪಾಳಯ ತಬ್ಬಿಬ್ಬಾಗಿ ಏನು ಮಾಡಬೇಕೆಂಬುದನ್ನೇ ಅರಿಯದೆ ಪಲಾಯನಗೈಯುತ್ತಿತ್ತು. ಈ ರೀತಿ ಹೈದರಾಲಿಯ ಯುದ್ಧಗಳಲ್ಲಿ ಸಾಕಷ್ಟು ಐತಿಹಾಸಿಕ ಜಯಗಳನ್ನು ತಂದು ಕೊಡುತ್ತಿದ್ದ ಈ ವಾರಿಯರ್ ಬ್ರೀಡ್‌ಗಳು ಆನಂತರ ಇವನ ಮಗನಾದ ಟಿಪ್ಪುವಿನ ಎಲ್ಲಾ ವಿಜಯಗಳಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡುವಲ್ಲಿಯೂ ಪ್ರಮುಖ ಕಾರಣಕರ್ತವಾಗಿದ್ದವು.

Amrit Mahal ಗೋ ಸಂಪತ್ತು

ಕ್ರಿ.ಶ. 1914 ರಿಂದ 1918ರ ಮೊದಲನೆಯ ವಿಶ್ವ ಯುದ್ಧದಲ್ಲಿ ಬಾಗ್ದಾದಿನ ದಂಡನಾಯಕರು ಮೆಸಪೊಟೋಮಿಯಾಕ್ಕೆ ಹೋದ ಈ ಅಮೃತ್ ಮಹಲ್ ದನಗಳನ್ನು ಕಂಡು ಮೂಕವಿಸ್ಮಿತರಾಗಿದ್ದರು. ಇವುಗಳು ಒಂಟೆಗಿಂತ ವೇಗವಾಗಿ ನಡೆಯಬಲ್ಲವೆಂದೂ, ಇಕ್ಕಟ್ಟಾದ ಕಣಿವೆ ದಾರಿಗಳನ್ನು ಮತ್ತು ಸಣ್ಣ ಸಣ್ಣ ಸೇತುವೆಗಳನ್ನು ದಾಟುವಾಗ ಅತಿ ಜಾಗರೂಕತೆಯನ್ನು ಮತ್ತು ಜಾಣತನವನ್ನು ತೋರಿಸುತ್ತವೆಯೆಂದೂ ಅವರು ಪ್ರಶಂಸಿಸಿದ್ದರು. ಅಷ್ಟೇ ಅಲ್ಲದೆ ಆಹಾರ ಅಭಾವವಿದ್ದಾಗ ಮತ್ತು ಪ್ರತಿಕೂಲ ಹವಾಮಾನದಲ್ಲೂ ಸಹ ಇವುಗಳು ಜಗ್ಗದೆ ಕುಗ್ಗದೆ ಎಂದಿನಂತೆಯೇ ಜೀವಿಸುವ ವಿಶಿಷ್ಟತೆಯನ್ನು ಹೊಂದಿವೆ ಎಂಬುದಾಗಿ ಉಲ್ಲೇಖಿಸಿದ್ದರು.

ಅಂದಿನ ಎಲ್ಲಾ ಯುದ್ಧಗಳಲ್ಲಿ ಇವುಗಳ ಚಲನ ವಲನಗಳನ್ನು ಭಾರತ-ಪಾಕಿಸ್ತಾನದ ಯುದ್ಧದಲ್ಲಿ ಭಾರತದ ಗೆಲುವಿಗೆ ಪ್ರಮುಖ ಕಾರಣವಾದ “ನ್ಯಾಟ್” ವಿಮಾನಗಳಿಗೆ ಹೋಲಿಸಲಾಗಿದೆ. ಹೈದರಾಲಿಯು ಈ ಅಮೃತ್ ಮಹಲ್ ದನಗಳ ಸಹಾಯದಿಂದ ಎರಡೂವರೆ ದಿವಸಗಳಲ್ಲಿ 100 ಮೈಲಿಗಳನ್ನು ನಡೆದು ಚಿದಂಬರಂ ಮುತ್ತಿಗೆಯನ್ನು ಬಿಡುಗಡೆ ಮಾಡಲು ಸಾಧ್ಯವಾಗಿತ್ತು. ಹಾಗೆಯೇ ಅಲ್ಲಿಂದ ಹಿಂದಿರುಗುವಾಗ ಈ ದನಗಳು ದೊಡ್ಡ ತೋಪಿನ ಗಾಡಿಗಳನ್ನು ಎಳೆದುಕೊಂಡು ದಿನಕ್ಕೆ 40 ಮೈಲಿಗಳ ದೂರ ಪ್ರಯಾಣ ಮಾಡಿ ಶತ್ರುಗಳಿಗೂ ಆಶ್ಚರ್ಯವನ್ನುಂಟು ಮಾಡಿದ್ದವು. ಹಾಗೆಯೇ ಟಿಪ್ಪು ಸುಲ್ತಾನನು ಬಿದನೂರನ್ನು ವಶಪಡಿಸಿಕೊಳ್ಳುವ ಕಾರ್ಯದಲ್ಲಿ ಈ ದನಗಳು 63 ಮೈಲುಗಳ ಹಾದಿಯನ್ನು ಕೇವಲ ಎರಡು ದಿನದಲ್ಲಿ ತಲುಪಿದ್ದವು. ಬ್ರಿಟಿಷ್ ಅಧಿಕಾರಿಯಾದ ಜನರಲ್ ಮೆಡಾಸ್ ಮುಟ್ಟುವುದಕ್ಕಿಂತ ಮುಂಚಿತವಾಗಿ ಮುಟ್ಟಿ ಟಿಪ್ಪುವಿಗೆ ಜಯವನ್ನು ತಂದುಕೊಟ್ಟಿದ್ದವು.

1818ರಲ್ಲಿ ಮೈಸೂರು ಕಮಿಷನರೇಟ್‌ರವರು ಅಮೃತ್ ಮಹಲ್ ದನಗಳ ಬಗ್ಗೆ, ಅವು ಚಾಕಚಕ್ಯತೆಯುಳ್ಳವು ಮತ್ತು ಹುರುಪಿನ ಹಾಗೂ ಸಿಟ್ಟಿನ ದನಗಳು ಎಂಬುದಾಗಿ ಹೇಳಿದ್ದುದು ಹಾಗೂ 1842ರಲ್ಲಿ ಬ್ರಿಟಿಷ್ ಅಧಿಕಾರಿಯಾಗಿದ್ದ ಕ್ಯಾಪ್ಟನ್ ಡೇವಿಸನ್, ತಮ್ಮ ಪಡೆಗೆ ಸೇರಿದ್ದ ಈ ಅಮೃತಮಹಲ್ ದನಗಳ ಬಗ್ಗೆ ಪ್ರಶಂಸಿರುವುದು ದಾಖಲಾಗಿದೆ. ಇವುಗಳು ಆಫ್ಘಾನಿಸ್ತಾನದ ಟಿರಿಯಾ ಬೆಟ್ಟದ ಮೇಲಿನ ಕಣಿವೆ ದಾರಿಯಲ್ಲಿ ಇಳಿದು ಬರುವಾಗ ಸತತ 16 ತಾಸುಗಳು ನೊಗಕ್ಕೆ ಕಟ್ಟಿದ್ದಾಗ್ಯೂ ಸಹ ಸ್ವಲ್ಪವೂ ಆಯಾಸವಿಲ್ಲದೆ ಬೆಟ್ಟದಿಂದ ಕೆಳಗೆ ಇಳಿದು ಬಂದಿದ್ದವು. ಬೇರೆ ಯಾವ ಜಾತಿಯ ಎತ್ತುಗಳೂ ಇಷ್ಟು ಕಷ್ಟವನ್ನು ಸಹಿಸಲಿಲ್ಲ ಎಂಬುದಾಗಿ ದಾಖಲಿಸಲ್ಪಟ್ಟಿದೆ.

ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಅಮೃತ್‌ಮಹಲ್ ದನಗಳ ಗಟ್ಟಿತನ, ಚುರುಕುತನ, ತೀಕ್ಷ್ಣತೆ ಮತ್ತು ನಡಿಗೆಯಲ್ಲಿನ ವೇಗ, ಇವುಗಳಿಗೆ ಸೇನೆಯಲ್ಲಿ ವಿಶಿಷ್ಟವಾದ ಸ್ಥಾನವನ್ನು ತಂದುಕೊಟ್ಟಿತ್ತು. ಸೇನೆಯ ಯುದ್ಧ ಸಾಮಗ್ರಿ, ಮದ್ದುಗುಂಡುಗಳು ಮತ್ತು ತೋಪುಗಳನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗಿಸುವ ಉದ್ದೇಶಕ್ಕಾಗಿಯೇ ಹೆಚ್ಚಾಗಿ ಈ ತಳಿಗಳನ್ನು ಬಳಸಲಾಗುತ್ತಿತ್ತು. ಇದಕ್ಕೆ ಪುಷ್ಠಿ ಇಂದಿನ ಮೈಸೂರು ಮತ್ತು ಚಿತ್ರದುರ್ಗದ ಹೆದ್ದಾರಿ ಹಿಂದೊಮ್ಮೆ ಈ ಅಮೃತ್ ಮಹಲ್ ತಳಿಗಳು ಯುದ್ಧದ ತೋಪುಗಳನ್ನು ಎಳೆದುಕೊಂಡು ಹೋದ ದಾರಿಯೇ ಆಗಿರುವುದು. ಹೀಗೆ ಅಮೃತ್‌ಮಹಲ್ ತಳಿಯ ದನಗಳ ಬಗ್ಗೆ ವಿರೋಚಿತ ಹೋರಾಟದ ಕಥಾಪುಂಜವೇ ಇತಿಹಾಸದಲ್ಲಿ ಕಂಡುಬರುತ್ತದೆ. ವಿಪರ್ಯಾಸವೆಂದರೆ ಈ ತಳಿಯಿಂದು ಅವಸಾನದ ಅಂಚಿನಲ್ಲಿರುವುದು!.

ಇದನ್ನೂ ಓದಿ | ಗೋ ಸಂಪತ್ತು | ಪ್ರಪಂಚಕ್ಕೆ ಭಾರತ ನೀಡಿದ ದಿವ್ಯ ಔಷಧ ಪಂಚಗವ್ಯ

Exit mobile version