ನಾವು ಪ್ರತಿನಿತ್ಯ ಸೇವಿಸುವ ಆಹಾರದಲ್ಲಿ ಎರಡು ಭಾಗವಿದೆ. ಒಂದು ರಕ್ತಕ್ಕೆ ಬೇಕಾಗುವ ಶಕ್ತಿ, ಇನ್ನೊಂದು ಮೆದುಳಿಗೆ ಬೇಕಾಗುವ ಖನಿಜಸತ್ವಗಳು. ಇವೆರಡನ್ನು ಹೊಂದಿರುವ ಜಗತ್ತಿನ ಏಕೈಕ ಪೇಯ ದೇಶಿ ಗೋವಿನ ಹಾಲು. ಈ ಹಾಲು ಎಲ್ಲಾ ಖನಿಜಸತ್ವಗಳನ್ನು ಹೊಂದಿದ್ದು, ರಕ್ತಕ್ಕೆ ಬೇಕಾಗುವ ಶಕ್ತಿಯನ್ನು ಗ್ಲೂಕೋಸ್ ಮೂಲಕ ಒದಗಿಸುತ್ತದೆ. ಇದಕ್ಕೆ ಮುಖ್ಯ ಕಾರಣ ಗೋವು ಸೇವಿಸುವ ಹುಲ್ಲು. ಹುಲ್ಲು ಭೂಮಿಯಲ್ಲಿರುವ ಖನಿಜಗಳನ್ನು ಹೀರಿ ಕೊಳ್ಳುವ ವಿಶೇಷಗುಣವನ್ನು ಹೊಂದಿರುವುದರಿಂದ ಅಂತಹ ಹುಲ್ಲನ್ನು ತಿನ್ನುವ ಗೋವಿನ ಹಾಲಿನಲ್ಲೂ ಆ ಎಲ್ಲಾ ಗುಣ ಮತ್ತು ಖನಿಜಸತ್ವಗಳು ಅಡಕವಾಗಿರುತ್ತವೆ.
ಆದ್ದರಿಂದ ದೇಶಿ ಹಸುವಿನ ಹಾಲು ಒಂದು ಪರಿಪೂರ್ಣ ಆಹಾರವಾಗಿದೆ.
ತಾಯಿಯ ಎದೆಹಾಲಿನ ನಂತರ ಜೀವಮಾನವಿಡಿ ನಾವು ಸೇವಿಸುವುದು ಗೋವಿನ ಹಾಲನ್ನು. ದೈನಂದಿನ ಆಹಾರ ಕ್ರಮದಲ್ಲಿ ಎಲ್ಲರೂ ಉಪಯೋಗಿಸುವ ಆಹಾರ ಪಾನೀಯಗಳಲ್ಲಿ ಹಾಲು ಅತಿ ಮುಖ್ಯವಾದುದಾಗಿದೆ. ಹಾಗಾಗಿ ವಿಶ್ವದಲ್ಲಿ ಅತಿಹೆಚ್ಚು ಗ್ರಾಹಕರನ್ನು ಹೊಂದಿರುವ ಉತ್ಪನ್ನಗಳಲ್ಲಿ ‘ಹಾಲು’ ಸಹ ಒಂದಾಗಿದೆ. ಈ ಕಾರಣದಿಂದಲೇ ದೇಶಿ ಗೋವಿನ ಹಾಲನ್ನು ಭೂಲೋಕದ ಅಮೃತವೆಂದು ಹೇಳಲಾಗಿರುವುದು.
ಇಂತಹ ಅಮೃತದ ಸೇವನೆಯಿಂದ ಆರೋಗ್ಯ ವೃದ್ಧಿಸುವುದಲ್ಲದೆ, ಮೂಳೆಗಳಲ್ಲಿನ ನೋವು ಸಹ ಕಡಿಮೆಯಾಗುತ್ತದೆ. ಹಾಗಾಗಿ ವಿಟಮಿನ್‌ಯುಕ್ತವಾದ ಈ ಪೇಯ ಮಕ್ಕಳಿಂದ ಹಿಡಿದು ಮುದುಕರವರೆಗೆ ಅತಿ ಸೂಕ್ತವಾದುದು.
ಮಕ್ಕಳು ಎಲ್ಲಿಯವರೆಗೂ ಅನ್ನ ಪಾನಾದಿಗಳನ್ನು ಸೇವಿಸುವುದಿಲ್ಲವೋ, ಅಲ್ಲಿಯವರೆಗೂ ಆ ಕೂಸು ಹಾಲಿನಿಂದಲೇ ಜೀವಿಸಬೇಕಾಗುತ್ತದೆ. ಹಾಗಾಗಿ ಮಕ್ಕಳ ಏಕೈಕ ಪೋಷಕಾಂಶ ಹಾಲಾಗಿದೆ. ಅಷ್ಟೇ ಅಲ್ಲದೆ ಸಸ್ಯಾಹಾರಿಗಳಿಗೆ ದೊರಕುವ ಏಕೈಕ ಪ್ರಾಣಿಜನ್ಯ ಪ್ರೋಟಿನ್ ಸಹ ಇದೇ ಆಗಿದೆ. ಇತ್ತೀಚಿನ ಸಂಶೋಧನೆಯ ಪ್ರಕಾರ ಬೆಳೆಯುವ ಮಕ್ಕಳು ಕ್ಯಾಲ್ಸಿಯಂನ್ನು ತಮ್ಮ ಆಹಾರದಲ್ಲಿ ಸೇವಿಸದೆ ಇದ್ದಲ್ಲಿ ಮುಂದೆ ಮೂಳೆಗಳಲ್ಲಿ ಕ್ಯಾಲ್ಸಿಯಂ ಕೊರತೆಯಿರುವ ಹಾಗೂ ಸಂಧಿವಾತದಂತಹ ಸಮಸ್ಯೆಗಳಿಗೆ ಬೇಗನೆ ತುತ್ತಾಗುತ್ತಾರೆ. ಆದರೆ ಹಾಲಿನಲ್ಲಿ ‘ಪಾಸ್ಫರಸ್’ ಅಂಶವಿದ್ದು ಇದು ಗಟ್ಟಿ ಮುಟ್ಟಾದ ಮೂಳೆಯನ್ನು ಹೊಂದಲು ಅತಿ ಸಹಕಾರಿಯಾದುದಾಗಿದೆ. ಆದುದರಿಂದ ನಮ್ಮ ಪೂರ್ವಜರು ಹಾಲಿಗೆ ‘ಬಾಲಜೀವನʼ ವೆಂದು ಹೆಸರನ್ನಿಟ್ಟಿರುವುದು.
ಹಾಲಿನಷ್ಟು ಅತ್ಯುತ್ತಮ ಸಂತುಲಿತ, ಸಾತ್ವಿಕ ಮತ್ತು ಅನುಪಮ ಆರೋಗ್ಯವರ್ಧಕ ಆಹಾರ ಭೂಲೋಕದಲ್ಲಿ ಇನ್ನೊಂದಿಲ್ಲ ಎಂದು ಹೇಳಲಾಗುತ್ತದೆ. ಹೀಗಾಗಿಯೇ ಹಾಲು ಸರ್ವಜೀವಿಗಳ ಜೀವನಾಧಾರವಾಗಿರುವುದು. ಮತ್ತೊಂದು ವೈಶಿಷ್ಟ್ಯವೇನೆಂದರೆ ಯಾವುದೇ ಪ್ರಾಣಿಯ ಹಾಲಿನಲ್ಲಿ ಸ್ವರ್ಣದ ಅಂಶವಿರುವುದಿಲ್ಲ. ಆದರೆ ಗೋವಿನ ಹಾಲಿನಲ್ಲಿ ಮಾತ್ರ ಸ್ವರ್ಣದ ಅಂಶ ಸಾಕಷ್ಟು ಕಂಡುಬರುತ್ತದೆ. ಇದಕ್ಕೆ ಇರಬೇಕು ‘ಹಾಲು ಎಲ್ಲಿದೆಯೋ ಅಲ್ಲಿ ಬುದ್ಧಿ, ಬುದ್ಧಿ ಎಲ್ಲಿದೆಯೋ ಅಲ್ಲಿ ಜಯವಿದೆ’ ಎಂಬುದಾಗಿ ‘ಮನು’ ಹೇಳಿರುವುದು.
ಪ್ರಾಚೀನ ವೈದ್ಯಕೀಯ ಪಿತಾಮಹರಾದ ‘ಭಾಗಭಟ್ಟ’ರು ಹಾಲಿನ ಮಹಿಮೆಯ ಬಗ್ಗೆ ಹೇಳುತ್ತಾ ಅದರಿಂದ ವಾಸಿಯಾಗುವ ಕಾಯಿಲೆಗಳ ಪಟ್ಟಿಯನ್ನೇ ನೀಡಿದ್ದಾರೆ. ಹಾಗೆಯೇ ದೇಹದ ಶಕ್ತಿಗೆ ಮತ್ತು ರಾಸಲೀಲೆಗೆ ಹಾಲು ಹೆಚ್ಚು ಸ್ಫೂರ್ತಿ ಮತ್ತು ಶಕ್ತಿದಾಯಕವೆಂದೂ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ಇತ್ತೀಚಿನ ವೈದ್ಯಕೀಯ ವಿಜ್ಞಾನವೂ ಸಹ ಹಾಲಿಗೆ ಹೆಚ್ಚು ಪ್ರಾಶಸ್ತ್ಯವನ್ನು ನೀಡಿ ಹಾಲು ಮನುಷ್ಯನ ಜೀವನಕ್ಕೆ ಅತಿ ಅವಶ್ಯಕವಾದ ಪೇಯ ಎಂಬುದನ್ನು ದೃಢೀಕರಿಸಿವೆ.
ಮುಖ್ಯವಾಗಿ ಹೃದ್ರೋಗಿಗಳಿಗೆ ಹಾಲು ಕವಚವಿದ್ದಂತೆ. ಕಾರಣ ಅದರಲ್ಲಿ ಅಗತ್ಯವಾದ ಸುವರ್ಣಾಂಶವಿರುವುದೇ ಆಗಿದೆ. ಹಾಗೆಯೇ ದೇಶಿ ಗೋವಿನ ಹಾಲಿನಿಂದ ಜೀರ್ಣಕ್ರಿಯೆ ಸುಲಭವಾಗುತ್ತದೆ. ರಾತ್ರಿ ಮಲಗುವ ವೇಳೆ ಬಿಸಿಯಾದ ದೇಶಿ ಗೋವಿನ ಹಾಲಿನೊಂದಿಗೆ ಒಂದು ಚಮಚ ತುಪ್ಪ ಸ್ವೀಕರಿಸುವುದರಿಂದ ದೇಹ ಆರೋಗ್ಯಕರವಾಗುತ್ತದೆ. ಅದರಲ್ಲೂ ಜ್ವರ ಬಂದಾಗ ಹಾಲನ್ನು ಸೇವಿಸುವುದರಿಂದ ದೇಹದ ಆರೋಗ್ಯ ಮತ್ತಷ್ಟು ಸುಧಾರಿಸುತ್ತದೆ.
ಭಾರತೀಯ ಗೋತಳಿಗಳ ಹಾಲಿನಲ್ಲಿ ಹೆಚ್ಚು ಕೊಬ್ಬಿನಂಶ ಹೊಂದಿದ್ದು ಕಡಿಮೆ ಕೊಲೆಸ್ಟಾçಲ್‌ನ್ನು ಹೊಂದಿರುತ್ತದೆ. ಇದಕ್ಕೆ ಪ್ರಮುಖ ಕಾರಣ ಅವುಗಳ ಬೆನ್ನಿನ ಡುಬ್ಬದಲ್ಲಿರುವ ಸೂರ್ಯಕೇತು ನಾಡಿ. ಇದು ಸೂರ್ಯನ ಕಿರಣವನ್ನು ಅಂಟೇನಾದ ರೀತಿ ಹೀರಿಕೊಂಡು ಅದರಲ್ಲಿನ ಅಂಶವನ್ನು ತನ್ನ ಉತ್ಪನ್ನಗಳಾದ ಗೋಮೂತ್ರ, ಗೋಮಯ ಮತ್ತು ಹಾಲಿನ ಮೂಲಕ ಹೊರಹಾಕುತ್ತದೆ. ಹೀಗಾಗಿ ದೇಶಿ ತಳಿಗಳ ಹಾಲು ಸೂರ್ಯನ ಬಿಸಿಲಿಗೆ ಪ್ರಚೋದನೆಗೊಂಡು ಹೆಚ್ಚು ಪೌಷ್ಠಿಕಾಂಶಯುಕ್ತವಾದ ಹಳದಿ ಬಣ್ಣದಿಂದ ಕೂಡಿರುತ್ತದೆ.
ಒಟ್ಟಿನಲ್ಲಿ ಹೇಳಬೇಕೆಂದರೆ ಹಾಲು ವಿಟಮಿನ್‌ಗಳಿಂದ ಸಮೃದ್ಧಿಯಾಗಿದೆ. ಹಾಲಿನಲ್ಲಿ ಎ, ಬಿ, ಬಿ2, ಡಿ2, ಎ(ಡಬ್ಲೂ) ಜೀವಸತ್ವಗಳಿವೆ. ಎಂಟು ವಿಧವಾದ ಸಸಾರಜನಕ ವಸ್ತುಗಳು, ಹತ್ತು ರೀತಿಯ ಅಮೈನೊ ಆಮ್ಲಗಳು, ಹನ್ನೊಂದು ನಮೂನೆಯ ಸ್ನಿಗ್ನ ಆಮ್ಲಗಳು, ಎಂಟು ಬಗೆಯ ಜೀವಾಣುರಹಿತ ಕಣ್ವಗಳು ಮತ್ತು ಅಧಿಕ ಪ್ರಮಾಣದ ಕೆರೋಟಿನ್ ಇದೆ. ಸಾಮಾನ್ಯವಾಗಿ ಒಂದು ಬಿಂದು ಹಾಲಿನಲ್ಲಿ ಹತ್ತು ಕೋಟಿಗೂ ಹೆಚ್ಚು ಕೊಬ್ಬಿನ ಗುಳ್ಳೆಗಳಿರುತ್ತವೆ. ಈ ಕೊಬ್ಬಿನ ಕಣಗಳು ಬೆಳಕನ್ನು ಸಂಪೂರ್ಣವಾಗಿ ಆಂತರಿಕವಾಗಿ ಪ್ರತಿಫಲಿಸುವುದರಿಂದ ಹಾಲು ಶುಭ್ರ ಬಿಳಿ ಬಣ್ಣದಲ್ಲಿರುತ್ತದೆ. ಹಾಗೆಯೇ ಹಾಲಿನಲ್ಲಿ ‘ಕೆಸೀನ್’ ಎಂಬ ಪ್ರಮುಖ ಪ್ರೋಟಿನ್ ಇದೆ. ಇದು ಭೂಮಿಯ ಮೇಲಿನ ಸಕಲ ಪ್ರಾಣಿಗಳ ಸಮಗ್ರ ಬೆಳವಣಿಗೆಗೆ ಅತ್ಯವಶ್ಯಕವಾದುದಾಗಿದೆ.
ಕರೆಯುತ್ತಿದ್ದಂತೆ ಬಿಸಿಯಾಗಿರುವ ಗೋವಿನಹಾಲು ಕುಡಿಯಲು ರುಚಿಕರ ಹಾಗೂ ಶ್ರೇಷ್ಠವಾದುದಾಗಿದೆ. ಹಾಗೆಯೇ ಹಾಲನ್ನು ಆಗಾಗ ಕಾಯಿಸುತ್ತಿದ್ದರೆ ಅದು ವಿಷಯುಕ್ತವಾಗುತ್ತದೆ ಮತ್ತು ಸೇವನೆಗೆ ಯೋಗ್ಯವಾಗಿರುವುದಿಲ್ಲ ಎಂಬುದನ್ನು ವೈದ್ಯಕೀಯ ಲೋಕ ತಿಳಿಸುತ್ತದೆ. ವಿಜ್ಞಾನಿಗಳ ನಿರ್ಣಯದ ಪ್ರಕಾರ ಹಸುವಿನ ಹಾಲು ಉತ್ತಮವಾದ ಮತ್ತು ಪುಷ್ಠಿಕರವಾದ ಭೋಜನಕ್ಕೆ ಸಮಾನವಾದದ್ದಾಗಿದೆ. ಅದರಲ್ಲಿ ಶೇಕಡಾ 87ರಷ್ಟು ನೀರು, ಶೇಕಡಾ 4.6ರಷ್ಟು ಸಕ್ಕರೆ ಹಾಗೂ ಇನ್ನೂ ಹೆಚ್ಚಿನ ವಿಟಮಿನ್ನುಗಳಂತಹ ಪ್ರಯೋಜನಗಳೆಲ್ಲವೂ ಇದೆ ಎಂಬುದಾಗಿದೆ.
ಹಾಲಿನ ಮಹತ್ವದ ಕುರಿತಾದ ವಿವರಣೆಗಳು ನಮ್ಮ ಪ್ರಾಚೀನ ಗ್ರಂಥಗಳಲ್ಲಿ ಸಾಕಷ್ಟು ಕಂಡುಬರುತ್ತದೆ. ಹಾಲು ವೀರ್ಯವರ್ಧಕ, ಕಾಂತಿವರ್ಧಕ, ಮೈಥುನ ಶಕ್ತಿಯನ್ನು ಹೆಚ್ಚಿಸುವಿಕೆ ಇತ್ಯಾದಿ ಗುಣಗಳಿಂದ ಕೂಡಿರುವುದೆಂದು ‘ಖವಾಸುಲ್ಲ ಅದ್ವಿಯಾ’ ಎಂಬ ಯುನಾನಿ ಗ್ರಂಥದಿಂದ ತಿಳಿದು ಬರುತ್ತದೆ. ಹಾಗೆಯೇ ‘ಮಜರುಲ್ಲಾತ ಅಕರಿ’ ಎಂಬ ಗ್ರಂಥದಲ್ಲಿ ಆಕಳ ಹಾಲು ವೀರ್ಯ ಶಕ್ತಿ ಮತ್ತು ಬುದ್ಧಿವರ್ಧಕವಾಗಿರುವುದೆಂದು ಹೇಳಿರುವುದಲ್ಲದೆ ರಕ್ತ ಶೋಧಕವು ಆಗಿರುವುದೆಂದು ನಿರೂಪಿಸಿ ಅಶಕ್ತ ಪುರುಷರಿಗೆ ಅಮೃತದಂತಿರುವುದೆಂದು ವರ್ಣಿಸಲಾಗಿದೆ.
ಗುಜರಾತ್‌ನ ಗೀರ್, ಪಂಜಾಬ್‌ನ ‘ಸೆಹವಾಲ್’ ಜಗತ್ತಿನಲ್ಲಿಯೇ ಅತಿ ಹೆಚ್ಚು ಹಾಲನ್ನು ನೀಡುವ ತಳಿಗಳಾಗಿವೆ. ಭಾರತೀಯ ಮೂಲದ ಗೋತಳಿಗಳು ವಿದೇಶಿ ಮೂಲದ ತಳಿಗಳಿಗಿಂತ ಹೆಚ್ಚಿನ ಹಾಲನ್ನು ನೀಡುತ್ತವೆ. ಈ ಹಾಲು ವಿದೇಶಿ ದನಗಳು ನೀಡುವ ಹಾಲಿನ ಗುಣಮಟ್ಟಕ್ಕಿಂತ ಅತ್ಯಂತ ಉತ್ಕೃಷ್ಟವಾಗಿರುತ್ತದೆ ಎಂಬುದನ್ನು ‘ರಾಷ್ಟ್ರೀಯ ಜಾನುವಾರು ವಂಶವಾಹಿ ಸಂಪನ್ಮೂಲಗಳ ಇಲಾಖೆ’ಯ ಒಂದು ಸಮೀಕ್ಷೆ ಕೂಡ ದೃಢಪಡಿಸಿದೆ. ಇದಕ್ಕೆ ಪ್ರಮುಖ ಕಾರಣ ಅವುಗಳಲ್ಲಿನ ‘ಆಲೀಲ್ ಜೀನ್’. ಇದು ಭಾರತೀಯ ತಳಿಗಳಲ್ಲಿ ಶೇಕಡಾ 100 ರಷ್ಟಿದ್ದರೆ ವಿದೇಶಿ ತಳಿಗಳಲ್ಲಿ ಹೆಚ್ಚೆಂದರೆ ಶೇಕಡಾ 60ರಷ್ಟು ಮಾತ್ರ ಇರುತ್ತದೆ.
ಹೀಗೆ ದೇಶಿ ಗೋವಿನ ಹಾಲು ಮತ್ತು ಅದರಿಂದ ಮಾಡಿದ ತುಪ್ಪದ ಮಹತ್ವ ಇತ್ತೀಚಿನ ದಿನಗಳಲ್ಲಿ ಜನಸಾಮಾನ್ಯರ ಅರಿವಿಗೂ ಬರುತ್ತಿದೆ. ಹೀಗಾಗಿ ಅವುಗಳಿಗಿಂದು ಎಲ್ಲಿಲ್ಲದ ಬೇಡಿಕೆ ಸೃಷ್ಟಿಯಾಗುತ್ತಿದೆ. ಎಷ್ಟು ಬೇಡಿಕೆ ಸೃಷ್ಟಿಯಾಗಿದೆ ಯೆಂದರೆ ಮಾರುಕಟ್ಟೆಯಲ್ಲಿ ಸಿಗುವ ಹಾಲಿಗಿಂತ ಹತ್ತು ಪಟ್ಟು ಹೆಚ್ಚಿನ ಬೆಲೆಗೆ ಕಾಳಸಂತೆಯಲ್ಲಿ ಬಿಕರಿಯಾಗುವಷ್ಟು. ಇಂದು ಸುಮಾರು 40 ರೂಪಾಯಿಗೆ ಸಿಗುವ ಹಾಲು ಭಾಗಶಃ ವಿದೇಶಿ ತಳಿಯ ಹಾಲಾಗಿರುವುದರಿಂದ ಜನ ದೇಶಿ ಗೋವಿನ ಹಾಲನ್ನು ಕೊಳ್ಳಲು ಮುಗಿಬೀಳುತ್ತಿದ್ದಾರೆ.
ಇದರಿಂದ ಪ್ರತಿ ಲೀಟರ್ ದೇಶಿ ಹಾಲಿನ ಬೆಲೆ ಕೆಲವು ಭಾಗಗಳಲ್ಲಿ 400 ರೂಪಾಯಿಯನ್ನು ದಾಟಿದೆ ಎಂದರೆ ಅಚ್ಚರಿಯಾಗಬಹುದು. ಕೆಲವರಂತೂ ದೇಶಿ ಹಾಲು ಸಿಗದ ಕಾರಣ ಉತ್ತರ ಭಾರತದ ಕೆಲ ಪ್ರತಿಷ್ಠಿತ ಗೋಶಾಲೆಗಳಿಂದ ದೇಶಿ ಗೋವಿನ ಹಾಲಿನ ಪುಡಿಯನ್ನು ಒಂದು ಕೆ.ಜಿ.ಗೆ 700 ರಿಂದ 1000 ರೂಪಾಯಿ ಕೊಟ್ಟು ತರಿಸಿಕೊಳ್ಳುತ್ತಿದ್ದಾರೆ.
ರಾಜಸ್ಥಾನದ ಪಶುಸಂಗೋಪನ ಇಲಾಖೆಯ ಪೂರ್ವದ ನಿರ್ದೇಶಕರಾಗಿದ್ದ ಡಾ|| ಭಂಡಾರಿಯವರ ಪ್ರಕಾರ ದೇಶಿ ಹಸುವಿನ ಹೊಟ್ಟೆಯಲ್ಲಿರುವ ವಿಶಿಷ್ಟ ಬ್ಯಾಕ್ಟೀರಿಯಾಗಳಿಂದ ಅದರ ಹಾಲು ತನ್ನ ವಿಶಿಷ್ಟತೆ ಹಾಗೂ ಮಾನವನಿಗೆ ಹೊಂದುವಂತಹ ಸತ್ವಗುಣಗಳಿಂದ ಕೂಡಿದೆ ಎಂದು ಹೇಳಿದ್ದಾರೆ. ಎಮ್ಮೆ ಹಾಲು ಹೆಚ್ಚು ಮಂದವಾಗಿ ಕಂಡರೂ, ದೇಶಿ ಹಸುವಿನ ಹಾಲಿನ ಸೇವನೆಯಿಂದ ಬುದ್ಧಿಶಕ್ತಿಯ ತೀಕ್ಷ್ಣತೆ, ದೈಹಿಕ ಚುರುಕುತನ ಹಾಗೂ ಭಾವನೆಗಳ ಸ್ಥಿರತೆಯನ್ನು ಮತ್ತು ಸೌಮ್ಯ ಗುಣಗಳನ್ನು ಹೊಂದಬಹುದಾಗಿದೆ ಎಂಬುದಾಗಿ ತಿಳಿಸಿದ್ದಾರೆ. ಹಾಗಾಗಿ ಇನ್ನೇಕೆ ಸುಮ್ಮನಿದ್ದೀರಿ… ದೇಶಿ ಗೋವಿನ ಹಾಲಿನ ಸೇವನೆಯನ್ನು ಇಂದೇ ಪ್ರಾರಂಭಿಸಿ, ಆರೋಗ್ಯ ವೃದ್ಧಿಸಿಕೊಳ್ಳಿ.
ಇದನ್ನೂ ಓದಿ | ಗೋ ಸಂಪತ್ತು | ಈಗಲೂ ಕಳ್ಳ ಸಾಗಾಣಿಕೆ ಮೂಲಕ ಬಾಂಗ್ಲಾ ಗಡಿ ದಾಟುತ್ತಿವೆ ದೇಸಿ ತಳಿಗಳು