Site icon Vistara News

ಗೋ ಸಂಪತ್ತು: ಆಯುರ್ವೇದದಲ್ಲಿ ತುಪ್ಪಕ್ಕಿದೆ ಮಹತ್ವ; ಯಾವೆಲ್ಲಾ ಔಷಧಿಗೆ ಬಳಸುತ್ತಾರೆ ನೋಡಿ!

go sampattu column by shylesh holla about importance and medical use of homemade desi cow

ghee

ಆಯುರ್ವೇದದಲ್ಲಿ ಗೋವಿನ ತುಪ್ಪದ ಅಸಂಖ್ಯ ಮಹತ್ವವನ್ನು ಸವಿಸ್ತಾರವಾಗಿ ವಿವರಿಸುತ್ತಾ ವಿಶೇಷವಾದ ಸ್ಥಾನವನ್ನು ನೀಡಲಾಗಿದೆ (Ghee-Ayurvedic Holy Medicine). ಇಂತಹ ತುಪ್ಪವನ್ನು ಅಮೃತವೆಂದು ಬಣ್ಣಿಸುತ್ತಾ ಅದನ್ನು ಬಲ-ಆಯು ಎಂದು ಕರೆಯಲಾಗಿದೆ. ಇದೊಂದು ಔಷಧೀಯ ಪದಾರ್ಥವೂ ಹೌದು. ಹೀಗಾಗಿ ಇದನ್ನು ಪ್ರಾಚೀನ ಚಿಕಿತ್ಸಕರು, ಔಷಧಗಳ ಔಷಧ ಎಂದು ಗೌರವ ಪೂರ್ವಕವಾಗಿ ಕರೆದಿದ್ದಾರೆ. ಇದರಲ್ಲಿ ಪ್ರಾಣವಾಯು ತುಂಬಿದೆ ಎಂಬುದಾಗಿಯೂ ವಿವರಿಸಲಾಗಿದೆ. ಇಂದಿಗೂ ಆಯುರ್ವೇದದ ಬಹುತೇಕ ಗುಳಿಗೆಗಳನ್ನು ತುಪ್ಪದಲ್ಲಿಯೇ ಮಾಡಲಾಗುತ್ತದೆ. ಹೃದಯ ಸಂಬಂಧಿ ರೋಗಗಳಿಗೆ ಆಯುರ್ವೇದದಲ್ಲಿ ತುಪ್ಪದ ಆಧಾರಿತ ಔಷಧಿಗಳನ್ನೇ ಹೇಳಲ್ಪಟ್ಟಿವೆ. ನರ ಸಂಬಂಧಿ ರೋಗಗಳಿಗೆ ಪಂಚಗವ್ಯ ಘೃತವು ರಾಮಬಾಣವಾಗಿದೆ.
ʻಸರ್ಪಿರ್ ಆಜ್ಯʼ ಎಂದರೆ ಕರಗಿರುವ ತುಪ್ಪ ಎಂದರ್ಥ. ಆಜ್ಯವೆಂದರೆ ಹೊಸ ಬೆಣ್ಣೆಯನ್ನು ಕರಗಿಸಿ ಪಡೆದ ವಸ್ತು ಎಂದಾದರೆ, ಸರ್ಪಿರ್ ಎನ್ನುವುದು ಹರಿಯುವುದು ಎಂಬ ಅರ್ಥವನ್ನು ನೀಡುತ್ತದೆ. ಈ ದ್ರವ ರೂಪದ ತುಪ್ಪವು ಗಟ್ಟಿಯಾದಾಗ ಅದಕ್ಕೆ ಘೃತವೆಂದು ಹೆಸರು.

ಬೆಣ್ಣೆಯನ್ನು ಸ್ವಲ್ಪವಾಗಿ ಕರಗಿಸಿದಾಗ ಅದಕ್ಕೆ ಆಯುತ ಅಥವಾ ಅಸ್ತು ಎಂದೂ, ಹೆಚ್ಚಿನ ಉಷ್ಣತೆಯಲ್ಲಿ ಕರಗಿಸಿದಾಗ ನಿಷ್ಪಕ್ವ ಎಂದು ಹೆಸರಿಸಲಾಗಿದೆ. ಆಜ್ಯವು ಅನೇಕ ಬಗೆಗಳಾಗಿರಬಹುದು. ಅದು ಹಸುವಿನ ಹಾಲಿನಿಂದಲೇ ಮಾಡಲ್ಪಟ್ಟಿರಬೇಕು. ಹಸುವಿನ ಹಾಲು ದೊರಕದಿರುವ ಸಂದರ್ಭದಲ್ಲಿ ಎಮ್ಮೆಯ ಹಾಲಿನಿಂದ ಮಾಡಲ್ಪಡಬಹುದು ಎಂದು ಹೇಳಲಾಗಿದೆ.

ಅಮೃತದಂತೆ ಗುಣಕಾರಿಯಾದದ್ದು ತುಪ್ಪ!

ತುಪ್ಪಕ್ಕೆ ಸಂಸ್ಕೃತದಲ್ಲಿ ಘೃತ, ಹವಿ, ಅಮೃತ ಮತ್ತು ಜೀವನ, ಆದಿಯಾಗಿ ಅನೇಕ ಹೆಸರಿನಿಂದ ಕರೆಯಲಾಗುತ್ತದೆ. ಇಂತಹ ತುಪ್ಪವನ್ನು ಆಯುರ್ವೇದದಲ್ಲಿ ಸೌಮ್ಯ, ಶೀತ ವೀರ್ಯವುಳ್ಳದ್ದು, ಮೃದುತ್ವವನ್ನು ತರುವಂತದ್ದು, ಅಮೃತದಂತೆ ಗುಣಕಾರಿಯಾದದ್ದು, ಸ್ನಿಗ್ಧ, ಉನ್ಮಾದ, ಅಪಸ್ಮಾರ, ಸ್ಥೂಲ, ಜ್ವರ, ಹೊಟ್ಟೆಯುಬ್ಬರಿಕೆಗೆ ಪರಿಹಾರವಾಗಿದ್ದು, ವಾತಪಿತ್ತಹರವಾಗಿದೆ ಎನ್ನಲಾಗಿದೆ. ಹಾಗೆಯೇ ತುಪ್ಪ ಜೀರ್ಣಕಾರಿಯಾಗಿದ್ದು, ಬುದ್ಧಿಶಕ್ತಿ ಹಾಗೂ ಸ್ಮರಣ ಶಕ್ತಿಯನ್ನು ಹೆಚ್ಚಿಸುವಂತದ್ದು, ಶಾಂತಿ, ಸ್ವರ, ಕೋಮಲತೆ, ಲಾವಣ್ಯತೆ, ರೋಗ ನಿರೋಧಕ ಶಕ್ತಿ, ತೇಜಸ್ಸು ಹಾಗೂ ಬಲವನ್ನು ಹೆಚ್ಚಿಸುವಂತದ್ದಾಗಿದೆ.

ಆಯಸ್ಸು ವೃದ್ಧಿ, ವೀರ್ಯ ವೃದ್ಧಿ ಸೇರಿದಂತೆ ವಯಸ್ಸಾದಂತೆ ಶಕ್ತಿಯನ್ನು ವರ್ಧಿಸುವಂತದ್ದು, ಕಣ್ಣಿನ ರೋಗಗಳಿಗೆ ಹಿತಕಾರಿಯಾಗಿದ್ದು, ವಿಷನಾಶಕ, ಶಿರೋರೋಗ, ತ್ರಿದೋಷಹರವಾಗಿದ್ದು, ಹೃದಯದ ಆರೋಗ್ಯಕ್ಕೆ ತುಪ್ಪವು ಅತಿ ಹಿತಕಾರಿಯಾದುದು ಎಂದು ಬಣ್ಣಿಸಲಾಗಿದೆ.

ಆಯುರ್ವೇದದ ವಿಧಿಯಂತೆ ಲೇಹ, ರಸಾಯನ ಮೊದಲಾದ ಅನೇಕ ಬಗೆಯ ಔಷಧಗಳಲ್ಲಿ ತುಪ್ಪವನ್ನು ಪ್ರಯೋಗಿಸಲಾಗುತ್ತದೆ. ಔಷಧಗಳ ತಯಾರಿಕೆಯಲ್ಲಿ ಗೋವಿನ ಹಳೆ ತುಪ್ಪವನ್ನು ಹೆಚ್ಚಾಗಿ ಬಳಸಲಾಗುತ್ತದೆ. ಕಾರಣ ತುಪ್ಪ ಹಳೆಯದಾದಷ್ಟು ಅವುಗಳಲ್ಲಿನ ವಿಶೇಷ ಔಷಧೀಯ ಗುಣಗಳು ಹೆಚ್ಚಾಗುತ್ತಾ ಹೋಗುವುದೇ ಆಗಿದೆ. ಹತ್ತು ವರ್ಷದ ಹಳೆಯ ತುಪ್ಪಕ್ಕೆ, ನೂರು ವರ್ಷದ ಹಳೆಯ ತುಪ್ಪಕ್ಕೆ ಪ್ರತ್ಯೇಕ ಹೆಸರುಗಳನ್ನು ಸೂಚಿಸಲಾಗಿದೆ. ಹತ್ತು ವರ್ಷದ ಹಳೆಯ ತುಪ್ಪವನ್ನು ಪುರಾಣ ಘೃತ ಎಂದು ಸೂಚಿಸಲಾಗಿದ್ದರೆ, ನೂರು ವರ್ಷದ ಹಳೆಯ ತುಪ್ಪವನ್ನು ಕೌಂಭ ಘೃತ ಎಂದು ಸೂಚಿಸಲಾಗಿದೆ.

ಇನ್ನು ನೂರು ವರ್ಷಕ್ಕಿಂತ ಹಳೆಯ ತುಪ್ಪವನ್ನು ಮಹಾಘೃತ ಎಂದು ಹೆಸರಿಸಲಾಗಿದೆ. ಹಾಗೆಯೇ ಆಯುರ್ವೇದದಲ್ಲಿ ತುಪ್ಪದಿಂದ ತಯಾರಿಸಲ್ಪಡುವ ಮಹಾತಿಕ್ತಕ ಎಂಬ ಘೃತವನ್ನು ಒಂದು ಚಮಚದಂತೆ ದಿನಕ್ಕೆರಡು ಬಾರಿ ಸೇವಿಸುತ್ತಾ ಮೂರರಿಂದ ನಾಲ್ಕು ತಿಂಗಳಲ್ಲಿ ಸುಮಾರು ನಾಲ್ಕರಿಂದ ಐದು ಕಿಲೋ ತೂಕ ಕಡಿಮೆಯಾದ ಉದಾಹರಣೆ ಸಾಕಷ್ಟಿದೆ.

ಖಾಲಿ ಹೊಟ್ಟೆಯಲ್ಲಿ ತುಪ್ಪ ಸೇವಿಸಿ!

ನಿತ್ಯ ಖಾಲಿ ಹೊಟ್ಟೆಯಲ್ಲಿ ತುಪ್ಪವನ್ನು ಸೇವಿಸುವುದರಿಂದ ನಾವು ಊಹಿಸಲೂ ಅಸಾಧ್ಯವಾಗುವಂತಹ ಆರೋಗ್ಯ ಪ್ರಯೋಜನಗಳನ್ನು ಪಡೆದು ಕೊಳ್ಳಬಹುದಾಗಿದೆ. ಆಯುರ್ವೇದದ ಪ್ರಕಾರ ದೇಹದಲ್ಲಿನ ಜೀವಕೋಶಗಳ ಚಟುವಟಿಕೆ ಹೆಚ್ಚುವುದು ಹೊಟ್ಟೆ ಖಾಲಿ ಇದ್ದಾಗ. ಹೀಗಾಗಿ ತುಪ್ಪವನ್ನು ಖಾಲಿ ಹೊಟ್ಟೆಯಲ್ಲಿಯೇ ಸೇವಿಸಿದರೆ ದೇಹದ ಎಲ್ಲಾ ಜೀವಕೋಶಗಳಿಗೂ ಪೋಷಕಾಂಶ ದೊರೆಯುವುರೊಂದಿಗೆ ಜೀವಕೋಶಗಳು ಪುನಃಶ್ಚೇತವಾಗಿ ದೇಹಕ್ಕೆ ಉತ್ತಮವಾದ ಆರೈಕೆ ದೊರೆಯುತ್ತದೆ. ಚರ್ಮದ ಕಾಂತಿ ಹೆಚ್ಚಾಗಿ ಸದಾ ಕಾಂತಿ ಹಾಗೂ ತೇವಾಂಶದಿಂದ ಕೂಡಿರುವಂತೆ ಮಾಡುತ್ತದೆ. ಸೋರಿಯಾಸಿಸ್‌ನಂತಹ ಚರ್ಮ ರೋಗಗಳನ್ನು ತಡೆಯಬಹುದಾಗಿದೆ. ಇದು ಮೆದುಳಿನ ಕಾರ್ಯ ಚಟುವಟಿಕೆಯನ್ನು ಹೆಚ್ಚಿಸುತ್ತದೆ.

ಖಾಲಿ ಹೊಟ್ಟೆಯಲ್ಲಿ ತುಪ್ಪದ ಸೇವನೆ ಮಾಡುವುದರಿಂದ ಮೆದುಳಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ನಿವಾರಣೆಯಾಗುತ್ತವೆ. ಜೊತೆಗೆ ನೆನಪಿನ ಶಕ್ತಿ, ಕಲಿಕೆ, ಜ್ಞಾನ ಸುಧಾರಿಸುತ್ತದೆ. ಬುದ್ಧಿಮಾಂದ್ಯತೆ, ಅಲ್‌ಜೈಮರ್‌ನಂತಹ ಕಾಯಿಲೆ ಬರದಂತೆ ತಡೆಯುತ್ತದೆ. ಮುಂಜಾನೆ ಖಾಲಿ ಹೊಟ್ಟೆಯಲ್ಲಿ ತುಪ್ಪವನ್ನು ಸೇವಿಸುವುದರಿಂದ ಕೇಶ ರಾಶಿಯ ಸಂರಕ್ಷಣೆಗೆ ಸಹಾಯಕವಾಗಿ, ಕೂದಲಿನ ಫೋಲಿಸೆಲ್ಸ್‌ಗಳು ಆರೋಗ್ಯವಾಗಿರುವಂತೆ ಮಾಡುತ್ತದೆ. ಇದರಿಂದ ಹೊಳಪಿನಿಂದ ದಟ್ಟವಾದ ಕೂದಲನ್ನು ಹೊಂದಬಹುದು. ಮುಂಜಾನೆ ಸುಮಾರು 5 ರಿಂದ 10 ಮಿಲಿಯಷ್ಟು ತುಪ್ಪವನ್ನು ಸೇವಿಸಿದರೆ ಚಯಾಪಚಯ ಕ್ರಿಯೆ ಸುಧಾರಣೆಯಾಗುತ್ತದೆ.

ತುಪ್ಪಕ್ಕಿದೆ ಔಷಧೀಯ ಗುಣ

ಆಯುರ್ವೇದದ ಪ್ರಕಾರ ತುಪ್ಪ ಕ್ಯಾನ್ಸರ್ ವಿರೋಧಿ ಲಕ್ಷ್ಷಣಗಳನ್ನು ಒಳಗೊಂಡಿದೆ. ಸಂಧುಗಳ ನೋವಿಗೆ ಹಾಗೂ ಇನ್ನಿತರ ಮೂಳೆ ಸಂಬಂಧಿತ ಅನಾರೋಗ್ಯಕ್ಕೆ ತುಪ್ಪದ ಲೇಪವನ್ನು ಮಾಡಬಹುದು. ತುಪ್ಪದ ಸೇವನೆಯಿಂದ ಆಸ್ಟಿಯೋಫೋರೋಸಿಸ್ ಸೇರಿದಂತೆ ಅನೇಕ ಮೂಳೆ ಸಮಸ್ಯೆಗಳು ನಿವಾರಣೆಯಾಗುತ್ತವೆ. ತೂಕ ಇಳಿಸಲು ಮತ್ತು ತೂಕ ಹೆಚ್ಚಿಸಲು ತುಪ್ಪವನ್ನು ನಿಯಮಿತವಾಗಿ ಸೇವಿಸುವುದು ಅವಶ್ಯಕ. ತುಪ್ಪದಲ್ಲಿ ನೈಸರ್ಗಿಕವಾದ ಲುಬ್ರಿಕೆಂಟ್ ಮತ್ತು ಓಮೆಗಾ 3 ಎಂಬ ಕೊಬ್ಬಿನಾಮ್ಲವಿದೆ. ಹೀಗಾಗಿ ಕೀಲುಗಳಿಗೆ ಉತ್ತಮ ಆರೈಕೆ ಸಿಗುವುದರೊಂದಿಗೆ ಲ್ಯಾಕ್ಟೋಸ್‌ಗಳು ಸುಧಾರಿಸುತ್ತವೆ. ಜೀರ್ಣಕ್ರಿಯೆಯೂ ಉತ್ತಮವಾಗುತ್ತದೆ. ಕ್ಯಾನ್ಸರ್‌ನಿಂದ ದೂರವಿರಲು ಸಹಾಯವಾಗುತ್ತದೆ. ಮುಖ್ಯವಾಗಿ ತುಪ್ಪವು ಮೆದುಳು, ದೃಷ್ಟಿ ಮತ್ತು ಶ್ರವಣ ಸಂಬಂಧಿ ರೋಗಗಳಿಗೆ ಅತ್ಯುತ್ಕೃಷ್ಟ ಮದ್ದಾಗಿದೆ.

ಮೂಗಿನ ಮೂಲಕ ತುಪ್ಪ ಸೇವನೆ

ತುಪ್ಪವನ್ನು ಮೂಗಿನ ಮೂಲಕ ಸೇವಿಸುವುದರಿಂದ ಬಹಳಷ್ಟು ರೋಗಗಳು ಗುಣವಾಗುತ್ತವೆ. ನಶ್ಯಮ ಅಥವಾ ನಶ್ಯ ಕ್ರಿಯೆ ಎಂದು ಹೇಳಲಾಗುವ ಈ ವಿಧಾನದಲ್ಲಿ ಶರೀರದ ಉಷ್ಣದಿಂದ ಕರಗಿದ ತುಪ್ಪ ನಾಸಿಕದ ಪದರಗಳ ಮೂಲಕ ಕಂಠ ದ್ವಾರದಿಂದ ಮಸ್ತಿಷ್ಕ ಮತ್ತು ರಕ್ತಕಣಗಳಿಗೆ ತಲುಪುತ್ತದೆ. ಇದು ಶರೀರದ ಸುರಕ್ಷಾ ತಂತ್ರ ಮತ್ತು ನಿಯಂತ್ರಣಗಳನ್ನು ಬಲಿಷ್ಠಗೊಳಿಸುತ್ತದೆ. ಶರೀರದ ರೋಗ ಪ್ರತಿರೋಧಕ ಶಕ್ತಿ ಚಮತ್ಕಾರಿಕ ರೂಪದಲ್ಲಿ ವೃದ್ಧಿಸುತ್ತದೆ. ಅಲ್ಲದೆ ಹೃದಯಾಘಾತದಂತಹ ರೋಗಗಳು ಕಡಿಮೆಯಾಗುತ್ತವೆ. ಹೃದಯದಿಂದ ಮಸ್ತಿಷ್ಕದವರೆಗೆ ಆಕ್ಸಿಜನ್‌ನಿಂದ ತುಂಬಿದ ರಕ್ತಕಣಗಳ ಸಂಚಲನೆ ಜೋರಾಗುತ್ತದೆ. ಹೀಗಾಗಿ ಗೋವಿನ ತುಪ್ಪ ಹೃದಯಕ್ಕೆ ಶಕ್ತಿಶಾಲಿ ಕವಚ ಎಂದು ಹೇಳಲಾಗಿದೆ.

ಅಲ್ಲದೆ ಆರು ತಿಂಗಳವರೆಗೆ ತುಪ್ಪವನ್ನು ಮೂಗಿನಿಂದ ಸೇವಿಸುವುದರಿಂದ ಸೊಳ್ಳೆಗಳು ಕಚ್ಚಿದರೂ ಅದರ ಪ್ರಭಾವವಿರುವುದಿಲ್ಲ ಮತ್ತು ಹವಾಮಾನಕ್ಕೆ ಒಗ್ಗದ ರೋಗಗಳು ಬರುವುದಿಲ್ಲ ಎಂದು ಹೇಳಲಾಗುತ್ತದೆ. ಮರೆವಿನ ರೋಗ ಕಡಿಮೆಯಾಗಿ ನೆನಪಿನ ಶಕ್ತಿ ವೃದ್ಧಿಸುತ್ತದೆ. ಸರಿಯಾಗಿ ನಿದ್ರೆಯಿಲ್ಲದವರು ಮೂಗಿನ ಹೊಳ್ಳೆಗಳಿಗೆ ತುಪ್ಪವನ್ನು ಹಾಕುವುದರಿಂದ ಸುಖವಾದ ನಿದ್ರೆಯನ್ನು ಮಾಡಬಹುದಾಗಿದೆ. ಹಾಗೆಯೇ ತುಪ್ಪವನ್ನು ರಾತ್ರಿ ಮಲಗುವ ಮುನ್ನ ಪಾದಗಳಿಗೆ ಉಜ್ಜುವುದರಿಂದ ಮನಸ್ಸು ಶಾಂತವಾಗುವುದಷ್ಟೇ ಅಲ್ಲದೆ, ಒಳ್ಳೆಯ ನಿದ್ರೆಯೂ ಬರುತ್ತದೆ.

ಕಫ, ಪಿತ್ತ, ವಾತ ಈ ಮೂರು ಶರೀರದ ದೋಷಗಳೆಂದೇ ಆಯುರ್ವೇದದಲ್ಲಿ ಹೇಳಲ್ಪಟ್ಟಿದೆ. ಕಫ ನಮ್ಮ ಶರೀರದ ಎದೆಯ ಮೇಲ್ಭಾಗದಿಂದ ಮಸ್ತಿಷ್ಕದವರೆಗೆ ಪ್ರಭಾವ ಬೀರುತ್ತದೆ. ಪಿತ್ತ ಎದೆಯ ಕೆಳಭಾಗದಿಂದ ಅಂದರೆ ಹೊಟ್ಟೆಯಿಂದ ಜನನಾಂಗದ ಮೇಲ್ಭಾಗದವರೆಗೆ ಪ್ರಭಾವ ಬೀರಿದರೆ, ವಾತ ಜನನಾಂಗ ಹಾಗೂ ಕಾಲುಗಳ ಮೇಲೆ ಪ್ರಭಾವ ಬೀರುತ್ತದೆ. ವಾತ ಅಥವಾ ಗಾಳಿ 49 ಬಗೆಯದಾಗಿರುತ್ತದೆ. ಆಕ್ಸಿಜನ್ ದೇಹದಾದ್ಯಂತ ಗಾಳಿಯಂತೆ ಸಂಚರಿಸುತ್ತಿರುತ್ತದೆ. ಈ ರೀತಿ ಸಂಚರಿಸುವಾಗ ತನ್ನ ಕ್ಷೇತ್ರದಿಂದ ಪಿತ್ತ ಅಥವಾ ಕಫದ ಕ್ಷೇತ್ರಕ್ಕೆ ಹೋಗಬೇಕಾದರೆ ಆಗುವ ಅಸಂತುಲನೆಯಿಂದ ರೋಗ ಉಂಟಾಗುತ್ತದೆ. ಈ ರೀತಿ ನಮ್ಮ ದೇಹದಲ್ಲಿ ರೋಗದ ಸಂಚಲನೆ ಯಾವಾಗಲೂ ಕಾಲಿನೆಡೆಯಿಂದ ಮೇಲ್ಭಾಗದೆಡೆಗೆ ಪಸರಿಸುತ್ತದೆ.

ಕೊನೆಗೆ ಅದು ಮೇಲೇರಿ ನಮ್ಮ ಶರೀರ ಪ್ರಕ್ರಿಯೆಯನ್ನು ನಿಯಮಿತಗೊಳಿಸುವ ಮಸ್ತಿಷ್ಕದ ಕಣಗಳ ಮೇಲೆ ಪ್ರಭಾವ ಬೀರುತ್ತದೆ. ಆ ಮೂಲಕ ಅವುಗಳನ್ನು ವಿಕೃತಗೊಳಿಸಿ ಬಿಡುತ್ತವೆ. ಪರಿಣಾಮ ಇಂದ್ರಿಯಗಳ ಮೇಲಿನ ನಿಯಂತ್ರಣ ಕಳೆದುಹೋಗುತ್ತದೆ. ಇದರಿಂದ ಶರೀರದ ಕಾರ್ಯಸಂಹಿತೆ ನಷ್ಟವಾಗಿ ಶರೀರ ಅಸ್ವಸ್ಥವಾಗಿ ಹೋಗುತ್ತದೆ. ಹೀಗಾಗಿ ವಾತ ನಿವಾರಣೆಗೆಂದು ತುಪ್ಪ ಸೇವಿಸಲೇಬೇಕು. ಅದು ಹೆಚ್ಚಿನ ಪ್ರಾಣವಾಯುವನ್ನು ಮಸ್ತಿಷ್ಕದ ಕೋಶಗಳಿಗೆ ತಲುಪಿಸುತ್ತದೆ. ಸಮಗ್ರ ಬ್ರಹ್ಮಾಂಡದಲ್ಲಿ ಹಸುವಿನ ತುಪ್ಪದಲ್ಲಿ ಮಾತ್ರ ಪ್ರಾಣವಾಯು ಉತ್ಪಾದಿಸಬಲ್ಲ ರಾಸಾಯನಿಕ ಅಂಶಗಳಿವೆ. ಒಂದು ಚಮಚ ತುಪ್ಪವನ್ನು ಅಗ್ನಿಯಲ್ಲಿ ಆಹುತಿ ಮಾಡುವುದರಿಂದ ಒಂದು ಟನ್‌ಗೂ ಹೆಚ್ಚಿನ ಪ್ರಾಣವಾಯು ಉತ್ಪಾದನೆಯಾಗುತ್ತದೆ ಎಂಬುದಾಗಿ ಹೇಳಲಾಗುತ್ತದೆ.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

ಹೀಗಾಗಿ ದಿನಕ್ಕೊಮ್ಮೆಯಾದರೂ ಗೋವಿನ ತುಪ್ಪವನ್ನು ಆಘ್ರಾಣಿಸಬೇಕು, ಇಲ್ಲವೇ ಮೂಗಿಗೇರಿಸಿಕೊಳ್ಳಬೇಕು. ನೆನಪಿರಲಿ, ದೇಶಿ ಗೋವಿನ ತುಪ್ಪದಿಂದ ಮಾತ್ರ ಇಷ್ಟೆಲ್ಲಾ ಲಾಭವನ್ನು ಪಡೆಯಬಹುದಾಗಿದೆ. ಇದನ್ನು ಹೊರತುಪಡಿಸಿ ಇನ್ಯಾವುದೇ ಜೀವಿಯ ತುಪ್ಪಕ್ಕೆ ಹೆಚ್ಚಿನ ಮಹತ್ವವಿಲ್ಲ. ಹೀಗಾಗಿ ತುಪ್ಪ ಸೇವನೆಯ ಸಂದರ್ಭದಲ್ಲಿ ಇದರ ಬಗ್ಗೆ ನಿಗಾ ಇರಲಿ.

ಇದನ್ನೂ ಓದಿ : ಗೋ ಸಂಪತ್ತು: ತುಪ್ಪದ ವೈಜ್ಞಾನಿಕ ಮಹತ್ವ, ಔಷಧೀಯ ಗುಣ ನಿಮಗೆ ಗೊತ್ತೇ?

Exit mobile version