ಕಳೆದ ವಾರ ಮಜ್ಜಿಗೆಯ ಮಹತ್ವದ ಕುರಿತು ತಿಳಿದುಕೊಳ್ಳಲಾಗಿತ್ತು. ಹೌದು, ಮಾನವನ ದೇಹಕ್ಕೆ ಮಜ್ಜಿಗೆ ಅತಿ ಉತ್ತಮ ದ್ರವ ಪದಾರ್ಥ. ಅದರಲ್ಲೂ ದೇಶಿ ಗೋವಿನ ಹಾಲಿನಿಂದ ತಯಾರಿಸಲಾದ ಮಜ್ಜಿಗೆ ಅತಿ ಸೂಕ್ತವೆಂದು, ಇಂತಹ ಮಜ್ಜಿಗೆಯಲ್ಲಿ ಮಾತ್ರ ಔಷಧೀಯ ಗುಣವಿರುತ್ತದೆ ಎಂದು ಹೇಳಲಾಗುತ್ತದೆ.
ಸಾಮಾನ್ಯವಾಗಿ ಇಂದು ಮಜ್ಜಿಗೆಯನ್ನು ಎರಡು ವಿಧದಲ್ಲಿ ತಯಾರಿಸಲಾಗುತ್ತದೆ. ಹಾಲನ್ನು ಕಾಯಿಸಿದಾಗ ಮೇಲೆ ಶೇಖರಣೆಯಾಗುವ ಕೆನೆಯನ್ನು ತೆಗೆದು, ನಂತರ ಅದನ್ನು ಕಡೆದು ಅದರಿಂದ ಬೆಣ್ಣೆಯನ್ನು ಬೇರ್ಪಡಿಸಿ, ಉಳಿದ ನೀರನ್ನು ಮಜ್ಜಿಗೆಯೆಂದು ಪರಿಗಣಿಸಲಾಗುತ್ತದೆ. ಇದೇ ವಿಧಾನವನ್ನು ಇಂದಿನ ಬಹುತೇಕ ಡೇರಿಗಳಲ್ಲಿ ಅನುಸರಿಸಲಾಗುತ್ತಿದೆ.
ಮತ್ತೊಂದು ವಿಧಾನವೆಂದರೆ ಬಹಳ ಹಿಂದಿನಿಂದಲೂ ಬಂದಂತಹ ಸಾಂಪ್ರದಾಯಿಕ ಪದ್ಧತಿಯಲ್ಲಿ ಮಜ್ಜಿಗೆಯನ್ನು ತಯಾರಿಸುವುದು. ಹಾಲಿನಿಂದ ಮೊಸರು ತಯಾರಿಸಿ, ಆ ಮೊಸರನ್ನು ಕಡೆದು ಅದರಿಂದ ಬೆಣ್ಣೆಯನ್ನು ಬೇರ್ಪಡಿಸಿ ಉಳಿದ ನೀರಿನಂಶವನ್ನು ಮಜ್ಜಿಗೆ ಎಂಬುದಾಗಿ ಪರಿಗಣಿಸುವುದು. ಈ ಸಾಂಪ್ರದಾಯಿಕ ಪದ್ಧತಿಯಿಂದ ಪಡೆದ ಮಜ್ಜಿಗೆಯಲ್ಲಿ ಎಲ್ಲಾ ಔಷಧೀಯ ಗುಣಗಳು ಮಿಳಿತವಾಗಿರುವುದು ಕಂಡುಬಂದಿದೆ.
ಮುಖ್ಯವಾಗಿ ಮಜ್ಜಿಗೆಯನ್ನು ಕಡೆಯುವಾಗ ಮರದ ಪರಿಕರವನ್ನು ಅಂದರೆ ಕಡಗೋಲನ್ನು ಬಳಸಿದ್ದೇ ಆದಲ್ಲಿ ಅದು ಇನ್ನು ಹೆಚ್ಚು ಪೌಷ್ಟಿಕಯುಕ್ತವಾಗಿ ಹೆಚ್ಚಿನ ಔಷಧೀಯ ಗುಣಗಳಿಂದ ಕೂಡಿರುವುದು ಸಾಬೀತಾಗಿದೆ.
ಹಸುವಿನ ಹಾಲಿನಿಂದ ತಯಾರಿಸಿದ ಮಜ್ಜಿಗೆಯಂತೆ ಎಮ್ಮೆ ಹಾಲಿನ ಮಜ್ಜಿಗೆಯು ಸಹ ಹಸಿವನ್ನು ಹೆಚ್ಚಿಸುವುದ ರೊಂದಿಗೆ ಕರುಳು ಸಂಬಂಧಿ ರೋಗಗಳಿಗೆ ಅತಿ ಉಪಯುಕ್ತವಾದುದು ಎಂದು ಹೇಳಲಾಗಿದೆ. ಆದರೆ ಇದು ಕಫನಾಶಕವಾಗಿದ್ದು, ಪಚನಕ್ಕೆ ಭಾರವೆಂದು ಹೇಳಲಾಗಿದೆ. ಉತ್ತರ ಭಾರತದಲ್ಲಿ ದಕ್ಷಿಣ ಭಾರತಕ್ಕಿಂತ ಹೆಚ್ಚಾಗಿ ಎಮ್ಮೆಯ ಹಾಲಿನಿಂದ ಮಜ್ಜಿಗೆಯನ್ನು ತಯಾರಿಸಲಾಗುತ್ತದೆ. ಹಾಗೆಯೇ ಉತ್ತರ ಭಾರತೀಯರು ಮಜ್ಜಿಗೆಯ ಬದಲು ಸಿಹಿಯಾದ ಲಸ್ಸಿಯನ್ನು ಸೇವಿಸಿದರೆ, ದಕ್ಷಿಣ ಭಾರತದವರು ಹಸಿಮೆಣಸು, ಬೆಳ್ಳುಳ್ಳಿ ಸೇರಿಸಿದ ಬೆಣ್ಣೆ ರಹಿತವಾದ ಮಜ್ಜಿಗೆಯನ್ನು ಹೆಚ್ಚಾಗಿ ಸೇವಿಸಲು ಬಯಸುವುದು ಕಂಡುಬಂದಿದೆ.
ಮಜ್ಜಿಗೆಯು ಉತ್ತರ ಭಾರತೀಯರಿಗಿಂತ ಹೆಚ್ಚಾಗಿ ದಕ್ಷಿಣ ಭಾರತೀಯರ ಆಹ್ಲಾದಕರ ಪೇಯವಾಗಿದೆ ಎಂದರೆ ತಪ್ಪಾಗಲಾರದು. ಮಜ್ಜಿಗೆಯನ್ನು ಹೆಚ್ಚಾಗಿ ಸೇವಿಸುವ ಮಹಾರಾಷ್ಟ್ರದಲ್ಲಿ ಇದನ್ನು ʻಛಾಂಚ್ʼ ಎಂದು ಕರೆಯಲಾಗುತ್ತದೆ. ಕರ್ನಾಟಕ, ಮಹಾರಾಷ್ಟ್ರ, ಗುಜರಾತ್ ಸೇರಿದಂತೆ ದೇಶದ ಬಹುತೇಕ ರಾಜ್ಯಗಳಲ್ಲಿ ಇಂದಿಗೂ ಮಜ್ಜಿಗೆಯನ್ನು ಜನರು ಊಟದ ನಂತರವೇ ಹೆಚ್ಚಾಗಿ ಸೇವಿಸುವುದಕ್ಕೆ ಇಷ್ಟ ಪಡುವುದು ಕಂಡುಬಂದಿದೆ.
ಮಜ್ಜಿಗೆಯನ್ನು ಭಾರತೀಯರು ಸ್ವಾಸ್ಥ್ಯ ಆರೋಗ್ಯದ ದೃಷ್ಟಿಯಿಂದಷ್ಟೇ ಅಲ್ಲದೆ ಕೃಷಿಯಲ್ಲಿಯೂ ಹಲವು ರೀತಿಯಲ್ಲಿ ಇಂದಿಗೂ ಬಳಸುತ್ತಿದ್ದಾರೆ. ಈ ಕುರಿತಂತೆ ವೃಕ್ಷಾರ್ಯುವೇದದ ಬಹುತೇಕ ಕಡೆಗಳಲ್ಲಿ ಉಲ್ಲೇಖವಿರುವುದನ್ನು ಗಮನಿಸಬಹುದಾಗಿದೆ. ಇನ್ನು ಕೆಲವೆಡೆ ಪಶುಗಳಿಗೆ ಔಷಧಿಯಾಗಿಯೂ ಮಜ್ಜಿಗೆಯನ್ನು ಉಪಯೋಗಿಸುವುದು ಕಂಡುಬಂದಿದೆ. ಇನ್ನು ಮದ್ಯ ವ್ಯಸನಿಗಳಿಗೆ ಕುಡಿತದ ಅಮಲನ್ನು ಕೂಡಲೇ ಇಳಿಸುವ ಉದ್ದೇಶದಿಂದ ಮಜ್ಜಿಗೆಯನ್ನು ಕುಡಿಸುವ ಪರಿಪಾಠ ಗ್ರಾಮೀಣ ಭಾರತದಲ್ಲಿ ಹೆಚ್ಚಾಗಿದೆ. ಹೀಗೆ ಮಾಡುವುದರಿಂದ ಕುಡಿದವರಲ್ಲಿ ಮಂಪರು ಕಡಿಮೆಯಾಗಿ ಸಹಜ ಸ್ಥಿತಿಗೆ ಬರಲು ಇದು ಸಹಾಯಕವಾಗುತ್ತದೆಯಂತೆ. ನಮ್ಮಂತೆ ಐರಿಷ್ ಜನರು ಸಹ ಕುಡಿದು ನಶೆಯಲ್ಲಿರುವವರಿಗೆ ಬೇಗ ನಶೆ ಇಳಿಸಲೆಂದು ಮಜ್ಜಿಗೆಯನ್ನು ಕುಡಿಸುವ ಪದ್ಧತಿಯನ್ನು ರೂಢಿಸಿಕೊಂಡಿರುವುದು ಕಂಡುಬರುತ್ತದೆ.
ಬಹಳಷ್ಟು ಜನರಿಗೆ ಮಜ್ಜಿಗೆಯ ನೆನಪಾಗುವುದು ಸುಡು ಬೇಸಿಗೆಯ ಸಮಯದಲ್ಲಿ ಮಾತ್ರ. ಹೀಗೆ ಬೇಸಿಗೆಯಲ್ಲಿ ದಾಹವನ್ನು ತಣಿಸುವ ಈ ಮಜ್ಜಿಗೆಯಿಂದ ಮನುಷ್ಯನ ದೇಹಕ್ಕೆ ಸಾಕಷ್ಟು ಪ್ರಯೋಜನವಿರುವುದು ದೃಢಪಟ್ಟಿದೆ. ಹೀಗಾಗಿ ಆರೋಗ್ಯದ ದೃಷ್ಟಿಯಿಂದ ಮಜ್ಜಿಗೆಯನ್ನು ಮನುಷ್ಯ ಪ್ರತಿ ನಿತ್ಯ ಸೇವಿಸಲೇ ಬೇಕು. ಹೀಗೆ ಸೇವಿಸಿದ್ದಲ್ಲಿ ಮಾತ್ರ ಉತ್ತಮ ಆರೋಗ್ಯವನ್ನು ಹೊಂದಲು ಸಾಧ್ಯ ಎಂಬುದಾಗಿ ಆಯುರ್ವೇದ ಪಂಡಿತರು ಹೇಳುತ್ತಾರೆ.
ಹೀಗಾಗಿ ಬಹುತೇಕ ಮನೆಗಳಲ್ಲಿ ಇಂದಿಗೂ ಮಜ್ಜಿಗೆ ಇಲ್ಲದೆ ಊಟ ಕೊನೆಯಾಗುವುದೇ ಇಲ್ಲ. ಹೀಗೆ ಪ್ರತಿ ನಿತ್ಯ ಊಟದೊಂದಿಗೆ ಮಜ್ಜಿಗೆ ಸೇವಿಸುವವರನ್ನು ಒಂದಷ್ಟು ಜನ ಅಣುಕಿಸುವುದನ್ನು ನಾವು ಆಗಾಗ ನೋಡುತ್ತಿರುತ್ತೇವೆ. ಆದರೆ ಮಜ್ಜಿಗೆ ಹೀಗೆ ಅಣುಕಿಸುವವರನ್ನೇ ಅಣುಕಿಸುವಷ್ಟರ ಮಟ್ಟಿಗೆ ಔಷಧೀಯ ಗುಣಗಳೊಂದಿಗೆ ಕೂಡಿರುವುದನ್ನು ವೈಜ್ಞಾನಿಕ ಜಗತ್ತು ಒಪ್ಪಿದೆ ಮತ್ತು ಅನುಮೋದಿಸಿದೆ.
ಪ್ರತಿ ನಿತ್ಯ ಕನಿಷ್ಠ ನಾಲ್ಕೈದು ಲೋಟ ಮಜ್ಜಿಗೆಯ ನೀರನ್ನು ಕುಡಿಯುತ್ತಿದ್ದರೆ ದೇಹದ ಆರೋಗ್ಯ ಸ್ಥಿತಿ ಉತ್ತಮವಾಗಿರುವುದು ಕಂಡುಬಂದಿದೆ. ಅರ್ಧ ಚಮಚ ಶುಂಠಿ ರಸ ಹಾಗೂ ಜೀರಿಗೆ ಪುಡಿಯನ್ನು ಮಜ್ಜಿಗೆಯೊಂದಿಗೆ ಸೇವಿಸುವುದರಿಂದ ಆ್ಯಸಿಡಿಟಿ, ಮಲಬದ್ಧತೆ ಹಾಗೂ ಮೂಲವ್ಯಾಧಿ ನಿವಾರಣೆಯಾಗುವುದು ರುಜುವಾತಾಗಿದೆ. ಅಜೀರ್ಣ ಮತ್ತು ಹೊಟ್ಟೆ ನೋವಿಗೆ ಹುಳಿ ಮಜ್ಜಿಗೆಯೊಂದಿಗೆ ಸ್ವಲ್ಪ ಇಂಗು ಮತ್ತು ಉಪ್ಪನ್ನು ಬೆರೆಸಿ ಕುಡಿದರೆ ಕೂಡಲೇ ಪರಿಹಾರ ಸಿಗುವುದು ಸಾಬೀತಾಗಿದೆ. ಬಾರ್ಲಿ ಗಂಜಿ ಹಾಗೂ ನಿಂಬೆ ರಸದೊಂದಿಗೆ ಮಜ್ಜಿಗೆ ಸೇವಿಸುವುದರಿಂದ ರಕ್ತದೊತ್ತಡ ಮತ್ತು ತಲೆ ನೋವು ಗುಣವಾಗುವುದು.
ಇನ್ನು ವಾಂತಿಯಿಂದ ಮುಕ್ತಿ ಪಡೆಯಲು ಮಜ್ಜಿಗೆಯೊಂದಿಗೆ ಸೈಂದ್ರವ ಲವಣ ಹಾಗೂ ಹಸಿ ಶುಂಠಿ ರಸವನ್ನು ಬೆರೆಸಿ ಕುಡಿಯುವುದು ಅತಿ ಸೂಕ್ತವಾದುದಾಗಿದೆ. ತಲೆ ಹೊಟ್ಟಿನ ಸಮಸ್ಯೆ ಇರುವವರು ಹುಳಿ ಮಜ್ಜಿಗೆಯನ್ನು ಕೂದಲಿನ ಬುಡಕ್ಕೆ ಸವರಿ ಎರಡು ಗಂಟೆ ಬಿಟ್ಟು ಸ್ನಾನ ಮಾಡಬೇಕು. ಹೀಗೆ ನಾಲ್ಕೈದು ಬಾರಿ ಮಾಡುವುದರಿಂದ ತಲೆಹೊಟ್ಟು ನಿವಾರಣೆಯಾಗಿರುವುದು. ಮಜ್ಜಿಗೆಯೊಂದಿಗೆ ಸಣ್ಣದಾಗಿ ಹಚ್ಚಿದ ಈರುಳ್ಳಿಯನ್ನು ಸ್ವಲ್ಪ ಪ್ರಮಾಣದಲ್ಲಿ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದೆಂದು ಸಂಶೋಧನೆಯಿಂದ ದೃಢಪಟ್ಟಿದೆ. ಹಾಗೆಯೇ ಮಜ್ಜಿಗೆ ಅಥವಾ ಮೊಸರಿನಲ್ಲಿ ಈರುಳ್ಳಿಯನ್ನು ಬೆರೆಸಿ ಸೇವಿಸುವುದರಿಂದ ಶರೀರಕ್ಕೆ ಅವಶ್ಯಕವಾದ ಹಲವು ಪೋಷಕಾಂಶಗಳು ಸಿಗುವುದು ಸಾಬೀತಾಗಿದೆ.
ಒಂದು ಚಿಟಿಕೆ ಉಪ್ಪು, ಒಂದು ಚಮಚ ಸಕ್ಕರೆಯೊಂದಿಗೆ ಒಂದು ಗ್ಲಾಸ್ ಮಜ್ಜಿಗೆಯು ದೇಹಕ್ಕೆ ಉತ್ತಮವಾಗಿದ್ದು, ಶಕ್ತಿಯನ್ನು ನೀಡುವುದರೊಂದಿಗೆ ಅಗತ್ಯವಾದ ನೀರಿನಂಶವನ್ನು ನೀಡುತ್ತದೆ ಮತ್ತು ಅತಿಸಾರವನ್ನು ನಿಯಂತ್ರಿಸುತ್ತದೆ ಎಂಬುದಾಗಿ ಹೇಳಲಾಗುತ್ತದೆ. ಹಾಗೆಯೇ ಸ್ತ್ರೀಯರು ತಮ್ಮ ಮುಖದ ಕಳೆಯನ್ನು ಹೆಚ್ಚಿಸಲು ಮಜ್ಜಿಗೆಯ ಲೇಪನ ಕೊಡುವುದು ಇಂದಿಗೂ ಬಹುತೇಕ ಸ್ಥಳಗಳಲ್ಲಿ ವಾಡಿಕೆಯಲ್ಲಿದೆ. ಪಚನ ಕ್ರಿಯೆ ಮಂದವಾಗಿದ್ದರೆ ಮಜ್ಜಿಗೆಯಲ್ಲಿ ಶುಂಠಿಯಲ್ಲಿ ಬೆರೆಸಿ ಕುಡಿಯುವುದರಿಂದ ಪರಿಹಾರ ಕಂಡುಕೊಳ್ಳಬಹುದಾಗಿದೆ. ಹೀಗಾಗಿ ಮೂಲವ್ಯಾಧಿಗೆ ಇದನ್ನು ಔಷಧವೆಂದು ಇಂದಿಗೂ ಉಪಚರಿಸಲಾಗುತ್ತದೆ.
ಮಜ್ಜಿಗೆಯಲ್ಲಿ ಆಮ್ಲರಸವಿದ್ದು, ಅದರ ಲಘು ಗುಣದಿಂದಾಗಿ ಸುಲಭವಾಗಿ ಜೀರ್ಣವಾಗುವ ಗುಣವನ್ನು ಹೊಂದಿದೆ. ಹೀಗಾಗಿಯೇ ಸಭೆ ಸಮಾರಂಭಗಳಲ್ಲಿ ಅಧಿಕ ಊಟವನ್ನು ಮಾಡಿ ಹೊಟ್ಟೆ ಭಾರವೆನಿಸಿದ್ದಲ್ಲಿ ಮಜ್ಜಿಗೆಯೊಂದಿಗೆ ಸ್ವಲ್ಪ ಪ್ರಮಾಣದ ಉಪ್ಪು, ಹಸಿ ಮೆಣಸಿನಕಾಯಿ ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿಕೊಂಡು ಸೇವಿಸುವ ಪದ್ಧತಿ ಇಂದಿಗೂ ಬಹುತೇಕ ಕಡೆಗಳಲ್ಲಿ ರೂಢಿಯಲ್ಲಿದೆ. ಹಾಗೆಯೇ ಮಜ್ಜಿಗೆಯೊಂದಿಗೆ ಸ್ವಲ್ಪ ಪ್ರಮಾಣದ ಉಪ್ಪು ಹಾಗೂ ಜೀರಿಗೆ ಪುಡಿಯನ್ನು ಸೇರಿಸಿ ಕುಡಿಯುವುದರಿಂದ ಜೀರ್ಣ ಶಕ್ತಿ ಇನ್ನಷ್ಟು ಹೆಚ್ಚುವುದನ್ನು ಜನ ಕಂಡುಕೊಂಡಿದ್ದಾರೆ.
ನಮ್ಮ ಪೂರ್ವಜರಿಗೆ ಮಜ್ಜಿಗೆ ಇಲ್ಲದೆ ಭೋಜನ ಪರಿಪೂರ್ಣವಾಗುತ್ತಲೇ ಇರಲಿಲ್ಲ. ಹೀಗಾಗಿ ಭೋಜನದ ಕೊನೆಯಲ್ಲಿ ಮಜ್ಜಿಗೆಯ ಸೇವನೆ ಅತಿ ಅವಶ್ಯಕವಾಗಿ ಮಾಡುತ್ತಿದ್ದುದು ತಿಳಿದುಬರುತ್ತದೆ. ಹೀಗೆ ಪ್ರತಿ ನಿತ್ಯ ಆಹಾರದ ನಂತರ ಮಜ್ಜಿಗೆ ಸೇವಿಸುವುದರಿಂದ ಅನೇಕ ಆರೋಗ್ಯಕರ ಲಾಭಗಳನ್ನು ಅವರು ಪಡೆಯುತ್ತಿದ್ದುದು ಕಂಡುಬರುತ್ತದೆ. ಇತ್ತೀಚಿನ ಒಂದು ಸಂಶೋಧನೆಯ ಪ್ರಕಾರ ಪ್ರತಿ ನಿತ್ಯ ಊಟದ ನಂತರ ಮಜ್ಜಿಗೆಯನ್ನು ಸೇವಿಸುವುದನ್ನು ರೂಢಿಸಿಕೊಳ್ಳುವುರಿಂದ ರಕ್ತದೊತ್ತಡ ಕಡಿಮೆಮಾಡಿಕೊಳ್ಳಬಹುದಂತೆ ಮತ್ತು ರಕ್ತದಲ್ಲಿರುವ ಅನಗತ್ಯ ಕೊಬ್ಬಿನಂಶವನ್ನು ನಿವಾರಿಸಿಕೊಳ್ಳಬಹುದಂತೆ.
ಹಾಗೆಯೇ ಊಟವನ್ನು ಮೊಸರು ಇಲ್ಲವೇ ಮಜ್ಜಿಗೆಯಿಂದಲೇ ಮುಗಿಸಬೇಕಂತೆ. ಏಕೆಂದರೆ ಮೊಸರು ಮತ್ತು ಮಜ್ಜಿಗೆಯಲ್ಲಿರುವ ಲ್ಯಾಕ್ಟಿಕ್ ಆ್ಯಸಿಡ್ ಹೊಟ್ಟೆಯಲ್ಲಿನ ಗ್ಯಾಸ್ಟಿçಕ್‌ನ್ನು ಒಡೆದು ಅಲ್ಕಲೈನ್‌ನ್ನು ಬಿಡುಗಡೆ ಮಾಡುತ್ತ ದೆಯಂತೆ. ಆಗ ಶರೀರಕ್ಕೆ ಅಜೀರ್ಣ ಪಿತ್ತ ಸಮಸ್ಯೆ ಆಗುವುದಿಲ್ಲವಂತೆ. ಹೀಗಾಗಿಯೇ ಊಟದ ಕೊನೆಯಲ್ಲಿ ಮೊಸರು ಇಲ್ಲವೇ ಮಜ್ಜಿಗೆ ಸೇವಿಸಿದರೆ ಹೊಟ್ಟೆ ತಂಪಾಗಿರುತ್ತದೆ ಎಂಬುದಾಗಿ ಹೇಳಲಾಗಿದೆ. ಇಲ್ಲಿ ತಂಪು ಎಂದರೆ ಕಡಿಮೆ ಉಷ್ಣತಾಮಾನ ಎಂದೇನಲ್ಲ. ತಂಪು ಎಂದರೆ ಯಾವ ತೊಂದರೆ ಇಲ್ಲವೆಂದೇ ಅರ್ಥ. ಯಾವುದೇ ತರಹದ ಕರುಳು ಬೇನೆ ಇಲ್ಲ ಎಂದು ಸಹ ತಿಳಿಯಬಹುದಾಗಿದೆ.
ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ.
ಒಂದರ್ಥದಲ್ಲಿ ಭಾರೀ ಊಟದ ಬಳಿಕ ಮಜ್ಜಿಗೆಯನ್ನು ಸೇವಿಸುವ ಅಭ್ಯಾಸ ಉತ್ತಮವಾದುದಾಗಿದೆ. ಇಷ್ಟೇ ಪ್ರಮಾಣದಲ್ಲಿ ಸೇವಿಸಬೇಕೆಂಬ ರೂಢಿ ಜಾರಿಯಲ್ಲಿಲ್ಲದಿದ್ದರೂ ಅಗತ್ಯಕ್ಕೆ ತಕ್ಕಂತೆ ಸೇವಿಸುವುದು ಆರೋಗ್ಯದ ಹಿತದೃಷ್ಟಿಯಿಂದ ಕ್ಷೇಮಕರವಾದುದಾಗಿದೆ. ಒಟ್ಟಿನಲ್ಲಿ ಊಟಕ್ಕೆ ಉಪ್ಪಿನಕಾಯಿ ಇದ್ದಂತೆ ಊಟದ ಕೊನೆಯಲ್ಲಿ ಮಜ್ಜಿಗೆ ಇರುವುದು ಸ್ವಾಸ್ಥ್ಯ ದೃಷ್ಟಿಯಲ್ಲಿ ಅತಿ ಅವಶ್ಯಕವಾದುದಾಗಿದೆ. ಹೀಗೆ ಊಟದ ನಂತರ ಮಜ್ಜಿಗೆಯನ್ನು ಸೇವಿಸಿದ್ದೇ ಆದಲ್ಲಿ ದೇಹವು ಆರೋಗ್ಯವಿರುವುದಷ್ಟೇ ಅಲ್ಲದೆ ಊಟವೂ ಪರಿಪೂರ್ಣವಾಗಿ ಮನಸ್ಸು ಆಹ್ಲಾದವಾಗುತ್ತದೆ. ಹೀಗಾಗಿಯೇ ಮಜ್ಜಿಗೆಯ ಮಹತ್ವ ಮನೆಯಿಂದ ಹೊರಬಂದು ಕೆಲವೊಂದು ಹಿಂದೂ ಧಾರ್ಮಿಕ ಆಚರಣೆಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸಿರುವುದು.
ಇದನ್ನೂ ಓದಿ : ಗೋ ಸಂಪತ್ತು: ಆಹಾರವಾಗಿ ಮಾತ್ರವಲ್ಲ, ಔಷಧವಾಗಿಯೂ ಮಜ್ಜಿಗೆಗೆ ಮಹತ್ವವಿದೆ!