Site icon Vistara News

ಗೋ ಸಂಪತ್ತು: ಆಹಾರವಾಗಿ ಮಾತ್ರವಲ್ಲ, ಔಷಧವಾಗಿಯೂ ಮಜ್ಜಿಗೆಗೆ ಮಹತ್ವವಿದೆ!

go sampattu column by shylesh holla about importance of homemade buttermilk

milk

ದಿನಾಂತೇ ಚ ಪಿಬೇದ್‌ದುಗ್ಧಂ ನಿಶಾಂತೇ ಚ ಪಿಬೇತ್ವಯಃ|
ಭೋಜನಾಂತೇ ಪಿಬೇತ್ತಕ್ರಂ ಕಿಂ ವೈದ್ಯಸ್ಯ ಪ್ರಯೋಜನಮ್||

ವೇದದ ಈ ಎರಡು ಸಾಲಿನಲ್ಲಿ ಆಹಾರ ವ್ಯವಸ್ಥೆಯೇ ಅಡಗಿದೆ. ಇದರರ್ಥ ಸಾಯಂಕಾಲ ಹಾಲನ್ನು ಕುಡಿಯಬೇಕು, ಬೆಳಿಗ್ಗೆ ನೀರನ್ನು ಕುಡಿಯಬೇಕು, ಊಟದ ಕೊನೆಯಲ್ಲಿ ಮಜ್ಜಿಗೆಯನ್ನು ಸೇವಿಸಬೇಕು. ಹೀಗೆ ಮಾಡಿದರೆ ವೈದ್ಯನಿಗೆ ಕೆಲಸವಿರುವುದಿಲ್ಲ ಎನ್ನುವುದೇ ಆಗಿದೆ. ಇದರಿಂದ ಬಡವರ ಪಾನೀಯವೆಂದೇ ಹೇಳಲಾಗುವ ಮಜ್ಜಿಗೆ ವೇದ ಕಾಲದಿಂದಲೂ ಬಹು ಪ್ರಾಮುಖ್ಯತೆಯನ್ನು ಪಡೆದ ಒಂದು ಪೇಯ ಎನ್ನುವುದು ದೃಢವಾಗುತ್ತದೆ.

ಮನುಷ್ಯನಿಗೆ ಅಮೃತ, ದೇವತೆಗಳಿಗೆ ನೀರು, ಪಿತೃಗಳಿಗೆ ಮಗ ಹೇಗೆ ಮುಖ್ಯವೋ ಹಾಗೆಯೇ ದೇವೇಂದ್ರನಿಗೆ ಮಜ್ಜಿಗೆ ದುರ್ಲಭ ಎನ್ನುತ್ತದೆ ಸಂಸ್ಕೃತ ಶ್ಲೋಕವೊಂದು. ಮತ್ತೊಂದು ಶ್ಲೋಕದಲ್ಲಿ ಸ್ವರ್ಗದಲ್ಲಿ ದೇವತೆಗಳು ಅಮೃತಪಾನದಿಂದ ಅಮರತ್ವ ಹೊಂದುವಂತೆ, ಭೂಮಿಯಲ್ಲಿ ಮಜ್ಜಿಗೆಯಿಂದ ಮನುಷ್ಯರು ದೀರ್ಘಾಯುಷ್ಯವನ್ನು ಹೊಂದುತ್ತಾರೆಂದು ಹೇಳಲಾಗಿದೆ.

ದೇವರಿಗೆ ಅಮೃತ ಹೇಗೆ ಮಹತ್ವವೋ ಹಾಗೆಯೇ ಮಾನವರಿಗೆ ಮಜ್ಜಿಗೆ ಶ್ರೇಷ್ಠ ಎಂದು ಹೇಳಲಾಗಿದೆ. ಹೀಗಾಗಿ ವೇದ ಕಾಲದಿಂದಲೂ ಮಜ್ಜಿಗೆಯನ್ನು ಜನರು ಬಳಸುತ್ತಾ ಅದರ ಲಾಭವನ್ನು ಪಡೆದುಕೊಂಡು ಬಂದಿರುವುದು ಸ್ಪಷ್ಟವಾಗುತ್ತದೆ.

ವೇದಗಳಲ್ಲಿ ಮಜ್ಜಿಗೆಯ ಮಹತ್ವವನ್ನು ಬಹಳವಾಗಿ ಹಲವು ಕಡೆಗಳಲ್ಲಿ ವರ್ಣಿಸಲಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಮಜ್ಜಿಗೆಯನ್ನು ಆಯುರ್ವೇದ ಚಿಕಿತ್ಸೆಯಲ್ಲಿ ಬಹಳವಾಗಿ ಉಪಯೋಗಿಸುವ ಹಲವು ಪ್ರಮುಖ ಆಹಾರ ಪದಾರ್ಥಗಳಲ್ಲಿ ಒಂದು ಎಂದು ಪರಿಗಣಿಸಿರುವುದೇ ಆಗಿದೆ. ಇಂತಹ ಮಜ್ಜಿಗೆಯನ್ನು ಆಯುರ್ವೇದದಲ್ಲಿ ರೋಗಿಗಳ ಚಿಕಿತ್ಸೆಗಷ್ಟೇ ಅಲ್ಲದೆ ರೋಗವನ್ನು ತಡೆಯುವ ಉದ್ದೇಶದಿಂದ ರೋಗಿಗಳಿಗೆ ಆಹಾರದ ರೂಪದಲ್ಲಿ ಬಳಸಲು ಸೂಚಿಸಿರುವುದು ಕಂಡುಬರುತ್ತದೆ. ಹಾಗೆಯೇ ಆಯುರ್ವೇದದಲ್ಲಿ ಐದು ಪ್ರಕಾರದ ಮಜ್ಜಿಗೆಯನ್ನು ನಿರ್ದೇಶಿಸಲಾಗಿದೆ. ಅಂತೆಯೇ ಮಜ್ಜಿಗೆಯಲ್ಲಿನ ನೀರಿನ ಆಧಾರ ಮೇಲೂ ನಾನಾ ಭೇದಗಳನ್ನು ಆಯುರ್ವೇದದಲ್ಲಿ ವರ್ಣಿಸಲಾಗಿದೆ. ಹುಳಿ, ಅತಿಯಾದ ಹುಳಿ, ಒಗರು ಎಂಬ ರುಚಿಯ ಆಧಾರದ ಮೇಲೂ ಮಜ್ಜಿಗೆಯನ್ನು ಮೂರು ರೀತಿ ವಿಭಜಿಸಲಾಗಿದೆ.

ಪಿತ್ತ ಕಡಿಮೆ ಮಾಡುವ ಮಜ್ಜಿಗೆ

ನಾವು ನಿತ್ಯ ಬಳಸುವ ಮಜ್ಜಿಗೆ ಹುಳಿ ಅಥವಾ ಸಿಹಿಯಾಗಿರುತ್ತದೆ. ಸಿಹಿ ಮಜ್ಜಿಗೆಯು ಪಿತ್ತವನ್ನು ಕಡಿಮೆ ಮಾಡುವುದರೊಂದಿಗೆ ಕಫವನ್ನು ಹೆಚ್ಚಿಸಿದರೆ, ಹುಳಿ ಮಜ್ಜಿಗೆಯು ವಾತವನ್ನು ನಾಶ ಮಾಡುವುದರೊಂದಿಗೆ ರಕ್ತ ಪಿತ್ತವನ್ನು ವರ್ಧಿಸುತ್ತದೆ. ಇನ್ನು ಒಗರು ಮಜ್ಜಿಗೆಯು ಕಫಶಾಮಕವಾಗಿದೆ. ಹೀಗೆ ಮಜ್ಜಿಗೆಯು ತ್ರಿದೋಷ ನಿವಾರಕ ಎಂದೆನಿಸಿಕೊಂಡಿದೆ.

ತೆಳು, ದಪ್ಪ ಹಾಗೂ ತೀರಾ ದಪ್ಪ ಎಂಬ ಸಾಂದ್ರತೆಯ ಆಧಾರದ ಮೇಲೂ ಮಜ್ಜಿಗೆಯನ್ನು ಮೂರು ರೀತಿ ವಿಭಜಿಸಲಾಗಿದೆ. ಇದರಲ್ಲಿ ತೆಳ್ಳನೆ ಮಜ್ಜಿಗೆ ಬಹುಬೇಗ ಜೀರ್ಣವಾಗುವ ಗುಣವನ್ನು ಹೊಂದಿದ್ದರೆ, ದಪ್ಪ ಹಾಗೂ ತೀರ ದಪ್ಪ ಸಾಂದ್ರತೆಯ ಮಜ್ಜಿಗೆಯೂ ಬೇಗ ಜೀರ್ಣವಾಗದ ಗುಣವನ್ನು ಹೊಂದಿದೆ. ಮುಖ್ಯವಾಗಿ ಪಚನಶಕ್ತಿಗೆ ಅನುಕೂಲವಾಗುವಂತೆ ಈ ವಿಂಗಡನೆಯನ್ನು ಮಾಡಲಾಗಿದೆ. ಪೂರ್ತಿ ಜಿಡ್ಡು ತೆಗೆದ, ಅರ್ಧ ಜಿಡ್ಡು ತೆಗೆದ ಹಾಗೂ ಜಿಡ್ಡಿನಾಂಶ ತೆಗೆಯದ ಮಜ್ಜಿಗೆ ಎಂಬುದಾಗಿ ಜಿಡ್ಡಿನ ಅಂಶದ ಆಧಾರದ ಮೇಲೂ ಮಜ್ಜಿಗೆಯನ್ನು ಮೂರು ರೀತಿ ವಿಭಜಿಸಲಾಗಿದೆ. ಇದರಲ್ಲಿ ಪೂರ್ತಿ ಜಿಡ್ಡು ತೆಗೆದ ಮಜ್ಜಿಗೆಯು ಹಗುರವಾಗಿದ್ದು ಬಹುಬೇಗ ಪಚನವಾಗು ವಂತಹುದಾದರೆ, ಅರ್ಧ ಜಿಡ್ಡು ತೆಗೆದ ಮಜ್ಜಿಗೆಯು ಪಚನಕ್ಕೆ ಭಾರವಾದುದಾಗಿದೆ. ಇನ್ನು ಜಿಡ್ಡಿನಾಂಶ ತೆಗೆಯದ ಮಜ್ಜಿಗೆಯು ಅತ್ಯಂತ ವೀರ್ಯ ವರ್ಧಕವಾಗಿರುವುದು ಸಾಬೀತಾಗಿದೆ.

ಮಜ್ಜಿಗೆಯಲ್ಲಿಯೂ ಹಲವು ಬಗೆಯುಂಟು!

ಇನ್ನು ನೀರಿನ ಅಂಶ ಅವಲಂಬಿಸಿ ಮೊಸರಿಗೆ ನೀರು ಸೇರಿಸುವ ಆಧಾರದ ಮೇಲೂ ಮಜ್ಜಿಗೆಯ ಹಲವು ಬಗೆಗಳನ್ನು ಶಾಸ್ತ್ರಗಳಲ್ಲಿ ವಿವರಿಸಲಾಗಿದೆ. ಅವುಗಳೆಂದರೆ;
ಘೋಲ: ನೀರು ಸೇರಿಸದೆ ಹಾಗೆಯೇ ಮೊಸರನ್ನು ಕಡೆದು ಉಪಯೋಗಿಸುವಂತಹ ಮಜ್ಜಿಗೆ ಇದು. ಇದು ವಾತಾ, ಪಿತ್ತ ಶಮನ ಮಾಡುವಂತಹದ್ದು.
ಮಥಿತ: ಸಾರ ಭಾಗ ತೆಗೆದು, ನೀರು ಸೇರಿಸಿ ಕಡೆದಿರುವ ಮಜ್ಜಿಗೆ ಇದು. ಇದು ಕಫ ಮತ್ತು ಪಿತ್ತಗಳನ್ನು ಶಮನ ಮಾಡುತ್ತದೆ.
ಶ್ವೇತಮಂಥ: ಸಮಭಾಗ ನೀರು ಸೇರಿಸಿ ಕಡೆದ ಮಜ್ಜಿಗೆ ಇದು. ಇದು ಸಿಹಿಯಾಗಿದ್ದು, ಪಚನಕ್ಕೆ ಹಗುರವಾಗಿದ್ದು, ರಕ್ತಪಿತ್ತವನ್ನು ಕಡಿಮೆ ಮಾಡುತ್ತದೆ.
ಉದಶ್ವಿತ್: ಅರ್ಧ ಭಾಗ ನೀರು ಸೇರಿಸಿ ಪಡೆಯುವ ಮಜ್ಜಿಗೆ ಇದು. ಇಂತಹ ಮಜ್ಜಿಗೆ ಬಲವರ್ಧಕವಾದುದು ಎನ್ನಲಾಗಿದೆ.
ತಕ್ರ: ಮೊಸರಿನ ಕಾಲು ಭಾಗ ಅಥವಾ ಅರ್ಧ ಭಾಗ ನೀರು ಸೇರಿಸಿ ಕಡೆದಿರುವ ಮಜ್ಜಿಗೆ ಇದು. ಇದು ತ್ರಿದೋಷ ನಿವಾರಕವಾದುದಾಗಿದೆ.
ಕಾಲಶೇಯ: ಮೊಸರಿನ ಎರಡು ಭಾಗ ನೀರು ಸೇರಿಸಿ ಕಡೆದಿರುವ ಮಜ್ಜಿಗೆ ಇದು. ಇದು ಜೀರ್ಣಕ್ಕೆ ಅತ್ಯಂತ ಹಗುರವಾದುದಾಗಿದೆ.
ದಂಡಾಹತ: ಮೊಸರಿನ ಒಂದೂವರೆ ಭಾಗ ನೀರು ಸೇರಿಸಿ ಕಡೆದಿರುವಂತಹ ಮಜ್ಜಿಗೆ ಇದು.
ಕರಮಂಥ: ಕೈಯಿಂದ ಕಡೆದಿರುವ ಮಜ್ಜಿಗೆ ಇದು. ಇದು ಅತಿಸಾರದಂತಹ ಕಾಯಿಲೆಗೆ ಅತಿ ಉಪಯುಕ್ತ ವಾದುದಾಗಿದೆ.
ಚಚ್ಚಿಕ: ಮೊಸರಿಗೆ ನೀರು ಹಾಕದೇ ಕಡೆದು, ಕೆನೆ ತೆಗೆದು ನಂತರ ನೀರು ಹಾಕಿ ಕಡೆದ ಮಜ್ಜಿಗೆ ಇದು.
ಗಾಲಿತ: ವಸ್ತ್ರದಿಂದ ಸೋಸಿದ ಮಜ್ಜಿಗೆ ಇದು.
ಷೌಡವ: ನಾನಾ ಹಣ್ಣುಗಳನ್ನು ಸೇರಿಸಿ ಕಡೆದಿರುವಂತಹ ಮಜ್ಜಿಗೆ ಇದು.
ಹೀಗೆ ಗೋವಿನ ಉತ್ಪನ್ನಗಳಲ್ಲಿ ಹಾಲು, ಮೊಸರು, ತುಪ್ಪದಂತೆ ಮಜ್ಜಿಗೆಯನ್ನು ಕೂಡ ವೇದ ಶಾಸ್ತ್ರಗಳಲ್ಲಿ ಮಾನವನ ದೇಹಕ್ಕೆ ಅತಿ ಅವಶ್ಯಕವಾಗಿ ಬೇಕಾದ ಒಂದು ಪೇಯ ಎಂದು ಹೇಳಲಾಗಿದೆ.

ಮಜ್ಜಿಗೆ ತಯಾರಿಸಲು ಎರಡು ವಿಧಾನ

ಇಂತಹ ಬಹುಪಯೋಗಿ ಮಜ್ಜಿಗೆಯನ್ನು ಸಾಮಾನ್ಯವಾಗಿ ಎರಡು ವಿಧಾನಗಳಲ್ಲಿ ತಯಾರಿಸಲಾಗುತ್ತದೆ. ಮೊದಲನೆಯದು ಮೊಸರನ್ನು ಕಡೆದು, ಅದರಿಂದ ಬೆಣ್ಣೆ ತೆಗೆದಾದ ಬಳಿಕ ಉಳಿದದ್ದು ಮಜ್ಜಿಗೆಯಾದರೆ, ಎರಡನೆಯದು ಮೊಸರಿಗೆ ನೇರವಾಗಿ ಹೆಚ್ಚು ನೀರನ್ನು ಸೇರಿಸಿ ಬೆಣ್ಣೆ ಸಹಿತ ಮಜ್ಜಿಗೆಯನ್ನು ಸಿದ್ಧಪಡಿಸುವುದಾಗಿದೆ.

ಮೊಸರಿಗೆ ನೀರನ್ನು ಬೆರೆಸಿ ಚೆನ್ನಾಗಿ ಕಡೆದಾಗ ಶಾಖ ಉತ್ಪತ್ತಿಯಾಗಿ ಹಲವು ಗುಣಗಳ ಪರಿವರ್ತನೆಯೊಂದಿಗೆ ಬೆಣ್ಣೆಯು ಬೇರ್ಪಡುತ್ತದೆ. ಹೀಗೆ ಬೆಣ್ಣೆಯಿಂದ ಬೇರ್ಪಟ್ಟ ಉಳಿದ ಭಾಗವನ್ನು ಮಜ್ಜಿಗೆಯಾಗಿ ಉಪಯೋಗಿಸಬೇಕು ಎಂದು ಹೇಳಲಾಗಿದೆ. ಇಂತಹ ಮಜ್ಜಿಗೆಯನ್ನು ಮಟ್ಟಾ ಎಂದು ಕರೆಯಲಾಗಿದೆ. ಸಂಸ್ಕೃತ ಭಾಷೆಯಲ್ಲಿ ಇದನ್ನು ಶಕ್ರಂ ಅಥವಾ ತಕ್ರ ಎಂದು ಹೇಳಲಾಗಿದೆ. ಉತ್ತರ ಹಿಂದೂಸ್ತಾನದಲ್ಲಿ ಇದನ್ನು ಲಸ್ಸಿ ಎಂದು ಸಹ ಕರೆಯುವುದುಂಟು.

ಮಜ್ಜಿಗೆಯನ್ನು ಕೇವಲ ಪಾನಕ ಅಥವಾ ಒಂದು ಪೇಯ ಎಂದು ಹೇಳುವುದು ಕಷ್ಟ. ಭಾರತೀಯರ ಭೋಜನವು ಮಜ್ಜಿಗೆಯ ಸೇವನೆಯೊಂದಿಗೆ ಕೊನೆಗೊಳ್ಳದಿದ್ದರೆ, ಅದು ಅಪೂರ್ಣ ಎಂದು ಹೇಳಲಾಗುತ್ತದೆ. ಇದು ಕೇವಲ ಮಾತಿಗಲ್ಲದೆ, ಮಜ್ಜಿಗೆಯ ಸೇವನೆ ಆರೋಗ್ಯಕ್ಕೆ ಬಹು ಮುಖ್ಯವಾದುದಾಗಿದೆ. ಹೀಗಾಗಿ ನಮ್ಮ ಪೂರ್ವಜರು ಮಜ್ಜಿಗೆಯನ್ನು ಕೇವಲ ಒಂದು ಆಹಾರ ಪದಾರ್ಥವೆಂದು ಪರಿಗಣಿಸಿರಲಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಮಜ್ಜಿಗೆಯಲ್ಲಿರುವ ಸಾಕಷ್ಟು ಔಷಧೀಯ ಗುಣಗಳನ್ನು ವೈಜ್ಞಾನಿಕ ಜಗತ್ತು ಕಂಡುಕೊಂಡಿದೆ. ಹೀಗಾಗಿ ಮಜ್ಜಿಗೆಯು ಮಾನವನಿಗೆ ಅಮೃತ ಸಮಾನವಾದುದು ಎಂದೇ ಹೇಳಲಾಗುತ್ತದೆ.

ಔಷಧಿಯಾಗಿ ಮಜ್ಜಿಗೆ ಬಳಕೆ

ಇಂತಹ ಮಜ್ಜಿಗೆಯ ಸೇವನೆಯಿಂದ ತೆರೆದ ಗಾಯ, ಬಾಯಿ ಹುಣ್ಣು, ರಕ್ತಸ್ರಾವದಂತಹ ರೋಗಗಳು ಬಹುಬೇಗ ಗುಣವಾಗುವುದು ಸಾಬೀತಾಗಿದೆ. ಹೀಗಾಗಿಯೇ ಆಯುರ್ವೇದ ಚಿಕಿತ್ಸಾ ಪದ್ಧತಿಯಲ್ಲಿ ಸೋರಿಯಾಸಿಸ್‌ನಂತಹ ಚರ್ಮ ರೋಗದಿಂದ ಬಳಲುತ್ತಿರುವವರಿಗೆ ನೀಡುವ ತಕ್ರಧಾರ ಎಂಬ ಪಂಚಕರ್ಮ ಚಿಕಿತ್ಸೆಗೆ ಮಜ್ಜಿಗೆಯನ್ನು ಇಂದಿಗೂ ಬಳಸಲಾಗುತ್ತದೆ. ಮುಖ್ಯವಾಗಿ ಇದರಲ್ಲಿ ಕ್ಯಾಲ್ಸಿಯಂ ಹಾಗೂ ಫಾಸ್ಪರಸ್ ಅಂಶ ಹೆಚ್ಚಾಗಿದ್ದು ಮೂಳೆಗಳಿಗೆ ಅಗತ್ಯವಾದ ಶಕ್ತಿಯನ್ನು ಸಹ ನೀಡುತ್ತದೆ.

ಸ್ವಾಸ್ಥ್ಯ ಜೀವನಕ್ಕಾಗಿ ರಾತ್ರಿ ಮಲಗುವ ಮುನ್ನು ಒಂದು ಲೋಟ ಹಾಲನ್ನು ಕುಡಿಯಬೇಕು, ಬೆಳಗ್ಗೆ ಎದ್ದು ಶೌಚಕ್ಕೆ ಹೋಗಿ ಬಂದ ನಂತರ ನೀರನ್ನು ಕುಡಿಯಬೇಕು, ಹಾಗೆಯೇ ಊಟದ ಮಧ್ಯೆ ನೀರನ್ನು ಕುಡಿಯದೆ ಊಟದ ಕೊನೆಯಲ್ಲಿ ಮಜ್ಜಿಗೆಯನ್ನು ಕುಡಿಯಬೇಕು ಎಂಬುದಾಗಿ ನಮ್ಮ ಆರೋಗ್ಯ ಗ್ರಂಥಗಳಲ್ಲಿ ಹಲವೆಡೆ ಸೂಚಿಸಲಾಗಿದೆ. ಹೀಗಾಗಿ ಇದು ನಮಗೆ ನಮ್ಮ ಪೂರ್ವಜರು ಹೇಳಿಕೊಟ್ಟಿರುವ ಆರೋಗ್ಯ ಸೂತ್ರ ಎಂದೇ ಹೇಳಬಹುದು.

ಕೆಲವು ಸಂದರ್ಭಗಳಲ್ಲಿ ಮಜ್ಜಿಗೆಯ ಸೇವನೆ ಯೋಗ್ಯವಲ್ಲವೆಂದು ಹೇಳಲಾಗಿದೆ. ಉಷ್ಣ ಕಾಲದಲ್ಲಿ ದುರ್ಬಲ ರೋಗಿಗಳು ಸೇರಿದಂತೆ ಮೂರ್ಚೆ ಮತ್ತು ತಲೆ ತಿರುಗುವಿಕೆಯ ಸಂದರ್ಭದಲ್ಲಿ ಹಾಗೂ ರಕ್ತ ಮತ್ತು ಪಿತ್ತ ವಿಕಾರಗಳಲ್ಲಿ ಮಜ್ಜಿಗೆಯನ್ನು ಉಪಯೋಗಿಸಬಾರದು ಎಂದು ಹೇಳಲಾಗಿದೆ. ಹಾಗೆಯೇ ಸಂಧಿವಾತದವರು ಮತ್ತು ಅಸ್ತಮಾ ಇರುವವರು ಮಜ್ಜಿಗೆಯನ್ನು ಸೇವಿಸಬಾರದೆಂದು ಹೇಳಲಾಗಿದೆ. ಮುಖ್ಯವಾಗಿ ವಾಣಿಜ್ಯ ದೃಷ್ಟಿಕೋನದಿಂದ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಮಾರಾಟವಾಗುತ್ತಿರುವ ಮತ್ತು ಶೇಖರಿಸಿದ ಮಸಾಲೆ ಮಜ್ಜಿಗೆ ಎಂದಿಗೂ ಆರೋಗ್ಯಕರವಲ್ಲ ಎಂಬುದನ್ನು ಅರಿಯಬೇಕಾಗಿದೆ.

ಇದನ್ನೂ ಓದಿ : ಗೋ ಸಂಪತ್ತು: ಬೆಣ್ಣೆಯೆಂಬ ನವನೀತದ ಅನಿಯಮಿತ ಉಪಯೋಗ!

Exit mobile version