ವಿಪಾಕ ಮಧುರಂ ಶೀತಂ ವಾತಪಿತ್ತ ವಿಶೇಹಮ್ |
ಚಕ್ಷುಷ್ಯಮ ಗ್ರಹ್ಯಣಂ ಬಲ್ಯಂಚ ಗವ್ಯಂ ಸರ್ಪ ಗುಣ್ತೋತ್ತರಮ್ ||
ಸುಶ್ರುತ ಮಹರ್ಷಿಗಳು ತಮ್ಮ ಚಿಕಿತ್ಸಾ ಶಾಸ್ತ್ರದಲ್ಲಿ ತುಪ್ಪವನ್ನು ಮೇಲಿನಂತೆ ವರ್ಣಿಸಿದ್ದಾರೆ. ಇದರರ್ಥ ಗೋವಿನ ತುಪ್ಪದ ಗುಣವು ಸರ್ವಶ್ರೇಷ್ಠವಾದುದಾಗಿದ್ದು, ಅದು ಮಧುರವು ಶೀತ, ವಾತ, ಪಿತ್ತ ಹಾಗೂ ವಿಷವನ್ನು ನಾಶ ಮಾಡುತ್ತದೆ. ಹಾಗೆಯೇ ಕಣ್ಣಿಗೆ ಕಾಂತಿ ಹಾಗೂ ಶರೀರದ ಶಕ್ತಿಯನ್ನು ಹೆಚ್ಚಿಸುತ್ತದೆ ಎನ್ನುವುದಾಗಿದೆ.
ಇವರಂತೆ ಚರಕ ಮಹರ್ಷಿಗಳು ಸಹ ತಮ್ಮ ʻಚರಕ ಸೂತ್ರʼದಲ್ಲಿ ತುಪ್ಪದ ಕುರಿತಂತೆ ಹೀಗೆ ಹೇಳಿದ್ದಾರೆ;
ಘೃತಂ ಪಿತ್ತಾನಿಲಹರಂ ರಸಶುಕ್ರೌಜಸಾಂ ಹಿತಮ್ |
ನಿರ್ವಾಪಣಂ ಮೃದುಕರಂ ಸ್ವರವರ್ಣ ಪ್ರಸಾದನಮ್ ||
ಇದರರ್ಥ ತುಪ್ಪವು ಪಿತ್ತವಾಯುಗಳ ಪ್ರಕೋಪವನ್ನು ಶಮನಗೊಳಿಸುತ್ತದೆ. ಇದು ರಸ, ವೀರ್ಯ, ಓಜಸ್ಸುಗಳಿಗೆ ಹಿತಕಾರಿಯಾಗಿದ್ದು, ವ್ರಣನಿರ್ವಾಪಕವೂ ಮತ್ತು ಅಂಗಮಾರ್ದವನ್ನುಂಟು ಮಾಡುವುದರೊಂದಿಗೆ ಸ್ವರ ವರ್ಣಗಳನ್ನು ಉತ್ತಮಗೊಳಿಸುತ್ತದೆ ಎನ್ನುವುದಾಗಿದೆ.
ಗೋವಿನ ಹಾಲು, ಮೊಸರು ಮತ್ತು ತುಪ್ಪ ಉತ್ತಮ ಗುಣದಿಂದ ಕೂಡಿದ್ದು, ಈ ಮೂರು ಪ್ರಾಚೀನ ಕಾಲದಿಂದಲೂ ಭಾರತೀಯ ಭೋಜನದ ಅವಿಭಾಜ್ಯ ಅಂಗವಾಗಿತ್ತು. ಹೀಗಾಗಿ ʻವಿನಾಗೋರಸಂ ಕೋರಸೋಭೋಜನಾನಮ್’ ಎಂದು ಹೇಳಲಾಗಿರುವುದು. ಇದರರ್ಥ ಗೋ ರಸಗಳಿಲ್ಲದ ಭೋಜನದಲ್ಲಿ ಯಾವುದೇ ರುಚಿ ಇಲ್ಲ ಎನ್ನುವುದಾಗಿದೆ.
ದೇಶಿ ಗೋವಿನ ತುಪ್ಪದಿಂದ ಮನುಷ್ಯನ ಆಯಸ್ಸು ಮತ್ತು ಶಕ್ತಿ ಹೆಚ್ಚುವುದು ನಮ್ಮ ಪೂರ್ವಜರಿಗೆ ಅರಿವಿತ್ತು. ಹೀಗಾಗಿಯೇ ಅವರು ತುಪ್ಪವನ್ನು ʻಆಯುರ್ವೈಘೃತಂʼ ಎಂಬುದಾಗಿ ಉಲ್ಲೇಖಿಸಿದ್ದರು. ಹೀಗೆ ಪ್ರಾಚೀನ ಯುಗದಿಂದಲೂ ಮನುಷ್ಯರಿಗೆ ತುಪ್ಪವು ಪೌಷ್ಠಿಕ ಆಹಾರದ ಒಂದು ಭಾಗವಾದರೆ, ಚಿಕಿತ್ಸಾ ಕ್ರಮದಲ್ಲಿ ದಿವ್ಯೌಷಧವಾಗಿ ಕಂಡುಬಂದಿರುವುದನ್ನು ಪ್ರಾಚೀನ ವೈದ್ಯಕೀಯ ಗ್ರಂಥಗಳು ಸಾರಿ ಹೇಳಿವೆ. ಗೋವಿನ ತುಪ್ಪವನ್ನು ಪ್ರಾಚೀನ ಮತ್ತು ಮಧ್ಯಮ ಯುಗಗಳಲ್ಲಿ ಮನುಷ್ಯರಿಗಷ್ಟೇ ಅಲ್ಲದೆ ಸಸ್ಯಗಳ ಬೆಳವಣಿಗೆಯನ್ನು ಹೆಚ್ಚಿಸಲು ಹಾಗೂ ಅವುಗಳ ಆರೋಗ್ಯವನ್ನು ಕಾಪಾಡಲು ಸಹ ಬಳಸುತ್ತಿರುವುದನ್ನು ಕ್ರಿ.ಪೂ. 321 ರಲ್ಲಿ ಸೋಮೇಶ್ವರ ದೇವ ಹಾಗೂ ಕ್ರಿ.ಶ.1126ರಲ್ಲಿ ಕೌಟಿಲ್ಯನು ತಿಳಿಸಿದ್ದಾನೆ.
ನಮ್ಮ ಧಾರ್ಮಿಕ ಆಚರಣೆಯಲ್ಲಿ ಗೋವಿನ ಘೃತವಿಲ್ಲದೆ ಯಾವುದೇ ಯಜ್ಞವು ಪರಿಪೂರ್ಣವಾಗುವುದಿಲ್ಲ ಮತ್ತು ಹವಿಷ್ಯಾನ್ನವೂ ಘೃತವನ್ನು ಸಿಂಪಡಿಸದೆ ಶುದ್ಧವಾದುದಾಗಿ ತಿಳಿಯಲ್ಪಡುವುದಿಲ್ಲ. ಹೀಗಾಗಿ ಸಿದ್ಧವಾದ ಅನ್ನವು ದಾನ ಮತ್ತು ಭೋಜನಕ್ಕೆ ಅರ್ಹವಾಗಬೇಕಾದರೆ ಅದಕ್ಕೆ ಗೋವಿನ ಘೃತವನ್ನು ಸಿಂಪಡಿಸಬೇಕೆಂದು ಶಾಸ್ತ್ರದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಇದರೊಂದಿಗೆ ಕೆಲವೊಮ್ಮೆ ಪ್ರಾಯಶ್ಚಿತ್ತ ಹಾಗೂ ಶುದ್ಧಿಗಾಗಿ ಪ್ರಾಣಾಯಾಮ ಮತ್ತು ಘೃತ ಪ್ರಾಶನವನ್ನು ಸೂಚಿಸಲಾಗಿದೆ. ನವಜಾತ ಶಿಶುವಿಗೆ ಜಾತಕ ಕರ್ಮ ಸಂಸ್ಕಾರವನ್ನು ನಡೆಸಲು ಗೋವಿನ ತುಪ್ಪವೇ ಬೇಕೆಂಬುದಾಗಿಯೂ ಹೇಳಲಾಗಿದೆ.
ಪರಿಶುದ್ಧ ದೇಶಿ ಗೋವಿನ ಹಾಲು, ಆ ಹಾಲಿನಿಂದ ಮೊಸರು, ಮೊಸರಿನಿಂದ ಬೆಣ್ಣೆ, ಅಂತಹ ಬೆಣ್ಣೆಯನ್ನು ಕಡೆದು ಅದರಿಂದ ತುಪ್ಪವನ್ನು ಪಡೆಯುವುದು ಸಾಂಪ್ರದಾಯಿಕ ವಿಧಾನ. ಈ ಸಂಸ್ಕಾರಕ್ಕೆ ನಾಲ್ಕೈದು ದಿನಗಳ ಸಮಯ ಬೇಕು. ಈ ಸಂಸ್ಕಾರವೇ ತುಪ್ಪವನ್ನು ಅತಿ ಶ್ರೇಷ್ಠ ಔಷಧಿಯನ್ನಾಗಿಸುತ್ತದೆ. ಹಾಲು ಮೊಸರಾಗುವುದು ಎಂದರೆ ಸಾವಿರಾರು ಸೂಕ್ಷ್ಮಾಣುಗಳು, ಪ್ರೋಟೀನ್, ಕೊಬ್ಬು ಇತ್ಯಾದಿ ಎಲ್ಲಾ ಕೋಶಗಳನ್ನು ಸಂಸ್ಕರಿಸುವುದೇ ಆಗಿದೆ.
ನಂತರ ಬೆಣ್ಣೆ ತೆಗೆಯುವ ಒಂದೆರಡು ದಿನದಲ್ಲಿ ಇನ್ನಷ್ಟು ಸಂಸ್ಕಾರಗಳು ಅದರಲ್ಲಿ ಅಡಕವಾಗುತ್ತವೆ. ಇದರೊಂದಿಗೆ ವಾರದ ಬೆಣ್ಣೆಯ ಸಂಗ್ರಹದ ಸಮಯದಲ್ಲಿ ಮತ್ತದೇ ಸೂಕ್ಷ್ಮಾಣು ಜೀವಿಗಳಿಂದ ಮತ್ತಷ್ಟು ಸಂಸ್ಕಾರವಾಗುತ್ತದೆ. ಕೊನೆಗೆ ಬೆಣ್ಣೆಯನ್ನು ಕುದಿಸಿದಾಗ ಬರುವುದೇ ಸುವಾಸನಯುಕ್ತವಾದ ತುಪ್ಪ. ಹೀಗೆ ಹಾಲಿನಿಂದ ತುಪ್ಪವಾಗುವ ಈ ವಿವಿಧ ಹಂತಗಳಲ್ಲಿ ಸಂಸ್ಕಾರ ಕೊಡುವ ಎಲ್ಲಾ ಸೂಕ್ಷ್ಮಾಣು ಜೀವಿಗಳಿಗೆ ನಾವು ಎಷ್ಟು ಧನ್ಯವಾದ ಹೇಳಿದರೂ ಸಾಲದು. ಆದರೆ ಇಂದು ಯಾವುದೇ ಸಂಸ್ಕಾರದ ಪಾಲನೆ ಮಾಡದೆ ಹಾಲನ್ನು ಕಾಯಿಸಿ, ಅದರ ಮೇಲೆ ನಿಂತ ಕೆನೆಯನ್ನು ತೆಗೆದು, ಅದರಿಂದ ತುಪ್ಪವನ್ನು ಮಾಡಲಾಗುತ್ತಿದೆ.
ಹೀಗೆ ಮಾಡಿದ ತುಪ್ಪ ತುಪ್ಪವಾಗದೇ ಕೇವಲ ಕೊಬ್ಬು ಮಾತ್ರ ಆಗಿರುತ್ತದೆ. ಅದರಲ್ಲಿ ದೇಹಕ್ಕೆ ಅವಶ್ಯಕವಾದ ಯಾವುದೇ ಓಮೆಗಾ ಫ್ಯಾಟಿ ಆಸಿಡ್‌ಗಳಾಗಲಿ, ಇಲ್ಲವೇ ಇನ್ನಿತರೆ ಪೂರಕ ಅಂಶಗಳಾಗಲಿ ಇರುವುದಿಲ್ಲ. ಹೀಗಾಗಿ ತುಪ್ಪ ಮಾಡುವ ವಿಧಾನವೇ ಅತಿ ಪ್ರಮುಖವಾದುದು ಮತ್ತು ಯಾವ ಪ್ರಾಣಿಯ ಹಾಲು ಎಂಬುದು ಸಹ ಅಷ್ಟೇ ಪ್ರಮುಖವಾದುದು.
ಹಿಂದೊಮ್ಮೆ ಸಣ್ಣವರಿಂದ ಹಿಡಿದು ವಯೋವೃದ್ಧರಾದಿಯಾಗಿ ಪ್ರತಿಯೊಬ್ಬರು ತುಪ್ಪವನ್ನು ನಿತ್ಯ ಸೇವಿಸಿ ನೂರು ವರ್ಷಕ್ಕಿಂತ ಅಧಿಕ ಕಾಲ ಬದುಕುತ್ತಿದ್ದರು. ಆದರೆ ಇಂದು ತುಪ್ಪವನ್ನು ಸೇವಿಸಬೇಡಿ ಎಂಬುದಾಗಿ ಹೇಳಲಾಗುತ್ತಿದೆ. ಇದಕ್ಕೆಲ್ಲಾ ಪ್ರಮುಖ ಕಾರಣ ಇಂದು ಪ್ರಾಣಿಗಳ ಕೊಬ್ಬು ತುಪ್ಪದೊಂದಿಗೆ ಸ್ಪರ್ಧೆಗೆ ಇಳಿದಿರುವುದೇ ಆಗಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ನಕಲಿ ತುಪ್ಪದ ಹಾವಳಿ ಹೆಚ್ಚಾಗಿದ್ದು, ಡಾಲ್ಡ ಮತ್ತು ಪ್ರಾಣಿಗಳ ಕೊಬ್ಬು ಬೆರೆಸಿದ ತುಪ್ಪ ಹಾಗೂ ತುಪ್ಪದಂತೆ ಕಾಣುವ ಅನೇಕ ಪದಾರ್ಥಗಳು ಸಾಕಷ್ಟು ಪ್ರಮಾಣದಲ್ಲಿ ಸಿಗುತ್ತಿವೆ. ಕಲಬೆರಕೆ ತುಪ್ಪ ನಿಜಕ್ಕೂ ಆರೋಗ್ಯಕ್ಕೆ ಹಾನಿಕಾರಕವಾಗಿರುವುದರಿಂದ ತುಪ್ಪ ಸಸ್ಯಾಹಾರಿಯದ್ದೆ ಎಂದು ಪರೀಕ್ಷಿಸಿ ತೆಗೆದುಕೊಳ್ಳುವುದು ಒಳ್ಳೆಯದು.
ಇತ್ತೀಚಿನ ದಿನಗಳಲ್ಲಿ ಜನರಿಗೆ ದೇಶಿ ಗೋವಿನ ಮಹತ್ವದ ಅರಿವಾಗುವುದರೊಂದಿಗೆ ಆರೋಗ್ಯದ ಮೇಲೂ ಕಾಳಜಿ ಹೆಚ್ಚಾಗುತ್ತಿದೆ. ಇದನ್ನೇ ಬಂಡವಾಳವನ್ನಾಗಿಸಿಕೊಂಡಿರುವ ಕೆಲವರು ವಿದೇಶಿ ತಳಿಗಳ ಹಾಲು ಮತ್ತು ತುಪ್ಪವನ್ನು ದೇಶಿ ತಳಿಗಳ ಹಾಲು ಮತ್ತು ತುಪ್ಪವೆಂದು ನಂಬಿಸಿ ಮಾರಾಟ ಮಾಡುತ್ತಿದ್ದಾರೆ. ದೇಶಿ ಗೋವುಗಳ ಹಾಲು ಮತ್ತು ತುಪ್ಪದ ವಿಶಿಷ್ಠತೆ ಮತ್ತು ಗುಣಮಟ್ಟವನ್ನು ವಿದೇಶಿ ತಳಿಗಳ ಹಾಲು ಮತ್ತು ತುಪ್ಪಕ್ಕೆ ಯಾವುದೇ ಕಾರಣಕ್ಕೂ ಹೋಲಿಸಲಾ ಗುವುದಿಲ್ಲ.
ಇನ್ನು ಕೆಲವರಂತೂ ಸತ್ತ ಗೋವುಗಳ ಕೊಬ್ಬನ್ನು ಕರಗಿಸಿ ತುಪ್ಪ ಮಾಡಿ ಅದನ್ನೇ ಅಸಲಿಯೆಂಬಂತೆ ಮಾರಾಟ ಮಾಡುತ್ತಿದ್ದಾರೆ. ಇದಕ್ಕೆಲ್ಲಾ ಪ್ರಮುಖ ಕಾರಣ ಒಂದೆಡೆ ಇಂದು ದೇಶಿ ತಳಿಗಳ ಸಂತತಿ ಕಡಿಮೆಯಾಗುತ್ತಿರುವುದಾದರೆ, ಮತ್ತೊಂದೆಡೆ ತುಪ್ಪಕ್ಕೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಿರುವುದೇ ಆಗಿದೆ. ಹೀಗಾಗಿ ಇಂದು ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಸಿಗುತ್ತಿರುವ ಮಾಮೂಲಿ ತುಪ್ಪದ ಹತ್ತರಷ್ಟು ಹೆಚ್ಚಿನ ಬೆಲೆಗೆ ದೇಶಿ ಗೋವಿನ ತುಪ್ಪ ಮಾರಾಟವಾಗುತ್ತಿದೆ. ಅದನ್ನು ಸಹ ಕಾಯ್ದಿರಿಸಿ ಕೊಂಡುಕೊಳ್ಳಬೇಕಾಗಿದೆ.
ಹಾಗೆಯೇ ಕರ್ನಾಟಕದ ಪ್ರಸಿದ್ಧ ತಳಿಯಾದ ಮಲೆನಾಡು ಗಿಡ್ಡ ತಳಿಯ ತುಪ್ಪಕ್ಕಂತೂ ಎಲ್ಲಿಲ್ಲದ ಬೇಡಿಕೆಯಿದೆ. ಇದು ಕಾಡುಮೇಡಿನಲ್ಲಿ ಸ್ವಾಭಾವಿಕವಾಗಿ ಸೊಪ್ಪು ಸದೆಗಳನ್ನು ತಿನ್ನುವ ಸಮಯದಲ್ಲಿ ಕೆಲ ಔಷಧಿಯುಕ್ತ ಸಸ್ಯಗಳನ್ನು ಸಹಜವಾಗಿಯೇ ಸೇವಿಸಿರುತ್ತದೆ. ಇದರ ಪರಿಣಾಮ ಆ ಸಸ್ಯಗಳಲ್ಲಿನ ಔಷಧೀಯ ಗುಣಗಳು ಅದರ ಹಾಲು ಮತ್ತು ತುಪ್ಪದಲ್ಲೂ ಬಂದಿರುತ್ತವೆ. ಆದ್ದರಿಂದ ಇದರ ಹಾಲು ಮತ್ತು ತುಪ್ಪಕ್ಕೆ ಪೂರೈಸಲಾರದಷ್ಟು ಬೇಡಿಕೆ ಸೃಷ್ಟಿಯಾಗಿದೆ. ಕಿಲೋಗೆ ಸುಮಾರು ಐದು ಸಾವಿರ ರೂಪಾಯಿ ಕೊಡುತ್ತೇನೆಂದರೂ ಇವುಗಳ ತುಪ್ಪ ಖರೀದಿಗೆ ಸಿಗುತ್ತಿಲ್ಲ.
ತುಪ್ಪ ಎಂದರೆ ಸಾಮಾನ್ಯವಾಗಿ ಎಲ್ಲರ ಮನಸ್ಸಿಗೆ ಬರುವುದು ಅದೊಂದು ಜಿಡ್ಡಿನ ಪದಾರ್ಥ, ಅತಿಯಾದ ಕೊಬ್ಬನ್ನು ಹೊಂದಿರುತ್ತದೆ, ಅದನ್ನು ಮಿತವಾಗಿ ಸೇವಿಸಬೇಕು, ಅತಿಯಾಗಿ ತಿಂದರೆ ಆರೋಗ್ಯ ಹಾಳಾಗುತ್ತದೆ, ತೂಕ ಹೆಚ್ಚಾಗುತ್ತದೆ ಎಂಬೆಲ್ಲಾ ವಿಚಾರಗಳು. ಹೀಗಾಗಿ ಇಂದು ತುಪ್ಪ ಕಂಡರೆ ಸಾಕು, ನವ ಪೀಳಿಗೆ ಬೆಚ್ಚಿ ಬೀಳುವಂತಾಗಿದೆ. ಅಷ್ಟೇ ಅಲ್ಲದೆ ಇಂದಿನ ಶೇಕಡಾ 80ರಷ್ಟು ಜನ ಹಾಲು, ತುಪ್ಪ, ಬೆಣ್ಣೆಗಳ ಬಳಕೆಯಿಂದ ದೂರವಿರುವಂತಾಗಿದೆ.
ಅಸಲಿಗೆ ತುಪ್ಪ ಎಂದರೆ ಅದು ಕೇವಲ ಕೊಬ್ಬಿನ ಪದಾರ್ಥವಲ್ಲ. ತುಪ್ಪವನ್ನು ಸೇವಿಸುವವರ ದೇಹದಲ್ಲಿ ಕೊಬ್ಬು ಹೆಚ್ಚಾಗುತ್ತದೆ ಎನ್ನುವ ಮಾತು ನಿಜಕ್ಕೂ ಸುಳ್ಳು. ಇದು ನಿಜಕ್ಕೂ ಆಘಾತಕಾರಿ ಸಂಗತಿಯಾಗಿದ್ದು, ವಾಸ್ತವಾಂಶವೇ ಬೇರೆಯಿದೆ. ತುಪ್ಪವನ್ನು ಸೇವಿಸುವವರಿಗಿಂತ ಸೇವಿಸದವರೇ ಹೆಚ್ಚಾಗಿ ಅನೇಕ ತೊಂದರೆಗಳಿಗೆ ಒಳಗಾಗುತ್ತಿರುವುದು ಕಟು ಸತ್ಯ. ಹೀಗಾಗಿ ಆರೋಗ್ಯ ಕಾಪಾಡುವ ತುಪ್ಪದ ಮೇಲೆ ಖಂಡಿತ ತಪ್ಪು ಕಲ್ಪನೆ ಬೇಡ. ಹೃದಯ ತೊಂದರೆಗಳಿಂದ ಹಿಡಿದು ಹತ್ತಾರು ವರ್ಷ ಕಾಡುವ ಚರ್ಮ ರೋಗ ಸೇರಿದಂತೆ ಬಹುತೇಕ ಕಾಯಿಲೆಗಳಿಗೆ ಪ್ರಮುಖ ಕಾರಣ ಇಂದಿನ ನಮ್ಮ ಜೀವನ ಶೈಲಿ ಮತ್ತು ಆರೋಗ್ಯ ವಿಚಾರಗಳ ಮೇಲಿರುವ ನಮ್ಮ ಅಸಡ್ಡೆಯೇ ಹೊರತು ತುಪ್ಪವಲ್ಲ.
ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ.
ಉತ್ತರ ಭಾರತದಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಇತರೆ ಭಾಗಗಳಿಗೆ ಹೋಲಿಸಿದಲ್ಲಿ ಕಡಿಮೆ ಎಂದೇ ಹೇಳಲಾಗುತ್ತದೆ. ಇದರ ಮೂಲ ಕಾರಣ ಉತ್ತರ ಭಾರತದ ಜನರು ತಮ್ಮ ದೈನಂದಿನ ಬಳಕೆಯಲ್ಲಿ ಎಣ್ಣೆಗೆ ಬದಲಾಗಿ ತುಪ್ಪವನ್ನೇ ಹೆಚ್ಚಾಗಿ ಬಳಸುವುದಾಗಿದೆ. ಹೀಗಾಗಿ ಶುದ್ಧವಾದ ದೇಶಿ ಗೋವಿನ ತುಪ್ಪ ಅಮೃತಕ್ಕೆ ಸಮಾನವಾದುದು. ಆದ್ದರಿಂದ ಶುದ್ಧ ಯಾವುದು ಎನ್ನುವುದರ ಮೇಲೆ ಯುದ್ಧ ನಡೆಯಬೇಕಿದೆಯೇ ಹೊರತು ತುಪ್ಪದ ಮೇಲಲ್ಲ.
ಇದನ್ನೂ ಓದಿ : ಗೋ ಸಂಪತ್ತು: ಮನೆ ಮದ್ದಿನಲ್ಲಿ ಯಾವುದಕ್ಕೆಲ್ಲಾ ಮಜ್ಜಿಗೆ ಬಳಸುತ್ತಾರೆ ಗೊತ್ತೇ?