ಕಲಿಯುಗದ ಈ ಸಂಜೀವಿನಿ ಶೀತ, ನೆಗಡಿಯಂತಹ ಸಣ್ಣ ಕಾಯಿಲೆಗಳಿಂದ ಹಿಡಿದು ಏಡ್ಸ್, ಕ್ಯಾನ್ಸರ್ ಮತ್ತು ಅಬೋಲದಂತಹ ಮಾರಕ ಕಾಯಿಲೆಗಳನ್ನು ಹೊಡೆದೋಡಿಸುವ ಅದ್ಭುತ ಪರಿಣಾಮಕಾರಿ ಔಷಧಿಯಾಗಿ ಪಂಚಗವ್ಯ (panchagavya) ಇಂದು ಕಂಡು ಬಂದಿದೆ. ಒಂದರ್ಥದಲ್ಲಿ ಹೇಳಬೇಕೆಂದರೆ ಪೃಥ್ವಿ, ಜಲ, ವಾಯು, ಅಗ್ನಿ ಮತ್ತು ಆಕಾಶ ಎಂಬ ಐದು ತತ್ವಗಳು ಬ್ರಹ್ಮಾಂಡದೊಳಗಿವೆ.
ಆ ಐದು ತತ್ವಗಳು ನಮ್ಮ ಶರೀರದೊಳಗೂ ಸಹ ಇವೆ. ಹೀಗೆ ಇರುವ ಈ ಐದು ತತ್ವಗಳು ಮನುಷ್ಯನ ಸಂತುಲತೆಯನ್ನು ಕಾಪಾಡುತ್ತ, ದೇಹದಲ್ಲಿನ ವಾತಾ, ಪಿತ್ತ ಮತ್ತು ಕಫ ಎಂಬ ಅಂಶವನ್ನು ಸಮತೋಲನದಲ್ಲಿಟ್ಟು, ನಮ್ಮ ದೇಹಕ್ಕೆ ಯಾವುದೇ ಅನಾರೋಗ್ಯ ಬಾಧಿಸದಂತೆ ನೋಡಿಕೊಳ್ಳುತ್ತವೆ. ಇಂತಹ ಆ ಐದು ತತ್ವಗಳು ಮತ್ತು ಆ ಮೂರು ಅಂಶಗಳು ಕಲಿಯುಗದ ಸಂಜೀವಿನಿ ಎಂದು ಕರೆಯಲ್ಪಡುವ ಪಂಚಗವ್ಯದಲ್ಲಿವೆ.
ಇಂತಹ ಪಂಚಗವ್ಯವನ್ನು ಪರಮಾತ್ಮನ ಪರಮೋನ್ನತ ಔಷಧಿಯೆಂದೂ ಹೇಳಲಾಗುತ್ತದೆ. ಮನುಷ್ಯನಿಗೆ ಸಾಯುವ ಮುನ್ನ ಬರುವ ಎಲ್ಲಾ ರೋಗಗಳಿಗೂ ಇದುವೇ ಸಂಜೀವಿನಿ. ಮೃತ್ಯುವೊಂದನ್ನು ಬಿಟ್ಟು ಬೇರೆಲ್ಲ ರೋಗಗಳಿಗೂ ಈ ಸಂಜೀವಿನಿ ಅತ್ಯಂತ ಪರಿಣಾಮಕಾರಿಯಾದ ಔಷಧಿ. ಇದರ ಸೇವನೆಯಿಂದ ದೇಹ ಮತ್ತು ಆತ್ಮ ಶುದ್ಧಿಯಾಗುತ್ತದೆ. ಹಾಗೆಯೇ ಇದಿಲ್ಲದೆ ಯಾವುದೇ ಹೋಮ, ಹವನ, ಯಾಗಗಳು ಅಪೂರ್ಣವೆನಿಸಿಬಿಡುತ್ತವೆ. ಮನುಷ್ಯ ತನ್ನ ಪಾಪಗಳಿಗೆ ಪ್ರಾಯಶ್ಚಿತ್ತ ಮಾಡಬಯಸಿದಾಗ ಎಲ್ಲಕ್ಕಿಂತ ಮೊದಲು ಇದನ್ನು ಸೇವಿಸಲೇಬೇಕು ಎನ್ನುತ್ತದೆ ಶಾಸ್ತ್ರ ಮತ್ತು ಧರ್ಮ.
ಹಾಗೆಯೇ ಮಾನವನಿಗೆ ಜೀವಿಸಲು 18 ರೀತಿಯ ಸೂಕ್ಷ್ಮ ಪೋಷಕ ತತ್ವಗಳು ಅತ್ಯಂತ ಅವಶ್ಯಕ. ಈ ಎಲ್ಲಾ ಅವಶ್ಯಕ ತತ್ವಗಳು ಈ ಸಂಜೀವಿನಿಯಲ್ಲಿವೆ. ಅಗ್ನಿಯು ಕಟ್ಟಿಗೆಯನ್ನು ಸುಡುವಂತೆ ಇದು ನಮ್ಮ ದೇಹದಲ್ಲಿರುವ ಪಾಪವನ್ನು ಸುಡುತ್ತದೆ. ಹಾಗೆಯೇ ಅತಿ ಘೋರವಾದ ಪಾಪಕರ್ಮದಿಂದ ಮುಕ್ತಿ ಪಡೆಯಲು ಇದರ ಸೇವನೆಯನ್ನು ನಮ್ಮ ಧರ್ಮಶಾಸ್ತ್ರ ವಿಧಿಸಿದೆ. ಈ ರೀತಿ ಇದರ ಪ್ರಾಶನದಿಂದ ಪೂರ್ವಜನ್ಮದ ಜ್ಞಾನವನ್ನು ಪಡೆದವರಿದ್ದಾರೆ.
ದೇಸಿ ಗೋವಿನ ಹಾಲು, ಮೊಸರು, ತುಪ್ಪ, ಗೋಮೂತ್ರ ಹಾಗೂ ಗೋಮಯದ ನಿಯಮಿತ ಪ್ರಮಾಣದ ಮಿಶ್ರಣ ಅಥವಾ ಸಂಗಮವೇ ಪಂಚಗವ್ಯ. ಹಾಲು, ಮೊಸರು, ತುಪ್ಪ, ಗೋಮೂತ್ರ ಮತ್ತು ಗೋಮಯ ಪ್ರತ್ಯೇಕವಾಗಿ ಅನೇಕ ಗುಣಗಳನ್ನು ಹೊಂದಿದ್ದರೂ ಸಂಯೋಗ ಸಂಸ್ಕಾರದಿಂದ ಇನ್ನೂ ಕೆಲವು ವಿಶೇಷ ಗುಣಗಳನ್ನು ಇವು ವ್ಯಕ್ತಗೊಳಿಸುತ್ತವೆ. ಹೀಗೆ ಸಂಯೋಗಗೊಂಡ ಪಂಚಗವ್ಯದಲ್ಲಂತೂ ಇವು ಪೂರ್ಣ ಪ್ರಮಾಣದಲ್ಲಿ ದೊರೆಯುತ್ತವೆ. ಗೋಮೂತ್ರ ಮತ್ತು ಗೋಮಯ ವಾತಾ, ಪಿತ್ತ ಮತ್ತು ಕಫವನ್ನು ಒಟ್ಟಿಗೆ ಕಡಿಮೆ ಮಾಡಿ ಅದರ ಸಂತುಲತೆಯನ್ನು ಕಾಪಾಡಿದರೆ, ಹಾಲು ಕಫ ನಾಶಕವಾಗಿ ವಾತಾ ಮತ್ತು ಪಿತ್ತವನ್ನು ವರ್ಧಿಸುತ್ತದೆ.
ಇಂತಹ ಹಾಲಿನಿಂದ ತೆಗೆದ ಮೊಸರು ಅದಕ್ಕಿಂತ ಹೆಚ್ಚಿನ ಕ್ಷಮತೆಯನ್ನು ಹೊಂದಿರುತ್ತದೆ. ಈ ಮೊಸರಿನಿಂದ ತೆಗೆದ ಬೆಣ್ಣೆಯ ತುಪ್ಪ ಅತ್ಯಧಿಕ ಪೌಷ್ಟಿಕಾಂಶದಿಂದ ಕೂಡಿದ್ದು, ಕಫವನ್ನು ನಾಶಗೊಳಿಸಿ ಪಿತ್ತವನ್ನು ಹೆಚ್ಚಿಸುತ್ತದೆ. ಇವುಗಳು ಒಂದೊಂದಾಗಿಯೇ ಇಷ್ಟೊಂದು ಗುಣ ಸತ್ವವನ್ನು ಹೊಂದಿದ್ದು, ಒಟ್ಟಾದಲ್ಲಿ ಮತ್ತಷ್ಟು ಇವುಗಳ ಗುಣ ಮತ್ತು ಸತ್ವಗಳು ಪರಿಣಾಮಕಾರಿಯಾಗುತ್ತವೆ.
ನಿರ್ದಿಷ್ಟ ಬಣ್ಣದ ಗೋವಿನಿಂದ ಪಡೆದ ಅದರ ಉತ್ಪನ್ನಗಳಿಂದ ತಯಾರಾದ ಪಂಚಗವ್ಯವು ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಕೆಂಪು ಅಥವಾ ತಾಮ್ರದ ಬಣ್ಣದ ಆಕಳಿನಿಂದ ಗೋಮೂತ್ರವನ್ನು, ಬಿಳಿ ಬಣ್ಣದ ಆಕಳಿನಿಂದ ಸಗಣಿಯನ್ನು, ಚಿನ್ನದ ಬಣ್ಣದ ಆಕಳಿನಿಂದ ಹಾಲನ್ನು, ನೀಲಿ ಬಣ್ಣದ ಆಕಳಿನಿಂದ ಮೊಸರನ್ನು ಮತ್ತು ಬಣ್ಣ ಬಣ್ಣದ ಆಕಳಿನಿಂದ ತುಪ್ಪವನ್ನು ಅಥವಾ ಈ ಐದು ಗವ್ಯಗಳನ್ನು ಕಪಿಲ ಆಕಳಿನಿಂದ ಸಂಗ್ರಹಿಸಿದ್ದೇ ಆದಲ್ಲಿ ಪಂಚಗವ್ಯದಷ್ಟು ಪರಿಣಾಮಕಾರಿ ಔಷಧಿ ಬೇರೊಂದಿಲ್ಲ ಎನ್ನುತ್ತದೆ ಲೌಗೌಕ್ಷಿ ಸ್ಮೃತಿ. ಪಂಚಗವ್ಯದ ತಯಾರಿಕೆಯು ಅತ್ಯಂತ ಸರಳವಾಗಿದ್ದು, ಪ್ರತಿಯೊಬ್ಬರು ಮನೆಯಲ್ಲೇ ಇದನ್ನು ತಯಾರಿಸಿಕೊಳ್ಳಬಹುದಾಗಿದೆ. ಹೀಗೆ ತಯಾರಿಸುವಾಗ ಒಂದನ್ನು ಕಡ್ಡಾಯವಾಗಿ ಪಾಲಿಸಲೇ ಬೇಕಿದೆ. ಅದೇನೆಂದರೆ ಪಂಚಗವ್ಯವನ್ನು ಕೇವಲ ದೇಶಿ ತಳಿ ಗೋವಿನ ಗೋಮೂತ್ರ, ಗೋಮಯ, ಹಾಲು, ಮೊಸರು ಮತ್ತು ತುಪ್ಪದಿಂದ ಮಾತ್ರ ತಯಾರಿಸಬೇಕು. ಆಗ ಮಾತ್ರ ಅದು ಸಂಜೀವಿನಿಯಾಗಲು ಸಾಧ್ಯ.
ನಮ್ಮ ಪ್ರಾಚೀನ ವೈದ್ಯಕೀಯ ಮಹಾ ಗ್ರಂಥವಾದ ಆಯುರ್ವೇದದಲ್ಲಿ ಮಾನವನಿಗೆ ಬಾಧಿಸುವ ಎಲ್ಲಾ ರೋಗಗಳನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ. ದೈವ ದೋಷಣೆಯಿಂದ ಬರುವ ವ್ಯಾಧಿಗಳು, ಶಾರೀರಿಕ ವ್ಯಾಧಿಗಳು ಮತ್ತು ಮಾನಸಿಕ ವ್ಯಾಧಿಗಳೆಂಬ ಈ ಮೂರು ವಿಭಾಗಗಳಿಗೂ ಅತ್ಯಂತ ಶ್ರೇಷ್ಠ ರೋಗನಿರೋಧಕ ಔಷಧಿಯಾಗಿ ಉಪಯೋಗಿಸಲ್ಪಡಬಹುದಾದ ಸಂಜೀವಿನಿಯೇ ಪಂಚಗವ್ಯ. ಈ ವ್ಯಾಧಿಗಳಿಗೆ ಪಂಚಗವ್ಯಕ್ಕಿಂತ ದೊಡ್ಡ ರಾಮಬಾಣ ಮತ್ತೊಂದಿಲ್ಲ. ಇದರಿಂದ ವಾಸಿಯಾಗುವ ಕಾಯಿಲೆಗಳ ಪಟ್ಟಿಯೇ ಆಯುರ್ವೇದದಲ್ಲಿದೆ. ಹಾಗೆಯೇ ವಿಶ್ವದ ಕೆಲ ಖ್ಯಾತ ಸಂಶೋಧಕರು ಪಂಚಗವ್ಯದ ಕಾರ್ಯಕ್ಷಮತೆಯ ಕುರಿತು ಸಂಶೋಧನೆ ನಡೆಸಿದಾಗ ಅವರನ್ನು ನಿಬ್ಬೆರಗಾಗಿಸುವ ಅಂಶಗಳು ಇದರಲ್ಲಿ ಕಂಡುಬಂದಿವೆ.
ಪಂಚಗವ್ಯವಿಲ್ಲದ ಯಾವುದೇ ಚಿಕಿತ್ಸೆ ಅಷ್ಟೊಂದು ಪರಿಣಾಮಕಾರಿಯಾಗಲಾರದು. ಪಂಚಗವ್ಯ ಸೇವನೆಯಿಂದ ಶರೀರ, ಬುದ್ಧಿ, ಮನಸ್ಸು ಮತ್ತು ಅಂತಃಕರಣ ಶುದ್ದಿಯಾಗುತ್ತದೆ ಎನ್ನುತ್ತದೆ ವಿಶ್ವದ ಅತ್ಯಂತ ಪುರಾತನ ವೈದ್ಯಶಾಸ್ತ್ರವಾದ ಆಯುರ್ವೇದ. ವೈದ್ಯಕೀಯ ಚಿಕಿತ್ಸೆಯಲ್ಲಿ ಪಂಚಗವ್ಯ ನಿರ್ವಹಿಸುವ ಪ್ರಮುಖ ಪಾತ್ರವನ್ನು ಹಲವು ಆಯುರ್ವೇದಾಚಾರ್ಯರು ಹಲವಾರು ರೀತಿಯಲ್ಲಿ ವಿವರಿಸಿದ್ದಾರೆ. ಆಯುರ್ವೇದ ಗ್ರಂಥಗಳಾದ ಚರಕ ಸಂಹಿತ, ಸುಶ್ರುತ ಸಂಹಿತ ಮತ್ತು ವಾಗ್ಭಟ ಸಂಹಿತದಲ್ಲಿ ಸಣ್ಣ ಕಾಯಿಲೆಗಳಿಂದ ಹಿಡಿದು ದೊಡ್ಡ ದೊಡ್ಡ ಕಾಯಿಲೆಗಳನ್ನು ಪಂಚಗವ್ಯದಿಂದ ವಾಸಿಮಾಡುವ ಬಗೆಯನ್ನು ತಿಳಿಸಲಾಗಿದೆ. ಹಾಗೆಯೇ ಲೌಗೌಕ್ಷಿಸ್ಮೃತಿ, ಪರಾಶರಸ್ಮೃತಿ, ರಸತರಂಗಿಣಿ ಇತ್ಯಾದಿ ಪ್ರಸಿದ್ಧ ಗ್ರಂಥಗಳಲ್ಲಿ ಇದನ್ನು ತಯಾರಿಸುವ ವಿಧಾನಗಳ ಬಗ್ಗೆ ವಿಸ್ತೃತ ಉಲ್ಲೇಖ ನೀಡಲಾಗಿದೆ.
ವಿಶ್ವ ಆರೋಗ್ಯ ಸಂಸ್ಥೆ ಪಂಚಗವ್ಯ ಚಿಕಿತ್ಸಾ ಪದ್ಧತಿಯನ್ನು ಗುರುತಿಸಿದ ನಂತರ ಇದರ ಪ್ರಚಾರ ಇತ್ತೀಚೆಗೆ ವಿಶ್ವವ್ಯಾಪಿಯಾಗುತ್ತಿದೆ. ಅಮೆರಿಕ ಮತ್ತು ಆಫ್ರಿಕ ದೇಶದಲ್ಲಿ ಇದನ್ನು ಏಡ್ಸ್ ಕಾಯಿಲೆ ವಾಸಿ ಮಾಡುವ ಸಲುವಾಗಿ ಬಳಸುತ್ತಿದ್ದಾರೆ. ಇದರಿಂದ ಅವರಿಗೆ ಈ ಕಾಯಿಲೆ ನಿಯಂತ್ರಣಕ್ಕೆ ಬಂದಿರುವುದು ಪರೀಕ್ಷೆಗಳಿಂದ ದೃಢಪಟ್ಟಿದೆ. ಹಾಗೆಯೇ ಪಂಚಗವ್ಯದಲ್ಲಿರುವ ಔಷಧೀಯ ಗುಣಗಳನ್ನು ಭಾರತದ ಸರ್ಕಾರಿ ಸಂಸ್ಥೆಗಳಾದ ಐಐಟಿ, ಐಇಸಿಟಿ, ಎನ್.ಬಿ.ಆರ್.ಐ, ಸಿ.ಎಸ್.ಐ.ಆರ್, ಎನ್.ಇ.ಇ.ಆರ್.ಐ. ಮತ್ತು ಎನ್.ಬಿ.ಎ.ಜಿ.ಆರ್ ಪ್ರಮಾಣೀಕರಿಸಿವೆ.
ಇಂದು ವಿಶ್ವದೆಲ್ಲೆಡೆ ಬಳಕೆಯಿರುವ ಅಲೋಪತಿ ಚಿಕಿತ್ಸಾ ಪದ್ಧತಿ ಏನಿಲ್ಲವೆಂದರೂ 200 ವರ್ಷಗಳ ಹಿಂದೆಯಷ್ಟೆ ಜಗತ್ತಿಗೆ ಪರಿಚಯವಾಯಿತು. ಇದೊಂದು ಸಂಪೂರ್ಣ ಪಾಶ್ಚಾತ್ಯ ಚಿಕಿತ್ಸಾ ಪದ್ಧತಿಯಾಗಿದ್ದು, ಕಷ್ಟಕರವು ಮತ್ತು ದುಬಾರಿಯೂ ಆಗಿದೆ. ಇದಕ್ಕೂ ಮೊದಲು ಎಲ್ಲಾ ಕಾಯಿಲೆಗಳಿಗೆ ನಮ್ಮಲ್ಲಿ ಪರಿಣಾಮಕಾರಿಯಾದ ಚಿಕಿತ್ಸೆಯನ್ನು ಆಯುರ್ವೇದ ಚಿಕಿತ್ಸಾ ಪದ್ಧತಿಯಲ್ಲಿ ನೀಡಲಾಗುತ್ತಿತ್ತು. ಇಂದಿನ ಕ್ಯಾನ್ಸರ್ ಕಾಯಿಲೆಯನ್ನು `”ಅರ್ಭುದʼʼ ಎಂಬ ಹೆಸರಿನಿಂದ ಅಂದೇ ಆಯುರ್ವೇದದಲ್ಲಿ ಕರೆಯಲಾಗುತ್ತಿದ್ದು, ಅದಕ್ಕೆ ಪಂಚಗವ್ಯದಿಂದಲೇ ಚಿಕಿತ್ಸೆಯನ್ನು ನೀಡಿ ಗುಣಪಡಿಸಲಾಗುತ್ತಿತ್ತು. ಅಷ್ಟೇ ಅಲ್ಲದೆ ಇತ್ತೀಚಿನ ಯುಗದಲ್ಲಿ ಸಾಮಾನ್ಯವಾಗಿ ಕಾಣಿಸುವ ಚರ್ಮ ಸಂಬಂಧಿ ರೋಗಗಳು, ಮೂತ್ರ ಸಂಬಂಧಿ ಕಾಯಿಲೆಗಳು, ಮಂಡಿ ನೋವು ಮತ್ತು ಹೊಟ್ಟೆ ಹುಣ್ಣು ಸೇರಿದಂತೆ ಇನ್ನು ಹತ್ತು ಹಲವು ಕಾಯಿಲೆಗಳನ್ನು ಇದು ಹೇಳ ಹೆಸರಿಲ್ಲದಂತೆ ವಾಸಿ ಮಾಡುವ ಗುಣ ಹೊಂದಿರುವುದು ಸಾಬೀತಾಗಿದೆ.
ಇದನ್ನೂ ಓದಿ| Motivational story | ಯಾರಿಗೋ ಹೇಳುವ ಒಂದು ಸಣ್ಣ ನಮಸ್ಕಾರದಲ್ಲಿ ಎಷ್ಟೊಂದು ಶಕ್ತಿ ಇದೆ ಗೊತ್ತಾ?
ಪಂಚಗವ್ಯವು ಮನಷ್ಯರಿಗಷ್ಟೇ ಅಲ್ಲದೆ ಪ್ರಪಂಚದಲ್ಲಿರುವ ಸಕಲ ಜೀವರಾಶಿಗಳಿಗೂ ಪರಿಣಾಮಕಾರಿಯಾದ ಔಷಧಿಯಾಗಿರುವುದು ಸಾಬೀತಾಗಿದೆ. ಇದು ಸಸ್ಯಗಳ ಬೆಳವಣಿಗೆಯಲ್ಲಿ ಮತ್ತು ಕೃಷಿಯಲ್ಲಿ ಅತ್ಯದ್ಭುತವಾದ ಫಲಿತಾಂಶವನ್ನು ನೀಡುವುದು ದೃಢಪಟ್ಟಿದೆ. ಇದನ್ನು ಒಂದು ಪ್ರಮಾಣದಲ್ಲಿ ಬಳಸಿದ್ದೇ ಆದಲ್ಲಿ ಅಧಿಕ ಇಳುವರಿಯನ್ನು ಪಡೆಯಬಹುದಾಗಿದೆ.
ಸಾವಯವ ರೈತರು ಇಂದು ಈ ಪಂಚಗವ್ಯದ ಉಪಯೋಗವನ್ನು ಕೃಷಿಯಲ್ಲಿ ಬಳಸಿ ಒಳ್ಳೆಯ ಫಸಲನ್ನು ಪಡೆದು ಹೆಚ್ಚೆಚ್ಚು ಲಾಭವನ್ನು ನೋಡುತ್ತಿರುವುದೇ ಇದಕ್ಕೆ ಸಾಕ್ಷಿ. ಪಂಚಗವ್ಯದಂತೆ ಪಂಚಗವ್ಯ ಘೃತವು ಸಹಾ ಪರಿಣಾಮಕಾರಿಯಾದುದಾಗಿದೆ. ಇದರೊಂದಿಗೆ ಗೋಮೂತ್ರ, ಗೋಮಯ, ಹಾಲು ಮತ್ತು ಮೊಸರನ್ನು ಬೆರೆಸಿ ಔಷಧಿಯಾಗಿ ಬಳಸಲಾಗುತ್ತದೆ. ಇದು ಮೆದುಳಿಗೆ ಸಂಬಂಧಿಸಿದ ವ್ಯಾಧಿಗಳಾದ ಹುಚ್ಚು, ಬೆಪ್ಪು, ಉನ್ಮಾದ ಮತ್ತು ಅಪಸ್ವಾರಗಳಿಗೆ ಪರಿಣಾಮಕಾರಿಯಾದ ಔಷಧಿಯಾಗಿದೆ.
ಒಟ್ಟಿನಲ್ಲಿ ಪ್ರಪಂಚದ ಎಲ್ಲಾ ಕಾಯಿಲೆಗಳಿಗೆ ಪರಿಹಾರ ಈ ಸಂಜೀವಿನಿ. ಇಂತಹ ಸಂಜೀವಿನಿಯ ಮೂಲ ಗೋವು. ಹಾಗಾಗಿ ನಡೆದಾಡುವ ಈ ಔಷಧಾಲಯವನ್ನು ಉಳಿಸಿಕೊಂಡಂಲ್ಲಿ ಮಾತ್ರ ಮಾನವ ಇಂದು ಮತ್ತು ಮುಂದೊಂದು ದಿನ ಆರೋಗ್ಯಪೂರ್ಣ ಜೀವನವನ್ನು ತನ್ನದಾಗಿಸಿಕೊಳ್ಳಬಹುದಾದ ಎಲ್ಲಾ ಸಾಧ್ಯತೆಗಳು ದಟ್ಟವಾಗಿವೆ.
ಇದನ್ನೂ ಓದಿ | ಗೋ ಸಂಪತ್ತು | ಬೆರಣಿ; ಇದು ಚಿನ್ನದ ಗಣಿ