ಸರ್ವೇಯರ್ ವರದಿ ನೀಡಿದ್ದೇ ಅಂತಿಮವಲ್ಲ, ವಿಮೆ ಕಂಪನಿ ಮತ್ತೊಮ್ಮೆ ಸರ್ವೆ ಮಾಡಿಸಬಹುದು
ದೊಡ್ಡ ದೊಡ್ಡ ಉದ್ಯಮಗಳು ಆಕಸ್ಮಿಕಗಳಿಂದ ಆಗುವ ನಷ್ಟವನ್ನು ತಪ್ಪಿಸಿಕೊಳ್ಳಲು ವಿಮೆಯನ್ನು ಮಾಡಿಸುತ್ತವೆ. ಹಾಗೆ ಮಾಡಿಸಿದ ವಿಮೆಯ ಪರಿಹಾರ ಕೋರುವಾಗ ಎಷ್ಟು ಪ್ರಾಮಾಣಿಕರಾಗಿರುತ್ತೇವೋ ಅಷ್ಟು ಸುರಕ್ಷಿತ. ಹೇಗೂ ವಿಮೆ ಮಾಡಿಸಿದ್ದೇವಲ್ಲ, ಪರಿಹಾರ ಸ್ವಲ್ಪ ಹೆಚ್ಚಿಗೆಯೇ ಕೋರಬಹುದು ಎಂದು ದುರಾಸೆಗೆ ಒಳಗಾಗಿ ಸುಳ್ಳು ಲೆಕ್ಕ ತೋರಿಸಿದರೆ ಏನೂ ಸಿಗದೆ ಬರಿಗೈಯಲ್ಲಿ ಮರಳಬೇಕಾಗಬಹುದು. ಇಲ್ಲಿ ಅಂಥ ಒಂದು ಪ್ರಕರಣ ಇದೆ.
ಪಶ್ಚಿಮ ಬಂಗಾಳದ ಹೂಗ್ಲಿಯ ಮೆ.ಫೆನಾಸಿಯಾ ಲಿ. ಕಂಪನಿಯು ಯುನೈಟೆಡ್ ಇಂಡಿಯಾ ಇನ್ಸುರೆನ್ಸ್ ಕಂಪನಿಯಿಂದ ಬೆಂಕಿ ಇತ್ಯಾದಿ ಅಪಘಾತಗಳಿಂದ ರಕ್ಷಣೆ ಪಡೆಯಲು ವಿಮೆಯನ್ನು ಪಡೆದಿತ್ತು. ಈ ಫೆನಾಸಿಯಾ ಕಂಪನಿಯು ವಿವಿಧ ರೀತಿಯ ರಾಸಾಯನಿಕಗಳನ್ನು ಉತ್ಪಾದಿಸುತ್ತಿತ್ತು. ಇದರಲ್ಲಿ ರಫ್ತು ಮಾಡುವ ಗುಣಮಟ್ಟದ್ದು ಮತ್ತು ರಫ್ತು ಮಾಡದೆ ಇರುವ ಗುಣಮಟ್ಟದ್ದು ಎಂಬ ವೈವಿಧ್ಯವಿತ್ತು. ಇದನ್ನು ಫೆನಾಸಿಯಾ ಬ್ರಾಂಡ್ ಹೆಸರಿನಲ್ಲಿ ಮಾರುತ್ತಿತ್ತು. ಈ ಉತ್ಪನ್ನ ದೇಶ ಮತ್ತು ವಿದೇಶದಲ್ಲಿ ಚರ್ಮದ ಉುತ್ಪನ್ನಗಳನ್ನು ತಯಾರು ಮಾಡುವ ಕಂಪನಿಗಳು ಖರೀದಿಸುತ್ತಿದ್ದವು.
ಫೆನಾಸಿಯಾ ಲಿ. ಕಂಪನಿಯು 30-04-2008ರಂದು ಯುನೈಟೆಡ್ ಇಂಡಿಯಾ ಇನ್ಸುರೆನ್ಸ್ ಕಂಪನಿಯಿಂದ 7 ಕೋಟಿ ರುಪಾಯಿಗೆ ಸ್ಟ್ಯಾಂಡರ್ಡ್ ಫೈರ್ ಮತ್ತು ಸ್ಪೆಶಿಯಲ್ ಪೆರಿಲ್ ಪಾಲಿಸಿಗಳನ್ನು ಮಾಡಿಸಿತು. ಇದು ಕಟ್ಟಡ, ಪ್ಲಾಂಟ್ ಮತ್ತು ಯಂತ್ರಗಳು, ಕಚ್ಚಾ ಸಾಮಗ್ರಿಗಳು, ಸಿದ್ಧವಸ್ತುಗಳು, ಪ್ಯಾಕ್ ಮಾಡುವ ಸಾಮಾನುಗಳು ಇತ್ಯಾದಿಗಳಿಗೆ ಹಾನಿಯಾದರೆ ಪರಿಹಾರ ಕೋರಬಹುದಿತ್ತು. ಇದಲ್ಲದೆ ಶೇ.100ರಷ್ಟು ರಫ್ತು ಮಾಡುವ ಉದ್ದೇಶದ ಪ್ಲಾಂಟ್‌ನ ಕಚ್ಚಾ ರಾಸಾಯನಿಕ ವಸ್ತುಗಳು ಮತ್ತು ಸಿದ್ಧ ವಸ್ತುಗಳಿಗಾಗಿ 1.5 ಕೋಟಿ ರುಪಾಯಿಯ ಮತ್ತೊಂದು ವಿಮೆಯನ್ನೂ ಪಡೆದಿತ್ತು.
ವಿಮೆಯ ಅವಧಿಯೊಳಗೇ 12-08-2008ರಂದು ಮಧ್ಯಾಹ್ನವೇ ಫ್ಯಾಕ್ಟರಿಯಲ್ಲಿ ಭಾರೀ ಪ್ರಮಾಣದ ಬೆಂಕಿ ತಲೆದೋರಿತು. ರಾತ್ರಿ 11 ಗಂಟೆಯ ವರೆಗೂ ಹೋರಾಡಿ ಬೆಂಕಿ ನಂದಿಸಲಾಯಿತು. ವಿಮೆ ಕಂಪನಿಗೆ ತಕ್ಷಣವೇ ಮಾಹಿತಿಯನ್ನು ನೀಡಲಾಯಿತು. ವಿಮೆ ಕಂಪನಿ ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿತು ಮತ್ತು ಸುಂಕ ಮತ್ತು ಕೇಂದ್ರ ಅಬಕಾರಿ ಇಲಾಖೆಯ ಸುಪರಿಂಟೆಂಡೆಂಟ್‌ರವರಿಗೂ ವಿಷಯ ತಿಳಿಸಿತು. ವಿಮೆ ಕಂಪನಿಯು ದೆಹಲಿಯ ಪುರಿ ಕ್ರಾವ್ಫೋರ್ಡ್ ಆ್ಯಂಡ್ ಅಸೋಸಿಯೇಟ್ಸ್ ಇಂಡಿಯಾ ಪ್ರೈ.ಲಿ.ಅನ್ನು ಘಟನೆಯ ಸಮೀಕ್ಷೆ ನಡೆಸಿ ಹಾನಿಯನ್ನು ಅಂದಾಜು ಮಾಡಲು ನೇಮಿಸಿತು.
ಫೆನಾಸಿಯಾ ಕಂಪನಿಯು ಮೊದಲ ಪಾಲಿಸಿಯಲ್ಲಿ 4.80 ಕೋಟಿ ರುಪಾಯಿ ಮತ್ತು ಎರಡನೆ ಪಾಲಿಸಿಯಲ್ಲಿ 98.61 ಲಕ್ಷ ರುಪಾಯಿಗಳನ್ನು ಪರಿಹಾರ ನೀಡುವಂತೆ ಕೋರಿತು. ಇದಕ್ಕೆ ಪೂರಕವಾಗಿ ವಿವಿಧ ದಾಖಲೆಗಳು, ಅಂದಾಜು ಪಟ್ಟಿ, ಬಿಲ್‌ಗಳು ಇನ್‌ವೈಸ್‌ಗಳು ಇತ್ಯಾದಿಗಳನ್ನು ಸರ್ವೇಯರ್ ಕೋರಿದಾಗಲೆಲ್ಲ ಸಲ್ಲಿಸಿತು.
ಈ ಭಾರೀ ಮೊತ್ತದ ಬಗ್ಗೆ ವಿಮೆ ಕಂಪನಿಗೆ ಅನುಮಾನ ಬಂತು. ಅದು ಮುಂಬಯಿಯ ಮೆ.ಅಶೋಕ್ ಚೋಪ್ರಾ ಮತ್ತು ಕಂಪನಿಯನ್ನು ತನಿಖೆಗಾಗಿ 13-08-2010ರಂದು ನೇಮಿಸಿತು. ಅವರು 16-11-2011ರಂದು ಸಲ್ಲಿಸಿದ ವರದಿಯಲ್ಲಿ ವಿಮೆ ಪಡೆದವರು ಹೆಚ್ಚಿನ ವಿಮೆ ಪರಿಹಾರ ಪಡೆಯಲು ಹಾನಿಯನ್ನು ವೈಭವೀಕರಿಸಿ ತೋರಿಸಿದ್ದಾರೆ. ಇದಕ್ಕಾಗಿ ಸುಳ್ಳು ಲೆಕ್ಕಪತ್ರ ತೋರಿಸಿದ್ದಾರೆ. ಇದು ವಿಮೆ ಪಾಲಿಸಿಯ ಷರತ್ತು 1, 6 ಮತ್ತು 8ರ ಸ್ಪಷ್ಟ ಉಲ್ಲಂಘನೆ. ಈ ಕಾರಣಕ್ಕೆ ವಿಮೆ ಪರಿಹಾರವನ್ನು ನಿರಾಕರಿಸಬಹುದು ಎಂದು ಉಲ್ಲೇಖಿಸಿದರು.
ವಿಮೆ ಕಂಪನಿಯು 27-09-2012ರಂದು ಫೆನಾಸಿಯಾ ಕಂಪನಿಗೆ ಪತ್ರವೊಂದನ್ನು ಬರೆದು, ನೀವು ಸುಳ್ಳು ಲೆಕ್ಕಪತ್ರ ನೀಡಿ ಹಾನಿಯನ್ನು ವೈಭವೀಕರಿಸಿ ಪರಿಹಾರ ಕೋರಿದ್ದೀರಿ. ಕಾರಣ ನಿಮಗೆ ವಿಮೆ ಪರಿಹಾರ ನೀಡಲು ಬರುವುದಿಲ್ಲ ಎಂದು ತಿಳಿಸಿತು. ನಂತರ 12-11-2012ರಂದು ಫೆನಾಸಿಯಾ ಕಂಪನಿಯು ವಿಮೆ ಕಂಪನಿಗೆ ಪತ್ರ ಬರೆದು ಮರುಪರಿಶೀಲಿಸುವಂತೆ ಕೋರಿತು. ಅದರಿಂದ ಏನೂ ಆಗಲಿಲ್ಲ. ಆಗ ಅದು 03-05-2013ರಂದು ರಾಷ್ಟ್ರೀಯ ಗ್ರಾಹಕ ವ್ಯಾಜ್ಯ ನಿವಾರಣೆ ಆಯೋಗದಲ್ಲಿ ದೂರನ್ನು ದಾಖಲಿಸಿತು. ನಾವು ವಿಮೆ ಬೇಡಿಕೆಯನ್ನು 5.54 ಕೋಟಿಯಿಂದ 4.80 ಕೋಟಿಗೆ ಇಳಿಸಿದ್ದೇವೆ. ದಾಸ್ತಾನಿನ ದರವನ್ನು ಸರಿಯಾಗಿ ಲೆಕ್ಕಹಾಕಿಲ್ಲದೆ ಇದ್ದುದರಿಂದ ಈ ವ್ಯತ್ಯಾಸವಾಗಿತ್ತು. ಸರ್ವೇಯರ್ ಇದರಲ್ಲಿ ಅನ್ಯಾಯವಾದದ್ದು, ಮೋಸ ಏನನ್ನೂ ಕಂಡಿಲ್ಲ. ತನಿಖೆ ನಡೆಸಿದವರು ದಾಖಲೆಯಲ್ಲಿದ್ದ ಸಮಗ್ರ ವಸ್ತುಗಳನ್ನು ಪರಿಗಣೆಗೆ ತೆಗೆದುಕೊಂಡಿಲ್ಲ ಮತ್ತು ಯಾವುದೇ ಆಧಾರವಿಲ್ಲದೆ ನಾವು ಅತಿರಂಜಿತ ಹಾನಿಗೆ ಪರಿಹಾರ ಕೋರಿದ್ದೇವೆ ಎಂದು ವರದಿ ನೀಡಿದ್ದಾರೆ. ವಿಮೆ ಕಂಪನಿಯು ಅನತ್ಯವಾಗಿ ವಿಳಂಬ ಮಾಡಿದೆ. ಕಾರಣ ತಮಗೆ 4,08,26,931 ರುಪಾಯಿ ಪರಿಹಾರ ನೀಡಬೇಕು. ಮಾನಸಿಕ ಕಿರಿಕಿರಿಗೆ ಪರಿಹಾರವೆಂದು 50 ಲಕ್ಷ ರುಪಾಯಿ, ವ್ಯಾಜ್ಯದ ವೆಚ್ಚವೆಂದು 5 ಲಕ್ಷ ರುಪಾಯಿ, ಹಾಗೂ ಕೊಡಬಹುದಾದ ಇತರ ಪರಿಹಾರಗಳನ್ನು ಕೊಡಿಸಬೇಕು ಎಂದು ಕೋರಿತು.
ಇದನ್ನೂ ಓದಿ | ಗ್ರಾಹಕ ಜಾಗೃತಿ | ಫೋರ್ಜರಿ ವಿಷಯ ಇತ್ಯರ್ಥ ಮಾಡುವುದು ಗ್ರಾಹಕ ವೇದಿಕೆಯಲ್ಲ
ವಿಮೆ ಕಂಪನಿಯು ತನ್ನ ಲಿಖಿತ ಉತ್ತರದಲ್ಲಿ ಈ ಬೇಡಿಕೆಗಳನ್ನು ತಿರಸ್ಕರಿಸಿತು. ಘಟನೆಗಳ ಸಂಕೀರ್ಣ ಪ್ರಶ್ನೆಗಳು ಇದರಲ್ಲಿ ಅಡಗಿರುವುದರಿಂದ ಪ್ರಕರಣವನ್ನು ಸಿವಿಲ್ ಕೋರ್ಟ್ ನಿರ್ಧರಿಸುವುದು ಸೂಕ್ತ. ಹಾನಿಯ ಅಂದಾಜಿನಲ್ಲಿ ತೀರ ಅತಿರಂಜಿತ ಅಂಶಗಳು ಕಂಡಿದ್ದರಿಂದ ತನಿಖಾಧಿಕಾರಿಯನ್ನು ನೇಮಿಸಬೇಕಾಯಿತು. ನಮಗೆ ಸಲ್ಲಿಸಿದ ಹಾನಿಯ ಪಟ್ಟಿಗೂ ಅಕೌಂಟ್ಸ್ ಪುಸ್ತಕದಲ್ಲಿಯ ಅಂಕಿಗಳಿಗೂ ತಾಳೆಯಾಗುತ್ತಿಲ್ಲ. ಈ ರೀತಿಯ ಸುಳ್ಳು ಲೆಕ್ಕ ತೋರಿಸಿ ಪರಿಹಾರ ಕೋರುವುದು ಪಾಲಿಸಿಯ ಷರತ್ತು 6 ಮತ್ತು 8ರ ಉಲ್ಲಂಘನೆ ಎಂದು ಹೇಳಿತು.
ಇದಕ್ಕೆ ಪ್ರತ್ಯುತ್ತರ ನೀಡಿದ ಫೆನಾಸಿಯಾ ಕಂಪನಿಯು ತಪ್ಪು ಲೆಕ್ಕ ನೀಡಿದ್ದೇವೆ ಎಂಬುದನ್ನು ಅಲ್ಲಗಳೆಯಿತು. ಸರ್ವೇಯರ್ ವರದಿಯ ಬಳಿಕ ಪರಿಹಾರ ಬೇಡಿಕೆಯನ್ನು ಇತ್ಯರ್ಥಗೊಳಿಸದೆ ಇರುವುದಕ್ಕೆ ಕಾರಣವಿಲ್ಲ. ತನಿಖಾಧಿಕಾರಿಯ ನೇಮಕ ವಿಮೆ ಕಂಪನಿಯ ಮನಸ್ಸಿಗೆ ಬಂದ ನಡವಳಿಕೆಯಾಗಿದೆ. ಅವರಿಗೆ ನಾವು ಸಲ್ಲಿಸಿದ ಸರಿಯಾಗಿರುವ ಕಾಗದಪತ್ರಗಳನ್ನು ಅನುಮಾನಿಸುವುದಕ್ಕೆ ನೀಡಿರುವ ಕಾರಣಗಳು ಕ್ಷುಲ್ಲಕ ಹಾಗೂ ಮನವರಿಕೆಯಾಗದಂಥದ್ದು ಎಂದು ಹೇಳಿತು. ಅಲ್ಲದೆ ಅದು ವ್ಯವಸ್ಥಾಪಕ ನಿರ್ದೇಶಕ ನರೇಶಕುಮಾರ ಜುನೇಜಾ ಅವರ ಸಾಕ್ಷಿಯ ಪ್ರಮಾಣಪತ್ರವನ್ನು ಸಲ್ಲಿಸಿತು. ವಿಮೆ ಕಂಪನಿಯು ತನಿಖಾಧಿಕಾರಿಗಳಾದ ಸತೀಶ ಶರ್ಮಾ ಮತ್ತು ಅಶೋಕ ಚೋಪ್ಡಾ ಅವರ ಸಾಕ್ಷಿ ಪ್ರಮಾಣಪತ್ರಗಳನ್ನು ಸಲ್ಲಿಸಿತು. ಎರಡೂ ಕಡೆಯವರು ಪುರಾವೆಗಳ ಸಾಕ್ಷ್ಯಚಿತ್ರ ಮತ್ತು ಲಿಖಿತ ವಾದಗಳನ್ನು ಮಂಡಿಸಿದರು.
ಆಯೋಗವು ಎರಡೂ ಕಡೆಯ ವಾದಗಳನ್ನು ಪರಿಶೀಲಿಸಿತು. ಇಂಥದ್ದೇ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್, ಸಕಾರಣಗಳು ಇದ್ದಾಗ ಒಮ್ಮೆ ಸರ್ವೆ ನಡೆದ ಬಳಿಕ ಮತ್ತೊಮ್ಮೆ ಸರ್ವೆ ನಡೆಸುವವುದಕ್ಕೆ ಯಾವುದೇ ಅಡ್ಡಿ ಇಲ್ಲ ಎಂದು ಹೇಳಿರುವುದನ್ನು ಗಮನಿಸಿತು. ಪ್ರಸ್ತುತ ಪ್ರಕರಣದಲ್ಲಿ ವಿಮೆ ಕಂಪನಿ ತನಿಖೆಯನ್ನು ಮತ್ತೊಮ್ಮೆ ನಡೆಸಿದ್ದು ಅದರ ಬೇಕಾಬಿಟ್ಟಿಯಾದ ನಡೆ ಅನ್ನಿಸುವುದಿಲ್ಲ ಎಂದು ನಿರ್ಧರಿಸಿತು.
ಇದನ್ನೂ ಓದಿ | ಗ್ರಾಹಕ ಜಾಗೃತಿ | ನ್ಯಾಯಾಧೀಶರು ಸಾಧ್ಯತೆ ಕಲ್ಪಿಸಿಕೊಂಡು ತೀರ್ಪು ನೀಡಬಾರದು
ತನಿಖೆದಾರರು 21 ವ್ಯತ್ಯಾಸಗಳನ್ನು ಪಟ್ಟಿಮಾಡಿದ್ದರು. ಅವರು ಆರು ಆಡಿಟ್‌ಗಳನ್ನು ಪರಿಶೀಲಿಸಿದ್ದರು. ಸರ್ವೇಯರಿಗೆ ಸಲ್ಲಿಸಿದ ದಾಖಲೆಗೂ ಆಡಿಟ್ ವರದಿಗೂ ತಾಳೆಯಾಗುತ್ತಿರಲಿಲ್ಲ. ಇನ್‌ಪುಟ್ ಬೆಲೆ ಪ್ರತಿ ಕೆಜಿಗೆ 69.83 ರುಪಾಯಿ ಎಂದು ತೋರಿಸಿದ್ದಾರೆ. ಆದರೆ ಸಿದ್ಧ ವಸ್ತುವಿನ ಬೆಲೆ 69.69. ರು. ಇದೆ. ಸಿದ್ಧವಸ್ತುವಿನ ಬೆಲೆಗಿಂತ ಕಚ್ಚಾವಸ್ತುವಿನ ಬೆಲೆ ಹೆಚ್ಚಾಗಲು ಹೇಗೆ ಸಾಧ್ಯ? ಇನ್ನೊಂದು ಕುತೂಹಲದ ಸಂಗತಿ ಎಂದರೆ, ಸುಟ್ಟುಹೋದ ಡ್ರಮ್‌ಗಳು 4710 ಎಂದು ತೋರಿಸಲಾಗಿತ್ತು. ಇದನ್ನು ಇಡುವುದಕ್ಕೆ 7065 ಚದರ ಅಡಿ ಜಾಗ ಬೇಕಾಗುತ್ತದೆ. ಆದರೆ ಅಲ್ಲಿದ್ದದ್ದು 5820 ಚದರ ಅಡಿ ಜಾಗ ಮಾತ್ರ. ಅಲ್ಲದೆ ಛಾಯಾಚಿತ್ರದಲ್ಲಿ ಸುಟ್ಟುಹೋದ 45 ಹೊಸ ಡ್ರಮ್ಮುಗಳು ಮಾತ್ರ ಕಾಣುತ್ತಿದ್ದವು.
ಇದನ್ನೆಲ್ಲ ನೋಡಿದಾಗ ಫೆನಾಸಿಯಾ ಕಂಪನಿಯು ಹೆಚ್ಚಿನ ಪರಿಹಾರ ಪಡೆಯುವುದಕ್ಕೆ ತಪ್ಪು ಲೆಕ್ಕಗಳನ್ನು ನೀಡಿದ್ದು ತಿಳಿಯುತ್ತದೆ. ಇದು ವಿಮೆಯ ಷರತ್ತಿನ ಉಲ್ಲಂಘನೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಅದು ಯಾವುದೇ ಪರಿಹಾರಕ್ಕೆ ಬಾಧ್ಯಸ್ಥ ಆಗುವುದಿಲ್ಲ ಎಂದು ಹೇಳಿ ದೂರನ್ನು ವಜಾಗೊಳಿಸಿತು.
ತೀರ್ಪು- 03 Jan 2022
(ಅಂಕಣಕಾರರು ಹಿರಿಯ ಪತ್ರಕರ್ತರು. ಹಲವು ವರ್ಷಗಳಿಂದ ಗ್ರಾಹಕ ಜಾಗೃತಿ ಮೂಡಿಸುತ್ತಿದ್ದಾ