Site icon Vistara News

ಗ್ರಾಹಕ ಜಾಗೃತಿ | ಫೋರ್ಜರಿ ವಿಷಯ ಇತ್ಯರ್ಥ ಮಾಡುವುದು ಗ್ರಾಹಕ ವೇದಿಕೆಯಲ್ಲ

grahaka jagruthi

ಗ್ರಾಹಕ ನ್ಯಾಯಾಲಯಗಳ ಸ್ಥಾಪನೆ ತ್ವರಿತ ನ್ಯಾಯದಾನ ಮತ್ತು ಕಡಿಮೆ ವೆಚ್ಚದಲ್ಲಿ ದೂರುದಾರರಿಗೆ ಪರಿಹಾರ ಒದಗಿಸಬೇಕು ಎಂಬ ಉದ್ದೇಶವನ್ನು ಹೊಂದಿದೆ. ಹಾಗಂತ ಎಲ್ಲ ಪ್ರಕರಣಗಳನ್ನೂ ಗ್ರಾಹಕ ನ್ಯಾಯಾಲಯಗಳಿಗೆ ಒಯ್ಯುವಂತಿಲ್ಲ. ಅದಕ್ಕೂ ಗಡಿಗಳಿವೆ. ಈ ಗಡಿಯ ಅರಿವಿಲ್ಲದೆ ಗ್ರಾಹಕ ವೇದಿಕೆಯ ಮೊರೆಹೋದ ಒಂದು ಪ್ರಕರಣ ಇಲ್ಲಿದೆ.

ದೆಹಲಿಯ ಮನಿಶಾ ಸೋಹಿಲ್‌ಕುಮಾರ ಚೋವಾಟಿಯಾ ಎನ್ನುವವರು ಎಚ್‌ಡಿಎಫ್‌ಸಿ ಬ್ಯಾಂಕು ಮತ್ತು ಗುಜರಾತಿನ ಜುನಾಗಢ ತಾಲೂಕಿನ ಪರೇಶ್‌ಭಾಯಿ ಮೋಹನಲಾಲ್‌ ಮನ್ಪಾರ ಎಂಬವರ ವಿರುದ್ಧ ಹೂಡಿದ್ದ ಮೊಕದ್ದಮೆ ಇದು. ಮನಿಶಾ ಅವರ ಪರವಾಗಿ ಅವರ ಪವರ್‌ ಆಫ್‌ ಅಟಾರ್ನಿ ಸುನಿಲ್‌ಕುಮಾರ ಗರ್ಗ್‌ ಅವರು ದೂರು ಸಲ್ಲಿಸಿದ್ದರು. ದೂರಿನಲ್ಲಿ, ಪ್ರತಿವಾದಿಗಳು ತಮಗೆ 1.71 ಕೋಟಿ ರುಪಾಯಿಗಳಷ್ಟು ಮೋಸ ಮಾಡಿದ್ದಾರೆ. ತಮಗೆ ಈ ಮೊತ್ತವನ್ನು ಮರಳಿ ಕೊಡಿಸಬೇಕು ಮತ್ತು 11-01-11ರಿಂದ ದೂರು ದಾಖಲಾದ ದಿನಾಂಕದ ವರೆಗೆ ಶೇ.10ರಂತೆ ಬಡ್ಡಿಯನ್ನೂ ಕೊಡಿಸಬೇಕು ಎಂದು ಕೋರಲಾಗಿತ್ತು.

ದೂರುದಾರರು ಒಬ್ಬ ಅನಿವಾಸಿ ಭಾರತೀಯರಾಗಿದ್ದು ಈಕ್ವೆಡಾರ್‌ನಲ್ಲಿ ವಾಸಿಸುತ್ತಿದ್ದರು. ಅವರು ಗುಜರಾತಿನ ಜೇತ್ಪುರದಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕಿನ ಶಾಖೆಯಲ್ಲಿ ಮೂರನೆ ಪ್ರತಿವಾದಿ ಪರೇಶ‌ಭಾಯಿ ಮುನ್ಪಾರ ಅವರ ಸಲಹೆಯ ಮೇರೆಗೆ 24.06.2009ರಂದು ಖಾತೆಯನ್ನು ತೆರೆಯುತ್ತಾರೆ. ಎಚ್ಚರಿಕೆಯ ಸಂದೇಶ ಸ್ವೀಕರಿಸಲು ಮತ್ತು ಕಾಲಕಾಲಕ್ಕೆ ಬ್ಯಾಂಕಿನ ಸಂದೇಶ ಅರಿಯುವುದಕ್ಕಾಗಿ ಅವರು ತಮ್ಮ ಮೊಬೈಲ್‌ ನಂಬರನ್ನೂ ಕೊಟ್ಟಿರುತ್ತಾರೆ. 24.07.2009 ರಂದು ಅವರು ಈಸಿ ಶಾಪ್‌ ಗೋಲ್ಡ್‌ ಇಂಟರ್‌ನ್ಯಾಶಲ್‌ ಡೆಬಿಟ್‌ಕಾರ್ಡಿಗೂ ನಂತರ ನೆಟ್‌ಬ್ಯಾಂಕಿಂಗಿಗೂ ಇ-ಮೇಲ್‌ ಐಡಿ ನೀಡಿ ಅರ್ಜಿ ಸಲ್ಲಿಸುತ್ತಾರೆ. 12.10.2009 ರಂದು ಅವರು ಅದೇ ಇ-ಮೇಲ್‌ ಐಡಿ ಮೂಲಕ ಥರ್ಡ್‌ ಪಾರ್ಟಿ ವರ್ಗಾವಣೆಗೂ ಅರ್ಜಿ ಸಲ್ಲಿಸಿರುತ್ತಾರೆ.

25.06.2009 ರಿಂದ 29.07.2011 ರ ವರಗೆ ಮನಿಶಾ ಅವರು 1 ಕೋಟಿ 75 ಲಕ್ಷ ರುಪಾಯಿಗಳಷ್ಟು ಹಣವನ್ನು ತಮ್ಮ ಖಾತೆಯಲ್ಲಿ ಜಮಾ ಮಾಡಿರುತ್ತಾರೆ. ಅವರ ಪ್ರಕಾರ ಬ್ಯಾಂಕಿನ ಪ್ರಧಾನ ಕಚೇರಿ ಮತ್ತು ಅದರ ಶಾಖೆಯು 3ನೆ ಪ್ರತಿವಾದಿಯೊಂದಿಗೆ ಸೇರಿಕೊಂಡು ತಾವು ಅಲ್ಲಿ ಖಾತೆ ತೆರೆಯಲು ತಮ್ಮ ಪತಿಯನ್ನು ಪುಸಲಾಯಿಸಿದವು. ಮತ್ತು 3ನೆ ಪ್ರತಿವಾದಿಯು ತಮ್ಮ ಪತಿಗೆ ಬಿರ್ಲಾ ಸನ್‌ ಮ್ಯೂಚುವಲ್‌ ಫಂಡಿನಲ್ಲಿ ಹೂಡಿಕೆ ಮಾಡಲು ಮನವೊಲಿಸಿದರು. ಅವರು 21.02.2018ರಂದು ಭಾರತಕ್ಕೆ ಮರಳಿದ ಬಳಿಕ ತಮ್ಮ ಪತಿಯ ಜೊತೆ ಬ್ಯಾಂಕಿಗೆ ಭೇಟಿ ನೀಡುತ್ತಾರೆ. ಪರಿಶೀಲನೆ ಬಳಿಕ ಅವರ ಖಾತೆಯಲ್ಲಿಯ ಹಣವನ್ನು ಬೇರೆಡೆ ವರ್ಗಾಯಿಸಿದ್ದು ಕಂಡುಬರುತ್ತದೆ. ಇದನ್ನು 3ನೆ ಪ್ರತಿವಾದಿ ತಮ್ಮ ಕೌಶಲ್ಯವನ್ನು ಬಳಸಿ ಸನ್‌ ಬಿರ್ಲಾ ರಸೀದಿಗಳನ್ನು ತೋರಿಸಿ ಮೋಸ ಮಾಡಿದ್ದಾರೆ ಎಂಬುದು ಅವರ ಆರೋಪ.

ಪ್ರತಿವಾದಿ ಬ್ಯಾಂಕು ತನ್ನ ಲಿಖಿತ ಹೇಳಿಕೆಯಲ್ಲಿ, ದೂರುದಾರರು ಮತ್ತು ಅವರ ಪತಿ ಹಾಗೂ 3ನೆ ಪ್ರತಿವಾದಿ ಒಬ್ಬರಿಗೊಬ್ಬರು ಪರಿಚಯ ಇರುವವರು. ದೂರುದಾರರ ಪತಿಯ ಅರಿವಿನೊಂದಿಗೇ 3ನೆ ಪ್ರತಿವಾದಿ ಹೂಡಿಕೆ ಮಾಡುವ ಉದ್ದೇಶದಿಂದಲೇ 2009ರಲ್ಲಿ ಖಾತೆಯನ್ನು ತೆರೆದಿರುವುದು. 2018ರಲ್ಲಿ ಅವರು 1.71 ಕೋಟಿಯಷ್ಟು ಹಣ ವರ್ಗಾವಣೆಯಾಗಿದೆ ಎಂದೂ ಮತ್ತು ಇದಕ್ಕೆ ಪ್ರತಿವಾದಿ 1 ಮತ್ತು 2 ನೆರವಾಗಿದ್ದಾರೆ ಎಂದು ದೂರುತ್ತಿದ್ದಾರೆ. ಅದು ಸತ್ಯವಲ್ಲ ಎಂದು ಹೇಳಿತ್ತು.

ತಮಗಾದ ಮೋಸದ ಕುರಿತು ದೂರುದಾರರ ಪತಿಯು ಜೇತ್ಪುರ ಪೊಲೀಸ್‌ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದರು. 18-11-2019ರಂದು ಎಫ್‌ಐಆರ್‌ ಕೂಡ ಆಗಿದೆ. ಅಲ್ಲಿಯ ದೂರಿನಲ್ಲಿ ಅವರು 3ನೆ ಪ್ರತಿವಾದಿಯು ತಮ್ಮ ಪತ್ನಿಯ ಸಹಿಯನ್ನು ಬ್ಯಾಂಕ್‌ ಫಾರ್ಮ್‌ನಲ್ಲಿ ನಕಲಿ ಮಾಡಿ ಫೋನ್‌ ನಂಬರನ್ನು ಬ್ಯಾಂಕಿನಲ್ಲಿ ಬದಲಿಸಿದ್ದಾನೆ ಎಂದು ದೂರಲಾಗಿತ್ತು.

ಇದನ್ನೂ ಓದಿ | ಗ್ರಾಹಕ ಜಾಗೃತಿ | ನ್ಯಾಯಾಧೀಶರು ಸಾಧ್ಯತೆ ಕಲ್ಪಿಸಿಕೊಂಡು ತೀರ್ಪು ನೀಡಬಾರದು

ಈ ಸಂಬಂಧದಲ್ಲಿ ರಾಷ್ಟ್ರೀಯ ಆಯೋಗವು ವಕೀಲರ ವಾದಗಳನ್ನು ಆಲಿಸಿತು. ಮತ್ತು ತನ್ನಲ್ಲಿದ್ದ ದಾಖಲೆಗಳನ್ನು ಗಮನಿಸಿತು. ಪ್ರಕರಣದ ಮುಖ್ಯ ಮುದ್ದೆ ಫೋರ್ಜರಿ, ಮೋಸ, ಒಳಸಂಚು ಮತ್ತು ವಿಶ್ವಾಸದ್ರೋಹ. ಈ ಮೊದಲು ಬೇರೊಂದು ಇಂಥದ್ದೇ ಪ್ರಕರಣದಲ್ಲಿ 17.12.2019ರಂದು ನೀಡಿರುವ ತೀರ್ಪಿನ ಭಾಗವನ್ನು ಆಯೋಗ ಇಲ್ಲಿ ಉಲ್ಲೇಖಿಸಿತು. ಫೋರ್ಜರಿ ಮತ್ತು ವಂಚನೆಯನ್ನು ಇಲ್ಲಿ ಆರೋಪಿಸಲಾಗಿದೆ ಮತ್ತು ಪ್ರತಿವಾದಿಗಳು ಅದನ್ನು ಅಲ್ಲಗಳೆದಿದ್ದಾರೆ. ಅದನ್ನು ನಿರ್ಧರಿಸಲು ಹಲವು ಅನ್ಯಮಾರ್ಗಗಳನ್ನು ಅನುಸರಿಸಬೇಕಾಗುತ್ತದೆ. 1986ರ ಗ್ರಾಹಕ ಕಾಯ್ದೆಯ ವ್ಯಾಪ್ತಿಯಲ್ಲಿ ಇದು ಬರುವುದಿಲ್ಲ. ಇದನ್ನು ಸೂಕ್ತವಾದ ಸಿವಿಲ್‌ ಕೋರ್ಟಿನಲ್ಲಿ ನಿರ್ಧರಿಸಬೇಕಾಗುತ್ತದೆ. ಆದ್ದರಿಂದ ದೂರುದಾರರು ಸಿವಿಲ್‌ ಕೋರ್ಟಿಗೆ ಹೋಗುವಂತೆ ಸಲಹೆ ನೀಡಲಾಗುವುದು ಎಂದು ತೀರ್ಪು ನೀಡಲಾಗಿತ್ತು.

ಪ್ರಸ್ತುತ ಪ್ರಕರಣದಲ್ಲಿ ದೂರುದಾರರು ಅನಿವಾಸಿ ಭಾರತೀಯರಾಗಿದ್ದು ಈಕ್ವೆಡಾರಿನಲ್ಲಿ ನೆಲೆಸುತ್ತಿದ್ದಾರೆ. ಅವರ ಪತಿಯು ಹೂಡಿಕೆದಾರರು. ಹೂಡಿಕೆ ಮಾಡುವ ಉದ್ದೇಶದಿಂದಲೇ ಬ್ಯಾಂಕಿನಲ್ಲಿ ಅವರು ಖಾತೆಯನ್ನು ತೆರೆದಿದ್ದು. ಇಂದು ಬ್ಯಾಂಕಿನ ವ್ಯವಹಾರವನ್ನು ನಡೆಸಲು ಬ್ಯಾಂಕಿಗೆ ಪ್ರತ್ಯಕ್ಷವಾಗಿಯೇ ಹೋಗಬೇಕಾಗಿಲ್ಲ. ಹಲವು ಆಧುನಿಕ ತಂತ್ರಜ್ಞಾನಗಳಿವೆ. ದೂರುದಾರರು ತಾವು ಬ್ಯಾಂಕ್‌ ಖಾತೆಯನ್ನು ತೆರೆದ ಬಳಿಕ 2009ರಿಂದ 2018ರ ವರೆಗೆ ತಮ್ಮ ಖಾತೆಯ ವ್ಯವಹಾರಗಳನ್ನು ನೋಡಿಯೇ ಇಲ್ಲವೆ ಎಂಬುದು ಪ್ರಶ್ನೆಯಾಗಿಯೇ ಉಳಿಯುತ್ತದೆ. ಅಲ್ಲದೆ 3ನೆ ಪ್ರತಿವಾದಿಯು ದೂರುದಾರರ ಪತಿಯ ಪರಿಚಿತರೇ ಆಗಿದ್ದಾರೆ. ವಿವಿಧ ಫಂಡುಗಳಲ್ಲಿ ಹೂಡಿಕೆ ಮಾಡುವುದಕ್ಕಾಗಿಯೇ ಖಾತೆಯನ್ನು ತೆರೆದದ್ದು. ಬ್ಯಾಂಕಿನ ವ್ಯವಹಾರದ ಪಟ್ಟಿಯನ್ನು ನೋಡಿದಾಗ ಎಲ್ಲವೂ ಆರ್ಟಿಜಿಎಸ್‌ ಮೂಲಕವೇ ನಡೆದಿರುವುದು ತಿಳಿಯುತ್ತದೆ. ವಿದೇಶದಲ್ಲಿದ್ದರೂ ದೂರುದಾರರು ತಮ್ಮ ಖಾತೆಯನ್ನು ಪರಿಶೀಲಿಸದೇ ಇದ್ದಾರೆ ಎನ್ನುವುದು ಆಶ್ಚರ್ಯದ ವಿಷಯವೇ ಆಗಿದೆ. ಇದರಲ್ಲಿರುವ ಮೊತ್ತ ಬಹಳ ದೊಡ್ಡದು. ಇದಕ್ಕೆ ಐಟಿ ರಿಟರ್ನ್ಸ್‌ ಸಲ್ಲಿಸಿದ್ದಾರೆಯೋ ಇಲ್ಲವೋ ಗೊತ್ತಿಲ್ಲ. ಈ ವಿಷಯದಲ್ಲಿ ವಿವರವಾದ ತನಿಖೆ ನಡೆಯಬೇಕಾಗಿದೆ. ಫೋರ್ಜರಿಯ ವಿಷಯ ಇರುವುದರಿಂದ ಬಹುಶಃ ಪೊಲೀಸರು ಇದರ ತನಿಖೆ ನಡೆಸಬಹುದು. ಈಗಾಗಲೇ ಎಫ್‌ಐಆರ್‌ ಕೂಡ ಆಗಿದೆ. ಇದರ ತನಿಖೆ ನಡೆಸಲು ಆಯೋಗ ಸೂಕ್ತ ವೇದಿಕೆಯಲ್ಲ. ಹೀಗಿರುವಾಗ ಪ್ರತಿವಾದಿ 1 ಮತ್ತು 2 ಬ್ಯಾಂಕ್‌ ಆಗಿದ್ದು ಅದರ ಸೇವಾನ್ಯೂನತೆಯ ವಿಷಯವನ್ನು ತೀರ್ಮಾನಿಸಲು ಇದು ಸೂಕ್ತವಾದ ಹಂತವಲ್ಲ. ಪೊಲೀಸ್‌ ತನಿಖೆಯಲ್ಲಿ ಬ್ಯಾಂಕಿನ ಅಧಿಕಾರಿಗಳು 3ನೆ ಪ್ರತಿವಾದಿ ಜೊತೆ ಸೇರಿ ವಿದ್ರೋಹ ಮಾಡಿದ್ದು ಸಾಬೀತಾದರೆ ಆಗ ದೂರುದಾರರು ಮತ್ತೊಮ್ಮೆ ತಮ್ಮಲ್ಲಿಗೆ ಬರಬಹುದು. ಕಾರಣ ದೂರುದಾರರು ಸಿವಿಲ್‌ ಕೋರ್ಟಿಗೆ ಹೋಗುವ ಸ್ವಾತಂತ್ರ್ಯವನ್ನು ಹೊಂದಿದ್ದಾರೆ. ಅಲ್ಲದೆ ನಾವು ಕೂಡ ಗುಜರಾತದ ಡಿಜಿಪಿಯವರಿಗೆ ದೂರುದಾರರ ಎಫ್‌ಐಆರ್‌ ತನಿಖೆಯನ್ನು 6 ತಿಂಗಳೊಳಗೆ ಮುಗಿಸುವಂತೆ ಮನವಿ ಮಾಡುತ್ತೇವೆ. ಸದ್ಯಕ್ಕೆ ಈ ದೂರನ್ನು ವಿಲೆ ಮಾಡುತ್ತಿರುವಾಗಿ ಆದೇಶ ನೀಡಿತು.

ಇದನ್ನೂ ಓದಿ | ಗ್ರಾಹಕ ಜಾಗೃತಿ | ವಾಣಿಜ್ಯ ವ್ಯವಹಾರ ಗ್ರಾಹಕ ರಕ್ಷಣೆ ಕಾಯ್ದೆಯ ವ್ಯಾಪ್ತಿಗೆ ಬರುವುದಿಲ್ಲ

ತೀರ್ಪು- 03 Jan 2022

(ಅಂಕಣಕಾರರು ಹಿರಿಯ ಪತ್ರಕರ್ತರು. ಹಲವು ವರ್ಷಗಳಿಂದ ಗ್ರಾಹಕ ಜಾಗೃತಿ ಮೂಡಿಸುತ್ತಿದ್ದಾರೆ)

Exit mobile version