–ಪ್ರೊ. ವಿದ್ವಾನ್ ನವೀನಶಾಸ್ತ್ರಿ ರಾ. ಪುರಾಣಿಕ
(ಲೇಖಕರು, ಸಂಸ್ಕೃತ ಉಪನ್ಯಾಸಕರು, ಸಂಸ್ಕೃತಿ ಚಿಂತಕರು ಹಾಗೂ ಜ್ಯೋತಿಷಿಗಳು)
ಆಷಾಢ ಮಾಸ ಶುಕ್ಲ ಪಕ್ಷದಲ್ಲಿ ಬರುವ “ಕಡ್ಲಿಗರ ಹುಣ್ಣಿಮೆ”ಯನ್ನು ನಾವು ಆಚರಿಸ್ಪಡುವ, ಶ್ರೇಷ್ಠವಾದ ಪರ್ವವೆಂದರೆ ಅದು “ಗುರು ಪೂರ್ಣಿಮೆ”.
ಈ ದಿನ ನಾವು ನಂಬಿದ ನಮ್ಮಲ್ಲಿಯ ಅಂಧಕಾರವನ್ನು ತೊಲಗಿಸಿ ಜ್ಞಾನ ಸಾಕ್ಷಾತ್ಕಾರ ಮಾಡಿಸಿದ ನಮ್ಮ ಗುರುಗಳಿಗೆ ವಂದನೆ (Guru Purnima 2024) ಸಲ್ಲಿಸುವ ದಿನ. ಆ ಗುರುವನ್ನು ನೆನೆದು ಅವರ ಮಹತ್ವವನ್ನು ಸಾರುವ ದಿನ. ಗುರುಗಳು ನಮಗೆ ನಮ್ಮ ಜೀವನಕ್ಕೆ ಸರಿಯಾದ ಮಾರ್ಗ ಸೂಚಿಸುವ, ನಮ್ಮ ಕೈ ಹಿಡಿದು ನಡೆಸುವ ದಿಕ್ಸೂಚಿ,ದಾರಿದೀಪ. ಪರಮಾತ್ಮನ, ಪರಮಾರ್ಥದ ಅರಿವನ್ನು ತಿಳಿಯಲು ನಮ್ಮೊಳಗಿರುವ ನಮ್ಮ ಆತ್ಮಜ್ಯೋತಿಯನ್ನು ಜ್ಞಾನವೆಂಬ ತೈಲ ಹಾಕಿ ಬೆಳುಗುವಂತೆ ಮಾಡಿ ಜಾಗೃತಿಗೊಳಿಸುವ ಮಹತ್ವದ ವ್ಯಕ್ತಿ. ಆಧ್ಯಾತ್ಮದ ಜತೆಗೆ ಲೌಕಿಕ ಪ್ರಪಂಚದ ಹಾದಿಯಲ್ಲಿ ನಮ್ಮನ್ನು ನಡೆಸಿ, ನಮ್ಮ ಗುರಿ ಮುಟ್ಟವ ತನಕ ಸಹಾಯ ಮಾಡುವವನೇ “ ಶ್ರೇಷ್ಠಗುರು”.
ಅಲೆದು ಅಲೆದು ಹುಡಕಿದರೆ ಸಿಗುವವನಲ್ಲ ಗುರು, ನಮ್ಮನ್ನು ಹುಡುಕಿ, ನಾವು ಗುರುವನ್ನು ಕಾಣುವ ಮಟ್ಟಿಗೆ ಸಾಧನೆ ಮಾಡಿದ್ದರೆ ತಾನಾಗೇ ನಮ್ಮ ಬಳಿಗೆ ಬರುವವನು. ನಾವುಗಳೆಲ್ಲರೂ ಆ ಗುರುವಿನ ಮುಖಾಂತರವೇ ಪರಮಾತ್ಮನ ಅರಿವು, ಪ್ರಪಂಚದ ಅರಿವು, ಅರಿಯಬೇಕಾಗಿರುವುದರಿಂದ, ನಾವು ಪ್ರತಿ ಆಷಾಢ ಮಾಸದ ಈ ಪೌರ್ಣಿಮೆಯಂದು ಮಾತ್ರ ಗುರುವನ್ನು ಪೂಜಿಸದೆ.. ಅನು ದಿನ, ಅನು ಕ್ಷಣ, ಗುರುವನ್ನು ನಮ್ಮ ಅಂತರಂಗದಲ್ಲೇ ಪ್ರತಿಷ್ಠಾಪಿಸಿ ಪೂಜಿಸುತ್ತಾ ನಮ್ಮನ್ನು ನಾವು ಸಮರ್ಪಿಸಿಕೊಳ್ಳಬೇಕು. ಹೀಗೆ ನನ್ನದೇನೂ ಇಲ್ಲ ಎಂದು ಅಂತಹ ಗುರುವಿಗೆ ಶರಣಾದಾಗ ಮಾತ್ರ ನಮ್ಮ ಗುರಿ ಮುಟ್ಟುವ ಪ್ರಯತ್ನ ಫಲಪ್ರದವಾಗುತ್ತದೆ.
ಉಪನಿಷತ್ತಿನಲ್ಲಿ ಗುರು
ಉಪನಿಷತ್ತಿನಲ್ಲಿ ಗುರು ಎಂಬುದನ್ನು ಈ ರೀತಿಯಾಗಿ ವಿವರಿಸಿದ್ದಾರೆ. “ಗು” ಎಂದರೆ ಅಂಧಕಾರವೆಂದು “ರು” ಎಂದರೆ ದೂರೀಕರಿಸುವ ಅಥವಾ ಅಜ್ಞಾನದ ಅಂಧಕಾರವನ್ನು ನಿವಾರಿಸಿ ಜ್ಞಾನದ ಹಾದಿಯ ಕಡೆಗೆ ನಡೆಸುವ ಎಂಬ ಅರ್ಥವಾಗುತ್ತದೆ. ಸಂಸ್ಕೃತದಲ್ಲಿ “ಗುರು” ಪದಕ್ಕೆ ಭಾರವಾದ ಎನ್ನುವ ಅರ್ಥವೂ ಇದೆಯೆನ್ನುತ್ತಾರೆ. ಯಾರು ಜ್ಞಾನದಿಂದ ಭಾರವಾಗಿರುವನೋ ಅವನೇ ನಿಜವಾದ ಗುರು ಎಂದು ಅರ್ಥೈಸಬಹುದೇನೋ ಎಂಬ ಅಭಿಪ್ರಾಯ.
ಆದಿಗುರು ಶ್ರೀ ಶಂಕರಭಗವತ್ಪಾದಚಾರ್ಯರು ಗುರು ಮಹಿಮೆ ಕುರಿತು ಹೀಗೆ ಸ್ತೋತ್ರವನ್ನು ಹೇಳಿದ್ದಾರೆ:
ಗುರುರ್ಬ್ರಹ್ಮಾ ಗುರುರ್ವಿಷ್ಣುಃ | ಗುರುರ್ದೇವೋ ಮಹೇಶ್ವರಃ |
ಗುರುಸ್ಸಾಕ್ಶಾತ್ ಪರಬ್ರಹ್ಮಃ | ತಸ್ಮೈ ಶ್ರೀ ಗುರವೇ ನಮಃ ||
ಗುರುವು ತ್ರೀಮೂರ್ತಿ ಸ್ವರೂಪಿಯಾಗಿದ್ದು, ಅದಕ್ಕೂ ಮಿಗಿಲಾದ ಪರಬ್ರಹ್ಮ ತತ್ತ್ವವೇ ಆಗಿದ್ದಾನೆ. ಅಂಥ ಗುರುವಿಗೆ ಪ್ರಣಾಮಗಳು ಎಂಬ ಅರ್ಥವಾಗುತ್ತದೆ. ಸ್ಕಂದ ಪುರಾಣದ “ಗುರುಗೀತೆ”ಯಲ್ಲಿ ಗುರುವನ್ನು ನಂದಾದೀಪದಂತೆ ಬೆಳಗುವ ಜ್ಯೋತಿಯಂತೆ ಎಂದು ಗುರುವಿನ ಹಿರಿಮೆಯನ್ನು ವಿಸ್ತಾರವಾಗಿ ತಿಳಿಸಲ್ಪಟಿದೆ :
ಅಖಂಡ ಮಂಡಲಾಕಾರಂ ವ್ಯಾಪ್ತಂ ಯೇನಾ ಚರಾಚರಂ।
ತತ್ಪದಂ ದರ್ಶಿತಂ ಯೇನಾ ತಸ್ಮೈ ಶ್ರೀಗುರವೇ ನಮಃ॥
ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ।
ಚಕ್ಷುರುನ್ಮೀಲಿತಂ ಯೇನ
ತಸ್ಮೈ ಶ್ರೀ ಗುರವೇ ನಮಃ॥
ಅಂದರೆ ನಮ್ಮಲ್ಲಿರುವ ಅಜ್ಞಾನವೆಂಬ ಕಣ್ಣಿಗೆ ಅಂಟಿದ ಅಂಧಕಾರವನ್ನು ಜ್ಞಾನವೆಂಬ ಕಡ್ಡಿಯಿಂದ ಗುಣಪಡಿಸಿ, ಶಿಷ್ಯನ ಏಳ್ಗಿಗೆ ಬೇಕಾದ ಸೋಪಾನವನ್ನು ಹತ್ತಿಸುವ ಹಾಗೂ ಸಾಧನೆಯ ಮಾರ್ಗದರ್ಶನ ಮಾಡುವ ಶ್ರೀ ಗುರುವಿಗೆ ವಂದನೆಗಳು.
ಹೀಗೆ ನಮ್ಮ ಪರಂಪರೆಯಲ್ಲಿ ಅನಾದಿ ಕಾಲದಿಂದಲೂ ಗುರುವಿನ ಮಹತ್ವವನ್ನು ಸಾರುತ್ತಾ ಬಂದಿದ್ದಾರೆ..
ನ ಗುರೋರಧಿಕಂ ತತ್ವಂ, ನ ಗುರೋರಧಿಕಂ ತಪಃ।
ತತ್ವ ಜ್ಞಾನಾತ್ ಪರಂ ನಾಸ್ತಿ, ತಸ್ಮೈ ಶ್ರೀ ಗುರವೇ ನಮಃ॥
ಅಂದರೆ ಗುರುವಿಗಿಂತ ಮೀರಿದ ತತ್ವ, ತಪಸ್ಸು ಯಾವುದೂ ಇಲ್ಲ. ಜ್ಞಾನವೆಂಬ ದಾರಿದೀಪವಾಗಿರುವ ಶ್ರೀ ಗುರುವೇ ನಿನಗೆ ವಂದನೆಗಳು ಎಂದು ಹೇಳಿದ್ದಾರೆ. ಶಾಶ್ವತವಾದ ಆನಂದವನ್ನು ಪಡೆಯುವುದು ಆ ಸದ್ಗುರುವಿನಿಂದಲೆ ಮಾತ್ರವೇ ಸಾಧ್ಯ ಎಂದು ಶ್ರೀ ಶಂಕರಾಚಾರ್ಯರು ತಮ್ಮ “ಗುರ್ವಷ್ಟಕಮ್” ಎಂಬ ಸ್ತೂತ್ರದಲ್ಲಿ ಹೀಗೆ ಹೇಳಿದ್ದಾರೆ :
ಶರೀರಂ ಸುರೂಪಂ ತಥಾ ವಾ ಕಲತ್ರಂ ಯಶಶ್ಚಾರು ಚಿತ್ರಂ ಧನಂ ಮೇರುತುಲ್ಯಮ್ ।
ಕಲತ್ರಂ ಧನಂ ಪುತ್ರಪೌತ್ರಾದಿ ಸರ್ವಂಗೃಹಂ ಬಾಂಧವಾಃ ಸರ್ವಮೇತದ್ಧಿ ಜಾತಮ್।।
ನಮಗೆ ಸುಂದರ ಶರೀರ, ಅಪಾರ ಅಂತಸ್ತು, ಕೀರ್ತಿ, ಸಂಸಾರ ಎಲ್ಲವೂ ಇದ್ದರೂ ಗುರುವಿನ ಚರಣಗಳಲ್ಲಿ ಭಕ್ತಿ, ಶ್ರದ್ಧೆ ಇಲ್ಲದವನಿಗೆ ಮೋಕ್ಷವಿಲ್ಲ ಎಂದು.ಏನೆಲ್ಲ ಸಾಧಿಸಿದ್ದರೂ, ತ್ಯಜಿಸಿದ್ದರೂ,ಗುರುವಿನ ಕರುಣೆಯಿಲ್ಲದೆ ಎಲ್ಲವೂ ವ್ಯರ್ಥ ಎಂದು ತಿಳಿಯುತ್ತದೆ.ಗುರುವಿನ ಪಾದಗಳಲ್ಲಿ ಮನಸ್ಸನ್ನು ನಿಲ್ಲಿಸದಿದ್ದರೆ ನಮ್ಮ ಸಾಧನೆ ಕಷ್ಟಸಾದ್ಯ ಎನ್ನುತ್ತಾ ಗುರುವಿನ ಮಹತ್ವನ್ನು ವಿವರಿಸುತ್ತಾರೆ ಆಚಾರ್ಯರು.
ನಮ್ಮ ಈ ಸನಾತನ ಪರಂಪರೆಯಲ್ಲಿ ಈಗಿರುವ “ಗುರುವಿನ ಗುರುವಿಗೆ ಪರಮಗುರು”ಎಂದೂ, “ಪರಮ ಗುರುವಿನ ಗುರುವನ್ನು ಪರಾಪರ ಗುರು”ಎಂದೂ,”ಪರಾಪರ ಗುರುವಿನ ಗುರುವನ್ನು ಪರಮೇಷ್ಠಿ ಗುರು”ಎಂದೂ ಗುರುತಿಸಲ್ಪಡುತ್ತಾರೆ. “ಗುರು ಪೂರ್ಣಿಮೆ’ಯಂದು ಸಮಸ್ತ ಗುರು ಪರಂಪರೆಯೇ ಪೂಜಿಸಲ್ಪಡುತ್ತದೆ. ವೇದದಲ್ಲಿನ ಬ್ರಹ್ಮ ತತ್ವವನ್ನು ಅರಿತಿದ್ದ ವಿಷ್ಣುವಿನ ಅವತಾರ ವಂದೇ ಕರೆಯಲ್ಪಡುವ ಶ್ರೀ ವೇದವ್ಯಾಸರನ್ನ ನಾವು ವಿಶೇಷವಾಗಿ ನಮ್ಮ ಗುರು ಪರಂಪರೆಯ ಜತೆಗೇ “ಗುರು ಪೂರ್ಣಿಮೆ”ಯಂದು ಪೂಜಿಸುತ್ತೇವೆ. ಲೋಕಗುರು, ಪರಮಗುರು ಎಂದೇ ಪ್ರಖ್ಯಾತರಾಗಿದ್ದರು ಶ್ರೀ ವೇದವ್ಯಾಸರು. ವೇದಗಳನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಿದ್ದರಿಂದ ಇವರನ್ನು ವೇದವ್ಯಾಸರೆಂದು ಕರೆದರು. ಇಡೀ ಮಾನವ ಕುಲಕ್ಕೇ ಒಳಿತಾಗಲೆಂದು ಮತ್ತು ವೇದಗಳ ರಹಸ್ಯ ಸಾಮಾನ್ಯರೂ ಅರಿಯುವಂತಾಗ ಬೇಕೆಂದು ಅವರು ನಮಗಾಗಿ “ಮಹಾಭಾರತ”ವೆಂಬ ಲಕ್ಷ್ಯ ಶ್ಲೋಕಗಳಿರುವ “ಪಂಚಮವೇದ”ವನ್ನು ರಚಿಸಿ ಕೊಟ್ಟರು. ಜತೆಗೇ ಭಾಗವತವನ್ನೂ ಮತ್ತು ಹದಿನೆಂಟು ಪುರಾಣಗಳನ್ನೂ ರಚಿಸಿಕೊಟ್ಟರು. ಇಂತಹ ಪುಣ್ಯಾತ್ಮರು ವೇದವ್ಯಾಸರು. ಆದ್ದರಿಂದಲೇ ಅವರನ್ನು ಲೋಕಗುರುವೆಂದು ಕರೆದು ಶ್ರದ್ಧೆ ಹಾಗೂ ಭಕ್ತಿಯಿಂದ ಗುರು ಪೂರ್ಣಿಮೆಯಂದು ಪೂಜಿಸುತ್ತೇವೆ. “ಗುರು” ಬೇರೆ ಬೇರೆ ಗುರುಗಳು ಭೌತಿಕ ಶರೀರದಿಂದ ಅಂದರೆ ಹೊರಗಿನಿಂದ ನೋಡಲು ವ್ಯತ್ಯಾಸವಾಗಿದ್ದರೂ ಅವರೆಲ್ಲರ ಒಳಗಿನ “ಗುರು ತತ್ವ” ಮಾತ್ರ ಒಂದೇ ಆಗಿರುತ್ತದೆ. ಅವೆರೆಲ್ಲರೂ ಹೊರ ಹೊಮ್ಮಿಸುವ, ಪಸರಿಸುವ ಲಹರಿಗಳು ತುಂಬ ಚೈತನ್ಯದಾಯಕವಾಗಿರುತ್ತದೆ.
ಗುರುವಿಗೆ ಯಾವಾಗಲೂ ಶಿಷ್ಯನ ಉನ್ನತಿಯ, ಬೆಳವಣಿಗೆಯ ಚಿಂತನೆಯೇ ಆಗಿರುತ್ತದೆ. ಗುರು ತನ್ನ ಶಿಷ್ಯನನ್ನು ತಾನೇ ಹುಡುಕಿ ಕೊಳ್ಳುತ್ತಾನೆ. ಶಿಷ್ಯ ಸಿಕ್ಕಿದ ಕ್ಷಣವೇ ಗುರು ಶಿಷ್ಯನ ಏಳಿಗೆಯ “ ಸಿದ್ಧ ಸಂಕಲ್ಪ” ಮಾಡಿಕೊಂಡು ಬಿಟ್ಟಿರುತ್ತಾನೆ. ನಮ್ಮ ಉಪನಿಷತ್ತು, ಪುರಾಣಗಳು, ವೇದ, ಶಾಸ್ತ್ರಗಳೆಲ್ಲದರಲ್ಲೂ ಮತ್ತು ವಿಶೇಷವಾಗಿ ಭಕ್ತಿ ಮಾರ್ಗದಲ್ಲೂ ಗುರುವಿಗೆ ಅತ್ಯಂತ ಮಹತ್ವದ ಸ್ಥಾನವಿದೆ. ಭಗವದ್ಗೀತೆಯಲ್ಲಿ ಶ್ರೀಕೃಷ್ಣ – ಅರ್ಜುನರ ಸಂಬಂಧ ಮತ್ತು ರಾಮಾಯಣದಲ್ಲಿ ಶ್ರೀರಾಮ – ಹನುಮರ ಸಂಬಂಧಗಳು ,ಗುರುಗೋವಿಂದ ಭಟ್ಟರು-ಸಂತ ಶಿಶುನಾಳ ಶರೀಫ , ರಾಮಕೃಷ್ಣ ಪರಮಹಂಸರು- ಸ್ವಾಮಿ ವಿವೇಕಾನಂದರು,ಬ್ರಹ್ಮಚೈತನ್ಯ ಗೊಂದಾವಲಿಕರ ಮಹಾರಾಜ-ಬ್ರಹ್ಮಾನಂದ ಮಹಾರಾಜ… ಇವರೆಲ್ಲ ಗುರು – ಶಿಷ್ಯರ ಸಂಬಂಧಕ್ಕೆ ಅತಿ ಸೂಕ್ತವಾದ ನಿದರ್ಶನಗಳು.
ಗುರುವಿನ ಬಗೆಗೆ ವರ್ಣಿಸುತ್ತಾ ಹೊರಟರೆ ಅದು ಸಾಗರದಷ್ಟು ಆಳ, ಅಗಲ. ಆಗಸದಷ್ಟು ವಿಶಾಲ, ವಿಸ್ತಾರ. ಗುರು ಎನ್ನುವುದು ಒಬ್ಬ ವ್ಯಕ್ತಿ ಎಂದು ನೋಡದೆ ನಾವು ಒಂದು ಅದ್ಬುತ ಶಕ್ತಿ ಎಂದು ಅರ್ಥೈಸಿ ತಿಳಿದುಕೊಂಡರೆ ನಮಗೆ ಗುರುವಿನ ಮಹತ್ವ ಇನ್ನೂ ಹೆಚ್ಚು ಆಳವಾಗಿ ತಿಳಿಯುತ್ತದೆ….
ಇದನ್ನೂ ಓದಿ: Guru Purnima 2024: ಭಾರತದ ಮಹೋನ್ನತ ಕ್ರೀಡಾ ತಾರೆಗಳನ್ನು ಸೃಷ್ಟಿಸಿದ 6 ‘ಗುರು’ಗಳಿವರು