Site icon Vistara News

Brand story | ಕಾಲೇಜು ಡ್ರಾಪ್‌ಔಟ್‌ ಹುಡುಗ ಡಿಮಾರ್ಟ್‌ ಸ್ಟೋರ್ ತೆರೆದು ರಿಟೇಲ್‌ ಕಿಂಗ್‌ ಆಗಿದ್ದು ಹೇಗೆ?!

DMart

ಡಿಮಾರ್ಟ್‌ ಸ್ಟೋರ್!‌ ಹೌದು, ನಮ್ಮಲ್ಲಿ ಬಹುತೇಕ ಮಂದಿ ಡಿಮಾರ್ಟ್‌ ಸ್ಟೋರ್‌ಗೆ ಭೇಟಿ ನೀಡಿದ್ದೇವೆ. ಭಾರತದಲ್ಲಿ ಈಗ ಮನೆ ಮಾತಾಗಿರುವ ಬ್ರಾಂಡ್. ಮಧ್ಯಮ ವರ್ಗದ ಆದಾಯವಿರುವ ಜನತೆಯ ಅಚ್ಚುಮೆಚ್ಚಿನ ಸ್ಟೋರ್‌ ಆಗಿ ಹೊರಹೊಮ್ಮಿದೆ ಡಿಮಾರ್ಟ್.‌ ವೀಕೆಂಡ್‌ ಬಂತೆಂದರೆ ಸಾಕು, ಜನ ಡಿಮಾರ್ಟ್‌ಗೆ ಲಗ್ಗೆ ಇಡುತ್ತಾರೆ. ಮನೆಗೆ ಬೇಕಾಗುವ ಬೇಳೆ ಕಾಳು, ಬಟ್ಟೆಬರೆ, ಪಾತ್ರೆ ಪಗಡಿಗಳನ್ನು ಖರೀದಿಸಲು ಡಿಮಾರ್ಟ್‌ಗೆ ಹೋಗಿ ಶಾಪಿಂಗ್‌ ಮಾಡುತ್ತಾರೆ. ಡಿಮಾರ್ಟ್‌ನಲ್ಲಿ ಕಡಿಮೆ ಬೆಲೆಗೆ ಹೆಚ್ಚು ವಸ್ತುಗಳನ್ನು ಖರೀದಿಸಬಹುದು. ಬಗೆಬಗೆಯ ಆಫರ್‌ಗಳು ಅಲ್ಲಿ ಇರುತ್ತವೆ ಎಂಬುದು ಗ್ರಾಹಕರ ನಂಬಿಕೆ.

ಕಳೆದ ಕೆಲ ವರ್ಷಗಳಿಂದೀಚೆಗೆ ಡಿಮಾರ್ಟ್‌ ಬೆಳೆದಿರುವ ಹಾದಿ ಅನೂಹ್ಯ. 20 ವರ್ಷಗಳ ಹಿಂದೆ ಕೇವಲ ಒಂದು ಸ್ಟೋರ್‌ನೊಂದಿಗೆ ಮುಂಬಯಿನಲ್ಲಿ ಸ್ಥಾಪನೆಯಾದ ಡಿಮಾರ್ಟ್‌, ಈಗ ೨.೯೦ ಲಕ್ಷ ಕೋಟಿ ರೂ.ಗಳ ಬ್ರಾಂಡ್ ಆಗಿ ಹೊರಹೊಮ್ಮಿದೆ! ಈ ಡಿಮಾರ್ಟ್‌ ಸಾಮ್ರಾಜ್ಯದ ಸ್ಥಾಪಕ ರಾಧಾಕಿಶನ್‌ ದಮಾನಿ ಒಬ್ಬ ಕಾಲೇಜ್‌ ಡ್ರಾಪ್‌ ಔಟ್‌! ಕಾಲೇಜು ವಿದ್ಯಾಭ್ಯಾಸವನ್ನು ಪೂರ್ಣಗೊಳಿಸದಿದ್ದರೂ, ಉದ್ದಿಮೆ ವಲಯದಲ್ಲಿ ಭಾರಿ ಯಶಸ್ಸು, ಸಂಪತ್ತು ಗಳಿಸಿದ ಬಿಲಿಯನೇರ್‌ ಆಗಿ ಬೆಳೆದವರು ದಮಾನಿ. ಭಾರತದ ರಿಟೇಲ್‌ ವಲಯದ ಕಿಂಗ್‌ ಎಂದೇ ಈಗ ಜನಪ್ರಿಯರಾಗಿದ್ದಾರೆ. ದಲಾಲ್‌ ಸ್ಟ್ರೀಟ್‌ನಲ್ಲಿ ಷೇರು ವ್ಯವಹಾರ ಮಾಡುತ್ತಿದ್ದ ದಮಾನಿ ಅವರು ಹೂಡಿಕೆದಾರರಾಗಿ, ರಿಟೇಲ್‌ ಉದ್ಯಮಿಯಾಗಿ ಭಾರತದ ೭ನೇ ಸಿರಿವಂತರಾದರು.

೨೮೪ ರಿಂದ ೧,೫೦೦ಕ್ಕೆ ಸ್ಟೋರ್‌ಗಳನ್ನು ಕಟ್ಟುವ ಗುರಿ

ಭಾರತದಲ್ಲಿ ಡಿಮಾರ್ಟ್‌ ಸೂಪರ್‌ ಮಾರ್ಕೆಟ್‌ ಸರಣಿಯ ಸ್ಟೋರ್‌ಗಳ (DMart plan) ಸಂಖ್ಯೆ ಐದು ಪಟ್ಟು ವೃದ್ಧಿಸಲಿದೆ. ಡಿಮಾರ್ಟ್‌ ಸ್ಟೋರ್‌ಗಳನ್ನು ನಡೆಸುತ್ತಿರುವ ಅವೆನ್ಯೂ ಸೂಪರ್‌ಮಾರ್ಟ್ಸ್ ಲಿಮಿಟೆಡ್‌, ಭಾರತದ ನಾಲ್ಕನೇ ಅತಿ ದೊಡ್ಡ ದಿನಸಿ ಮಳಿಗೆಗಳ ಬ್ರ್ಯಾಂಡ್‌ ಆಗಿ ಹೊರಹೊಮ್ಮಿದೆ. ಡಿಮಾರ್ಟ್‌ ಸೂಪರ್‌ ಮಾರ್ಕೆಟ್‌ಗಳ ಸಂಖ್ಯೆಯನ್ನು ೨8೪ರಿಂದ ೧,೫೦೦ಕ್ಕೆ ಏರಿಸಲು ಸಿದ್ಧತೆ ನಡೆಯುತ್ತಿದೆ ಎಂದು ಸಿಇಒ ನೆವಿಲ್ಲೆ ನೊರೊನ್ಹಾ ತಿಳಿಸಿರುವುದು ಇತ್ತೀಚಿನ ಬೆಳವಣಿಗೆ.

ಉದ್ಯಮಿ ರಾಧಾಕಿಶನ್‌ ದಮಾನಿ ಅವರು ೨೦೦೨ರಲ್ಲಿ ಮೊದಲ ಡಿಮಾರ್ಟ್‌ ಸ್ಟೋರ್‌ ತೆರೆದಿದ್ದರು. ಈಗ ಮಹಾರಾಷ್ಟ್ರ, ಗುಜರಾತ್‌, ಕರ್ನಾಟಕ, ಆಂಧ್ರಪ್ರದೇಶ, ಮಧ್ಯಪ್ರದೇಶ, ತೆಲಂಗಾಣ, ತಮಿಳುನಾಡು, ಪಂಜಾಬ್‌, ಛತ್ತೀಸ್‌ ಗಢ, ಎನ್‌ಸಿಆರ್‌, ರಾಜಸ್ಥಾನದಲ್ಲಿ ಡಿಮಾರ್ಟ್‌ ಸ್ಟೋರ್‌ಗಳಿವೆ. ಡಿಮಾರ್ಟ್‌ ಅನ್ನು ಆರಂಭಿಸಿದಾಗ ದಮಾನಿ ಅವರಿಗೆ ೪೫ ವರ್ಷ ವಯಸ್ಸು.

ಡಿಮಾರ್ಟ್‌ ಸ್ಥಾಪನೆಗೆ ಮುನ್ನ ಷೇರು ವ್ಯವಹಾರದಲ್ಲಿ ಪಳಗಿದ್ದ ದಮಾನಿ!

ರಾಧಾಕಿಶನ್‌ ದಮಾನಿ ಅವರಿಗೆ ಆರ್‌.ಕೆ ದಮಾನಿ ಅಥವಾ ” ಆರ್.ಡಿʼ ಎಂಬ ಹೆಸರು ದಲಾಲ್‌ ಸ್ಟ್ರೀಟ್‌ನಲ್ಲಿದೆ. ಸಣ್ಣ ಕೆಳಮಧ್ಯಮ ವರ್ಗದ ಮಾರ್ವಾಡಿ ಕುಟುಂಬದಲ್ಲಿ ೧೯೫೪ರ ಮಾರ್ಚ್‌ ೧೫ರಂದು ಮುಂಬಯಿನಲ್ಲಿ ಜನಿಸಿದ್ದ ದಮಾನಿ ಅವರು ಭಾರತದ ಟಾಪ್‌ ಶ್ರೀಮಂತರಲ್ಲಿ ಒಬ್ಬರಾಗಿ ಹೊರಹೊಮ್ಮಿರುವುದು ಸಾಧಾರಣ ಮಾತಲ್ಲ. ೨೦೦೨ರಲ್ಲಿ ಅವರು ಅವೆನ್ಯೂ ಸೂಪರ್‌ಮಾರ್ಟ್ಸ್‌ ಸಂಸ್ಥೆಯನ್ನು ಸ್ಥಾಪಿಸಿದರು. ಇದು ಭಾರತದಾದ್ಯಂತ ಡಿಮಾರ್ಟ್‌ ಸ್ಟೋರ್‌ಗಳನ್ನು ನಡೆಸುತ್ತಿದೆ. ದಮಾನಿ ಕುಟುಂಬವು ಅವೆನ್ಯೂ ಸೂಪರ್‌ಮಾರ್ಟ್ಸ್‌ನಲ್ಲಿ ೭೫% ಷೇರುಗಳನ್ನು ಹೊಂದಿದೆ. ದಮಾನಿ ಅವರು ಇಂಡಿಯಾ ಸಿಮೆಂಟ್ಸ್‌, ವಿಎಸ್‌ಟಿ ಇಂಡಸ್ಟ್ರೀಸ್‌, ಮಂಗಳಂ ಆರ್ಗಾನಿಕ್ಸ್‌, ಸ್ಪೆನ್ಸರ್ಸ್‌ ರಿಟೇಲ್‌, ಅಸ್ತ್ರ ಮೈಕ್ರೊವೇವ್‌ ಪ್ರಾಡಕ್ಟ್ಸ್‌ ಇತ್ಯಾದಿ ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದಾರೆ. ದಮಾನಿ ಅವರ ಒಟ್ಟು ಸಂಪತ್ತು ೧,೩೧,೦೦೦ ಕೋಟಿ ರೂ. ಇಲ್ಲೊಂದು ಸ್ವಾರಸ್ಯವನ್ನು ಗಮನಿಸಬಹುದು. ರಾಧಾ ಕಿಶನ್‌ ದಮಾನಿ ಅವರು ರಿಟೇಲ್‌ ಕಿಂಗ್‌ ಆಗಿ ಹೊರಹೊಮ್ಮುವುದಕ್ಕೆ ಮುನ್ನ ಷೇರು ವ್ಯವಹಾರಗಳಲ್ಲಿ ಸೈ ಎನ್ನಿಸಿದ್ದರು.

ಕಾಲೇಜು ಡ್ರಾಪೌಟ್:‌ ರಾಧಾಕಿಶನ್‌ ದಮಾನಿ ಅವರು ಮುಂಬಯಿ ವಿಶ್ವವಿದ್ಯಾಲಯದಲ್ಲಿ ವಾಣಿಜ್ಯ (ಬಿಕಾಂ) ವಿಷಯದಲ್ಲಿ ಪದವಿ ಶಿಕ್ಷಣಕ್ಕೆ ಸೇರಿದರೂ, ಪೂರ್ಣಗೊಳಿಸಲಿಲ್ಲ. ಒಂದು ವರ್ಷದ ಓದಿನ ಬಳಿಕ ಕಾಲೇಜು ವಿದ್ಯಾಭ್ಯಾಸವನ್ನು ಕೈಬಿಟ್ಟರು. ೧೦+೨ ಮಾತ್ರ ಅವರು ಪೂರ್ಣಗೊಳಿಸಿರುವ ಸಾಂಪ್ರದಾಯಿಕ ಶಿಕ್ಷಣ.

ಆರ್.ಕೆ. ದಮಾನಿ ಅವರ ತಂದೆ ಶಿವಕಿಶನ್‌ ಜಿ ದಾಮನಿ ಅವರು ೧೯೬೦ರಲ್ಲಿಯೇ ಸ್ಟಾಕ್‌ ಮಾರ್ಕೆಟ್‌ನಲ್ಲಿ ಕೆಲಸ ಮಾಡಿದ್ದರು. ತಂದೆಯ ಅಕಾಲಿಕ ನಿಧನದ ಬಳಿಕ ಆರ್.ಕೆ. ದಮಾನಿ ಕುಟುಂಬ ನಡೆಸುತ್ತಿದ್ದ ಬಾಲ್-ಬೇರಿಂಗ್‌ ಬಿಸಿನೆಸ್‌ ಕೈಬಿಟ್ಟು, ಸೋದರ ಗೋಪಿಕಿಶನ್‌ ಜತೆಗೆ ಸ್ಟಾಕ್‌ ಬ್ರೋಕಿಂಗ್‌ ಬಿಸಿನೆಸ್‌ ಶುರು ಮಾಡಿದರು. ಅದು ಅವರ ಕೈ ಹಿಡಿಯಿತು. ಅದರಲ್ಲಿಯೂ ಮುಖ್ಯವಾಗಿ “ಶಾರ್ಟ್‌ ಸೆಲ್ಲಿಂಗ್‌ʼ ಷೇರು ವ್ಯವಹಾರದಲ್ಲಿ ಲಾಭ ಮಾಡಿಕೊಳ್ಳುವ ಕಲೆಯನ್ನು ದಮಾನಿ ಕರಗತ ಮಾಡಿಕೊಂಡರು. ೯೦ರ ದಶಕದಲ್ಲಿ ಹರ್ಷದ್‌ ಮೆಹ್ತಾ ಹಗರಣ ಬೆಳಕಿಗೆ ಬರುವುದಕ್ಕಿಂತ ಮೊದಲು ಷೇರು ದರಗಳು ಅತಾರ್ಕಿಕವಾಗಿ ಭಾರಿ ಜಿಗಿತ ಕಾಣುತ್ತಿದ್ದವು. ಈ ಸಂದರ್ಭದಲ್ಲಿ ಶಾರ್ಟ್‌ ಸೆಲ್ಲಿಂಗ್‌ ಮೂಲಕ ದಮಾನಿ ಲಾಭ ಗಳಿಸುತ್ತಿದ್ದರು. ಬಳಿಕ ದಮಾನಿ ವಾಲ್ಯೂ ಇನ್ವೆಸ್ಟರ್‌ ಆಗಿ ಬದಲಾದರು. ತಮ್ಮ ಷೇರು ವಹಿವಾಟಿನ ಆರಂಭಿಕ ದಿನಗಳಲ್ಲಿ ದಮಾನಿ ಅವರು ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಗಣನೀಯ ಷೇರುಗಳನ್ನು ಹೊಂದಿದ್ದರು ಎಂಬ ಪ್ರತೀತಿ ಇದೆ.

ಡಿಮಾರ್ಟ್‌ ಸ್ಥಾಪನೆಯ ಕಥೆ

ರಾಧಾಕಿಶನ್‌ ದಮಾನಿ ಅವರು ೨೦೦೧ರಲ್ಲಿ ಷೇರು ವ್ಯವಹಾರಗಳ ಬದಲು ರಿಟೇಲ್‌ ವಲಯದ ಉದ್ಯಮಿಯಾಗಲು ನಿರ್ಧರಿಸಿದರು. ೨೦೦೨ರಲ್ಲಿ ಮುಂಬಯಿನ ಪೊವೈನಲ್ಲಿ ಮೊದಲ ಡಿಮಾರ್ಟ್‌ ಸ್ಟೋರ್‌ ಅನ್ನು ಸ್ಥಾಪಿಸಿದರು. ಬಳಿಕ ಹಿಂತಿರುಗಿ ನೋಡಲಿಲ್ಲ. ಅವರಿಗೆ ಮೊದಲಿನಿಂದಲೂ ರಿಟೇಲ್‌ ಬಿಸಿನೆಸ್‌ ಬಗ್ಗೆ ಆಸಕ್ತಿ ಇತ್ತು. ಆದರೆ ಸಣ್ಣ ಮಟ್ಟಿನಲ್ಲಿ ಆರಂಭಿಸಿ ಬೆಳೆಯಬೇಕು ಎಂದು ನಿರ್ಧರಿಸಿದರು. ಪ್ಯಾಂಟಲೂನ್ಸ್‌, ಬಿಗ್‌ ಬಜಾರ್‌ ಅಬ್ಬರದ ನಡುವೆ ದಮಾನಿ ಅವರು ಕಡಿಮೆ ವೆಚ್ಚದಲ್ಲಿ ದಿನ ನಿತ್ಯ ಬಳಕೆಯ ವಸ್ತುಗಳನ್ನು ಮಾರಾಟ ಮಾಡಲು ಆದ್ಯತೆ ನೀಡಿದರು. ವೆಚ್ಚವನ್ನು ಕಡಿಮೆ ಮಾಡಲು ಡಿಮಾರ್ಟ್‌ ಸ್ಟೋರ್‌ಗಳನ್ನು ನಿರ್ಮಿಸುವ ಸ್ಥಳವನ್ನು ಖರೀದಿಸುತ್ತಾ ಹೋದರು. ಇದರಿಂದಾಗಿ ಮಳಿಗೆಗಳಿಗೆ ಬಾಡಿಗೆ ವೆಚ್ಚದಲ್ಲಿ ಉಳಿತಾಯ ಸಾಧ್ಯವಾಯಿತು. ಜತೆಗೆ ಡಿಮಾರ್ಟ್‌ ಆಸ್ತಿಗಳ ಮಾರುಕಟ್ಟೆ ಮೌಲ್ಯವೂ ವೃದ್ಧಿಸಿತು.

ಡಿಮಾರ್ಟ್‌ ಯಶಸ್ಸಿನ ಗುಟ್ಟೇನು? ಡಿಮಾರ್ಟ್‌ನಲ್ಲಿ ಭಾರತೀಯ ಕುಟುಂಬದ ದಿನ ನಿತ್ಯದ ಬಳಕೆಯ ಬಹುತೇಕ ಎಲ್ಲ ಉತ್ಪನ್ನಗಳೂ ದೊರೆಯುತ್ತವೆ. ಆಹಾರ ವಸ್ತುಗಳು, ನೈರ್ಮಲ್ಯ ಸಾಧನಗಳು, ಸೌಂದರ್ಯವರ್ಧಕಗಳು, ಗಾರ್ಮೆಂಟ್ಸ್‌, ಕಿಚನ್‌ವೇರ್‌, ಬೆಡ್‌, ಬಾತ್‌ ಟವೆಲ್‌, ಹೋಮ್‌ ಅಪ್ಲೈಯನ್ಸ್‌ ಉತ್ಪನ್ನಗಳನ್ನು ಖರೀದಿಸಬಹುದು. ಸ್ಪರ್ಧಾತ್ಮಕ ದರ ಮತ್ತೊಂದು ವಿಶೇಷ. ಇತರ ಹೈಪರ್‌ ಮಾರ್ಕೆಟ್‌ಗಳಿಗೆ ಹೋಲಿಸಿದರೆ ಇಲ್ಲಿ ದರ ಕಡಿಮೆ ಎನ್ನುವುದೇ ಪ್ರಮುಖ ಆಕರ್ಷಣೆ.

ಡಿಮಾರ್ಟ್‌ ೨೦೨೧-೨೨ರಲ್ಲಿ ೩೦,೯೮೦ ಕೋಟಿ ರೂ. ಆದಾಯವನ್ನು ಗಳಿಸಿದೆ. ಒಟ್ಟು ಆಸ್ತಿ ಮೌಲ್ಯ ೧೨,೦೭೬ ಕೋಟಿ ರೂ.ಗಳಾಗಿವೆ. ೯,೪೫೬ ಕಾಯಂ ಉದ್ಯೋಗಿಗಳು ಹಾಗೂ ೩೮,೯೫೨ ಗುತ್ತಿಗೆ ಆಧಾರಿತ ಸಿಬ್ಬಂದಿ ಇದ್ದಾರೆ. ೨೦೧೭ರ ಮಾರ್ಚ್‌ ೨೨ರಂದು ಡಿಮಾರ್ಟ್‌ ಷೇರು ಮಾರುಕಟ್ಟೆಗೆ ಐಪಿಒ ಮೂಲಕ ಪ್ರವೇಶಿಸಿತ್ತು. ಇದರೊಂದಿಗೆ ಕಂಪನಿಯ ಮಾರುಕಟ್ಟೆ ಮೌಲ್ಯ ಗಣನೀಯವಾಗಿ ವೃದ್ಧಿಸಿತು. ಕಳೆದ ಜನವರಿ-ಮಾರ್ಚ್‌ ಅವಧಿಯಲ್ಲಿ ಅವೆನ್ಯೂ ಸೂಪರ್‌ಮಾರ್ಟ್ಸ್‌ ೪೨೫ ಕೋಟಿ ರೂ. ಲಾಭ ಗಳಿಸಿತ್ತು. ಡಿಮಾರ್ಟ್‌ ಮಧ್ಯಮ ವರ್ಗದ ಗ್ರಾಹಕರನ್ನು ಗುರಿಯಾಗಿಟ್ಟುಕೊಂಡು ವಹಿವಾಟು ನಡೆಸುತ್ತಿದೆ. ಮಾಲ್‌ಗಳು ಇಲ್ಲದಿರುವ, ವಸತಿ ಪ್ರದೇಶಗಳಲ್ಲಿ ಡಿಮಾರ್ಟ್‌ ಸ್ಟೋರ್‌ಗಳು ಅಸ್ತಿತ್ವಕ್ಕೆ ಬರುತ್ತಿವೆ.

ಕೇವಲ ೫ ವರ್ಷಗಳಲ್ಲಿ ಡಿಮಾರ್ಟ್‌ ಷೇರು ದರ ೨೯೯ ರೂ.ಗಳಿಂದ 4,406 ರೂ.ಗೆ ಜಿಗಿತ!

ಡಿಮಾರ್ಟ್‌ (ಅವೆನ್ಯೂ ಸೂಪರ್‌ಮಾರ್ಟ್ಸ್ ಲಿಮಿಟೆಡ್) ೨೦೧೭ರಲ್ಲಿ ಐಪಿಒ ಮೂಲಕ ಷೇರು ಮಾರುಕಟ್ಟೆ ಪ್ರವೇಶಿಸಿದಾಗ ಷೇರು ದರ ೨೯೯ ರೂ. ಇತ್ತು. ಆದರೆ ಈಗ ೪,೪೧೦ ರೂ.ಗೆ ಜಿಗಿದಿದೆ!

ಡಿಮಾರ್ಟ್‌ ಬ್ರ್ಯಾಂಡ್ ಸಕ್ಸಸ್‌ ಮಂತ್ರ

ಐಪಿಒದಲ್ಲಿ ಯಶಸ್ಸು: ಡಿಮಾರ್ಟ್‌ ಸ್ಟೋರ್‌ಗಳನ್ನು ನಡೆಸುತ್ತಿರುವ ಅವೆನ್ಯೂ ಸೂಪರ್‌ಮಾರ್ಟ್ಸ್‌ ೨೦೧೭ರಲ್ಲಿ ಯಶಸ್ವಿ ಐಪಿಒ ನಡೆಸಿತು. ಅಲ್ಲಿಂದ ಇಲ್ಲಿಯವರೆಗೆ ಷೇರು ದರ ೧,೩೭೦% ವೃದ್ಧಿಸಿದೆ.

ಮುಕೇಶ್‌ ಅಂಬಾನಿಯವರ ಪೈಪೋಟಿ: ಉದ್ಯಮಿ ಮುಕೇಶ್‌ ಅಂಬಾನಿ ನೇತೃತ್ವದ ರಿಲಯನ್ಸ್‌ ಇಂಡಸ್ಟ್ರೀಸ್‌ ರಿಟೇಲ್‌ ವಲಯದಲ್ಲಿ ಮುಂಚೂಣಿಯಲ್ಲಿದೆ. ರಿಟೇಲ್‌ನಲ್ಲಿ ಆಫ್‌ಲೈನ್‌ ಮತ್ತು ಆನ್‌ಲೈನ್‌ ವ್ಯವಹಾರಗಳಲ್ಲಿ ರಿಲಯನ್ಸ್‌ ಸಕ್ರಿಯವಾಗಿದೆ. ರಿಲಯನ್ಸ್‌ ಟ್ರೆಂಡ್ಸ್‌ ೧೯೦೦ ಸ್ಟೋರ್‌ಗಳನ್ನು ಹೊಂದಿದೆ. ಆನ್‌ಲೈನ್‌ ದಿನಸಿ ರಿಟೇಲ್‌ ಬ್ರ್ಯಾಂಡ್ ಜಿಯೊ ಮಾರ್ಟ್‌ ೨೦೦ ನಗರಗಳಲ್ಲಿ ಸೇವೆ ಸಲ್ಲಿಸುತ್ತಿದೆ.‌

ದಮಾನಿ-ಜುಂಜುನ್‌ವಾಲಾ ಸ್ನೇಹ: ಬಾಂಬೆ ಸ್ಟಾಕ್‌ ಎಕ್ಸ್‌ಚೇಂಜ್‌ನಲ್ಲಿ ಪರಸ್ಪರ ಭೇಟಿಯಾಗಿದ್ದ ರಾಕೇಶ್‌ ಜುಂಜುನ್‌ವಾಲಾ ಮತ್ತು ರಾಧಾಕಿಶನ್‌ ದಮಾನಿ ಬಲು ಬೇಗ ಆತ್ಮೀಯರಾದರು. ದಮಾನಿ ಅವರಿಂದಲೇ ಷೇರು ಮಾರುಕಟ್ಟೆಯ ಒಳಹೊರಗುಗಳನ್ನು ಅರಿತುಕೊಂಡೆ. ಅವರೇ ನನ್ನ ಗುರು ಮತ್ತು ಸಲಹೆಗಾರರು ಎಂದು ರಾಕೇಶ್‌ ಜುಂಜುನ್‌ವಾಲಾ ಹೇಳಿದ್ದರು. ಆರ್.ಕೆ ದಮನಿ ಸರಳ ಜೀವನ ನಡೆಸುತ್ತಾರೆ. ಬಹುತೇಕ ಸಂದರ್ಭ ಸರಳ ಶ್ವೇತವಸ್ತ್ರಧಾರಿಯಾಗಿರುತ್ತಾರೆ. ಸಾರ್ವಜನಿಕ ಸಮಾರಂಭಗಳಲ್ಲಿ ಕಾಣಿಸಿಕೊಳ್ಳುವುದು ವಿರಳ. ಆದರೆ ಮುಂಬಯಿನ ಮಲಬಾರ್‌ಹಿಲ್‌ನಲ್ಲಿ ೧,೦೦೦ ಕೋಟಿ ರೂ.ಗೆ ಹೊಸ ಬಂಗಲೆಯನ್ನು ಖರೀದಿಸಿದ್ದಾರೆ. ೫,೭೫೨ ಚದರ ಮೀಟರ್‌ ಭೂಮಿಗೆ ೩೦ ಕೋಟಿ ರೂ. ಮುದ್ರಾಂಕ ಶುಲ್ಕವನ್ನು ಪಾವತಿಸಿದ್ದಾರೆ.

ಸಾಮಾನ್ಯ ಕುಟುಂಬವೊಂದರಲ್ಲಿ ಹುಟ್ಟಿ ಬೆಳೆದ ರಾಧಾಕಿಶನ್‌ ದಮಾನಿ ಅವರ ಡಿಮಾರ್ಟ್‌ ಯಶೋಗಾಥೆ ಈಗಿನ ಜಮಾನದ ಯುವ ಉದ್ಯಮಿಗಳಿಗೆ ಪ್ರೇರಣೆ ನೀಡಬಲ್ಲುದು.

Exit mobile version