Site icon Vistara News

ನನ್ನ ದೇಶ ನನ್ನ ದನಿ | ಕನ್ನಡ ಸಂಸ್ಕೃತಿಯನ್ನು ಉಳಿಸಿದ- ಬೆಳೆಸಿದ ಮೈಸೂರು ಒಡೆಯರ್ ರಾಜವಂಶ

mysore palace

ಕನ್ನಡ ರಾಜ್ಯೋತ್ಸವದ ಸಂಭ್ರಮಾಚರಣೆಯ ನಡುವೆ ನಾವು ಕನ್ನಡವನ್ನು, ಕನ್ನಡ ಸಂಸ್ಕೃತಿಯನ್ನು ಉಳಿಸಿದ ಬೆಳೆಸಿದ ಮೈಸೂರು ಒಡೆಯರ್ ರಾಜವಂಶವನ್ನು ಸ್ಮರಿಸಲೇಬೇಕು, ನಮಿಸಲೇಬೇಕು. ಹತ್ತಾರು ಸಹಸ್ರ ವರ್ಷಗಳ ಕಾಲ ವಿಕಸನಗೊಂಡು ಸಾಹಿತ್ಯ, ಆಡಳಿತ, ವ್ಯಾಪಾರ, ಇತ್ಯಾದಿ ಹಲವು ಹತ್ತು ಆಯಾಮಗಳಲ್ಲಿ ಬೆಳೆದ ಕನ್ನಡ ಭಾಷೆಯು 18ನೆಯ ಶತಮಾನದ ಕೊನೆಯ ಭಾಗದಲ್ಲಿ ಅಪಾಯಕ್ಕೆ ಸಿಲುಕಿತು. ಮೈಸೂರು ಅರಮನೆಯು 1916ರಲ್ಲಿ ಹೊರತಂದ “ಇತಿಹಾಸದ ವಾರ್ಷಿಕ ವರದಿ”ಗಳ ತುಂಬ ಅನೇಕ ಶತಮಾನಗಳ ಪ್ರಮುಖ ಘಟನಾವಳಿಯ ಮಹತ್ತ್ವದ ಸಾಕ್ಷ್ಯಾಧಾರಗಳಿವೆ.

ಕುಟಿಲತೆಯಿಂದ ಇಮ್ಮಡಿ ಕೃಷ್ಣರಾಜರ ನಂಬಿಕೆ, ವಿಶ್ವಾಸಗಳನ್ನು ಗಳಿಸಿದ ಹೈದರಾಲಿಯು ಆಡಳಿತದ, ಸೈನ್ಯದ ಸೂತ್ರಗಳ ನಿಯಂತ್ರಣ ಸಾಧಿಸಿ ಸರ್ವಾಧಿಕಾರಿಯೇ ಆಗಿಬಿಟ್ಟನು. ಒಡೆಯರ್ ರಾಜವಂಶಕ್ಕೆ ಗ್ರಹಣ ಹಿಡಿಯಿತು. ಸೆರೆಮನೆಯಲ್ಲಿ ಅವನು ಮಹಾರಾಜರನ್ನು ಅನ್ನಾಹಾರ ನೀಡದೆ ಕೊಲ್ಲಿಸಿದನು. ಭಾರತೀಯ ಸಂಸ್ಕೃತಿ, ಕನ್ನಡ ಪರಂಪರೆಗಳು ನಾಶವಾಗಿ ಇಸ್ಲಾಮೀ ಪ್ರಭುತ್ವವೇ ಆರಂಭವಾಗಿಬಿಟ್ಟಿತು. ದ್ರೋಹಿ ಹೈದರನು ಮೈಸೂರು ರಾಜ, ರಾಣಿಯರಿಗೆ ಗೌರವ ನೀಡುವ ನಾಟಕವನ್ನಾದರೂ ಆಡುತ್ತಿದ್ದನು. ಆದರೆ, ತಾನೇ ಸುಲ್ತಾನನೆಂದು ಘೋಷಿಸಿಕೊಂಡ ಮಗ ಟಿಪ್ಪುವಿನ ಕಾಲಕ್ಕೆ ರಾಜವಂಶದವರಿಗೆ ಇನ್ನೂ ಭಯಾನಕವಾದ ಕೆಟ್ಟಕಾಲ ಬಂದಿತು.

1685ರ ಶಾಸನವು ಚಿತ್ರಿಸಿರುವಂತೆ ಭೂತಾಯಿಯ ಆಭರಣವೆನಿಸಿ, ಕವಿಗಳು, ಸಂತರು, ಮೇಧಾವಿಗಳಿಗೆ ಶ್ರೀರಂಗಪಟ್ಟಣವು ಪ್ರಿಯವಾದುದಾಗಿತ್ತು. ಅಂತಹ ಸಾಂಸ್ಕೃತಿಕ ನಗರಿ ಶ್ರೀರಂಗಪಟ್ಟಣವು ಟಿಪ್ಪುವಿನ ಘೋರ ಆಡಳಿತದಿಂದ ರಕ್ತಸಿಕ್ತ ರಣರಂಗವಾಯಿತು, ಇಡೀ ಪಟ್ಟಣವು ಸೆರೆಮನೆಯೇ ಆಗಿಹೋಯಿತು. ದೇವಾಲಯದ ಸಮೀಪದ ಹೇಯ ಸುರಂಗದಲ್ಲಿ, ಟಿಪ್ಪು ತನ್ನ ವಿರೋಧಿಗಳನ್ನು ಸರಪಳಿಗಳಿಂದ ಬಂಧಿಸಿ ಕ್ರೂರವಾಗಿ ಹಿಂಸಿಸುತ್ತಿದ್ದನು. ಬಂದಿಗಳನ್ನು ಅಮಾನವೀಯವಾಗಿ ನಡೆಸಿಕೊಳ್ಳುವುದರಲ್ಲಿ ಟಿಪ್ಪು ದಾಖಲೆಯನ್ನೇ ನಿರ್ಮಿಸಿದನು. ಒಡೆಯರ್ ರಾಜವಂಶದವರು, ನಿಷ್ಠರು, ವಿಧೇಯರು, ಪ್ರಜೆಗಳು ಎಲ್ಲರೂ ಭಯದ ವಾತಾವರಣದಲ್ಲಿರುವಂತಾಯಿತು. ಕೆಲವರು ರಾಜ್ಯವನ್ನೇ ಬಿಟ್ಟುಹೋದರು. ಸಾವಿರ ಸಾವಿರ ಹಿಂದುಗಳನ್ನು ಬಲವಂತದಿಂದ ಮತಾಂತರಗೊಳಿಸಲಾಯಿತು. ಅಮಾಯಕರ ಹತ್ಯೆಯಾಯಿತು. ರಾಜಧಾನಿಯ ರಸ್ತೆಗಳಲ್ಲಿ ಆನೆಗಳ ಕಾಲುಗಳಿಗೆ ಅನೇಕರನ್ನು ಸರಪಳಿಗಳಲ್ಲಿ ಕಟ್ಟಿ ಎಳೆಸಿ ಕೊಲ್ಲಲಾಯಿತು. ಕೆಲವರನ್ನು ನಂದಿ ಬೆಟ್ಟದ ಮೇಲಿನಿಂದ ತಳ್ಳಿ ಸಾಯಿಸಲಾಗುತ್ತಿತ್ತು.

ಒಡೆಯರ್ ರಾಜವಂಶದ ರಾಜಮಾತೆಯರ – ಮಹಾರಾಣಿಯರ ಸಮಯಾವಧಾನ, ನಿರ್ಧಾರ, ಆಡಳಿತ, ಪಾತ್ರನಿರ್ವಹಣೆಗಳೂ ಅಚ್ಚರಿ ಪಡುವಷ್ಟು ವಿಶಿಷ್ಟವಾಗಿವೆ. ಮಹಾರಾಣಿಯರಾದ ಲಕ್ಷ್ಮೀ ಅಮ್ಮಣ್ಣಿ ಮತ್ತು ದೇವಾಜಮ್ಮಣ್ಣಿ ಅವರ ತಂತ್ರಗಾರಿಕೆ, ನಿರ್ಧಾರಗಳು ಐತಿಹಾಸಿಕ ಮಹತ್ತ್ವ ಗಳಿಸಿವೆ. ಬ್ರಿಟಿಷ್ ಗವರ್ನರ್ ಜನರಲ್ ಲಾರ್ಡ್ ಮಾರ್ನಿಂಗ್ ಟನ್‌ಗೆ, ಲಕ್ಷ್ಮೀ ಅಮ್ಮಣ್ಣಿ ಅವರು ಫೆಬ್ರುವರಿ 1799ರಲ್ಲಿ ತಮ್ಮ ಪ್ರಧಾನರಾದ ತಿರುಮಲರಾಯರ ಮೂಲಕ ರಹಸ್ಯವಾಗಿ ಪತ್ರ ಕಳುಹಿಸಿ ದುರುಳ – ಕ್ರೂರಿ ಟಿಪ್ಪುವಿನ ಹತ್ಯೆಗೆ ಯೋಜನೆ ಹಾಕಿದರು. ಅದು ಬಹಳ ಬಹಳ ಅಪಾಯಕಾರಿಯಾಗಿತ್ತು. ಪೂರ್ಣಯ್ಯನಂತಹ ದ್ರೋಹಿಗಳ, ವಿಷಸರ್ಪಗಳ ದೊಡ್ಡ ಪಡೆಯೇ ಟಿಪ್ಪುವಿಗೆ ಮತ್ತು ಅವನ ಇಸ್ಲಾಮೀ ಪ್ರಭುತ್ವಕ್ಕೆ ಅಡಿಯಾಳಾಗಿತ್ತು.‌

ಮುಮ್ಮಡಿ ಕೃಷ್ಣರಾಜ ಒಡೆಯರ್‌

ಬ್ರಿಟಿಷರ ಸೈನ್ಯವು ಮುತ್ತಿಗೆ ಹಾಕಿ 1799ರ ಮೇ 4ರಂದು ಟಿಪ್ಪುವಿನ ವಧೆಯಾದ ಮೇಲೆ, ರಾಜಮನೆತನದ ಆರು ವರ್ಷಗಳ ಪುಟ್ಟ ಬಾಲಕ ಮುಮ್ಮಡಿ ಕೃಷ್ಣರಾಜ ಒಡೆಯರ್ ಜೂನ್ 30ರಂದು ಪಟ್ಟಕ್ಕೇರಿದರು. ಮಹಾರಾಜರು ಚಿಕ್ಕವರಾದುದರಿಂದ ರಾಜಮಾತೆಯವರ ಪಾತ್ರ ಮಹತ್ವದ್ದೂ ಅತ್ಯಂತ ಕ್ಲಿಷ್ಟವಾದುದೂ ಆಯಿತು. ಬ್ರಿಟಿಷರು ಸೆರಗಿನ ಕೆಂಡದಂತಹವರು. 1799ರಿಂದ 1810ರವರೆಗೆ ಲಕ್ಷ್ಮಿ ಅಮ್ಮಣ್ಣಿ ಅವರು ಯಶಸ್ವಿಯಾಗಿ ಆಡಳಿತ ನಡೆಸಿ ಸಂಸ್ಥಾನವನ್ನು ಉಳಿಸಿದುದು ಪ್ರಶಂಸನೀಯ. ಒಂದೂವರೆ ಶತಮಾನಗಳ ದೀರ್ಘಾವಧಿಯಲ್ಲಿ ವಾಣಿವಿಲಾಸ ಸನ್ನಿಧಾನ ಸೇರಿದಂತೆ ಎಲ್ಲ ರಾಜ-ರಾಣಿಯರು ಚಾಣಾಕ್ಷತೆಯಿಂದ ಬ್ರಿಟಿಷರನ್ನು ನಿರ್ವಹಿಸಿದರು.

ಅಲ್ಪಕಾಲದಲ್ಲಿಯೇ ಟಿಪ್ಪು ಪಾಶವೀ ಪ್ರಭುತ್ವವನ್ನು ಸ್ಥಾಪಿಸಿಬಿಟ್ಟಿದ್ದ. ಊರುಗಳ ಹೆಸರುಗಳು ಇಸ್ಲಾಮೀಕರಣಗೊಂಡು ನಜರಾಬಾದ್, ಮಂಜರಾಬಾದ್, ಇತ್ಯಾದಿ ಆಗಿಹೋಗಿದ್ದವು. ಅತ್ಯಂತ ಭಯಾನಕವಾದುದೆಂದರೆ, ಆಡಳಿತ ಭಾಷೆಯಾಗಿದ್ದ ಕನ್ನಡದ ಬದಲು ಪರ್ಷಿಯನ್ ಭಾಷೆಯನ್ನು ಟಿಪ್ಪು ಜಾರಿಗೆ ತಂದಿದ್ದ. ಇಂದಿಗೂ ಅದರ ಪಳೆಯುಳಿಕೆಗಳಾಗಿರುವ ಅಮಲ್ದಾರ್, ತಹಸೀಲ್ದಾರ್, ಇತ್ಯಾದಿ ಪದಗಳನ್ನು ನಮ್ಮ ಸಾಹಿತ್ಯದಲ್ಲಿ ಮತ್ತು ಇತಿಹಾಸದ ದಾಖಲೆಗಳಲ್ಲಿ ಕಾಣಬಹುದು. ಕನ್ನಡ ಭಾಷಾನಾಶದ ಇಂತಹ ಕು-ಪ್ರಯತ್ನಗಳ ಅವಶೇಷಗಳು ಇಂದಿಗೂ ರಾರಾಜಿಸುತ್ತಿವೆ. ಭಾಷೆ, ಸಂಸ್ಕೃತಿಗಳನ್ನು ನಾಶ ಮಾಡುವುದು ಸುಲಭ. ಪುನರ್ನಿರ್ಮಾಣ ಬಹಳ ಬಹಳ ಕಷ್ಟ. ಕಾಫಿರರ ಸಾಹಿತ್ಯ – ಸಂಸ್ಕೃತಿಗಳನ್ನು ನಾಶ ಮಾಡುವ ಜಿಹಾದಿಗಳ ಆವೇಶ ಎಂತಹುದು ಎಂದರೆ, ಬಖ್ತಿಯಾರ್ ಖಿಲ್ಜಿಯು ನಳಂದದಲ್ಲಿ ತೊಂಬತ್ತು ಲಕ್ಷ ಗ್ರಂಥಗಳನ್ನು ಸುಟ್ಟು ಹಾಕಿದ. ಆ ಹಾದಿಯಲ್ಲಿಯೇ, ಟಿಪ್ಪು ಸಹ ತನ್ನ ಕುದುರೆಗಳಿಗೆ ಹುರುಳಿ ಬೇಯಿಸಲು, ಮೈಸೂರು ಅರಮನೆಯ ಗ್ರಂಥಗಳನ್ನು ಒಲೆಗೆ ಹಾಕಿಸಿ ನಾಶ ಮಾಡಿದ. ಎಷ್ಟೆಷ್ಟು ಅಮೂಲ್ಯವಾದ ಸಾಹಿತ್ಯ ಸಂಪತ್ತು, ಪುರಾವೆಗಳು ನಾಶವಾದವೋ ಊಹಿಸುವುದು ಕಷ್ಟ.‌

ಚಾಮರಾಜೇಂದ್ರ ಒಡೆಯರ್

ಬ್ರಿಟಿಷರ ಕಿರಿಕಿರಿ, ಕಿರುಕುಳಗಳ ನಡುವೆಯೂ ಮುಮ್ಮಡಿ ಕೃಷ್ಣರಾಜ ಒಡೆಯರ್ ಮತ್ತು ಚಾಮರಾಜೇಂದ್ರ ಒಡೆಯರ್ ಅವರು ಕೈಗೊಂಡ ಅಭಿವೃದ್ಧಿ ಕಾರ್ಯಗಳು ಪ್ರಶಂಸನೀಯ. ಅವರ ಸಾಂಸ್ಕೃತಿಕ – ಸಾಹಿತ್ಯಕ ಕೊಡುಗೆಗಳು ಅಪಾರ ವಿಸ್ಮಯಕ್ಕೂ ಕಾರಣವಾಗುತ್ತವೆ. ಮುಮ್ಮಡಿಯವರು ಸಂಸ್ಕೃತ, ಕನ್ನಡ, ತಮಿಳು, ತೆಲುಗು, ಇಂಗ್ಲಿಷ್, ಉರ್ದು ಮುಂತಾದ ಭಾಷೆಗಳ ಪ್ರೌಢಿಮೆ ಗಳಿಸಿದ್ದರು. ಅವರ ವಿದ್ವದ್-ಕೃತಿ “ಶ್ರೀ ತತ್ತ್ವನಿಧಿ”ಯನ್ನು ನೋಡುವಾಗಲೆಲ್ಲಾ ಹೆಮ್ಮೆಯ ಭಾವ ಆವರಿಸುತ್ತದೆ. ಒಡೆಯರ್ ವಂಶದ ಅನೇಕರು ದತ್ತುಪುತ್ರರು. ಸು-ಸಂಸ್ಕಾರ ಕಲಿಸುವ ಎಂತಹ ವ್ಯವಸ್ಥೆ ಮೈಸೂರು ರಾಜವಂಶದ್ದು ಎಂದರೆ, ದತ್ತು ಮಕ್ಕಳೂ ಸೇರಿದಂತೆ ಈ ಎಲ್ಲ ಒಡೆಯರ್ ರಾಜರುಗಳ ಸಾಂಸ್ಕೃತಿಕ – ಸಾಹಿತ್ಯಕ ಕೊಡುಗೆಗಳು ನಿಜವೇ ಎನ್ನಿಸುವಷ್ಟು ಅದ್ಭುತವಾಗಿವೆ. ಮುಮ್ಮಡಿಯವರು ಐವತ್ತಕ್ಕೂ ಹೆಚ್ಚು ಸಾಹಿತ್ಯ ಕೃತಿಗಳನ್ನು ರಚಿಸಿದರು. ಯಕ್ಷಗಾನ ಕಲಾವಿದರಿಗೆ, ಕವಿಗಳಿಗೆ, ಸಾಹಿತಿಗಳಿಗೆ, ವಿದ್ವಾಂಸರಿಗೆ ಅಪಾರವಾದ ಪ್ರೋತ್ಸಾಹವನ್ನು ನೀಡಿದರು. ಅವರಿಗೆ ಮಕ್ಕಳಿರಲಿಲ್ಲ. ದತ್ತು ತೆಗೆದುಕೊಳ್ಳಲು ಬ್ರಿಟಿಷರು ಅನುಮತಿ ನೀಡದೆ ತುಂಬಾ ಕಿರುಕುಳ ಕೊಟ್ಟರು. ಅಪಾರವಾದ ತಾಳ್ಮೆ, ಸಂಯಮಗಳಿಂದ ಮುಮ್ಮಡಿಯವರು ಎಲ್ಲವನ್ನೂ ಎದುರಿಸಿದರು, ನಿರ್ವಹಿಸಿದರು.

ಮಹಾರಾಣಿ ಕೆಂಪನಂಜಮ್ಮಣ್ಣಿ ದೇವಿ ಮತ್ತು ಜಯಚಾಮರಾಜೇಂದ್ರ ಒಡೆಯರ್

ಅನಂತರ ಮುಮ್ಮಡಿಯವರ ದತ್ತು ಪುತ್ರ ಚಾಮರಾಜೇಂದ್ರ ಒಡೆಯರ್ ಅವರು ಇದ್ದುದೇ ಬರಿಯ 31 ವರ್ಷ. ಮೈಸೂರು ಓರಿಯೆಂಟಲ್ ರಿಸರ್ಚ್ ಇನ್ಸ್ಟಿಟ್ಯೂಟ್, ಮೃಗಾಲಯ, ಸಂಸ್ಕೃತ ಕಾಲೇಜು, ಲಾಲ್ ಬಾಗ್ ಗಾಜಿನ ಮನೆ, ಬೆಂಗಳೂರು ಅರಮನೆ, ಮೈಸೂರು ಮಹಾರಾಜ ಕಾಲೇಜು ಮುಂತಾದವು ಚಾಮರಾಜೇಂದ್ರರಿಂದ ಸಾಕಾರಗೊಂಡ ಅದ್ಭುತ ಕನಸುಗಳು, ಕಲ್ಪನೆಗಳು. 1880ರ ದಶಕದ ಭೀಕರ ಕ್ಷಾಮವು ಇಡೀ ದೇಶವನ್ನೇ ಅಲ್ಲಾಡಿಸಿಬಿಟ್ಟಿತು. ಪುಟ್ಟ ಯುವಕ ಚಾಮರಾಜೇಂದ್ರರು ಧೈರ್ಯಗೆಡದೆ ಬ್ರಿಟಿಷರಿಂದಲೂ ಸಾಲ ಪಡೆದು ಅನ್ನ – ಗಂಜಿ ಹಾಕಿ ತಮ್ಮ ಲಕ್ಷಾಂತರ ಪ್ರಜೆಗಳನ್ನು ಉಳಿಸಿಕೊಂಡರು. 1894ರಲ್ಲಿ ಅನಿರೀಕ್ಷಿತವಾಗಿ ಡಿಫ್ತೀರಿಯಾ ರೋಗದಿಂದ ಚಾಮರಾಜೇಂದ್ರರು ತೀರಿಹೋಗಿಬಿಟ್ಟರು. ವಾಣಿವಿಲಾಸ ಸನ್ನಿಧಾನ ಎಂದೇ ಪ್ರಸಿದ್ಧರಾಗಿರುವ ಮಹಾರಾಣಿ ಕೆಂಪನಂಜಮ್ಮಣ್ಣಿ ಅವರು, ತಮ್ಮ ಮಗ ನಾಲ್ಮಡಿ ಕೃಷ್ಣರಾಜರು ಕೇವಲ ಹತ್ತು ವರ್ಷ ವಯಸ್ಸಿನ ಕಿರಿಯರಾದುದರಿಂದ, ಆಡಳಿತ ಸೂತ್ರಗಳನ್ನು ತಮ್ಮ ಕೈಗೆ ತೆಗೆದುಕೊಂಡು ಅತ್ಯದ್ಭುತವಾಗಿ ಆಡಳಿತ ನಡೆಸಿದರು. ಕಾವೇರಿ ನದಿಯಿಂದ ವಿದ್ಯುತ್ ಉತ್ಪಾದಿಸುವ ಶಿವನಸಮುದ್ರ ಜಲವಿದ್ಯುತ್ ಯೋಜನೆ, ಮೈಸೂರು ನೀರು ಸರಬರಾಜು ಯೋಜನೆ, ಮೈಸೂರು ನಗರ-ವಿಸ್ತರಣೆಗಳ ಯೋಜನೆ ಮುಂತಾದವು ಅವರನ್ನು ಸ್ಮರಿಸುತ್ತವೆ. ಬೆಂಗಳೂರಿನ ಪ್ರಸಿದ್ಧ ವಿಕ್ಟೋರಿಯಾ ಆಸ್ಪತ್ರೆಗೆ ಅಡಿಗಲ್ಲು ಹಾಕಿದವರೇ ಅವರು. ವಾಣಿವಿಲಾಸ ಸಾಗರ ಎಂದೇ ಹೆಸರಾದ ಮಾರಿ ಕಣಿವೆ ಅವರ ಕಾಲದಲ್ಲಿಯೇ ರೂಪುಗೊಳ್ಳಲು ಆರಂಭವಾದುದು.

ಇಂಗ್ಲಿಷರ ಆರ್ಭಟದ, ಕಿರುಕುಳಗಳ ನಡುವೆಯೂ ಒಡೆಯರ್ ವಂಶದವರು ಕನ್ನಡ, ಕರ್ನಾಟಕಗಳನ್ನು ಉಳಿಸಿದರು. ಇಂದು ಇಂಗ್ಲಿಷ್ ಭಾಷೆ – ಇಂಗ್ಲಿಷ್ ಮಾಧ್ಯಮಗಳ ಬಹು-ಆಯಾಮಗಳ ಆರ್ಭಟಕ್ಕೆ ಕನ್ನಡವೂ ಸೇರಿದಂತೆ ಎಲ್ಲ ಭಾರತೀಯ ಭಾಷೆಗಳು ನಲುಗುತ್ತಿವೆ, ನಡುಗುತ್ತಿವೆ. ಉಳಿಸಿಕೊಳ್ಳಲು ಪ್ರಾಯಶಃ ನಮಗಿದು ಇತಿಹಾಸ ನೀಡಿರುವ ಕೊನೆಯ ಸಂದರ್ಭ. ಐರೋಪ್ಯ ಕ್ರೈಸ್ತ ವಸಾಹತುಶಾಹಿಗಳ ವಿಧ್ವಂಸಕ ದಾಳಿಗೆ ಸಿಲುಕಿ ನಾಶವಾದ ಮೂಲ-ಅಮೆರಿಕೆಯ ಅಜಟೆಕ್ – ಮಯನ್ – ಇಂಕಾ ಸಂಸ್ಕೃತಿಗಳ ಸಾಲಿಗೆ, ಭಾಷೆ-ಲಿಪಿಗಳ ಸಾಲಿಗೆ ನಮ್ಮ ಭಾಷೆಗಳೂ ಸೇರದಂತೆ ಎಚ್ಚರ ವಹಿಸೋಣ.

Exit mobile version