ಸೋಮೇಶ್ವರ ಗುರುಮಠ
ತಂತ್ರಜ್ಞಾನ ಯುಗದಲ್ಲಿ ‘ಇಂದು’ ಹಳತಾಗಿ ‘ನಾಳೆ’ ಎಂಬ ನಿತ್ಯವೂ ಹೊಸತಾಗುತ್ತಿದೆ. ಹೀಗಿರುವಾಗ ೨೧ನೇ ಶತಮಾನದಲ್ಲಿ ಭುವಿಗವತರಿಸಿದ ನವಕುವರಕುವರಿಯರೆಲ್ಲ ಒಂದಿಲ್ಲೊಂದು ಸಾಮಾಜಿಕ ಮಾಧ್ಯಮಗಳ (Social Media) ಖಾತೆದಾರರಾಗಿರುವುದು ಜಗಜ್ಜಾಹೀರಾದ ಸಂಗತಿ. ಈ ಖಾತೆಗಳನ್ನು ವೈಯುಕ್ತಿಕ ಸದಸ್ಯತ್ವಕ್ಕೂ ಹೋಲಿಸಬಹುದು. ಅರ್ಥಾತ್ ‘ಬ್ಯಾಂಕ್ ನಲ್ಲಿ’ ಠೇವಣಿದಾರನೋರ್ವನ ‘ಉಳಿತಾಯ ಖಾತೆಯಂತೆಯೇ’ ಎನ್ನಬಹುದು. ಆದರೆ ಸಾಮಾಜಿಕ ಮಾಧ್ಯಮವೆಂಬ ಬ್ಯಾಂಕ್ ನಲ್ಲಿ ಖಾತೆದಾರನಿಗಿಂತ ಖಾತೆದಾಖಲಿಸಿಕೊಂಡ ಸಂಸ್ಥೆಗೆ ಖಾತೆದಾರನ ಮೇಲಿನ ಹಿಡಿತ ತುಸು ಬಿಗಿಯಾಗಿರುತ್ತದೆಂದರೆ ಸುಳ್ಳಲ್ಲ. ಈ ವಿಷಯಕ್ಕೆ ಸಂಬಂಧಿಸಿದಂತೆ ಈ ಪೂರ್ವದಲ್ಲಿ ಹಲವಾರು ಸಾಕ್ಷ್ಯ ಚಿತ್ರಗಳು, ಪ್ರೌಢ ಪ್ರಬಂಧಗಳು ಮತ್ತು ವೆಬ್ ಸರಣಿ ಕೂಡ ನಿರ್ಮಾಣವಾಗಿದೆ.
ಸಾಮಾಜಿಕ ಮಾಧ್ಯಮಗಳು ನಮ್ಮ ಬೆರಳತುದಿಯಲ್ಲೇ ವಿಶ್ವದ ಮಾಹಿತಿಯನ್ನು ನೀಡುತ್ತಿದೆ. ಸಾಂಪ್ರದಾಯಿಕ ಮಾಧ್ಯಮಗಳಲ್ಲಿ ಇದ್ದ ಅನೇಕ ಕಟ್ಟುಪಾಡುಗಳು, ಅಡೆತಡೆಗಳನ್ನು ಸಾಮಾಜಿಕ ಜಾಲತಾಣ ನಿವಾರಿಸಿದೆ. ತಮಗೆ ಅನ್ನಿಸಿದ್ದನ್ನು ಮುಕ್ತವಾಗಿ ಹಂಚಿಕೊಳ್ಳುವ, ಅದೇ ರೀತಿ ಬೇರೆಯವರ ಭಾವನೆಯನ್ನೂ ಅರಿಯಲು ಸಹಕಾರಿಯಾಗಿದೆ. ಮಾನವ ಸಂಬಂಧಗಳನ್ನು ಬೆಸೆಯುತ್ತಿರುವುದರಿಂದಲೇ ಇಂದು ಸಾಮಾಜಿಕ ಜಾಲತಾಣಗಳು ಎಲ್ಲರನ್ನೂ ಸೆಳೆಯುತ್ತಿವೆ.
ಆದರೆ 21ನೇ ಶತಮಾನದಲ್ಲಿ ಹವಾಮಾನ ಬದಲಾವಣೆಯ ಸಮಸ್ಯೆ ಜೀವಸಂಕುಲ ಮತ್ತು ನಿಸರ್ಗಕ್ಕೆ ಎಷ್ಟು ಕಂಟಕಪ್ರಾಯವಾಗಿದೆಯೋ ಹಾಗೆಯೇ ‘ಸಾಮಾಜಿಕ ಮಾಧ್ಯಮಗಳ’ ವ್ಯಸನತೆಯೂ ಕೂಡ ನವಪೀಳಿಗೆಯ ಮುಂದಿರುವ ಅಷ್ಟೇ ಪ್ರಮಾಣದ ಹಾಗೂ ಮಾನಸಿಕ ಆರೋಗ್ಯಕ್ಕೆ ಕಂಟಕಪ್ರಾಯವಾದ ಸಮಸ್ಯೆಯೂ ಆಗಿದೆ.
‘ಸಿಗರೇಟ್, ಮದ್ಯಸೇವನೆ, ಮಿತಿಮೀರಿದ ಬೇಕರಿ ಪದಾರ್ಥಗಳ ತಿನಿಸು ಆರೋಗ್ಯಕ್ಕೆ ಹಾನಿಕಾರಕವೆಂಬುದನ್ನು ಅರಿಯಲು ಸಂಶೋಧನೆಗಳ ಪಟ್ಟಿಯ ಅವಶ್ಯಕತೆಯೇನಿರಲಿಲ್ಲ. ಕಾರಣ, ದೇಹಪ್ರಕೃತಿಗೆ ವಿಷಕಾರಿಯೆನ್ನಿಸುವ ಸಂಗತಿಗಳನ್ನು ‘ಸೂಕ್ಷ್ಮ ಸಂವೇದನೆಗಳ’ ಮುಖಾಂತರ ನಮಗೆ ತಿಳಿಸುವ ಪ್ರಯತ್ನಗಳನ್ನು ಶರೀರವೇ ಮಾಡುತ್ತದೆಂಬುದು ಸರ್ವರೂ ಅರಿತ ಸಂಗತಿ. ಅಂತೆಯೇ ಸಾಮಾಜಿಕ ಮಾಧ್ಯಮಗಳ ಬಳಕೆ ‘ವ್ಯಸನಕ್ಕೆ’ ತಿರುಗಿದ ಲಕ್ಷಣಗಳನ್ನು ಅರಿಯದಷ್ಟು ಮೂಢರಂತೂ ನಾವಲ್ಲ. (ವಿಶೇಷವಾಗಿ 18ರ ಪ್ರಾಯಕ್ಕಿಂತ ಹೆಚ್ಚಿನ ವಯಸ್ಸಿನ ಯುವಮನಗಳು). ಏಕೆಂದರೆ, ನಿರಂತರವಾಗಿ ‘ಫೇಸ್ಬುಕ್’ ‘ಇನ್ಸ್ಟಾಗ್ರಾಂ’ ‘ಲಿಂಕ್ಡ್- ಇನ್’ ರೀತಿಯಂತಹ ಮತ್ತಿತ್ತರ ಸಾಮಾಜಿಕ ಮಾಧ್ಯಮಗಳನ್ನು ನಿರಂತರವಾಗಿ ‘ಸ್ಕ್ರಾಲ್’ ಮಾಡಿದಾಗ ‘ಮಾನಸಿಕ ಶಕ್ತಿಯೆಲ್ಲೋ’ ಕುಂದಿದಂತಹ ಅಥವಾ ಬರಿದಾದಂತಹ, ಇಲ್ಲವೋ ಸಣ್ಣಗೆ ಪ್ರಾರಂಭವಾಗುವ ತಲೆನೋವಿನ ಅನುಭವವಾಗುತ್ತದೆ.
ಅಂತೆಯೇ, ಸಾಮಾಜಿಕ ಮಾಧ್ಯಮಗಳ ದುಷ್ಪರಿಣಾಮಗಳನ್ನು ಅರಿಯಲೂ ಕೂಡ ಒಮ್ಮೊಮ್ಮೆ ಸಂಶೋಧನೆಗಳಿಗಿಂತ ಮನುಜನ ದೇಹಪ್ರಕೃತಿಯೇ ಹೆಚ್ಚು ಸಹಾಯ ಮಾಡಬಲ್ಲದೆನ್ನುವುದು ಅತಿಶಯೋಕ್ತಿಯಲ್ಲ.
ಇನ್ನು ಸಾಮಾಜಿಕ ಮಾಧ್ಯಮಗಳಿಂದು ಕೇವಲ ಸಂಬಂಧಕೊಂಡಿಗಳಾಗಿ, ಸಾಮಾಜಿಕ ಬೆಸುಗೆಗಾಗಿ ಮಾತ್ರ ಬಳಕೆಯಾಗುತ್ತಿಲ್ಲ. ಹೇಗೆ ‘ಅಣುಶಕ್ತಿ’ಯನ್ನು ಕೇವಲ ವಿದ್ಯುತ್ ಶಕ್ತಿಯ ಉತ್ಪಾದನೆಯ ಜತೆ ಜತೆಗೇ ಶಕ್ತಿಪ್ರದರ್ಶನಕ್ಕಾಗಿ ‘ಅಣುಬಾಂಬ್’ ತಯಾರಿಕೆಯಲ್ಲಿಯೂ ಉಪಯೋಗಿಸುತ್ತಾರೋ ಅಂತೆಯೇ ಸಾಮಾಜಿಕ ಮಾಧ್ಯಮಗಳನ್ನು ತಮ್ಮ ರಾಜಕೀಯ, ಸೈದ್ಧಾಂತಿಕ, ಸಾಮಾಜಿಕ ವಿಷಯಗಳಾದಿಯಾಗಿ ಸುಳ್ ಸುದ್ದಿ ಪ್ರಚುರಪಡಿಸಲೂ ಬಳಸಿ, ರಾಜಕೀಯ ಗೆಲುವಿನ ಲೆಕ್ಕಾಚಾರವನ್ನೇ ಬುಡಮೇಲು ಮಾಡಿದಂತಹ ಘಟನೆಗಳಿಗೆ ‘ವಿಶ್ವದ ದೊಡ್ಡಣ್ಣನೂ’ ಸೇರಿದಂತೆ ಹಲವು ರಾಷ್ಟಗಳೀಗಾಗಲೇ ಸಾಕ್ಷಿಯಾಗಿವೆ. ‘ಕೇಂಬ್ರಿಡ್ಜ್ ಅನಾಲಿಟಿಕಾ’ ಘಟನೆಯಂತೂ ಸಾರ್ವಕಾಲಿಕವಾದ ಅಧ್ಯಯನ ಪ್ರಿಯರ ವಿಷಯವಸ್ತುವಾಗಿದೆಯೆನ್ನುವುದರಲ್ಲಿ ಸಂದೇಹವೇ ಇಲ್ಲ. ಈ ವಿಚಾರಗಳ ಕುರಿತಂತೆ ‘ನೆಟ್‌ಫ್ಲಿಕ್ಸ್’ 2020ರಲ್ಲಿ “ದಿ ಸೋಶಿಯಲ್ ಡಿಲೆಮಾ” ಎಂಬ ಸಾಕ್ಷ್ಯಚಿತ್ರ ನಿರ್ಮಿಸಿ ಅಧ್ಯನಕಾರರ ಗಮನವನ್ನು ಸೆಳೆದಿತ್ತು.
1960ರಲ್ಲಿ ‘ಇಂಟರ್ನೆಟ್’ ವ್ಯವಸ್ಥೆ ಆರಂಭವಾದಾಗ ಅದರ ಮೂಲ ಉದ್ದೇಶವೇನಿತ್ತೆಂದರೆ ಸರ್ಕಾರಿ ಸಂಶೋಧನಾಕಾರರ ಮಧ್ಯೆ ಮಾಹಿತಿವಿನಿಮಯದ ಕೊಂಡಿಯಾಗಿ ರೂಪುಗೊಳ್ಳುವುದಾಗಿತ್ತು. ಆಗಿನ ಕಾಲದಲ್ಲಿ ‘ಗಣಕಯಂತ್ರಗಳ’ ಗಾತ್ರ ಎಷ್ಟು ದೊಡ್ಡದಾಗಿತ್ತೆಂದರೆ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಅದನ್ನು ವರ್ಗಾಯಿಸುವುದು ಅಸಾಧ್ಯವೇ ಆಗಿತ್ತು. ಹೀಗಾಗಿ ಮಾಹಿತಿವಿನಿಮಯವು ಸುಲಭವಾಗಲೆಂದು ನಿರ್ಮಿಸಿದ ವ್ಯವಸ್ಥೆಗೆ ‘ಆರ್ಪಾ’ (ಮುಂದುವರಿದ ಯೋಜನೆಗಳ ಸಂಶೋಧನಾ ಸಂಸ್ಥಾ ಸಂಕೀರ್ಣ) ಎಂದು ಹೆಸರಿಡಲಾಗಿತ್ತು. ಆರಂಭದಲ್ಲಿ ಅಮೆರಿಕೆಯ ಸಂಶೋಧನಾ ಸಂಸ್ಥೆಗಳಲ್ಲಿ, ವಿಶ್ವವಿದ್ಯಾನಿಲಯಗಳಲ್ಲಿ ಮತ್ತು ವ್ಯಾಪಾರ ಸಂಘ ಸಂಸ್ಥೆಗಳಲ್ಲಿ ಇದರ ಉಪಯೋಗವನ್ನು ಪಡೆಯಲಾಯಿತು. 1980ರ ಹೊತ್ತಿಗೆ ಸರಿಸುಮಾರು 25 ದೇಶಗಳನ್ನೂ ‘ಆರ್ಪಾ’ ತಲುಪಿಯಾಗಿತ್ತು. ಅಂತಿಮವಾಗಿ 1990ರಲ್ಲಿ ಗ್ರಾಹಕರಿಗಾಗಿ ವಿಕಸನಹೊಂದಿದ ‘ಆರ್ಪಾ’ ತನ್ನನ್ನು ಇಂಟರ್ನೆಟ್ ಆಗಿ ಬದಲಾಯಿಸಿಕೊಂ’ಡು ಬಾಗಿಲು ತೆರೆದು ನಿಂತಿತ್ತು. ಇದಾದ 7 ವರ್ಷಗಳ ನಂತರ ‘ಸಿಕ್ಸ್ ಡಿಗ್ರೀಸ್’ ಎಂಬ ಹೆಸರಿನ ಪ್ರಪ್ರಥಮ ‘ಸಾಮಾಜಿಕ ಮಾಧ್ಯಮ’ ಗ್ರಾಹಕಲೋಕಕ್ಕೆ ದಾಪುಗಾಲಿಟ್ಟಿತು. ಅದಾದ 7 ವರ್ಷಗಳ ನಂತರ ಸರಿಯಾಗಿ 2004ರಲ್ಲಿ ‘ಫೇಸ್ ಬುಕ್’ ಸಂಸ್ಥೆ ‘ಜ್ಹುಕರ್ ಬರ್ಗ್’ ರವರ ಮಾರ್ಗದರ್ಶನದಲ್ಲಿ ಮಾರುಕಟ್ಟೆಗೆ ಪ್ರವೇಶಿಸಿತು. ಅಲ್ಲಿಂದ ಆರಂಭವಾದ ಅಂತರ್ಜಾಲೀಯ ಕ್ರಾಂತಿ ಜನರ ಮನವನ್ನು ಎಷ್ಟರ ಮಟ್ಟಿಗೆ ಬದಲಿಸಿತೆಂದರೆ, ಆರಂಭದಲ್ಲಿ ಮಾಹಿತಿವಿನಿಮಯಕ್ಕೆ ಸೀಮಿತವಾಗಿದ್ದ ಜಾಲತಾಣ ನಂತರ ವೈಯುಕ್ತಿಕ ಬದುಕಿನ ಘಟನೆಗಳನ್ನು ಹಂಚಿಕೊಳ್ಳುವುದು, ತಮ್ಮ ಬದುಕಿಗಿಂತ ಹೆಚ್ಚಾಗಿ ಇನ್ನೊಬ್ಬರ ಬದುಕಿನಲ್ಲಿ ಏನಾಗುತ್ತಿದೆಯೆಂಬ ಜಿಜ್ಞಾಸೆ ಸೃಷ್ಟಿ, ಜೊತೆಯಲ್ಲಿಯೇ ‘ನೀವು ಮನೆಪಕ್ಕದಲ್ಲಿದ್ದೀರೋ ಇಲ್ಲವೋ ‘ಎಫ್.ಬಿ’ ಅಥವಾ ಇನ್ಸ್ಟಾದಲ್ಲಿದ್ದರೆ ಸಾಕೆಂಬ ಮಟ್ಟಕ್ಕೆ ಹೊರಟುಹೋಯಿತು. ಎಲ್ಲಕ್ಕಿಂತ ಮಿಗಿಲಾಗಿ ನೀವು ನಿಮ್ಮ ಸಾಮಾಜಿಕ ಮಾಧ್ಯಮದ ಖಾತೆಯಲ್ಲೊಂದು ಪೋಸ್ಟ್ ಮಾಡಿ ಅದನ್ನು ಗಮನಿಸದೆ ಹಲವು ಗಂಟೆಗಳ ಕಾಲವೋ ಅಥವಾ ದಿನಗಳ ಕಾಲವೋ ಇರಬಲ್ಲಿರೋ? ಖಂಡಿತಾ ಇಲ್ಲ.
ಏನನ್ನಾದರೂ ಪೋಸ್ಟ್ ಮಾಡಿದ ಮರುಕ್ಷಣವೇ ಆ ಪೋಸ್ಟ್ ಅನ್ನು ತಮ್ಮ ಪ್ರೀತಿಪಾತ್ರರು ಗಮನಿಸಿದ್ದರೋ ಇಲ್ಲವೋ, ಎಷ್ಟು ಜನರನ್ನದು ತಲುಪಿದೆ, ಎಷ್ಟು ಲೈಕ್ ಮತ್ತು ಕಾಮೆಂಟ್ ಬಂದಿವೆಯೆಂದು ಗಮನಿಸುವಲ್ಲಿಯೇ ನಿರತರಾಗಿರುತ್ತೀರಿ! ಹಾಗೇನಾದರೂ ನಿರೀಕ್ಷಿಸಿದ ಮಟ್ಟದಲ್ಲಿ ಪ್ರತಿಕ್ರಿಯೆಗಳು ಬರದಿದ್ದಲ್ಲಿ ಹತಾಶರಾಗುತ್ತೀರಿ. ಹೀಗಾಗಿ ಪ್ರಾಸ್ತಾವಿಕ ಸತ್ಯವೇನೆಂದರೆ, ನಿಮ್ಮ ಬದುಕಿನಲ್ಲೇನಾಗುತ್ತಿದೆ ಎಂಬುದು ನಿಮ್ಮ ಕುಟುಂಬಕ್ಕಿಂತ ಹೆಚ್ಚಾಗಿ ನಿಮ್ಮ ಸಾಮಾಜಿಕ ಮಾಧ್ಯಮದ ಸ್ನೇಹಿತರಿಗೆ ತಿಳಿದಿರುತ್ತದೆ. ಹೀಗಾಗಿ ಇಂದು ‘ಸಾಮಾಜಿಕ ಮಾಧ್ಯಮ’ ಕೇವಲ ತಂತ್ರಜ್ಞಾನವಾಗಿ ಉಳಿದಿಲ್ಲ, ಬದಲಾಗಿ ‘ಜೀವನ ವಿಧಾನವಾಗಿದೆ’ ಎಂದರೆ ತಪ್ಪಾಗಲಿಕ್ಕಿಲ್ಲ. ಏಕೆಂದರೆ 2010ರಲ್ಲಿ ಭಾರತದಲ್ಲಿ ಒಟ್ಟು ಜನಸಂಖ್ಯೆಯ ಒಟ್ಟಾರೆ 5% ಜನರು ಮಾತ್ರ ಬಳಸುತ್ತಿದ್ದ ‘ಸಾಮಾಜಿಕ ಮಾಧ್ಯಮ’ವಿಂದು 55% ಜನರನ್ನೂ ಮೀರಿ ಹೋಗಿದೆಯೆನ್ನುವ ‘ಅಂಕಿಅಂಶಗಳೇ’ ಮೇಲಿನ ಸಂಗತಿಯನ್ನು ಧೃಢಪಡಿಸುತ್ತಿವೆ.
ಹಾಗಿದ್ದಲ್ಲಿ ಸಾಮಾಜಿಕ ಮಾಧ್ಯಮಗಳು ವ್ಯಸನಯುಕ್ತ ಮನವನ್ನು ನಿರ್ಮಿಸುವಲ್ಲಿ ಹೇಗೆ ಯಶಸ್ವಿಯಾಗುತ್ತವೆ? ಎಂಬಂತಹ ಪ್ರಶ್ನೆಗೆ ಉತ್ತರ ಇಂತಿದೆ.
ಮೇಲೆ ತಿಳಿಸಿದಂತೆಯೇ ನೀವು ಏನನ್ನಾದರೂ ಪೋಸ್ಟ್ ಮಾಡಿದ ಮರುಕ್ಷಣವೇ ಆ ಪೋಸ್ಟ್ ಅನ್ನು ತಮ್ಮ ಪ್ರೀತಿಪಾತ್ರರು ಗಮನಿಸಿದ್ದರೋ ಇಲ್ಲವೋ, ಎಷ್ಟು ಜನರನ್ನದು ತಲುಪಿದೆ, ಎಷ್ಟು ಲೈಕ್ ಮತ್ತು ಕಾಮೆಂಟ್ ಬಂದಿವೆಯೆಂದು ಗಮನಿಸುವಲ್ಲಿಯೇ ನಿರತರಾಗಿರುತ್ತೀರಿ! ಹಾಗೇನಾದರೂ ನಿರೀಕ್ಷಿಸಿದ ಮಟ್ಟದಲ್ಲಿ ಪ್ರತಿಕ್ರಿಯೆಗಳು ಬರದಿದ್ದಲ್ಲಿ ಹತಾಶರಾಗುತ್ತೀರಿ. ನೀವು ಎಂದಾದರೂ ಪೋಸ್ಟ್ ಮಾಡಿ ಮರುಕ್ಷಣ ಅದರೆಡೆಗೆ ಗಮನವನ್ನೀಯಲೇ ಇರದಂತಹ ಸಂದರ್ಭವಿರುವುದೇ? ಖಂಡಿತಾ ಇಲ್ಲ. ಒಂದುವೇಳೆ ನಿಮ್ಮಿಂದ ಇಂಟರ್ನೆಟ್ ಸೇವೆ ಕಸಿದುಕೊಂಡರೂ ಸಹ ನಿಮ್ಮ ಮನವಂತೂ ಮರಳಿಮರಳಿ ಅದರೆಡೆಗೇ ಸಾಗುತ್ತದೆ. ಇಂತಹುದೇ ಭಾವನೆಯನ್ನು ಮಾದಕ ವ್ಯಸನಿಗಳಲ್ಲಿ ನಾವು ಕಾಣಬಹುದು. ಮಾನವನ ಎರೆಡು ಪ್ರಮುಖ ಆಸೆಗಳೆಂದರೆ ‘ತನ್ನನ್ನು ಎಲ್ಲರೂ ಇಷ್ಟಪಡಬೇಕೆಂಬುದು ಒಂದಾದರೆ, ತಾನು ಇಷ್ಟಪಡುವ ವ್ಯಕ್ತಿಯ ಸಾಮೀಪ್ಯವನ್ನು ಆತ ಬಯಸುತ್ತಾನೆ’. ಇವೆರೆಡೂ ಸುಲಭವಾಗಿ ಸಾಧ್ಯವಾಗುವುದು ‘ಸಾಮಾಜಿಕ ಮಾಧ್ಯಮದಲ್ಲಿ’!. ಮಾನವನ ಮೆದುಳಿನಲ್ಲಿರುವ ‘ಡೋಪಮೈನ್’ (ಆನಂದವುಂಟಾದಾಗ ಮೆದುಳು ಸ್ರವಿಸುವ ರಾಸಾಯನಿಕ) ಆತ ಅತ್ಯಂತ ಆನಂದದಿಂದಿರುವ ಕಾರ್ಯದಲ್ಲಿ ಪ್ರವೃತ್ತನಾದಾಗ, ಸಾಧನೆ ಮಾಡಿದಾಗ, ರುಚಿಕರವಾದ ತಿನಿಸು ತಿಂದಾಗ, ಮಾದಕದ್ರವ್ಯ ಸೇವಿಸಿದಾಗ ಅಥವಾ ಲೈಂಗಿಕ ಕ್ರಿಯೆಯ ನಂತರ ಮೆದುಳಿನಲ್ಲಿ ಸ್ರವಿಸುತ್ತದೆ. ಆದರೆ ಸಾಮಾಜಿಕ ಮಾಧ್ಯಮ ಬಳಕೆಯಿಂದ ಈ ರಾಸಾಯನಿಕವು ಅತ್ಯಂತ ಸುಲಭವಾಗಿ ಅಲ್ಲಿನ ‘ಲೈಕ್, ಕಾಮೆಂಟ್ ಇತ್ಯಾದಿಗಳ ಮೂಲಕ ಮೆದುಳಿನ ರಿವಾರ್ಡ್ ವ್ಯವಸ್ಥೆಯನ್ನು ಉದ್ರೇಕಿಸಿ ಸ್ರವಿಸುವ ಕಾರಣಾರ್ಥವಾಗಿ ಪದೇ ಪದೇ ಸಾಮಾಜಿಕ ಮಾಧ್ಯಮವನ್ನು ಬಳಸಬೇಕೆಂಬ ಉತ್ಕಟ ಇಚ್ಛೆ ನಮ್ಮಲ್ಲುಂಟಾಗುತ್ತದೆ.
ಇದನ್ನೂ ಓದಿ | ವಿಸ್ತಾರ Explainer | Aadhaar card | ಆಧಾರ್ ಕಾರ್ಡ್ ಕಳೆದಾಗ ಸುಮ್ಮನಿದ್ದರೆ ಡೇಂಜರ್!
ಇನ್ನು ಮನುಷ್ಯನ ಮತ್ತೊಂದು ಸ್ವಾಭಾವಿಕ ಗುಣವೇ ‘ಹೋಲಿಕೆ’. ತನ್ನ ಬದುಕನ್ನು ಇತರರೊಡನೆ ಹೋಲಿಸಿಕೊಳ್ಳುವುದು. ಸಾಮಾಜಿಕ ಮಾಧ್ಯಮದಲ್ಲಂತೂ ತಾವು ಪರಿಪೂರ್ಣರೆಂಬಂತೆ ಬಿಂಬಿಸುವುದೇ ಬಳಕೆದಾರರ ಪ್ರಥಮಾದ್ಯತೆ. ಯಾವುದೇ ಮನುಷ್ಯನೂ ಕೂಡ ಪರಿಪೂರ್ಣನಲ್ಲವೆಂಬುದು ಸರ್ವರಿಗೂ ತಿಳಿದ ಸಂಗತಿಯಾಗಿದೆ. ತಾವು ನೈಜಬದುಕಿನಲ್ಲಿ ಸಾಲಮಾಡಿ ಕೊಂಡ ದುಬಾರಿ ವಸ್ತುಗಳನ್ನು, ಸ್ನೇಹಿತನೊಡನೆ ನೂರು ಮನಸ್ತಾಪಗಳಿದ್ದರೂ ತಾವು ಅತ್ಯಂತ ಆತ್ಮೀಯರೆಂಬಂತೆ ಬಿಂಬಿಸಲು ಇತ್ಯಾದಿಯಾಗಿ ನೈಜತೆಯನ್ನು ಅಲ್ಪಮರೆಮಾಚಿಯೇ ಬಿಂಬಿಸಿಕೊಳ್ಳುವ ಯತ್ನದೊಡನೆ ತಮ್ಮ ಬದುಕಿಗಿಂತ ಇತರರ ಬದುಕಿನಲ್ಲೇನಾಗುತ್ತಿದೆಯೆಂಬ ಜಿಜ್ಞಾಸೆ ಒಮ್ಮೊಮ್ಮೆ ಹೋಲಿಕೆಯೊಡನೆ ಅಂತ್ಯವಾಗಿ ವ್ಯಕ್ತಿಯೋರ್ವನ ಆತ್ಮಗೌರವಕ್ಕೂ ಧಕ್ಕೆಯುಂಟುಮಾಡಬಲ್ಲದು. ಇದರಿಂದಾಗಿ ಮಾನಸಿಕ ಖಿನ್ನತೆಯಿಂದ ಬಳಲುವ ಸಾಧ್ಯತೆಯೂ ಹೆಚ್ಚು.
ಏಕಾಗ್ರತೆಯ ವಿಚಾರಕ್ಕೆ ಬಂದರೂ, ಸಾಮಾಜಿಕ ಮಾಧ್ಯಮದ ಪ್ರಭಾವಕ್ಕೆ ಒಳಗಾಗಿಲ್ಲವೆಂದೇನಿಲ್ಲ. ಏಕೆಂದರೆ, ಹಿಂದೆಲ್ಲ ಸಮಯಕಳೆಯಲು ಬಿಡುವಿನ ವೇಳೆಯಲ್ಲಿ ಜನರೆಲ್ಲ ಸೇರಿ ಹೊರಾಂಗಣ ಮತ್ತು ಒಳಾಂಗಣ ಆಟಗಳನ್ನು ಆಡುತ್ತಿದ್ದರು, ಸ್ನೇಹಿತರ ಮನೆಗೆ ತೆರಳುತ್ತಿದ್ದರು, ಪ್ರವಾಸಕ್ಕೆ ಅಥವಾ ಹತ್ತಿರದ ಉದ್ಯಾನವನಕ್ಕೆ ಹೋಗುತ್ತಿದ್ದರು, ಓದುತ್ತಿದ್ದರು, ಬರೆಯುತ್ತಿದ್ದರು, ಆದರೆ ಈಗ ಸಾಮಾಜಿಕ ಮಾಧ್ಯಮವನ್ನೇ ತೆಗೆದುಕೊಳ್ಳಿ, ಮೊದಲೆಲ್ಲ ಒಂದುತ್ತಮ ವಿಷಯ ಮಂಡನೆಗೆ ಕನಿಷ್ಠವೆಂದರೂ 10 ನಿಮಿಷಗಳಷ್ಟು ಕಾಲಾವಕಾಶವನ್ನು ವಿಷಯ ನಿರೂಪಕರು ಬೇಡುತ್ತಿದ್ದರು. ಆದರೀಗ 30 ಸೆಕೆಂಡ್ ರೀಲ್ಸ್, ನಿಮಿಷದ ಶಾರ್ಟ್ಸ್ ಬಂದಮೇಲಂತೂ ಒಂದೇ ವಿಷಯದ ಮೇಲೆ ನಿರಂತರವಾಗಿ ಏಕಾಗ್ರಚಿತ್ತದಿಂದ ನೋಡುವ, ಕೇಳುವ ಅಥವಾ ಗಮನವೀಯುವ ಸಾಮರ್ಥ್ಯ ನಿರಂತರವಾಗಿ ಕುಸಿಯುತ್ತಿರುವುದನ್ನು ನಾವೆಲ್ಲಾ ಕಾಣಬಹುದು. ಇನ್ನು ಸಿನಿಮಾ ಮಂದಿರದಲ್ಲೂ ಮಧ್ಯೆ ಮಧ್ಯೆ ಮೊಬೈಲ್ ತೆರೆದು ನೋಡುವ ಚಾಳಿ ಹಲವಾರು ಮಂದಿಗಿರುವುದನ್ನು ಸಹಜವಾಗಿಯೇ ನೀವು ಗಮನಿಸಬಹುದು. ಇದರಿಂದಾಗಿ ಕಾಯುವ, ತಾಳ್ಮೆಯ ಮನಸ್ಥಿತಿಯು ನಿರಂತರವಾಗಿ ಕಡಿಮೆಯಾಗುತ್ತಿರುವುದು ಹಾಗೂ ಎಲ್ಲವೂ ಹಠಾತ್ತನೆ ಆಗಿಬಿಡಬೇಕೆಂಬ ಭಾವನೆ ಜಾಗೃತವಾಗುತ್ತಿರುವುದು ವಿಪರ್ಯಾಸವೇ ಸರಿ.
ಕೊನೆಯದಾಗಿ ನಮ್ಮೆಲ್ಲರ ಮಾನಸಿಕ ಆರೋಗ್ಯಕ್ಕೆ ‘ನಿದ್ರೆಯು’ ಎಷ್ಟು ಅವಶ್ಯಕವೆಂಬುದನ್ನು ಅರಿತಿದ್ದೇವೆ. ಆದರೆ ರಾತ್ರಿ ಮಲಗುವ ವೇಳೆಯಲ್ಲಿ ಕತ್ತಲಲ್ಲಿ ಮೊಬೈಲ್ ಆನ್ ಮಾಡಿಕೊಂಡು ‘ಸಾಮಾಜಿಕ ಮಾಧ್ಯಮಗಳಲ್ಲಿ, ಇತರರ ಬದುಕಲ್ಲಿ ಏನಾಗುತ್ತಿದೆಯೆಂದು ಗಮನಿಸಿದ್ದೇ ಆದರೆ ನಿಮ್ಮ ನಿದ್ರಾಭಂಗವಂತೂ ಖಚಿತ. ಏಕೆಂದರೆ ಮೊಬೈಲ್ ವಿಕಿರಣಗಳು ಮೆದುಳನ್ನು ಹಠಾತ್ ಜಾಗೃತ ಸ್ಥಿತಿಗೆ ಕೊಂಡೊಯ್ದು ಮೆಲೆಟಿನ್ ಉತ್ಪಾದನೆಗೆ ಕಡಿವಾಣ ಹಾಕಿ ನಮ್ಮ ಮೆದುಳು ಆಯಾಸವಾಗುವುದನ್ನು ತಪ್ಪಿಸುತ್ತವಂತೆ. ಹೀಗಾಗಿ ಸಹಜವಾಗಿಯೇ ಶರೀರಕ್ಕೆ ವಿಶ್ರಾಂತಿ ನೀಡಬೇಕಾದ ಸಮಯದಲ್ಲಿ ಮೊಬೈಲ್ ವೀಕ್ಷಿಸುವುದು ಮತ್ತೊಂದು ಆರೋಗ್ಯ ಸಮಸ್ಯೆಗೆ ನಾಂದಿ ಹಾಡುತ್ತದೆ.
ಹೀಗಾಗಿ ‘ಸಾಮಾಜಿಕ ಮಾಧ್ಯಮ’ ಅಲ್ಲಿನ ಲೈಕ್, ಕಾಮೆಂಟ್ಸ್ ಇತ್ಯಾದಿಗಳು ಮನಸ್ಸಿನ ಆಳಕ್ಕೆ ನಾಟದಿರಲಿ. ಅದರ ಬಳಕೆ ಮಿತವಾಗಿಯೂ ಮತ್ತು ಹಿತವಾಗಿಯೂ ಇರಬೇಕು. ಇಲ್ಲದಿದ್ದಲ್ಲಿ ನಾವೇ ಸೃಷ್ಟಿಸಿಕೊಳ್ಳುವ ಕಾಲ್ಪನಿಕ ವ್ಯಸನಕ್ಕೆ ಕೃತಕ ಮದ್ದಾಗಿ ಅದು ನಿಲ್ಲುತ್ತದೆ! ಎಚ್ಚರ.
ಇದನ್ನೂ ಓದಿ | ರಾಜ ಮಾರ್ಗ ಅಂಕಣ | ಮಕ್ಕಳು ಯಾವ ಪುಸ್ತಕ ಓದಬೇಕು ಮತ್ತು ಹೇಗೆ ಓದಬೇಕು: ಇಲ್ಲಿದೆ ಮಹತ್ವದ ಟಿಪ್ಸ್- ಭಾಗ 2