Site icon Vistara News

ರಾಜಮಾರ್ಗ ಅಂಕಣ: ಮನರಂಜನೆಯ ಮಹಾ ದೊರೆ, ಕನಸುಗಾರನ ನಿರ್ಗಮನ

ರಾಜಮಾರ್ಗ ಅಂಕಣ ramoji rao

ಒಬ್ಬ ವ್ಯಕ್ತಿ – ನೂರಾರು ಸಂಸ್ಥೆಗಳು, ಅವರು ರಾಮೋಜಿ ರಾವ್

ರಾಜಮಾರ್ಗ ಅಂಕಣ: ಜಗತ್ತಿನ ಅತೀ ದೊಡ್ಡ ಫಿಲಂ ಸಿಟಿ (Film City) ಕಟ್ಟಿದವರು ಅವರು. ಹೆಸರು ರಾಮೋಜಿ ರಾವ್ (Ramoji Rao).

ನಿನ್ನೆ ಹೈದರಾಬಾದ್ (Hyderabad) ನಗರದಿಂದ ಬಂದ ಒಂದು ಶಾಕಿಂಗ್ ನ್ಯೂಸ್ ಭಾರತದ ಕೋಟಿ ಕೋಟಿ ಸಿನೆಮಾ ಅಭಿಮಾನಿಗಳನ್ನು ತಲ್ಲಣ ಮಾಡಿ ಹೋಯಿತು. ಅದು ರಾಮೋಜಿ ರಾವ್ ಅವರ ನಿರ್ಗಮನ.

ನನ್ನ ತರಬೇತಿ ಮತ್ತು ಭಾಷಣಗಳಲ್ಲಿ ಅತೀ ಹೆಚ್ಚು ಉಲ್ಲೇಖ ಪಡೆದ ಒಬ್ಬ ಲೆಜೆಂಡ್ ಇದ್ದರೆ ಅದು ರಾಮೋಜಿ ರಾವ್. ಅವರನ್ನು ಅವರದ್ದೇ ಸ್ಟುಡಿಯೋದಲ್ಲಿ ಭೇಟಿ ಮಾಡಿದ ಕ್ಷಣಗಳು ನನಗೆ ಪ್ರೇರಣಾದಾಯಕ. ಅವರು ತನ್ನ 87 ವರ್ಷಗಳ ಬದುಕಿನಲ್ಲಿ ಹುಟ್ಟು ಹಾಕಿದ್ದು ನೂರಾರು ಸಂಸ್ಥೆಗಳನ್ನು. ಅವರು ಬಿಟ್ಟು ಹೋದ ಸ್ಥಾನವನ್ನು ಬೇರೆ ಯಾರೂ ತುಂಬಲು ಸಾಧ್ಯವೇ ಇಲ್ಲ.

ಶೂನ್ಯದಿಂದ ಆರಂಭ

ಆಂಧ್ರಪ್ರದೇಶದ ಒಂದು ಸಣ್ಣ ಹಳ್ಳಿಯಿಂದ ಒಂದು ಕೃಷಿಕ ಕುಟುಂಬದಿಂದ ಬಂದವರು ರಾಮೋಜಿ ರಾವ್. ಓದಿದ್ದು ವಿಜ್ಞಾನ ಪದವಿ. ಬಾಲ್ಯದಲ್ಲಿ ಹೈದರಾಬಾದನ ಗಲ್ಲಿಗಳಲ್ಲಿ ಬೈಸಿಕಲ್ ಹಿಂದೆ ಉಪ್ಪಿನಕಾಯಿ ಭರಣಿಗಳನ್ನು ಕಟ್ಟಿಕೊಂಡು ಮನೆಮನೆಗೆ ಮಾರಿ ಒಂದಿಷ್ಟು ದುಡ್ಡು ಸಂಪಾದನೆ ಮಾಡಿದ ಅನುಭವ ಅವರದ್ದು. ಮುಂದೆ ಅದೇ ವ್ಯವಹಾರವು ‘ಪ್ರಿಯಾ ಉಪ್ಪಿನಕಾಯಿ ‘ ಎಂಬ ಉದ್ಯಮದ ರೂಪವನ್ನು ತಾಳಿತು. ಅವರು ಕೈ ಹಾಕಿದ ಪ್ರತೀ ಒಂದು ಕ್ಷೇತ್ರವನ್ನೂ ಉದ್ಯಮವಾಗಿ ಬೆಳೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.

ರಿಸ್ಕ್ ತೆಗೆದುಕೊಳ್ಳುವ ಶಕ್ತಿ, ಪಕ್ಕಾ ವ್ಯವಹಾರ ಪ್ರಜ್ಞೆ, ಮಾರ್ಕೆಟಿಂಗ್ ಕೌಶಲಗಳು, ಶಿಸ್ತಿನ ಜೀವನ ಕ್ರಮ ಮುಂದೆ ಅವರನ್ನು ಬಹಳ ಎತ್ತರಕ್ಕೆ ಬೆಳೆಸಿದವು. ಮುಂದೆ ರಮಾದೇವಿ ಎಂಬವರನ್ನು ಮದುವೆ ಆದ ನಂತರ ಅವರು ಹಿಂದೆ ತಿರುಗಿ ನೋಡಿದ್ದೇ ಇಲ್ಲ.

ಮಾರ್ಗದರ್ಶಿ ಚಿಟ್ ಫಂಡ್ ಸ್ಥಾಪನೆ

ಆಂಧ್ರಪ್ರದೇಶದ ಬ್ಯಾಂಕಿಂಗ್ ಸೆಕ್ಟರಗೆ ಸವಾಲಾಗಿ 1962ರಲ್ಲಿ ಮಾರ್ಗದರ್ಶಿ ಚಿಟ್ ಫಂಡ್ ಎಂಬ ಹಣಕಾಸು ಸಂಸ್ಥೆಯನ್ನು ಅವರು ಆರಂಭ ಮಾಡಿದರು. ಒಂದೊಂದು ರೂಪಾಯಿಯನ್ನೂ ಜಾಗ್ರತೆಯಿಂದ ಬಳಸುವ ಅವರ ಜಾಣ್ಮೆಯು ಆ ಸಂಸ್ಥೆಯನ್ನು ದಕ್ಷಿಣ ಭಾರತದ ಮಹೋನ್ನತ ಹಣಕಾಸು ಸಂಸ್ಥೆಯಾಗಿ ಮಾಡಿತು. ಇಂದು ಅದು ನೂರಾರು ಶಾಖೆಗಳ ಮೂಲಕ 10,000 ಕೋಟಿ ರೂ.
ಬಂಡವಾಳದ ಸಂಸ್ಥೆಯಾಗಿ ಬೆಳೆದು ನಿಂತಿದೆ.

ಮಾಧ್ಯಮದ ದೈತ್ಯ – ಈ ನಾಡು ಪತ್ರಿಕೆ

ಒಂದು ಉದ್ಯಮದಲ್ಲಿ ಬಂದ ಲಾಭವನ್ನು ಇನ್ನೊಂದು ಉದ್ಯಮದಲ್ಲಿ ತೊಡಗಿಸುವುದು ರಾಮೋಜಿ ರಾವ್ ಅವರ ಪಾಲಿಸಿ. ಸಾಲ ಮಾಡಿ ಬಿಸಿನೆಸ್ ಮಾಡಬಾರದು ಎಂದವರು ಹೇಳುತ್ತಿದ್ದರು. 1974ರಲ್ಲಿ ಅವರು ಆಂಧ್ರಪ್ರದೇಶದಲ್ಲಿ ʼಈ ನಾಡು’ (Eenadu news paper) ಎಂಬ ದಿನಪತ್ರಿಕೆಯನ್ನು ಆರಂಭ ಮಾಡಿದರು. ಅವರು ಪತ್ರಿಕೋದ್ಯಮದ ಯಾವ ಪಾಠವನ್ನೂ ಕಲಿತಿರಲಿಲ್ಲ. ಆದರೆ ಜನರಿಗೆ ಏನು ಬೇಕು ಎಂದು ಅವರಿಗೆ ಚೆನ್ನಾಗಿ ಗೊತ್ತಿತ್ತು. ಕೆಲವೇ ವರ್ಷಗಳಲ್ಲಿ ಅದು ತೆಲುಗಿನ ನಂಬರ್ ಒನ್ ಪತ್ರಿಕೆ ಆಗಿ ಬೆಳೆಯಿತು. ಅದೀಗ 23 ಪುರವಣಿಗಳನ್ನು ಹೊಂದಿದ್ದು ಲಕ್ಷಾಂತರ ಓದುಗರನ್ನು ತಲುಪುತ್ತಿದೆ. ಎಲ್ಲಾ ಕಡೆಗಳಲ್ಲಿ ಮಿಂಚಿದ್ದು ರಾಮೋಜಿ ರಾವ್ ಅವರ ವ್ಯವಹಾರ ಕುಶಲತೆ ಮತ್ತು ದಣಿವರಿಯದ ದುಡಿಮೆ.

ರಾಜಮಾರ್ಗ ಅಂಕಣ ramoji rao

ನೂರಾರು ಸಂಸ್ಥೆಗಳು ಮತ್ತು ಉದ್ಯಮಗಳು

ಅವರು ಮಹಾ ಶಿಸ್ತಿನ ಮನುಷ್ಯ. ದಿನವೂ 18 ಘಂಟೆಗಳ ದುಡಿತ. ಒಂದು ನಿಮಿಷ ವ್ಯರ್ಥ ಮಾಡುವುದು ಅವರಿಗೆ ಇಷ್ಟ ಆಗುವುದಿಲ್ಲ. ಹರಟೆ, ಗಾಸಿಪ್ಸ್ ಇಲ್ಲವೇ ಇಲ್ಲ. ನೆಗೆಟಿವ್ ವ್ಯಕ್ತಿಗಳನ್ನು ಹತ್ತಿರ ಸೇರಿಸಿಕೊಳ್ಳುವುದೇ ಇಲ್ಲ. ಪರಿಣಾಮವಾಗಿ ಅವರು ಒಬ್ಬ ಯಶಸ್ವೀ ಉದ್ಯಮಿಯಾಗಿ ಎಮರ್ಜ್ ಆದರು. ಅವರ ಪತ್ನಿ ರಮಾದೇವಿ ಗಂಡನ ಬಲಗೈ ಆಗಿ ನಿಂತು ವ್ಯವಹಾರವನ್ನು ಬೆಳೆಸಿದರು. ಡಾಲ್ಫಿನ್ ಗ್ರೂಪ್ ಆಫ್ ಹೋಟೆಲ್ಸ್, ರಮಾದೇವಿ ಶಿಕ್ಷಣ ಸಂಸ್ಥೆಗಳು, ಕಲಾಂಜಲಿ ಶಾಪಿಂಗ್ ಮಾಲ್ಸ್, ಪ್ರಿಯಾ ಉಪ್ಪಿನಕಾಯಿ …..ಹೀಗೆ ಅವರು ನೂರಾರು ಉದ್ಯಮಗಳನ್ನು ಸ್ಥಾಪನೆ ಮಾಡಿದರು. ಎಲ್ಲವನ್ನೂ ಗೆಲ್ಲಿಸಿದರು.

ರಾಮೋಜಿ ಫಿಲ್ಮ್ ಸಿಟಿ – ಇದು ಮ್ಯಾಗ್ನಮೋಪಸ್!

ರಾಜಮಾರ್ಗ ಅಂಕಣ ramoji rao

ರಾಮೋಜಿ ರಾವ್ ಅವರನ್ನು ಇಂದು ನಾವು ಅಗತ್ಯವಾಗಿ ನೆನಪಿಸಿಕೊಳ್ಳಬೇಕಾದದ್ದು ಈ ಫಿಲ್ಮ್ ಸ್ಟುಡಿಯೋ ಮೂಲಕ. ಹೈದರಾಬಾದ್ ನಗರದ ಹೃದಯ ಭಾಗದಲ್ಲಿ 1666 ಎಕರೆ ಜಾಗವನ್ನು ಅವರು ಖರೀದಿಸಿ ಅದರಲ್ಲಿ ತನ್ನ ಎಲ್ಲ ಕನಸುಗಳನ್ನು ಧಾರೆ ಎರೆದರು. ಎತ್ತರವಾದ ಪರ್ವತಗಳು, ಧುಮ್ಮಿಕ್ಕುವ ಜಲಪಾತಗಳು, ವಿಸ್ತಾರವಾದ ಬೀದಿಗಳು, ಹಸಿರು ಹೊದ್ದು ಮಲಗಿದ ಮೈದಾನಗಳು, ದಟ್ಟವಾದ ಅರಣ್ಯಗಳು, ಅರಮನೆಗಳು, ದೇಗುಲಗಳು ಕೋಟೆಗಳು…..ಹೀಗೆ ಎಲ್ಲವನ್ನೂ ಕೃತಕವಾಗಿ ನಿರ್ಮಿಸಿದರು. ಒಂದು ಚಿತ್ರ ನಿರ್ಮಾಣಕ್ಕೆ ಏನೆಲ್ಲ ಬೇಕೋ (ಹೊರಾಂಗಣ, ಒಳಾಂಗಣ, ಬೆಳಕು, ಸ್ಟುಡಿಯೋ, ಚಿತ್ರೀಕರಣ ಘಟಕ, ಟೆಕ್ನಿಕಲ್ ಸ್ಟಾಫ್) ಎಲ್ಲವನ್ನೂ ಒದಗಿಸಿದರು. ಒಬ್ಬ ನಿರ್ಮಾಪಕ ಮತ್ತು ನಿರ್ದೇಶಕ ದುಡ್ಡು ಮತ್ತು ಸ್ಟೋರಿ ತೆಗೆದುಕೊಂಡು ಅಲ್ಲಿಗೆ ಬಂದರೆ ಇಡೀ ಸಿನಿಮಾ ಶೂಟ್ ಮಾಡಿ, ಎಡಿಟಿಂಗ್ ಮಾಡಿ, ಮ್ಯೂಸಿಕ್, ಕಲರಿಂಗ್, VFX ಮುಗಿಸಿ ಸಿನಿಮಾ ತೆಗೆದುಕೊಂಡು ಹೋಗುವ ವ್ಯವಸ್ಥೆ ಅಲ್ಲಿ ಅವರು ಮಾಡಿದರು!

ಅದರ ಪರಿಣಾಮವಾಗಿ ಭಾರತದ ಸಾವಿರಾರು ಸಿನೆಮಾಗಳು ಅಲ್ಲಿ ನಿರ್ಮಾಣವಾದವು. ಬಾಹುಬಲಿ ( ಭಾಗ 1 ಮತ್ತು 2), ಕೆಜಿಎಫ್ ( ಭಾಗ 1 ಮತ್ತು 2), ಕ್ರಿಶ್, ರಾಜಕುಮಾರ ಮೊದಲಾದ ಮಹೋನ್ನತ ಸಿನೆಮಾಗಳು ಶೂಟಿಂಗ್ ಆದದ್ದು ಇದೇ ಸ್ಟುಡಿಯೋ ಒಳಗೆ! ನೂರಾರು ತೆಲುಗು, ಕನ್ನಡ, ಹಿಂದೀ ಧಾರಾವಾಹಿಗಳು ಅಲ್ಲಿ ಹುಟ್ಟು ಪಡೆದವು.

ರಾಮೋಜಿ ರಾವ್ ಅವರೇ ʼಉಷಾಕಿರಣ ಮೂವೀಸ್’ ಎಂಬ ಚಿತ್ರ ನಿರ್ಮಾಣ ಸಂಸ್ಥೆ ಸ್ಥಾಪನೆ ಮಾಡಿ ನೂರಾರು ತೆಲುಗು, ತಮಿಳು, ಹಿಂದಿ, ಕನ್ನಡ ಸಿನಿಮಾಗಳನ್ನು ನಿರ್ಮಿಸಿದರು. ಸಿನೆಮಾ ಹಂಚಿಕೆ ಮಾಡಿದರು. ಆ ಸ್ಟುಡಿಯೋವನ್ನು ಒಂದು ಪ್ರವಾಸೀ ತಾಣವಾಗಿ ಕೂಡ ಅಭಿವೃದ್ಧಿ ಪಡಿಸಿದರು. ಈಗ ವರ್ಷಕ್ಕೆ ಕನಿಷ್ಟ ಒಂದು ಕೋಟಿ ಪ್ರವಾಸಿಗರು ಅಲ್ಲಿ ಭೇಟಿ ಕೊಡುತ್ತಿದ್ದಾರೆ.

ವರ್ಷದ 365 ದಿನವೂ ಸಿನೆಮಾ ಚಟುವಟಿಕೆ ಹೊಂದಿರುವ ಸ್ಟುಡಿಯೋ ಅದು. ಜೊತೆಗೆ ಅದು ಹಾಲಿವುಡ್ ಮೀರಿದ ವೈಭವವನ್ನು ಹೊಂದಿದೆ. ರಾಮೋಜಿ ಫಿಲ್ಮ್ ಸ್ಟುಡಿಯೋ ಇಂದು ಜಗತ್ತಿನ ಅತೀ ದೊಡ್ಡ ಫಿಲ್ಮ್ ಸ್ಟುಡಿಯೋ ಎಂದು ಗಿನ್ನೆಸ್ ದಾಖಲೆ ಮಾಡಿದೆ!

ಮನರಂಜನೆಯ ಮಹಾ ದೊರೆ!

ಎಂಬತ್ತರ ದಶಕದಲ್ಲಿ ಭಾರತದಲ್ಲಿ ದೂರದರ್ಶನ ಎಂಬ ಒಂದೇ ಟಿವಿ ಚಾನೆಲ್ ಇತ್ತು. ಮನರಂಜನೆಗಾಗಿ ಮೀಸಲಾದ ಯಾವುದೇ ಟಿವಿ ಚಾನೆಲ್ ಇರಲಿಲ್ಲ. ಈ ಕೊರತೆಯನ್ನು ಮನಗಂಡ ರಾಮೋಜಿ ರಾವ್ ʼಈ ಟಿವಿ’ ಎಂಬ ಮಹಾ ಟಿವಿ ಚಾನೆಲ್ ಆರಂಭ ಮಾಡಿದರು. ಅದರಲ್ಲಿ ಸಮೃದ್ಧವಾದ ಮನರಂಜನೆ, ಧಾರಾವಾಹಿ, ಸಂಗೀತ, ನೃತ್ಯ, ರಿಯಾಲಿಟಿ ಶೋಗಳನ್ನು ಹೆಣೆದರು. ಅದು ಅತ್ಯಂತ ಜನಪ್ರಿಯವಾಯಿತು. ಇಂದು ಭಾರತದ ಎಲ್ಲ ಪ್ರಾದೇಶಿಕ ಭಾಷೆಗಳು ಮತ್ತು ಹಿಂದಿಯಲ್ಲಿ ಈ ಟಿವಿ ವಾಹಿನಿ ಇದೆ. ರಾಮೋಜಿ ರಾವ್ ಈ ಟಿವಿಯನ್ನು ಬಾನೆತ್ತರಕ್ಕೆ ಬೆಳೆಸಿದರು.

ರಾಜಕೀಯ ಪ್ರವೇಶ – ತೆಲುಗು ದೇಶಂ ಪಕ್ಷದ ಮಾರ್ಗದರ್ಶಕ

ಇಂದು ಅವರ ಉದ್ಯಮಗಳ ಮುಖಬೆಲೆಯು 37,583 ಕೋಟಿ ರೂಪಾಯಿ ಎಂದು ಅಂದಾಜು! ಶೂನ್ಯದಿಂದ ಆರಂಭ ಮಾಡಿ ಇಷ್ಟು ಎತ್ತರಕ್ಕೆ ಏರಿದ ಇನ್ನೊಬ್ಬ ಉದ್ಯಮಿ ನಮಗೆ ಭಾರತದಲ್ಲಿ ದೊರೆಯುವುದಿಲ್ಲ. ಅದೂ ಯಾವುದೇ ಗಾಡ್ ಫಾದರ್ ಇಲ್ಲದೆ! ಅವರು ಕಟ್ಟಿದ ಒಂದು ಉದ್ಯಮವೂ ನಷ್ಟ ಕಂಡಿಲ್ಲ ಅನ್ನೋದು ಅವರ ದುಡಿಮೆಗೆ ಒಂದು ತುರಾಯಿ.

ಇಷ್ಟೆಲ್ಲ ಸಾಧನೆ ಮಾಡಿದ ನಂತರ ರಾಜಕೀಯಕ್ಕೆ ಬಾರದಿದ್ದರೆ ಹೇಗೆ? ಎಂಬತ್ತರ ದಶಕದಲ್ಲಿ ತೆಲುಗು ಲೆಜೆಂಡ್ ನಟ NTR ತೆಲುಗು ದೇಶಂ (Telugu Desam party) ಪಕ್ಷವನ್ನು ಸ್ಥಾಪನೆ ಮಾಡಿದಾಗ ಆ ಪಕ್ಷದ ಮೆಂಟರ್ ಆಗಿ ನಿಂತವರು ರಾಮೋಜಿ ರಾವ್. ಹಲವು ಬಾರಿ ಅವರ ಪಕ್ಷ ಅಧಿಕಾರಕ್ಕೆ ಬಂದರೂ ಅವರು ಅಧಿಕಾರದ ಆಸೆ ಮಾಡದೇ ತೆರೆಯ ಮರೆಯಲ್ಲಿ ನಿಂತರು. ಕಿಂಗ್ ಮೇಕರ್ ಆದರು. ಸಾಯುವ ತನಕವೂ ತೆಲುಗು ದೇಶಂ ಪಕ್ಷದ ನಾಯಕರಲ್ಲಿ ಒಬ್ಬರಾಗಿ ಅದನ್ನು ಸ್ವಾಭಿಮಾನಿ ಪಕ್ಷವಾಗಿ ಬೆಳೆಸಿದರು.

ಪದ್ಮವಿಭೂಷಣ ಸೇರಿದಂತೆ ನೂರಾರು ಪ್ರಶಸ್ತಿಗಳು

ಭಾರತದ ಎರಡನೇ ಅತೀ ದೊಡ್ಡ ನಾಗರೀಕ ಪ್ರಶಸ್ತಿಯಾದ ಪದ್ಮ ವಿಭೂಷಣ ಸೇರಿದಂತೆ, ಸಿನೆಮಾ ನಿರ್ಮಾಣಕ್ಕೆ ರಾಷ್ಟ್ರ ಪ್ರಶಸ್ತಿ, ತೆಲುಗಿನ ಗೌರವದ ನಂದಿ ಪ್ರಶಸ್ತಿ, ಹತ್ತಾರು ಫಿಲಂ ಫೇರ್ ಪ್ರಶಸ್ತಿಗಳು ಅವರಿಗೆ ದೊರೆತಿವೆ. ಅವರೊಬ್ಬ ಶಿಸ್ತಿನ ಮನುಷ್ಯ. ಪ್ರಚಾರದಿಂದ ದೂರ ಉಳಿದ ಕಾಯಕ ಯೋಗಿ. ಯಾವಾಗಲೂ ಬಿಳಿ ಬಟ್ಟೆಯಲ್ಲಿಯೇ ಕಾಣಿಸಿಕೊಳ್ಳುತ್ತಿದ್ದ ನಗುಮುಖದ ವ್ಯಕ್ತಿತ್ವ.

ನಿನ್ನೆ (ಜೂನ್ 8) ಅವರ ನಿರ್ಗಮನದಿಂದ ಭಾರತದ ಅತೀ ಶ್ರೇಷ್ಟವಾದ ಉದ್ಯಮಿ, ಸಿನೆಮಾ ನಿರ್ಮಾಪಕ, ಜಗತ್ತಿನ ಅತೀ ದೊಡ್ಡ ಸ್ಟುಡಿಯೋ ಸ್ಥಾಪಕ, ಈ ಟಿವಿ, ಈ ನಾಡು ಸಂಸ್ಥಾಪಕ, ಮಹೋನ್ನತ ಮನೋರಂಜನಾ ದೊರೆ ನಮ್ಮನ್ನು ಬಿಟ್ಟು ಅಗಲಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ.

ಇದನ್ನೂ ಓದಿ: ರಾಜಮಾರ್ಗ ಅಂಕಣ: ಜಾರ್ಜ್ ಫರ್ನಾಂಡಿಸ್ ಮತ್ತು ಕೊಂಕಣ್ ರೈಲ್ವೆ ಎಂಬ ಮಹಾ ಕನಸು!

Exit mobile version