Site icon Vistara News

ಸ್ಮರಣೆ: ಧೀಮಂತ ನೇತಾರ ಲಾಲಾ ಲಜಪತ್ ರಾಯ್

lala lajapat roy

lala lajapat roy

| ಮಯೂರಲಕ್ಷ್ಮೀ

1928ರಲ್ಲಿ ಇಂಗ್ಲೆಂಡಿನಿಂದ ʼಸೈಮನ್ ಕಮಿಷನ್ʼ ಆಯೋಗ ಭಾರತಕ್ಕೆ ಪದಾರ್ಪಣೆ ಮಾಡಲು ಸಿದ್ಧವಾಗಿತ್ತು. ಜಾನ್ ಸೈಮನ್ ಎನ್ನುವ ಬ್ರಿಟಿಷ್ ಸಂಸದನ ಅಧ್ಯಕ್ಷತೆಯಲ್ಲಿ ರಚಿತವಾಗಿದ್ದ ಆಯೋಗದಲ್ಲಿ ಭಾರತದಿಂದ ಪ್ರತಿನಿಧಿಸಲು ಒಬ್ಬ ಸದಸ್ಯರೂ ಇರಲಿಲ್ಲ. ಬ್ರಿಟಿಷರ ಒಡೆದು ಆಳುವ ವ್ಯವಸ್ಥೆ ಮತ್ತು ವಿವಿಧ ಕಾನೂನುಗಳೊಂದಿಗೆ ರಚಿತವಾಗಿದ್ದ ಆಯೋಗ ಹಿಂದೂ-ಮುಸ್ಲಿಂ ಐಕ್ಯತೆಗೆ ಧಕ್ಕೆ ತರುವಂತಹುದಾಗಿತ್ತು. ಭಾರತೀಯ ಚಿಂತಕರು ಮತ್ತು ಸ್ವಾತಂತ್ರ್ಯ ಹೋರಾಟಗಾರರು ತೀವ್ರವಾಗಿ ಇದನ್ನು ವಿರೋಧಿಸಿದರು.

ಭಾರತದ ಕ್ರಾಂತಿಕಾರಿಗಳ ʼಹಿಂದೂಸ್ಥಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಶನ್ʼ ಸಂಘಟನೆಯ ಆಜಾದ್, ಭಗತ್ ಸಿಂಗ್, ಯಶಪಾಲ್ ಮುಂತಾದವರೂ ಸೈಮನ್ ಆಯೋಗದ ವಿರುದ್ಧ ಪ್ರತಿಭಟಿಸತೊಡಗಿದರು. ಪ್ರತಿಭಟನೆಯಲ್ಲಿ ಪ್ರಮುಖರಾಗಿದ್ದ ಅತ್ಯಂತ ಪ್ರಭಾವೀ ನೇತಾರ ಲಾಲಾ ಲಜಪತ್ ರಾಯ್ ಅವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆಗೆ ನಾಗರಿಕರೆಲ್ಲರೂ ಮುಂದಾದರು. ಬ್ರಿಟಿಷರ ಇಂಪೀರಿಯಲ್ ಬ್ಯಾಂಕಿನಲ್ಲಿ ನಾಗರಿಕರೆಲ್ಲರೂ ಹಣವನ್ನು ಹೂಡುವಂತಹ ನಿಯಮವನ್ನು ಬ್ರಿಟಿಷರು ನಾಗರೀಕರ ಮೇಲೆ ಹೇರಿದ್ದರು. ಲಾಲಾ ಲಜಪತ್ ರಾಯ್‌ ಅವರು ಸ್ಥಾಪಿಸಿದ್ದ ಪಂಜಾಬ್ ನ್ಯಾಷನಲ್ ಬ್ಯಾಂಕಿನಲ್ಲಿ ಕ್ರಾಂತಿಕಾರಿಗಳ ಮೂಲಕ ನಾಗರಿಕರ ಹಣಕಾಸಿನ ವಹಿವಾಟು ನಡೆಸುತ್ತಿದ್ದದ್ದು ಬ್ರಿಟಿಷರಿಗೆ ನುಂಗಲಾರದ ತುತ್ತಾಗಿತ್ತು.

ಒಂದೆಡೆ ಕ್ರಾಂತಿಕಾರಿಗಳ ಪ್ರಭಾವದಿಂದ ತೀವ್ರವಾಗುತ್ತಿದ್ದ ಸ್ವಾತಂತ್ರ ಸಂಗ್ರಾಮ, ಮತ್ತೊಂದೆಡೆ ಜನರಲ್ಲಿ ಮೂಡುತ್ತಿದ್ದ ವೈಚಾರಿಕ ಕ್ರಾಂತಿಯನ್ನು ಕಂಡು ಬ್ರಿಟಿಷರು ಬೆದರಿದರು. ಭಾರತದ ಹೋರಾಟಗಾರರ ವಿರುದ್ಧ ಕ್ರಮ ಕೈಗೊಳ್ಳಲು ಬ್ರಿಟಿಷರು ʼಭಾರತೀಯ ಪೋಲೀಸ್ ಕಾಯ್ದೆʼ ಜಾರಿಗೊಳಿಸಿದರು. ಬ್ರಿಟಷರನ್ನು ವಿರೋಧಿಸುವ ಭಾರತೀಯರನ್ನು ಪೋಲೀಸರು ಹೊಡೆದು ಬಡಿದು ಸಾಯಿಸಬಹುದಾಗಿತ್ತು. ಕಾನೂನಿನ ನೆಪದಲ್ಲಿ ಸಹಸ್ರಾರು ಭಾರತೀಯರ ಮೇಲೆ ಬ್ರಿಟಿಷರು ದೌರ್ಜನ್ಯವೆಸಗುತ್ತಿದ್ದರು.

ಸೈಮನ್ ಆಯೋಗ ಸದಸ್ಯರನ್ನು ಹೊತ್ತಿದ್ದ ರೈಲು ನವೆಂಬರ್ 17, 1928ರಂದು ಲಾಹೋರನ್ನು ತಲುಪಿತು. ಕಪ್ಪು ಬಾವುಟಗಳನ್ನು ಹಿಡಿದು “ಸೈಮನ್ ಗೋ ಬ್ಯಾಕ್” ಎಂದು ಆಯೋಗವನ್ನು ಭಾರತ ಬಿಟ್ಟು ತೊಲಗಲು ಘೋಷಣೆಗಳು ಮೊಳಗಿದವು. ಪ್ರತಿಭಟನೆಯ ಮುಂದಾಳತ್ವವನ್ನು ಪಂಜಾಬಿನ ಕೇಸರಿ ಅಂದರೆ ಸಿಂಹವೆಂದೇ ಹೆಸರಾಗಿದ್ದ ಲಾಲಾ ಲಜಪತ್ ರಾಯ್ ವಹಿಸಿದ್ದರು. ಆಯೋಗದ ಸದಸ್ಯರು ತಮಗೆದುರಾದ ಅಪಾರ ಜನಸ್ತೋಮವನ್ನು ಕಂಡು ಕಂಗಾಲಾದರು. ಲಾಹೋರಿನ ಪೊಲೀಸರು ಪ್ರತಿಭಟನಾ ಮೆರವಣಿಗೆ ಶಾಂತಿಯುತವಾಗಿದ್ದರಿಂದ ಏನೂ ಮಾಡಲಾಗದ ಸ್ಥತಿಯಲ್ಲಿದ್ದರು. ಜನಸಂಖ್ಯೆ ಹೆಚ್ಚಾಗತೊಡಗಿದಾಗ ಅಲ್ಲಿದ್ದ ʼಸ್ಕಾಟ್ʼ ಎನ್ನುವ ಪೋಲೀಸ್ ಅಧಿಕಾರಿ ಪೋಲೀಸರಿಗೆ ಲಾಠೀ ಪ್ರಹಾರದ ಆದೇಶ ನೀಡಿದ.

ಶಾಂತಿಯುತವಾಗಿ ಮುಂದೆ ಸಾಗಿದ್ದ ಮೆರವಣಿಗೆಯ ನಡುವೆ ಲಾಲಾ ಲಜಪತ್ ರಾಯರು ತಮ್ಮ ಸ್ಫೂರ್ತಿದಾಯಕ ನುಡಿಗಳಿಂದ ಎಲ್ಲರನ್ನೂ ಉತ್ತೇಜಿಸುತ್ತಿದ್ದರು. ಸೇರಿದ್ದ ಜನರನ್ನು ಚದುರಿಸಲು ಪೋಲೀಸರು ಎದುರು ಬಂದವರನ್ನೆಲ್ಲಾ ಥಳಿಸತೊಡಗಿದ್ದರು. ಹೆದರಿದ ಜನರು ದಿಕ್ಕಾಪಾಲಾಗಿ ಓಡತೊಡಗಿದರು, ಎಲ್ಲೆಡೆ ರಕ್ತಸ್ರಾವ, ಕಾಲ್ತುಳಿತ ಮತ್ತು ಚೀತ್ಕಾರ ಕೇಳಿಸತೊಡಗಿತು. ಲಾಲಾರ ಸಮೀಪ ಸ್ಯಾಂಡರ್ಸ್ ಎನ್ನುವ ಪೊಲೀಸ್ ಅಧಿಕಾರಿ ಧಾವಿಸತೊಡಗಿದ್ದನ್ನು ಕಂಡು ಯಶಪಾಲ್, ಸುಖದೇವ್ ಮತ್ತು ಭಗವತೀ ಚರಣ್ ಅವರನ್ನು ಸುತ್ತುವರೆದು ರಕ್ಷಿಸಲು ಮುಂದಾದರು. ಆದರೆ ಲಾಲಾರನ್ನು ಸಮೀಪಿಸಿದ್ದ ಸ್ಯಾಂಡರ್ಸ್ ಸ್ವತಃ ಲಾಲಾರ ತಲೆಯ ಮೇಲೆ ಲಾಠೀ ಬೀಸಿ ಹೊಡೆಯತೊಡಗಿದ. ಎದೆಗೂ ಒಂದೇ ಸಮನೆ ಬೀಸಿ ಹೊಡೆದ. ನೋಡನೋಡುತ್ತಿದ್ದಂತೆಯೇ ರಕ್ತದ ಮಡುವಿನಲ್ಲಿ ಲಾಲಾರು ಬಿದ್ದರು.

ಇದನ್ನೂ ಓದಿ: ಸ್ಮರಣೆ | ಕನ್ನಡದ ಕಣ್ವ ಬಿ.ಎಂ ಶ್ರೀಕಂಠಯ್ಯ

ಕೂಡಲೇ ಅವರನ್ನು ಸಮೀಪಿಸಿದ ಯಶಪಾಲ್ ಮುಂತಾದವರು ಅವರನ್ನು ಅಸ್ಪತ್ರೆಗೆ ದಾಖಲು ಮಾಡಿದರು. ಆದರೆ ತೀವ್ರ ಏಟುಗಳ ಪರಿಣಾಮದಿಂದ ಲಾಲಾರು ಚಿಕಿತ್ಸೆ ನೀಡುತ್ತಿದ್ದಂತೆಯೇ ಕೊನೆಯುಸಿರೆಳೆದರು. ತಮ್ಮ ಕೊನೆಯ ನುಡಿಗಳಲ್ಲಿ “ಭಾರತೀಯ ಮುಗ್ಧ ಪ್ರಜೆಗಳ ಮೇಲೆ ದೌರ್ಜನ್ಯ ಎಸಗುತ್ತಿರುವ ಬ್ರಿಟಿಷರದು ಅನಾಗರಿಕ ವರ್ತನೆ, ತಮ್ಮ ಮೇಲೆ ಬೀಳುತ್ತಿರುವ ಈ ಏಟುಗಳು ಭಾರತದಲ್ಲಿ ಬ್ರಿಟಿಷ್ ಆಡಳಿತವನ್ನು ಕೊನೆಗಾಣಿಸಲು ಬ್ರಿಟಿಷ್ ಸರಕಾರದ ಶವಪೆಟ್ಟಿಗೆಯ ಮೇಲೆ ಭಾರತೀಯರು ಹೊಡೆಯುವ ಕೊನೆಯ ಮೊಳೆಗಳು” ಎಂದು ಲಾಲಾಜಿ ಘರ್ಜಿಸಿದರು. ತಮ್ಮ ಹಿರಿಯ ನೇತಾರ ವೀರ ಸಿಂಹ ಲಾಲಾರವರ ನಿಧನಕ್ಕೆ ಕ್ರಾಂತಿಕಾರಿಗಳೊಂದಿಗೆ ಭಾರತೀಯ ನಾಗರಿಕರೆಲ್ಲರೂ ಕಂಬನಿಗೈದರು.

ಲಾಲಾರ ಹತ್ಯೆಗೆ ಕಾರಣನಾದ ಸ್ಯಾಂಡರ್ಸ್‍ನನ್ನು ಆರೋಪಿಯೆಂದು ಸರ್ದಾರ್ ಭಗತ್ ಸಿಂಗ್ ಪೋಲೀಸರಲ್ಲಿ ಮನವಿ ನೀಡಿದ. ಆದರೆ ಬ್ರಿಟಿಷ್ ಕಾನೂನಿನ ಪ್ರಕಾರ ಪೋಲೀಸರು ಕ್ರಮ ಕೈಗೊಂಡಿದ್ದರಿಂದ ಸ್ಯಾಂಡರ್ಸ್‍ನ ಕೃತ್ಯವನ್ನು ಅನುಮೋದಿಸಲಾಯಿತು. ಬ್ರಿಟಿಷ್ ಕಾನೂನಿನಲ್ಲಿ ನ್ಯಾಯ ಇಲ್ಲವೆಂದು ಅರಿವಾಗಿ ಮುಂದೆ ಭಗತ್ ಸಿಂಗ್ ಸ್ಯಾಂಡರ್ಸ್‍ನನ್ನು ಕೊಲೆಗೈದು ಲಾಲಾರ ಸಾವಿನ ಪ್ರತೀಕಾರವಾಗಿ ಬ್ರಿಟಿಷರ ಮೇಲೆ ಸೇಡು ತೀರಿಸಿಕೊಂಡ.

ಲಾಲಾ ಲಜಪತ್ ರಾಯ್ ಜನವರಿ 28, 1865ರಂದು ಪಂಜಾಬಿನ ಮೋಗಾ ಜಿಲ್ಲೆಗೆ ಸೇರಿದ ಧುಡಿಕೆ ಎಂಬ ಗ್ರಾಮದಲ್ಲಿ ಜನಿಸಿದವರು. ಪಂಜಾಬಿನ ಮನೆತನದಲ್ಲಿ “ಲಾಲಾ” ಎನ್ನುವ ಬಿರುದು ಹಿರಿಯರಿಗೆ ಸಲ್ಲುತ್ತಿದ್ದ ಗೌರವದ ದ್ಯೋತಕವಾಗಿತ್ತು. ಲಾಲಾಜಿ ಪ್ರಾರಂಭಿಕ ಶಿಕ್ಷಣವನ್ನು ಹರ್ಯಾಣದ ರೆವಾರಿಯಲ್ಲಿ ಪಡೆದು ಮುಂದೆ ರಾಜ್ಯಶಾಸ್ತ್ರದೊಂದಿಗೆ ಭಾರತೀಯ ಸಂಸ್ಕೃತಿ ಮತ್ತು ಆಧ್ಯಾತ್ಮವನ್ನೂ ರೂಢಿಸಿಕೊಂಡರು. ʼಆರ್ಯ ಸಮಾಜʼದಲ್ಲಿ ಸಕ್ರಿಯರಾಗಿದ್ದು ʼಆರ್ಯ ಗೆಜೆಟ್ʼನ ಸಂಪಾದಕರೂ ಆಗಿದ್ದರು.

ಇದನ್ನೂ ಓದಿ: ಸ್ಮರಣೆ | ಸರ್ದಾರ್‌ ಉಧಮ್‌ ಸಿಂಗ್‌ | ಜಲಿಯನ್‌ ವಾಲಾಬಾಗ್‌ ಹತ್ಯಾಕಾಂಡದ ಸೇಡಿಗಾಗಿ 21 ವರ್ಷ ಕಾದಿದ್ದ!

ಮುಂದೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನಲ್ಲಿ ತಮ್ಮನ್ನು ಗುರುತಿಸಿಕೊಂಡ ನಂತರ ಪಂಜಾಬಿನ ಕ್ರಾಂತಿಕಾರೀ ಹೋರಾಟಗಾರರಾಗಿದ್ದ ಭಗತ್ ಸಿಂಗ್, ಆಜಾದ್ ಮುಂತಾದವರ ʼಹಿಂದೂಸ್ಥಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಶನ್ʼ ಸೇರಿ ಸ್ವಾತಂತ್ರ್ಯ ಹೋರಾಟದ ಹಾದಿಯಲ್ಲಿ ಸಕ್ರಿಯರಾಗಿ ಎಲ್ಲರಿಗೂ ಮಾರ್ಗದರ್ಶಕರಾಗಿದ್ದರು. ಸ್ವಾಭಿಮಾನೀ ಭಾರತೀಯರೆಲ್ಲರ ಹೆಮ್ಮೆಯ ಸಂಸ್ಥೆಯಾದ “ಪಂಜಾಬ್ ನ್ಯಾಶನಲ್ ಬ್ಯಾಂಕಿ”ನ ಸಂಸ್ಥಾಪಕರು. ಇದನ್ನು ಭಾರತದ ಚರಿತ್ರೆಯ ಸುವರ್ಣ ಅಕ್ಷರಗಳಲ್ಲಿ ಇಂದೂ ನಾವು ಕಾಣಬಹುದು. ಲಾಲಾರವರು “ಲಕ್ಷ್ಮೀ ಜೀವವಿಮಾ ಕಂಪನಿ”ಯ ಸಂಸ್ಥಾಪಕರೂ ಹೌದು. ಲಾಲಾರವರ ಸ್ಮರಣೆಯಲ್ಲಿ 1969ರಲ್ಲಿ ಅವರ ಜನ್ಮಶತಾಬ್ದಿಯ ಸಂದರ್ಭದಲ್ಲಿ ಪಂಜಾಬಿನಲ್ಲಿ ಶೈಕ್ಷಣಿಕ ಸಂಸ್ಥೆಯ ಆರಂಭಿಸಲಾಯಿತು. ಹರಿಯಾಣಾದಲ್ಲಿ ಲಾಲಾ ಲಜಪತ್ ರಾಯ್ ಹೆಸರಿನಲ್ಲಿ ಪಶು ವೈದ್ಯಕೀಯ ವಿಶ್ವವಿದ್ಯಾಲಯವಿದೆ. ನವದೆಹಲಿಯಲ್ಲಿ ಲಜಪತ್ ನಗರದ ಕೇಂದ್ರ ಮಾರುಕಟ್ಟೆಯಲ್ಲಿ ಅವರ ಬೃಹತ್ ಪುತ್ಥಳಿಯಿದೆ. ಅವರ ಹೆಸರಿನಲ್ಲಿ ಕಾನ್ಪುರದ ಐ.ಐ.ಟಿ ಮತ್ತು ಅನೇಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲಾಯಿತು. ಇವು ಲಾಲಾ ಲಜಪತ್ ರಾಯ್ ಅವರ ಧೀಮಂತ ವ್ಯಕ್ತಿತ್ವಕ್ಕೆ ಭಾರತ ಸಲ್ಲಿಸಿರುವ ಗೌರವ!

ಇದನ್ನೂ ಓದಿ: ಖುದಿರಾಮ್ ಬೋಸ್ ಸ್ಮರಣೆ | ಸ್ವಾತಂತ್ರ್ಯ ಸಂಗ್ರಾಮದ ಕಿರಿಯ ಬಲಿದಾನಿ

Exit mobile version