— ಹರೀಶ್ ಕೇರ
ಹಾರುವ ಓತಿಯ ಬೆನ್ನು ಹತ್ತಿ, ಕಡೆಗೆ ಅದು ಕೈಗೆ ಸಿಕ್ಕದೆ ಹಾರಿ ಹಾರಿ ಹಾರಿ ಚಾರ್ಮಾಡಿಯ ದಟ್ಟ ಕಾಡುಗಳಲ್ಲಿ ಕಳೆದುಹೋದಾಗ, ‘ಕರ್ವಾಲೋ’ ಕಾದಂಬರಿಯ ನಾಯಕನಿಗೆ ಒಂದು ಸಂಶಯ ಕಾಡುತ್ತದೆ: ಓತಿ ಜೀವವಿಕಾಸದ ಯಾವ ಹಂತದಲ್ಲಿ ತನ್ನ ರೆಕ್ಕೆ ಬಡಿಯುವ ಶಕ್ತಿಯನ್ನು ಕಳೆದುಕೊಂಡಿತು ಎಂಬುದು. ಇದನ್ನು ವಿಜ್ಞಾನಿ ಕರ್ವಾಲೋ ಅವರಲ್ಲಿ ಕೇಳುತ್ತಾನೆ. ಕರ್ವಾಲೋ ಅವರಿಗೂ ನಿಖರ ಉತ್ತರ ಗೊತ್ತಿಲ್ಲ. ಚರ್ಚೆಯ ಒಂದು ಹಂತದಲ್ಲಿ ಕರ್ವಾಲೋ ಹೇಳುತ್ತಾರೆ: ‘‘ನಮಗೀಗ ಹೀಗೆ ಅನಿಸುತ್ತೆ. ಆದರೆ ಜೀವವಿಕಾಸದ ವೈಚಿತ್ರ್ಯಕ್ಕೆ ಎಲ್ಲಿ ಕೊನೆ?’’ ಈ ಮಾತಿನೊಂದಿಗೆ ಓದುಗನನ್ನು ಅನೂಹ್ಯ ದಿಗ್ಮೂಢತೆಯಲ್ಲಿ ಮುಳುಗಿಸಿ ಪೂರ್ಣಚಂದ್ರ ತೇಜಸ್ವಿ ಕಾದಂಬರಿ ಮುಗಿಸುತ್ತಾರೆ.
ಸ್ವತಃ ತೇಜಸ್ವಿ ಕೂಡ ಇಂಥದೇ ಒಂದು ಅನೂಹ್ಯ ದಿಗ್ಭ್ರಮೆಯಲ್ಲಿ ಓದುಗನನ್ನು ಕೆಡವಿ ಹೊರಟುಹೋದವರು. ‘ಮಾಯಾಲೋಕ’ ಎಂಬ ಕಾದಂಬರಿಯ ಮೊದಲ ಭಾಗ ಬರೆದು, ಎರಡನೇ ಭಾಗ ಬರೆಯಬೇಕು ಎಂಬಷ್ಟರಲ್ಲಿ ಇಲ್ಲವಾದರು. ಅವರ ಎರಡನೇ ಭಾಗದಲ್ಲಿ ಏನಿದ್ದಿರಬಹುದು ಎಂದು ಊಹಿಸಲು ಸಾಧ್ಯವಿಲ್ಲ. ಮೊದಲ ಮಾಯಾಲೋಕದಲ್ಲಿ ಮೂಡಿಗೆರೆ ಸುತ್ತಮುತ್ತಲಿನ ಜನಜೀವನ ನಿಧಾನವಾಗಿ ಆಧುನಿಕತೆಯ ಸುಳಿಯಲ್ಲಿ, ಕೃಷಿ ಪದ್ಧತಿ ನಶಿಸುತ್ತಿರುವ ವಿಕಲ್ಪದಲ್ಲಿ ಮುಳುಗೇಳುತ್ತಿರುವುದನ್ನು ಅವರು ಚಿತ್ರಿಸುತ್ತಾರೆ. ಮಾಯಾಲೋಕದ ಎರಡನೇ ಭಾಗವನ್ನು ಅವರು ಇನ್ನೂ ಅದೃಶ್ಯರಾಗಿದ್ದು ಅಲ್ಲೆಲ್ಲೋ ಬರೆಯುತ್ತಿದ್ದಾರೆ ಅನಿಸುತ್ತಿದೆ. ಅದರಲ್ಲಿ ಬಹುಶಃ ನಾವೆಲ್ಲರೂ ಇದ್ದೇವೆ. ಯಾಕೆಂದರೆ ನಾವೆಲ್ಲ ಈ ಬದುಕಿನ, ಈ ಜಾಗತೀಕರಣದ ಮಾಯಾಲೋಕದ ಪಾತ್ರಗಳೇ ಆಗಿದ್ದೇವೆ.
ಮೇಲೆ ಉಲ್ಲೇಖಿಸಿದ ಅವರ ಕರ್ವಾಲೋ ಪಾತ್ರದ ಉದ್ಗಾರ, ‘ಜೀವವಿಕಾಸಕ್ಕೆ ಎಲ್ಲಿ ಕೊನೆ?’ ಎಂಬ ಮಾತು ನಮ್ಮ ಈಗಿನ ಸನ್ನಿವೇಶದಲ್ಲಿ ಮತ್ತೆ ಮತ್ತೆ ಅನುರಣಿಸುತ್ತದೆ. ವಿಕಾಸದ ಯಾವುದೋ ಒಂದು ಹಂತದಲ್ಲಿ ಹಾರುವ ಓತಿ ತನ್ನ ರೆಕ್ಕೆಗಳನ್ನು ಬಳಸದೆ ಕಾಲುಗಳನ್ನೇ ಹೆಚ್ಚು ಬಳಸತೊಡಗಿದಂತೆ, ಹಾರುವುದನ್ನು ಮರೆತು ಕುಪ್ಪಳಿಸುವುದನ್ನು ಆರಂಭಿಸಿದಂತೆ, ಮತ್ತಿನ್ಯಾವುದೋ ಹಂತದಲ್ಲಿ ಕೊರೊನಾ ವೈರಸ್ ಎಂಬ ಅಷ್ಟೇನೂ ಉಪದ್ರವಕಾರಿಯಲ್ಲದ ವೈರಸ್ ಮ್ಯುಟೇಶನ್‌ಗೆ ಒಳಗಾಗಿ, ಮನುಷ್ಯಜಗತ್ತಿಗೇ ಮಾರಕವಾದ ಕೋವಿಡ್ ವೈರಸ್ ಆಗಿಬಿಟ್ಟಿತು. ನಾವೆಲ್ಲ ಕಣ್ಣಿಗೂ ಕಾಣದ ಆ ಸೂಕ್ಷ್ಮ ವೈರಸ್‌ನ ಮುಂದೆ ಮಂಡಿಯೂರಿದೆವು. ಇಡೀ ಸಾಮಾಜಿಕ, ಆರೋಗ್ಯ, ಆರ್ಥಿಕ ವ್ಯವಸ್ಥೆಯೇ ಮಗ್ಗಲು ಬದಲಾಯಿಸಿತು. ನಾವು ಕಟ್ಟಿಕೊಂಡ ಅಮರಾವತಿಯಂಥಾ ಬೆಂಗಳೂರು ಒಂದು ವಾರದ ಮಹಾ ಮಳೆಗೆ ತತ್ತರಿಸಿ ಮಕಾಡೆ ಮಲಗಿಕೊಂಡಿತು. ಪ್ರಕೃತಿ ಮನುಷ್ಯನನ್ನು ಹಣಿಯುವ, ಅವನನ್ನು ತಿದ್ದುವ, ವಿಕಾಸಗೊಳಿಸುತ್ತ ಹೋಗುವ ರೀತಿಯೇ ಊಹಾತೀತ.
ಅವರ ‘ಮಾಯಾಮೃಗ’ ಎಂಬ ಒಂದು ಪುಟ್ಟ ಕತೆಯಿದೆ. ಅದರಲ್ಲಿ ದೆವ್ವವನ್ನು ಹುಡುಕಲೆಂದು ಸ್ಮಶಾನಕ್ಕೆ ಹೋದ ಇಬ್ಬರು ಮಿತ್ರರು, ಭಯಕ್ಕೆ ತುತ್ತಾಗಿ, ಅವರನ್ನು ಹಿಂಬಾಲಿಸಿಕೊಂಡು ಬಂದ ಪುಟ್ಟ ನಾಯಿಮರಿಯೇ ಸಾವಿನ ಮೂರ್ತರೂಪ ಎಂದು ಭಾವಿಸುತ್ತಾರೆ. ಅದನ್ನು ನಂಬುವ, ಅದನ್ನು ಇನ್ನೊಬ್ಬನಿಗೆ ದಾಟಿಸಲು ಯತ್ನಿಸುವ ಆಟ ನಡೆಯುತ್ತದೆ. ಈಗಿನ ನಮ್ಮ ಕತೆಯೂ ಹೀಗೇ ಆಗಿದೆ ಅಲ್ಲವೇ.
ಈಗ ತೇಜಸ್ವಿ ಇದ್ದಿದ್ದರೆ ನಮ್ಮ ಈ ಪರಿಸ್ಥಿತಿಯ ಬಗ್ಗೆ ಅವರು ಏನು ಹೇಳುತ್ತಿದ್ದರೋ. ಅವರು ತಮ್ಮ ಮೂಡಿಗೆರೆ, ತೋಟ, ಪಶ್ಚಿಮ ಘಟ್ಟದ ಕಾಡುಗಳನ್ನು ಬಿಟ್ಟು ನಗರಕ್ಕೆ ಬರುವ ಯಾವುದೇ ಆಸಕ್ತಿ ತೋರುತ್ತಿರಲಿಲ್ಲ. ನಗರದಲ್ಲಿ ಅವರ ಕತೆಗಳಿಗೆ ವಸ್ತುವಾಗುವಂಥ ಯಾವುದೂ ಇರಲಿಲ್ಲ. ಆದರೆ ಪಶ್ಚಿಮ ಘಟ್ಟದ ದಟ್ಟ ಕಾಡಿನಿಂದ ಹೆಕ್ಕಿಕೊಂಡ ಪ್ರತಿಯೊಂದು ಎಲೆ, ಹಕ್ಕಿ, ಕಡ್ಡಿಕೀಟ, ಹೆಲಿಕಾಪ್ಟರ್ ದುಂಬಿ, ಹಾರುವ ಓತಿ, ಮಂಡರಗಪ್ಪೆ, ಕಾಡಿನ ಸುತ್ತಮುತ್ತಲಿನ ಜನಜೀವನದಿಂದ ಆರಿಸಿಕೊಂಡ ಮಂದಣ್ಣ, ಪ್ಯಾರ, ಮಾರ, ಎಂಕ್ಟರೆಲ್ಲ ಅವರ ಕತೆ ಕಾದಂಬರಿಗಳಲ್ಲಿ ಹಾಸು ಹೊಕ್ಕಾಗಿ ಬಂದಿದ್ದಾರೆ. ‘ಇಲ್ಲಿ ಯಾರೂ ಅಮುಖ್ಯರಲ್ಲ’ ಎಂದು ಕುವೆಂಪು ಅವರು ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯಲ್ಲಿ ಬರೆದದ್ದು ತೇಜಸ್ವಿ ಅವರ ಪಾತ್ರಪ್ರಪಂಚದ ಮುಖ್ಯ ಸ್ವರೂಪವೇ ಆಗಿದೆ. ಕರ್ವಾಲೋರಂಥ ವಿಜ್ಞಾನಿಗೆ ಹಾರುವ ಓತಿಯ ಬಗ್ಗೆ ಮಾಹಿತಿ ನೀಡಿದವನು ಎಲ್ಲರೂ ಗೇಲಿ ಮಾಡುವ, ಆದರೆ ಅಗಾಧ ಕಾಡಿನ ಜ್ಞಾನಿ ಮಂದಣ್ಣ.
ತೇಜಸ್ವಿ ಹಲವು ತಲೆಮಾರುಗಳನ್ನು ಹೇಗೆ ಪ್ರಭಾವಿಸಿದರು ಅಂತ ನೋಡಿದರೆ ಆಶ್ಚರ‍್ಯವಾಗುತ್ತದೆ. ಕನ್ನಡ ಓದಬಲ್ಲ ಇತ್ತೀಚಿನ ನಾಲ್ಕಾರು ತಲೆಮಾರುಗಳು ಅವರ ಕತೆ, ಕಾದಂಬರಿಗಳನ್ನು ಓದಿಕೊಂಡೇ ಬೆಳೆದಿವೆ. ಜೊತೆಗೆ ಅವರ ವಿಸ್ಮಯ ಸೀರೀಸ್, ಮಿಲೇನಿಯಂ ಸೀರೀಸ್‌ಗಳು. ಎಲ್ಲದರಲ್ಲೂ ಜೀವವಿಕಾಸ ಹಾಗೂ ಪರಿಸರವೇ ಮುಖ್ಯವಾಗಿತ್ತು. ಮೊದಲ ಬಾರಿಗೆ ಕೈದಿಗಳ ಮಹಾಪಲಾಯನ, ಬರ್ಮುಡಾ ಟ್ರಯಾಂಗಲ್ ಎಂಬ ವಿಸ್ಮಯ ಸುಳಿ, ಹಾರುವ ತಟ್ಟೆಗಳ ನಿಗೂಢ ಲೋಕ ಇತ್ಯಾದಿಗಳನ್ನು ತೇಜಸ್ವಿ ಕನ್ನಡದ ಹೊಸ ತಲೆಮಾರುಗಳಿಗೆ ರೋಚಕವಾಗಿ ಪರಿಚಯಿಸಿದರು. ಹಾಗೆ ಓದಿಕೊಂಡು ಪರಿಸರದ ವಿಸ್ಮಯಗಳಿಗೆ ಕಿವಿ- ಕಣ್ಣು ತೆರೆದುಕೊಂಡು ಬೆಳೆದವರೇ ಇಂದು ವಿಜ್ಞಾನಿಗಳಾಗಿ, ಶಿಕ್ಷಕರಾಗಿ, ಮುಂದಿನ ತಲೆಮಾರುಗಳನ್ನು ರೂಪಿಸುತ್ತಿದ್ದಾರೆ.
ಅವರ ‘ಚಿದಂಬರ ರಹಸ್ಯ’ ಕಾದಂಬರಿಯಲ್ಲಿ ಒಂದು ಏಲಕ್ಕಿ ತಳಿ ಕಾಣಿಸಿಕೊಳ್ಳುತ್ತದೆ. ಅದು ಬಲು ವಿಶಿಷ್ಟವಾದ ತಳಿಯಾಗಿದ್ದು, ಅದಕ್ಕಾಗಿ ಅಂತಾರಾಷ್ಟ್ರೀಯ ಮಟ್ಟದ ಗುಪ್ತಜಾಲಗಳೆಲ್ಲ ಸಕ್ರಿಯವಾಗಿವೆ ಎಂಬ ಮಾತು ಬರುತ್ತದೆ. ಆದರೆ ಅದು ಯಾರಿಗೂ ಸಿಗುವುದೂ ಇಲ್ಲ, ಕಾಣಿಸುವುದೂ ಇಲ್ಲ. ರಫೀಕ್ ಮತ್ತು ಜಯಂತಿ ಎಂಬ ಇಬ್ಬರು ಪ್ರೇಮಿಗಳು, ತಮ್ಮನ್ನು ಸುತ್ತುವರಿದ ಸಮಾಜದ ಕ್ಷುದ್ರ ಚೌಕಟ್ಟುಗಳನ್ನು ಧಿಕ್ಕರಿಸಿ ಆಚೆ ಬಂದು, ಬೆಟ್ಟವನ್ನು ಏರುತ್ತಾರೆ. ಅವರು ಬೆಟ್ಟದ ಮೇಲಿದ್ದಾಗ ಕಾಡಿಗೆ ಬೆಂಕಿ ಬಿದ್ದಿರುವುದು, ಊರನ್ನು ಅದು ಸುತ್ತುವರಿಯುತ್ತಿರುವುದು ಕಾಣಿಸುತ್ತದೆ. ‘‘ಅದು ನಮ್ಗೆ ಕಾಣಿಸ್ತದೆ, ಆ ಹೊಗೇಲಿ ಅವರಿಗೆ ಕಾಣಿಸ್ತದ?’’ ಎಂದು ಪ್ರಶ್ನೆ ಮಾಡುತ್ತಾಳೆ ಜಯಂತಿ. ಜಾತಿ- ಮತ- ಧರ್ಮಗಳ ಕ್ಷುದ್ರ ವಿಚಾರಗಳನ್ನು ಎತ್ತಿ ಹೊಡೆದಾಡಿಕೊಳ್ಳುತ್ತಿರುವ ಜನರನ್ನು ನೋಡಿದರೆ ತೇಜಸ್ವಿ ಈಗಲೂ ಇದೇ ಮಾತು ಹೇಳುತ್ತಿರಲಿಲ್ಲವೇ?
‘ಜುಗಾರಿ ಕ್ರಾಸ್’ ಕಾದಂಬರಿಯಲ್ಲಿ ಸುರೇಶ್ ಮತ್ತು ಗೌರಿ ಎಂಬ ದಂಪತಿ ತಮ್ಮ ಬಳಿ ಇರುವ ಒಂದು ಮೂಟೆ ಏಲಕ್ಕಿಯನ್ನು ಪಟ್ಟಣದಲ್ಲಿ ಮಾರಾಟ ಮಾಡಲು ಹೋಗುವಾಗ, ರತ್ನದ ಕಲ್ಲುಗಳ ನಿಗೂಢ ಜಾಲವೊಂದರಲ್ಲಿ ತಾವು ಸಿಲುಕಿಕೊಳ್ಳುತ್ತಿರುವ ಅನುಭವವಾಗುತ್ತದೆ. ಅಲ್ಲಿಯವರೆಗೂ ಸಹಜವಾಗಿ ಇದ್ದವರು, ಅದು ತಮ್ಮ ಅರಿವಿಗೆ ಬಂದ ಕ್ಷಣದಿಂದ ಭಯಂಕರ ಜಾಗರೂಕರಾಗಿಬಿಡುತ್ತಾರೆ. ರತ್ನದ ಕಲ್ಲುಗಳ ನಿಧಿಯ ರಹಸ್ಯವೊಂದು ಅವರ ಕೈಗೆ ಸಿಕ್ಕೂ ಸಿಗದಂತೆ ಮಾಯವಾಗುತ್ತದೆ. ರೈಲು ಸುರಂಗದಲ್ಲಿ ಅವರಿಗೆ ನಿಗೂಢತೆ- ಕ್ರೌರ‍್ಯಗಳ ಮತ್ತೊಂದು ಮಜಲು ಅರಿವಿಗೆ ಬರುತ್ತದೆ. ನಮ್ಮೆಲ್ಲರ ಸರಳ- ಸಹಜ ಬದುಕಿನ ಜೊತೆಜೊತೆಗೇ ಪರಿಸರಕ್ಕೆ ಸಂಬಂಧಿಸಿದ ನಿಗೂಢ ಮಾಯಾಜಾಲವೊಂದು ಬಗೆಬಗೆಯಲ್ಲಿ ಹೆಣೆದುಕೊಂಡಿದೆ. ಆದರೆ ಅದು ಪಕ್ಕನೆ ನಮ್ಮ ಅರಿವಿಗೆ ಬರುವುದಿಲ್ಲ. ಬದುಕಿನ ಯಾವುದೋ ಒಂದು ಕ್ಷಣದಲ್ಲಿ ಆ ಸತ್ಯ ಮಿಂಚಿದ ಹಾಗಾಗುತ್ತದೆ. ಆದರೆ ಪೂರ್ತಿ ಅರಿವಿಗೆ ದಕ್ಕುವುದಿಲ್ಲ.
ಇದನ್ನೂ ಓದಿ | ಶಬ್ದಸ್ವಪ್ನ ಅಂಕಣ | ಭಾಷಾ ಬೋಧನೆಯ ಸೃಜನಶೀಲ ನೆಲೆಗಳು
‘ಕಿರಗೂರಿನ ಗಯ್ಯಾಳಿಗಳು’ ಕತೆಯಲ್ಲಿ ಮೂರು ಹಗಲು ಮೂರು ರಾತ್ರಿ ಬೀಸಿದ ಬಿರುಮಳೆಯಿಂದ ಕೆಡವಿಬಿದ್ದ ಮರವನ್ನು ಕತ್ತರಿಸಿ, ದಿಮ್ಮಿ ಮಾಡಿದಾಗ ಆ ದಿಮ್ಮಿ ದಾರಿಯಲ್ಲಿ ಸಿಕ್ಕಿದ್ದನ್ನೆಲ್ಲ ನುಗ್ಗುನುರಿ ಮಾಡುತ್ತ ಉರುಳಿಕೊಂಡು ಹೋಗಿ ಮಂಗಮಾಯವಾಗುತ್ತದೆ. ಅದಕ್ಕೆ ಹೆಗಲು ಕೊಟ್ಟಾತ ಬೆನ್ನುಮೂಳೆ ಉಳುಕಿಸಿಕೊಂಡು, ತನ್ನ ಜಾತಿದ್ವೇಷವನ್ನೆಲ್ಲ ಬಿಟ್ಟು ಕೆಳಜಾತಿಯವನಿಂದ ನೆಟಿಕೆ ತೆಗೆಸಿಕೊಳ್ಳಬೇಕಾಗುತ್ತದೆ. ಊರಿನಲ್ಲಿ ಸಾರಾಯಿ ಮಾರಲು ಬರುವಾತ ಗಯ್ಯಾಳಿಗಳ ಹೊಡೆತಕ್ಕೆ ತುತ್ತಾಗಿ, ಈ ಒಂದು ಸಣ್ಣ ಘಟನೆಯೇ ಮುಂದೆ ರಾಜ್ಯಾದ್ಯಂತ ಮದ್ಯವಿರೋಧಿ ಚಳವಳಿಗೆ ಕಾರಣವಾಗುತ್ತದೆ. ಕೃಷ್ಣೇಗೌಡನ ಆನೆ, ಅಬಚೂರಿನ ಪೋಸ್ಟಾಫೀಸು ಮುಂತಾದ ಕೃತಿಗಳಲ್ಲೂ ಕೆಲವು ಕ್ಷುಲ್ಲಕ ಸಂಗತಿಗಳೇ ಸರಣಿ ಘಟನೆಗಳನ್ನು ಸೃಷ್ಟಿಸಿ ಕತೆಯ ಪ್ರವಾಹ ಆಗುವುದನ್ನು ಕಾಣಬಹುದು.
ಇದನ್ನೂ ಓದಿ | ಕೇರಂ ಬೋರ್ಡ್ ಅಂಕಣ | ಅಂಡರ್‌ಪಾಸ್‌ಗಳಲ್ಲಿ ಪಿಸುಗುಡುವ ಕಡಲು
‘ನಿಗೂಢ ಮನುಷ್ಯರು’ ನೀಳ್ಗತೆಯಲ್ಲಿ ಜಗನ್ನಾಥ ಮತ್ತು ರಂಗಪ್ಪ ಎಂಬ ಇಬ್ಬರು ಕಾರಿನಲ್ಲಿ ಹೊರಟವರು, ಮಲೆನಾಡಿನ ಯಾವುದೋ ಕೊಟ್ಟಕೊನೆಯ ಊರಿನಲ್ಲಿ ಕಳೆದೇ ಹೋಗುತ್ತಾರೆ. ನಿರಂತರ ಸುರಿಯುತ್ತಿರುವ ಮಳೆ, ಕಡಿದುಹೋದ ದಾರಿ, ಉರುಳುತ್ತಿರುವ ಬೆಟ್ಟ, ಗೋಪಾಲಯ್ಯ ಎಂಬ ನಿಗೂಢ ವ್ಯಕ್ತಿ ಮತ್ತು ಮನೆ, ಮನುಷ್ಯ ನಡವಳಿಕೆಯನ್ನೇ ಮರೆತಂತೆ ಕಾಣುವ ಸಮುದಾಯ- ಇವೆಲ್ಲವೂ ಇವರಿಬ್ಬರಿಗೆ ತಮ್ಮೊಳಗೂ ಹೊರಗೂ ಇರುವ ಹೊಸ ಜಗತ್ತುಗಳ ಪರಿಚಯ ಮಾಡಿಸುತ್ತದೆ. ಸಿಟ್ಟಿಗೆದ್ದ ಪ್ರಕೃತಿಯ ಕೈಯಿಂದ ಪಾರಾಗುವುದು ಅಷ್ಟು ಸುಲಭವಿಲ್ಲ ಎಂಬ ಅರಿವು ಅವರಿಗೆ ಆಗುತ್ತದೆ. ಹಾಗೆ ಸಿಲುಕಿಕೊಂಡಾಗಲೇ ಮನುಷ್ಯ ಸ್ವಭಾವ ಕೂಡ ಅನೂಹ್ಯ ರೀತಿಯಲ್ಲಿ ಸಂಕೀರ್ಣಗೊಳ್ಳುತ್ತದೆ ಎಂಬುದನ್ನು ತೇಜಸ್ವಿ ಅದರಲ್ಲಿ ಕಾಣಿಸಿದ್ದಾರೆ. ನಮಗೆ ಈಗ ಗೊತ್ತಾಗುತ್ತಿರುವುದು ಕೂಡ ಅದೇ ಅಲ್ಲವೇ?
ತೇಜಸ್ವಿಯವರನ್ನು ಮನಸ್ಸು ಕೊಟ್ಟು ಓದಿದವರು ಸಾಹಿತ್ಯ ಪ್ರೇಮಿ, ಅಕ್ಷರಪ್ರೇಮಿ, ಪರಿಸರಪ್ರೇಮಿ ಎಲ್ಲ ಆಗುವ ಸಂಭವವಿದೆ. ಅವರು ಕನ್ನಡಕ್ಕೆ ಕೊಟ್ಟ ದೊಡ್ಡ ಕೊಡುಗೆಯೆಂದರೆ ನಮ್ಮ ಬದುಕು ಪರಿಸರ, ಜೀವವಿಕಾಸದೊಂದಿಗೆ ಅನೂಹ್ಯ ರೀತಿಯಲ್ಲಿ ತಳುಕು ಹಾಕಿಕೊಂಡಿದೆ ಎಂಬ ವೈಜ್ಞಾನಿಕ ಅರಿವು. ಅದನ್ನು ಅವರು ಕತೆಗಳ ಮೂಲಕವೇ ಮಾಡಿದ್ದು ವಿಶೇಷ. ಪ್ರಸ್ತುತ ನಮ್ಮಲ್ಲಿ ವೈಜ್ಞಾನಿಕ ಚಿಂತನೆಯೇ ಗಾಯಬ್ ಆಗಿರುವ ಹೊತ್ತಿನಲ್ಲಿ ತೇಜಸ್ವಿಯ ಕತೆಗಳು ಯಾವುದೋ ಲೋಕದ ಕರೆಯಂತೆ ಕೇಳುತ್ತವೆ. ಚಂದಮಾಮ, ಬಾಲಮಂಗಳ ಮುಂತಾದ ಕೃತಿಗಳಿಂದ ನೇರವಾಗಿ ನಾವು ಕಾಲಿಟ್ಟಿದ್ದು ತೇಜಸ್ವಿ ಕೃತಿಗಳ ಲೋಕಕ್ಕೆ. ಅವರ ಪರಿಸರದ ಕತೆಗಳು, ವಿಸ್ಮಯ ಸೀರೀಸ್‌ಗಳು ಸುತ್ತಮುತ್ತಲಿನ ಮರಗಿಡ ಬೆಟ್ಟ ಗುಡ್ಡಗಳನ್ನು ಕುತೂಹಲದ ಕಣ್ಣಿನಿಂದ ನೋಡುವುದನ್ನು ಕಲಿಸಿದವು. ಅಬಚೂರಿನ ಪೋಸ್ಟಾಫೀಸು, ಕೃಷ್ಣೇಗೌಡನ ಆನೆ ಮುಂತಾದವು ಮನುಷ್ಯ ಸ್ವಭಾವದ ವೈಚಿತ್ರ್ಯಗಳನ್ನು ಕಲಿಸಿದವು. ಇದೆಲ್ಲದಕ್ಕಾಗಿ ನಮ್ಮ ತಲೆಮಾರು ತೇಜಸ್ವಿಗೆ ಋಣಿಯಾಗಿರಬೇಕು.
ಇದನ್ನೂ ಓದಿ | ಸಾಲಭಂಜಿಕೆ ಅಂಕಣ| ಬಳೆಗಾರನಿಗೇಕೆ ಹಾಡುವ ಪಾಡು?