Site icon Vistara News

Indian Navy Power: ಸೊಮಾಲಿಯಾದ ಕಡಲ್ಗಳ್ಳರನ್ನು ಬಗ್ಗುಬಡಿದು ಜಗತ್ತಿಗೆ ಸಂದೇಶ ನೀಡಿದೆ ಭಾರತದ ಕ್ಷಾತ್ರ!

indian navy power

indian navy power

ಚೈತನ್ಯ ಹೆಗಡೆ, ಪತ್ರಕರ್ತ

ನಮ್ಮ ನೌಕೆಯನ್ನು (Indian Navy Power) ಅದರ ನಾವಿಕರ ಸಮೇತ ರಕ್ಷಿಸಿಕೊಟ್ಟಿರುವ ಭಾರತದ ನೌಕಾಸೇನೆಗೆ ಮತ್ತು ಭಾರತಕ್ಕೆ ಧನ್ಯವಾದ ಅಂತ ಅಲ್ಲೆಲ್ಲೋ ಕಪ್ಪು ಸಮುದ್ರಕ್ಕೆ ತಾಗಿಕೊಂಡಿರುವ ಬಲ್ಗೇರಿಯಾದ ವಿದೇಶ ಮಂತ್ರಿ ಎಕ್ಸ್‌ನಲ್ಲಿ ಸಂದೇಶ ಬರೆಯುತ್ತಾರೆ. ಇದಕ್ಕೆ ಭಾರತದ ವಿದೇಶ ಸಚಿವ ಎಸ್ ಜೈಶಂಕರ್ ಕೊಟ್ಟ ಉತ್ತರ – “ಸ್ನೇಹಿತರಿರುವುದೇ ಅದಕ್ಕೆ.” ಗಮನಿಸಿ. ಈ ಉತ್ತರದಲ್ಲಿ ಭಾರತವು ಬಲ್ಗೇರಿಯದ ಧನ್ಯವಾದ ಸ್ವೀಕಾರವನ್ನಷ್ಟೇ ಮಾಡಿಲ್ಲ, ಬದಲಿಗೆ ತಾನು ವಿಶ್ವದ ಸ್ನೇಹಿತನಾಗಿ ದೂರಸಾಗರ ತೀರದಲ್ಲಿ ಖೂಳರ ವಿರುದ್ಧದ ಕಾರ್ಯಾಚರಣೆಯನ್ನು ತನ್ನ ಕರ್ತವ್ಯವನ್ನಾಗಿ ನೋಡುತ್ತೇನೆ ಎಂಬ ಕ್ಷಾತ್ರ ಸಂದೇಶವನ್ನು ಜಗತ್ತಿಗೆ ರವಾನಿಸಿದೆ!

ಬಲ್ಗೇರಿಯದ ರಾಷ್ಟ್ರಾಧ್ಯಕ್ಷ ಸಹ ಪ್ರಧಾನಿ ನರೇಂದ್ರ ಮೋದಿಯವರಿಗೆ ಎಕ್ಸ್ ಸಾಮಾಜಿಕ ತಾಣದ ಮೂಲಕ ಧನ್ಯವಾದ ಸಮರ್ಪಿಸಿದ್ದಾರೆ. ಅಮೆರಿಕದ ರಕ್ಷಣಾ ಸಚಿವ ಲಾಯ್ಡ್ ಅಸ್ಟಿನ್ ಸಹ ಭಾರತದ ರಕ್ಷಣಾ ಮಂತ್ರಿ ರಾಜನಾಥ ಸಿಂಗ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿ ಅರೇಬಿಯನ್ ಸಮುದ್ರದಲ್ಲಿ ಭಾರತವು ಕಡಲ್ಗಳ್ಳರ ವಿರುದ್ಧ ನಡೆಸಿರುವ ಯಶಸ್ವೀ ಕಾರ್ಯಾಚರಣೆಯನ್ನು ಮನದುಂಬಿ ಹೊಗಳಿದ್ದಾರೆ.

40 ತಾಸುಗಳ ಭಾರತದ ಅವಿರತ ಕಾರ್ಯಾಚರಣೆ ಬಳಿಕ ಮಾರ್ಚ್ 16ರಂದು ಬಲ್ಗೇರಿಯದ ಅಪಹೃತ ನೌಕೆಯನ್ನು ಮುಕ್ತಗೊಳಿಸಿರುವ ಭಾರತೀಯ ನೌಕಾಸೇನೆಯ ಕಾರ್ಯವನ್ನು ಜಗತ್ತು ಹೊಗಳುತ್ತಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಭಾರತದಿಂದ 2,600 ಕಿಲೊಮೀಟರ್ ದೂರದ ಸಮುದ್ರ ತೀರದಲ್ಲಿ ಅಪಹೃತ ನೌಕೆಯನ್ನು ಸುತ್ತುವರಿದು, ಅದರಲ್ಲಿದ್ದ 35 ಸೊಮಾಲಿ ಅಪಹರಣಕಾರರನ್ನು ಶರಣಾಗತರಾಗುವಂತೆ ಮಾಡಿ, ನೌಕೆಯಲ್ಲಿದ್ದ 7 ಬಲ್ಗೇರಿಯನ್ ಮಂದಿ ಸೇರಿದಂತೆ ಒಟ್ಟೂ 17 ಜನರಿಗೆ ಚಿಕ್ಕ ಗಾಯವೂ ಆಗದಂತೆ ರಕ್ಷಿಸಿ ತಂದಿರುವುದೇನು ತಮಾಷೆಯ ವಿಷಯವಾ? 

ಎಂವಿ ರುಯೆನ್ ಎಂಬ ಬಲ್ಗೇರಿಯದ ವಾಣಿಜ್ಯ ನೌಕೆಯೊಂದನ್ನು ಸೊಮಾಲಿಯಾದ ಕಡಲ್ಗಳ್ಳರು 2023ರ ಡಿಸೆಂಬರ್‌ನಲ್ಲೇ ಅಪಹರಣ ಮಾಡಿ ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದರು. ಹೀಗೆ ಅಪಹರಣಗಳಾದಾಗ ತಿಂಗಳುಗಟ್ಟಲೇ ಸಂಧಾನಗಳು ನಡೆಯುತ್ತವೆ. ಅಪಹರಣಕಾರರಿಗೆ ಸಹ ನೌಕೆಯನ್ನು ತಮ್ಮ ಹಿಡಿತದ ಸಮುದ್ರ ಪ್ರದೇಶಕ್ಕೆ ತೆಗೆದುಕೊಂಡು ಹೋಗುವ ಕೆಲಸವಿರುತ್ತದೆ. ಇವೆಲ್ಲ ಆಗುತ್ತಿರಬೇಕಾದರೆ, ಕಡಲ್ಗಳ್ಳರ ವಿರುದ್ಧ ಕಾರ್ಯಾಚರಣೆಗೆಂದೇ ಅರಬ್ಬೀ ಸಮುದ್ರದ ಉದ್ದಗಲಕ್ಕೆ ಹಾಗೂ ಕೆಂಪು ಸಮುದ್ರದ ಪ್ರಕ್ಷುಬ್ಧ ಭಾಗಗಳಲ್ಲಿ ಪಹರೆಗೆ ಇರುವ ಐ ಎನ್ ಎಸ್ ಕೋಲ್ಕೋತಾ ನೌಕೆಯ ಸಂಪರ್ಕಕ್ಕೆ ಬಂತು ಈ ಅಪಹೃತ ಹಡಗು. ಎಂವಿ ರುಯೆನ್ ಅನ್ನು 260 ಮೀಟರುಗಳ ಸನಿಹದಿಂದ ಅನುಸರಿಸಿದ ಐಎನ್ಎಸ್ ಕೋಲ್ಕೋತಾ ಮೊದಲಿಗೆ ಡ್ರೋನುಗಳನ್ನು ಹಾರಿಸಿ ರುಯೆನ್ ನೌಕೆಯಲ್ಲಿ ಅಪಹರಣಕಾರರು ಇರುವುದನ್ನು ದೃಢಪಡಿಸಿಕೊಂಡಿತು. ಇದೇ ಹಂತದಲ್ಲಿ ಸೊಮಾಲಿ ಕಡಲ್ಗಳ್ಳರು ಕೆಲವು ಡ್ರೋನುಗಳನ್ನು ಹೊಡೆದುರುಳಿಸಿದರು. ಅಂತಾರಾಷ್ಟ್ರೀಯ ಕಡಲ ಸುರಕ್ಷತೆ ನಿಯಮದ ಪ್ರಕಾರ ಮುಂದಿನ ಹಂತಕ್ಕೆ ಹೋಗುವುದಕ್ಕೆ ಈ ಘಟನೆ ಭಾರತಕ್ಕೆ ಅನುವು ಮಾಡಿಕೊಟ್ಟಿತು. ಅಪಹೃತ ಹಡಗಿನ ದಿಕ್ಸೂಚಿ ವ್ಯವಸ್ಥೆಯನ್ನು ಹಾಗೂ ಅದರ ಮುಂಚಲನೆಗೆ ಪೂರಕವಾಗಿದ್ದ ಭಾಗಗಳನ್ನು ಧ್ವಂಸ ಮಾಡಿದ ಭಾರತೀಯ ನೌಕಾಸೇನೆ, ಎಂವಿ ರುಯೆನ್ ಮುಂದೆ ಸಾಗದೇ ಕಡಲಮಧ್ಯೆ ನಿಲ್ಲುವಂತೆ ಮಾಡಿತು. 

ಆಗ ಶುರುವಾಯಿತು ಭಾರತದ ಕಡೆಯಿಂದ ಅಪಹರಣಕಾರರೊಂದಿಗೆ ಖಡಾಖಡಿ ಚೌಕಾಶಿ. ಮಾರ್ಚ್ 15ಕ್ಕೆ ಕಾರ್ಯಾಚರಣೆ ಶುರುಮಾಡಿದಾಗ ಇವೆಲ್ಲ ಸಂಗತಿಗಳು ನಡೆದರೆ, ಮಾರ್ಚ್ 16ರ ಹೊತ್ತಿಗೆ ಐಎನ್ಎಸ್ ಸುಭದ್ರಾ ಜತೆಗೂಡಿತು. ಮಾರ್ಚ್ 16ರ ಮಧ್ಯಾಹ್ನದ ಹೊತ್ತಿಗೆಲ್ಲ ಆ ಕಡಲಾಗಸದಲ್ಲಿ ಸದ್ದು ಮಾಡಿದವು ಭಾರತದ ಸಿ-17 ವಿಮಾನಗಳು. ಅದರಿಂದಿಳಿದವರು ಸಮುದ್ರದ ಒಡಲಿನಿಂದಾದರೂ ವೈರಿಯನ್ನೆಳೆದು ತರಬಲ್ಲ  ನೌಕಾಯೋಧರು! ಪಿ8ಐ ಎಂಬ ವಿಚಕ್ಷಣಾ ವಿಮಾನ ಮತ್ತು ಹ್ಯಾಲೆ ಆರ್ಪಿಎ ಎಂಬ ಮಾನವರಹಿತ ಸಾಧನಗಳೂ ನಭದಲ್ಲಿ ಅಬ್ಬರಿಸಿದವು. ನಲ್ವತ್ತು ತಾಸುಗಳ ಕಸರತ್ತಿನ ನಂತರ ಎಲ್ಲ 35 ಸೊಮಾಲಿ ಕಡಲ್ಗಳ್ಳರೂ ಶಸ್ತ್ರ ಕೆಳಗಿಟ್ಟು ಶರಣಾದರು. ನೌಕೆಯಲ್ಲಿದ್ದ ಎಲ್ಲ 17 ಮಂದಿಯನ್ನು ರಕ್ಷಿಸಲಾಯಿತು. ಹತ್ತು ಲಕ್ಷ ಡಾಲರುಗಳ ಮೌಲ್ಯದ 37,800 ಟನ್ ಸರಂಜಾಮನ್ನು ತನ್ನಲ್ಲಿರಿಸಿಕೊಂಡಿದ್ದ ಎಂವಿ ರುಯೆನ್ ಅನ್ನು ಭಾರತದ ಕಡಲ ತೀರಕ್ಕೆ ಎಳೆದು ತರುವುದಕ್ಕೂ ವ್ಯವಸ್ಥೆಯಾಯಿತು. ಅಲ್ಲೆಲ್ಲೋ ಆಫ್ರಿಕಾದ ಸಮುದ್ರ ಪ್ರದೇಶದಲ್ಲಿ ನ್ಯಾಯಸ್ಥಾಪನೆ ಮಾಡಿ ಬಂತು ಭಾರತದ ಶೌರ್ಯ.

ಮೋದಿ ದಶಕದಲ್ಲಾಗಿರುವ ಮಿಲಿಟರಿ ಬಲವರ್ಧನೆ ಎಂಥದ್ದು?

ನಿಜ. 2008ರಿಂದಲೇ ಭಾರತವು ಕಡಲ್ಗಳ್ಳರ ವಿರೋಧದ ವಿಚಕ್ಷಣೆ ಮತ್ತು ಸುರಕ್ಷತೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಆದರೆ, ಈಮಟ್ಟಿಗಿನ ಜಾಗತಿಕ ವ್ಯಾಪ್ತಿಯ ಕಾರ್ಯಾಚರಣೆಗೆ ಭಾರತ ಕೈಹಾಕಿ ಯಶಸ್ವಿಯಾಗುವುದರ ಹಿಂದೆ ಈ ಹತ್ತು ವರ್ಷಗಳಲ್ಲಿ ಸಮುದ್ರ ಕುರುಕ್ಷೇತ್ರದಲ್ಲಿ ತನ್ನ ವ್ಯೂಹಾತ್ಮಕ ಬಲವನ್ನು ಹೆಚ್ಚಿಸಿಕೊಂಡಿರುವ ಭಾರತದ ಆತ್ಮವಿಶ್ವಾಸ ಕೆಲಸ ಮಾಡಿದೆ. 

ಯಾವ ಸೊಮಾಲಿಯಾದ ಸಮುದ್ರ ತೀರಗಳಲ್ಲಿ ಭಾರತವು ಕಡಲ್ಗಳ್ಳರ ವಿರುದ್ಧ ಯಶಸ್ವಿ ಕಾರ್ಯಾಚರಣೆ ಮಾಡಿ ಬಂದಿದೆಯೊ ಅದರ ಆಸುಪಾಸಿನ ಕೆಲವು ಪ್ರದೇಶಗಳಲ್ಲಿ ಮೋದಿ ಸರ್ಕಾರ ಬಂದ ನಂತರ ಆಗಿರುವ ಮಿಲಿಟರಿ ಬಲವರ್ಧನೆಗಳನ್ನು ಗಮನಿಸಬೇಕು. ಸಮುದ್ರ ವ್ಯವಹಾರದಲ್ಲಿ ತೊಡಗಿರುವವರಿಗೆ ಭಾರತವು ಸುರಕ್ಷತೆ ನೀಡಲೆಂಬ ಉದ್ದೇಶದಿಂದ ಒಮನ್ ದೇಶವು ತನ್ನ ದುಕ್ಮ್ ಬಂದರನ್ನು ಭಾರತೀಯ ನೌಕಾಸೇನೆಗೆ ತೆರೆದಿರಿಸಿದೆ. ಸೂಯಜ್ ಮಾರ್ಗವನ್ನು ಪಯೋಗಿಸಿ ರೆಡ್ ಸೀ ಮುಖಾಂತರ ಬರುವ ಹಡಗುಗಳು ಕಡಲ್ಗಳ್ಳರು ಇಲ್ಲವೇ ಬಂಡುಕೋರರಿಂದ ಸಮಸ್ಯೆಗೆ ಒಳಗಾದಾಗ ಪ್ರತಿಸ್ಪಂದಿಸುವುದಕ್ಕೆ ಭಾರತದ ಪಾಲಿಗೆ ವರದಾನವಿದು. ಇದೇ ರೆಡ್ ಸೀ ಮಾರ್ಗದ ಜಿಬೊತಿ ಎಂಬ ದೇಶದಲ್ಲಿ ಚೀನಾ ಇದಕ್ಕೂ ಮೊದಲೇ ನೌಕಾನೆಲೆ ಹೊಂದಿದೆಯಾದ್ದರಿಂದ ಅದಕ್ಕೆ ಸಮತೋಲನ ತರುವ ಕೆಲಸವನ್ನೂ ಒಮಾನಿನ ಈ ಭಾರತೀಯ ನೆಲೆ ಮಾಡುತ್ತದೆ. ಅರೇಬಿಯ ಸಮುದ್ರದಲ್ಲಿ ಜಾರುತ್ತ ಹಿಂದು ಮಹಾಸಾಗರದತ್ತ ಬಂದರೆ ಸಿಶೆಲ್ಸ್ ದೇಶದ ಅಸಂಪ್ಶನ್ ದ್ವೀಪಗಳಲ್ಲಿ ಸೇನಾ ಪ್ರಸ್ತುತಿ ಹೊಂದುವುದಕ್ಕೆ ಭಾರತ ಪ್ರಯತ್ನನಿರತವಾಗಿದೆ. ಅಧಿಕೃತವಾಗಿ ಘೋಷಿಸಿಕೊಳ್ಳುವ ಹಂತ ತಲುಪಿಲ್ಲವಾದರೂ ಅದಾಗಲೇ ಅಲ್ಲಿ ಭಾರತದ ನೌಕಾಸೇನೆಯ ಉಪಸ್ಥಿತಿ ಇದೆ. ಸಿಶೆಲ್ಸ್ ಗೆ ಸಮೀಪದ ಮಾರಿಶಸ್ಸಿನಲ್ಲಿ ಅಗಲೆಗಾ ಎಂಬ ದ್ವೀಪವಂತೂ ಭಾರತದ ಕೈಯಲ್ಲೇ ಇದೆ. ಅಲ್ಲಿ ಸುಸಜ್ಜಿತ ಏರ್ ಸ್ಟ್ರಿಪ್ ಸೇರಿದಂತೆ ಮಿಲಿಟರಿ ನಿರ್ಮಿತಿಗಳು ಆಗಿವೆ. ಮಡಗಾಸ್ಕರ್ ದೇಶದ ಯೋಧರಿಗೆ ತರಬೇತು ನೀಡುವುದರಲ್ಲಿ ತೊಡಗಿಸಿಕೊಳ್ಳುವ ಮೂಲಕ ಭಾರತೀಯ ನೌಕಾಸೇನೆಯು ಅಲ್ಲೊಂದು ನೆಲೆ ಅಂತಲ್ಲದಿದ್ದರೂ ಉಪಸ್ಥಿತಿಯನ್ನಂತೂ ರೂಪಿಸಿಕೊಂಡಿದೆ. ಇವೆಲ್ಲವೂ ಇವತ್ತಿಗೆ ಭಾರತವು ಇಂಡಿಯನ್ ಓಶನ್ ರೀಜನ್ ಅಂತ ಕರೆಸಿಕೊಳ್ಳುವ ವಿಶಾಲ ಸಮುದ್ರಭಾಗದಲ್ಲಿ ಕೇವಲ ತನ್ನ ಹಿತಾಸಕ್ತಿ ಮಾತ್ರವನ್ನಲ್ಲದೇ ಜಗತ್ತಿನ ಪಾಲಿಗೆ ಸುರಕ್ಷತೆ ಖಾತ್ರಿ ಪಡಿಸುವ ಪ್ರಭಾವಶಾಲಿ ಪಾತ್ರವನ್ನೂ ಪೊರೆದಿಟ್ಟುಕೊಳ್ಳುವುದಕ್ಕೆ ಅನುಕೂಲ ಒದಗಿಸಿವೆ. 

ಕೆಂಪು ಸಮುದ್ರದಲ್ಲೂ ಆಪದ್ಬಾಂಧವನಾಗಬಲ್ಲುದೇ ಭಾರತ? 

ಈಗ ಸೊಮಾಲಿಯಾ ಸಮುದ್ರದಲ್ಲಿ ಭಾರತ ನಡೆಸಿರುವ ಕಾರ್ಯಾಚರಣೆಯನ್ನು ಅಮೆರಿಕವೂ ಮುಂಚೂಣಿಯಲ್ಲಿ ಪ್ರಶಂಸಿಸುತ್ತಿರುವುದಕ್ಕೆ ಕಾರಣವೆಂದರೆ, ರೆಡ್ ಸೀ ಭಾಗದಲ್ಲಿ ಹೌತಿ ಬಂಡುಕೋರರು ಸೃಷ್ಟಿಸಿರುವ ಆತಂಕ. ಭಾರತ ಸಹ ಜತೆಗೂಡಿದರೆ ಮಾತ್ರ ಅಲ್ಲಿನ ಸಾಗರ ವ್ಯಾಪಾರಕ್ಕೆ ಇಬ್ಬರೂ ಸೇರಿ ಸುರಕ್ಷತೆ ಒದಗಿಸಬಹುದು ಎಂಬ ವಾಸ್ತವವನ್ನು ಅಮೆರಿಕ ಅರಿತಿದೆ. ಜನವರಿಯಲ್ಲಿ ಗಲ್ಫ್ ಆಫ್ ಅಡೆನ್ ಬಳಿ ಇರಾನ್ ಬೆಂಬಲಿತ ಹೌತಿಗಳು ವಾಣಿಜ್ಯ ನೌಕೆಯೊಂದರ ಮೇಲೆ ಡ್ರೋನ್ ದಾಳಿ ನಡೆಸಿದಾಗ ಅವರು ಸುರಕ್ಷಿತವಾಗಿ ಮುಂದೆ ಸಾಗುವುದಕ್ಕೆ ಐಎನ್ಎಸ್ ವಿಶಾಖಪಟ್ಟಣದ ಸಹಾಯ ಪಡೆದಿದ್ದರು. 

ಫೆಬ್ರವರಿ 18ರಂದು ಇಂಗ್ಲೆಂಡಿನಿಂದ ರಸಗೊಬ್ಬರ ತುಂಬಿಕೊಂಡು ಬರುತ್ತಿದ್ದ ನೌಕೆಯನ್ನು ಹೌತಿ ಉಗ್ರರು ಕ್ಷಿಪಣಿ ದಾಳಿಗೆ ಗುರಿಯಾಗಿಸಿದ್ದಾರೆ. ಕೆಲದಿನಗಳ ಕಾಲ ಡೋಲಾಯಮಾನ ಸ್ಥಿತಿಯಲ್ಲಿದ್ದ ನೌಕೆಯು, ವಾತಾವರಣವೂ ಬಿಗಡಾಯಿಸಿದ್ದರಿಂದ ಮುಳುಗಿಹೋಯಿತು. ಅದರಲ್ಲಿದ್ದ ರಸಗೊಬ್ಬರದ ಸೋರಿಕೆಯು ಸಮುದ್ರದ ಜೀವ ಪರಿಸರಕ್ಕೆ ಮಾಡಲಿರುವ ಹಾನಿ ಒಂದೆಡೆಯಾದರೆ, ಹಾಗೆ ಮುಳುಗಿರುವ ಹಡಗು ಸಮುದ್ರದಾಳದಲ್ಲಿ ಅಂತರ್ಜಾಲದ ಫೈಬರ್ ಜಾಲಕ್ಕೂ ಹಾನಿ ಮಾಡಿರುವ ಬಗ್ಗೆ ವರದಿಗಳಿವೆ. ಒಟ್ಟಿನಲ್ಲಿ, ಸಮುದ್ರ ವ್ಯಾಪಾರವನ್ನು ಅಸ್ತವ್ಯಸ್ತವಾಗಿಸಿ ಜಗತ್ತಿಗೆ ಹಣದುಬ್ಬರದ ಬರೆ ಹಾಕುವ ರೀತಿಯಲ್ಲಿ ಹಾಗೂ ಅಂತರ್ಜಾಲ ವ್ಯವಸ್ಥೆಗೂ ಆತಂಕ ಒಡ್ಡಿ ಜಗತ್ತಿನ ವ್ಯವಹಾರಗಳೇ ಮುಗ್ಗರಿಸುವಂತೆ ಮಾಡುವ ಆತಂಕ ಸೃಷ್ಟಿಸುವಷ್ಟರ ಮಟ್ಟಿಗೆ ಇಂದು ಸಮುದ್ರದ ಎದೆ ಮೇಲೆ ಅನಪೇಕ್ಷಿತ ವಾತಾವರಣ ಉಂಟಾಗಿದೆ. 

ಇಂಥ ಸಂದರ್ಭದಲ್ಲಿ ಪ್ರಜ್ವಲಿಸಿರುವ ಭಾರತದ ನೌಕಾಸೇನೆಯ ಕ್ಷಾತ್ರ ತೇಜಸ್ಸು ಇಡೀ ವಿಶ್ವದ ಪಾಲಿಗೆ ಮಹತ್ತರ ಎಂಬಂತಾಗಿದೆ.

ಇದನ್ನೂ ಓದಿ: Semiconductor : ಧೊಲೆರಾದಲ್ಲಿ ದೇಶದ ಮೊದಲ ಸೆಮಿಕಂಡಕ್ಟರ್ ಘಟಕ, ಜಾಗತಿಕ ಭವಿತವ್ಯದಲ್ಲಿ ಏನಿದರ ಪ್ರಾಮುಖ್ಯ?

Exit mobile version