ಬೆಂಗಳೂರು: ಅಕ್ಟೋಬರ್ 2 ಮಹಾತ್ಮ ಗಾಂಧಿ ಅವರ ಜನ್ಮ ದಿನ. ಧೀಮಂತ ನಾಯಕ, ಪ್ರಾಮಾಣಿಕತೆಗೆ ಹೆಸರಾಗಿದ್ದ ಮತ್ತು ನೆಹರು ನಂತರ ದೇಶದ ಚುಕ್ಕಾಣಿ ಹಿಡಿದಿದ್ದ ಲಾಲ್ ಬಹಾದ್ದೂರ್ ಶಾಸ್ತ್ರಿ (Shastri) ಅವರ ಜನ್ಮ ದಿನವೂ ಹೌದು. ಭಾರತದ ಅಭಿವೃದ್ಧಿಯಲ್ಲಿ ಶಾಸ್ತ್ರಿ ಅವರ ಕೊಡುಗೆಯೂ ಅಪಾರವಾಗಿದೆ. ಸ್ವಾತಂತ್ರ್ಯ ಹೋರಾಟಗಾರರಾಗಿ ಬಳಿಕ ದೇಶ ಪ್ರಧಾನಿಯಾಗಿ ಅವರು ನೀಡಿದ ಕೊಡುಗೆ ಅನನ್ಯ, ಅನುಪಮ.
1962ರಲ್ಲಿ ಚೀನಾದ ವಿರುದ್ಧ ಸೋಲು ಕಂಡಿದ್ದ ಭಾರತವು, 1965ರಲ್ಲಿ ಪಾಕಿಸ್ತಾನ ವಿರುದ್ಧದ ಯದ್ಧದಲ್ಲಿ ಜಯ ಸಾಧಿಸಿತ್ತು. ಅದರ ಸಂಪೂರ್ಣ ಕ್ರೆಡಿಟ್ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರಿಗೆ ಸಲ್ಲಬೇಕು. ಭಾರತೀಯ ಸೇನೆ ಪಾಕಿಸ್ತಾನದ ಲಾಹೋರ್ ನಗರವನ್ನು ತನ್ನ ವಶಕ್ಕೆ ತೆಗೆದುಕೊಳ್ಳವಷ್ಟು ಮುಂದಕ್ಕೆ ಹೋಗಿತ್ತು. ಯುದ್ಧದ ಗೆಲುವು ಮಾತ್ರವೇ ಶಾಸ್ತ್ರಿ ಅವರ ಸಾಧನೆಯಲ್ಲ. ಭಾರತವನ್ನು ಸ್ವಾಲಂಬಿಗೊಳಿಸುವ ಪ್ರಯತ್ನದಲ್ಲೂ ಶಾಸ್ತ್ರಿ ಸಾಕಷ್ಟು ಯಶಸ್ಸು ಕಂಡಿದ್ದಾರೆ. ಹಸಿರು ಕ್ರಾಂತಿ, ಕ್ಷೀರ ಕ್ರಾಂತಿಗಳ ಮೂಲಕ ಆಹಾರ ಮತ್ತು ಕ್ಷೀರ ಕ್ಷೇತ್ರದಲ್ಲಿ ಭಾರತವು ಸ್ವಾವಲಂಬನೆ ಸಾಧಿಸುವಂತೆ ಮಾಡುವಲ್ಲಿ ಯಶಸ್ವಿಯಾದರು.
ಶಾಸ್ತ್ರಿ ಹೆಸರು ಬಂದಿದ್ದು ಹೇಗೆ?
ಲಾಲ್ ಬಹಾದ್ದೂರ್ ಅವರು ಕಾಶಿ ವಿದ್ಯಾಪೀಠ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದರು. 1926ರಲ್ಲಿ ತಾವು ಗಳಿಸಿದ ಪದವಿಯ ಅನ್ವರ್ಥವಾಗಿ ಶಾಸ್ತ್ರಿ ಎಂಬುದು ಅವರಿಗೆ ಹೆಸರಿಗೆ ಅಂಟಿಕೊಂಡಿತು. ಶಾಸ್ತ್ರಿ ಎನ್ನುವುದು ವಾಸ್ತವದಲ್ಲಿ ಪದವಿಯಾಗಿದ್ದು, ಈ ಪದವಿಯನ್ನು ಪಡೆದವರಿಗೆ ಶಾಸ್ತ್ರಿ ಎಂದು ಕರೆಯುತ್ತಿದ್ದರು. ಶಾಸ್ತ್ರಿ ಅವರಿಗೆ ಕೇವಲ ಮೂರು ತಿಂಗಳಿದ್ದಾಗ ಅವರ ತಾಯಿ ತೀರಿಕೊಂಡರು. ಗಂಗೆಯಲ್ಲಿ ಪುಣ್ಯಸ್ನಾನ ಮಾಡುತ್ತಿರುವಾಗಲೇ ಅವರು ಮೃತಪಟ್ಟರು.
ನಿತ್ಯ ಗಂಗಾ ನದಿ ಈಜುತ್ತಿದ್ದರು
ನದಿಯ ಆಚೆಯ ದಡದಲ್ಲಿದ್ದ ಶಾಲೆಗೆ ಹೋಗಲು ದೋಣಿಯಲ್ಲಿ ಹೋಗಬೇಕಿತ್ತು. ಆದರೆ, ದೋಣಿಯಲ್ಲಿ ಹೋಗಲು ಶಾಸ್ತ್ರಿ ಅವರ ಬಳಿ ದುಡ್ಡು ಇರಲಿಲ್ಲ. ಹಾಗಾಗಿ ಅವರು ನಿತ್ಯ ಗಂಗಾ ನದಿಯನ್ನು ಈಜಿಕೊಂಡು ಶಾಲೆಗೆ ತೆರಳುತ್ತಿದ್ದರು. ಪುಸ್ತಕಗಳನ್ನು ಬೆನ್ನಿಗೆ ಕಟ್ಟಿಕೊಂಡು ಈಜುತ್ತಿದ್ದರು. ಶಾಸ್ತ್ರಿ ಅವರ ಬಗೆಗಿನ ಮತ್ತೊಂದು ಆಸಕ್ತಿಕರ ಸಂಗತಿ ಏನೆಂದರೆ, ಮದುವೆಯಲ್ಲಿ ಮಾವನಿಂದ ಅವರು ಕಾಣಿಕೆಯಾಗಿ ಚರಕ ಮತ್ತು ಒಂದು ಜೊತೆ ಖಾದಿ ಬಟ್ಟೆ ಸ್ವೀಕರಿಸಿದ್ದರಂತೆ! ಸದಾ ಧೋತಿ ಮತ್ತು ಕುರ್ತಾ ಧರಿಸುತ್ತಿದ್ದ ಶಾಸ್ತ್ರಿ ಅವರನ್ನು ದೇಶದ ಪ್ರಥಮ ಪ್ರಧಾನಿ ಜವಾಹರ್ ಲಾಲ್ ನೆಹರು ಅವರು ಹಾಲ್ ಸಿವಿಲೈಸ್ಡ್ ಎಂದು ಕರೆಯುತ್ತಿದ್ದರಂತೆ.
ಹತ್ತು ರೂಪಾಯಿ ಬೇರೆಯವರಿಗೆ ಕೂಡಿ
ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಅನೇಕ ಬಾರಿ ಅವರು ಜೈಲು ವಾಸ ಅನುಭವಿಸಿದ್ದಾರೆ. ಅವರ ಪತ್ನಿಗೆ 50 ರೂ. ಪಿಂಚಣಿ ದೊರೆಯುತ್ತಿತ್ತು. ಒಮ್ಮೆ ಅವರ ಪತ್ನಿ ಬಂದು ನಿಮಗೆ ಬಂದ ಪಿಂಚಣಿಯಲ್ಲಿ 10 ರೂಪಾಯಿ ಉಳಿಸಿದ್ದೇನೆ ಎಂದು ಹೇಳುತ್ತಾರೆ. ಇದರಿಂದ ಬೇಸರಗೊಂಡ ಶಾಸ್ತ್ರಿ ಅವರು, ಪೀಪಲ್ಸ್ ಸೊಸೈಟಿಯ ಸೇವಕರಿಗೆ ಪಿಂಚಣಿಯನ್ನು ಮೊತ್ತವನ್ನು ಕಡಿಮೆ ಮಾಡಿ, ಉಳಿದಿರುವ ಹಣವನ್ನು ಅಗತ್ಯ ಇದ್ದವರಿಗೆ ಹಂಚಿ ಎಂದು ಹೇಳುತ್ತಾರೆ. ಅಷ್ಟರಮಟ್ಟಿಗೆ ಅವರು ತಮ್ಮ ಕಾರ್ಯದಲ್ಲಿ ಪ್ರಾಮಾಣಿಕತೆಯನ್ನು ಕಾಯ್ದುಕೊಂಡು ಬಂದಿದ್ದರು. ಇದಕ್ಕೆ ಇನ್ನೊಂದು ಉದಾಹರಣೆಯನ್ನು ನೀಡಬಹುದು- ಶಾಸ್ತ್ರಿ ಅವರ ಮಗನಿಗೆ ಬಡ್ತಿ ಸಿಕ್ಕಿತ್ತಂತೆ. ತಮ್ಮ ಪ್ರಭಾವದಿಂದಾಗಿ ಈ ಬಡ್ತಿಯನ್ನು ನೀಡಲಾಗಿದೆ ಎಂದು ಅರಿವಾಗುತ್ತಿದ್ದಂತೆ, ಕೂಡಲೇ ಆ ಬಡ್ತಿಯನ್ನು ಹಿಂಪಡೆಯಲು ಆದೇಶಿಸಿದ್ದರಂತೆ. 2004ರಲ್ಲಿ ಶಾಸ್ತ್ರಿ ಅವರ ಜನ್ಮಶತಮಾನೋತ್ಸವ ಆಚರಿಸಲಾಯಿತು. ಈ ವೇಳೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 100 ರೂ. ನಾಣ್ಯವನ್ನು ಅವರ ಸ್ಮರಾಣರ್ಥ ಬಿಡುಗಡೆ ಬಿಡುಗಡೆ ಮಾಡಿತ್ತು. ಈ ನಾಣ್ಯ ದಿನ ಬಳಕೆಗಲ್ಲ. ಬದಲಿಗೆ, ಆರ್ಡರ್ ನೀಡಿದರೆ ಮಾತ್ರವೇ ನೀಡಲಾಗುತ್ತದೆ.
ಇದನ್ನೂ ಓದಿ | ವಿಸ್ತಾರ Explainer: ಹೋಮಿ ಭಾಭಾ, ಶಾಸ್ತ್ರಿಯವರನ್ನು ಅಮೆರಿಕ ಕೊಂದಿತೇ? ವೆಬ್ ಸರಣಿ ಎಬ್ಬಿಸಿದ ಕುತೂಹಲ