| ಮಲ್ಲಿಕಾರ್ಜುನ ತಿಪ್ಪಾರ, ಬೆಂಗಳೂರು
ಅಧಿಕಾರದ ವ್ಯಾಮೋಹದಿಂದ ತಪ್ಪಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಅಧಿಕಾರದಿಂದ ದೊರೆಯುವ ಸವಲತ್ತು, ಪ್ರತಿಷ್ಠೆಗಳು ವ್ಯಕ್ತಿಯೊಳಗೆ ಹುಸಿ ಆತ್ಮವಿಶ್ವಾಸವನ್ನು ಹೆಚ್ಚಿಸಿರುತ್ತದೆ. ವಿಶೇಷವಾಗಿ ರಾಜಕಾರಣದಲ್ಲಿ ಅಧಿಕಾರದ ವ್ಯಾಮೋಹದ ಬಹು ಆಯಾಮಗಳನ್ನು ಕಾಣಬಹುದು. ಸದಾ ಅಧಿಕಾರದಲ್ಲಿರಲು ರಾಜಕಾರಣಿಗಳು ನಡೆಸುವ ಪ್ರಯತ್ನಗಳು ವಿಪರೀತವಾಗಿರುತ್ತದೆ. ರಾಜಕಾರಣಿಗಳೇ ಅಂದರೆ ಇರುವುದು ಹಾಗೆ, ಸದಾ ಅಧಿಕಾರದಲ್ಲಿರಬೇಕು, ಸುತ್ತ ಮುತ್ತ ಅವರನ್ನು ಹೊಗಳುವ ದೊಡ್ಡ ಪಡೆಯೇ ಇರಬೇಕು, ಹೋದಲ್ಲಿ, ಬಂದಲ್ಲಿ ಜೈಕಾರ ಮೊಳಗಬೇಕು! ಇಷ್ಟೆಲ್ಲ ಹಿತಾನುಭವ ಅನುಭವಿಸುವ ವ್ಯಕ್ತಿಗೆ ಅಧಿಕಾರ ಹೊರಟು ಹೋದರೆ, ನೀರಿನಿಂದ ತೆಗೆದ ಮೀನಿನಂತಾಗುತ್ತಾನೆ! ಹಾಗಂತ ಎಲ್ಲ ರಾಜಕಾರಣಿಗಳು ಅಧಿಕಾರ ವ್ಯಾಮೋಹಿಗಳಾಗಿರುತ್ತಾರೆ ಎಂದಲ್ಲ. ಅಧಿಕಾರದಲ್ಲಿದ್ದಾಗ, ಒಳ್ಳೆಯ ಕೆಲಸಗಳನ್ನು ಮಾಡಿ, ಟೈಮ್ ಬಂದಾಗ ಸದ್ದು ಗದ್ದಲ್ಲವಿಲ್ಲದೇ ಎದ್ದು ಮುತ್ಸದ್ದಿ ನಾಯಕರೂ ಇದ್ದಾರೆ. ಈ ಸಾಲಿಗೆ ನ್ಯೂಜಿಲ್ಯಾಂಡ್‌ನ ಪ್ರಧಾನಿ ಜಸಿಂಡಾ ಆಡರ್ನ್ (Jacinda Ardern) ಸೇರುತ್ತಾರೆ!
ನ್ಯೂಜಿಲ್ಯಾಂಡ್ ಜನಪ್ರಿಯ ಪ್ರಧಾನಿಯಾಗಿರುವ ಜಸಿಂಡಾ, ನನಗಿನ್ನು ಅಧಿಕಾರ ಸಾಕು ಎಂದು ರಾಜೀನಾಮೆ ನೀಡಿ, ಅಧಿಕಾರ ರಾಜಕಾರಣದಿಂದ ಹೊರ ಬಂದಿದ್ದಾರೆ. ಆಧುನಿಕ ರಾಜಕಾರಣದಲ್ಲಿ ಇದೊಂದು ಅಪರೂಪದ ಬೆಳವಣಿಗೆ ಎಂದು ಇತಿಹಾಸ ದಾಖಲಿಸಬಹುದು. ಬಹುಶಃ ಯಾವ ರಾಜಕಾರಣಿಯು ನನಗಿನ್ನು ಅಧಿಕಾರ ಸಾಕು ಎಂದು, ಅಧಿಕಾರ ತ್ಯಜಿಸಿದ ಉದಾಹರಣೆಗಳು ಬಹಳ ಕಡಿಮೆ. ಇದಕ್ಕೆ ನ್ಯೂಜಿಲ್ಯಾಂಡ್‌ನ ಜಸಿಂಡಾ ಈಗ ಅಪವಾದವಾಗಿದ್ದಾರೆ. ಫೆಬ್ರವರಿ 7ರವರೆಗೆ ನ್ಯೂಜಿಲ್ಯಾಂಡ್ ಪ್ರಧಾನಿಯಾಗಿ ಕೆಲಸ ಮಾಡಲಿದ್ದಾರೆ.
ಲೇಬರ್ ಪಕ್ಷ ಸೇರ್ಪಡೆ
ಲೇಬರ್ ಪಕ್ಷದ ನಾಯಕಿಯಾಗಿರುವ ಜಸಿಂಡಾ ಅವರು 2017ರಲ್ಲಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದರು. ನ್ಯೂಜಿಲ್ಯಾಂಡ್ ರಾಜಕಾರಣದಲ್ಲಿ ಅತ್ಯಂತ ಕಿರಿಯ ವಯಸ್ಸಿಗೆ ಹಿರಿಯ ಹುದ್ದೆ ಜವಾಬ್ದಾರಿ ವಹಿಸಿಕೊಂಡ ಜಸಿಂಡಾ ಅವರು, ತ್ವರಿತವಾಗಿ ಯಶಸ್ಸಿನ ಮೆಟ್ಟಿಲು ಏರುತ್ತಾ, ಪ್ರಪಂಚದಲ್ಲಿ ವಿಶಿಷ್ಟ ನಾಯಕಿಯಾಗಿ ಗುರುತಿಸಿಕೊಂಡರು. ತಾವು ಯಾವ ಕಚೇರಿಯಲ್ಲಿ ಕೆಲಸ ಮಾಡುತ್ತಿರುತ್ತೇವೋ ಅದೇ ಕಚೇರಿಯ ಮುಖ್ಯಸ್ಥರಾಗುವ ಅದೃಷ್ಟ ತುಂಬ ಜನರಿಗೆ ಒಲಿಯುವುದಿಲ್ಲ. ಜಸಿಂಡಾ ಅವರು ನ್ಯೂಜಿಲೆಂಡ್ ಪ್ರಧಾನಿಯ ಕಚೇರಿಯಲ್ಲಿ ಸಹಾಯಕರಾಗಿ ಕೆಲಸ ಮಾಡಿ, ಅದೇ ಕಚೇರಿಯ ಮುಖ್ಯಸ್ಥರಾದರು. 2017ರಲ್ಲಿ ಸಮ್ಮಿಶ್ರ ಸರ್ಕಾರದ ಪ್ರಧಾನಿಯಾಗಿದ್ದ ಅವರು ಅತಿ ಕಿರಿಯ ವಯಸ್ಸಿನಲ್ಲೇ (38 ವರ್ಷ) ಅಧಿಕಾರ ಪಡೆದಿದ್ದರು. ಕೋವಿಡ್ ಸಂಕಷ್ಟವನ್ನು ಪರಿಣಾಮಕಾರಿಯಾಗಿ ನಿಭಾಯಿಸಿ ಸೈ ಎನಿಸಿಕೊಂಡಿದ್ದರು. ಇವರ ಕಾರ್ಯವೈಖರಿಗೆ ಒಲಿದ ನ್ಯೂಜಿಲ್ಯಾಂಡ್ ಜನತೆ ಇವರ ಲೇಬರ್ ಪಾರ್ಟಿಯನ್ನು 2020ರಲ್ಲಿ ಭರ್ಜರಿ ಬಹುಮತದಿಂದ ಗೆಲ್ಲಿಸಿ ಮರಳಿ ಅಧಿಕಾರ ನೀಡಿತ್ತು. 2022ರ ಜನವರಿಯಲ್ಲಿ, ಕೊರೊನಾ ಹೊಸ ಅಲೆ ತಡೆಗಟ್ಟಲು ನಿರ್ಬಂಧಗಳನ್ನು ವಿಧಿಸಿದ ಕಾರಣದಿಂದ ಜಸಿಂಡಾ ತಮ್ಮ ಮದುವೆಯನ್ನೇ ಅನಿರ್ದಿಷ್ಟಾವಧಿ ಮುಂದೂಡಿದ್ದರು. ಆ ಬಳಿಕ ಪ್ರಧಾನಿಯಾಗಿದ್ದಾಗಲೇ ಮಗುವಿಗೆ ಜನ್ಮ ನೀಡಿದ ಅವರು, ಹಸುಗೂಸನ್ನು ಸಂಸತ್ತಿಗೂ ವಿಶ್ವಸಂಸ್ಥೆಯ ಸಭೆಗೂ ಎತ್ತಿಕೊಂಡು ಬಂದದ್ದುಂಟು.
ಡಾ ಅವರು ತಮ್ಮ ವಿಶಿಷ್ಟ ನಾಯಕತ್ವದಿಂದಾಗಿ ಹೆಸರುವಾಸಿಯಾಗಿದ್ದಾರೆ. ಜನಪರ ನಿಲುವುಗಳ ಮೂಲಕ ಜನಮನ್ನಣೆ ಗಳಿಸಿದ್ದಾರೆ. ವಿಶೇಷವಾಗಿ ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ಅವರು ತೋರಿದ ಅದ್ವಿತೀಯ ನಿರ್ವಹಣೆಯಿಂದಾಗಿ ಜನರು, ಮಹಾಮಾರಿಯಿಂದ ಪಾರಾದರು. ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡ ಫಲವಾಗಿ ಇಡೀ ಜಗತ್ತಿನಲ್ಲೇ ಅತಿ ಕಡಿಮೆ ಸೋಂಕು ಪ್ರಕರಣಗಳನ್ನು ನ್ಯೂಜಿಲ್ಯಾಂಡ್ ಕಾಣುವಂತಾಯಿತು. ಇದರ ಹಿಂದೆ, ಜಸಿಂಡಾ ಅವರ ದೂರದೃಷ್ಟಿ ನಾಯಕತ್ವ ಕೆಲಸ ಮಾಡಿತು ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಬಡತನ, ಅಸಮಾನತೆಯನ್ನು ಹೊಡೆದೊಡೆಸುವ ಅನೇಕ ಕ್ರಮಗಳನ್ನು ಅವರು ಜಾರಿಗೆ ತಂದರು. ಜತೆಗೆ, ಸುಸ್ಥಿರ ಅಭಿವೃದ್ಧಿ ಮತ್ತು ಹವಾಮಾನ ಬದಲಾವಣೆ ನಿಯಂತ್ರಣಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ.
ನಾನಾ ಕಾರ್ಯಕ್ರಮ
ಲಿಂಗ ತಾರತಮ್ಯ, ಮಾನವ ಹಕ್ಕುಗಳು, ನಿರಾಶ್ರಿತರು ಪರವಾಗಿ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಧ್ವನಿ ಎತ್ತಿದ್ದಾರೆ. ವಿಶ್ವ ಸಂಸ್ಥೆಯ ಸುಸ್ಥಿರ ಸಾರಿಗೆ ಉನ್ನತ ಸಲಹಾ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಉತ್ತಮ ಕೆಲಸ ಮಾಡಿದ್ದಾರೆ. ದೇಶ ಮತ್ತು ವಿದೇಶಗಳಲ್ಲಿ ಅವರ ನಾಯಕತ್ವಕ್ಕೆ ವಿಶೇಷ ಮನ್ನಣೆ ದೊರೆತಿದೆ. ಅಂತಾರಾಷ್ಟ್ರೀಯವಾಗಿ ಬಹಳಷ್ಟು ಮಹಿಳಾ ರಾಜಕಾರಣಿಗಳು ಜಸಿಂಡಾ ಅವರನ್ನು ತಮ್ಮ ರೋಲ್ ಮಾಡೆಲ್ ನಾಯಕಿಯಾಗಿ ಸ್ವೀಕರಿಸುತ್ತಿದ್ದಾರೆ. ಜಸಿಂಡಾ ಅವರ ಪ್ರಭಾವ ಎಷ್ಟಿದೆ ಎಂದರೆ, 2018 ಮತ್ತು 2019ರ ಟೈಮ್ ಮ್ಯಾಗ್‌ಜಿನ್ ಪ್ರಕಟಿಸಿದ ಜಗತ್ತಿನ ನೂರು ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಅವರು ಕಾಣಿಸಿಕೊಂಡಿದ್ದರು.
ತಂದೆ ಪೊಲೀಸ್, ತಾಯಿ ಅಡುಗೆ ಸಹಾಯಕಿ
ನ್ಯೂಜಿಲ್ಯಾಂಡ್‌ನ ಹ್ಯಾಮಿಲ್ಟನ್‌ನಲ್ಲಿ 1980 ಮತ್ತು ಜುಲೈ 26ರಂದು ಜನಿಸಿದರು. ಇವರ ತಂದೆ ಪೊಲೀಸ್ ಆಫೀಸರ್. ಅವರು ಕೆಲಸ ಮಾಡುತ್ತಿದ್ದ ಮೊರಿನ್ಸ್ವಿಲ್ಲೆ ಮತ್ತು ಮುರುಪಾರ ಪಟ್ಟಣಗಳಲ್ಲಿ ಜಸಿಂಡಾ ತಮ್ಮ ಬಾಲ್ಯವನ್ನು ಕಳೆದರು. ಇವರ ತಾಯಿ ಲಾರೆಲ್ಲಾ ಆರ್ಡೆನ್ ಶಾಲೆಯೊಂದರಲ್ಲಿ ಅಡುಗೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಮೊರಿನ್ಸ್ವಿಲ್ಲೆ ಕಾಲೇಜ್‌ನಲ್ಲಿ ಶಿಕ್ಷಣ ಪಡೆದುಕೊಂಡರು. ಕಾಲೇಜಿನಲ್ಲಿದ್ದಾಗಲೇ ಜಸಿಂಡಾ ನಾಯಕತ್ವದ ಗುಣಗಳನ್ನು ಪ್ರದರ್ಶಿಸಿದ್ದರು. ಸ್ಕೂಲ್ ಟ್ರಸ್ಟಿ ಮಂಡಳಿಯಲ್ಲಿ ಜಸಿಂಡಾ ವಿದ್ಯಾರ್ಥಿಗಳನ್ನು ಪ್ರತಿನಿಧಿಸುತ್ತಿದ್ದರು. ಜಸಿಂಡಾಳ ಕಾಯಕನಿಷ್ಠೆ ಅವರು ಸ್ಕೂಲ್‌ನಲ್ಲಿದ್ದಾಗಲೇ ಮೈಗೂಡಿಸಿಕೊಂಡ ಬಂದಿದ್ದಾರೆ. ಸ್ಕೂಲ್‌ನಲ್ಲಿ ಓದುತ್ತಿರುವಾಗಲೇ ಅವರು, ಫಿಶ್ ಅಂಗಡಿಯೊಂದರಲ್ಲಿ ಅರೆಕಾಲಿಕ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದರು.
ಉನ್ನತ ಶಿಕ್ಷಣ
ತಮ್ಮ 17ನೇ ವಯಸ್ಸಿನಲ್ಲಿ ಜಸಿಂಡಾ ಅವರು ಲೇಬರ್ ಪಾರ್ಟಿ ಸೇರಿಕೊಂಡರು. ಹಾಗೆ ನೋಡಿದರೆ, ಬಾಲ್ಯದಿಂದಲೇ ಜಸಿಂಡಾ ಮೇಲೆ ರಾಜಕೀಯ ಪ್ರಭಾವವಿತ್ತು. ಇವರ ಚಿಕ್ಕಮ್ಮ ಮೇರಿ ಆರ್ಡೆನ್ ಅವರು ಲೇಬರ್ ಪಾರ್ಟಿಯ ಸದಸ್ಯರಾಗಿ ಬಹಳ ವರ್ಷದಿಂದ ಕೆಲಸ ಮಾಡುತ್ತಿದ್ದರು. 1999ರ ಬೈ ಎಲೆಕ್ಷನ್ ಪ್ರಚಾರ ಸಮಯದಲ್ಲಿ ನ್ಯೂ ಪ್ಲೈಮೌತ್ ಎಂಪಿ ಹ್ಯಾರಿ ಡೆನ್‌ಹೋವನ್ ಅವರ ಪರವಾಗಿ ಪ್ರಚಾರ ಮಾಡಲು ನೆರವಾಗಲು ಯುವತಿ ಜಸಿಂಡಾ ಅವರನ್ನು ಪಕ್ಷಕ್ಕೆ ಕರೆ ತಂದರು. ಮತ್ತೊಂದೆಡೆ ಅವರ ಶಿಕ್ಷಣವೂ ಮುಂದುವರಿದಿತ್ತು. 2001ರಲ್ಲಿ ಅವರು ವೈಕಾಟೋ ವಿಶ್ವವಿದ್ಯಾಲಯದಿಂದ ಅವರು ರಾಜಕೀಯ ಮತ್ತು ಸಾರ್ವಜನಿಕ ಸಂಪರ್ಕ ವಿಷಯದಲ್ಲಿ ಕಮ್ಯುನಿಕೇಷನ್ ಸ್ಟಡೀಸ್ ಪದವಿ ಪಡೆದುಕೊಂಡರು. ಬಳಿಕ, ಅರಿಝೋನಾ ಸ್ಟೇಟ್ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣವನ್ನು ಪೂರೈಸಿದರು. ಕಾಲೇಜು ಶಿಕ್ಷಣ ಪೂರೈಸುತ್ತಿದ್ದಂತೆ ಜಸಿಂಡಾ ಅವರು ಸಂಶೋಧಕರಾದ ಫಿಲ್ ಗಾಫ್ ಮತ್ತು ಹೆಲೆನ್ ಕ್ಲರ್ಕ್ ಅವರ ಕಚೇರಿಯಲ್ಲಿ ಸ್ವಲ್ಪ ದಿನಗಳಕಾಲ ಸಂಶೋಧಕಿಯಾಗಿ ಕೆಲಸ ಮಾಡಿದರು. ಅಮೆರಿಕದಿಂದ 2006ರಲ್ಲಿ ಲಂಡನ್‌ಗೆ ತಮ್ಮ ವಾಸ್ತವ್ಯವನ್ನು ಬದಲಿಸಿಕೊಂಡರು. ಅಲ್ಲದೇ, ಬ್ರಿಟಿಷ್ ಪ್ರಧಾನಿ ಟೋನಿ ಬ್ಲೇರ್ ಅವರ ಅಡಿಯಲ್ಲಿ ಸಂಪುಟ ಕಚೇರಿಯ 80-ವ್ಯಕ್ತಿಗಳ ನೀತಿ ಘಟಕದಲ್ಲಿ ಹಿರಿಯ ನೀತಿ ಸಲಹೆಗಾರರಾಗಿ ಕಾರ್ಯ ನಿರ್ವಹಿಸಿದರು. ಆದರೆ, ಪ್ರಧಾನಿ ಟೋನಿ ಬ್ಲೇರ್ ಅವರನ್ನೂ ಎಂದಿಗೂ ಮುಖತಃ ಭೇಟಿಯಾಗಿರಲಿಲ್ಲ.
ನಿರ್ಧಾರವೇನೂ ಅಚ್ಚರಿದಾಯಕವಲ್ಲ
2017ರಿಂದ ಎರಡು ಅವಧಿಗೆ ನ್ಯೂಜಿಲೆಂಡ್ ಅನ್ನು ಮುನ್ನಡೆಸುತ್ತಿರುವ ಜಸಿಂಡಾ ಆರ್ಡೆನ್ ಅವರು ತಮ್ಮನ್ನು ತಾವು, ಸಾಮಾಜಿಕ ಪ್ರಜಾಸತ್ತಾತ್ಮಕ, ಪ್ರಗತಿಪರ, ರಿಪಬ್ಲಿಕನ್ ಮತ್ತು ಸ್ತ್ರೀವಾದಿ ಎಂದು ಹೇಳಿಕೊಳ್ಳುತ್ತಾರೆ. ಬಹುಶಃ ಅವರ ಆಡಳಿತದ ವೈಖರಿಯನ್ನು, ಅವರು ರೂಪಿಸಿದ ನೀತಿ, ಕಾರ್ಯಕ್ರಮಗಳನ್ನು, ಯೋಜನೆಗಳನ್ನು ಅವಲೋಕಿಸಿದರೆ ಈ ಎಲ್ಲ ತತ್ವಗಳ ಪ್ರಭಾವ ಢಾಳಾಗಿರುವುದನ್ನು ಕಾಣಬಹುದು. ಅಪರೂಪದ ರಾಜಕಾರಣಿ, ಜನಪರ ನಾಯಕಿ ಇದೀಗ ಅಧಿಕಾರ ಸಾಕಿನ್ನು ಎಂದು ಹುದ್ದೆ ತೊರೆದು ಹೋಗುತ್ತಿರುವುದು ಅವರನ್ನು ಅತಿ ಹತ್ತಿರದಿಂದ ಬಲ್ಲವರಿಗೆ ಆಶ್ಚರ್ಯವೇನೂ ಅನ್ನಿಸುವುದಿಲ್ಲ. ಅವರ ಪ್ರಾಮಾಣಿಕತೆ, ದಕ್ಷತೆ, ಜನಪರತೆಗಳ ಅರಿವು ಇದ್ದವರಿಗೆ ಇದು ಸಹಜ ನಡೆಯಾಗಿದೆ!
ಜಸಿಂಡಾ ಬಗೆಗಿನ ಕುತೂಹಲಕಾರಿ ಸಂಗತಿಗಳು
| ರಾಜಕೀಯಕ್ಕೆ ಪ್ರವೇಶ ಪಡೆಯುವ ಮುನ್ನ ಜೆಸಿಂಡಾ ಅವರು ಲೇಬರ್ ಪಕ್ಷಕ್ಕೆ ಸಂಶೋಧಕಿಯಾಗಿ ಮತ್ತು ಪ್ರಧಾನಿಯ ಕಾರ್ಯಾಲಯದಲ್ಲಿ ನೀತಿ ಸಲಹೆಗಾರ್ತಿಯಾಗಿ ಕೆಲಸ ಮಾಡಿದ್ದಾರೆ.
| ಪ್ರಧಾನಿಯಾಗಿದ್ದಾಗಲೇ ಮಗುವಿಗೆ ಜನ್ಮ ನೀಡಿದ ಜಗತ್ತಿನ ಎರಡನೇ ಲೀಡರ್ ಎನಿಸಿಕೊಂಡರು. ಹಾಗೆಯೇ, ವಿಶ್ವ ಸಂಸ್ಥೆ ಸಾಮಾನ್ಯ ಸಭೆಗೆ ಮಗುವಿನೊಂದಿಗೆ ಹಾಜರಾಗುವ ಮೂಲಕ ತಮ್ಮ ಕರ್ತವ್ಯನಿಷ್ಠೆ ಮೆರೆದರು.
| 2019ರಲ್ಲಿ ಫೋರ್ಬ್ಸ್ ಮ್ಯಾಗಜಿನ್ ಪ್ರಕಟಿಸಿದ ಪಟ್ಟಿಯಲ್ಲಿ ಜಗತ್ತಿನ ಅತ್ಯಂತ ಎರಡನೇ ಪ್ರಭಾವಿ ಮಹಿಳೆ ಎಂದು ಗುರುತಿಸಿಕೊಂಡಿದ್ದರು. ಮೊದಲನೇ ಸ್ಥಾನದಲ್ಲಿ ಜರ್ಮನ್ ಚಾನ್ಸಲರ್ ಏಂಜೆಲಾ ಮಾರ್ಕೆಲ್ ಅವರಿದ್ದರು.
| ಟ್ಯಾಟೂ ಹಾಕಿಸಿಕೊಂಡ ಜಗತ್ತಿನ ಮೊದಲನೇ ನಾಯಕಿ. ಅವರು ತಮ್ಮ ಬಲ ತೋಳಿನ ಮೇಲ್ಭಾಗದಲ್ಲಿ ಸಾಂಪ್ರದಾಯಿಕ ಮೊವರಿ ವಿನ್ಯಾಸದ ಟ್ಯಾಟೂ ಹಾಕಿಸಿಕೊಂಡಿದ್ದಾರೆ.
| ಮಾನಸಿಕ ಆರೋಗ್ಯದ ಮಹತ್ವವನ್ನು ಸಾರುವ ಕೆಲಸವನ್ನು ಅವರು ಪ್ರಧಾನಿಯಾಗಿ ಮಾಡಿದ್ದಾರೆ. ನಿರಾಶ್ರಿತರು ಪರವಾಗಿ ಅವರು ಧ್ವನಿ ಎತ್ತಿದ್ದಾರೆ. ನ್ಯೂಜಿಲ್ಯಾಂಡ್ ನಿರಾಶ್ರಿತರ ಕೋಟಾವನ್ನು ಕೂಡ ಹೆಚ್ಚಿಸಿದರು.
| ಜೆಸಿಂಡಾ ಅವರು ನಾನ್-ನ್ಯೂಜಿಲ್ಯಾಂಡ್, ನ್ಯೂಜಿಲ್ಯಾಂಡ್ ಟೆಲಿವಿಷನ್ ಪ್ರಸೆಂಟರ್ ಕ್ಲರ್ಕ್ ಗೇಫೋರ್ಡ್ ಅವರನ್ನು ವಿವಾಹವಾಗಿದ್ದಾರೆ. ಹೀಗೆ ನಾನ್-ನ್ಯೂಜಿಲ್ಯಾಂಡ್ ಮದುವೆಯಾದ ಮೊದಲ ಪ್ರಧಾನಿ ಎನಿಸಿಕೊಂಡಿದ್ದಾರೆ.
| 2020ರಲ್ಲಿ ಆಡರ್ನ್ ಜಗತ್ತಿನ ಎರಡನೇ ಅತಿ ಹೆಚ್ಚು ಇಷ್ಟ ಪಟ್ಟ ಮಹಿಳೆ ಎಂಬ ಕೀರ್ತಿಗೆ ಪಾತ್ರರಾದರು. ಮೊದಲನೇ ಸ್ಥಾನದಲ್ಲಿ ಓಪ್ರಾ ವಿನ್‌ಫ್ರೆ ಇದ್ದರು.
| ಆರ್ಡೆರ್ನ್ ಲಿಂಗ ತಾರತಮ್ಯ ಪ್ರತಿಪಾದಕರು. ಹಲವು ಹಂತಗಳಲ್ಲಿ ಮಹಿಳಾ ನಾಯಕತ್ವವನ್ನು ಬೆಳೆಸುವ ಕೆಲಸವನ್ನು ಅವರು ಪ್ರಧಾನಿಯಾಗಿ ಮಾಡಿದ್ದಾರೆ. ಜತೆಗೆ, ಎಲ್‌ಜಿಬಿಟಿ ಪ್ಲಸ್ ಸಮುದಾಯಕ್ಕೂ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ | ವಿಸ್ತಾರ ಸಂಪಾದಕೀಯ | ಅಧಿಕಾರ ಸಾಕೆಂದ ನ್ಯೂಜಿಲ್ಯಾಂಡ್ ಪ್ರಧಾನಿ ನಮ್ಮವರಿಗೆ ಮಾದರಿಯಾಗಬಲ್ಲರೇ?