2023ರ ವಿಧಾನಸಭೆ ಚುನಾವಣೆಯಲ್ಲಿ (Vidhana Soudha) ಕಾಂಗ್ರೆಸ್ ಫಸ್ಟ್ ಕ್ಲಾಸ್‌ನಲ್ಲಿ ಪಾಸ್ ಆಗಲು ಕಾರಣವಾಗಿದ್ದ ಕಮಿಷನ್ ಆರೋಪ ಈಗ ಆ ಪಕ್ಷಕ್ಕೇ ಸುತ್ತಿಕೊಂಡಿದೆ. ನಾವು ಅಧಿಕಾರಕ್ಕೆ ಬಂದರೆ ದಕ್ಷ, ಪ್ರಾಮಾಣಿಕ ಆಡಳಿತ ಕೊಡ್ತೀವಿ ಎಂಬ ಕಾಂಗ್ರೆಸ್ ವಾಗ್ದಾನ ಕೇವಲ ಪ್ರಚಾರಕ್ಕೆ ಮಾತ್ರ ಸಿಮೀತವಾಯಿತಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ವರ್ಗಾವಣೆ ದಂಧೆ ಜೋರಾಗಿದೆ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಆರೋಪ ಮಾಡಿದ್ದರು. ಇದಕ್ಕೆ ಪೂರಕವಾಗಿ ಬಿಜೆಪಿ ನಾಯಕರೂ ದನಿಗೂಡಿಸಿದರು. ಈಗ ಗುತ್ತಿಗೆದಾರರು ಹೊರ ಬಂದು, 15% ಕಮಿಷನ್ ಕೇಳುತ್ತಿದ್ದಾರೆ ಅನ್ನೋ ಆರೋಪದ ಬಗ್ಗೆ ಹೆಚ್ಚು ಚರ್ಚೆ ಆಗುತ್ತಿದೆ. ಹಾಗಾಗಿ, ಯಾವ ಸರ್ಕಾರ ಬಂದರೂ ಈ ಕಮಿಷನ್ ಭೂತದ ಕಾಟ ಕಡಿಮೆ ಆಗೋದಿಲ್ಲ ಎಂಬ ಮಾತು ವಿಧಾನಸಭೆ ಆವರಣದಲ್ಲಿ ಕೇಳಿ ಬರುತ್ತಿದೆ.
ಸಿನಿಮಾದಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ ನಿಖಿಲ್ ಕುಮಾರಸ್ವಾಮಿ
ನಿಖಿಲ್ ಕುಮಾರಸ್ವಾಮಿಗೆ ʼದೊಡ್ಡ ಕುಟುಂಬʼದ ಛಾಯೆ ಭಾರಿ ಸಮಸ್ಯೆ ಉಂಟು ಮಾಡುತ್ತಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರ ಮೊಮ್ಮಗ, ಕುಮಾರಸ್ವಾಮಿ ಮಗ ಅನ್ನೋ ಕಾರಣಕ್ಕೆ ಸೋಲಿಸಬೇಕು ಅಂತ ಮಂಡ್ಯದ ಒಂದು ಟೀಮ್ ಶತಾಯಗತಯ ಕೆಲಸ ಮಾಡಿ ಸಕ್ಸಸ್ ಆಗಿತ್ತು. ಇದರ ಪರಿಣಾಮವಾಗಿ ಸುಮಲತಾ ಅಂಬರೀಶ್ ಲಕ್ಷಗಟ್ಟಲೆ ಲೀಡ್ ಗಳಿಸಿ ಗೆದ್ದು ಬೀಗಿದ್ರು. ಈ ಬಾರಿ ವಿಧಾನಸಭೆ ಚುನಾವಣೆಯಲ್ಲೂ ರಾಮನಗರದಲ್ಲಿ ಮತ್ತೆ ಇದೇ ಕಾರಣಕ್ಕೆ ನಿಖಿಲ್ ಸೋಲು ಕಂಡಿದ್ದಾರೆ. ಹೀಗಾಗಿ ರಿಲೀಫ್ ಮೂಡಿಗಾಗಿ ವಿದೇಶಕ್ಕೆ ಹೋಗಿ ಬಂದ ನಿಖಿಲ್ ಈಗ ತಮಿಳುನಾಡು ಮೂಲದ ಬ್ಯಾನರ್ ಒಂದಕ್ಕೆ ಮೂರು ಫಿಲ್ಮ್ ಮಾಡಲು ಸಹಿ ಹಾಕಿದ್ದಾರೆ. ಹೀಗಾಗಿ ಡಿಸೆಂಬರ್‌ವರೆಗೂ ಅವರು ಫಿಲ್ಮ್‌ನಲ್ಲಿ ಬ್ಯುಸಿ ಇರಲಿದ್ದಾರೆ.
ಸೋಮಣ್ಣಗೆ ಫುಲ್ ಕನ್‌ಫ್ಯೂಸ್
ನಲವತ್ತು ವರ್ಷಗಳಲ್ಲಿ ಬಹುತೇಕ ಅವಧಿ ಶಾಸಕ, ಸಚಿವರಾಗಿದ್ದ ವಿ ಸೋಮಣ್ಣ ಈ ಬಾರಿ ಸೋತು ವಿಜಯನಗರ ಮನೆ ಸೇರಿದ್ದಾರೆ. ಆದರೆ ಅವರು ಒಂದು ಕಡೆ ಕೂರಲೂ ಆಗದೆ, ಓಡಾಡಲು ಆಗದೆ ಚಡಪಡಿಸುತ್ತಿದ್ದಾರೆ. ಬೆಳಗ್ಗೆ 4 ಗಂಟೆಗೆ ಏಳುವ ಸೋಮಣ್ಣ ಮನೆ ಮುಂದೆಯೇ ಆರು ಗಂಟೆವರೆಗೂ ವಾಕ್ ಮಾಡ್ತಾರೆ. ಬಳಿಕ ವಿಜಯನಗರದ ಹಳೆಯ ಸ್ನೇಹಿತರ ಜತೆ ಒಂದಷ್ಟು ಹರಟೆ ಹೊಡೆಯುತ್ತ, ಹೈಕಮಾಂಡ್ ನಾಯಕರಿಗೆ ಶಾಪ ಹಾಕ್ತಿದ್ದಾರೆ. ಬೇಕಿಲ್ಲದ ಕ್ಷೇತ್ರ ಕೊಟ್ಟು ನಾನು ಮನೆಯಲ್ಲಿ ಕೂರುವ ಕೆಲಸ ಮಾಡಿದ್ರು ಅಂತ ಬೇಸರ ವ್ಯಕ್ತಪಡಿಸುತ್ತಾರಂತೆ. ಈ ನಡುವೆ ಪಕ್ಷದ ಅಧ್ಯಕ್ಷ ಸ್ಥಾನ ಕೇಳಿದರೂ ವರ್ಕೌಟ್ ಆಗಲಿಲ್ಲ. ತುಮಕೂರಿನ ಟಿಕೆಟ್ ಕೇಳಿದರೂ ಪಾಸಿಟಿವ್ ಉತ್ತರ ಇಲ್ಲ. ಹೀಗಾಗಿ ಕಾಂಗ್ರೆಸ್‌ನಿಂದ ತುಮಕೂರು ಟಿಕೆಟ್ ಪಡೆಯುವ ಮನಸ್ಸು ಮಾಡಿದ್ದಾರಂತೆ. ಇತ್ತ ಡಿಕೆಶಿ ಮತ್ತು ಕೃಷ್ಣಪ್ಪ ಅವರ ಸಂಬಂಧ ಅಷ್ಟಕಷ್ಟೇ ಇರೋದರಿಂದ ಸೋಮಣ್ಣ ಅವರನ್ನು ಕರೆ ತಂದ್ರೆ ಕೃಷ್ಣಪ್ಪ ಮತ್ತು ಪ್ರಿಯಾಕೃಷ್ಣಗೆ ಚೆಕ್ಮೆಟ್ ಕೊಡಬಹುದು ಅನ್ನೋ ಸಲಹೆ ಡಿ ಕೆ ಶಿವಕುಮಾರ್‌ಗೆ ಬರ್ತಿವೆಯಂತೆ. ಹೀಗಾಗಿ ವಿಜಯನಗರದಲ್ಲಿ ಇರೋ ಕೃಷ್ಣಪ್ಪ ಮತ್ತು ಪ್ರಿಯಕೃಷ್ಣ ಅವರು ಸೋಮಣ್ಣ-ಡಿಕೆಶಿ ನಡೆಯ ಮೇಲೆ ನಿಗಾ ಇಟ್ಟಿದ್ದಾರಂತೆ.
ಇದನ್ನೂ ಓದಿ : Commission Politics : ಕಮಿಷನ್ ಕೇಳಿಲ್ಲವಾದರೆ ಡಿಕೆಶಿ ಅಜ್ಜಯ್ಯನ ಮೇಲೆ ಪ್ರಮಾಣ ಮಾಡಲಿ: ಸಿ.ಟಿ. ರವಿ ಸವಾಲು
ಬೊಮ್ಮಾಯಿ ವಿಪಕ್ಷ ನಾಯಕ ಸ್ಥಾನ, ಅಶ್ವತ್ಥ್ ನಾರಾಯಣಗೆ ಅಧ್ಯಕ್ಷ ಸ್ಥಾನ ಅಂತಿದೆ ಹೈಕಮಾಂಡ್!
ಫಲಿತಾಂಶ ಬಂದು ಮೂರು ತಿಂಗಳ ಬಳಿಕ ರಾಜ್ಯ ಬಿಜೆಪಿಗೆ ನೂತನ ಸಾರಥಿ ಮತ್ತು ವಿಪಕ್ಷ ನಾಯಕನ ನೇಮಕ ಮಾಡುವ ಸಂಬಂಧ ಹೈಕಮಾಂಡ್ ಅಂತಿಮ ತೀರ್ಮಾನಕ್ಕೆ ಬಂದಂತೆ ಕಾಣಿಸುತ್ತಿದೆ. ಬಸವರಾಜ ಬೊಮ್ಮಾಯಿ ಅವರು ಅಮಿತ್ ಶಾ ಮತ್ತು ಜೆ ಪಿ ನಡ್ಡಾ ಅವರನ್ನು ಭೇಟಿ ಮಾಡಿದಾಗ, ರಾಜ್ಯದ ಗ್ಯಾರಂಟಿ ಸರ್ಕಾರದ ವೈಪಲ್ಯಗಳ ಬಗ್ಗೆ ಟೆಸ್ಟ್ ಮಾಡಿದ್ದಾರೆ. ಬೊಮ್ಮಾಯಿ ಅವರ ಇಂಟರ್ ವ್ಯೂ ಚೆನ್ನಾಗಿ ಆಗಿದೆಯಂತೆ! ಫಲಿತಾಂಶಕ್ಕೆ ವೇಟ್ ಮಾಡಿ, ಆದರೆ ಕೆಲಸ ಶುರು ಮಾಡಿ ಅಂದಿದ್ದಾರಂತೆ ಹೈಕಮಾಂಡ್ ನಾಯಕರು. ಹೀಗಾಗಿ ದೆಹಲಿಯಿಂದ ಬಂದ ತಕ್ಷಣ ಬೊಮ್ಮಾಯಿ ಮೈಕೊಡವಿ ರಾಜ್ಯ ಪ್ರವಾಸಕ್ಕೆ ಮುಂದಾಗಿದ್ದಾರೆ. ಇತ್ತ ಡಾ. ಸಿ ಎನ್ ಅಶ್ವತ್ಥ್ ನಾರಾಯಣ, ಪಕ್ಷ ನಿಷ್ಠೆ ಮತ್ತು ಕಾಂಪ್ರೋಮೈಸ್ ಪಾಲಿಟಿಕ್ಸ್ ಮಾಡದಿರುವುದೇ ತಮ್ಮನ್ನು ಅಧ್ಯಕ್ಷ ಸ್ಥಾನಕ್ಕೆ ಪರಿಗಣಿಸುವ ಮುಖ್ಯ ಕಾರಣ ಅಂತಿದ್ದಾರಂತೆ. ಇದರ ಹೊರತಾಗಿಯೂ ಹೈಕಮಾಂಡ್ ಕೊನೆಯ ಕ್ಷಣದಲ್ಲಿ ಲೆಕ್ಕಾಚಾರ ಬದಲಾವಣೆ ಮಾಡಬಹುದು ಎನ್ನುತ್ತಿವೆ ಬಿಜೆಪಿ ರಾಷ್ಟ್ರೀಯ ಮೂಲಗಳು.
ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಉಮಾಶ್ರೀ ಸವಾಲ್?
ವಿಧಾನಸೌಧದ ಮೂರನೇ ಮಹಡಿಯಲ್ಲಿ ಒಂದು ರೌಂಡ್ ಹೋಗುವಾಗ ಲಕ್ಷ್ಮೀ ಹೆಬ್ಬಾಳ್ಕರ್ ಚೇಂಬರ್ ಕಾಣಿಸಿತು. ಇವರು ಐದು ವರ್ಷ ಮಂತ್ರಿ ಕಾಯಂ ಎಂಬ ಚರ್ಚೆ ಬಂತು. ಅಲ್ಲಿಯೇ ಇದ್ದ ಕಾಂಗ್ರೆಸ್ ಕಾರ್ಯಕರ್ತನೊಬ್ಬ: ಅಷ್ಟು ಸುಲಭ ಇಲ್ಲ ಸರ್. ಉಮಾಶ್ರೀ ಮೇಡಂ ಪರಿಷತ್ ಸದಸ್ಯೆ ಆಗಿಬಿಟ್ಟರೆ ಈ ಮೇಡಂಗೆ ಸವಾಲು ಇದ್ದೇ ಇದೆ ಅನ್ನಬೇಕಾ! ಸಿದ್ದರಾಮಯ್ಯ ಅವರು ಉಮಾಶ್ರೀ ಹೆಸರು ಶಿಫಾರಸು ಮಾಡಿರುವುದರಿಂದ, ರಾಜಕಾರಣದಲ್ಲಿ ಮುಂದೆ ಏನು ಬೇಕಾದರೂ ನಡೆಯಬಹುದು ಎಂದುಕೊಂಡು ನಾವು ಮುಂದೆ ಹೆಜ್ಜೆ ಹಾಕಿದೆವು…