“ಮಾನವ ಜನ್ಮ ದೊಡ್ಡದು, ಇದ ಹಾಳು ಮಾಡಲುಬೇಡಿ ಹುಚ್ಚಪ್ಪಗಳಿರಾ” ಎಂದು ದಾಸಶ್ರೇಷ್ಠ ಪುರಂದರದಾಸರು ಸಾರಿ ಸಾರಿ ಮಾನವರಿಗೆ ಹೇಳಿದ್ದಾರೆ. ದಾಸರು ತಮ್ಮ ಸ್ವಂತ ಅನುಭವದಿಂದ ಈ ಸಾಲುಗಳನ್ನು ಹೇಳಿದರು. ಆದರೆ ಈ ಬೋಧನೆಯ ಹಿಂದಿರುವ ಉದ್ದೇಶವೇನು? ಅದನ್ನು ನಾವು ಚಿಂತಿಸಬೇಕಾಗಿದೆ.
ಎಷ್ಟೋ ಜನ್ಮಗಳ ಸುಕೃತದಿಂದ ಮಾನವ ಜನ್ಮ ದೊರೆಯುತ್ತದೆ. ಬ್ರಹ್ಮನು ಕ್ರಿಮಿ, ಕೀಟ, ಮೃಗ, ಪಕ್ಷಿ, ವೃಕ್ಷಗಳನ್ನು ಸೃಷ್ಟಿಸಿದ ಮೇಲೆ ತೃಪ್ತಿಯನ್ನು ಕಾಣಲಿಲ್ಲ. ಇದಕ್ಕೆ ಕಾರಣವೇನೆಂದು ಯೋಚಿಸಿದನು. ತತ್ವವಿಚಾರವನ್ನು ಅಲೋಚನೆ ಮಾಡುವ ಅರ್ಹತೆಯುಳ್ಳ ಮಾನವರನ್ನು ಸೃಷ್ಟಿಸಿದ ಮೇಲೆ ಬ್ರಹ್ಮನಿಗೆ ಸಂತೋಷವಾಯಿತು, ತೃಪ್ತಿಯನ್ನು ಕಂಡನು. ಆದುದರಿಂದಲೇ ಮಾನವ ಜನ್ಮವು ಅಮೂಲ್ಯವೂ, ದುರ್ಲಭವೂ ಹಾಗೂ ಕ್ಷಣಿಕವೂ ಆಗಿದೆ. ಇದನ್ನು ಶ್ರೀಮದ್ಭಾಗವತದಲ್ಲಿ ಉಲ್ಲೇಖಿಸಲಾಗಿದೆ. ಮಾನವ ಜನ್ಮದ ಬಗ್ಗೆ ತಾತಯ್ಯನವರು ಹೀಗೆ ಹೇಳಿದ್ದಾರೆ.
ನರಜನ್ಮಂಬುನ ಮೋಕ್ಷಮು
ಕನಕುಂಡಿನ ಲೇದು ಲೇದು ಏ ಜನ್ಮಮುನನ್
ಇದಿಗೋ ಇಪ್ಪುಡು ಸಮಯಮು
ನಿನು ನೀವೇ ತೆಲಿಯವಯ್ಯಾ ನಾರೇಯಣ ಕವಿ||
ಮಾನವ ಜನ್ಮದಲ್ಲಿ ಮೋಕ್ಷವನ್ನು ಕಂಡುಕೊಳ್ಳದಿದ್ದರೆ, ಮತ್ತಾವ ಇತರ ಜೀವರಾಶಿಗಳಲ್ಲಿ ಜನಿಸಿದರೂ ಮೋಕ್ಷ ಸಿಕ್ಕುವುದಿಲ್ಲ. ಇದು ನಿಶ್ಚಯ. ಈಗ ಅಂತಹ ನರಜನ್ಮ ಬಂದಿದೆ. ಇದು ಸೂಕ್ತ ಸಮಯವಾಗಿರುವುದರಿಂದ ನಿನ್ನನ್ನು ನೀನು ಅರಿತುಕೋ, ಆತ್ಮಜ್ಞಾನಿಯಾಗು ಎಂದಿದ್ದಾರೆ.
ಮಾನವರ ಅಜ್ಞಾನದ ಬದುಕು ಹೇಗಿದೆ? ಅಷ್ಟಾವಕ್ರ ಗೀತೆಯಲ್ಲಿ ಈ ರೀತಿಯ ಬೋಧನೆಯಿದೆ “ಚಲನರಹಿತ ವಸ್ತುಗಳ ನೂರನೇ ಒಂದು ಭಾಗವು ಕೂಡ ಜೀವಿಗಳಲ್ಲ, ಮತ್ತು ಅದರ ನೂರನೇ ಒಂದು ಭಾಗವೂ ಮನುಷ್ಯರಲ್ಲ. ಆದರೆ ಲಕ್ಷಾಂತರ ಮನುಷ್ಯರು ಕೇವಲ ಮೃಗಗಳಂತೆ ತೃಪ್ತರಾಗಿದ್ದಾರೆ. ಯಾವುದು ಸತ್ಯ ಮತ್ತು ಯಾವುದು ಸುಳ್ಳು, ಯಾವುದು ಸದ್ಗುಣ ಮತ್ತು ಯಾವುದು ದುರ್ಗುಣ ಎಂದು ತಿಳಿಯುವುದಿಲ್ಲ. ತಿಳಿದಿರುವವರಲ್ಲಿ ಬಯಕೆಗಳಿಂದ ಪ್ರೇರೇಪಿಸಲ್ಪಟ್ಟ ಚಟುವಟಿಕೆಗಳಲ್ಲಿ ತೊಡಗಿರುವ ಇಂದ್ರಿಯ ಜೀವನವನ್ನು ಅವರಿಗೆ ನೀಡಲಾಗುತ್ತದೆ” ಎಂದಿದ್ದಾರೆ.
ಇದರಿಂದ ಮಾನವ ಜನ್ಮದ ಶ್ರೇಷ್ಠತೆಯ ಅರಿವು ನಮಗಾಗುತ್ತದೆ. ತಾತಯ್ಯನವರು ತಮ್ಮ ಆತ್ಮಬೋಧಾಮೃತ ವಚನದ ಪ್ರಾರಂಭದಲ್ಲಿಯೇ “ಈ ಬ್ರಹ್ಮಾಂಡದಲ್ಲಿ ಅನಂತಕೋಟಿ ಜೀವರಾಶಿಗಳಿವೆ. ಅವುಗಳೊಳಗೆ ಶ್ರೇಷ್ಠವಾದುದು ಮಾನವ ಜನ್ಮ. ಅಜ್ಞಾನವೆಂಬ ಕತ್ತಲೆಯಲ್ಲಿ ಬಿದ್ದುಕೊಂಡು ಧನಧಾನ್ಯಗಳ ಬಗ್ಗೆ ಆಸೆಯನ್ನು ಬಿಡದೆ, ಸಾಂಸಾರ ಕೋಟಲೆಗೆ ಸಿಕ್ಕಿ ಅಂಧರಾಗಿ ದು:ಖಗಳನ್ನು ಅನುಭವಿಸುತ್ತಿದ್ದಾರೆ” ಎಂದಿದ್ದಾರೆ.
ತಾತಯ್ಯನವರು ತಮ್ಮ ಕೀರ್ತನೆಯಲ್ಲಿ “ಎಚ್ಚರಿಕ ಓ ಮನಸಾ.. ಎರುಕ ಮರಿಚೇವೂ” (ಎಚ್ಚರಿಕೆ ಓ ಮನಸೇ, ಜ್ಞಾನವನ್ನು ಮರೆಯದಿರು) ಎಂದಿದ್ದಾರೆ. ಜ್ಞಾನದ ಮಹತ್ವ ಅಂಥವುದು. ಆದರೆ ಆ ಜ್ಞಾನವನ್ನು ಮರೆಯಲು ಕಾರಣವೇನು? ಇದಕ್ಕೆ ಒಂದು ಉದಾಹರಣೆ ಸಹಿತವಾಗಿ ತಾತಯ್ಯನವರು ಈ ರೀತಿಯಾಗಿ ವಿವರಿಸಿದ್ದಾರೆ.
ಭೋಗಾಸಕ್ತಿ- ತತ್ವಾಸಕ್ತಿ
ಇದು ಒಗಟಿನ ರೂಪದಲ್ಲಿರುವ ಸಾರ್ವಕಾಲಿಕ ಸತ್ಯವನ್ನು ಸಾರುವ ಪದ್ಯ. ಲೋಕ ಸಾಮಾನ್ಯವಾದ ನೈತಿಕ ವಿವೇಕವನ್ನು ಹೇಳುವ, ಯಾವುದೇ ಸಂದರ್ಭಕ್ಕೂ ಹೊಂದಿಕೊಳ್ಳುವ ಬೋಧನೆಯ ಪದ್ಯ. ತಾತಯ್ಯನವರು ನೂರಾರು ವರ್ಷಗಳ ಹಿಂದೆಯೇ ಕಾಲನಿರ್ಣಯದ ಕಾಲಜ್ಞಾನವನ್ನು ಬರೆದವರು. ಹೆಂಡದ ಮಡಿಕೆಯ ಬಳಿ ಜನಸಂದಣಿಯ ಗದ್ದಲವಿರುತ್ತದೆ. ಮೊಸರಿನ ಮಡಿಕೆಯ ಬಳಿ ಯಾರೂ ಇರುವುದಿಲ್ಲ. ಜನರಿಗೆ ಹೆಂಡವೇ ಮುಖ್ಯವಾಯಿತು. ಮೊಸರು ತಾತ್ಸಾರದ ಪದಾರ್ಥವಾಯಿತು ಎನ್ನುತ್ತಿದ್ದಾರೆ ತಾತಯ್ಯನವರು.
ಕಲ್ಲುಕಡವ ವದ್ದ – ಸಂದಡಿಗಾ ವುಂಡು
ಚಲ್ಲ ಕಡವ ವದ್ದ – ಯೆವರು ಲೇರು |
ಕಲ್ಲು ಮುಖ್ಯಮಾಯ – ಚಲ್ಲ ಚವುಕಾಯರಾ
ನಾದಬ್ರಹ್ಮಾನಂದ ನಾರೇಯಣ ಕವಿ ||
ಲೋಕದಲ್ಲಿ ಭೋಗಾಸಕ್ತರೇ ಹೆಚ್ಚು, ತತ್ವಾಸಕ್ತರು ಕಡಿಮೆ ಎಂಬ ಅಂಶವನ್ನು ತಾತಯ್ಯನವರು ಹೆಂಡ ಮತ್ತು ಮೊಸರು ಉದಾಹರಣೆಯೊಂದಿಗೆ ವಿವರಿಸುತ್ತಾ ವಿಷಾದವನ್ನು ವ್ಯಕ್ತಪಡಿಸುತ್ತಿದ್ದಾರೆ. ಶರೀರಕ್ಕೆ ಹಾನಿಯುಂಟು ಮಾಡುವ ಹಾಗೂ ಕ್ಷಣಿಕವಾದ ಸುಖವನ್ನು ನೀಡುವ ಹೆಂಡದ ಮಡಿಕೆಯ ಬಳಿ ಅಧಿಕ ಜನವಿದ್ದರೆ, ಪೌಷ್ಠಿಕಾಂಶದಿಂದ ಕೂಡಿರುವ ಮೊಸರು ಮಡಿಕೆಯ ಬಳಿ ಯಾರು ಇಲ್ಲ. ಇಂದ್ರಿಯಗಳಿಗೆ ಉನ್ಮಾದ ನೀಡುವ ಪದಾರ್ಥಕ್ಕೆ ಜನ ಮಾರುಹೋಗುತ್ತಿದ್ದಾರೆ. ಭೋಗಗಳಿಗೆ ಕೊನೆಯಿಲ್ಲ. ಅವುಗಳಿಂದ ಬಯಕೆಯೂ ಇಂಗುವುದಿಲ್ಲ. ಆದ್ದರಿಂದಲೇ ತಾತಯ್ಯನವರು ಇಲ್ಲಿ ಹೆಂಡದ ಉಪಮಾನವನ್ನು ನೀಡಿದ್ದಾರೆ. ಇಲ್ಲಿ ಭೋಗದ ಸಾಮಾಗ್ರಿ ಹೆಂಡವಾದರೆ, ತತ್ವದ ಸಾಮಾಗ್ರಿ ಮೊಸರಿನ ಮಡಿಕೆ. ಜನರು ಅಗ್ಗದ ಭೋಗದ ವಸ್ತುಗಳ ಹಿಂದೆ ಬೆನ್ನಟ್ಟಿ ಹೋಗಿ ಜನ್ಮವನ್ನು ವ್ಯರ್ಥಮಾಡಿಕೊಳ್ಳುತ್ತಿದ್ದಾರಲ್ಲಾ ಎಂದು ತಾತಯ್ಯನವರು ಮರುಗುತ್ತಾ, ಆಧ್ಯಾತ್ಮತತ್ವದ ಜೊತೆಗೆ ಸಾಮಾಜಿಕ ಚಿತ್ರಣವನ್ನು ಈ ಪದ್ಯದಲ್ಲಿ ಕಟ್ಟಿಕೊಟ್ಟಿದ್ದಾರೆ.
ಇದನ್ನೂ ಓದಿ: ತಾತಯ್ಯ ತತ್ವಾಮೃತಂ : ಮನಸ್ಸನ್ನು ಜಯಿಸಿದವರೇ ಮಹಾತ್ಮ!
ಬೆಲೆಕಟ್ಟಲಾಗದ ರತ್ನ
ತಾತಯ್ಯನವರು “ರತ್ನಮು ಚಿಕ್ಕೆನುರಾ, ವೇಲಲೇನಿ ರತ್ನಮು ಚಿಕ್ಕೆನುರಾ” (ರತ್ನವು ಸಿಕ್ಕಿತು, ಬೆಲೆಕಟ್ಟಲಾಗದ ರತ್ನವು ಸಿಕ್ಕಿತು) ಎಂದಿದ್ದಾರೆ. ಮುತ್ತು, ರತ್ನಗಳೆಂದರೆ ಪ್ರಪಂಚದಲ್ಲಿ ಅತ್ಯಂತ ಅಮೂಲ್ಯ ಹಾಗೂ ದುಬಾರಿ. ನೂರಾರು ರೂಗಳಿಗೆ ಹಾಗೂ ಸಾವಿರಾರು ರೂಗಳಿಗೆ ಮಾರಾಟವಾಗುವ ರತ್ನಗಳಿವೆ. ಆದರೆ ಬೆಲೆಯೇ ಕಟ್ಟಲಾಗದ ರತ್ನವು ಯಾರ ಬಳಿಯೂ ಇಲ್ಲ ಎಂದು ತಾತಯ್ಯನವರು ಈ ಪದ್ಯದಲ್ಲಿ ಹೇಳುತ್ತಿದ್ದಾರೆ.
ನೂರಾರು ಕ್ರಯಮಯ್ಯೇ ರತ್ನಮು ವುನ್ನದಿ
ವೆಯ್ಯಾರು ಕ್ರಯಮಯ್ಯೇ ರತ್ನಮುಂದಿ
ವೆಲಲೇನಿ ರತ್ನಮು ಯೆವರಿಕಿ ಲೇದುರಾ
ನಾದಬ್ರಹ್ಮಾನಂದ ನಾರೇಯಣ ಕವಿ ||
ರತ್ನಗಳನ್ನು ಮಾರಾಟ ಮಾಡುವ ಅಂಗಡಿಗೆ ಹೋಗಿ ನಮ್ಮ ಬಳಿ ಇರುವ ಹಣಕ್ಕೆ ಎಷ್ಟು ಬೇಕೋ ಅಷ್ಟು ರತ್ನವನ್ನು ಕೊಂಡು ತರಬಹುದು. ಈ ಭೌತಿಕವಾದ ರತ್ನಗಳು ನಮ್ಮ ಜೀವನದ ಕೊನೆಯವರೆಗೂ ಇರುತ್ತದೆ, ಸತ್ತ ನಂತರ ಇವು ನಮ್ಮ ಹಿಂದೆ ಬರುವುದಿಲ್ಲ. ಆದರೆ ತಾತಯ್ಯನವರು ಬೆಲೆ ಕಟ್ಟಲಾಗದ ರತ್ನವೆಂದರೆ ಅಧ್ಯಾತ್ಮಿಕವಾದ ಜ್ಞಾನರತ್ನ ಎಂದು ಹೇಳುತ್ತಿದ್ದಾರೆ. ಪ್ರಾಪಂಚಿಕ ಭೋಗವಿಲಾಸಗಳಲ್ಲೇ ಕಾಲ ಕಳೆದ ಜೀವಿಗೆ ಈ ರತ್ನ ದೊರೆಯುವುದಿಲ್ಲ. ಯಾರಾದರೇ ಭಕ್ತಿ, ಜ್ಞಾನ, ವೈರಾಗ್ಯದ ಭಾವನೆ ತಳೆದು ಮಾರಾಟವಾಗುವ ರತ್ನಗಳನ್ನು ಅಂದರೆ ಭೋಗವಿಲಾಸಿ ಜೀವನವನ್ನು ತುಚ್ಚವಾಗಿ ಕಾಣುತ್ತಾನೋ ಅವನಿಗೆ ಈ ಬೆಲೆ ಕಟ್ಟಲಾಗದ ಜ್ಞಾನರತ್ನವು ದೊರೆಯುತ್ತದೆ ಎನ್ನುತ್ತಿದ್ದಾರೆ ತಾತಯ್ಯನವರು.
ಗುರುವಿನ ಮಾರ್ಗದಲ್ಲಿ ನಡೆದು ಹುಟ್ಟುಸಾವುಗಳಿಂದ ತಪ್ಪಿಸಿಕೊಳ್ಳುವವನು ಜ್ಞಾನಿ. ಮಾನವ ಜನ್ಮವನ್ನು ಹಾಳು ಮಾಡಿಕೊಳ್ಳದೇ, ಸಾರ್ಥಕ ಮಾಡಿಕೊಳ್ಳೋಣ.
ಇದನ್ನೂ ಓದಿ: ತಾತಯ್ಯ ತತ್ವಾಮೃತಂ : ಮಾಯೆಯ ಮನೆಹಾಳಾಗ ಎಂದಿದ್ದೇಕೆ ತಾತಯ್ಯ