ತಾತಯ್ಯ ತತ್ವಾಮೃತಂ: ಈ ಕಲಿಯುಗ ಹಿಂದಿನ ಯುಗಗಳಂತಲ್ಲ. ಕೃತಯುಗ, ತ್ರೇತಾಯುಗ ಹಾಗೂ ದ್ವಾಪರಯುಗಗಳಲ್ಲಿ ಮೋಕ್ಷಸಿದ್ಧಿಯನ್ನು ಗಳಿಸಬೇಕಾದರೆ ಬಹಳ ಕಠಿಣವಾದ ಧ್ಯಾನ, ಯಜ್ಞ, ತಪಸ್ಸು, ಪೂಜೆಗಳನ್ನು ಮಾಡಬೇಕಾಗಿತ್ತು. ಆದರೆ ಕಲಿಯುಗದಲ್ಲಿ ಸುಲಭಮುಕ್ತಿಯ ಅವಕಾಶವಿದೆ. ಆದರೆ ಅದನ್ನು ಗಳಿಸಿಕೊಳ್ಳಲು ಮಾನವರಿಗೆ ಸಾಧ್ಯವಾಗುತ್ತಿಲ್ಲ. ಕಾರಣವೆಂದರೆ ಈ ಚಂಚಲವಾದ ಮನಸ್ಸನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಹಾಗಾದರೆ ಈ ಚಂಚಲವಾದ ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲು ಏನು ಮಾಡಬೇಕು? ಕಲಿಯುಗದ ಜನರ ಮರ್ಮವೇನು? ಕಲಿಯುಗದ ಯುಗಧರ್ಮವೇನು? ಕೈವಾರದ ತಾತಯ್ಯನವರು ಈ ಬೋಧನೆಯು ಈ ಪ್ರಶ್ನೆಗಳಿಗೆ ಉತ್ತರಿಸುತ್ತದೆ.
ತಾತಯ್ಯನವರು ಕಲಿಯುಗದ ಯುಗಧರ್ಮವನ್ನು ಈ ಪದ್ಯದಲ್ಲಿ ಪ್ರಸ್ತಾಪಿಸುತ್ತಿದ್ದಾರೆ. ಲೋಕದಲ್ಲೆಲ್ಲಾ ಭೋಗಾಸಕ್ತರು ಹೆಚ್ಚಾಗಿ, ಮಾನವರು ಇಂದ್ರಿಯ ಸುಖಗಳಲ್ಲಿ ಮಗ್ನರಾಗಿದ್ದರೆಯೇ ಹೊರತು ದೈವ ಚಿಂತನೆ ಯಾರಿಗೂ ಬೇಕಿಲ್ಲ ಎಂಬ ಅಂಶವನ್ನು ತಾತಯ್ಯನವರು ಒತ್ತಿ ಹೇಳುತ್ತಿದ್ದಾರೆ. ಈ ರೀತಿಯಾಗಿರುವುದು ಯಾಕೆ? ಇದು ಕೂಡ ದೇವರ ಮಹಿಮೆಯೇ ಇರಬಹುದು. ಈ ಬೋಧನೆಯ ಅಂತರಾಳವನ್ನು ಪರಾಮರ್ಶಿಸೋಣ.
ದ್ವಾಪರದಲ್ಲಿಯೇ ಅರಿಯಲಿಲ್ಲ:
ದ್ವಾಪರಂಬುನ ನೀವು ದ್ವಾರಕಾಪುರಮಂದು
ರಾಜಾಧಿರಾಜುವೈ ರಾಜ್ಯಮುನಕು
ಪ್ರಜಲ ಪಾಲಿಂಪುಚೂ ಪ್ರತ್ಯಕ್ಷಮೈಯುಂಡಿ
ದೇವುಡನುಚು ನಿನ್ನು ತೆಲಿಯಲೇರು||
ಇಲ್ಲಿ ತಾತಯ್ಯನವರು ದ್ವಾಪರಯುಗದ ಕೃಷ್ಣಾವತಾರದ ಪ್ರಸ್ತಾಪವನ್ನು ಮಾಡುತ್ತಾ ಕಲಿಯುಗದ ಜನರಿಗೆ ತಿಳಿಹೇಳುತ್ತಿದ್ದಾರೆ. ದ್ವಾಪರಯುಗದಲ್ಲಿ ಕೃಷ್ಣಾವತಾರದಿಂದ ನೀನು ರಾಜಾಧಿರಾಜನಾಗಿ ರಾಜ್ಯದ ಪ್ರಜೆಗಳನ್ನು ಪಾಲಿಸುತ್ತ ಇದ್ದೆ. ಆಗ ನೀನು ಪ್ರಜೆಗಳ ಕಣ್ಣೆದುರನಲ್ಲಿಯೇ ಇರುತ್ತಿದ್ದೆ. ಕೃಷ್ಣಾ.. ನೀನು ಕಣ್ಣೆದುರಿನಲ್ಲಿ ಕಾಣುತ್ತಿದ್ದರೂ ಜನ ನಿನ್ನನ್ನು ದೇವರೆಂದು ಅರಿತುಕೊಳ್ಳದೆ ಹೋದರು. ಇದಕ್ಕೆ ಕಾರಣವೆಂದರೆ ಅಜ್ಞಾನ. ಈ ವಾಕ್ಯಗಳಿಗೆ ಪುಷ್ಠಿಯನ್ನು ನೀಡುವಂತೆ ಭಗವದ್ಗೀತೆಯಲ್ಲಿಯೂ ಶ್ರೀಕೃಷ್ಣನು “ಅರ್ಜುನಾ, ಮಾನವ ದೇಹ ಧರಿಸಿರುವುದರಿಂದ ನನ್ನ ದಿವ್ಯತ್ವವನ್ನು ಅರಿಯದೆ ಮೂಢರು ತಿರಸ್ಕರಿಸುತ್ತಾರೆ” ಎಂದಿದ್ದಾನೆ. ದ್ವಾಪರಯುಗದಲ್ಲಿಯೇ ಈ ಕಥೆಯಾದರೆ ಇನ್ನು ಕಲಿಯುಗದಲ್ಲಿ ಹೇಗೆ? ತಾತಯ್ಯನವರು ಹೀಗೆ ಹೇಳಿದ್ದಾರೆ.
ನಿನ್ನ ಕರುಣೆ ಇಲ್ಲದಿದ್ದರೆ..
ಕಲಿಯುಗಂಬುನ ನರುಲು ಕನುಟಕೆಂತಟಿವಾರು
ಕಮಲಾಕ್ಷ ನೀ ಕರುಣ ಕಲುಗಕುನ್ನ
ಮನಸು ಪಕ್ವಮು ಕಾದು ಮಾರ್ಗಂಬು ತೆಲಿಯದು
ನೀ ಪದಧ್ಯಾನಮುನ ನಿಲುವನಿಯದು||
ಕೃಷ್ಣಾ.. ದ್ವಾಪರ ಯುಗದಲ್ಲಿಯೇ ನಿನ್ನನ್ನು ದೇವರೆಂದು ತಿಳಿದುಕೊಳ್ಳಲು ಜನ ವಿಫಲರಾದರು. ಈಗ ಕಲಿಯುಗದಲ್ಲಿ ಜನರು ನಿನ್ನನ್ನು ಪ್ರತ್ಯಕ್ಷ ಮಾಡಿಕೊಂಡು ನಿನ್ನನ್ನು ಕಾಣಲು ಎಷ್ಟು ಮಾತ್ರದವರು? ಏಕೆಂದರೆ ನಿನ್ನ ಕೃಪೆಯಾಗದಿದ್ದರೆ ಮನಸ್ಸು ಪಕ್ವವಾಗುವುದಿಲ್ಲ. ನಿನ್ನ ಸಾಕ್ಷಾತ್ಕಾರದ ಮಾರ್ಗವೂ ಗೊತ್ತಾಗುವುದಿಲ್ಲ. ನಿನ್ನ ಪದಧ್ಯಾನದಲ್ಲಿ ಬುದ್ಧಿ ನಿಲ್ಲಿಸಲು ಈ ಕಲಿಕಾಲವು ಅವಕಾಶ ನೀಡುವುದಿಲ್ಲ ಎನ್ನುತ್ತಿದ್ದಾರೆ ತಾತಯ್ಯನವರು.
ಮನಸ್ಸಿನ ಪಕ್ವತೆಯ ಬಗ್ಗೆ ಬೋಧಿಸುತ್ತಾ, ಈ ಮನಸ್ಸು ಪಕ್ವವಾಗಲು ಕೂಡ ಪರಮಾತ್ಮನ ಕೃಪೆ ಬೇಕು ಎನ್ನುತ್ತಿದ್ದಾರೆ ತಾತಯ್ಯನವರು. “ಮನಸು ಪಕ್ವಮು ಕಾದು” ಈ ವಾಕ್ಯವು ಬಹಳ ಮಹತ್ವಪೂರ್ಣವಾದ, ಅರ್ಥಬದ್ಧವಾದ ವಾಕ್ಯ. ಒಬ್ಬ ಮನುಷ್ಯನನ್ನು ದುರ್ಜನನನ್ನಾಗಿ ಅಥವಾ ಸಜ್ಜನನನ್ನಾಗಿ ಮಾಡುವುದು ಮನಸ್ಸೇ. ಈ ಕಾರಣದಿಂದ ಮನಸ್ಸನ್ನು ತಾತಯ್ಯನವರು ಎಲ್ಲದಕ್ಕೂ ಮೂಲ ಎಂದಿದ್ದಾರೆ. ಕಾಯಿ, ಕಹಿ, ಒಗರು, ಹುಳಿ ಆಗಿರುವ ಮನಸ್ಸು, ಕಮಲಾಕ್ಷನಾದ ಪರಮಾತ್ಮನ ಕರುಣೆಯಿಲ್ಲದೆ ಪಕ್ವವಾಗುವುದಿಲ್ಲ, ದೈವ ಸಾಕ್ಷಾತ್ಕಾರದ ಮಾರ್ಗವೂ ಗೋಚರವಾಗುವುದಿಲ್ಲ ಎನ್ನುತ್ತಿದ್ದಾರೆ ತಾತಯ್ಯನವರು.
ಇದನ್ನೂ ಓದಿ: ತಾತಯ್ಯ ತತ್ವಾಮೃತಂ ಅಂಕಣ: ಭಕ್ತಜನಪೋಷ… ವೈಕುಂಠ ವಿಠ್ಠಲೇಶ…
ಈ ಬೋಧನೆಯಲ್ಲಿ ತಾತಯ್ಯನವರು ಮೂರು ಅಂಶಗಳನ್ನು ಪ್ರಸ್ತಾಪಿಸಿದ್ದಾರೆ. ಆ ಮೂರು ಅಂಶಗಳೆಂದರೆ ಮನಸ್ಸು, ಮಾರ್ಗ, ಧ್ಯಾನ. ಅಂದರೆ ಕಾಯಾ, ವಾಚಾ, ಮನಸಾ ಭಗವಂತನ ಸೇವೆ ಆಗಬೇಕೆಂದು ಅರ್ಥ. ಮನಸ್ಸನ್ನು ಪಕ್ವ ಮಾಡಿಕೋ, ಮಾರ್ಗದ ಅರಿವಾಗುತ್ತದೆ. ಮಾರ್ಗ ಗೋಚರವಾದರೆ ಧ್ಯಾನದಲ್ಲಿ ಏಕಾಗ್ರತೆಯನ್ನು ಸಾಧಿಸಬಹುದು. ಲಕ್ಷ, ಲಕ್ಷ ಜಪ ಮಾಡುವುದಕ್ಕಿಂತ ಒಂದು ಬಾರಿ ಏಕಾಗ್ರತೆಯಿಂದ ಜಪಿಸುವುದು ಒಳಿತಲ್ಲವೇ? ಸಾಯುವ ಕಾಲದಲ್ಲಿ ಅಜಾಮಿಳನು ಪರಮಾತ್ಮನನ್ನು ಕರೆದಿದ್ದು ಒಂದೇ ಬಾರಿ. ಅಲ್ಲಿ ನಾವು ಗಮನಿಸಬೇಕಾದದ್ದು, ಅವನು ಕರೆಯುವಾಗ ಅವನಿಗೆ ಯಾವುದೇ ಅನ್ಯಚಿಂತನೆಗಳು ಇರಲಿಲ್ಲ. ಅವನಲ್ಲಿ ಏಕಾಗ್ರಚಿತ್ತತೆಯು ಜಾಗೃತವಾಗಿತ್ತು. ಈ ಕಲಿಯುಗಕ್ಕೆ ತಾತಯ್ಯನವರು ಹೇಳುತ್ತಿರುವುದು ಇದನ್ನೇ. ಏಕಾಗ್ರಚಿತ್ತದ ಸ್ಮರಣೆಯಿಂದ ಮನಸ್ಸು ಪಕ್ವವಾಗುತ್ತದೆ. ಈ ಚಿಂತನೆ ಬರಬೇಕಾದರೂ ಕಮಲಾಕ್ಷನಾದ ಪರಮಾತ್ಮನ ಕೃಪೆ ಬೇಕು ಎನ್ನುತ್ತಿದ್ದಾರೆ ತಾತಯ್ಯನವರು.
ವಿಷಯಾಸಕ್ತಿಯೇ ಕಾರಣ
ವಿಷಯ ಕೋರಿಕೆಲಲೋನ ಯಿಹಮೆಲ್ಲ ಮುನಿಗಿ
ತೇಲುಚುನ್ನದಿ ನೀ ಮಹಿಮ ತೆಲಿಯರಾದು||
ಲೋಕದ ಜನರು ಸದಾಕಾಲ ವಿಷಯೋಪಭೋಗಗಳ ಬಯಕೆಯಲ್ಲೇ ಮುಳುಗಿ ತೇಲುತ್ತಿದ್ದಾರೆ. ಈ ಕಾರಣದಿಂದ ಪರಮಾತ್ಮ, ನಿನ್ನ ಮಹಿಮೆ ಅವರಿಗೆ ತಿಳಿಯುತ್ತಿಲ್ಲ ಎನ್ನುತ್ತಿದ್ದಾರೆ ತಾತಯ್ಯನವರು. ಆಧ್ಯಾತ್ಮ ಚಿಂತನೆಯ ಆಸಕ್ತಿ, ಭಕ್ತಿತತ್ವದ ಮಾರ್ಗ, ಸ್ಥಿರವಾದ ಮನಸ್ಸಿನಿಂದ ಧ್ಯಾನ ಇವುಗಳು ಭಗವಂತನ ಕೃಪೆಯಿಲ್ಲದೆ ಬರುವುದಿಲ್ಲ. ಭಗವಂತನ ಕೃಪೆಯು ಸಿಗಬೇಕಾದರೆ ಕರ್ಮಗಳು ಸವೆದು ನಿಶ್ಯೇಷವಾಗಿರಬೇಕು.
ಕಲಿಯುಗದಲ್ಲಿ ಮಾನವರಿಗೆ ಬದುಕಲು ಬೇಡವಾದ ವಸ್ತುಗಳು ಸೇರಿದಂತೆ ಪ್ರಪಂಚವೆಲ್ಲವೂ ಅವರ ಮನಸ್ಸಿನಲ್ಲಿ ತುಂಬಿಕೊಂಡಿದ್ದಾರೆ. ಮನಸ್ಸು ಸಂತೆಯಂತಾಗಿದೆ. ಸಂತೆಯಂತಾಗಿರುವ ಮನಸ್ಸನ್ನು ತಿಳಿಗೊಳಿಸಿಕೊಳ್ಳಬೇಕು. ಬೇಡದ ವಸ್ತುಗಳನ್ನು ಕಿತ್ತೊಗೆಯಬೇಕು. ಮುಖ್ಯವಾಗಿ ಮನಸ್ಸು ಪಕ್ವವಾಗಬೇಕಾದರೆ ಭೋಗಲಂಪಟತ್ವ ಹೋಗಬೇಕೆನ್ನುವುದೇ ಕೈವಾರ ತಾತಯ್ಯನವರ ಬೋಧನೆಯ ಸಾರಾಂಶ.
ಇದನ್ನೂ ಓದಿ: ತಾತಯ್ಯ ತತ್ವಾಮೃತಂ: ಉತ್ತಮ ಗುರುಬೋಧೆಯ ಫಲ