Site icon Vistara News

ತಾತಯ್ಯ ತತ್ವಾಮೃತಂ: ಉತ್ತಮ ಗುರುಬೋಧೆಯ ಫಲ

kaivara tatayya

ಹಿಂದಿನ ರಾಜರ ಆಸ್ಥಾನದಲ್ಲಿ ರಾಜಗುರುಗಳು ಇರುತ್ತಿದ್ದರು. ರಾಜನಿಗೆ ಧರ್ಮ, ನ್ಯಾಯ ಮುಂತಾದ ವಿವೇಚನೆಯನ್ನು ಬೋಧಿಸುವಲ್ಲಿ ರಾಜಗುರುಗಳು ನೆರವಾಗುತ್ತಿದ್ದರು. ರಾಜ್ಯವನ್ನು ಪರಿಪಾಲನೆ ಮಾಡುವಲ್ಲಿ ಹಾಗೂ ರಾಜನಿಗೆ ಒದಗುವ ಆಪತ್ತುಗಳನ್ನು ಮೊದಲೇ ಗುರುತಿಸಿ ರಾಜನಿಗೆ ರಾಜಗುರುಗಳು ಸಲಹೆ ಸೂಚನೆಗಳನ್ನು ನೀಡುತ್ತಿದ್ದರು. ಇದರಿಂದ ರಾಜ್ಯವು ಸುಭೀಕ್ಷವಾಗಿರುತ್ತಿತ್ತು. ಉತ್ತಮ ಗುರುಗಳು ಲೋಕಕಲ್ಯಾಣದ ದೃಷ್ಟಿಯನ್ನು ಮಾತ್ರ ನೋಡುತ್ತಾರೆ.

ಕೈವಾರ ತಾತಯ್ಯನವರು ತಮ್ಮ ಈ ಪದ್ಯದಲ್ಲಿ ಉತ್ತಮ ಗುರುಬೋಧೆಯಿಂದ ಯಾವರೀತಿಯ ಫಲಗಳು ದೊರೆಯುತ್ತದೆ ಎಂದು ಬೋಧಿಸುತ್ತಿದ್ದಾರೆ. ಉತ್ತಮ ಗುರುವೆಂದರೆ ಸಾಮಾನ್ಯನಾದ ಗುರುವಲ್ಲ. ಈ ಗುರು ಯೋಗಸಿದ್ಧನಾದ ತಪಸ್ವಿ. ಈ ಗುರು ಆಶಾಮೋಹಗಳನ್ನು ಬಿಟ್ಟಿರುವ ನಿಷ್ಕಾಮಗುರು. ಈ ಗುರು ವೇಷಧಾರಿಯಲ್ಲದ ಬ್ರಹ್ಮಜ್ಞಾನಿ. ಈ ಗುರು ತ್ಯಾಗ, ವೈರಾಗ್ಯದ ಪ್ರತೀಕ. ಸದಾಕಾಲ ಸಮದರ್ಶಿಯಾಗಿ ಆತ್ಮಸಾಮರಸ್ಯವನ್ನು ಸಾಧಿಸುವ ಗುರು ಮಾತ್ರ ಉತ್ತಮ ಗುರುವಾಗಬಲ್ಲ. ಇಂತಹ ಉತ್ತಮ ಗುರುವಿದ್ದರೆ ಗ್ರಾಮದಲ್ಲಿ ಆಗುವ ಪ್ರಯೋಜನಗಳನ್ನು ತಾತಯ್ಯನವರು ಬೋಧಿಸಿದ್ದಾರೆ.

ಉತ್ತಮ ಗುರುಬುದ್ಧಿ ವೂರಿಕಿ ಬಹು ಮೇಲು
ಪೈರುಪಂಟಲು ಲೆಸ್ಸ ಪಂಡುಚುಂಡು
ರಾಜು ತನವಾಡೌನು ರಾಣುವ ಗುರಿಕಾಂಡ್ಲು
ಆಜ್ಞ ಮೀರಕ ವುಂದುರನುದಿನಂಬು

ಉತ್ತಮನಾದ ಗುರುವೊಬ್ಬ ಊರಿನಲ್ಲಿ ಇರಬೇಕು. ಗ್ರಾಮದ ಜನ ಆತನನ್ನು ಗೌರವಿಸಿ ಆತನು ಹೇಳುವ ಬುದ್ಧಿವಾದದ ಮಾತುಗಳನ್ನು ಕಾರ್ಯಗತ ಮಾಡಬೇಕು. ಇದರಿಂದಾಗಿ ಗ್ರಾಮಕ್ಕೆ ಬಹಳ ಒಳ್ಳೆಯದಾಗುತ್ತದೆ. ಗುರುವಿನ ಬೋಧನೆಯನ್ನು ಗ್ರಾಮಸ್ಥರು ಪಾಲಿಸುವುದರಿಂದ ಗ್ರಾಮಸ್ಥರ ಬಿನ್ನಾಭಿಪ್ರಾಯಗಳು ದೂರವಾಗುತ್ತದೆ. ಗುರುಮಾರ್ಗದರ್ಶನದಲ್ಲಿ ನಡೆಯುವುದರಿಂದ ಒಗ್ಗಟ್ಟು ಉಳಿಯುತ್ತದೆ. ಗುರುವಿನ ಮಾರ್ಗದರ್ಶನವಿದ್ದರೆ ತನ್ನಿಷ್ಟ ಬಂದಂತೆ ವರ್ತಿಸುವುದನ್ನು ನಿಯಂತ್ರಿಸಬಹುದು. ಪ್ರತಿಯೊಬ್ಬರೂ ಸ್ವೇಚ್ಛೆಯಾಗಿ ತನ್ನಿಷ್ಟಬಂದಂತೆ ನಡೆದರೆ ಗ್ರಾಮಗಳ ಶಾಂತಿಯು ಭಂಗವಾಗುತ್ತದೆ. ಗುರುಬೋಧನೆಯಿಂದ ಗ್ರಾಮಸ್ಥರಲ್ಲಿ ಸಹೋದರತೆಯ ಭಾವನೆ ಬೆಳೆಯುತ್ತದೆ. ಪರಸ್ಪರರಲ್ಲಿ ಆತ್ಮೀಯತೆ ಕಂಡುಬರುತ್ತದೆ ಎನ್ನುತ್ತಿದ್ದಾರೆ ತಾತಯ್ಯನವರು.

ಊರಿನಲ್ಲಿರುವ ಹೊಲ, ಗದ್ದೆಗಳಲ್ಲಿ ಹಸಿರಿನ ಪೈರುಪಚ್ಚೆಗಳು ರಾರಾಜಿಸುತ್ತದೆ. ಮಳೆ ಬೆಳೆ ಸಮೃದ್ಧಿಯಾಗಿ ಫಲಿಸುತ್ತದೆ. ಎಲ್ಲಿ ಋಷಿಗಳು, ಯೋಗಿಗಳು, ತಪಸ್ವಿಗಳು ಇರುತ್ತಾರೋ ಅಲ್ಲಿ ಮಳೆಬೆಳೆಗಳು ಚೆನ್ನಾಗಿ ಆಗಿ ಪ್ರಜೆಗಳು ಸುಖ ಸಂತೋಷದಿಂದ ಬಾಳುತ್ತಾರೆ. ಪ್ರಜೆಗಳೆಲ್ಲರೂ ಉತ್ತಮ ಜೀವನವನ್ನು ನಡೆಸುವಾಗ ಯಾರಲ್ಲಿಯೂ ಬೇಧಭಾವ ಮೂಡುವುದಿಲ್ಲ. ಉತ್ತಮ ಗುರುಬೋಧನೆಯ ಫಲವಾಗಿ ಇದು ಸಾಧ್ಯವಾಗುತ್ತದೆ ಎನ್ನುತ್ತಿದ್ದಾರೆ ತಾತಯ್ಯನವರು.

ಆಡಳಿತ ಮಾಡುವ ರಾಜನು ಪ್ರಜೆಗಳಿಗೆ ತನ್ನವನಾಗುತ್ತಾನೆ ಎನ್ನುತ್ತಿದ್ದಾರೆ. ಗುರುವಿನ ಬೋಧನೆಯಿಂದ ಆಡಳಿತ ನಡೆಸುವ ರಾಜನು ತನ್ನ ತಪ್ಪುಗಳನ್ನು ತಿದ್ದಿಕೊಳ್ಳುತ್ತಾನೆ. ಪ್ರಜೆಗಳ ಯೋಗಕ್ಷೇಮವನ್ನು ನೋಡಿಕೊಳ್ಳುವ ರಾಜನು ಸದಾಕಾಲ ಪ್ರಜೆಗಳಿಗೆ ಹತ್ತಿರವಾಗುತ್ತಾನೆ. ರಾಜನಷ್ಟೇ ಅಲ್ಲದೆ, ರಾಜ್ಯವು ಶತ್ರುಗಳ ಪಾಲಾಗದಂತೆ ರಕ್ಷಿಸುವ ರಕ್ಷಣಾ ವಿಭಾಗದ ಸೈನ್ಯ ಹಾಗೂ ರಾಜ್ಯದ ಆಡಳಿತವನ್ನು ನೋಡಿಕೊಳ್ಳುವ ಅಧಿಕಾರಿ ಹಾಗೂ ಸಿಬ್ಬಂದಿಗಳು ಅನುದಿನವೂ ಆಜ್ಞೆಯನ್ನು ಮೀರದೆ ಕರ್ತವ್ಯ ನಿರತರಾಗಿರುತ್ತಾರೆ ಎನ್ನುತ್ತಿದ್ದಾರೆ. ರಾಜನು ತನ್ನವನೆಂಬ ಭರವಸೆ ಜನಕ್ಕೆ ಮೂಡಬೇಕಾದರೆ ಮತ್ತು ಅಧಿಕಾರಿಗಳು ರಾಜಾಜ್ಞೆಯನ್ನು ಧಿಕ್ಕರಿಸಿ ಸ್ವಚ್ಚಂದವಾಗಿ ದುಷ್ಟತನಕ್ಕೆ ಕೈ ಹಾಕದೆ, ಅಂದರೆ ಆಜ್ಞೆ ಮೀರದೆ ಇರಬೇಕಾದರೆ ಉತ್ತಮ ಗುರುವಿನ ಬೋಧನೆ ಬೇಕೆಂದು ತಾತಯ್ಯನವರು ಬೋಧಿಸುತ್ತಿದ್ದಾರೆ. ರಾಜನ ಹಾಗೂ ರಾಜ್ಯದ ಸೌಖ್ಯವು ಉತ್ತಮ ಗುರುವಿನ ಮಾರ್ಗದರ್ಶನದಿಂದ ಮಾತ್ರ ಸಾಧ್ಯವಾಗುತ್ತದೆ.

ವ್ಯಾಧಿ, ಚೋರಬಾಧೆ ಇಲ್ಲ

ಉತ್ತಮ ಗುರುಬೋಧೆಯಿರುವ ರಾಜ್ಯದಲ್ಲಿ ಚೋರಬಾಧೆಗಳಿಲ್ಲದೆ ಪ್ರಜೆಗಳು ಹರ್ಷ ಸೌಖ್ಯಗಳನ್ನು ಅನುಭವಿಸುತ್ತಾರೆ ಎನ್ನುತ್ತಿದ್ದಾರೆ ತಾತಯ್ಯನವರು.

ಚೋರಬಾಧಲು ಲೇಕ ಚೆಲಗುಚುಂದುರು ಪ್ರಜಲು
ವಾದುಲಾಡುವಾರು ವೊಕರು ಲೇರು
ವ್ಯಾಧಿ ದುರ್ದೋಷಮುಲ್ ದು:ಖದುರ್ಭೀಕ್ಷಮುಲ್
ವುಂಡಲೇಕ ತ್ಸನುನು ವೂರು ವಿಡಚಿ||

ಗುರುಬೋಧನೆಯಿಂದ ಪ್ರಜೆಗಳೆಲ್ಲರೂ ಸಂತೃಪ್ತರಾಗಿರುತ್ತಾರೆ. ಎಲ್ಲರೂ ತೃಪ್ತರಾಗಿರುವುದರಿಂದ ಅಲ್ಲಿ ಕಳ್ಳತನ ಮಾಡುವ ಪ್ರಸಂಗವೇ ಬರುವುದಿಲ್ಲ. ಪ್ರಜೆಗಳೆಲ್ಲರೂ ಕಳ್ಳಕಾಕರ ಭಯವಿಲ್ಲದೆ ನಿರ್ಭಯವಾಗಿ ಇರುತ್ತಾರೆ. ಕೇವಲ ನಿರ್ಭಯವಾಗಿಯಲ್ಲ, ಸಂತೋಷದಿಂದ ಪ್ರಕಾಶಮಾನವಾಗಿರುತ್ತಾರೆ. ಅಸಂತುಷ್ಟಿಯಿಂದ ಜಗಳವಾಡುವವರು ಒಬ್ಬರಾದರೂ ಕಂಡುಬರುವುದಿಲ್ಲ ಎಂದಿದ್ದಾರೆ. ಉತ್ತಮವಾದ ಗುರುಬೋಧೆಯನ್ನು ಕೇಳುವ ಪ್ರಜೆಗಳಲ್ಲಿ ಯಾವುದೇ ವೈಮನಸ್ಯವಿರುವುದಿಲ್ಲ. ಸಂತೃಪ್ತರಾದ ಪ್ರಜೆಗಳು ಮತ್ತೊಬ್ಬರಲ್ಲಿ ದೋಷಗಳನ್ನು ಹುಡುಕುವುದಾಗಲಿ, ದೋಷಾರೋಪಣೆ ಮಾಡುವುದಾಗಲಿ ಮಾಡುವುದಿಲ್ಲ. ಗ್ರಾಮದಲ್ಲಿರುವ ಗ್ರಾಮಸ್ಥರಲ್ಲಿ ರೋಗರುಜಿನಗಳಾಗಲಿ, ದುರ್ದೋಷಗಳಾಗಲಿ ಕಂಡುಬರುವುದಿಲ್ಲ. ದು:ಖ ಮತ್ತು ದುರ್ಭೀಕ್ಷಗಳು ಉಳಿಗಾಲವಿಲ್ಲದೆ ಗ್ರಾಮವನ್ನು ಬಿಟ್ಟು ತೊಲಗಿ ಹೋಗುತ್ತದೆ. ಇದೆಲ್ಲವೂ ಉತ್ತಮ ಗುರುಬೋಧೆಯ ಪರಿಣಾಮ ಎನ್ನುತ್ತಿದ್ದಾರೆ ತಾತಯ್ಯನವರು.

ಗುರು ಭಗವಂತನಿಗೆ ಸಮ

ಉತ್ತಮ ಗುರುವಿನ ಬೋಧನೆಯ ಬುದ್ಧಿಮಾತುಗಳು ಇಹ-ಪರಕ್ಕೆ ಸೌಖ್ಯವನ್ನು ನೀಡುವಂತಹುದು. ಈ ಲೋಕದ ಬಾಳುವೆಗೂ, ಪರಲೋಕದ ಸದ್ಗತಿಗೂ ಉತ್ತಮ ಫಲಗಳನ್ನೇ ಕೊಡುತ್ತದೆ. ಆದರೆ ಬುದ್ಧಿಹೇಳುವ ಗುರು ಮಾತ್ರ ನಿಷ್ಕಾಮಕರ್ಮಿಯಾಗಿರಬೇಕು, ಚಂಚಲಚಿತ್ತನಾಗಿರದೇ ಭದ್ರ ಬುದ್ಧಿಯವರಾಗಿರಬೇಕು ಎಂದು ತಾತಯ್ಯನವರು ಹೇಳುತ್ತಿದ್ದಾರೆ.

ಬಹುಳಮೆನ್ನಟಿಕಿ ಲೇನಿ ಭದ್ರಮೈನ
ಬುದ್ಧಿ ಚೆಪ್ಪಿನ ಗುರುಡು ಸದ್ಗುರುನಿ ಸಮುಡು||

gurukula Shikshana

ಯಾವುದೇ ಅನುಮಾನ ಸಂದೇಹಗಳಿಲ್ಲದೆ, ಏಕಾಗ್ರಚಿತ್ತವಾಗಿ ಸುಭದ್ರವಾದ ಬುದ್ಧಿ ಹೇಳುವ ಗುರು ಸದ್ಗುರುವಾದ ಭಗವಂತನಿಗೆ ಸಮ ಎಂದು ತಾತಯ್ಯನವರು ಬೋಧಿಸುತ್ತಿದ್ದಾರೆ. ಯೋಗಸಿದ್ಧನಾದ ಗುರು ಸಿಕ್ಕುವುದು ದುರ್ಲಭ. ಯೋಗಸಿದ್ಧಿಯನ್ನು ಪಡೆದ ಗುರು ನೆಲೆಸಿರುವ ಸ್ಥಳವೇ ಪರಮಶಾಂತಿಯ ಸ್ಥಳ. ಅಂತಹ ಸದ್ಗುರುಗಳನ್ನು ಪಡೆದ ಶಿಷ್ಯರೇ ಧನ್ಯರು. ದಾರಿ ಗೊತ್ತಿಲ್ಲದೆ ದಟ್ಟವಾದ ಕತ್ತಲೆಯಲ್ಲಿ ದಿಕ್ಕುತಪ್ಪಿ ತಳಮಳಿಸುತ್ತಿರುವ ಶಿಷ್ಯನಿಗೆ ಗುರುವೇ ದಿಕ್ಕು. ಅಂತಹ ಗುರುವನ್ನು ಪರಬ್ರಹ್ಮನೆಂದು ಭಾವಿಸು ಎನ್ನುತ್ತಾ ಗುರುವನ್ನೇ ದೇವರೆಂದು ಕೊಂಡಾಡಿದ್ದಾರೆ ತಾತಯ್ಯನವರು.

ಉತ್ತಮ ಗುರುವಿನ ಬೋಧನೆಯಿಲ್ಲದಿದ್ದರೆ ಪ್ರಜೆಗಳಲ್ಲಿ ಮಾನಸಿಕ ಶಾಂತಿ ಇಲ್ಲವಾಗುತ್ತದೆ. ಗ್ರಾಮಗಳಲ್ಲಿ ಪರಸ್ಪರ ವಾದ-ವಿವಾದಗಳು, ಜಗಳ, ವೈಮನಸ್ಯ, ದೋಷಾರೋಪಣೆ ಹೆಚ್ಚಾಗುತ್ತದೆ. ಇವುಗಳಿಂದ ಗ್ರಾಮಗಳ ಅಭಿವೃದ್ಧಿಯೂ ಕುಂಠಿತವಾಗುತ್ತದೆ. ಮಳೆ-ಬೆಳೆಗಳು ಸಮೃದ್ಧಿಯಾಗದೆ ಕಳ್ಳಕಾಕರ ಭಯ ಹೆಚ್ಚಾಗುತ್ತದೆ. ವ್ಯಾಧಿಗಳು ಅಧಿಕವಾಗಿ ಕ್ಷಾಮ ತಲೆದೋರುತ್ತದೆ. ಸುಖ, ಶಾಂತಿ,ನೆಮ್ಮದಿ ಮರೀಚಿಕೆಯಾಗುತ್ತದೆ. ಆದ್ದರಿಂದ ಉತ್ತಮ ಗುರುಬೋಧನೆಯನ್ನು ಆಲಿಸಬೇಕು, ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಆಗ ಮಾತ್ರ ಸುಖ,ಶಾಂತಿಯಿಂದ ಸಾರ್ಥಕ ಜೀವನ ನಡೆಸಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: ತಾತಯ್ಯ ತತ್ವಾಮೃತಂ: ಭಕ್ತಿತತ್ವದಿಂದ ಮೋಕ್ಷ ಸಾಧನೆ

Exit mobile version