ತಾತಯ್ಯ ತತ್ವಾಮೃತಂ: ಪರಮಾತ್ಮನನ್ನು ಕೈವಾರ ತಾತಯ್ಯನವರು (Kaivara Tatayya) ಭವರೋಗವೈದ್ಯ ಎಂದಿದ್ದಾರೆ. ಭವರೋಗವೆಂದರೆ ಹುಟ್ಟುಸಾವಿನ ಚಕ್ರದ ಬಂಧನ. ಹುಟ್ಟುಸಾವುಗಳೇ ಜೀವಿಗಳಿಗೆ ಭವರೋಗ. ಅದನ್ನು ಶಾಶ್ವತವಾಗಿ ಹೋಗುವಂತೆ ಗುಣಪಡಿಸಬಲ್ಲ ವೈದ್ಯನು ಪರಮಾತ್ಮನೊಬ್ಬನೇ. ಕರ್ಮಗಳ ಫಲವಾಗಿ ಜೀವಿಯು ಮತ್ತೆ ಮತ್ತೆ ಹುಟ್ಟಿ ಸಾಯಬೇಕಾಗುತ್ತದೆ. ಆದುದರಿಂದಲೇ ಇದು ಭವರೋಗ. ಈ ರೋಗ ವಾಸಿಯಾಗಬೇಕಾದರೆ ಜ್ಞಾನದ ಅಮೃತವೆಂಬ ಔಷಧ ಬೇಕು. ಈ ಔಷಧ ಭಗವಂತನೆಂಬ ವೈದ್ಯನ ಬಳಿ ಮಾತ್ರ ಇದೆ. ಈ ಔಷಧ ಸಿಗಬೇಕಾದರೆ ಮನಸ್ಸನ್ನು ಪಕ್ವಮಾಡಿಕೊಂಡು, ಏಕಾಗ್ರಚಿತ್ತದಿಂದ ಪರಮಾತ್ಮನನ್ನು ಒಲಿಸಿಕೊಳ್ಳಬೇಕು. ಈ ರೀತಿಯಾಗಿ ಒಲಿಸಿಕೊಳ್ಳಲು ಇರುವ ಏಕೈಕ ಸಾಧನವೆಂದರೆ ಶ್ರೀರಾಮನ ಭಜನೆ. ತಾತಯ್ಯನವರು ತಮ್ಮ ಬೋಧನೆಯಲ್ಲಿ ಹೀಗೆ ಹೇಳಿದ್ದಾರೆ.
ಸಕಲಲೋಕಾಧೀಶ
ಸಕಲ ಲೋಕಾಧೀಶ ಸಜ್ಜನ ಪ್ರಿಯಪೋಷ
ತಾರಕಾಚಲವಾಸ ಯಿನಕುಲೇಶ
ಪರಮಾತ್ಮನನ್ನು ತಾತಯ್ಯನವರು ಸಕಲಲೋಕಾಧೀಶ ಎಂದಿದ್ದಾರೆ. ಅನೇಕ ಕೋಟಿ ಬ್ರಹ್ಮಾಂಡಗಳಿಗೆಲ್ಲಾ ಸೃಷ್ಟಿಕರ್ತನಾಗಿ ಪಾಲಿಸುತ್ತಿರುವ ಒಡೆಯ ಪರಮಾತ್ಮ. ಆದುದರಿಂದ ಪರಮಾತ್ಮನು ಸಕಲಲೋಕಾಧೀಶ. ಇಂತಹ ಸಕಲಲೋಕಾಧೀಶನಾಗಿರುವ ಪರಮಾತ್ಮನ ಕೆಲಸವೆಂದರೆ ಸಜ್ಜನರನ್ನು ಕಾಪಾಡುವುದು. ಸಾಧುಸಜ್ಜನರನ್ನು ಉದ್ಧರಿಸುವುದೇ ಪರಮಾತ್ಮನ ಅವತಾರದ ಉದ್ದೇಶ. ಆದ್ದರಿಂದ ಪರಮಾತ್ಮನು ಸಜ್ಜನಪ್ರಿಯಪೋಷ.
ಯೋಗದ ಪ್ರಕಾರ ಸಹಸ್ರಾರ ಪದ್ಮಸ್ಥಾನವಾಗಿರುವ ಮಸ್ತಕರೂಪದ ತಾರಕವೆಂಬ ಬೆಟ್ಟವಾಗಿರುವ ತಾರಕಾಚಲದಲ್ಲಿ ವಾಸಿಸುತ್ತಿರುವವನು ಪರಮಾತ್ಮ. ತಾರಕಾಚಲವಾಸ ಎಂಬ ನಾಮಸ್ಮರಣೆಯಲ್ಲಿ ಯೋಗದ ಸ್ಮರಣೆ ಇದೆ. ತಲೆಯಲ್ಲಿರುವ ಸಹಸ್ರಾರ ಚಕ್ರವನ್ನು ಪರಬ್ರಹ್ಮಸ್ಥಾನವಾಗಿ ಸೂಚಿಸುತ್ತಾ ತಾರಕಾಚಲ ಎಂದಿದ್ದಾರೆ ತಾತಯ್ಯನವರು. ಹೀಗೆ ಪರಮಾತ್ಮನನ್ನು ಸ್ತುತಿಸುತ್ತಾ ಶ್ರೀರಾಮಾವತಾರದಿಂದ ಸೂರ್ಯವಂಶದ ಒಡೆಯನೆಂಬ ಕೀರ್ತಿಯನ್ನು ಪಡೆದ ಶ್ರೀರಾಮನನ್ನು ಕೊಂಡಾಡುತ್ತಾ ಇನಕುಲೇಶನೇ ಎಂದು ಪ್ರಾರ್ಥಿಸುತ್ತಿದ್ದಾರೆ.
ಶುಭಚರಿತ್ರ
ಮೂಲಮಂತ್ರಾಧಾರ ಮೃಗರಾಜ ಅವತಾರ
ಸುರಮುನಿಜನಸ್ತೋತ್ರ ಶುಭಚರಿತ್ರ||
ಮೂಲವಾದ ಮಂತ್ರಕ್ಕೆ ಆಧಾರವಾಗಿರುವವನು ಪರಮಾತ್ಮ. ಮೂಲಮಂತ್ರಾಧಾರ ಎಂಬಲ್ಲಿ ಪ್ರಣವಾಕ್ಷರವೂ, ಏಕಾಕ್ಷರವೂ, ಬ್ರಹ್ಮಾಕ್ಷರವೂ ಆಗಿರುವ ಓಂಕಾರವೇ ಪರಮಾತ್ಮನ ಬ್ರಹ್ಮತತ್ವವೆಂಬ ಅರ್ಥವಿದೆ. ಇದನ್ನೇ ತಾತಯ್ಯನವರು “ಏಕಾಕ್ಷರಮೇ ಬ್ರಹ್ಮಾಕ್ಷರಮೈ ವೆಲಗುಚುನುಂಡುರ ಓರನ್ನಾ” (ಏಕಾಕ್ಷರವೇ ಬ್ರಹ್ಮಾಕ್ಷರವಾಗಿ ಬೆಳಗುತ್ತಿದೆ) ಎಂದಿದ್ದಾರೆ. ಆದುದರಿಂದ ಓಂಕಾರವೇ ಮೂಲಮಂತ್ರ. ಮೂಲಮಂತ್ರಾಧಾರ ಎಂದರೆ ಓಂಕಾರಮಾತ್ರದ ಆಧಾರವಾಗಿರುವವನು ಭಗವಂತ.
ಭಗವಂತನನನ್ನು ಮೃಗರಾಜ ಅವತಾರ ಎಂದು ತಾತಯ್ಯನವರು ಸ್ತುತಿಸಿದ್ದಾರೆ. ಮೃಗರಾಜನೆಂದರೆ ಸಿಂಹ. ಭಕ್ತನಾದ ಪ್ರಹ್ಲಾದನನ್ನು ರಕ್ಷಿಸುವ ಹಾಗೂ ದುಷ್ಟನಾದ ಹಿರಣ್ಯಕಶುಪುವನ್ನು ಶಿಕ್ಷಿಸುವ ಸಲುವಾಗಿ ಪರಮಾತ್ಮನು ನರಸಿಂಹ ರೂಪವಾಗಿ ಜನ್ಮತಾಳುತ್ತಾನೆ. ಭಕ್ತಪ್ರಹ್ಲಾದನನ್ನು ರಕ್ಷಿಸುತ್ತಾನೆ. ಕೈವಾರದ ತಪೋವನದ ಬಳಿ ಇರುವ ಉದ್ಭವ ಯೋಗಾನರಸಿಂಹಸ್ವಾಮಿ ಗುಹೆಯಲ್ಲಿಯೇ ತಾತಯ್ಯನವರು ತಪಸ್ಸಿದ್ಧಿಯನ್ನು ಪಡೆದಿದ್ದು. ಈ ಕಾರಣದಿಂದ ನರಸಿಂಹಸ್ವಾಮಿಯನ್ನು ಭಕ್ತಿಪೂರ್ವಕವಾಗಿ ಸ್ಮರಿಸಿದ್ದಾರೆ.
ಪರಮಾತ್ಮನ ಕುರಿತಾಗಿ ವರ್ಣಿಸುವ ಭಕ್ತಿಗ್ರಂಥಗಳೇ ಶುಭಚರಿತ್ರೆಗಳು. ಶುಭಚರಿತ್ರೆಗಳನ್ನು ಓದುವುದರಿಂದ ಮನಸ್ಸು ಶಾಂತವಾಗುತ್ತದೆ, ಸ್ವಚ್ಛವಾಗುತ್ತದೆ. ಮಾನವನಾಗಿ ಹುಟ್ಟಿದ ಮೇಲೆ ಬದುಕು ಸಾರ್ಥಕವಾಗಬೇಕು. ಭಗವಂತನ ಭಕ್ತಿಯುತವಾದ ಚರಿತ್ರೆಗಳನ್ನು ಓದುವುದರಿಂದ, ಕೇಳುವುದರಿಂದ ಭವರೋಗವು ನಿವಾರಣೆಯಾಗುತ್ತದೆ ಎಂದು ತಾತಯ್ಯನವರು ಪರೋಕ್ಷವಾಗಿ ಹೇಳುತ್ತಿದ್ದಾರೆ.
ಭಾಗವತರುಗಳಿಗೆ ತಿಳಿಯಲಿಲ್ಲ
ಮೀನಕೇತನಜನಕ ಮೀ ಮಹಿಮ ತೆಲಿಯಕ
ಭಾಗವತುಲು ಯೆಂತೊ ಭ್ರಮಸಿನಾರು
ನೇನೆಂತವಾಡನು ನರಪಶುವು ನಾಮೀದ
ನಿಂಡು ಚೂಪುನ ಚೂಡು ನಿರ್ಮಲಾತ್ಮ ||
ಲೋಕದ ಭೋಗಲಾಲಸೆಗಳಲ್ಲಿ ಮುಳುಗಿರುವ ಸಾಮಾನ್ಯ ಅಲ್ಪಜನರಿಗೆ ಭಗವಂತನ ಮಹಿಮೆ ತಿಳಿಯುವುದಿಲ್ಲ. ಸರ್ವಾಂತರ್ಯಾಮಿಯಾದ ಭಗವಂತನ ಚಿಂತನೆ ಅವರಿಗೆ ಬೇಕಿಲ್ಲ. ಆದರೆ ಭಗವಂತನ ಮಹಿಮೆಯನ್ನು ತಿಳಿದುಕೊಳ್ಳಲು ಭಾಗವತೋತ್ತಮರು ಎಷ್ಟೋ ಕಷ್ಟಪಟ್ಟಿದ್ದಾರೆ. ಪರಮಾತ್ಮ ನಿನ್ನ ಭ್ರಮೆಯಲ್ಲಿಯೇ ಭಾಗವತರು ಬದುಕನ್ನು ಸವೆಸಿದ್ದಾರೆ. ಒಮ್ಮೆ ಭಾಗವತೋತ್ತಮರಾದ ನಾರದರು ಶ್ರೀಕೃಷ್ಣನಿಲ್ಲದ ಮನೆ ಬೇಕೆಂದು ಸತ್ಯಭಾಮದಿ ಕೃಷ್ಣಪತ್ನಿಯರ ಮನೆಗಳಿಗೆ ಸುತ್ತಾಡಿದಾಗ ಎಲ್ಲಿ ನೋಡಿದರೂ ಶ್ರೀಕೃಷ್ಣನ ದರ್ಶನವಾಗುತ್ತಿದೆ. ನಾರದನಂತಹ ಭಾಗವತರಿಗೆ ಹರಿಮಹಿಮೆ ತಿಳಿಯಲಿಲ್ಲವೆಂದ ಮೇಲೆ ಅಜ್ಞಾನದ ಪಶುಗಳಾದ ಮಾನವರಿಗೆ ಅರ್ಥವಾಗುತ್ತದೆಯೇ? ನಾನೆಷ್ಟರವನು ನರಪಶು? ಎಂದು ತಮ್ಮ ಮೇಲೆಯೇ ಪಶುತ್ವವನ್ನು ಹೊರಿಸಿಕೊಂಡು, ನರಪಶುವಾದ ನನ್ನ ಮೇಲೆ ಪೂರ್ಣತ್ವದ ದೃಷ್ಠಿಯಿಂದ ನೋಡು ನಿರ್ಮಲಾತ್ಮನಾದ ಪರಮಾತ್ಮನೇ ಎಂದು ತಾತಯ್ಯನವರು ಪ್ರಾರ್ಥಿಸಿದ್ದಾರೆ.
ಇದನ್ನೂ ಓದಿ: ತಾತಯ್ಯ ತತ್ವಾಮೃತಂ: ಭಕ್ತ ಜನರಿಗೆ ಯಾತರ ಭಯವೂ ಇಲ್ಲ
ರಾತ್ರಿಹಗಲು ಸ್ಮರಣೆ
ರಾತ್ರಿ ಪಗಲುನಿ ಶ್ರೀರಾಮ ರಾಮ ಯುನುಚು
ಭಜನ ಜೇಸೆದ ಭವರೋಗವೈದ್ಯ ನಿನ್ನು ..
ತಾತಯ್ಯನವರು ರಾಮನಾದ ಮಹಿಮೆಯನ್ನು ಕೊಂಡಾಡುತ್ತಾ ಭಜನೆಯ ಪ್ರಸ್ತಾಪವನ್ನು ಮಾಡುತ್ತಿದ್ದಾರೆ. ಭವರೋಗವೈದ್ಯನಾದ ಪರಮಾತ್ಮನೇ, ನಿನ್ನ ಸ್ಮರಣೆ ಕೇವಲ ಹಗಲಿನಲ್ಲಿ ಅಷ್ಟೇ ಅಲ್ಲ, ರಾತ್ರಿಯಲ್ಲಿಯೂ ಶ್ರೀರಾಮ ರಾಮ ಎಂದು ನಿನ್ನ ಭಜನೆಯನ್ನು ಮಾಡುತ್ತಿದ್ದೇನೆ ಎನ್ನುತ್ತಿದ್ದಾರೆ ತಾತಯ್ಯನವರು. ರಾಮನಾಮಸ್ಮರಣೆ, ರಾಮ ಭಜನೆಯ ಮಹಿಮೆಯನ್ನು ತಾತಯ್ಯನವರು ತಿಳಿಸುತ್ತಾ ಹಲವಾರು ಕೀರ್ತನೆ, ತತ್ವಬೋಧನೆಯನ್ನು ಮಾಡಿದ್ದಾರೆ. “ಪಾರಮುಲೇನಿ ಅಪಾರ ಪಾಪಮುಲನು ಪರಿಹರಿಂಚು ಪರಮಾತ್ಮುಂಡೀತಡು”(ಅಪಾರವಾದ ಪಾಪಗಳನ್ನು ನಾಶಮಾಡುವ ಶಕ್ತಿ ಪರಮಾತ್ಮನಾದ ಶ್ರೀರಾಮನ ಭಜನೆಗೆ ಇದೆ) ಎಂದಿದ್ದಾರೆ ತಾತಯ್ಯನವರು.
ಕೈವಾರ ತಾತಯ್ಯನವರ ತತ್ವಬೋಧನೆಯನ್ನು ಚಾಚು ತಪ್ಪದೆ ಶ್ರೀಯೋಗಿನಾರೇಯಣ ಮಠವು ಪಾಲಿಸುತ್ತಿದೆ. ನಿರಂತರವಾಗಿ ಅಖಂಡ ಭಜನೆಯ ಕಾರ್ಯಕ್ರಮಗಳನ್ನು ಶ್ರೀಮಠದಲ್ಲಿ ಆಯೋಜಿಸಲಾಗುತ್ತಿದೆ. ನಾದಸುಧಾರಸ, ನಗರ ಸಂಕೀರ್ತನೆ, ಗುರುಪೂಜೆ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಭಗವಂತನ ಭಜನೆಗೆ ಶ್ರೀಮಠವು ಆದ್ಯತೆಯನ್ನು ನೀಡಿದೆ. ಸದಾಕಾಲ ಕೈವಾರ ಕ್ಷೇತ್ರದಲ್ಲಿ ಭಜನಾಭಕ್ತರು ವಿಹರಿಸುತ್ತಿರುತ್ತಾರೆ.
ಭಜನೆಯಿಂದ ಆತ್ಮೋದ್ಧಾರ, ಭಾವಶುದ್ಧಿಯಾಗುತ್ತದೆ. ಭಾವಶುದ್ಧಿಯನ್ನು ಹೊಂದೋಣ, ಭವರೋಗದಿಂದ ಪಾರಾಗೋಣ.
ಇದನ್ನೂ ಓದಿ: ತಾತಯ್ಯ ತತ್ವಾಮೃತಂ: ಕಲಿಯುಗದ ಯುಗಧರ್ಮ