ರಮೇಶ ದೊಡ್ಡಪುರ
ಮೂವತ್ತು ಕಿಲೋಮೀಟರ್ ಪ್ರತಿ ಗಂಟೆ ವೇಗದಲ್ಲಿ ಪ್ಯಾಸೆಂಜರ್ ಗಾಡಿಯಂತೆ ಸಾಗುತ್ತಿದ್ದ ಕರ್ನಾಟಕ ಚುನಾವಣಾ ರೈಲು ಜನವರಿ 11ನೇ ತಾರೀಖಿನಿಂದ ಇದ್ದಕ್ಕಿದ್ದಂತೆ ವಂದೇ ಭಾರತ್ ಎಕ್ಸ್‌ಪ್ರೆಸ್ ವೇಗದಲ್ಲಿ ಓಡಲು ಶುರು ಮಾಡಿದೆ. ಅಂದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಕಾಂಗ್ರೆಸ್‌ನ ʼಪ್ರಜಾಧ್ವನಿʼ ಯಾತ್ರೆ ನಡೆದಾಗಿನಿಂದ ಈ ಬದಲಾವಣೆ.
ರಾಜ್ಯದ ಎಲ್ಲ ಮನೆಗಳಿಗೆ ಪ್ರತಿ ತಿಂಗಳು 200 ಯುನಿಟ್ ಉಚಿತವಾಗಿ ವಿದ್ಯುತ್ ಕೊಡಲಾಗುತ್ತದೆ ಎಂದು ಕಾಂಗ್ರೆಸ್ ಘೋಷಣೆ ಮಾಡಿತು. ಈ ಘೋಷಣೆ ಆಗಿದ್ದೇ ತಡ ರಾಜ್ಯಾದ್ಯಂತ ಚುನಾವಣೆ ಹರಟೆಕಟ್ಟೆಗಳ ಚಟುವಟಿಕೆ ಬಿರುಸಾಗಿದೆ. ಈಗಾಗಲೆ ಜನಸಾಮಾನ್ಯ, ಅದರಲ್ಲೂ ಮಧ್ಯಮ ವರ್ಗ, ತಳ ಮಧ್ಯಮ ವರ್ಗವು ಬೆಲೆ ಏರಿಕೆಯಿಂದ ಬೇಸತ್ತಿದೆ. ಈ ಹಿಂದೆ ಈರುಳ್ಳಿ ರೇಟ್ ಹೆಚ್ಚಾಗಿದ್ದಕ್ಕೆ ದೆಹಲಿ ಸರ್ಕಾರ ಬಿದ್ದ ಉದಾಹರಣೆ ಈ ದೇಶದಲ್ಲಿದೆ. ಆದರೆ ಈಗ ಆ ಪರಿಸ್ಥಿತಿ ಇಲ್ಲ. ಜನರ ಕೈಯಲ್ಲಿ ಒಂದಷ್ಟು ದುಡ್ಡು ಓಡಾಡುತ್ತಾ ಇದೆ. ತೀರಾ ಈರುಳ್ಳಿ, ಆಲೂಗಡ್ಡೆ ರೇಟಿಗೆ ಗೌರ್ನಮೆಂಟನ್ನು ಬೀಳಿಸುವುದಿಲ್ಲ. ಹೆಚ್ಚು ಅಂದರೆ ಒಂದಷ್ಟು ಆಕ್ರೋಶ ವ್ಯಕ್ತಪಡಿಸಬಹುದು ಎನ್ನುವುದು ಇತ್ತೀಚೆಗೆ ಅನೇಕ ಸಲ TOP(Tomato, Onion, Potato) ದರ ಹೆಚ್ಚಳವಾದಾಗ ತಿಳಿದಿದೆ. ಆದರೆ ಜನರ ಆದ್ಯತೆಗಳು ಈಗ ಬದಲಾಗಿವೆ.
ಪೆಟ್ರೋಲ್, ಡೀಸೆಲ್ ದರ ನೂರರ ಗಡಿ ದಾಟಿದೆ. ಈಗಂತೂ ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಎಲ್ಲರ ಮನೆಯಲ್ಲಿ ಕನಿಷ್ಟ ಒಂದು ದ್ವಿಚಕ್ರ ವಾಹನ ಇದೆ. ಸಾಕಷ್ಟು ಜನರು ಕಾರು ಕೊಂಡಿದ್ದಾರೆ. ಪೆಟ್ರೋಲ್, ಡೀಸೆಲ್ ಜತೆಗೆ ಎಲ್‌ಪಿಜಿ ದರ ದಿನನಿತ್ಯ ಕಾಡುತ್ತಿದೆ. 400-500 ರೂ. ರೇಂಜ್‌ನಲ್ಲಿ ಇರುತ್ತಿದ್ದ ದರ ಈಗ ಸಾವಿರದ ಗಡಿ ದಾಟಿದೆ. ಪ್ರಾರಂಭದಲ್ಲಿ ಬ್ಯಾಂಕ್ ಅಕೌಂಟಿಗೆ ಬಂದು ಬೀಳುತ್ತಿದ್ದ ಸಬ್ಸಿಡಿ ಹಣ ಗೊತ್ತೇ ಆಗದಂತೆ ನಿಂತುಹೋಗಿಬಿಟ್ಟಿದೆ. ಈ ವರ್ಗವು ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ ಗೃಹಸಾಲ ಪಡೆದುಕೊಂಡಿದೆ. ತಲೆ ಮೇಲೆ ಒಂದು ಸೂರು ಇರಲಿ ಎಂಬ ಕಾರಣಕ್ಕೆ 15-20 ವರ್ಷದವರೆಗೆ ತೀರಿಸುವಂತೆ ಸಾಲ ಮಾಡಿಕೊಂಡಿದೆ. ಆ ಸಾಲದ ಬಡ್ಡಿ ಮೊತ್ತ 2-3 ವರ್ಷದ ಹಿಂದೆ 6% ಇದ್ದದ್ದು ಈಗ ಬರೊಬ್ಬರಿ 9%ವರೆಗೆ ಆಗಿದೆ. ಈ ಹೊಸ ಸಮಸ್ಯೆಗಳು ಮಧ್ಯಮ ಮತ್ತು ಕೆಳ ಮಧ್ಯಮ ವರ್ಗವನ್ನು ಕಾಡುತ್ತಿವೆ. ಈಗಂತೂ ಎಲೆಕ್ಟ್ರಿಕ್ ಸ್ಟೌ, ಎಲೆಕ್ಟ್ರಿಕ್ ವಾಟರ್ ಹೀಟರ್ ಜತೆಗೆ ಎಲೆಕ್ಟ್ರಿಕ್ ವಾಹನಗಳು ಜನಪ್ರಿಯವಾಗುತ್ತಿವೆ. ಒಂದೆಡೆ ಎಲ್ಪಿಜಿ ದುಬಾರಿ, ಇನ್ನೊಂದೆಡೆ ಪೆಟ್ರೋಲ್ ದುಬಾರಿ, ಮಧ್ಯದಲ್ಲಿ 200 ಯುನಿಟ್ ವಿದ್ಯುತ್ ಫ್ರೀ ಎಂದರೆ ಯಾರಿಗೆ ಖುಷಿ ಆಗುವುದಿಲ್ಲ? ಎಲ್ಪಿಜಿ ಸ್ಟೌ ಬದಲಿಗೆ ಎಲೆಕ್ಟ್ರಿಕ್ ಸ್ಟೌ ಬಳಸಬಹುದು, ಪೆಟ್ರೋಲ್ ಗಾಡಿ ಬದಲಿಗೆ ಎಲೆಕ್ಟ್ರಿಕ್ ಗಾಡಿ. ಹೀಗಾಗಿ ಕಾಂಗ್ರೆಸ್ ಜನವರಿ 11ರಂದು ಹೂಡಿದ ತಂತ್ರ ರಾಜ್ಯಾದ್ಯಂತ ಸಂಚಲನ ಮೂಡಿಸಿದೆ.
ಇದೀಗ ಜನವರಿ 16ರ ಸೋಮವಾರ ಬೆಂಗಳೂರಿನಲ್ಲಿ ನಡೆದ ʼನಾ ನಾಯಕಿʼ ಕಾರ್ಯಕ್ರಮದಲ್ಲಿ, ರಾಜ್ಯದಲ್ಲಿರುವ, ಮಹಿಳೆಯರು ಮುಖ್ಯಸ್ಥರಾಗಿರುವ ಕುಟುಂಬಕ್ಕೆ ಪ್ರತಿ ತಿಂಗಳು 2,000 ರೂ. ನೀಡುವುದಾಗಿ ಎರಡನೇ ಗ್ಯಾರಂಟಿ ಯೋಜನೆಯನ್ನು ಕಾಂಗ್ರೆಸ್ ಘೋಷಣೆ ಮಾಡಿದೆ. ಕಾಂಗ್ರೆಸ್ ನಾಯಕರೇ ಬಣ್ಣಿಸಿದಂತೆ ʼಜೂನಿಯರ್ ಇಂದಿರಾಗಾಂಧಿʼ ಪ್ರಿಯಾಂಕಾ ಗಾಂಧಿ ವಾದ್ರ ಅವರಿಂದಲೇ ಈ ಘೋಷಣೆ ಮಾಡಿಸಿದೆ. 200 ಯುನಿಟ್ ವಿದ್ಯುತ್ ಘೋಷಣೆ ಜತೆಗೆ ಇದೀಗ 2,000 ರೂ. ಪ್ರತಿ ತಿಂಗಳು ನೀಡುವುದಾಗಿ ಹೇಳಿರುವುದು ಕಾಂಗ್ರೆಸ್‌ಗೆ ಮತ್ತಷ್ಟು ಉತ್ಸಾಹ ನೀಡಿದೆ. ಭಾರತದಲ್ಲಿ ಪ್ರತಿಪಕ್ಷದಲ್ಲಿದ್ದುಕೊಂಡು ಚುನಾವಣೆ ಎದುರಿಸುವುದು ಸ್ವಲ್ಪ ಸುಲಭದ ಕೆಲಸ. ಸರ್ಕಾರಕ್ಕೆ ಹೊಡೆಯಲು ಸಾಕಷ್ಟು ಕಲ್ಲುಗಳಿರುತ್ತವೆ. ಇದಕ್ಕೆ ಐತಿಹಾಸಿಕ ಅಂಕಿ ಅಂಶಗಳೂ ಸಾಕ್ಷಿ ಇವೆ.
ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದ ಮೊದಲ 25 ವರ್ಷವನ್ನು ಆಡಳಿತಾರೂಢ ಪಕ್ಷಗಳ ʼಹನಿಮೂನ್ʼ ಅವಧಿ ಎಂದೇ ಕರೆಯಬಹುದು. 1952ರ ಮೊದಲ ಚುನಾವಣೆಯಿಂದ 1977ರವರೆಗೆ ಲೋಕಸಭೆ ಹಾಗೂ ವಿವಿಧ ರಾಜ್ಯಗಳ ಚುನಾವಣೆಯಲ್ಲಿ, ಶೇ.82 ಸರ್ಕಾರಗಳು ಪುನರಾಯ್ಕೆ ಆದವು. ಈ ಅವಧಿಯಲ್ಲಿ ಹೆಚ್ಚಿನ ಬಾರಿ ಕಾಂಗ್ರೆಸ್ ಅಧಿಕಾರ ಹಿಡಿಯುತ್ತಿತ್ತು. ಮತದಾರನೂ, ಪ್ರಜಾಪ್ರಭುತ್ವ ಸರ್ಕಾರದ ಬಗ್ಗೆ ಬಹಳಷ್ಟು ವಿಶ್ವಾಸ ಹೊಂದಿದ್ದ(ಳು).
ರಾಜಕಾರಣಿಗಳೂ, ತಮ್ಮ ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯನ್ನು ಇರಿಸಿಕೊಂಡು ಪುನರಾಯ್ಕೆ ಆಗುತ್ತಲೇ ಇದ್ದರು. ಆದರೆ 1977ರಿಂದ 2002ರವರೆಗಿನ ಎರಡನೇ ಅವಧಿ ಚಪಾತಿ ಮಗುಚಿ ಹಾಕಿದ ಹಾಗೆ ಉಲ್ಟಾ. ಈ ಅವಧಿಯಲ್ಲಿ ಮತದಾರ ಸಂಪೂರ್ಣ ವ್ಯಘ್ರ. ಸರ್ಕಾರವನ್ನು ಬದಲಿ ಮಾಡುವುದೇ ಅವರಿಗೆ ಖುಷಿಯಾಗಿತ್ತು. ಈ ಅವಧಿಯಲ್ಲಿ ದೇಶಾದ್ಯಂತ ಪುನರಾಯ್ಕೆ ಆದ ಸರ್ಕಾರಗಳ ಸಂಖ್ಯೆ ಕೇವಲ 29%. ಅಂದರೆ ಉಳಿದ 71% ಬಾರಿ ಸರ್ಕಾರಗಳು ಬದಲಾಗುತ್ತಲೇ ಇದ್ದವು. ಕೆಲವು ರಾಜ್ಯಗಳಲ್ಲಂತೂ ಇದು 94% ಇತ್ತು. ನಂತರದಲ್ಲಿ ಭಾರತದ ಮತದಾರ ಬುದ್ಧಿವಂತ ಆಗುತ್ತಾ ಸಾಗಿದ.
2002ರಿಂದ 2019ರವರೆಗಿನ ಅವಧಿಯನ್ನು ಫಿಫ್ಟಿ ಫಿಫ್ಟಿ ಅವಧಿ ಎನ್ನಲಾಗುತ್ತದೆ. ಈ ಅವಧಿಯಲ್ಲಿ ದೇಶದಲ್ಲಿ 48% ಸರ್ಕಾರಗಳು ಪುನರಾಯ್ಕೆ ಆದರೆ, 52% ಸರ್ಕಾರಗಳು ಬದಲಾದವು. ಅಂದರೆ ಮತದಾರ ಸುಖಾಸುಮ್ಮನೆ ಒಂದು ಸರ್ಕಾರದ ಪರ ಮತ ಹಾಕುವ ಅಥವಾ ಒಂದು ಸರ್ಕಾರದ ವಿರುದ್ಧ ಮತ ಹಾಕುವ ಜಾಯಮಾನವನ್ನು ಬಿಟ್ಟು, ಆಲೋಚನೆ ಮಾಡುತ್ತಿದ್ದಾನೆ. ತನಗೆ ಇಷ್ಟವಾದರೆ ಸರ್ಕಾರವನ್ನು ಉಳಿಸಿಕೊಳ್ಳುವ, ಇಲ್ಲವಾದರೆ ಬದಲಿಸುವ ನಿರ್ಧಾರ ಆಗುತ್ತಿದೆ.
ಸ್ವತಃ ಪ್ರಧಾನಿ ನರೇಂದ್ರ ಮೋದಿ ತಮ್ಮ ತವರು ರಾಜ್ಯ ಗುಜರಾತನ್ನು ಉಳಿಸಿಕೊಳ್ಳಬೇಕಾದರೆ ಬೆವರು ಹರಿಸಬೇಕಾಗಿದೆ. ಇಷ್ಟು ಪವರ್‌ಫುಲ್ ಪ್ರಧಾನಿ ಇದ್ದಾಗ್ಯೂ, ಅತ್ಯಂತ ದುರ್ಬಲ ಎನ್ನಲಾಗುವ ಕಾಂಗ್ರೆಸ್ ಪಕ್ಷ ಹಿಮಾಚಲ ಪ್ರದೇಶದಲ್ಲಿ ಭರ್ಜರಿ ಜಯಭೇರಿ ಬಾರಿಸುತ್ತದೆ ಎನ್ನುವುದೇ ಇದಕ್ಕೆ ತಾಜಾ ಉದಾಹರಣೆ.
ಫಿಫ್ಟಿ ಫಿಫ್ಟಿ ಜಮಾನಾದ ನಡುವೆಯೂ ಮತದಾರ, ಸ್ವಲ್ಪ ಒಲವನ್ನು ಸರ್ಕಾರ ಬದಲಿಸುವ ಕಡೆಗೇ ಹೊಂದಿದ್ದಾನೆ. ಅಂದರೆ 52% ಒಲವು ಸರ್ಕಾರವನ್ನು ಬದಲಿಸುವ ಕಡೆಗೇ ಇದೆ. ಹಾಗಾಗಿಯೇ ಆಗ ಹೇಳಿದ್ದು, ಚುನಾವಣೆಯಲ್ಲಿ ಪ್ರತಿಪಕ್ಷಗಳಿಗೆ ಸ್ವಲ್ಪ ಹೆಚ್ಚಿನ ಅನುಕೂಲ ಇರುತ್ತದೆ. ಈ ಸಮಯದಲ್ಲಿ ಆಡಳಿತಾರೂಢ ಸರ್ಕಾರ ತನ್ನ ಸಾಧನೆಯನ್ನು ಹೆಚ್ಚೆಚ್ಚು ಜನರೆಡೆಗೆ ಕೊಂಡೊಯ್ಯಬೇಕಾಗುತ್ತದೆ. ಸರ್ಕಾರ ತಮಗೆ ನೀಡುತ್ತಿರುವ ಅನುಕೂಲತೆಗಳ ಹೋಲಿಕೆಯಲ್ಲಿ ಪ್ರತಿಪಕ್ಷಗಳು ಮಾಡುವ ಘೋಷಣೆ ನಗಣ್ಯ ಎನ್ನುವಂತೆ ಜನರ ಮನಸ್ಸಿನಲ್ಲಿ ಭಾವನೆ ಬಿತ್ತಬೇಕಾಗುತ್ತದೆ. ಇದಕ್ಕಾಗಿ ಸರ್ಕಾರಕ್ಕೂ ಅಧಿಕಾರ, ಕಾನೂನು ಸುವ್ಯವಸ್ಥೆ, ಪ್ರಚಾರ ಸಾಮಗ್ರಿ ಜತೆಗೆ ಹಣಕಾಸು ಸೇರಿ ಸಾಕಷ್ಟು ಅನುಕೂಲ ಇರುತ್ತವೆ.
ಆದರೆ ಇಂದು ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿ ಇದ್ಯಾವ ಟೂಲ್‌ಗಳನ್ನೂ ಬಳಸಿಕೊಂಡು ಪ್ರಚಾರ ಮಾಡುತ್ತಿರುವಂತೆ ಕಾಣುತ್ತಿಲ್ಲ. ಹಾಗೆ ಹೇಳಬೇಕೆಂದರೆ ಸಂಘಟನಾತ್ಮಕವಾಗಿ ಕಾಂಗ್ರೆಸ್‌ಗಿಂತ ಬಿಜೆಪಿ ಸದೃಢವಾಗಿದೆ. ಬಹುತೇಕ ಎಲ್ಲ ಬೂತ್ ಕಮಿಟಿ ರಚನೆ ಆಗಿವೆ. ಸುಮಾರು ಒಂದು ಕೋಟಿ ಮನೆಗಳ ಮೇಲೆ ಪಕ್ಷದ ಧ್ವಜ ಕಟ್ಟುವ ಕಾರ್ಯ ನಡೆದಿದೆ. ಅನೇಕ ಮೋರ್ಚಾಗಳಿಗೆ ತಾಲೂಕು ಮಟ್ಟದಲ್ಲಿ ಪದಾಧಿಕಾರಿಗಳ ನೇಮಕ ಆಗಿದೆ. ಪೇಜ್ ಪ್ರಮುಖರ ನೇಮಕವೂ ಭರದಿಂದ ಸಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ, ರಾಜ್ಯ ಬಿಜೆಪಿ ಇತಿಹಾಸದಲ್ಲೆ ಬಹುಶಃ ಅತಿ ಹೆಚ್ಚು ಬಾರಿ ರಾಜ್ಯವನ್ನು ಸುತ್ತಿದ ಅಧ್ಯಕ್ಷರಿದ್ದಾರೆ. ನಳಿನ್ ಕುಮಾರ್ ಕಟೀಲ್ ನಡೆಸಿದ ಸಂಘಟನಾ ಪ್ರವಾಸವನ್ನು ಕಂಡು ಆ ಪಕ್ಷದ ಹಿರಿಯರೇ ಅಚ್ಚರಿಗೊಂಡಿದ್ದಾರೆ. ಇದೆಲ್ಲವೂ ಇದೆ. ಆದರೆ,
ಚುನಾವಣೆಗೆ ಸಂಘಟನೆ ಜತೆಗೆ ಬೇಕಿರುವುದು ನಾಯಕತ್ವ. ಅದೆಲ್ಲಕ್ಕಿಂತ ಮುಖ್ಯವಾಗಿ ಬೇಕಿರುವುದು Narrative. ಅಂದರೆ ಕಥನ. ಇದು ರಾಜಕೀಯ ಶಾಸ್ತ್ರದ ವ್ಯಾಖ್ಯಾನ. ಮತ್ತೊಮ್ಮೆ ಜನರು ಈ ಸರ್ಕಾರವನ್ನು ಆಯ್ಕೆ ಮಾಡಬೇಕಿರುವುದು ಏಕೆ? ಎನ್ನುವುದಕ್ಕೆ ಒಪ್ಪಬಹುದಾದ ಕಥನ ಇರಬೇಕು. ಅದು ಸತ್ಯವೇ ಇರಬಹುದು, ಕೆಲವೊಮ್ಮೆ ಹೆಣೆದ ಕಥೆಯೂ ಇರಬಹುದು. ಈ ಸರ್ಕಾರದಲ್ಲಿ ಜಾರಿ ಮಾಡಿದ ಒಂದು ಅತಿ ದೊಡ್ಡ ಯೋಜನೆಯೂ ಆಗಬಹುದು, ಪ್ರತಿಪಕ್ಷವು ಸರ್ಕಾರ ನಡೆಸುವ ಸಾಮರ್ಥ್ಯ ಹೊಂದಿಲ್ಲ ಎನ್ನುವುದನ್ನು ನಿರೂಪಿಸುವುದೂ ಇರಬಹುದು. 2018ರ ವೇಳೆಯಲ್ಲಿ ಬಿಜೆಪಿಯ ಬಳಿ ಹಾಗೂ ಆಡಳಿತದಲ್ಲಿದ್ದ ಕಾಂಗ್ರೆಸ್ ಸರ್ಕಾರದ ಬಳಿಯೂ ಕಥನ ಇತ್ತು. ಸಿದ್ದರಾಮಯ್ಯ ಸರ್ಕಾರ ತನ್ನ ಅನ್ನ ಭಾಗ್ಯ, ಇಂದಿರಾ ಕ್ಯಾಂಟೀನ್‌ನಂತಹ ಯೋಜನೆಗಳನ್ನು ಹಿಡಿದು ಹೊರಟಿತ್ತು. ಇತ್ತ ಬಿಜೆಪಿಯು ಡಬಲ್ ಇಂಜಿನ್ ಸರ್ಕಾರದ ಲಾಭ, ಸಿದ್ದರಾಮಯ್ಯ ಸರ್ಕಾರದ ಹಿಂದು ವಿರೋಧಿ ನಡೆವನ್ನು ಮುಂದಾಗಿಸಿ ಕಥನವನ್ನು ಹೆಣೆದಿತ್ತು. ಆದರೆ ಈ ಬಾರಿ ಪ್ರತಿಪಕ್ಷ ಕಾಂಗ್ರೆಸ್‌ಗೆ ಕಥನವಿದೆ. ಸರ್ಕಾರದ ವಿರುದ್ಧ 40% ಭ್ರಷ್ಟಾಚಾರದ ಒಂದು ಕಥನವನ್ನು ಕಾಂಗ್ರೆಸ್ ಯಶಸ್ವಿಯಾಗಿ ರೂಪಿಸಿದೆ. ಆದರೆ ಸರ್ಕಾರದ ಬಳಿ ಇದು ಇಲ್ಲ. ಡಬಲ್ ಇಂಜಿನ್ ಸರ್ಕಾರ ಎನ್ನುವ ಘೋಷಣೆ ಅಮೂರ್ತವಾಗಿದೆ.
ಇದೆಲ್ಲದರ ನಡುವೆ ಬಿಜೆಪಿ ಸರ್ಕಾರ ಬಹುಮುಖ್ಯವಾದ ನಿರ್ಧಾರ ಕೈಗೊಂಡಿದೆ. ಎಸ್‌ಸಿಎಸ್‌ಟಿ ಮೀಸಲು ಪ್ರಮಾಣವನ್ನು ಹೆಚ್ಚಳ ಮಾಡಿದೆ. ಎಸ್‌ಸಿ ಮೀಸಲನ್ನು ಶೇ.13ರಿಂದ ಶೇ.17ಕ್ಕೆ, ಎಸ್‌ಟಿ ಮೀಸಲನ್ನು ಶೇ.3ರಿಂದ ಶೇ.7ಕ್ಕೆ ಏರಿಸಿದೆ. ಈಗಾಗಲೆ ಅಧಿಸೂಚನೆಯೂ ಆಗಿದೆ. ಇದೊಂದು ನಿರ್ಧಾರದಿಂದ ತನಗೆ ಬಹುದೊಡ್ಡ ಲಾಭ ಆಗುತ್ತದೆ ಎಂದು ಬಿಜೆಪಿ ಹಾಗೂ ಸರ್ಕಾರದ ಅನೇಕರು ಹೇಳುತ್ತಿದ್ದಾರೆ. ಇದು ದೊಡ್ಡ ನಿರ್ಧಾರವೇ ಆದರೂ, ಅದರ ಲಾಭ ತಾನೇ ತಾನಾಗಿ ದೊರಕುವುದಿಲ್ಲ. ಈ ಘೋಷಣೆಯನ್ನು ಮತಗಳನ್ನಾಗಿ ಪರಿವರ್ತನೆ ಮಾಡಲು ಬಿಜೆಪಿಯಲ್ಲಿ ಆ ಸಮುದಾಯಗಳ, ವಿಶೇಷವಾಗಿ ಎಸ್‌ಸಿ ಸಮುದಾಯದ ʼನಾಯಕರುʼ ಸಾಕಷ್ಟು ಸಂಖ್ಯೆಯಲ್ಲಿ ಇಲ್ಲ. ಎಸ್‌ಟಿ ಸಮುದಾಯದಲ್ಲಿ ಕೆಲವು ನಾಯಕರಿದ್ದಾರೆ. ಆದರೆ ಎಸ್‌ಸಿ ಸಮುದಾಯದಲ್ಲಿ ಈ ಅನುಕೂಲ ಇಲ್ಲದಿರುವ ಕಾರಣಕ್ಕೆ ಮೀಸಲಾತಿ ಹೆಚ್ಚಳವನ್ನು ಪಡೆಯುವ ಗಂಭೀರ ಪ್ರಯತ್ನಗಳೂ ಕಾಣುತ್ತಿಲ್ಲ.
ಬಿಜೆಪಿಯು ತನ್ನ ಕೋರ್ ಏರಿಯಾ, ಹಿಂದುತ್ವದಲ್ಲೂ ಆಕ್ರಮಣಕಾರಿಯಾಗಿಲ್ಲ. ಹಿಜಾಬ್-ಹಲಾಲ್-ಮತಾಂತರ ವಿಚಾರಗಳು ತಣ್ಣಗಾಗಿವೆ. ದೇವಸ್ಥಾನಗಳನ್ನು ಸರ್ಕಾರದ ಹಿಡಿತದಿಂದ ಮುಕ್ತಗೊಳಿಸುವುದಾಗಿ ಮಾಡಿದ ಘೋಷಣೆ ವರ್ಷ ಕಳೆದರೂ ಈಡೇರಿಲ್ಲ. ಹಲಾಲ್ ಸರ್ಟಿಫಿಕೇಟ್ ನೀಡುವುದನ್ನು ನಿಷೇಧಿಸುವ ಕುರಿತು ಇತ್ತೀಚೆಗೆ ವಿಧಾನ ಪರಿಷತ್ನಲ್ಲಿ ಮಂಡನೆಯಾದ ಖಾಸಗಿ ವಿಧೇಯಕಕ್ಕೆ ಸ್ವಪಕ್ಷದಲ್ಲೇ ಬೆಂಬಲ ಸಿಕ್ಕಿಲ್ಲ. ದೇಶದಲ್ಲಿ ಇಡಬ್ಲ್ಯುಎಸ್ ಜಾರಿಯಾಗಿದ್ದರೂ ಕರ್ನಾಟಕದಲ್ಲಿ ಮಾತ್ರ ಮಾಡಿಲ್ಲ ಎಂದು ಬಿಜೆಪಿಯ ಸಾಂಪ್ರದಾಯಿಕ ಮತದಾರರಲ್ಲಿ ತಣ್ಣನೆಯ ಆಕ್ರೋಶ ಇದೆ. ಇದೇ ವೇಳೆ ಪಂಚಮಸಾಲಿ-ಒಕ್ಕಲಿಗ ಸಮುದಾಯದ ಮೀಸಲಾತಿಯನ್ನು ಇದೇ ಇಡಬ್ಲ್ಯುಎಸ್‌ನಿಂದ ಹಂಚಿ ನೀಡುವ ನಿರ್ಧಾರ ಮಾಡಿದೆ. ಇದರಿಂದಾಗ ಅತ್ತ ಇಡಬ್ಲ್ಯುಎಸ್ ವರ್ಗದಲ್ಲಿಯೂ ಅಸಮಾಧಾನವವಿದೆ, ಇತ್ತ ಪಂಚಮಸಾಲಿ ಸಮುದಾಯವೂ ಮುನಿಸಿಕೊಂಡಿದೆ.
ಸಂಘಟನೆಯಾಗಿ ಬಿಜೆಪಿ ಗಟ್ಟಿಯಾಗಿದೆಯಾದರೂ, ದಿನೇದಿನೇ ಬಿಜೆಪಿ ವಲಯದಲ್ಲಿ ಗೊಂದಲಗಳು ಹೆಚ್ಚಾಗುತ್ತಿವೆ. ಈಗ ಬಿಜೆಪಿಯೆದುರು ಉಳಿದಿರುವ ಸುವರ್ಣಾವಕಾಶ ಎಂದರೆ ಬಜೆಟ್. ಫೆಬ್ರವರಿ 1ರಂದು ಕೇಂದ್ರ ಸರ್ಕಾರ ಬಜೆಟ್ ಮಂಡಿಸುತ್ತದೆ. ಅಂದಾಜು ಫೆಬ್ರವರಿ 17ರಂದು ರಾಜ್ಯ ಬಜೆಟ್ ಮಂಡನೆ ಆಗಬಹುದು. ಎರಡೂ ಬಜೆಟ್‌ಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡರೆ ಬಹುಶಃ ಬಿಜೆಪಿಯೂ ಚುನಾವಣೆಗೆ ಕಥನವನ್ನು ರೂಪಿಸಿಕೊಳ್ಳಲು ಅನುಕೂಲ ಆಗಬಹುದು.
ಸದ್ಯಕ್ಕೆ ಕಾಂಗ್ರೆಸ್ ಹವಾ ಇರುವುದಂತೂ ನಿಜ. ಆದರೆ ಇಷ್ಟೇ ಅಲ್ಲ. ಈಗ ಒಂದೆರಡು ಘೋಷಣೆಗಳ ಕಾರಣಕ್ಕೆ ಲೈಮ್ ಲೈಟ್‌ನಲ್ಲಿರುವ ಕಾಂಗ್ರೆಸ್‌ಗೂ ಮುಂದಿನ ಮಾರ್ಗ ಸಲೀಸಾಲಗಿಲ್ಲ. ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರ ಈಗಿನ ʼಹೊಂದಾಣಿಕೆʼಯ ಲಿಟ್ಮಸ್ ಟೆಸ್ಟ್ ಆಗುವುದು ಫೆಬ್ರವರಿ ಮೊದಲ ವಾರದಲ್ಲಿ. ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಘೋಷಣೆ ಆದಾಗ. ಆ ಸಮಯದಲ್ಲಿ ಒಂದು ಮಹಾಸ್ಫೋಟ ಆಗುವುದು ಖಂಡಿತ. ಆ ಮಹಾ ಸ್ಫೋಟವು ಬಿಗ್ ಬ್ಯಾಂಗ್ ರೀತಿಯಲ್ಲಿ ನಡೆದು ಕಾಂಗ್ರೆಸ್‌ಗೆ ಅಧಿಕಾರದ ಹೊಸ ಜಗತ್ತನ್ನು ಸೃಷ್ಟಿಸಬಹುದು. ಅಥವಾ ಹಿರೋಶಿಮಾ ನಾಗಸಾಕಿ ಮೇಲೆ ಎರಗಿದ ಅಣುಬಾಂಬ್ ರೀತಿಯಲ್ಲಿ ನಷ್ಟವನ್ನೇ ತಂದುಕೊಡಬಹುದು, ಗೊತ್ತಿಲ್ಲ. ಇಬ್ಬರೂ ನಾಯಕರನ್ನು ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಹೇಗೆ ನಿಭಾಯಿಸುತ್ತಾರೆ ಎನ್ನುವ ಕುಶಲತೆಯ ಮೇಲೆ ನಿಂತಿದೆ.
ಹಾಗೆಯೇ, ಈಗಿರುವ ನರೇಂದ್ರ ಮೋದಿ-ಅಮಿತ್ ಶಾ ನೇತೃತ್ವದ ಬಲಿಷ್ಠ ಬಿಜೆಪಿ ಅಧಿಕಾರ ಕೇಂದ್ರವು ಅಷ್ಟು ಸುಲಭವಾಗಿ ಚುನಾವಣೆಯನ್ನು ಕೈಚೆಲ್ಲುವುದಿಲ್ಲ. ಇತಿಹಾಸ ನೋಡಿದಾಗ ಇದು ಗೊತ್ತಾಗುತ್ತದೆ. ಕಡೆ ಕ್ಷಣದವರೆಗೂ ಎದುರಾಳಿಯನ್ನು ಕಾಡುತ್ತಲೇ ಜಯದ ಕಡೆಗೆ ಸಾಗುತ್ತದೆ ಈ ತಂಡ. ಇನ್ನೂ ಬಿಜೆಪಿ ನಾಯಕರ ಬತ್ತಳಿಕೆಯಲ್ಲಿ ಯಾವ್ಯಾವ ಅಸ್ತ್ರಗಳು ಅಡಗಿವೆ ಎನ್ನುವುದು ಒಂದೊಂದಾಗಿ ಬಿಚ್ಚಿಕೊಳ್ಳುತ್ತಲೇ ಸಾಗುತ್ತವೆ ಎಂಬುದರಲ್ಲಿ ಅನುಮಾನವಿಲ್ಲ.