Site icon Vistara News

Karnataka Budget: ಸರ್ಕಾರ ಮಾಸಿಕ 1.75 ಲಕ್ಷ ಮೆಟ್ರಿಕ್‌ ಟನ್‌ ಅಕ್ಕಿ ಉಳಿಸಬಹುದು; ಆದರೆ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?

karnataka budget disparities in poverty index and multi dimensional poverty index

ಬಾಬು ಎಂ.ಎಲ್‌, ಆರ್ಥಿಕ ತಜ್ಞರು
2021ರಲ್ಲಿ ಅಂದಿನ ಬಿಜೆಪಿ ಸರ್ಕಾರದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾಗಿದ್ದ ಉಮೇಶ್‌ ಕತ್ತಿ ಅವರು ನೀಡಿದ್ದ ಒಂದು ಹೇಳಿಕೆ ವಿವಾದ ಎಬ್ಬಿಸಿತ್ತು. ಯಾರ‍್ಯಾರು ದ್ವಿಚಕ್ರ ವಾಹನ, ಟಿವಿ, ರೆಫ್ರಿಜರೇಟರ್‌, ಐದು ಎಕರೆಗಿಂತ ಹೆಚ್ಚಿನ ಭೂಮಿ ಹೊಂದಿದ್ದಾರೆಯೋ ಅವರೆಲ್ಲರೂ ಬಿಪಿಎಲ್‌ ಕಾರ್ಡ್‌ ಹಿಂದಿರುಗಿಸಿ ಎಂದು ಕತ್ತಿ ಹೇಳಿದರು. ಇದಕ್ಕೆ ಮೊದಲನೆಯದಾಗಿ ಆಡಳಿತಾರೂಢ ಬಿಜೆಪಿ ಪಕ್ಷದಿಂದಲೇ ವಿರೋಧ ವ್ಯಕ್ತವಾಯಿತು.

ಶಿಕ್ಷಣ ಸಚಿವರಾಗಿದ್ದ ಎಸ್‌. ಸುರೇಶ್‌ ಕುಮಾರ್‌ ಅವರು ಇದನ್ನು ʼಅಮಾನವೀಯʼ ಎಂದರು. ಟಿವಿ, ರೆಫ್ರಿಜರೇಟರ್‌ ಹೊಂದಿರುವುದು ಬಿಪಿಎಲ್‌ ಕಾರ್ಡ್‌ ಕಿತ್ತುಕೊಳ್ಳಲು ಮಾನದಂಡ ಆಗುವುದಿಲ್ಲ. ಇದು ಅಮಾನವೀಯವಾದದ್ದು. ಅತ್ಯಂತ ಕಡುಬಡವನೂ ಇಂತಹ ವಸ್ತುಗಳನ್ನು ತನ್ನಲ್ಲಿ ಹೊಂದಿರುತ್ತಾನೆ ಎಂದು ಸುರೇಶ್‌ ಕುಮಾರ್‌ ಕುಮಾರ್‌ ಅವರು ಹೇಳಿದರು. ಪ್ರತಿಪಕ್ಷ ಕಾಂಗ್ರೆಸ್‌ ಸಹ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿತು. ಕಾಂಗ್ರೆಸ್‌ ಸರ್ಕಾರ ಇದ್ದಾಗ ಬಡವರ ಪರವಾಗಿತ್ತು. ಬಿಜೆಪಿಯು ಬಡವರಿಗೆ ಸೌಲಭ್ಯ ಸಿಗದಂತೆ ವಂಚಿಸಲು ಮುಂದಾಗಿದೆ ಎಂದಿತು. ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾಗಿದ್ದ ಯು.ಟಿ. ಖಾದರ್‌ ಅವರು ಪ್ರತಿಕ್ರಿಯಿಸಿ, “ನಾನು ಸಚಿವನಾಗಿದ್ದಾಗಲೂ ಈ ವಿಚಾರ ಚರ್ಚೆಗೆ ಬಂದಿತ್ತು. ಆದರೆ ಬಿಪಿಎಲ್‌ ಪಡೆಯಲು ಮಾನದಂಡಗಳಲ್ಲಿ ಸಡಿಲ ಮಾಡದೇ ಇರಲು ನಾನು ನಿರ್ಧಾರ ಮಾಡಿದ್ದೆʼ ಎಂದರು. ಅಲ್ಲಿಗೆ, ಕರ್ನಾಟಕದ ಮಟ್ಟಿಗೆ ಟಿವಿ, ದ್ವಿಚಕ್ರ ವಾಹನ, ರೆಫ್ರಿಜರೇಟರ್‌, ಐದು ಎಕರೆ ಭೂಮಿ ಎನ್ನುವುದು ಬಡತನ ರೇಖೆಗಿಂತ ಕೆಳಗೆ ಇದೆ ಎಂದಾಯಿತು.

ಕರ್ನಾಟಕದ 63% ನಾಗರಿಕರು ಬಡವರು ಎಂದರೆ ನಂಬುವುದು ಹೇಗೆ?
ಕರ್ನಾಟಕದ ಈಗಿನ ಜನಸಂಖ್ಯೆ ಅಂದಾಜು 6.95 ಕೋಟಿ. ಈಗ ಕರ್ನಾಟಕದಲ್ಲಿ ಬಿಪಿಎಲ್‌ ಕಾರ್ಡ್‌ ಸಂಖ್ಯೆ 1,17,33,536 ಹಾಗೂ ಅಂತ್ಯೋದಯ ಅನ್ನ ಯೋಜನೆಯ ಕಾರ್ಡ್‌ ಸಂಖ್ಯೆ 10,90,499. ಇದರಲ್ಲಿ ಬಿಪಿಎಲ್‌ ಕಾರ್ಡ್‌ಗಳಿಂದ ಒಟ್ಟು 3,97,37,399 ಹಾಗೂ ಅಂತ್ಯೋದಯ ಅನ್ನ ಯೋಜನೆ (ಕೇಂದ್ರ ಸರ್ಕಾರವು ಎರಡು ಹೊತ್ತು ಊಟಕ್ಕೆ ಗತಿಯಿಲ್ಲದ ಅತ್ಯಂತ ಕಡು ಬಡವರಿಗಾಗಿ ಅಂತ್ಯೋದಯ ಅನ್ನ ಯೋಜನೆಯನ್ನು ಜಾರಿಗೆ ತಂದಿದ್ದು, ರಾಜ್ಯದಲ್ಲಿ ಸದರಿ ಯೋಜನೆಯನ್ನು ಆಗಸ್ಟ್ 2002 ರಿಂದ ಜಾರಿಗೊಳಿಸಲಾಗಿದೆ. ) ಕಾರ್ಡ್‌ಗಳಿಂದ ಒಟ್ಟು 44,81,556 ಸದಸ್ಯರಿದ್ದಾರೆ. ಅಂದರೆ ಎರಡೂ ಕಾರ್ಡ್‌ ಸೇರಿಸಿ ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವ 4,42,18,955 ಜನರಿದ್ದಾರೆ. ರಾಜ್ಯದ 6.9 ಕೋಟಿ ಜನಸಂಖ್ಯೆಗೆ ಹೋಲಿಕೆ ಮಾಡಿದರೆ ಇದು 63.5% ಆಗುತ್ತದೆ. ಅಂದರೆ ಕರ್ನಾಟಕದ ಮೂರನೇ ಎರಡು ಭಾಗವು ಬಡತನ ರೇಖೆಗಿಂತ ಕೆಳಗೆ ಇದೆ. ಕೇವಲ ಮೂರನೇ ಒಂದು ಭಾಗವನ್ನಷ್ಟೆ ಬಡತನ ರೇಖೆಗಿಂತ ಮೇಲೆತ್ತಲು ಇಲ್ಲಿವರೆಗೆ ಸಾಧ್ಯವಾಗಿದೆ ಎಂದಾಯಿತು.

ಬಿಪಿಎಲ್‌ ಕಾರ್ಡ್‌ ಪಡೆಯಲು ಅರ್ಹತೆ

ಸಂಶೋಧನೆ ಏನು ಹೇಳುತ್ತದೆ?
ಬಡತನವನ್ನು ಅಳೆಯಲು ಕಾಲಕಾಲಕ್ಕೆ ಅನೇಕ ಮಾನದಂಡಗಳನ್ನು ನಿಗದಿಮಾಡಲಾಗುತ್ತಿದೆ. ಭಾರತದಲ್ಲಿ ಬಡತನವನ್ನು ಅಳೆಯುವ ಕಾರ್ಯ ಸ್ವಾತಂತ್ರ್ಯಕ್ಕೆ ಪೂರ್ವದಿಂದಲೂ ನಡೆಯುತ್ತಿದೆ. 1938ರಲ್ಲಿ ಜವಾಹರ ಲಾಲ್‌ ನೆಹರೂ ಅವರ ಅಧ್ಯಕ್ಷತೆಯ ರಾಷ್ಟ್ರೀಯ ಯೋಜನಾ ಸಮಿತಿಯು ಮಾಸಿಕ ತಲಾ ಆದಾಯ 15-20 ರೂ. ಎಂದು ನಿಗದಿಪಡಿಸಿತ್ತು. 1944ರಲ್ಲಿ ಬಾಂಬೆ ಯೋಜನೆಯಲ್ಲಿ ಮಾಸಿಕ ತಲಾ ಆದಾಯವು 75 ರೂ.ಗಿಂತ ಕಡಿಮೆ ಇದ್ದವರು ಬಡವರು ಎಂದಿತ್ತು.

ಸ್ವಾತಂತ್ರ್ಯಾನಂತರದಲ್ಲಿ 1962ರಲ್ಲಿ ರಚಿಸಲಾದ ಸಮಿತಿಯು (Working Group) ಗ್ರಾಮೀಣ ಪ್ರದೇಶದಲ್ಲಿ 20 ರೂ. ಹಾಗೂ ನಗರ ಪ್ರದೇಶದಲ್ಲಿ 25 ರೂ.ಗಿಂತ ಕಡಿಮೆ ಆದಾಯ ಹೊಂದಿರುವವರು ಬಡವರು ಎಂದಿತ್ತು. 1971ರಲ್ಲಿ ವಿ.ಎಂ. ದೇವಕರ್‌ ಹಾಗೂ ಎನ್‌ ರಥ್‌ ಅಧ್ಯಯನ ಸೇರಿ ಅನೇಕ ಮಾನದಂಡಗಳು ಹೊರಬಂದವು. 1979ರಲ್ಲಿ ಡಾ. ವೈ.ಕೆ. ಅಲಘ್‌ (ಎಚ್‌.ಡಿ. ದೇವೇಗೌಡರು ಪ್ರಧಾನಿಯಾಗಿದ್ದಾಗ ಕೇಂದ್ರ ಸಚಿವರಾಗಿದ್ದರು) ಅವರ ಅಧ್ಯಕ್ಷತೆಯಲ್ಲಿ ರಚಿಸಿದ ಕನಿಷ್ಠ ಅವಶ್ಯಕತೆ ಹಾಗೂ ಪರಿಣಾಮಕಾರಿ ಬಳಕೆ ಕುರಿತು ಅಧ್ಯಯನ ನಡೆಸಲು ರಚಿಸಿದ ಕಾರ್ಯಪಡೆಯು ವರದಿ ನೀಡಿತು. ಅದರಂತೆ ಗ್ರಾಮೀಣ ಪ್ರದೇಶದಲ್ಲಿ ಪ್ರತಿ ದಿನ 2,400 ಕಿಲೋ ಕ್ಯಾಲರಿ ಆಹಾರದ ಅಗತ್ಯವಿದೆ, ನಗರ ಪ್ರದೇಶದಲ್ಲಿ ಪ್ರತಿದಿನ 2,100 ಕಿಲೋ ಕ್ಯಾಲರಿ ಆಹಾರದ ಅವಶ್ಯಕತೆಯಿದೆ ಎಂದು ಅಂದಾಜಿಸಿತು. ಇದರ ಆಧಾರದಲ್ಲೇ ಮುಂದೆ ವಿವಿಧ ಕಾರ್ಯಪಡೆಗಳು ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಬಡತನ ರೇಖೆಯನ್ನು ನಿರ್ಧಾರ ಮಾಡುತ್ತ ಬಂದವು. ಈ ನಿಟ್ಟಿನಲ್ಲಿ ಮೈಲಿಗಲ್ಲು ಎನ್ನಬಹುದಾದದ್ದು 2009ರಲ್ಲಿ ಸುರೇಶ್‌ ತೆಂಡೂಲ್ಕರ್‌ ಅಧ್ಯಕ್ಷತೆಯ ತಜ್ಞರ ಸಮಿತಿ ಸೂಚಿಸಿದ ಮಾನದಂಡ. ಗ್ರಾಮೀಣ ಪ್ರದೇಶದಲ್ಲಿ ಮಾಸಿಕ ತಲಾದಾಯ 816 ರೂ. ಹಾಗೂ ನಗರ ಪ್ರದೇಶದಲ್ಲಿ ಮಾಸಿಕ ತಲಾದಾಯ 1,000 ರೂ.ಗಿಂತ ಕೆಳಗೆ ಇರುವವರನ್ನು ಬಡತನ ರೇಖೆಗಿಂತ ಕೆಳಗಿರುವವರು (ಬಿಪಿಎಲ್‌) ಎಂದು ಹೇಳಿತು.

ಬಹುತೇಕ ಎಲ್ಲ ಸಂಶೋಧನೆಗಳು, ಸಮೀಕ್ಷೆಗಳೂ ಬಡತನವನ್ನು ಲೆಕ್ಕ ಮಾಡಲು ಆದಾಯವನ್ನು ಪರಿಗಣನೆಗೆ ಎತೆಗೆದುಕೊಂಡಿಲ್ಲ. ಅಂತಿಮವಾಗಿ ಆದಾಯದ ಮಿತಿಯನ್ನು ಹೇಳಲಾಗಿದೆಯಾದರೂ ಮಾನದಂಡವನ್ನು ಲೆಕ್ಕ ಮಾಡಲು ಖರ್ಚನ್ನು ಗಣನೆಗೆ ತೆಗೆದುಕೊಂಡಿವೆ. ಭಾರತದಂತಹ ಬಹು ಆದಾಯಗಳ ಸಂಕೀರ್ಣ ಸಮಾಜದಲ್ಲಿ ಅನೇಕ ಆದಾಯದ ಮೂಲಗಳಿರುತ್ತವೆ. ಅಸಂಘಟಿತ ವಲಯವೇ ಹೆಚ್ಚಿರುವುದರಿಂದ ಆದಾಯವನ್ನು ಪರಿಗಣಿಸುವುದು ಬಹು ಕಷ್ಟ. ಆದಾಯ ಎಷ್ಟು ಕಡೆಯಿಂದಲೇ ಬಂದರೂ ವೆಚ್ಚ ಮಾಡುವುದು ಅದೇ ವ್ಯಕ್ತಿ ಹಾಗೂ ಕುಟುಂಬವಾದ್ಧರಿಂದ ಇದು ಒಂದು ಉತ್ತಮ  ವಿಧಾನ ಎಂದು ಪರಿಗಣಿಸಲ್ಪಟ್ಟಿದೆ.

ನೀತಿ ಆಯೋಗ ರಚನೆಗೂ ಮುಂಚೆ ಇದ್ದ ಯೋಜನಾ ಆಯೋಗವು ಬಡತನ ರೇಖೆಗಿಂತ ಕೆಳಗಿರುವವರ ಮಾಹಿತಿಯನ್ನು ನಿರಂತರವಾಗಿ ಬಿಡುಗಡೆ ಮಾಡುತ್ತ ಬಂದಿದೆ. 2013ರಲ್ಲಿ ತೆಂಡೂಲ್ಕರ್‌ ಸೂತ್ರಕ್ಕೆ ಅನುಗುಣವಾಗಿ 2011-12ರ ಬಡತನ ದತ್ತಾಂಶವನ್ನು ಬಿಡುಗಡೆ ಮಾಡಿತು. ದೇಶದಲ್ಲಿ 26.98 ಕೋಟಿ ಅಂದರೆ ಅಂದಿನ ಜನಸಂಖ್ಯೆಯ ಶೇ.21.9 ಜನರು ಬಡತನದಲ್ಲಿದ್ದಾರೆ ಎಂದು ತಿಳಿಸಿತ್ತು. ಅದರ ನಂತರದಲ್ಲಿ ಬಡತನಕ್ಕೆ ಸಂಬಂಧಿಸಿದಂತೆ ದತ್ತಾಂಶಗಳನ್ನು ಬಿಡುಗಡೆ ಮಾಡಿಲ್ಲ.

2021ರ ಎಂಪಿಐ ಸೂಚ್ಯಂಕ
ವಿಶ್ವಬ್ಯಾಂಕ್‌ ಸೂಚಿಸಿದ ಮಾನದಂಡಗಳಿಗೆ ಅನುಗುಣವಾಗಿ ನೀತಿ ಆಯೋಗವು ಬಹು ಆಯಾಮದ ಬಡತನ ಸೂಚ್ಯಂಕವನ್ನು (ಎಂಪಿಐ) ರೂಪಿಸಲಾಗಿದೆ. ಎಂಪಿಐ ಎನ್ನುವುದು ಈ ಹಿಂದೆ ಯೋಜನಾ ಆಯೋಗ ಘೋಷಿಸುತ್ತಿದ್ದ ಬಡತನ ದತ್ತಾಂಶಕ್ಕಿಂತಲೂ ಹೆಚ್ಚು ಸಮಗ್ರವಾಗಿದೆ. 2010ರಿಂದಲೂ ಮಾನವ ಅಭಿವೃದ್ಧಿ ವರದಿಯ ಕಾರಣಕ್ಕೆ ವಿಶ್ವಸಂಸ್ಥೆ ಅಭಿವೃದ್ಧಿ ಕಾರ್ಯಕ್ರಮವು (UNDP) ಎಂಪಿಐ ಮಾನದಂಡವನ್ನು ಬಳಸುತ್ತಿದೆ. ಇದು ಕೇವಲ ಆರ್ಥಿಕ ಬಡತನವಷ್ಟೆ ಅಲ್ಲದೆ ಆರೋಗ್ಯ, ಶಿಕ್ಷಣವನ್ನು ಪಡೆಯುವಲ್ಲಿನ ತೊಂದರೆಗಳು ಹಾಗೂ ಜನರ ಜೀವನ ಮಟ್ಟವನ್ನೂ ಗಣನೆಗೆ ತೆಗೆದುಕೊಂಡು ರೂಪಿಸಲಾಗುತ್ತದೆ. ಹಾಗಾಗಿ ಇದನ್ನು, ಬಡತನ ರೇಖೆಯ ಅಳತೆಗಿಂತಲೂ ಹೆಚ್ಚು ಉತ್ತಮ ಎನ್ನಬಹುದು.

ಅದರಂತೆ 2020ರಲ್ಲಿ ಭಾರತದಲ್ಲಿ ಬಡತನ ರೇಖೆಗಿಂತ ಕೆಳಗೆ ಜೀವಿಸುವವರ ಸಂಖ್ಯೆ ಒಟ್ಟು ಶೇ. 25.01 ಇದೆ. ಗ್ರಾಮೀಣ ಪ್ರದೇಶದಲ್ಲಿ ಶೇ.36.8 ಇದ್ದರೆ ನಗರ ಪ್ರದೇಶದಲ್ಲಿ ಶೇ.9.2 ಇದೆ. ಈಗಿನ ಕೇಂದ್ರ ಸರ್ಕಾರ ಕೋವಿಡ್‌ ಸಮಯದಲ್ಲಿ ಯಾರೂ ಹಸಿವಿನಿಂದ ಬಳಲಬಾರದು ಎಂಬ ಕಾರಣಕ್ಕೆ ದೇಶದ ಸುಮಾರು 80 ಕೋಟಿ ಜನರಿಗೆ (ಸರಿಸುಮಾರು ಶೇ.70) ಜನರಿಗೆ ಪ್ರಧಾನ ಮಂತ್ರಿ ಅನ್ನ ಯೋಜನೆಯಲ್ಲಿ ಅಕ್ಕಿಯನ್ನು ನೀಡಿತು. ಕೋವಿಡ್‌ ಸಮಯದಲ್ಲಿ ಅಕ್ಕಿ ನೀಡಿದ್ದು ತಪ್ಪು ಎನ್ನಲಾಗದು. ಆದರೆ ಕೇಂದ್ರ ಸರ್ಕಾರದ ಅಂಕಿ ಅಂಶಗಳ ಪ್ರಕಾರ ಬಡತನ ರೇಖೆಗಳಿಗಿಂತ ಕಡಳಗಿರುವವರ ಸಂಖ್ಯೆಯನ್ನು, 2020ರ ಎಂಪಿಐ ಅಂಕಿ ಅಂಶದೊಂದಿಗೆ (ಶೇ. 25.01 ) ಹೋಲಿಕೆ ಮಾಡಿದರೆ ಎಡವಿದ್ದೆಲ್ಲಿ, ಸರ್ಕಾರದ ಎಷ್ಟು ಸಂಪನ್ಮೂಲ ಪೋಲಾಗುತ್ತಿದೆ ಎನ್ನುವುದು ತಿಳಿಯುತ್ತದೆ.

ಅದೇ ರೀತಿ 2021ರಲ್ಲಿ ನೀತಿ ಆಯೋಗವು ನಡೆಸಿದ ಸಂಶೋಧನೆಯಂತೆ ದೇಶದ ಗ್ರಾಮೀಣ ಪ್ರದೇಶದಲ್ಲಿ ಶೇ.32.75 ಹಾಗೂ ನಗರ ಪ್ರದೇಶದಲ್ಲಿ ಶೇ. 8.81 ಜನರು ಬಡತನ ರೇಖೆಗಿಂತ ಕೆಳಗಿದ್ದಾರೆ. ಬಿಹಾರದಲ್ಲಿ ಅತಿ ಹೆಚ್ಚು ಜನರು ಬಡವರಿದ್ದಾರೆ. ಅಲ್ಲಿನ ಶೇ.51.91 ಜನಸಂಖ್ಯೆ ಬಡತನ ರೇಖೆಗಿಂತ ಕೆಳಗೆ ಜೀವಿಸುತ್ತಿದೆ. ಜಾರ್ಖಂಡ್‌ (ಶೇ. 42.16), ಉತ್ತರ ಪ್ರದೇಶ(ಶೇ.37.79), ಮಧ್ಯಪ್ರದೇಶ(ಶೇ.36.65) ರಾಜ್ಯಗಳಲ್ಲಿ ಹೆಚ್ಚಿನ ಬಡತನವಿದೆ. ಇದರಂತೆ ಕರ್ನಾಟಕದಲ್ಲಿ ಬಡತನ ರೇಖೆಗಿಂತ (ಎಂಪಿಐ) ಕೆಳಗೆ ಜೀವನ ಮಾಡುತ್ತಿರುವ ನಾಗರಿಕರ ಸಂಖ್ಯೆ ಶೇ.13.16. ಹೌದು. ದೇಶದಲ್ಲಿ ಬಡತನ ತುಸು ಕಡಿಮೆಯಿರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ದೇಶದ ಜಿಡಿಪಿಗೆ ಕರ್ನಾಟಕವು ಉತ್ತಮ ಕೊಡುಗೆ ನೀಡುತ್ತಿದೆ.

ದೇಶದಲ್ಲಿ ಅತ್ಯಂತ ಹಿಂದುಳಿದ ಜಿಲ್ಲೆಗಳನ್ನು ಕೇಂದ್ರ ಸರ್ಕಾರ ಗುರುತಿಸಿದೆ. ಅವುಗಳನ್ನು Aspirational Districts ಎಂದು ಕರೆಯಲಾಗಿದೆ. ಅದರಂತೆ ಕೇಂದ್ರ ಸರ್ಕಾರದ ಯಾವುದೇ ಸಬಲೀಕರಣ ಯೋಜನೆಗಳು ಮೊದಲಿಗೆ ಈ ಜಿಲ್ಲೆಗಳಲ್ಲಿ ಜಾರಿ ಆಗಬೇಕು. ಕರ್ನಾಟಕದಲ್ಲಿ ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳು ಈ ಪಟ್ಟಿಯಲ್ಲಿವೆ.

ಕರ್ನಾಟಕದ ಜನಸಂಖ್ಯೆಗೆ ಶೇ.13.16ನ್ನು (ಎಂಪಿಐ) ಹೊಂದಿಸಿದರೆ 9159328 ಜನಸಂಖ್ಯೆ ಆಗುತ್ತದೆ. ಅಂದರೆ ಈಗಿನ 4481556 ಬಿಪಿಎಲ್‌ ಕಾರ್ಡ್‌ ಸದಸ್ಯರಿಗೆ ಹೋಲಿಸಿದಲ್ಲಿ 3,50,59,627 ಅನರ್ಹರು ಬಿಪಿಎಲ್‌ ಕಾರ್ಡ್‌ ಹೊಂದಿದ್ದಾರೆ.

ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?
ಈಗಾಗಲೆ ಮೇಲೆ ತಿಳಿಸಿದಂತೆ ಕೇಂದ್ರ ಸರ್ಕಾರದ ವತಿಯಿಂದಲೇ ನಡೆಸಿದ ಬಡತನ ಸೂಚ್ಯಂತಗಳು ಮುಕ್ತವಾಗಿ ಲಭ್ಯವಿವೆ. ಪೌಷ್ಠಿಕಾಂಶ, ನೈರ್ಮಲ್ಯ ಸೇರಿ ಯಾವುದೇ ವರ್ಗದಲ್ಲೂ ಕರ್ನಾಟಕವು ತೀರಾ ಬಡತನವಿರುವ ರಾಜ್ಯಗಳಲ್ಲಿಲ್ಲ. ವಿವಿಧ ರಾಜ್ಯ ಸರ್ಕಾರಗಳು, ಕೇಂದ್ರ ಸರ್ಕಾರಗಳು ನಿರಂತರವಾಗಿ ನಡೆಸಿದ ಪ್ರಯತ್ನದಿಂದ ಹಾಗೂ ಉತ್ತಮ ಜೀವನ ಹೊಂದಬೇಕು ಎಂಬ ಅಭಿಲಾಷೆ ಸಾರ್ವಜನಿಕರಲ್ಲಿ ಇರುವುದರಿಂದ ಸರ್ಕಾರಿ ಸವಲತ್ತುಗಳನ್ನು ಬಳಸಿಕೊಂಡು ಬಡತನ ರೇಖೆಯನ್ನು ಮೀರುತ್ತಿದ್ದಾರೆ. ಇದು ಕರ್ನಾಟಕದ ಮಟ್ಟಿಗೆ ಧನಾತ್ಮಕ ಅಂಶ. ಯಾದಗಿರಿ, ರಾಯಚೂರು ಸೇರಿ ಕೆಲ ಜಿಲ್ಲೆಗಳಲ್ಲಿ ಇನ್ನೂ ಕಡು ಬಡತನ ಇದ್ದು, ಆ ಕುರಿತು ಗಮನ ಹರಿಸಬೇಕಿದೆ.

ಗ್ಯಾರಂಟಿ ಯೋಜನೆಗಳ ಹೊರೆ
ಯಾದಗಿರಿ, ರಾಯಚೂರು ಸೇರಿ ಕೆಲ ಜಿಲ್ಲೆಗಳಲ್ಲಿ ಇನ್ನೂ ಕಡು ಬಡತನ ಇದ್ದು, ಆ ಕುರಿತು ಗಮನ ಹರಿಸಬೇಕಿದೆ. ಒಟ್ಟಾರೆ ರಾಜ್ಯದಲ್ಲಿ ಶೇ.13 ಆಸುಪಾಸಿನಲ್ಲಿರುವ ಬಡವರಿಗೆ ಈಗಿನ ಸರ್ಕಾರ ಘೋಷಿಸಿರುವ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲು ಮುಂದಾಗಿದೆ. ಇದರಲ್ಲಿ ಪ್ರಮುಖವಾಗಿ ಉಚಿತ ಬಸ್‌ ಸೇವೆ, ಉಚಿತ ವಿದ್ಯುತ್‌, ನಿರುದ್ಯೋಗ ಭತ್ಯೆ ಯೋಜನೆಗಳು ಯಾವುದೇ ಬಡತನದ ಮಾನದಂಡವಿಲ್ಲದೆ ಎಲ್ಲ ಅರ್ಹರಿಗೂ (ಸ್ತ್ರೀಯರು, ಆರ್‌ಆರ್‌ನಂಬರ್‌ ಹಾಗೂ ನಿರುದ್ಯೋಗಿಗಳು) ಸಿಗುತ್ತದೆ. ಆದರೆ ಕುಟುಂಬದ ಮುಖ್ಯಸ್ಥೆಯಾದ ಮಹಿಳೆಗೆ ಮಾಸಿಕ 2 ಸಾವಿರ ರೂ. ನೀಡುವ ಯೋಜನೆ ಹಾಗೂ ಮಾಸಿಕ 10 ಕೆ.ಜಿ. ಉಚಿತ ಅಕ್ಕಿ ನೀಡುವ ಅನ್ನ ಭಾಗ್ಯ ಯೋಜನೆಯು ಬಿಪಿಎಲ್‌ ಕಾರ್ಡ್‌ದಾರರಿಗೆ ಸಿಗಲಿದೆ.

ಎಲ್ಲ ಐದು ಯೋಜನೆಗಳನ್ನು ಅನುಷ್ಠಾನ ಮಾಡಲು ಸರ್ಕಾರಕ್ಕೆ ಹೆಚ್ಚುವರಿಯಾಗಿ ಸುಮಾರು 50 ಸಾವಿರ ಕೋಟಿ ರೂ. ಬೇಕಾಗಬಹುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಂದಾಜಿಸಿದ್ದಾರೆ. ಅಂದರೆ ಕರ್ನಾಟಕ ಸರ್ಕಾರವು ಈಗಾಗಲೆ ಪ್ರಕಟವಾಗಿರುವ ಅಧಿಕೃತ ಅಂಕಿ ಅಂಶಗಳ ಆಧಾರದಲ್ಲೇ ಲೆಕ್ಕ ಮಾಡಿದರೆ ಅಂದರೆ 3,50,59,627 ಅನರ್ಹರಾಗಿರುವರನ್ನು ಹೊರಗಿಟ್ಟರೆ, ಪ್ರತಿಯೊಬ್ಬರಿಗೂ ಮಾಸಿಕ 10 ಕೆ.ಜಿ. ಅಕ್ಕಿ ಉಳಿಯಿತೆಂದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಸೇರಿ ಮಾಸಿಕ ಅಂದಾಜು 3.5 ಲಕ್ಷ ಮೆಟ್ರಿಕ್‌ ಟನ್‌  ಅಕ್ಕಿಯ ಹೊರೆಯು ಕಡಿಮೆ ಆಗುತ್ತದೆ. ಅದೇ ರೀತಿ ರಾಜ್ಯ ಸರ್ಕಾರವು ಹೆಚ್ಚುವರಿಯಾಗಿ ಮಾಸಿಕ 1.75 ಲಕ್ಷ ಮೆಟ್ರಿಕ್‌ ಟನ್‌ ಅಕ್ಕಿಯು ಉಳಿತಾಯ ಆಗುತ್ತದೆ.

ಆದರೆ ಪ್ರಜಾಪ್ರಭುತ್ವ ಎನ್ನುವುದು ಜನಸಂಖ್ಯೆಯ ಆಧಾರದಲ್ಲಿ ನಡೆಯುವ ಲೆಕ್ಕಾಚಾರ. ಒಂದು ಕಡೆ, ತಮಗೆ ಅನುಕೂಲ ಇದ್ದರೂ ಉಚಿತವಾಗಿ ಲಭಿಸಲಿ ಎನ್ನುವ ಜನರು, ಇನ್ನೊಂದೆಡೆ ಜನರಿಗೆ ಬೇಸರ ಆದರೆ ತಮಗೆ ಓಟು ಬರುವುದಿಲ್ಲ ಎನ್ನುವ ರಾಜಕಾರಣಿಗಳು. ಇಬ್ಬರೂ ಪರಸ್ಪರ ಹೊಂದಾಣಿಕೆ ಮಾಡಿಕೊಂಡಾಗ ಇಷ್ಟು ದೊಡ್ಡ ಅನರ್ಹರನ್ನು ಹೊರಗೆ ಇಡುವವರು ಯಾರು? ತೆರಿಗೆದಾರರು ಪಾವತಿಸುತ್ತಿರುವ ದುಡಿಮೆಯ ಹಣವನ್ನು ಹೀಗೆ ಅನರ್ಹರಿಗೆ ವೆಚ್ಚ ಮಾಡದೆ, ನಿಜವಾಗಿ ಬಡತನದಲ್ಲಿರುವವರಿಗೆ ಒದಗಿಸಿ ಎಂದು ಹೇಳುವವರು ಯಾರು? ಬೆಕ್ಕಿಗೆ ಗಂಟೆ ಕಟ್ಟುವವರು ಯಾರು? ಎನ್ನುವುದೇ ಪ್ರಶ್ನೆ.

ಬಹುಮಾನವೂ ಇದೆ.
ಬಿಪಿಎಲ್‌ ಕಾರ್ಡನ್ನು ಅನರ್ಹರು ಪಡೆದಿದ್ದರೆ ಅದನ್ನು ಸರ್ಕಾರ ಪತ್ತೆ ಹಚ್ಚಬೇಕು. ಅಷ್ಟೆ ಅಲ್ಲ, ಸಾರ್ವಜನಿಕರೂ ಇದನ್ನು ಪತ್ತೆ ಹಚ್ಚಬಹುದು. ತಮಗೆ ತಿಳಿದಿರುವ ಯಾರೇ ಅನರ್ಹರು ಬಿಪಿಎಲ್‌ ಕಾರ್ಡ್‌ ಹೊಂದಿದ್ದಾರೆ ಅದರ ದೂರು ನೀಡಬಹುದು. ದೂರು ನೀಡಿದವರು ಯಾರು ಎನ್ನುವುದನ್ನು ಆಹಾರ ಇಲಾಖೆ ಗೌಪ್ಯವಾಗಿ ಇಡುತ್ತದೆ. ಅಷ್ಟೆ ಅಲ್ಲ, ಅನರ್ಹರು ಕಾರ್ಡ್‌ ಹೊಂದಿರುವುದನ್ನಾಗಲಿ, ನಕಲಿ ಕಾರ್ಡ್‌ ಹೊಂದಿರುವುದನ್ನಾಗಲಿ ದೂರು ನೀಡಿ ಅದು ಸಾಬೀತಾದರೆ ಅಂತಹವರ ಖಾತೆಗೆ 400 ರೂ. ನೀಡುವ ಯೋಜನೆಯಿದೆ. ಆದರೆ ಎಷ್ಟು ಜನರು ದೂರು ನೀಡಿದ್ದಾರೆ?

ಎರಡು ಗ್ರಾಮದ ನಡುವೆ ಕಡದ ಸೀಮೆಯ ಕಲ್ಲು.
ಅದ ಕಟ್ಟಿದಾತ ಗುರುವಲ್ಲ, ಕಟ್ಟಿಸಿಕೊಂಡಾತ ಶಿಷ್ಯನಲ್ಲ.
ಆದಿಯನರಿಯದ ಗುರುವು, ಭೇದಿಸಲರಿಯದ ಶಿಷ್ಯ,
ಇವರಿಬ್ಬರೂ ಉಭಯಭ್ರಷ್ಟರೆಂದಾತನಂಬಿಗ ಚೌಡಯ್ಯ

ಕಡದ ಸೀಮೆಯ ಕಲ್ಲಿನಂತೆಯೇ ಈ ವ್ಯವಸ್ಥೆಯನ್ನು ರೂಪಿಸಿದ್ದು ಯಾರೆಂದು ಸರ್ಕಾರಕ್ಕೂ ಗೊತ್ತಿಲ್ಲ, ಸಾರ್ವಜನಿಕರಿಗೂ ತಿಳಿದಿಲ್ಲ. ಆದರೆ ಇಬ್ಬರಿಗೂ ಉಪಯೋಗ ಆಗುತ್ತಿದೆ. ಈ ಪೋಲಾಗುವಿಕೆಯನ್ನು ತಡೆಯಬೇಕು ಎಂಬ ಮನಸ್ಸು ಸರ್ಕಾರಕ್ಕಿದ್ದರೂ, ಜನರ ಭಯದಿಂದಾಗಿ ಮುಂದುವರಿಸಿಕೊಂಡು ಹೋಗುತ್ತಿದೆ. ಒಟ್ಟಿನಲ್ಲಿ, ಅಂಬಿಗರ ಚೌಡಯ್ಯನ ವಚನದಲ್ಲಿ ವಚನದಲ್ಲಿ ತಿಳಿಸಿದಂತೆ ಇಬ್ಬರೂ ಭ್ರಷ್ಟರಾಗಿ ಮುಂದುವರಿದಿದ್ದಾರೆ.

Exit mobile version