:: ಅನೂಪ ದೇಶಪಾಂಡೆ
ಜಾತಿ ಮತಗಳ ಆಧಾರದ ಮೇಲೆ ಚುನಾವಣೆ ನಡೆಸಬಾರದು ಎಂಬುದು ಚುನಾವಣೆಯ ಪ್ರಮುಖ ನೀತಿ ಸಂಹಿತೆ. ಆದರೆ ಚುನಾವಣೆ ನಡೆಯುವುದೇ ಜಾತಿಯ ಆಧಾರದ ಮೇಲೆ ಎನ್ನುವಂತೆ ಬಿಂಬಿಸಲಾಗುತ್ತಿದೆ. ಈ ಸಲವಂತೂ (Karnataka Election) ಲಿಂಗಾಯತ ವಿಷಯವನ್ನು ಎಲ್ಲಾ ಪಕ್ಷಗಳೂ ಅಸಹ್ಯವೆನ್ನುವಂತೆ ಬಳಸಿದವು. ಪ್ರತಿ ಕ್ಷೇತ್ರದಲ್ಲೂ ನಿಖರವಾಗಿ ಇಂತಹ ಜಾತಿ, ಒಳ ಜಾತಿಗಳ ವೋಟುಗಳು ಇಷ್ಟೇ ಇವೆ ಎಂದು ನಿಖರವಾಗಿ ಮಾಧ್ಯಮಗಳು ಹೇಳುತ್ತಿದ್ದವು. ಅಲ್ಲದೇ ಇಂತಹ ಜಾತಿ, ಒಳ ಜಾತಿ ಮತಗಳು ಇಂತಹ ಪಕ್ಷಕ್ಕೇ ಹೋಗುತ್ತವೆ ಎಂದೂ ನಿಖರವಾಗಿ ವರದಿ ಮಾಡುತ್ತಿದ್ದವು.
ಮುಂದುವರಿದು, ಕಾಂಗ್ರೆಸ್ಸಿನ ಬಿಟ್ಟಿ ಯೋಜನೆಗಳು ಮತದಾರರನ್ನು ತೀವ್ರವಾಗಿ ಸೆಳೆದಿವೆ ಎಂಬುದು ಇನ್ನೊಂದು ವಿಶ್ಲೇಷಣೆ. ಕೆಲವು ಜನ ತಮ್ಮ ವಾಟ್ಸ್ಯಾಪ್ ಸ್ಟೇಟಸ್‍ಗಳಲ್ಲಿ ಅಭಿವೃದ್ಧಿಗಿಂತ, ಹಿಂದುತ್ವಕ್ಕಿಂತ ಬಿಟ್ಟಿ ಯೋಜನೆಗಳೇ ನಮ್ಮ ಜನಕ್ಕೆ ಬೇಕಾದವು ಎಂದು ಮೋದಿಯವರ ಕ್ಷಮೆಯಾಚನೆ ಕೋರಿ ಸ್ಟೇಟಸ್ ಹಾಕಿಕೊಂಡು ಕಣ್ಣೀರು ಹರಿಸಿದರು.
ಕರ್ನಾಟಕದಲ್ಲಿನ ಬಿಜೆಪಿಯ ದಯನೀಯ ಸೋಲಿಗೆ ವಿಶ್ಲೇಷಣೆ ಮಾಡುವ ರಾಜಕೀಯ ಪಂಡಿತರ ಜನಪ್ರಿಯ ಮತ್ತು ಸಾಮಾನ್ಯ ಕಾರಣಗಳಲ್ಲಿ ಬಹುಮುಖ್ಯವಾದ ಕಾರಣವೆಂದರೆ ಈ ಬಾರಿ ಲಿಂಗಾಯತರು ಸಾರಾಸಗಟಾಗಿ ಬಿಜೆಪಿಯ ಬದಲು ಕಾಂಗ್ರೆಸ್ ಆಯ್ಕೆ ಮಾಡಿಕೊಂಡಿದ್ದಾರೆ. ಅದಕ್ಕೆ ಕೆಲವು ಕಾರಣಗಳನ್ನು ಈ ಕೆಳಗಿನಂತೆ ನೀಡಲಾಗುತ್ತಿದೆ:
1. ಬಿಎಸ್‍ವೈಯವರನ್ನು ಮುಖ್ಯ ಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದು ಮತ್ತು ಕಡೆಗಣಿಸಿದ್ದು. (ತನ್ನನ್ನು ಕಡೆಗಣಿಸಿಲ್ಲ ಎಂದು ಬಿಎಸ್‍ವೈ ಸಾವಿರಾರು ಬಾರಿ ಹೇಳಿದರೂ ಮತ್ತೆ ಅದೇ ಹೇಳಲಾಗುತ್ತಿದೆ.)
2. ಜಗದೀಶ ಶೆಟ್ಟರ್ ಮತ್ತು ಲಕ್ಷ್ಮಣ ಸವದಿಯವರ ಜೊತೆ ಪಕ್ಷ ಸರಿಯಾಗಿ ನಡೆದುಕೊಂಡಿಲ್ಲ.
3. ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟಕ್ಕೆ ಬಿಜೆಪಿ ಬೆಂಬಲಿಸಿಲ್ಲ.
4. ಬಿಜೆಪಿಗೆ ಲಿಂಗಾಯತರ ಮತಗಳು ಬೇಕಿಲ್ಲವೆಂದು ಬಿ.ಎಲ್.ಸಂತೋಷರು ಮಾಡಿದರೆಂದು ಪ್ರಚಾರವಾದ ಹೇಳಿಕೆ. (ಇದು ಸುಳ್ಳು ಸುದ್ದಿ ಎಂದು ದೂರು ದಾಖಲಾಗಿದೆ.)
ಕಳೆದ ಚುನಾವಣೆಯಲ್ಲಿ (2018) ಪ್ರಮುಖ ಪಕ್ಷಗಳ ಮತಗಳ ಶೇಕಡಾವಾರು ಪಾಲು ಈ ರೀತಿ ಇದೆ:
ಬಿಜೆಪಿ : 36.05
ಕಾಂಗ್ರೆಸ್: 38.14
ಜೆಡಿಎಸ್: 18.3
2023ರಲ್ಲಿ ಪ್ರಮುಖ ಪಕ್ಷಗಳ ಮತಗಳ ಶೇಕಡಾವಾರು ಪಾಲು ಈ ರೀತಿ ಇದೆ:
ಬಿಜೆಪಿ: 36
ಕಾಂಗ್ರೆಸ್: 42.8
ಜೆಡಿಎಸ್: 13.29
ಅಂದರೆ, ಬಿಜೆಪಿಗೆ 0.35% ಮತ ಕಡಿಮೆಯಾಗಿದೆ. ಕಾಂಗ್ರೆಸ್‍ಗೆ 4.653% ಮತ ಏರಿಕೆಯಾಗಿದೆ. ಜೆಡಿಎಸ್‍ಗೆ 5.01% ಮತ ಕಡಿಮೆಯಾಗಿದೆ.
ಬಿಜೆಪಿಯ ಮತಗಳು ಕಾಂಗ್ರೆಸ್‍ಗೆ ವರ್ಗಾವಣೆಯಾಗಿಲ್ಲವೆಂಬುದು ಮೇಲ್ನೋಟಕ್ಕೇ ಕಾಣಿಸುತ್ತದೆ. ವರ್ಗಾವಣೆಯಾದ ಮತಗಳು ಜೆಡಿಎಸ್ ಮತಗಳು. ನಮ್ಮ ರಾಜಕೀಯ ಪಂಡಿತರ ಪ್ರಕಾರ ಲಿಂಗಾಯತರು ಜೆಡಿಎಸ್ ಬೆಂಬಲಿಗರಲ್ಲ. ಹಾಗಾದರೆ ಲಿಂಗಾಯತರು ಸಾರಾಸಗಟಾಗಿ ಬಿಜೆಪಿಯನ್ನು ತಿರಸ್ಕರಿಸಿದ್ದಾರೆ ಎಂಬ ವಿಶ್ಲೇ಼ಷಣೆ ಎಷ್ಟರ ಮಟ್ಟಿಗೆ ಸರಿ?
ಇನ್ನು ಬಿಟ್ಟಿ ಭಾಗ್ಯಗಳ ಬಗ್ಗೆ: ಈ ಹಿಂದೆಗಿಂತ ಶೇ. 0.35 ಜನ ಬಿಜೆಪಿ ಬಿಟ್ಟು ಬೇರೆ ಪಕ್ಷಕ್ಕೆ (ಕಾಂಗ್ರೆಸ್ ಇರಬಹುದು) ಮತ ಹಾಕಿದ್ದಾರೆ. ಕಾಂಗ್ರೆಸ್ಸಿಗೆ ಮುಖ್ಯವಾದ ಲಾಭವಾಗಿರುವುದು ಜೆಡಿಎಸ್‌ನಿಂದ. ಹೀಗಾಗಿ ರಾಜ್ಯದ ಜನ ಬಿಟ್ಟಿ ಯೋಜನೆಗಳಿಗೂ ಮಾರು ಹೋಗಿಲ್ಲವೆಂಬುದು ಸ್ಪಷ್ಟವಾಗುತ್ತದೆ. ಆಡಳಿತ ವಿರೋಧಿ ಅಲೆಯೂ ಪಂಡಿತರು ಹೇಳುವಂತೆ ಪ್ರಬಲವಾಗಿರಲಿಲ್ಲವೆಂದು ಕಾಣುತ್ತದೆ. ಸಾಂಪ್ರದಾಯಿಕ ಬಿಜೆಪಿ ವಿರೋಧಿ ಮತಗಳು ಕಾಂಗ್ರೆಸ್ ಮತ್ತು ಜೆಡಿಎಸ್‍ನಲ್ಲಿ ವಿಭಜನೆಯಾಗದೇ ಕಾಂಗ್ರೆಸ್‍ನಲ್ಲಿ ಕನ್ಸಾಲಿಡೇಟ್ ಆಗಿವೆ ಎಂಬುದು ಸ್ಪಷ್ಟ.
ಒಟ್ಟಾರೆ ಹೇಳಬಹುದು ಏನೆಂದರೆ,
1. ಜನಸಾಮಾನ್ಯರು ಹಿಂದುತ್ವಕ್ಕಿಂತ, ಅಭಿವೃದ್ಧಿಗಿಂತ ಬಿಟ್ಟಿ ಭಾಗ್ಯಗಳಿಗೆ ಮರುಳಾಗಿದ್ದಾರೆ ಎನ್ನುವುದು ಸುಳ್ಳು.
2. ಲಿಂಗಾಯತರು ಪಕ್ಷದಿಂದ ದೂರ ಸರಿದಿದ್ದಾರೆ ಎನ್ನುವುದು ಸುಳ್ಳು
ಇದನ್ನೂ ಓದಿ: D ಕೋಡ್ ಅಂಕಣ: ಬಿಜೆಪಿಗೆ ಲಿಂಗಾಯತ ಮತಗಳು ನಷ್ಟವಾಗಿಲ್ಲ ಎನ್ನುವುದು ಎಷ್ಟು ಸುಳ್ಳು? ಮೀಸಲು ಜೇನು ಕಚ್ಚಿದ್ದೆಷ್ಟು?
ಹಾಗಾದರೆ ವೈಫಲ್ಯ ಎಲ್ಲಿರಬಹುದು?
ಬಿಜೆಪಿಯು ಆಡಳಿತ ಪರವಾದ ವಾತಾವರಣ ಸೃಷ್ಟಿಸಿ ತನ್ನ ಮತ ಪ್ರಮಾಣ ಹೆಚ್ಚಿಸಿಕೊಂಡು ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಬಹುದಿತ್ತು. ಅದು ಏಕೆ ಆಗಲಿಲ್ಲ? ಅದನ್ನು ಪರಿಣಾಮಕಾರಿಯಾಗಿ ಮಾಡಲು ಸಾಧ್ಯವಾಗದಿರುವುದಕ್ಕೆ ಈ ಕಾರಣಗಳನ್ನು ಹೇಳಬಹುದೇ?:
- ರಾಜ್ಯದಲ್ಲಿ ಮತ ಸೆಳೆಯಬಲ್ಲ ಫೇಸ್ ಇಲ್ಲದಿರುವುದು. ನಾಯಕತ್ವ ಅಭಾವ.
- ರಾಜ್ಯ ಸರ್ಕಾರದ ಹೇಳಿಕೊಳ್ಳಬಹುದಾದ ಸಾಧನೆಗಳು ಇಲ್ಲದಿರುವುದು.
- ಭ್ರಷ್ಟಾಚಾರವನ್ನು ಇಲ್ಲವಾಗಿಸುವ ಪಕ್ಷ ಎನ್ನುವ ಭರವಸೆ ಮೂಡಿಸದಿರುವುದು. (40% ಆರೋಪವನ್ನು ಪರಿಣಾಮಕಾರಿಯಾಗಿ ನಿರಾಕರಿಸದಿರುವುದು)
- ಕಾರ್ಯಕರ್ತರನ್ನು ಕಡೆಗಣಿಸಿದ್ದು.
- ಪಕ್ಷದ ಸಿದ್ಧಾಂತ ಮರೆತಿದ್ದು.
- ಹೊರಗಿನಿಂದ ಬಂದವರ ಮೇಲೆ ಅವಲಂಬನೆ
ಬಿಜೆಪಿಯ ಮತ ಪ್ರಮಾಣ ಗಣನೀಯವಾಗಿ ಕುಸಿಯದಿರುವುದನ್ನು ಗಮನಿಸಿದರೆ ಜನಸಾಮಾನ್ಯರು ಪಕ್ಷದ ಮೇಲೆ ವಿಶ್ವಾಸವಿಟ್ಟಿದ್ದಾರೆನ್ನುವುದು ಸ್ಪಷ್ಟ. ತಮ್ಮನ್ನು ಕಡೆಗಣಿಸಿದರೂ, ಅಧಿಕಾರದ ಪಡಸಾಲೆಯಲ್ಲಿ ಇರುವವರು ತಮ್ಮನ್ನು ಮರೆತರೂ ಚುನಾವಣೆಯ ಸಮಯದಲ್ಲಿ ದೇವದುರ್ಲಭ ಕಾರ್ಯಕರ್ತರು ಪಕ್ಷಕ್ಕಾಗಿ ಹಗಲಿರುಳು ಶ್ರಮವಹಿಸಿದ್ದಾರೆ.
ಇನ್ನಾದರೂ ಜಾತಿ-ಜಾತಿ ಎಂದು ಲೆಕ್ಕಾಚಾರ ಹಾಕದೇ ಸಿದ್ಧಾಂತ, ಜನೋಪಯೋಗಿ ಕಾರ್ಯಕ್ರಮಗಳ ಆಧಾರದ ಮೇಲೆ ಮತ್ತು ಕಾರ್ಯಕರ್ತ ಕೇಂದ್ರಿತವಾಗಿ ಪಕ್ಷವನ್ನು ಮುನ್ನಡೆಸಲು ನೇತೃತ್ವ ಕ್ರಮ ವಹಿಸುತ್ತದೆಯೇ?
(ಲೇಖಕರು ವಕೀಲರು)
ಇದನ್ನೂ ಓದಿ: Karnataka Election Results: ಗೆದ್ದವರ ಪೈಕಿ 217 ಶಾಸಕರು ಕೋಟ್ಯಧಿಪತಿಗಳು, ಯಾರು ಶ್ರೀಮಂತ ಎಂಎಲ್ಎ?