Site icon Vistara News

ವಿಶ್ಲೇಷಣೆ: ಭರ್ಜರಿ ರಾಜಕೀಯದ ದಾಳಕ್ಕೆ ಪ್ರತ್ಯಕ್ಷ ಸಾಕ್ಷಿಯಾದ ರಾಜ್ಯ ಬಜೆಟ್

Budget-siddaramaiah1

:: ಡಾ.ಜಿ.ವಿ. ಜೋಶಿ

ಭರಪೂರ್ ಅನ್ನ ಭಾಗ್ಯ, ಪುಕ್ಸಟ್ಟೆ ಬೆಳಕು ನೀಡುವ ಗೃಹ ಜ್ಯೋತಿ, ಕುಟುಂಬಗಳ ಯಜಮಾನಿಯರಿಗೆ ಸರಕಾರದ ಲೆಕ್ಕಾಚಾರದಂತೆ ಬಾಳಲು ಬೇಕಾದ ಗೃಹ ಲಕ್ಷ್ಮಿ, ಮಹಿಳೆಯರಿಗೆ ಸರಕಾರಿ ಬಸ್‌ಗಳಲ್ಲಿ ಉಚಿತ ಬಸ್ ಪ್ರಯಾಣ (free bus travel) ಒದಗಿಸುವ ಶಕ್ತಿ ಯೋಜನೆ ಮತ್ತು ಸದ್ಯದಲ್ಲೇ ನಿರುದ್ಯೋಗದ ಭಾಗ್ಯವಿದ್ದರೆ (!) ಮಾತ್ರ ಯುವಕರಿಗೆ ಒಲಿಯಲಿರುವ ಯುವ ನಿಧಿ- ಹೀಗೆ ಪಂಚ ರತ್ನಗಳನ್ನು ಒದಗಿಸಿದ ರಾಜ್ಯ ಬಜೆಟ್ (state budget 2023) ಮುಂದೆ ಬರಲಿರುವ ಲೋಕಸಭಾ ಚುನಾವಣೆಗೆ ರಣವಾದ್ಯ ಭಾರಿಸಿದೆ. ಹಸ್ತಿನಾವತಿಯತ್ತ ಮುಖ ಮಾಡಿದರೂ ಸದ್ಯ ವಿಧಾನ ಸಭೆಯಲ್ಲೇ ಮೆರೆಯುತ್ತಿರುವ ರಾಜ್ಯದ ಚತುರ ರಾಜಕಾರಣಿ ಸಿದ್ದರಾಮಯ್ಯ ತಮ್ಮ ಬಜೆಟ್ (Siddaramaiah budget) ಸಮರ್ಥಿಸಿಕೊಳ್ಳುವಾಗ ಮೋದಿ ಸರಕಾರದ ವಿರುದ್ಧ ಸೆಟೆದು, ತೊಡೆ ತಟ್ಟಿ ನಿಂತಂತೆ ಭಾಸವಾಗುತ್ತದೆ.

ಕೆಲವೇ ದಿನಗಳ ಹಿಂದೆ ಆಕ್ಸ್ ಫರ್ಡ್ ವಿವಿಯಲ್ಲಿ ಅಂತಾರಾಷ್ಟ್ರೀಯ ಬಹು ಆಯಾಮ ಬಡತನ ಸೂಚ್ಯಂಕ ಬಿಡುಗಡೆಯಾಯಿತು. ಕಳೆದ 15 ವರ್ಷಗಳ ಅವಧಿಯಲ್ಲಿ ಭಾರತ ಬಡತನ ನಿವಾರಣೆಯಲ್ಲಿ ಮಾಡಿದ ಸಾಧನೆಯನ್ನು ಈ ಸೂಚ್ಯಂಕವನ್ನು ಆಧಾರವಾಗಿಟ್ಟುಕೊಂಡು ವಿಶ್ವಸಂಸ್ಥೆ ಶ್ಲಾಘಿಸಿದೆ. ತೀರ ಇತ್ತೀಚೆಗೆ ನೀತಿ ಆಯೋಗ ಬಿಡುಗಡೆ ಮಾಡಿದ ವರದಿಯನ್ನು ಓದಬೇಕು. ಬಡತನ ನಿವಾರಣೆಯಲ್ಲಿ ಕರ್ನಾಟಕದ ಸಾಧನೆಯನ್ನು ತೋರಿಸುವ ವರದಿ ಇದು. ಇದನ್ನು ನೋಡಿದರೆ ಸರಕಾರ ವಿಜೃಂಭಣೆಯಲ್ಲಿ ಜಾರಿ ಮಾಡಿದ ಅನ್ನ ಭಾಗ್ಯ ಯೋಜನೆಯ ಅಗತ್ಯವನ್ನು ಪ್ರಶ್ನಿಸಬೇಕಾಗುತ್ತದೆ. ಈ ಪ್ರಶ್ನೆ ಹಾಕುವಷ್ಟು ಶಕ್ತಿ ಕೂಡ ಇಲ್ಲದೆ ಬಡವಾಗಿ ಹೋದ ವಿರೋಧ ಪಕ್ಷಗಳಿಗೆ ಈಗ ನಾಡಿನಲ್ಲಿ ಯಾವ ಭಾಗ್ಯವೂ ಇಲ್ಲವೆಂದು ಹೇಳಿದರೆ ಸತ್ಯವಲ್ಲದೇ ಬೇರೇನೂ ಹೇಳಿದಂತಾಗುವದಿಲ್ಲ.

ಜುಲೈ 7ರಂದು ವಿಧಾನಸಭೆಯಲ್ಲಿ ಧರೆಗಿಳಿದು ಬಂದ ಸಿದ್ದರಾಮಯ್ಯನವರ ಬಜೆಟ್ ಕೆಲವು ವೈಶಿಷ್ಟ್ಯಗಳ ಗೊಂಚಲು. 2014ರ ಲೋಕಸಭಾ ಚುನಾವಣೆಯ ಸಮಯದಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಮೂಡಿಬಂದ ಗುಜರಾತ್ ಮಾದರಿ ಸುದ್ದಿಯಾಗಿತ್ತು. ಅದನ್ನು ಅಳಿಸಲೆಂದೇ ಉದಯಿಸಿದ ಕರ್ನಾಟಕದ ಮಾದರಿ ಸಿದ್ದರಾಮಯ್ಯನವರ ರಾಜಕೀಯ ಲೆಕ್ಕಾಚಾರದ ಗರ್ಭದಿಂದ ಹೊರಬಂದಿದೆ. ನೇರವಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನೇ ಗುರಿಯಾಗಿಟ್ಟುಕೊಂಡು ಬಾಣ ಬಿಡುತ್ತಿರುವುದು ಸಿದ್ದರಾಮಯ್ಯನವರ ‌14ನೇ ಬಜೆಟ್ ಭಾಷಣದ ದೊಡ್ಡ ವೈಶಿಷ್ಟ್ಯ. ಒಂದು ದೃಷ್ಟಿಯಿಂದ ನೋಡಿದರೆ ಈಗ ನಾಡಿನಲ್ಲಿ ಜಾರಿಯಾಗಿರುವುದು ಬೈಗುಳಗಳ ಮುಂಗಡ ಪತ್ರ. ಮೋದಿ ಸರಕಾರ ಸಾರಿದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ತಿರಸ್ಕರಿಸಿ ರಾಜ್ಯದಲ್ಲಿ ನೂತನ ಶಿಕ್ಷಣ ನೀತಿಯನ್ನು ಸಾರುವ ನಿರ್ಧಾರವನ್ನು ಸಿದ್ದು ಬಜೆಟ್ ಸಾರಿದೆ. ಇದು ಈಗಾಗಲೇ ಬಿಜೆಪಿ ಸರಕಾರವಿದ್ದಾಗ ಜಾರಿಯಾಗಿರುವ ರಾಷ್ಟ್ರೀಯ ಶಿಕ್ಷಣ ನೀತಿಗೆ ವಿದಾಯ ಹೇಳುವ ಹುನ್ನಾರವಲ್ಲದೇ ಮತ್ತೇನು? ಒಕ್ಕೂಟ ವ್ಯವಸ್ಥೆಯಲ್ಲಿ ಈಗಿರುವ ಕೇಂದ್ರ ಮತ್ತು ರಾಜ್ಯ ಸರಕಾರದ ಸಂಬಂಧಕ್ಕೆ ವಿದಾಯ ಹೇಳುವ ಸಾಹಸಕ್ಕೆ ಸಾವಕಾಶವಾಗಿ ಕೈಹಾಕಿದೆ ಸಿದ್ದು ಬಜೆಟ್. ಅಂದರೆ ಸಾಂವಿಧಾನಿಕ ಬಿಕ್ಕಟ್ಟು, ವಿವಾದಗಳಿಗೆ ನಾಂದಿ ಹಾಡಬಲ್ಲ ಬಜೆಟ್ ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ಜಾರಿಯಾಗುತ್ತಿದೆ ಎಂದರೆ ಏನರ್ಥ?

ಬೇರೆ ಪಕ್ಷಗಳ ಸರಕಾರವಿದ್ದಾಗ ಸಾಲದ ಭಾರ ಜಾಸ್ತಿಯಾಗುತ್ತಿದೆಯೆಂಬ ಕೂಗು ಸಿದ್ದು ಅವರ ಜಿಹ್ವೆಯಿಂದ ಬಹಳ ಸುಲಭವಾಗಿ ಹೊರಡುತ್ತಿತ್ತು. ಈಗಿರುವುದು 85,818 ಕೋಟಿ ರೂ.ಗಳ ಸಾಲದ ಭಾರದ ಬಜೆಟ್. ಇದು ದೊಡ್ಡ ಭಾರವೆಂದು ಸಿದ್ದರಾಮಯ್ಯನವರ ಅಭಿಮಾನಿಗಳೇ ಒಪ್ಪಿಕೊಳ್ಳಬೇಕಾಗುತ್ತದೆ. ರಾಜಸ್ವ ವೆಚ್ಚ 2,50,933 ಕೋಟಿ ರೂಗಳಷ್ಟಾಗಲು ಗ್ಯಾರಂಟಿಗಳೇ ಪ್ರಮುಖ ಕಾರಣ. ಅಭಿವೃದ್ಧಿ ಪ್ರಕ್ರಿಯೆಗೆ ಪೂರಕವಾದ ಬಂಡವಾಳ ವೆಚ್ಚ ಕೇವಲ 54,374 ಕೋಟಿ ರೂ.ಗಳು. ವರ್ಷಕಳೆದಂತೆ ಕೇಂದ್ರ ಸರಕಾರದ ಬಜೆಟ್‌ನಲ್ಲಿ ಬಂಡವಾಳ ವೆಚ್ಚದ ಪ್ರಮಾಣ ಜಾಸ್ತಿಯಾಗುತ್ತಿರುವುದು ಹಿತಕಾರಿ ಬೆಳವಣಿಗೆ. ಇದೆಲ್ಲ ವಿಧಾನ ಸಭೆಯಲ್ಲಿರುವಾಗ ರಾಜಕಾರಣದಲ್ಲಿ ನುರಿತ ಸಿದ್ದರಾಮಯ್ಯನವರ ಕಣ್ಣಿಗೆ ಬೀಳುವುದೇ ಇಲ್ಲ. ವಿಧಾನ ಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ಬಜೆಟ್ ಮೇಲಿನ ಚರ್ಚೆಗೆ ಉತ್ತರಿಸುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಬಜೆಟ್ಟನ್ನೇ ಬದಿಗೆ ಸರಿಸಿ ಅಪ್ಪಟ ರಾಜಕಾರಣಿಯಾಗಿಯೇ ಮೋದಿ ಸರಕಾರದ ವಿರುದ್ಧ ಮಾತನಾಡುವ ಚಾನ್ಸ್ ಸೃಷ್ಟಿಸಿಕೊಂಡರು.

ಸಿದ್ದರಾಮಯ್ಯನವರ ಕಣ್ಣಿಗೆ ಬೀಳುವ ರೀತಿಯಲ್ಲಿ ಬಜೆಟ್ ಮಂಡನೆಯಾಗುವ ಕೆಲವೇ ದಿನಗಳ ಮೊದಲು ಪತ್ರಿಕೆಗಳಲ್ಲಿ ಮಾಜಿ ಲೋಕಾಯುಕ್ತ ಎನ್. ಸ೦ಕೋಷ ಹೆಗ್ಡೆ ನೀಡಿದ ಹೇಳಿಕೆ ಪ್ರಕಟವಾಗಿತ್ತು. ಆಗಾಗ ಸುದ್ದಿ ಮಾಡುವ ಲೀಡರ್‌ಗಳ ತಾಣವಾದ ಮಂಡ್ಯದಲ್ಲಿ ಕರ್ನಾಟಕದ ಕನ್ನಡ ಸೇನೆ ಏರ್ಡಿಸಿದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡುತ್ತ ಫ್ರೀ ಯೋಜನೆ ಲಂಚಕ್ಕೆ ಸಮ ಎಂದು ಹೇಳಿದ್ದರು. ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳನ್ನು ಒದಗಿಸುವುದು ಸರಕಾರದ ಜವಾಬ್ದಾರಿ ಎಂದು ಸಂತೋಷ ಹೆಗ್ಡೆ ಹೇಳಿದ್ದು ನೊಬೆಲ್ ಪಾರಿತೋಷಕ ವಿಜೇತ ಆರ್ಥಿಕ ತಜ್ಞ ಅಮಾರ್ತ್ಯ ಸೇನ್‌ರ ಒತ್ತಾಸೆಯನ್ನು ನೆನಪಿಸುತ್ತದೆ. ಪ್ರಮುಖ ಇಂಗ್ಲೀಷ್ ದಿನ ಪತ್ರಿಕೆಯಲ್ಲಿ ಬಜೆಟ್ ಮಂಡನೆಗಿಂತ ಎರಡು ದಿನಗಳ ಮೊದಲು ಪ್ರಕಟವಾದ ಪ್ರಕಾಶ್ ನೆಡುಂಗಾಡಿ ಅವರ ಲೇಖನ ಕರ್ನಾಟಕದಲ್ಲಿ ಆರೋಗ್ಯ ಮತ್ತು ಶಿಕ್ಷಣ ರಂಗಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕಾದ ಅಗತ್ಯವನ್ನು ಅಂಕಿ-ಸಂಖ್ಯೆಗಳ ಬೆಳಕಿನಲ್ಲಿ ಪ್ರತಿಪಾದಿಸಿತ್ತು. ಅವರು ಗ್ಯಾರಂಟಿಗಳಿಗೆ ಜೋತು ಬೀಳದಂತೆ ಸರಕಾರವನ್ನು ಎಚ್ಚರಿಸಿದ್ದು ಸಹ ಸೂಕ್ತವಾಗಿತ್ತು.

ಆದರೆ ʼಬಡವರ ಸರಕಾರʼ ಈ ಸಾಮಾಜಿಕ ಅಗತ್ಯವನ್ನು ಲೆಕ್ಕಿಸದೆ ಗ್ಯಾರಂಟಿಗಳ ದರ್ಬಾರ್ ಹೊಂದಿದ ಬಜೆಟ್ ಮಂಡಿಸಿ ಲೋಕಸಭಾ ಚುನಾವಣೆಗೆ ತರಾತುರಿಯಲ್ಲಿ ಬೇಕಾದ ತಾಲೀಮು ನಡೆಸುತ್ತಿದೆ. ಜುಲೈ 25ರಂದು ಅನುಭವಿ ರಾಜಕಾರಣಿ, ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಲೋಕಸಭಾ ಚುನಾವಣೆಯತ್ತ ರಾಜ್ಯ ಸರಕಾರ ನಿಗಾ ಇಟ್ಟ ಸತ್ಯವನ್ನು ಬಯಲು ಮಾಡಿದ್ದಕ್ಕೆ ಸಿದ್ದು ಬಜೆಟ್ ಬೇಕಾದ ಹಿನ್ನೆಲೆ ಒದಗಿಸಿದೆ.

ಸಿದ್ದು ಬಜೆಟ್ ಮಂಡನೆಯಾದ ನಂತರ ನವದೆಹಲಿಯಲ್ಲಿ ಮುನಿಯಪ್ಪ ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪಿಯೂಷ್ ಗೋಯೆಲ್‌ರನ್ನು ಭೇಟಿಯಾಗಿ ರಾಜ್ಯಕ್ಕೆ ಹೆಚ್ಚು ಅಕ್ಕಿ ಪೂರೈಕೆ ಮಾಡಬೇಕೆಂಬ ಬೇಡಿಕೆ ಮಾಡಿ ಸೋತರು. ಮಾಧ್ಯಮದವರೊಡನೆ ಮೋದಿ ಸರಕಾರದ ವಿರುದ್ಧ ವಾಗ್ದಾಳಿ ಮಾಡುತ್ತ ʼ ಕೇಂದ್ರ ಸರಕಾರ ಅಕ್ಕಿ ಪೂರೈಕೆ ವಿಷಯದಲ್ಲಿ ಮುಕ್ತ ಮಾರುಕಟ್ಟೆ ಪೂರೈಕೆ ಯೋಜನೆಯನ್ನು ಸ್ಥಗಿತಗೊಳಿಸುವ ಮೂಲಕ ರಾಜ್ಯಗಳ ಅಧಿಕಾರ ಮೊಟಕು ಮಾಡಿದೆ ʼ ಎಂದು ದೂರಿದರು. ಒಕ್ಕೂಟ ರಚನೆಯನ್ನು ವಿರೋಧಿಸುವ ಕೆಲಸಕ್ಕೆ ಕೈಹಾಕಿ ಮುಖ್ಯಮಂತ್ರಿಯ ಜತೆಗೆ ಮುನಿಯಪ್ಪ ವಿಳಂಬ ಮಾಡದೆ ಕೈಜೋಡಿಸಿದ್ದಾರೆ.

ನೀರಾವರಿಗೆ ಸಿದ್ದು ಬಜೆಟ್‌ನಲ್ಲಿ ಅನುದಾನ ಕಡಿಮೆಯಾಗಿದೆ. ತಮ್ಮ ಹಳೆಯ ಕೃಷಿ ಭಾಗ್ಯ ಯೋಜನೆಯ ಪುನರಾರಂಭಕ್ಕೆ 100 ಕೋಟಿ ರೂ.ಗಳ ಅನುದಾನ ಪ್ರಕಟಿಸಿದ್ದಾರೆ ಸಿದ್ದರಾಮಯ್ಯ. ಅದನ್ನು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಗೆ ಜೋಡಿಸುವ ಇರಾದೆಯನ್ನೂ ವ್ಯಕ್ತಪಡಿಸಿದ್ದಾರೆ. ಅಲ್ಲೂ ಇರುವುದು ಒಂದು ರಾಜಕೀಯವೆ. 2019ಕ್ಕಿಂತ ಮೊದಲು ಕೇಂದ್ರ ವಿತ್ತ ಸಚಿವರಾಗಿದ್ದ ಅರುಣ ಜೇಟ್ಲಿ ತಮ್ಮ ಪ್ರಥಮ ಬಜೆಟ್‌ನಲ್ಲೇ ಉದ್ಯೋಗ ಖಾತರಿ ಯೋಜನೆಯ ವ್ಯಾಪ್ತಿಯಲ್ಲಿ ಕೃಷಿ ವಲಯವನ್ನು ಸೇರಿಸುವ ಯೋಚನೆಯನ್ನು ಪ್ರಕಟಿಸಿದ್ದರು. ನಂತರ ತಾಂತ್ರಿಕ ಕಾರಣಗಳಿಂದ ಅವರಿಗೆ ಯಶಸ್ಸು ಸಿಗಲಿಲ್ಲ. 2013-1820ರ ಅವಧಿಯಲ್ಲಿ ಸಿದ್ದರಾಮಯ್ಯನವರ ಸರಕಾರವಿದ್ದಾಗ ಉದಯಿಸಿದ ಕೃಷಿ ಬೆಲೆ ಆಯೋಗ ಮಾಡಿದ ಭತ್ತದ ಕೃಷಿಯನ್ನು ಉದ್ಯೋಗ ಖಾತರಿ ಯೋಜನೆಯ ವ್ಯಾಪ್ತಿಗೆ ತರುವ ಪ್ರಯತ್ನಕ್ಕೂ ಹೇಳಿಕೊಳ್ಳುವಷ್ಟು ಫಲಕಾರಿಯಾಗಲಿಲ್ಲ. ಇದು ಸಿದ್ದರಾಮಯ್ಯನವರಿಗೆ ತಿಳಿದ ಸಂಗತಿ. ಮತ್ತೆ ಕೃಷಿ ರಂಗವನ್ನು ಉದ್ಯೋಗ ಖಾತರಿ ಯೋಜನೆಯ ವ್ಯಾಪ್ತಿಗೆ ತರುವ ಪ್ರಯತ್ನಕ್ಕೆ ಕೈಹಾಕಿ ಸೋತರೆ ಮೋದಿ ಸರಕಾರ ಕೃಷಿಕರಿಗೆ ನೆರವಾಗುತ್ತಿಲ್ಲವೆಂದು ಮುಂಬರುವ ಲೋಕಸಭಾ ಚುನಾವಣೆಯ ಸಮಯದಲ್ಲಿ ಮತ್ತೊಂದು ಗುಲ್ಲೆಬ್ಬಿಸುವ ಪ್ಲಾನ್ ಈಗಲೇ ಮಾಡಿದ್ದಾರೆ ನಮ್ಮ ಚತುರ ಮುಖ್ಯಮಂತ್ರಿಗಳು.

ಬಸವರಾಜ ಬೊಮ್ಮಾಯಿ ತಮ್ಮ ಕಳೆದ ಫೆ.23ರ ಮಧ್ಯಂತರ ಬಜೆಟ್ ಭಾಷಣದಲ್ಲಿ 56 ಲಕ್ಷ ಸಣ್ಣ ಮತ್ತು ಅತಿಸಣ್ಣ ರೈತರ ಕುಟುಂಬಗಳಿಗೆ 100 ಕೋಟಿ ರೂ.ಗಳ ವೆಚ್ಚದಲ್ಲಿ ಜೀವನ ಜ್ಯೋತಿ ವಿಮಾ ಯೋಜನೆ ಜಾರಿ ಮಾಡುವ ಘೋಷಣೆ ಮಾಡಿದ್ದರು. ರೈತರ ಪರ ಕಾಳಜಿ ಇದ್ದರೆ ಸಿದ್ದರಾಮಯ್ಯ ಈ ಯೋಜನೆಗೆ ಮನ್ನಣೆ ನೀಡಿ ಅದನ್ನು ವಿಸ್ತರಿಸಬೇಕಿತ್ತು. ಬದಲಾಗಿ ಬೊಮ್ಮಾಯಿ ಯೋಜನೆಗೆ ಸಲೀಸಾಗಿ ವಿದಾಯ ಹೇಳಿ ಬಿಟ್ಟಿದ್ದಾರೆ.

ಇದನ್ನೂ ಓದಿ: ಸಕಾಲಿಕ: ಅನ್ನ ಭಾಗ್ಯ, ಹಣ ಭಾಗ್ಯ ಯೋಜನೆಗಳಿಂದ ಅಭಿವೃದ್ಧಿ ಸಾಧ್ಯವೇ?

ಎಲ್ಲಾ ಪ್ರಕಾರಗಳ ಪ್ರವಾಸೋದ್ಯಮದ ಅಬಿವೃದ್ಧಿಗೆ ವಿಪುಲ ಅವಕಾಶಗಳನ್ನು ಹೊಂದಿದ ರಾಜ್ಯ ಕರ್ನಾಟಕ. ಆದರೆ ಪ್ರವಾಸೋದ್ಯಮ ರಾಜ್ಯ ಸರಕಾರದ ಅವಗಣನೆಗೆ ತುತ್ತಾಗಿ ದಶಕಗಳೇ ಕಳೆದು ಹೋಗಿವೆ. ಸಿದ್ದರಾಮಯ್ಯನವರ ಈಗಿನ ಬಜೆಟ್ ಇದಕ್ಕೆ ಹೊರತಾಗಿಲ್ಲ. ಪ್ರವಾಸೋದ್ಯಮಕ್ಕೆ ನಿಕ್ಕಿಯಾಗಿ ದೊರೆಕಿದ್ದು ಕೇವಲ ಕೇವಲ 75 ಕೋಟಿ ರೂ.ಗಳು ! ಈ ಮಹಾ ಅನುದಾನದಿಂದ ಯಾವ ಪ್ರವಾಸೋದ್ಯಮದ ಅಭಿವೃದ್ಧಿ ಯೋಜನೆಯೂ ಸಾಧ್ಯವಿಲ್ಲ. ಕಡಲ ತೀರದ ಪ್ರವಾಸೋದ್ಯಮದ ಅಭಿವೃದ್ಧಿಗೆ ಕರಾವಳಿ ಬೀಚ್ ಪ್ರವಾಸೋದ್ಯಮ ಕಾರ್ಯಪಡೆ ರಚನೆ ಮಾಡುವ ದೊಡ್ಡ ಯೋಜನೆ (?) ಬಜೆಟ್ ಗರ್ಭದಿಂದ ಬಂದಿದೆ. ಅಂತಾರಾಷ್ಟ್ರೀಯ ಸರ್ಫಿಂಗ್ ತಾಣವಾಗಿ ಸಸಿಹಿತ್ಲು ಕಡಲತೀರದ ಅಭಿವೃದ್ಧಿ ಮಾಡುವ ಯೋಜನೆ ಇದ್ದರೂ ಅನುದಾನ ಎಷ್ಟೆಂಬುದು ಸ್ಪಷ್ಟವಾಗಿಲ್ಲ. ಹೀಗೆ ಎಷ್ಟೋ ಯೋಜನೆಗಳು ಜು. 7ರ ಬಜೆಟ್‌ನಲ್ಲಿ ಗೋಚರಿಸಿವೆ.ಆದರೆ ಅನುದಾನ ನಿಗದಿಯಾಗಿಲ್ಲ. ಅಂದರೆ ಈ ಯೋಜನೆಗಳು ಹುಟ್ಟುವಾಗಲೇ ಸಾಯಲು ಪ್ರಾರಂಭಿಸಿವೆ ಎಂದಾಯಿತೆ?

ಸತ್ಯವಾಗಿಯೂ ಹುಟ್ಟಿ ಈ ತನಕ ಸಾಯದೇ ಜಾರಿಯಲ್ಲಿರುವ ಪ್ರಮುಖ ಯೋಜನೆಗಳು ಎರಡು : ಲೋಕಸಭಾ ಚುನಾವಣೆಗೆ ಮತ ಬೇಟೆಯಾಡಲು ಇರುವ ಗ್ಯಾರಂಟಿಗಳು ಮತ್ತು ಕೆಲವೇ ಕೆಲವು ಮಹಾಶಯರಿಗೆ ಹಣ ಮಾಡಲು ಅವಕಾಶ ಸೃಷ್ಟಿಸುವ ʼಬ್ರಾಂಡ್ ಬೆಂಗಳೂರುʼ.

ಇದನ್ನೂ ಓದಿ: ಸಕಾಲಿಕ: ಗುತ್ತಿಗೆ ಕಾರ್ಮಿಕರೆಂಬ ಬಾವಲಿಗಳ ಬವಣೆ ನೀಗುವುದು ಹೇಗೆ?

Exit mobile version