ಕಾಡು ನಾಡಾದ ಕಥೆ ಗೊತ್ತೇ ಇದೆ. ಆದರೆ ನಾಡು ಕಾಡಾಗುವುದು ವಿಶಿಷ್ಟ ಕಥೆ. ಇದುವರೆವಿಗೂ ಜನ ವಸತಿ ಇರಲು ಸಾಧ್ಯವೇ ಇಲ್ಲ ಎಂದುಕೊಂಡಿದ್ದ ನೆಲದಲ್ಲಿ ಸಾವಿರಕ್ಕೂ ಹೆಚ್ಚು ವರ್ಷಗಳ ಹಿಂದೆ ಬಲು ಸಂಕೀರ್ಣವಾದ ನಾಗರೀಕತೆಯೊಂದು ಬದುಕಿತ್ತು ಎಂಬುದನ್ನು ಕಂಡುಕೊಂಡ ವಿಷಯ.
ಕಾಣೆಯಾದ ನಾಗರೀಕತೆಗಳನ್ನು ಹಾಗೂ ಜನವಸತಿಗಳ ಪತ್ತೆಯಾಗಿರುವುದು ಹೊಸ ವಿಷಯವೇನಲ್ಲ ಬಿಡಿ. ಭಾರತದಲ್ಲಿಯೂ ಕಳೆದ ಶತಮಾನದಲ್ಲಿ ಹರಪ್ಪ, ಮೊಹೆಂಜೋದಾರೋಗಳು ಪತ್ತೆಯಾಗಿದ್ದುವು. ಹಲವು ದಶಕಗಳ ಹಿಂದೆ ಹರ್ಯಾಣಾದ ರಾಖಿಗಢಿ ಪ್ರದೇಶದಲ್ಲಿ ಹರಪ್ಪಗಿಂತಲೂ ಹಳೆಯ ನಾಗರೀಕತೆ ಇದ್ದ ಕುರುಹುಗಳು ಪತ್ತೆಯಾಗಿದ್ದುವು. ಇತ್ತೀಚೆಗೆ ತಮಿಳುನಾಡಿನ ಮಧುರೆ ಹಾಗೂ ಕೃಷ್ಣಗಿರಿ ಪಟ್ಟಣಗಳ ಬಳಿಯಲ್ಲಿ ಪತ್ತೆಯಾದ ಪುರಾತನ ಪಟ್ಟಣಗಳ ಅವಶೇಷಗಳು ಕೂಡ ಸುದ್ದಿ ಮಾಡಿದ್ದುವು. ಇವು ವೇದ ಕಾಲಕ್ಕಿಂತಲೂ ಹಳೆಯವೋ, ಹೊಸವೋ ಎಂದು ವಿವಾದವೆದ್ದಿದೆ. ಇವೆಲ್ಲವೂ ಇದೀಗ ನಾವು ವಾಸಿಸುತ್ತಿರುವ ವಸತಿಗಳ ಆಸುಪಾಸಿನಲ್ಲಿ ದೊರಕಿದ ಅವಶೇ಼ಷಗಳು. ನಿರ್ವಸತಿ ಪ್ರದೇಶಗಳಲ್ಲಿ ದೊರಕಿದುವಲ್ಲ. ಹೀಗಾಗಿ ಇಂತಲ್ಲಿ ಒಮ್ಮೆ ಇದ್ದ ನಾಗರೀಕತೆ ಅಳಿದು, ಅಲ್ಲಿ ಹೊಸ ಪಟ್ಟಣ ಬಂದ ಬಗ್ಗೆ ಯಾರಿಗೂ ವಿಚಿತ್ರವೆನ್ನಿಸುವುದಿಲ್ಲ. ಮೊನ್ನೆ ನೇಚರ್ ಪತ್ರಿಕೆಯಲ್ಲಿ ಪ್ರಕಟವಾಗಿರುವ ಶೋಧವೊಂದು ಅಚ್ಚರಿಯ ಸಂಗತಿಯೊಂದನ್ನು ವರದಿ ಮಾಡಿದೆ.
ದಕ್ಷಿಣ ಅಮೆರಿಕಾ ಖಂಡದ ದಟ್ಟ ಕಾಡುಗಳ ಅಡಿಯಲ್ಲಿ ಕೇವಲ ಸಾವಿರ, ಸಾವಿರದ ಐನೂರು ವರ್ಷಗಳ ಹಿಂದೆ ಜನವಸತಿ ಇದ್ದಿತೆಂದೂ, ದೊಡ್ಡ, ದೊಡ್ಡ ಪಿರಾಮಿಡ್ಡುಗಳಂತಹ ಕಟ್ಟಡಗಳನ್ನು ಕಟ್ಟುವಷ್ಟು ನಾಗರೀಕವಾಗಿತ್ತೆಂದೂ ಜರ್ಮನಿಯ ಪುರಾತತ್ವ ಸಂಶೋಧನಾಲಯದ ಪುರಾತತ್ವ ವಿಜ್ಞಾನಿ ಹೈಕೊ ಪ್ರೂಮರ್ ಮತ್ತು ಸಂಗಡಿಗರು ವರದಿ ಮಾಡಿದ್ದಾರೆ. ಅಮೆಜಾನ್ ಕಾಡುಗಳು ಹಲವು ವಿಷಯಗಳಿಂದ ಸದಾ ಸುದ್ದಿ ಮಾಡುತ್ತಿರುತ್ತವೆ. ಉಷ್ಣವಲಯದ ಕಾಡುಗಳಲ್ಲಿ ಅಮೆಜಾನಿನಷ್ಟು ದಟ್ಟ ಕಾಡುಗಳು ಬೇರೆ ಇಲ್ಲ. ಇಲ್ಲಿನ ದಟ್ಟ ಕಾಡುಗಳಂತಹ ಕಾಡುಗಳನ್ನು ನೋಡಬೇಕೆಂದರೆ ಮಲೇಶಿಯಾ ಇಲ್ಲವೇ ಇಂಡೊನೇಶಿಯಾದ ದ್ವೀಪಗಳಿಗೆ ಹೋಗಬೇಕು.
ನಮ್ಮ ಪಶ್ಚಿಮ ಘಟ್ಟದ ಕಾಡುಗಳು ಕೂಡ ಇದರ ಮುಂದೆ ಗಹನವೇನಲ್ಲ. ಇಂತಹ ಕಾಡಿನಲ್ಲಿ ಅಲ್ಲಲ್ಲಿ ಜನ ವಾಸಿಸುತ್ತಾರೆಂಬುದು ನಿಜ. ಆದರೆ ಆ ವಸತಿಗಳೆಲ್ಲವೂ ಪುಟ್ಟ ಹಳ್ಳಿಗಳಂಥವು. ಸುಸಜ್ಜಿತವಾಗಿ ಬೆಳೆದ ನಾಗರೀಕತೆಯ ಸುಳಿವು ಇಲ್ಲದಂಥವು. ಇಂತಹ ಕಾಡಿನಲ್ಲಿ ಕೆಲವೆಡೆ ಪುರಾತನ ಜನವಸತಿಗಳ ಕುರುಹುಗಳು ದೊರೆತಿದ್ದುವಾದರೂ, ಅವುಗಳು ಈಗ ಇರುವಂತಹ ಪುಟ್ಟ ಗ್ರಾಮಗಳಂತಹವಾಗಿದ್ದಿರಬೇಕೇ ಹೊರತು ದೊಡ್ಡ ಪಟ್ಟಣಗಳಾಗಿರಲಿಕ್ಕಿಲ್ಲ ಎನ್ನುವ ನಂಬಿಕೆ ಇತ್ತು. ಇದಕ್ಕೆ ಕಾರಣ, ದಟ್ಟ ಕಾಡುಗಳ ಅಡಿಯಲ್ಲಿ, ಹಿಂದೆ ಜನವಸತಿಗಳು ಇದ್ದ ಮಟ್ಟದಲ್ಲಿ ಇರುವ ನೆಲದ ಮಣ್ಣು ಕೃಷಿಗೆ ಅನುಕೂಲವಾಗುವಷ್ಟು ಫಲವತ್ತಾಗಿಲ್ಲ. ಇಂತಹ ನೆಲದಲ್ಲಿ ದೊಡ್ಡ ಜನವಸತಿಗಳು ಸ್ಥಾಪನೆಯಾಗುವುದು ಕಷ್ಟ ಎಂಬ ನಂಬಿಕೆ ಇತ್ತು. ಈ ನಂಬಿಕೆ ಸುಳ್ಳಿರಬೇಕು ಎನ್ನುತ್ತದೆ ಪ್ರೂಮರ್ ಅವರ ಸಂಶೋಧನೆ.
ಚರಿತ್ರೆಯಲ್ಲಿ ದಾಖಲಾಗದ ನಾಗರೀಕತೆಗಳು ಇವೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಲು ಪ್ರೂಮರ್ ತಂಡ ಯಾವುದೇ ದೈವದ ಮೊರೆ ಹೋಗಲಿಲ್ಲ. ತಾಂಬೂಲದ ಪ್ರಶ್ನೆ ಕೇಳಲಿಲ್ಲವೆನ್ನಿ. ಅದು ಲಿಡಾರ್ ಎನ್ನುವ ನವೀನ ದೂರಸಂವೇದಿ ತಂತ್ರವನ್ನು ಬಳಸಿತು.
ಅಮೆಜೋನಿಯ ಎಂದು ಕರೆಯುವ ಅಮೆಜಾನ್ ಕಾಡುಗಳ ಈ ಪ್ರದೇಶದಲ್ಲಿ ಕ್ರಿಸ್ತಶಕ 500ರಿಂದ ಕ್ರಿಸ್ತಶಕ 1400ರ ವರೆಗೂ ಕಸರಾಬೆ ಎನ್ನುವ ಸಂಸ್ಕೃತಿಯ ಜನ ವಾಸವಿದ್ದರು. ಇಲ್ಲಿನ 4500 ಚದರ ಕಿಲೋಮೀಟರು ವ್ಯಾಪ್ತಿಯ ಪ್ರದೇಶದಲ್ಲಿ ಒಟ್ಟು 189 ದೊಡ್ಡ ವಸತಿಗಳು ಹಾಗೂ 289 ಸಣ್ಣ ವಸತಿಗಳು ಇದ್ದುವೆಂದು ಉಪಗ್ರಹಗಳ ಚಿತ್ರಗಳು ತಿಳಿಸಿದ್ದುವು. ಇದಲ್ಲದೆ ನೆಲದಡಿಯಲ್ಲಿ ಸುಮಾರು ಸಾವಿರ ಕಿಲೋಮೀಟರುಗಳಷ್ಟು ಉದ್ದದ ಕಾಲುವೆಗಳ ಜಾಲ ಇತ್ತೆಂದೂ ತಿಳಿದಿತ್ತು. ಆದರೆ ಇವುಗಳಲ್ಲಿ ಬೆರಳೆಣಿಕೆಯವನ್ನಷ್ಟೆ ಉತ್ಖನನ ಮಾಡುವುದು ಸಾಧ್ಯವಾಗಿತ್ತು. ಉಳಿದವುಗಳ ವಿಚಾರ ಸ್ಪಷ್ಟವಾಗಿರಲಿಲ್ಲ. ಲಿಡಾರ್ ತಂತ್ರವನ್ನು ಬಳಸಿ ಇವೆಲ್ಲವುಗಳನ್ನೂ ದೂರದಿಂದಲೇ ಅಧ್ಯಯನ ಮಾಡಿ, ಈ ಒಟ್ಟಾರೆ ನಾಗರೀಕತೆಯ ಸ್ವರೂಪವನ್ನು ಪ್ರೂಮರ್ ತಂಡ ಪತ್ತೆ ಮಾಡಿದೆ.
ಇದನ್ನೂ ಓದಿ: ಸಣ್ಣ ಕಥೆ: ತುಪ್ಪದ ಪಾಯಸ
ಲಿಡಾರ್ ಎಂದರೆ ಲೈಟ್ ಡಿಟೆಕ್ಷನ್ ಆಂಡ್ ರೇಂಜಿಂಗ್‌ಎಂದರ್ಥ. ಅಂದರೆ ದೂರದಿಂದಲೇ ವಿವಿಧ ಬಣ್ಣದ ಬೆಳಕುಗಳನ್ನು ಗ್ರಹಿಸಿ, ಅವುಗಳ ನೆರವಿನಿಂದ ಅಲ್ಲಿರುವ ವಸ್ತುಗಳ ಸ್ವರೂಪ ಹಾಗೂ ದೂರವನ್ನು ಗುರುತಿಸುವುದು ಎಂದರ್ಥ. ಇದು ವಿಮಾನಗಳನ್ನು ಪತ್ತೆ ಮಾಡುವ ರೇಡಾರ್‌ನಂತೆಯೇ ಎನ್ನಬಹುದು. ನೆಲದತ್ತ ಬೆಳಕನ್ನು ಚಿಮ್ಮಿದ ಕ್ಯಾಮೆರಾಗಳು ಅಲ್ಲಿಂದ ಪ್ರತಿಫಲಿಸುತ್ತಿರುವ ವಿವಿಧ ತರಂಗಾಂತರದ ಬೆಳಕಿನ ಚಿತ್ರಗಳನ್ನು ತೆಗೆಯುತ್ತವೆ. ಇವು ನೆಲದಲ್ಲಿರುವ ವಿವಿಧ ವಸ್ತುಗಳ ಬಗ್ಗೆ ತಿಳಿಸಿಕೊಡಬಲ್ಲುವು. ಉದಾಹರಣೆಗೆ, ಹಸಿರು ಇರುವ ಜಾಗದಿಂದ ಪ್ರತಿಫಲಿಸಿದ ಬೆಳಕಿನ ಸ್ವರೂಪ ಕಾಲುವೆಗಾಗಿ ತೋಡಿದ ನೆಲದಿಂದ ಚಿಮ್ಮಿದುದಕ್ಕಿಂತ ಭಿನ್ನವಾಗಿರುತ್ತದೆ. ರೇಡಿಯೋ ಅಥವಾ ಮೈಕ್ರೊವೇವ್ ತರಂಗಗಳನ್ನು ಚೆಲ್ಲಿದರೆ ನೆಲದ ಮೇಲಿನ ವಸ್ತುಗಳನ್ನಷ್ಟೆ ಅಲ್ಲದೆ, ನೆಲದ ಅಡಿಯಲ್ಲಿ ಇರುವ ವಸ್ತುಗಳನ್ನೂ ಗುರುತಿಸಬಹುದು. ಪ್ರೂಮರ್ ತಂಡ ಲಿವಿಯಾ ಪ್ರಾಂತ್ಯದಲ್ಲಿ ಇಂತಹ ಜನವಸತಿಗಳು ಇದ್ದುವು ಎಂದು ಹೇಳಲಾದ ಕಡೆ ಇನ್ನೂರನಾಲ್ಕು ಚದರ ಕಿಮೀ ವ್ಯಾಪ್ತಿಯ ಪ್ರದೇಶವನ್ನು ಲಿಡಾರ್ ಸರ್ವೇಕ್ಷಣೆ ಮಾಡಿದರು.
ಆಗ ಕಂಡು ಬಂತು ಸ್ವಾರಸ್ಯ. ಈ ಪ್ರದೇಶದಲ್ಲಿ ಎರಡು ದೊಡ್ಡ ಜನವಸತಿಗಳಿದ್ದು, ಇಪ್ಪತ್ತನಾಲ್ಕು ಪುಟ್ಟ ಜನವಸತಿ ಪ್ರದೇಶಗಳಿದ್ದುವು. ಈ ಎರಡು ದೊಡ್ಡ ಪ್ರದೇಶದಲ್ಲಿ ಪಿರಾಮಿಡ್ಡಿನಂತಹ ಎತ್ತರದ ಪ್ರದೇಶಗಳಿದ್ದುವು. ಇವುಗಳಲ್ಲಿಯೂ ಆಕಾರದಲ್ಲಿ ಪ್ರತ್ಯೇಕ ವಸತಿಗಳನ್ನು ಕಟ್ಟಲಾಗಿತ್ತು. ಈ ದೊಡ್ಡ ವಸತಿಗಳಿಂದ ಉಳಿದ ಇಪ್ಪತ್ತನಾಲ್ಕು ವಸತಿಗಳಿಗೂ ನೇರವಾಗಿ ಹಾದಿಗಳಿದ್ದುವು. ಅಂದರೆ ಈ ನಾಗರೀಕತೆಯಲ್ಲಿ ಜನರ ವಸತಿ ಶ್ರೇಣೀಕೃತವಾಗಿತ್ತು ಎಂದರ್ಥವಷ್ಟೆ.
ಇವೆಲ್ಲವುಗಳಿಗೂ ನೀರಿನ ಕಾಲುವೆಗಳು ಹರಿಯುತ್ತಿದ್ದುವು. ಅಂದರೆ ಒಂಬೈನೂರು ವರ್ಷಗಳಿಗೆ ಹಿಂದೆಯೇ ಇಲ್ಲಿ ಪಟ್ಟಣಗಳಿದ್ದುವು ಎಂದರ್ಥವಷ್ಟೆ. ತೀರ ಇತ್ತೀಚಿನವರೆಗೂ ಕೇವಲ ಕಾಡುಜನರ ವಸತಿಯೆಂದಷ್ಟೆ ನಂಬಿದ್ದೆಡೆ, ವ್ಯವಸ್ಥಿತವಾಗಿ ಜನವಸತಿ ಹಾಗೂ ಕೃಷಿ ಪದ್ಧತಿಗಳು ಇದ್ದದ್ದು ಅಚ್ಚರಿಯ ವಿಷಯವೆನ್ನಬೇಕು. ಆಕಾಶದಿಂದ ಲಿಡಾರ್‌ನಂತಹ ತಂತ್ರವಿಲ್ಲದಿದ್ದರೆ ಇದನ್ನು ಕಾಣಲು ಸಾಧ್ಯವೇ ಇರಲಿಲ್ಲ ಎನ್ನುತ್ತಾರೆ ಪ್ರೂಮರ್. ಈ ಶೋಧ ಯಾವಾಗ ರಾಜಕೀಯಕ್ಕೆ ಬಳಕೆಯಾಗುತ್ತದೆಯೋ ಕಾದು ನೋಡೋಣ.
ಇದನ್ನೂ ಓದಿ: Explainer: ಬಿರುಗಾಳಿ ಎಬ್ಬಿಸ್ತಾ ಇರೋದೇಕೆ 10 minutes delivery ?
ಲೇಖಕರ ಪರಿಚಯ:
ಕೊಳ್ಳೇಗಾಲ ಶರ್ಮ: ಹಿರಿಯ ವಿಜ್ಞಾನ ಸಂವಹನಕಾರ, ಬರಹಗಾರರು. ಮೈಸೂರಿನ ಕೇಂದ್ರೀಯ ಆಹಾರ ವಿಜ್ಞಾನ ಸಂಶೋಧನಾಲಯದಲ್ಲಿ ವಿಜ್ಞಾನಿ. ಸಾವಿರಾರು ಜನಪ್ರಿಯ ವಿಜ್ಞಾನ ಲೇಖನ ಹಾಗೂ ಅಂಕಣ ಬರಹಗಳನ್ನು ಬರೆದಿದ್ದು, ಹಲವು ಪುಸ್ತಕಗಳನ್ನು ರಚಿಸಿದ್ದಾರೆ. ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ವಿಜ್ಞಾನ ಮತ್ತು ತಂತ್ರಜ್ಞಾನ ದಾರ್ಶನಿಕ ಸಮೂಹದ ಪ್ರಶಸ್ತಿಗಳನ್ನು ಪಡೆದಿದ್ದಾರೆ. ʼಜಾಣಸುದ್ದಿ’ ಪಾಡ್‌ಕಾಸ್ಟ್ ಸರಣಿಗಾಗಿ ಅವರಿಗೆ ಜರ್ಮನಿಯ ಫಾಲಿಂಗ್ ವಾಲ್ಸ್ ಮನ್ನಣೆ ದೊರೆತಿದೆ. ಲೇಖನದಲ್ಲಿ ವ್ಯಕ್ತವಾದ ಅಭಿಪ್ರಾಯಗಳು ವೈಯಕ್ತಿಕ.