Site icon Vistara News

ಲೈಫ್‌ ಸರ್ಕಲ್‌ ಅಂಕಣ | ಜೀವನದಲ್ಲಿ ಧ್ಯಾನ ಧಾರಣೆಗಳ ಉಪಯೋಗ ಹೇಗೆ?

life circle meditation

ಮೋಕ್ಷಕ್ಕಾಗಿ ಧ್ಯಾನವು ಅಗತ್ಯ. ಧಾರಣೆ ಇಲ್ಲದೆ ಧ್ಯಾನವಿಲ್ಲ. ಮೊದಲು ಗ್ರಹಿಕೆ, ನಂತರ ಸಂಕಲ್ಪವೇ ಧಾರಣೆ. ಸಂಕಲ್ಪವು ಮನಸ್ಸನ್ನು ಕೇಂದ್ರೀಕರಿಸುವ ಪೂರ್ವಾಭ್ಯಾಸ. ಇಚ್ಛೆಯು ಮನಸ್ಸಿನ ಬೀಜ. ಸಂಕಲ್ಪವೇ ಬೀಜಗಳ ಬಿತ್ತನೆ. ಅದಕ್ಕೆ ಅಭ್ಯಾಸದ ಗೊಬ್ಬರ-ನೀರು ಬೇಕು. ಸಂಕಲ್ಪದಿಂದ ಈ ಒಂದು ಮರದ ಬೆಳವಣಿಗೆ ಸಾಧ್ಯ. ಸಂಕಲ್ಪವಿಲ್ಲದೆ, ಅನೇಕ ಬೀಜಗಳು ಮೊಳಕೆಯೊಡೆದು ಹಾಳಾಗುತ್ತವೆ. ಮನಸ್ಸು ಚಂಚಲ. ಅದು ಮಾಡುವ ಸಂಕಲ್ಪಗಳ ಸಂಖ್ಯೆಗಿಂತ ಹೆಚ್ಚಿನ ವಿಕಲ್ಪಗಳು ಅದರ ಮುಂದಿವೆ. ಕಣ್ಣು ಒಂದೇ ಸಮಯದಲ್ಲಿ ಅನೇಕ ವಸ್ತುಗಳನ್ನು ನೋಡುತ್ತದೆ. ಅನೇಕ ರುಚಿಗಳು ನಾಲಗೆಯನ್ನು ಅಟಕಾಯಿಸಿಕೊಂಡಿರುತ್ತವೆ. ಇಲ್ಲಿ ನೀವು ಎಷ್ಟು ದೃಢನಿಶ್ಚಯ ಹೊಂದಿದ್ದೀರಿ ಎಂಬುದನ್ನು ನೋಡಲು ಪರೀಕ್ಷೆಯನ್ನು ತೆಗೆದುಕೊಳ್ಳುತ್ತಿದ್ದೀರಿ. ಯಾವಾಗ ಮನಸ್ಸು ಆಹಾರ ಹೊಂದಿಸಲು ಹೊರಡುತ್ತದೆಯೋ, ಆಗ ಎಲ್ಲಾ ಇಂದ್ರಿಯಗಳೂ ತಮ್ಮ ತಮ್ಮ ವಿಷಯಗಳನ್ನು ಕರೆತಂದು ಸೇವೆಗೈಯ್ಯುತ್ತವೆ. ನೀವು ಹೆಮ್ಮೆಯ ಮಾನದಂಡದಲ್ಲಿ ವಿಷಯಗಳನ್ನು ತೂಗುತ್ತೀರಿ. ಆಗ ಪ್ರಕೃತಿಯು ತನ್ನ ಪ್ರಭಾವದಿಂದ ಪ್ರತಿಕ್ರಿಯೆಯನ್ನು ತೋರಿಸುತ್ತದೆ. ಧಾರಣೆಯು ನಿಮ್ಮನ್ನು ಮಿತಿಗೊಳಿಸುತ್ತದೆ. ನಿಮ್ಮನ್ನು ಒಂದು ನಿರ್ದಿಷ್ಟ ಪಥದಲ್ಲಿ ಇರಿಸಿರುತ್ತದೆ. ಧಾರಣೆಯು ಒಳಗಿನಿಂದ ಉದ್ಭವಿಸುವ ಅಲೆ. ಈ ಕಾರಣದಿಂದಾಗಿ, ನಿಮ್ಮ ಬಾಹ್ಯ ನಡವಳಿಕೆಯು ಬದಲಾಗುತ್ತಾ ಸಾಗುತ್ತದೆ.

ಇಚ್ಛೆ-ಭಾವ-ಕ್ರಿಯೆಗಳ ಸಮ್ಮಿಲಿತ ಸ್ವರೂಪವೇ ಧಾರಣೆಯ ಗತಿ. ಒಳಮನಸ್ಸಿನ ಇಚ್ಛೆ ಪ್ರಬಲವಾಗಿದ್ದರೆ, ಹೊರಗಿನ ವಸ್ತುಗಳ ಆಕರ್ಷಣೆಯು ದುರ್ಬಲಗೊಳ್ಳುತ್ತದೆ. ಮನಸ್ಸು ಬಾಹ್ಯದ ಕಡೆಗೆ, ಇಂದ್ರಿಯ ಸುಖ ಮತ್ತು ತಳಕುಬಳಕಿನತ್ತ ಓಡಿದರೆ, ಮನಸ್ಸಿನ ಆಂತರಿಕ ಧ್ವನಿಯು ಒತ್ತಿಕ್ಕಲ್ಪಡುತ್ತದೆ. ಬೀಜವು ವಿಕಲ್ಪಗಳ ಚಂಡಮಾರುತದಲ್ಲಿ ಹಾರಿ ಹೋಗುತ್ತದೆ. ಚಿಕ್ಕ ಮಗುವನ್ನು ರಾಜನ ಸಿಂಹಾಸನದಲ್ಲಿ ಕೂರಿಸಿ ಅಥವಾ ಸಂನ್ಯಾಸಿಯ ಪೀಠದಲ್ಲಿ ಕೂರಿಸಿ. ಆತನಿಗೆ ವಿಶೇಷ ಅರ್ಹತೆ ಮತ್ತು ಸಾಧನೆ ಇಲ್ಲದೆ ಅನ್ವರ್ಥಕವಾಗಿ ರಾಜ ಅಥವಾ ಸಂನ್ಯಾಸಿ ಆಗಲು ಸಾಧ್ಯವಿಲ್ಲ. ಭ್ರಮಿತ ಚಿತ್ತವು ಸದಾ ಜಗತ್ತಿನಲ್ಲಿಯೇ ಅಲೆದಾಡುತ್ತದೆ. ಆಗ ಸ್ಥೂಲ ದೇಹವನ್ನು ಶಿಥಿಲಗೊಳಿಸಿ ನಿಮ್ಮನ್ನು ಉಪಪ್ರಜ್ಞೆಯೊಳಗೆ ಪ್ರವೇಶಿಸುವಂತೆ ಮಾಡಲಾಗುತ್ತದೆ. ಧಾರಣೆಯ ವಿಕಾಸಕ್ಕಾಗಿ ಮತ್ತೆ ಮತ್ತೆ ಸಂಕಲ್ಪವನ್ನು ಪುನರಾವರ್ತಿಸಲಾಗುತ್ತದೆ. ಇಲ್ಲಿ, ಧಾರಣೆಯ ವಿಕಾಸವಾದಾಗ ಚೇತನವು ವಿಷಯದ ಕಡೆ ಜಾಗೃತವಾಗುತ್ತದೆ. ಉಪಪ್ರಜ್ಞೆಯೇ ನಿಮ್ಮ ಜೀವನದ ಸಾರಥಿ.

ಸಂಕಲ್ಪ ಅಥವಾ ಧಾರಣೆಯು ಆಚರಣೆಯ ಒಂದು ಅಂಗವಾದಾಗ, ಅದನ್ನು ಧರ್ಮ ಎಂದು ಕರೆಯಲು ಆರಂಭಿಸುತ್ತೀರಿ. ನೀವು ಸಂಕಲ್ಪವನ್ನು ಧರಿಸಿದ್ದೀರಿ. ಮುಂದೆ ಇದೇ ನಿಮ್ಮನ್ನು ಧರ್ಮ ರೂಪದಲ್ಲಿ ಧಾರಣೆ ಮಾಡುತ್ತದೆ. ಜೀವನದ ಗುರುತಾಗುತ್ತದೆ. ಮರವೇ ಬೀಜದ ಗುರುತು. ಏಕೆಂದರೆ ಬೀಜ ಮಾತ್ರ ಫಲ ನೀಡುತ್ತದೆ, ರಸ ನೀಡುತ್ತದೆ, ಸಿಹಿ ನೀಡುತ್ತದೆ. ಸಂಕಲ್ಪವಿಲ್ಲದೆ ನೆಲದಲ್ಲಿ ಬಿತ್ತಲು ಬೀಜ ಸಿದ್ಧವಾಗಬಹುದೇ? ಅದು ಮರವಾಗಬಹುದೇ? ಅದಿಲ್ಲದೆ ಸಮಾಜಕ್ಕೆ ಫಲ ಸಿಕ್ಕಬಹುದೇ? ಧಾರಣೆಯು ಜೀವನದ ದಿಕ್ಕನ್ನು ನಿರ್ಧರಿಸುತ್ತದೆ. ಇದು ನಿಮ್ಮನ್ನು ರಾಗ-ದ್ವೇಷದಿಂದ ಮುಕ್ತರಾಗಲು ಪ್ರೇರೇಪಿಸುತ್ತದೆ. ಜೀವನವನ್ನು ನಶ್ವರತೆಯಿಂದ ದೂರವಿಟ್ಟು ಶಾಶ್ವತವನ್ನು ಬೆಳಗಿಸುತ್ತದೆ. ನಂತರ ನೀವು ಒಂದು ನಿರ್ದಿಷ್ಟ ದಿಕ್ಕಿನಲ್ಲಿ ಚಲಿಸಬಹುದು. ಆಗ ನಿಮ್ಮ ಎಲ್ಲಾ ಶಕ್ತಿಗಳು, ಸಂಪನ್ಮೂಲಗಳು, ಸಮಯ ಇತ್ಯಾದಿಗಳು ಒಂದು ದಿಕ್ಕಿನಲ್ಲಿ ಒಮ್ಮುಖವಾಗುತ್ತವೆ. ವಿಷಯವು ತ್ವರಿತವಾಗಿ ಮುನ್ನಡೆಯುತ್ತದೆ. ನಿಮ್ಮ ಕ್ರಿಯೆಗಳಲ್ಲಿ ಮನೋಯೋಗವು ಹಸನಾಗಿರುತ್ತದೆ.

ಈ ಮನೋಯೋಗವು ಒಂದು ಮಹತ್ವಪೂರ್ಣ ಸ್ಥಿತಿಯನ್ನು ನಿರ್ಮಾಣ ಮಾಡುತ್ತದೆ. ಆಸಕ್ತಿ-ನಿರಾಸಕ್ತಿಗಳಲ್ಲಿಯೂ ಇದೇ ಮನಸ್ಸು ಕೆಲಸ ಮಾಡುತ್ತದೆ. ಸೃಷ್ಟಿಯ ವಿಕಾಸದಲ್ಲಿ ಪ್ರಾಣ ಮತ್ತು ವಾಕ್ಕುಗಳು ಮನಸ್ಸಿನೊಂದಿಗೆ ವಾಸಿಸುತ್ತವೆ. ಇಂದ್ರಿಯಗಳು ಬಾಹ್ಯ ವಿಷಯಗಳನ್ನು ಮನಸ್ಸಿಗೆ ತಂದೊಪ್ಪಿಸುತ್ತವೆ. ವಿಷಯಗಳು ಪ್ರಾಣದ ಸಹಾಯದಿಂದ ದೇಹ ವ್ಯಾಪಾರವನ್ನು ನಿರ್ವಹಿಸುತ್ತವೆ. ಹೀಗೆ ಪ್ರಪಂಚದ ಕೆಲಸವು ನಡೆಯುತ್ತಲೇ ಇರುತ್ತದೆ. ಇದೇ ಮನಸ್ಸು ವಿರಕ್ತಿಯ ಕಾಲದಲ್ಲಿ ಆನಂದ ಮತ್ತು ವಿಜ್ಞಾನ ಎಂಬ ಕಲೆಗಳೊಂದಿಗೆ ಸೇರಿಕೊಂಡಿರುತ್ತದೆ. ಇದು ಕಷ್ಟದ ಕೆಲಸ. ಮನಸ್ಸಿನ ಸುತ್ತಲೂ ವಿಧ್ಯೆಯ (ವಿವಿಧಾ ಧ್ಯಾಯತೇ ಇತಿ ವಿಧ್ಯಾ) ಧರ್ಮ, ಅರ್ಥ, ಕಾಮ, ಮೋಕ್ಷಗಳು ಹಾಗೂ ಅವಿಧ್ಯೆ, ಅಸ್ಮಿತೆ, ಆಸಕ್ತಿ, ಅಭಿನಿವೇಶಗಳ ಬಂಧನಗಳಿರುತ್ತವೆ. ಸ್ಥೂಲ ಮನಸ್ಸಿನ ಮೇಲೆ ಈ ಜೀವನದ ಹಾಗೂ ಅವ್ಯಯ (ಕಾರಣ) ಮನಸ್ಸಿನ ಮೇಲಿನ ಹಿಂದಿನ ಜನ್ಮಗಳ ಬಂಧನಗಳು ವ್ಯಕ್ತಿಯ ಜೀವನದ ದಿಕ್ಕನ್ನು ಬದಲಾಯಿಸುತ್ತಲೇ ಇರುತ್ತವೆ. ಅನೇಕ ಕ್ರಿಯೆಗಳು, ಪ್ರತಿಕ್ರಿಯೆಗಳು, ಋಣಾನುಬಂಧಗಳು ಜೀವನವನ್ನು ನಡುಗಿಸಿ ಬಿಡುತ್ತವೆ. ಪಾಪ ಮತ್ತು ಪುಣ್ಯ ಎರಡಕ್ಕೂ ಸಮಾನ ಬಂಧನವಿದೆ. ಆತ್ಮದಲ್ಲಿ ಪಾಪ-ಪುಣ್ಯ, ಒಳ್ಳೆಯದು-ಕೆಟ್ಟದು ಎಂಬುದಿಲ್ಲ. ಯಾವುದು ಹೇಗಿದೆಯೋ, ಹಾಗೆಯೇ ಇರುತ್ತದೆ. ಇದೇ ಪ್ರಕೃತಿ! ಯಾರನ್ನೂ ಅನುಕರಿಸದೆ ಸ್ವಂತ ರೂಪದಲ್ಲಿ ಬದುಕುವುದು ದೈವತ್ವ. ಮುಗುಳ್ನಗೆಯೊಂದಿಗೆ ಹಲವು ಮುಳ್ಳುಗಳನ್ನು ದಾಟುವ ಚಾಕಚಕ್ಯತೆಯು ಸಂಕಲ್ಪದಿಂದ ಪ್ರಾರಂಭವಾಗುತ್ತದೆ.

ಧಾರಣೆಯೇ ಕಾಲಾನಂತರದಲ್ಲಿ ಧ್ಯಾನವಾಗಿ ಬೆಳೆಯುತ್ತದೆ. ಧ್ಯಾನವು ಏಕಾಗ್ರತೆಯ ಸ್ಥಿತಿ ಹಾಗೂ ದೀರ್ಘಕಾಲದವರೆಗೆ ಕೇಂದ್ರೀಕೃತವಾಗಿರುವ ಸ್ಥಿತಿಯಾಗಿದೆ. ಮಾಡುತ್ತಿರುವ ಕೆಲಸದಲ್ಲಿ ಕಳೆದುಹೋಗಿ, ಬೇರೆ ಯಾವುದೇ ವಿಷಯಕ್ಕೆ ತಲೆ ಕೆಡಿಸಿಕೊಳ್ಳದಿರುವುದು. ನೀವು ಸ್ವಲ್ಪ ಸಮಯದವರೆಗೆ ಕಾಲಾತೀತರಾಗುವ ರೀತಿಯಲ್ಲಿ ಎಲ್ಲಾ ಪ್ರಾಣ ಶಕ್ತಿಗಳು ಒಮ್ಮುಖವಾಗಬೇಕು. ದೇಹದ ಪ್ರಜ್ಞೆ ಇಲ್ಲ, ಸಮಯದ ಗಮನವಿಲ್ಲ. ಹಿಂದಿನ ನೆನಪುಗಳ ಹಾರಾಟವಿಲ್ಲ, ಭವಿಷ್ಯದ ಹೋರಾಟವಿಲ್ಲ. ಏನೇ ಇರಲಿ, ಅದು ವರ್ತಮಾನ ಮಾತ್ರ. ವರ್ತಮಾನದಲ್ಲಿ ಬದುಕುವುದು ಧ್ಯಾನದ ಪರ್ಯಾಯವಾಚೀ. ಧ್ಯಾನವು ಪರಿಣಾಮ, ಧ್ಯಾನವು ಸೋಪಾನ. ವಿಷಯಗಳೊಂದಿಗೆ ಒಂದಾಗುವುದೇ ಧ್ಯಾನ.

ಅವಿಧ್ಯೆಯ ರೂಪದಲ್ಲಿರುವ ಕ್ಲೇಶಗಳು ಯಾವಾಗಲೂ ಮನಸ್ಸನ್ನು ಕರ್ಮದತ್ತ ಪ್ರೇರೇಪಿಸುತ್ತವೆ. ಕರ್ಮದ ಜೊತೆಗೆ ದುಃಖ, ಸುಖವನ್ನು ಫಲಗಳ ರೂಪದಲ್ಲಿ ಅನುಭವಿಸಬೇಕಾಗುತ್ತದೆ. ಆಗ ಸಂಸ್ಕಾರಗಳು ಒಳಗಿನ ಅಂತಃಕರಣದಲ್ಲಿ ಬಿಟ್ಟು ಹೋಗುತ್ತವೆ. ಹೊಸ ಕ್ಲೇಶಗಳು ಹುಟ್ಟುತ್ತವೆ. ಈ ತೊಂದರೆಗಳು ಕರ್ಮದ ಸಂಪರ್ಕದಿಂದ ಬಂಧನಕ್ಕೆ ಕಾರಣವಾಗಿವೆ. ಅಹಂಕಾರ-ಮಮಕಾರವು ಸಹ ನಿಮ್ಮನ್ನು ಚಲಾವಣೆಯಲ್ಲಿರುವಂತೆ ಮಾಡುತ್ತವೆ. ಸೃಷ್ಟಿಯ ಉದ್ದೇಶ ‘ಏಕೋಹಂ ಬಹುಸ್ಯಾಮ’ ಅಂದರೆ ಕಾಮ ಮತ್ತು ಅಹಂಕಾರವು ನಿಮ್ಮ ಮನಸ್ಸನ್ನು ಸ್ಥಿರವಾಗಿರಲು ಬಿಡುವುದಿಲ್ಲ. ಈ ಕಾರಣಕ್ಕಾಗಿ ಕೆಲವರು ಅರಣ್ಯ, ಪರ್ವತ, ಗುಹೆಗಳತ್ತ ಓಡಿ ಮರೆಯಾಗಿರಲು ಪ್ರಯತ್ನಿಸುತ್ತಾರೆ. ‘ನಾನು’ ಎಂಬ ಭಾವವು ತುಂಬಾ ಆಳವಾದ ಗಾಯಗಳನ್ನು ಸಹ ಮಾಡುತ್ತದೆ. ‘ನನ್ನದು’ ಕೂಡ ಅಷ್ಟೇ ಶಕ್ತಿಯುತವಾದ ಭಾವ. ದೇಹದ ಅಭಿಮಾನವು ‘ನಾನು’ ಮತ್ತು ‘ನನ್ನದು’ ಎಂಬೆರಡರ ಏಕತೆಯಾಗಿದೆ. ಒಬ್ಬ ವ್ಯಕ್ತಿಯು ಮೂಲತಃ ದೇಹದಲ್ಲಿ ಮತ್ತು ದೇಹಕ್ಕಾಗಿ ಮಾತ್ರ ವಾಸಿಸುತ್ತಾನೆ. ಆದುದರಿಂದ ತ್ಯಾಗ ಎಂಬ ಪದ ಕೇಳಿದೊಡನೆ ಅವನ ಜೀವವೇ ಹೋಗುತ್ತದೆ ಎಂದೆನಿಸುತ್ತದೆ. ತ್ಯಾಗವೂ ಅವನಿಗೆ ಸಾವಿನಂತೆ ತೋರುತ್ತದೆ. ನೀವು ಧ್ಯಾನದಲ್ಲಿ ಕುಳಿತು ದೇಹದ ಮೇಲೆ ನೊಣ ಕುಳಿತಿದೆಯೇ ಎಂದು ನೋಡಿದರೆ ಸಾಕು ಧ್ಯಾನ ಭಂಗವಾಗುತ್ತದೆ. ಧ್ಯಾನವು ಸಾಕ್ಷೀ ಭಾವವಾದರೆ, ದ್ರಷ್ಟಾ ಸ್ವರೂಪವಾಗಿದೆ. ಕೇವಲ ಹೇಳಿಕೆ ಕೇಳಿಕೆ ಓದು ಬರಹದಿಂದ ಅದನ್ನು ಸಾಧಿಸಲಾಗುವುದಿಲ್ಲ.

ಇದನ್ನೂ ಓದಿ | ಲೈಫ್‌ ಸರ್ಕಲ್‌ ಅಂಕಣ | ಭಕ್ತಿಯಲ್ಲಿದೆ ಜೀವನದ ಭೋಗ, ಸಾಧನೆಯ ಯೋಗ, ಮುಕ್ತಿಯ ಮಾರ್ಗ

ಮನಸ್ಸನ್ನು ಜಾಗೃತವಾಗಿಡಲು ಧಾರಣೆಯೇ ದಾರಿ. ಧಾರಣೆಯೇ ನಿಮ್ಮನ್ನು ಚಟುವಟಿಕೆಯಲ್ಲಿ ಮುಳುಗುವಂತೆ ಮಾಡುತ್ತದೆ. ಧಾರಣಾ ವಾಸ್ತವವಾಗಿ ಶ್ರದ್ಧೆ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. ಧ್ಯಾನಕ್ಕಾಗಿ ವಾತಾವರಣವನ್ನು ಸೃಷ್ಟಿಸುತ್ತದೆ. ಏಕೆಂದರೆ ಶ್ರದ್ಧೆಯ ಹೊರತು ನಿಮ್ಮ ಕರ್ತಾಭಾವವು ಹೋಗುವುದಿಲ್ಲ. ಯಾವುದೇ ದೊಡ್ಡ ಶಕ್ತಿಗೆ ನಿಮ್ಮನ್ನು ಒಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದಿಲ್ಲದೆ ಆಧ್ಯಾತ್ಮಿಕ ಅನುಭೂತಿಗಳು ಆಗುವುದಿಲ್ಲ. ನೀವು ಶರಣಾದ ತಕ್ಷಣ, ಅವುಗಳು ನಿಮ್ಮ ಮುಂದೆ ಕಾಣಿಸಿಕೊಂಡು ನಿತ್ಯ ರಂಜನೀಯವಾಗುತ್ತವೆ. ಪ್ರತಿದಿನ ನಿಮ್ಮೊಂದಿಗೆ ಏನಾಗುತ್ತಿದೆಯೋ ಅದನ್ನು ಬೇರೊಂದು ಶಕ್ತಿಯು ನಡೆಸುತ್ತಿದೆ ಎಂಬ ಭಾವನೆ ಮೂಡುತ್ತದೆ. ಇದು ದ್ರಷ್ಟಾ ಅಥವಾ ಸಾಕ್ಷೀ ಭಾವದ ಆರಂಭ.

ನೀವು ತಿನ್ನಲು ಕುಳಿತಾಗ ತಟ್ಟೆಯಲ್ಲಿರುವ ಎಲ್ಲವನ್ನೂ ನೀವು ನೋಡುತ್ತೀರಿ. ನೀವು ಎಲ್ಲಾ ಐದು ಇಂದ್ರಿಯಗಳೊಂದಿಗೆ ಎಲ್ಲಾ ಭಕ್ಷ್ಯಗಳನ್ನು ಆನಂದಿಸುವಿರಿ. ನೀವು ದೇಹದ ಭಾಷೆಯನ್ನು ಕೇಳಿಸಿಕೊಳ್ಳುತ್ತೀರಿ. ಇಂದು ನಿಮ್ಮ ದೇಹವು ಏನನ್ನು ತಿನ್ನಲು ಬಯಸುವುದಿಲ್ಲವೋ, ನೀವು ಅದನ್ನು ಕೇಳಿಸಿಕೊಂಡು ಹೊರಹಾಕುತ್ತೀರಿ. ಎಷ್ಟು ತಿನ್ನಬೇಕು ಎಂಬುದರ ಬಗ್ಗೆ ನೀವು ಗಮನ ಹರಿಸುತ್ತೀರಿ. ಆಹಾರವನ್ನು ತಯಾರಿಸಿದ್ದು ಯಾರೆಂಬುದು ನಿಮಗೇ ಗಮನಕ್ಕೆ ಬರುತ್ತದೆ. ಆಹಾರದೊಂದಿಗೆ ಯಾವುದೇ ಸಂದೇಶವಿದೆಯೇ? ನೀವು ಅದನ್ನು ಕೇಳಿಸಿಕೊಳ್ಳಲು ಸಾಧ್ಯವಾಗುತ್ತದೆ. ತಿಂದ ನಂತರ ನೀವು ಸಂಪ್ರೇಷಿಸುವ ಆಶೀರ್ವಾದ, ಆಭಾರ, ಕೃತಜ್ಞತೆಯು ಅದನ್ನು ಬಾಣಸಿಗರಿಗೆ ಮತ್ತು ಬಡಿಸುವವರಿಗೆ ತಲುಪುತ್ತದೆ. ನಿಮ್ಮ ಈ ಆಹಾರವು ಪ್ರಾರ್ಥನೆಯಾಗುತ್ತದೆ, ಏಕೆಂದರೆ ನೀವು ಧ್ಯಾನ ಮಗ್ನರಾಗಿ ಅದನ್ನು ಸೇವಿಸಿದ್ದೀರಿ. ನಿಮಗೆ ಬೇರೆ ಯಾವುದೂ ನೆನಪಿಲ್ಲ, ಯಾವುದೇ ಗೊಂದಲವಿಲ್ಲ. ಯಾವುದೇ ಚರ್ಚೆ ನಿಮ್ಮ ಗಮನವನ್ನು ಬೇರೆಡೆಗೆ ಸೆಳೆಯಲಿಲ್ಲ. ನೀವು ಅಡುಗೆ ಮಾಡುವವರಿಗೆ ನಮಸ್ಕರಿಸಿದ್ದೀರಿ. ಅವರು ಜೀವನಕ್ಕಾಗಿ ಅಡುಗೆ ಕೆಲಸ ಮಾಡುವವರೂ ಅಥವಾ ಮನೆಮಂದಿಯೂ ಆಗಿರಬಹುದು. ಪ್ರಸನ್ನ ಮುದ್ರೆಯಲ್ಲಿ, ದೇವರಿಗೆ ಕೃತಜ್ಞತೆಯೊಂದಿಗೆ, ಅನ್ನವನ್ನು ತೆಗೆದುಕೊಂಡಿದ್ದೀರಿ. ಅದರ ಪರಿಣಾಮ ಏನಾಗುತ್ತದೆ ಎಂಬುದು ನಿಮಗೆ ಗೊತ್ತು. ಒಂದೂವರೆ ತಿಂಗಳ ನಂತರ ಗೋಚರಿಸುತ್ತದೆ. ಅನ್ನದಂತೆ ಮನ, ಮನದಂತೆ ಇಚ್ಛೆ. ಧ್ಯಾನದಿಂದ ಉಂಟಾಗುವ ಸ್ಥೂಲ ಶರೀರದ ಇಚ್ಛೆ, ದೇಹದಲ್ಲಿ ವಾಸಿಸುವಾಗಲೇ ಅವ್ಯಯ ಮನದಲ್ಲಿ ಲೀನವಾಗುವುದು, ಬಯಕೆಗಳು ಕೊನೆಗೊಳ್ಳುವುದು. ಇದು ಧ್ಯಾನ ಮಾರ್ಗದ ಸಾಧನೆಗಳ ಕಿರು ಪರಿಚಯ.

ಇದನ್ನೂ ಓದಿ | ಲೈಫ್‌ ಸರ್ಕಲ್‌ ಅಂಕಣ | ಒಳಹೊರಗಿರುವ ಎಲ್ಲರೊಂದಿಗೆ ಮಾತನಾಡುವ ಕಲೆ

Exit mobile version