ಗೀತೆಯು ನಿಜವಾದ ಅರ್ಥದಲ್ಲಿ ಸಂವಾದದ ಉಪನಿಷತ್ತು ಮತ್ತು ಈ ಸಂವಾದವು ಇನ್ಯಾರದಲ್ಲ, ಆತ್ಮ-ಆತ್ಮದ ನಡುವಿನದ್ದು. ಈಶ್ವರ ಮತ್ತು ಜೀವಾತ್ಮ ಎಂಬ ಎರಡು ಭಾಗಗಳು. ಗೀತೆಯಲ್ಲಿ, ಇವುಗಳ ಸ್ವರೂಪಗಳ, ಕರ್ಮಗಳ, ದ್ವಂದ್ವಗಳ ಮತ್ತು ಸಂಶಯಗಳ ರೂಪುರೇಷೆಗಳಿವೆ. ಯುದ್ಧವು ನಮ್ಮ ಮಾನಸಿಕ ಜೀವನದ ನಿತ್ಯ ದೇವಾಸುರ ಸಂಗ್ರಾಮವಾಗಿದೆ. ಸೃಷ್ಟಿಯಲ್ಲಿ ದೇವ ಪ್ರಾಣಗಳ ಸಂಖ್ಯೆ ಕಡಿಮೆ ಮತ್ತು ಅಸುರ ಪ್ರಾಣಗಳು ಹೆಚ್ಚು. ದೇವರು ಯಾವಾಗಲೂ ಧರ್ಮದೊಂದಿಗಿರುತ್ತಾರೆ. (ವಿವಿಧಾ ಧ್ಯಾಯತೇ ಇತಿ ವಿಧ್ಯಾ). ವಿಧ್ಯಾ ಭಾಗ- ಧರ್ಮ, ಜ್ಞಾನ, ವೈರಾಗ್ಯ, ಐಶ್ವರ್ಯ- ದಿವ್ಯ ಭಾವ. ಅವಿಧ್ಯೆ, ಅಸ್ಮಿತೆ, ಆಸಕ್ತಿ, ಅಭಿನಿವೇಶ- ಇವು ಋಣಾತ್ಮಕಗಳಾದರೂ ಜೀವನದ ಶಕ್ತಿಶಾಲಿ ತತ್ವಗಳು. ಅರ್ಜುನ ಸಾಧಾರಣ ಜೀವ ರೂಪನು. ಅವಿದ್ಯೆಯಿಂದ ಸುತ್ತುವರಿಯಲ್ಪಟ್ಟಿದ್ದಾನೆ. ವಾಸನಗಳ ಮುಂದೆ ತನ್ನ ಶಸ್ತ್ರ ಚೆಲ್ಲಿ ಕುಳಿತಿದ್ದಾನೆ. ಸಾಕ್ಷಿಯಾಗಿ ಎದುರು ಕುಳಿತಿದ್ದ ದೇವರು. ನಾನು ಜಗಳವಾಡುವುದಿಲ್ಲ ಎನ್ನುತ್ತಿದ್ದಾನೆ. ಅದಕ್ಕೆ ದೇವರು- ನೀನು ನನ್ನ ಮಾತನ್ನು ಪಾಲಿಸಿದರೆ ನಾನು ನಿನ್ನ ಸಾರಥಿಯಾಗುತ್ತೇನೆ. ನೀ ನನ್ನ ಸಖನು- ದ್ವಾ ಸುಪರ್ಣ ಸಖನು. ನಿನ್ನ ಸ್ವರೂಪ ನಿನಗೆ ತಿಳಿದಿಲ್ಲ. ನಾನು ಸಂಪೂರ್ಣ ಸೃಷ್ಟಿಯ ಈಶ್ವರನು. ‘ಈಶ್ವರ ಅಂಶ ಜೀವ ಅವಿನಾಶೀ’ ಎಂಬ ಮಾತು ಪ್ರಸಿದ್ಧವಾಗಿದೆ. “ಮಮೈವಾಂಶೋ ಜೀವಲೋಕೇ, ಈಶ್ವರಃ ಸರ್ವಭೂತಾನಾಂ ಹೃದ್ದೇಶೇರ್ಜುನ ತಿಷ್ಠತಿ” ಎಂಬಲ್ಲಿಯವರೆಗೆ ಕೃಷ್ಣನು ಹೇಳಿದ್ದಾನೆ.
ಇದರ ಅರ್ಥವೂ ಈಶ್ವರ ಮತ್ತು ಜೀವವು ಪ್ರತ್ಯೇಕ ಘಟಕಗಳಲ್ಲ. ಈಶ್ವರವೇ ಜೀವವು. ಜೀವವು ಯಾವುದೇ ಪ್ರತ್ಯೇಕ ಅಸ್ತಿತ್ವದ ಹೆಸರಲ್ಲ. ಮಾಯೆಯ ಆವರಣ – ಗುಣ, ಆಕೃತಿ, ಅಹಂಕೃತಿ, ಕರ್ಮಫಲಾದಿಗಳು ಸೇರಿ ನಾಮರೂಪ ಜಗತ್ತನ್ನು ನಿರ್ಮಿಸುತ್ತವೆ. ಇವೆಲ್ಲವೂ ಭಗವಂತನ ಸಂಸ್ಥೆಯೊಂದಿಗೆ ನೇರವಾದ ಬಂಧವನ್ನು ಹೊಂದಿಲ್ಲ. ದೇವರು ಪುರುಷವು (ಪುಲ್ಲಿಂಗ ಎಂದಲ್ಲ), ಅದರಲ್ಲಿ ಕರ್ತಾಭಾವವಿಲ್ಲ. ನಿರ್ವಿಕಾರವದು. ಗೋಚರ ಪ್ರಪಂಚವು, ಮಾಯೆಯ ಕೆಲಸ. ಬ್ರಹ್ಮಾಂಡದ ಪ್ರತಿಯೊಂದು ಅಸ್ತಿತ್ವದ ಮಧ್ಯದಲ್ಲಿ ಭಗವಂತನಿದ್ದಾನೆ. ‘ತತ್ ಸೃಷ್ಟ್ವಾ ತದೈವಾನುಪ್ರಾವಿಶತ್’ ಎಂಬ ಸಿದ್ಧಾಂತವಿದು. ಪುರುಷನು ಮಾಯಾ ವೃತ್ತದಲ್ಲಿ ಆವರಿಸಿದ್ದಾನೆ.
ಪುರುಷವು ಕೇಂದ್ರವಾಗಿದೆ, ಮಾಯೆಯು ಪರಿಧಿಯಾಗಿದೆ. ಇದನ್ನು ಪುರ ಎಂದು ಕರೆಯಲಾಗುತ್ತದೆ. ಕೇಂದ್ರಕ್ಕೆ ಪುರುಷ ಎಂಬ ಸಂಜ್ಞೆ ಇದೆ. ಕೃಷ್ಣ – ‘ನಾಹಂ ಪ್ರಕಾಶಂ ಸರ್ವಸ್ಯ ಯೋಗಮಾಯಾ ಸಮಾವೃತಃ’ – ಈ ಸುತ್ತುವರಿದ ಪುರುಷವೇ ಜೀವ. ಆವರಣದಿಂದ ಮುಕ್ತನಾಗುವ ಹಪಹಪಿಯೇ ಜೀವನದ ದ್ವಂದ್ವವಾಗುತ್ತದೆ. ಜೀವಿಯು ತನ್ನನ್ನು ತಾನು ಮುಕ್ತಗೊಳಿಸಲು ಪ್ರಯತ್ನಿಸುತ್ತದೆ, ಆದರೆ ಅದಕ್ಕೆ ತನ್ನ ಸ್ವಂತ ಸ್ವರೂಪದ ಜ್ಞಾನವಾಗಲೀ, ಕ್ಷಮತೆಯಾಗಲೀ ತಿಳಿದಿರುವುದಿಲ್ಲ. ಅಹಂಕಾರದ ವಶವಾಗಿ ಅದು ತಾನೇ ಕರ್ತನಾಗಿ ಸಂಘರ್ಷ ಮಾಡುತ್ತಿರುತ್ತದೆ. ಪ್ರಕೃತಿಯ ಸ್ವರೂಪದ, ಪ್ರಕ್ರಿಯೆಯ ಅರಿವೂ ಇಲ್ಲ. ಆದ್ದರಿಂದ, ಅದು ಯಾವ ಅವಿದ್ಯೆಯನ್ನು ಹೊತ್ತು ಹುಟ್ಟಿತ್ತೋ, ಯಾವ ಅತೃಪ್ತ ಕಾರಣಗಳಿಂದ ವಿಶ್ವಕ್ಕೆ ಮರಳಿತೋ, ಅವುಗಳ ಪ್ರಭಾವದಿಂದ ಸೋಲುತ್ತಾ, ಹೊಸ ಆಸೆಗಳ ಜಾಲಗಳನ್ನು ನೇಯುತ್ತಲೇ ಇರುತ್ತದೆ. ಅದು ಯಾವಾಗಲೂ ಯಾವುದೋ ಅಜ್ಞಾತ ಭಯದಲ್ಲಿರುತ್ತದೆ. ಕೆಲವೊಮ್ಮೆ ಈ ಭಯವು ವಿಷಾದ ಮತ್ತು ಅವಸಾದದತ್ತ (ಖಿನ್ನತೆ) ತಿರುಗುತ್ತದೆ. ಜೀವನು ಜೀವನದ ಜೂಜಾಟದಲ್ಲಿ ಸೋತು ಕುಳಿತಿರುತ್ತಾನೆ. ಕೃಷ್ಣನು ಅರ್ಜುನನನ್ನು ಈ ಸ್ಥಿತಿಯಲ್ಲಿ ನೋಡುತ್ತಾನೆ.
ಈ ಸೋತ ಯುದ್ಧದಲ್ಲಿ ಅರ್ಜುನ ಗೆದ್ದಾಗ ಮಾತ್ರ ಕೃಷ್ಣನ ಗುರಿ ಈಡೇರುತ್ತದೆ. ‘ವಿನಾಶಾಯ ಚ ದುಷ್ಕೃತಂ’ ಎಂಬುದೇ ಕೃಷ್ಣನ ಜೀವನದ ಗುರಿ. ಅರ್ಜುನನ ಮನದಲ್ಲಿ ಮೂಡಿದ ದೇವಾಸುರ ಯುದ್ಧದಲ್ಲಿ ರಾಕ್ಷಸ ಶಕ್ತಿಗಳು ಸಂಪೂರ್ಣ ರೂಪಾಂತರಗೊಂಡು ಜೀವನಕ್ಕೆ ಉಪಯೋಗವಾಗುವಂತೆ ಮಾಡಬೇಕು. ಜೀವನದ ಎಲ್ಲಾ ಸುಳ್ಳು ಮತ್ತು ಬೂಟಾಟಿಕೆಗಳಿಂದ ಸಜ್ಜನರನ್ನು ರಕ್ಷಿಸಲು- ‘ಪರಿತ್ರಾಣಾಯ ಸಾಧೂನಾಂ’. ಅದೇ ಸಮಯದಲ್ಲಿ, ಸಾಕ್ಷಿಯಾಗಿ ಉಳಿದಿರುವುದು. ಜೀವರ ಪ್ರತಿಯೊಂದು ಯುಗದಲ್ಲೂ ಈ ಸ್ಥಿತಿಯು ಮುಂದುವರಿಯುವುದರಿಂದ, ಕೃಷ್ಣನು ‘ಸಂಭವಾಮಿ ಯುಗೇ-ಯುಗೇ’ ಎಂದು ಘೋಷಿಸುತ್ತಾನೆ. ನಾನು ಪ್ರತಿ ಜೀವಿಯೊಂದಿಗೆ ಅದರ ಹೃದಯದಲ್ಲಿ ಇರುತ್ತೇನೆ. ನಾನೇ ಜೀವಿ, ನಾನೇ ಕರ್ತಾ, ನಾನೇ ಭೋಕ್ತಾ. ಮತ್ತು ಸಂಪೂರ್ಣ ಕಾಲಚಕ್ರದ ಕಾಲಕ್ಷೇಪಗಳು ಮುಗಿದ ನಂತರ, ಜೀವರನ್ನು ಮತ್ತೆ ತನ್ನಲ್ಲಿ ಲೀನಗೊಳಿಸಿಕೊಳ್ಳುವುದು.
ನಮ್ಮ ಜೀವನವನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ ಎಂದು ತೋರುತ್ತದೆ – ಆತ್ಮ ಮತ್ತು ದೇಹ. ಆತ್ಮವು ಜ್ಞಾನದ ರೂಪವಾಗಿದೆ, ದೇಹವು ಕರ್ಮದ ಪರ್ಯಾಯವಾಗಿದೆ. ಇವೆರಡೂ ತಮ್ಮದೇ ರೂಪದಲ್ಲಿ ಪೂರ್ಣವಾಗಿವೆ. ತಂದೆಯೂ ಪೂರ್ಣ, ಮಗುವೂ ಪೂರ್ಣ. ಬ್ರಹ್ಮವೂ ಪೂರ್ಣ, ವಿಶ್ವವೂ ಪೂರ್ಣ. ಕೃಷ್ಣನ ವಿಶ್ವರೂಪವಾದ ಸಾರಥಿ ರೂಪವೂ ಪೂರ್ಣ, ಅರ್ಜುನ ಸಖಾ ಭಾವವೂ ಪೂರ್ಣ. ಆತ್ಮದಲ್ಲಿಯೂ ಸಹ, ಈಶ್ವರವೇ ಜೀವದ ಸಾರಥಿ. ಸಾರಥಿ ಕೂಡ ಕರ್ಮದ ಪೂರ್ಣತೆಯ ಸೂಚಕ.
ಸಂವಹನವು ಸಹ ಒಂದು ಕರ್ಮ. ಇದನ್ನು ಪ್ರಕೃತಿಯ ನಿಯಂತ್ರಣದಲ್ಲಿ ನಿರ್ವಹಿಸಲಾಗುತ್ತದೆ. ಕೆಲವೊಮ್ಮೆ ಬಯಸಿದ ಪದಗಳು ಬಯಸಿದರೂ ಹೊರಬರಲು ಸಾಧ್ಯವಾಗುವುದಿಲ್ಲ. ‘ಇಂದ್ರಾಸನ’ದ ಜಾಗದಲ್ಲಿ ‘ನಿದ್ರಾಸನ’ ಹೊರಬರುತ್ತದೆ. ಇದನ್ನೇ ‘ಇರುವುದು’ ಎನ್ನುತ್ತಾರೆ. ಇದಕ್ಕೂ ಸಮಯ ತೆರಬೇಕಾಗುತ್ತದೆ. ಅದರ ಮೂಲ ಹಿಂದಿನ ಜನ್ಮದ ಕರ್ಮ ಅಥವಾ ಋಣಾನುಬಂಧ. ಕೆಲವೊಮ್ಮೆ ಸರಸ್ವತಿಯು ನಮ್ಮನ್ನು ಬಿಟ್ಟುಹೋಗುವಷ್ಟು ನಮ್ಮ ಸ್ವಯಂ ಕರ್ತಾಭಾವವು ಉಬ್ಬಿಕೊಳ್ಳುತ್ತದೆ. ವಚನವನ್ನು ಕರ್ಮವೆಂದು ನಂಬಿ ಮಾಡದಿರುವುದು ನಮ್ಮ ಸ್ವಭಾವವೂ ಹೌದು.
ಇದನ್ನೂ ಓದಿ | ಲೈಫ್ ಸರ್ಕಲ್ ಅಂಕಣ | ಧ್ಯಾನದ ಮೂಲಕ ಜ್ಞಾನದ ಬೆಳಕು
ಕರ್ಮಯೋಗದ ಎಲ್ಲಾ ಸಿದ್ಧಾಂತಗಳನ್ನು ಕರ್ಮ ರೂಪದ ಸಂವಹನದಲ್ಲಿ ಅನ್ವಯಿಸಬೇಕು; ಆದರೆ ಇಂದು ಸಾಮಾನ್ಯ ಪರಿಸ್ಥಿತಿಯಲ್ಲಿ ಫಲಾಸಕ್ತಿಯಿಂದ ಮುಕ್ತವಾಗುವತ್ತ ಸಂವಹನದ ಗುರಿ ಎಲ್ಲಿ ತಾನೇ ಉಳಿದಿದೆ? ಸಾಕ್ಷಿಯಾಗುವ ಉತ್ಸಾಹದಲ್ಲಿ ಯಾವುದೇ ಸಂವಹನವಿಲ್ಲ ಮತ್ತು ದೇವರಿಗೆ ಕರ್ಮವನ್ನು ಅರ್ಪಿಸುವುದು ಅತಿವಿರಳ. ಮಾತನಾಡುವಾಗ, ಕೇಳುವವನೂ ನನ್ನಂತೆ ದೇವರ ಭಾಗ ಎಂದು ಯಾರು ನೆನಪಿಸಿಕೊಳ್ಳುತ್ತಾರೆ? ಭಗವಂತನೇ ಮಾತನಾಡುವುದು, ಆತನೇ ಕೇಳುವುದು.
ಹಾಗಾದರೆ ಹೇಳುವವನ ಕರ್ತಾಭಾವವು ಎಲ್ಲಿ ಉಳಿಯುತ್ತದೆ? ಕರ್ತಾಭಾವವನ್ನು ಬಿಟ್ಟು ಸಂವಹನ ಮಾಡುವುದು ಲೋಕಸಂಗ್ರಹದ ಶ್ರೇಣಿಯಲ್ಲಿ ಬರುತ್ತದೆ. ಸಂವಹನವೇ ಅಕರ್ಮವಾಗುತ್ತದೆ. ಅಕರ್ಮವೇ ಪೂರ್ಣ ಬ್ರಹ್ಮವು. ಮಾತನಾಡುವವರು ಇಂದ್ರಿಯಗಳನ್ನು ನಿಯಂತ್ರಿಸುವ ಮೂಲಕ ಸಂವಹನ ನಡೆಸಿದರೆ, ʼಮಾ ಫಲೇಷು ಕದಾಚನ’ ಎಂಬ ಸಿದ್ಧಾಂತವನ್ನು ಅನುಸರಿಸಿದರೆ, ಕರ್ಮದ ಫಲವು ಬ್ರಹ್ಮನದ್ದೇ ಆಗುತ್ತದೆ. ಸಾಕ್ಷೀಭಾವದ ಸಂವಹನವು ತಟಸ್ಥವಾಗಿರುತ್ತದೆ. ಯಾವುದೇ ಪೂರ್ವಾಗ್ರಹವಿಲ್ಲ, ಪಕ್ಷಪಾತವಿಲ್ಲ. ಅಂತಹ ಕರ್ಮವನ್ನು ಮಾಡಲು ‘ಸಂಭವಾಮಿ ಯುಗೇ ಯುಗೇ’ ಎಂದು ಕರೆಯಲಾಗುತ್ತದೆ. ಒಂದು ಗುರಿ ‘ಪರಿತ್ರಾಣಾಯ ಸಾಧೂನಾಂ’, ಇನ್ನೊಂದು ‘ವಿನಾಶಾಯ ಚ ದುಷ್ಕೃತಾಂ’ ಮಾತ್ರ ಉಳಿದಿರುತ್ತದೆ. ಸಂವಹನವು ಖಾಸಗಿ ಅಥವಾ ಸಾಮೂಹಿಕವಾಗಿರಲಿ, ಉದ್ದೇಶ ಇದೊಂದೇ ಆಗಿರಬೇಕು. ಸಮಾಜದ ಆಸುರೀ ಭಾವಗಳ ಪರಿವರ್ತನೆ ಹಾಗೂ ಸಂತರ ಬೂಟಾಟಿಕೆಯನ್ನು ಸಮೂಲ ನಾಶಮಾಡುವುದು. ಅಂತಹ ಸಂವಹನದಲ್ಲಿ ವಾಣಿಯ ಐಶ್ವರ್ಯವು ಮಿನುಗುತ್ತದೆ. ಶ್ರೋತೃಗಳೆಡೆಗೆ ಕೇವಲ ಶ್ರದ್ಧೆ, ಭಕ್ತಿ ಹಾಗೂ ಮಾಧುರ್ಯಗಳೇ ಹರಿಯುತ್ತವೆ.
ಇದನ್ನೂ ಓದಿ | ಲೈಫ್ ಸರ್ಕಲ್ | ಕಡುಗತ್ತಲೆಯು ಸೃಷ್ಟಿ ಸ್ಥಿತಿ ಲಯಗಳ ತಾಯಿ ಹೇಗೆ?