ಸಂಪ್ರೇಷಣವು ಸಮಗ್ರ ಜೀವನದ ಆಧಾರವಾಗಿದೆ. ಜೀವನದ ಚಟುವಟಿಕೆಗಳಾದ ತಿನ್ನುವುದು, ಕುಡಿಯುವುದು, ಮಲಗುವುದು ಇತ್ಯಾದಿಗಳು ಗೌಣ. ಆತ್ಮದ ಊರ್ಧ್ವಚೇತನಾವಸ್ಥೆ ಅಥವಾ ಯಾವುದೋ ಅದೃಶ್ಯ ಶಕ್ತಿಯೇ ಸಂಪ್ರೇಷಣದ ಗುರಿಯಾಗಿ ಪರಿಣಮಿಸುವ ಸಮಯ ಬರಬಹುದು. ಸಂಪ್ರೇಷಣದ ಉದ್ದೇಶವು ತನ್ನನ್ನು ಇನ್ನೊಂದರತ್ತ ಕೊಂಡೊಯ್ಯುವುದು ಮತ್ತು ಇನ್ನೊಂದನ್ನು ತನ್ನತ್ತ ತರುವುದು. ಸಂಪ್ರೇಷಣವು ಬೆಳಕು ಅಥವಾ ಆಸ್ತಿಯಷ್ಟೇ ಮುಖ್ಯ. ಇದು ಸುಖ-ದುಃಖ ಹಂಚಿಕೊಳ್ಳಲು ಮಾತ್ರವಲ್ಲ, ಸಂವಹನಕ್ಕೂ ಆಧಾರವಾಗಿದೆ. ಆತ್ಮವು ಬುದ್ಧಿಯ ಮಾಧ್ಯಮದಿಂದ ಮನಸ್ಸನ್ನು ಅಭಿವ್ಯಕ್ತಿಗಾಗಿ ಪ್ರೇರೇಪಿಸುತ್ತದೆ. ಇದು ಪ್ರಾಣದಲ್ಲಿ ಚಲನೆಯನ್ನು ಸೃಷ್ಟಿಸುತ್ತದೆ. ತ್ವರಿತ ಉಸಿರಾಟವು ಧ್ವನಿ ಮತ್ತು ಸಂಕೇತಗಳ ಮುಖೇನ ಸಂಪ್ರೇಷಣ ನಡೆಸುತ್ತದೆ. ಆದ್ದರಿಂದ, ಭಾಷೆಯ ಸಂಬಂಧವು ಆತ್ಮ, ಮನಸ್ಸು, ಮಾತು ಮತ್ತು ಜೀವನದೊಂದಿಗೆ ಸಂಬಂಧ ಹೊಂದಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಆತ್ಮವನ್ನು ಶಬ್ದಗಳಾಗಿ ಪರಿವರ್ತಿಸುವುದು ಸಂಪ್ರೇಷಣದ ಸಂಪೂರ್ಣ ಕಾರ್ಯ ಪ್ರಣಾಳಿಕೆ.
ಆದರೆ, ದೃಶ್ಯ ಮತ್ತು ಶ್ರವಣದ ಆನಂದವು ಆತ್ಮವನ್ನು ತಲುಪಿದಾಗ, ಒಂದು ಅನುಭೂತಿ ಇರುತ್ತದೆ, ಅದೇ ಸಂಪ್ರೇಷಣ. ಆದರೆ ಇದು ಏಕಮುಖ ಸಂಪ್ರೇಷಣ ಆಗಿರಲಿಲ್ಲ. ಗಣೇಶನ ರೂಪ ನಮ್ಮ ಆತ್ಮದಲ್ಲಿ ವಿರಾಜಿಸಿದಂತೆ ಅದರ ಮುಂದೆ ನಾವು ಪ್ರಾರ್ಥನೆಯ ರೂಪದಲ್ಲಿ ಸಂಪ್ರೇಷಣ ಮಾಡುತ್ತಿದ್ದೇವೆ. ನಾವು ಏನೇ ಹೇಳಿದರೂ ನಾವೇ ಅದನ್ನು ಕೇಳಿಸಿಕೊಳ್ಳುತ್ತಿದ್ದೇವೆ. ನಮ್ಮ ಆತ್ಮವು ಅದನ್ನು ಸ್ವೀಕರಿಸುತ್ತಿದೆ. ಇದು ದ್ವಿಮುಖ ಸಂಪ್ರೇಷಣ. ಜೀವನದ ಎಲ್ಲಾ ಚಟುವಟಿಕೆಗಳು ಮುಖ್ಯವಾಗಿ ದ್ವಿಮುಖ ಅಂದರೆ ನೇರ ಸಂಪ್ರೇಷಣದ ಆಧಾರದ ಮೇಲೆ ಸಾಗುತ್ತವೆ. ಸೃಷ್ಟಿಯ ಆಧಾರವೂ ಸಹ ಸಂಪ್ರೇಷಣ; ಏಕೆಂದರೆ ವಾಕ್-ಸೃಷ್ಟಿಯೇ ಸಂಪ್ರೇಷಣದ ಮುಖ್ಯ ಆಧಾರವಾಗಿದೆ.
ಕೆಳಗಿನ ಘಟಕಗಳ ನಡುವೆ ನೇರ ಸಂಪ್ರೇಷಣ ನಡೆಯಬಹುದು:
೧. ವ್ಯಕ್ತಿ-ವ್ಯಕ್ತಿಗಳ ನಡುವೆ
೨. ಜೀವಿ-ವ್ಯಕ್ತಿಗಳ ನಡುವೆ
೩. ಜೀವಿ-ಜೀವಿಗಳ ನಡುವೆ
4. ಸಂಜ್ಞಾಹೀನ ಜೀವಿಗಳು (ಮರ) ಮತ್ತು ವ್ಯಕ್ತಿಗಳ ನಡುವೆ
5. ವ್ಯಕ್ತಿ-ದೇವರ ನಡುವೆ
6. ತನ್ನೊಂದಿಗೆ ತಾನು ಧ್ಯಾನದ ಸ್ಥಿತಿಯಲ್ಲಿ
7. ತಾಯಿ ಮತ್ತು ಗರ್ಭಸ್ಥ ಸಂತಾನದ ನಡುವೆ
8. ಶಬರಿ-ರಾಮ, ಕೇವತ್-ರಾಮ, ಮೀರಾ-ಕೃಷ್ಣ ಮುಂತಾದ ಭಕ್ತಿ ಭಾವನೆಯ ಸಂಪ್ರೇಷಣ
ನಾವು ನಮ್ಮೊಂದಿಗೆ ಸಂವಾದ ನಡೆಸುತ್ತೇವೆ. ಧ್ಯಾನ ಆತ್ಮ-ಸಾಧನೆ, ಚಿಂತನೆ-ಮನನ, ಬರವಣಿಗೆ-ರೇಖಾಚಿತ್ರ ಇತ್ಯಾದಿಗಳು ತನ್ನೊಂದಿಗಿನ ಸಂಪ್ರೇಷಣದ ಆಯಾಮಗಳಾಗಿವೆ. ಇದರಲ್ಲಿ ಒಳಗಿನಿಂದ ಹುಟ್ಟುವ ಭಾವನೆಗಳು ಹೇಗೆ ಹರಡುತ್ತವೆ ಎಂಬುದನ್ನು ಅರಿಯಲು ಸೂಕ್ಷ್ಮ ತಲಕ್ಕೆ ನಾವು ಹೋಗಬೇಕಿದೆ. ದೇಹದ ರೋಮ-ರೋಮಗಳಲ್ಲಿ ವಿಚಾರಗಳು ಹೇಗೆ ಸಂಪ್ರೇಷಿತವಾಗುತ್ತಿವೆ? ನಾನು ಮಾಡುತ್ತಿರುವ ಬರವಣಿಗೆ-ಚಿತ್ರಕಲೆ ಇತ್ಯಾದಿಗಳಿಂದ ನನ್ನ ಭಾವನೆಗಳ ಯಾತ್ರೆಯು ಮುಂದುಮುಂದಕ್ಕೆ ಸಾಗುತ್ತಿದೆ. ಅನೇಕ ಆತ್ಮಗಳವರೆಗೆ ಸಂಪ್ರೇಷಿತವಾಗುತ್ತಿವೆ.
ಪರೋಕ್ಷ-ಸಂಪ್ರೇಷಣವು ನೈಸರ್ಗಿಕ ಸತ್ವ-ರಜ-ತಮ ಮತ್ತು ಪಂಚ ಮಹಾಭೂತಗಳಿಗೆ ಸಂಬಂಧಿಸಿದ ಸಾಧನಗಳ ವಿಸ್ತಾರದ ಅನುಸಾರ ನಡೆಯುತ್ತದೆ. ಇವುಗಳ ಬದಲಾವಣೆಗಳ ಪ್ರಭಾವವು ಆತ್ಮದ ಕಾರಕಗಳ ಮೇಲೆ ಯಾವ ರೀತಿ, ಎಷ್ಟಾಗುತ್ತದೆಯೋ ಅದೇ ಸಂಪ್ರೇಷಣ ಪ್ರಕ್ರಿಯೆ.
ಪ್ರತಿಯೊಂದು ದೇಹದ ಘಟಕಗಳೆಂದರೆ ಪಂಚಮಹಾಭೂತಗಳು. ಇವು ಸದ್ದಿಲ್ಲದೆ ನೇರವಾಗಿ ಅಥವಾ ಪರೋಕ್ಷವಾಗಿ ಯಾವುದೋ ರೂಪದಲ್ಲಿ ಸಂಪ್ರೇಷಣದ ಮಾಧ್ಯಮವಾಗುತ್ತಿವೆ. ಪ್ರಕೃತಿಯೇ ಎಲ್ಲವನ್ನೂ ಸಂಪ್ರೇಷಿಸುತ್ತದೆ. ವ್ಯಕ್ತಿಯ ಆಭಾಮಂಡಲವನ್ನು (ಔರಾ) ವಿಶ್ಲೇಷಿಸುವ ಮೂಲಕ, ಪ್ರಕೃತಿಯೊಂದಿಗೆ ಸಂಪ್ರೇಷಣವಿದೆ ಎಂದು ಸಾಬೀತುಪಡಿಸುವ ಗುಂಪುಗಳಿವೆ. ಹಾಗೆಯೇ ಸಪ್ತಲೋಕಗಳೂ ಸಹ ಪರಸ್ಪರ ಸಂಪ್ರೇಷಣದಲ್ಲಿವೆ, ಪರಸ್ಪರ ರೂಪವನ್ನು ಸೃಷ್ಟಿಸುತ್ತಿವೆ ಎಂದು ಮೂರನೇ ಕಣ್ಣು ತೆರೆದು, ಲೋಕಾಲೋಕ ಪಯಣ ಮಾಡುವವರು ಹೇಳಿದ್ದಾರೆ. ಸೃಷ್ಟಿಯ ಗತಿವಿಧಿಗಳ ಒಂದು ಕ್ರಮವಿದೆ. ಅದು ಏಳು ಲೋಕಗಳಲ್ಲಿ ತನ್ನ ಪರಿಣಾಮವನ್ನು ಬೀರುತ್ತದೆ.
ಪ್ರಕೃತಿಜನ್ಯ ಸಂಪ್ರೇಷಣದಲ್ಲಿ, ಸೂರ್ಯ-ಚಂದ್ರರು ನಮ್ಮೊಂದಿಗೆ ಹೇಗೆ ಬೆಳಕು, ಶಾಖ, ಶೈತ್ಯ, ಇತ್ಯಾದಿಗಳ ಸಂಪ್ರೇಷಣೆ ನಡೆಸುತ್ತಿದ್ದಾರೆ ಎಂಬುದನ್ನು ನಾವು ನೋಡಬೇಕು. ಪ್ರಕೃತಿಯು ಪ್ರಾರಬ್ಧದ ಮಾಧ್ಯಮದಿಂದ ನಮ್ಮಿಂದ ಪೂರ್ವ ಕರ್ಮಗಳ ಫಲಗಳ ರೂಪದಲ್ಲಿ ಸಂಪ್ರೇಷಣ ನಡೆಸುತ್ತಿದೆ. ಸೂರ್ಯನು ಗ್ರಹಗಳ ಮೂಲಕ, ಚಂದ್ರನು ನಕ್ಷತ್ರಗಳ ಮೂಲಕ ಹರಡುತ್ತಾನೆ.
ಸಂಪ್ರೇಷಣವು ಜೀವನವನ್ನು ಸಾರ್ಥಕಗೊಳಿಸುತ್ತದೆ. ಇದು ವ್ಯಕ್ತಿಯ ಪರಂಪರೆ, ಅವನಿಗೆ ಪ್ರಕೃತಿಯಿತ್ತ ಉಡುಗೊರೆ. ಆಹಾರ-ಪಾನೀಯ, ವಿನೋದ-ಮನರಂಜನೆ ಇತ್ಯಾದಿಗಳೆಲ್ಲವೂ ಇದರ ಮುಂದೆ ಗೌಣ, ಸಂಪ್ರೇಷಣವಿಲ್ಲದೆ ಅವು ಸಾರಹೀನ. ಅಭಿವ್ಯಕ್ತಿಯೇ ಸಂಪ್ರೇಷಣದ ಆಧಾರವಾಗಿದೆ, ಸೃಷ್ಟಿಯ ಮೂಲವು ಅದೇ, ಹಾಗಾಗಿ ಇದುವೇ ಬ್ರಹ್ಮದ ವಿವರ್ತವಾಗಿದೆ. ಸಂಪ್ರೇಷಣವು ಒಂದು ಪ್ರೇರಕ ಶಕ್ತಿಯಾಗಿದೆ. ಸಂಪ್ರೇಷಣವು ವಿಶ್ವದಲ್ಲಿ ಲಯಕ್ಕೆ ಕಾರಣವಾಗಿದೆ. ಇದು ಜೀವನದಲ್ಲಿ ಭಕ್ತಿ ಮತ್ತು ಆತ್ಮಚಿಂತನೆಯ ಪಾತ್ರವನ್ನು ನಿರ್ಧರಿಸುತ್ತದೆ. ಇದು ಆತ್ಮದ ಹಂಬಲ. ಆದ್ದರಿಂದಲೇ ನಮ್ಮ ಪರಂಪರೆಯಲ್ಲಿ ಶಬ್ದವೇ ಬ್ರಹ್ಮ. ಬ್ರಹ್ಮಾಂಡದ ಸೃಷ್ಟಿಯ ಸಿದ್ಧಾಂತವನ್ನು ಶಬ್ದ-ಬ್ರಹ್ಮದಿಂದಲೇ ಪ್ರತಿಪಾದಿಸಲಾಗಿದೆ. ಇದರ ಪರಾ, ಪಶ್ಯಂತಿ, ಮಧ್ಯಮಾ ಮತ್ತು ವೈಖರಿ ರೂಪಗಳನ್ನು ಗಹನವಾಗಿ ವಿವೇಚಿಸಲಾಗಿದೆ. ಅರ್ಥ-ರೂಪ ಬ್ರಹ್ಮಾಂಡದ ಸೃಷ್ಟಿಯ ಪ್ರಾದುರ್ಭಾವವು ವಾಕ್ ದೇವೀ ಸರಸ್ವತಿಯಿಂದಲೇ ಆಗಿದೆ.
ಇದನ್ನೂ ಓದಿ | ಲೈಫ್ ಸರ್ಕಲ್ ಅಂಕಣ | ಧ್ಯಾನದ ಮೂಲಕ ಜ್ಞಾನದ ಬೆಳಕು
ಶಬ್ದದ ಅಭಿವ್ಯಕ್ತಿಯ ಪ್ರಕ್ರಿಯೆಯು ಸ್ವತಃ ಸ್ವತಂತ್ರ ಕ್ರಿಯೆಯಲ್ಲ. ಪದವು ಪ್ರಕಟವಾಗುವ ಮೊದಲು ಆಲೋಚನೆಗಳಲ್ಲಿ ಅಥವಾ ಬುದ್ಧಿಯಲ್ಲಿ ಬರುತ್ತದೆ. ಮನಸ್ಸಿನ ಇಚ್ಛೆಯು ಬುದ್ಧಿಯನ್ನು ಪ್ರೇರೇಪಿಸುತ್ತದೆ. ಆತ್ಮದಿಂದ ಪ್ರೇರಿತವಾಗಿ, ಮನಸ್ಸು ಬುದ್ಧಿಯ ಮಾಧ್ಯಮದಿಂದ ಶಬ್ದವನ್ನು ವ್ಯಕ್ತಪಡಿಸುತ್ತದೆ. ಆತ್ಮದ ಭಾಷೆಯು ʻಪರಾ’, ಮನಸ್ಸಿನ ಧರಾತಲವು ʻಪಶ್ಯಂತಿ’, ಬುದ್ಧಿಯದ್ದು ʻಮಧ್ಯಮಾ’. ಆದರೆ ದೇಹವು ತನ್ನನ್ನು ʻವೈಖರಿ’ಯಿಂದ ವ್ಯಕ್ತಪಡಿಸುತ್ತದೆ. ಬುದ್ಧಿಯಿಂದ ಪ್ರೇರಿತವಾದಾಗ, ಪ್ರಾಣಗಳಲ್ಲಿ ಚಲನ ಉಂಟಾಗುತ್ತದೆ, ಗಾಳಿಯು ಸ್ಫೂರ್ತವಾಗಿ ಧ್ವನಿಯು ಉತ್ಪನ್ನವಾಗುತ್ತದೆ, ಮನಸ್ಸಿನಲ್ಲಿ ಅಕ್ಷರಗಳ ಮತ್ತು ವರ್ಣಮಾಲೆಯ ಚಿಂತನೆ ಹೆಚ್ಚಾಗುತ್ತದೆ. ಇದುವೇ ಭಾಷೆ ಹುಟ್ಟುವ ಪ್ರಕ್ರಿಯೆ. ಭಾರತೀಯ ತಂತ್ರ-ಶಾಸ್ತ್ರದಲ್ಲಿ ಈ ಶಬ್ದ ಮತ್ತು ವಾಕ್ಕಿನ ಮೇಲೆ ವಿಶದ ವಿವೇಚನೆ ಲಭ್ಯವಿದೆ. ಅಷ್ಟೇ ಅಲ್ಲ, ಮಂತ್ರ-ಜಪದ ಮೂಲಕ ವಾಕ್ಕನ್ನು ಅರ್ಥವಾಗಿ (ಪದಾರ್ಥ) ಹೇಗೆ ಬದಲಾಯಿಸಬಹುದು ಮತ್ತು ಅಪೇಕ್ಷಿತ ಫಲಿತಾಂಶಗಳನ್ನು ಪಡೆಯಬಹುದು ಎಂಬುದನ್ನು ಸಹ ಹೇಳಲಾಗಿದೆ. ಎಲ್ಲಿ ಸರಸ್ವತಿ ಇದ್ದಾಳೋ ಅಲ್ಲಿ ಲಕ್ಷ್ಮಿ ಇದ್ದಾಳೆ. ಸರಸ್ವತಿ ಅಥವಾ ವಿಧ್ಯೆ ಇಲ್ಲವೆಂದಲ್ಲಿ, ಅಲ್ಲಿಗೆ ಲಕ್ಷ್ಮಿ ಹೇಗೆ ಬರುತ್ತಾಳೆ? ಹಿಂದಿನ ಕರ್ಮದಿಂದ ಬಂದರೂ ಅದು ಹೆಚ್ಚು ಕಾಲ ಉಳಿಯುವುದಿಲ್ಲ.
ʻಸಂಪ್ರೇಷಣ’ ಎಂಬ ಪದದಲ್ಲಿ ʻಪ್ರೇಷಣ’ ಎಂದರೆ ತೀವ್ರ ಇಚ್ಛೆಯೊಂದಿಗೆ ಕಳುಹಿಸುವುದು ಎಂದರ್ಥ. ʻಸಮ್’ ಪ್ರತ್ಯಯವು ಸಂಪ್ರೇಷಣದಲ್ಲಿ ಸಮತೋಲನವನ್ನು ಸೂಚಿಸುತ್ತದೆ. ಇಲ್ಲಿ ಸಮತೋಲನ ಎಂದರೆ ಯಾವುದೇ ಪಕ್ಷ ಅಥವಾ ನಿರ್ದೇಶನವಿಲ್ಲದೆ ಸಾರ್ವಜನಿಕರ ಹಿತಾಸಕ್ತಿಯಲ್ಲಿ ಕೆಲಸ ಮಾಡುವುದು. ಜನ-ಸಂಚಾರದಲ್ಲಿ ʻಪ್ರೇಷಣ’ ಮತ್ತು ʻಸಂಪ್ರೇಷಣ’ ಎಂಬ ಎರಡು ಮುಖ್ಯ ವರ್ಗಗಳಿವೆ. ಸಂಪ್ರೇಷಣ ಎಂದರೆ ಆತ್ಮದ ಮಟ್ಟದಲ್ಲಿ ಸಂವಾದವನ್ನು ಸ್ಥಾಪಿಸುವುದು, ಆದರೆ ಪ್ರೇಷಣ ಎಂದರೆ ದಿನನಿತ್ಯದ ಸಾಮಾನ್ಯ ಸಂವಾದ. ಇದು ಸೀಮಿತ ವಿಚಾರ, ಸ್ವಾರ್ಥ, ಆಕಾಂಕ್ಷೆಗಳು ಅಥವಾ ನಿರ್ಧಾರಿತ ವಿಷಯ ಅಥವಾ ಸಮಸ್ಯೆಯ ಸಂದರ್ಭದಲ್ಲಿ ವೈಯಕ್ತಿಕ ನಂಬಿಕೆಗಳನ್ನು ಒಳಗೊಂಡಿರಬಹುದು. ಈ ಎರಡೂ ಸಂದರ್ಭಗಳಲ್ಲಿ, ನಾವು ಹಾವ-ಭಾವ, ಪ್ರಯತ್ನ ಮತ್ತು ಭಾಷೆಯನ್ನು ಆಶ್ರಯಿಸುತ್ತೇವೆ. ಸಾಮಾನ್ಯವಾಗಿ ʻಸಂಪ್ರೇಷಣ’ದಲ್ಲಿ ಯಾವುದೇ ರೀತಿಯ ಆಕಾಂಕ್ಷೆ ಇರುವುದಿಲ್ಲ, ಆದರೆ ಪ್ರೇಷಣದಲ್ಲಿ ಯಾವುದಾದರೂ ರೂಪದಲ್ಲಿ ಪ್ರತಿಫಲವನ್ನು ನಿರೀಕ್ಷಿಸುತ್ತಾರೆ. ರಾಷ್ಟ್ರೀಯ ಪ್ರಾಮುಖ್ಯತೆಯ ವಿಷಯಗಳ ನಡುವೆ ಅಥವಾ ಕೆಲವು ಉನ್ನತ ಮಟ್ಟದ ಸಾಂಸ್ಕೃತಿಕ ವ್ಯಕ್ತಿಗಳ ನಡುವೆ ʻಸಂಪ್ರೇಷಣ’ವನ್ನು ಸ್ಪಷ್ಟವಾಗಿ ಕಾಣಬಹುದು. ನಮ್ಮನ್ನು ಸುತ್ತುವರೆದಿರುವ ಅದೃಶ್ಯ ಶಕ್ತಿಗೆ ನಮ್ಮ ಪವಿತ್ರ ನಿಷ್ಠೆಯು ಸಂಪ್ರೇಷಣದ ಮುಖ್ಯ ಆಧಾರವಾಗಿದೆ.
ಇದನ್ನೂ ಓದಿ | ಲೈಫ್ ಸರ್ಕಲ್ | ಕಡುಗತ್ತಲೆಯು ಸೃಷ್ಟಿ ಸ್ಥಿತಿ ಲಯಗಳ ತಾಯಿ ಹೇಗೆ?
ಈ ಚಿಂತನೆಯ ಪ್ರಕಾರ, ನಮ್ಮ ಬಯಕೆಗಳಲ್ಲಿ ಎರಡು ವಿಧ. ಒಂದು ನಮ್ಮ ನಿಯಂತ್ರಣದಲ್ಲಿಲ್ಲದ ದೇವರ ಮನಸ್ಸು. ಇನ್ನೊಂದು ನಮ್ಮ ಸ್ವಂತ ಮನಸ್ಸು; ಅದನ್ನು ನಿಯಂತ್ರಿಸಬಹುದು. ಇವುಗಳು ನಮ್ಮ ಅಲ್ಪಾವಧಿಯ ಉದ್ದೇಶಗಳು ಮತ್ತು ದೀರ್ಘಾವಧಿಯ ಗುರಿಗಳಿಗೆ ಸಂಬಂಧಿಸಿವೆ. ದೈವಿಕ ಮನಸ್ಸು ಸಂಪ್ರೇಷಣದ ಕೇಂದ್ರವಾಗಿದೆ ಆದರೆ ನಮ್ಮ ಮನಸ್ಸು ನಮ್ಮ ದೈನಂದಿನ ಸಂಪ್ರೇಷಣಗಳ ಕೇಂದ್ರವಾಗಿದೆ. ಎರಡರಲ್ಲೂ ಮಾತು ಮತ್ತು ಕಾರ್ಯಗಳ ಸಂಯೋಜನೆ ಇದೆ. ನಾವು ಐದು ಮೂಲಭೂತ ಅಂಶಗಳಿಂದ ಮಾಡಲ್ಪಟ್ಟಿರುವುದರಿಂದ, ಪ್ರತಿಯೊಂದು ಸಂಪ್ರೇಷಣದಲ್ಲಿ ಈ ೫ ತತ್ವಗಳೇ ಸಕ್ರಿಯ ರೂಪದಿಂದ ತಮ್ಮ ಪಾತ್ರವನ್ನು ನಿರ್ವಹಿಸುತ್ತಿವೆ. ಭೂಮಿಯು ವಿಷಯವಸ್ತು, ಅಗ್ನಿಯು ಭಾವನೆಗಳ ಪ್ರಬಲತೆ, ನೀರು ಅದರ ದಿಕ್ಕು ಮತ್ತು ಪ್ರವಾಹವನ್ನು ಸುನಿಶ್ಚಿತಗೊಳಿಸುತ್ತದೆ ಹಾಗೂ ವಾಯುವು ಅದರ ಗತಿ ಮತ್ತು ಗಂತವ್ಯದ ದೂರ. ಆಕಾಶವು ಸದಾ ಅದರ ಧಾರಣಕರ್ತಾ.