ಪ್ರಕೃತಿಯು ಸ್ವಾಭಾವಿಕವಾಗಿ ಸಂವಹನವನ್ನು ಪ್ರಭಾವಿಸುತ್ತದೆ. ಸತ್ವ, ರಜ ಮತ್ತು ತಮ ಸ್ವಭಾವವೇ ನಮ್ಮ ಭಾಷೆಯನ್ನು ರೂಪಿಸುತ್ತದೆ. ನಮ್ಮ ಭಾವನೆಗಳ ದಿಕ್ಕನ್ನು ನಿರ್ಧರಿಸುತ್ತದೆ. ಕೇಳುಗನೂ ತನ್ನ ಪ್ರಕೃತಿಯ ಅನುಗುಣವಾಗಿ ಅರ್ಥಗಳನ್ನು ಪಡೆಯುತ್ತಾನೆ. ಆದ್ದರಿಂದ, ಮನಸ್ಸಿನಲ್ಲಿಯೇ ದೇವರಿಂದ ಆದೇಶಗಳನ್ನು ತೆಗೆದುಕೊಂಡು ಕೆಲಸವನ್ನು ಕೈಗೆತ್ತಿಕೊಳ್ಳುವುದು ಹಲವು ರೀತಿಯಲ್ಲಿ ತಟಸ್ಥತೆಯನ್ನು ನಿರ್ಧರಿಸುತ್ತದೆ. ದೇವರ ಪ್ರತಿನಿಧಿಯಾಗುವ ಮೂಲಕ, ನೀವು ಭಕ್ತನೊಂದಿಗೆ ಮಾತನಾಡುತ್ತೀರಿ.
ಗುರು-ಶಿಷ್ಯರ ನಡುವೆ ಅಂತಹ ಸಂವಹನ ಸುಲಭ. ಅಲ್ಲಿ ಕತ್ತಲೆ ಇರುವುದಿಲ್ಲ. ಇಬ್ಬರೂ ಒಬ್ಬರಿಗೊಬ್ಬರು ಜೀವಿಸುತ್ತಾರೆ. ಶಿಷ್ಯನೊಳಗೆ ಗುರು ನೆಲೆಸಿದ್ದಾನೆ. ಅವರಲ್ಲಿ ಅಭೇದವಿದೆ. ಗುರುವು ತನ್ನ ಶಿಷ್ಯನನ್ನು ಗುರುವನ್ನಾಗಿಸಲು ಬಯಸುತ್ತಾನೆ. ಇದು ಈಶ್ವರೀಯ ಭಾವ. ತಾಯಿಯೂ ಮಗುವನ್ನು ತನ್ನ ಭಾಗವೇ ಎಂಬಂತೆ ನೋಡುತ್ತಲೇ ಪಾಲಿಸುತ್ತಾಳೆ. ಪತಿಯ ಆಧ್ಯಾತ್ಮಿಕ ಉನ್ನತಿಗಾಗಿ ಪತ್ನಿಯೂ ನಿರ್ಮಾಣದಲ್ಲಿ ತೊಡಗಿಸಿಕೊಂಡಿರುತ್ತಾಳೆ. ಶ್ರದ್ಧೆ, ಸಮರ್ಪಣೆ, ಮಮತೆ ಸಂವಹನವನ್ನು ದಿವ್ಯವಾಗಿಸುತ್ತದೆ. ಶ್ರುತಿ ಹೇಳುತ್ತದೆ “ತತ್ ತ್ವಮ್ ಅಸಿ”, ಅದು ನೀನು ಆಗಿದ್ದೀಯೆ. ಏಕೆಂದರೆ ಅದು ಎಲ್ಲರೊಳಗೂ ಇದೆ. ಅದೇ ಕರ್ತಾ, ಅದೇ ಭೋಕ್ತಾ. ಮಾಯೆ ಅದನ್ನು ಮುಚ್ಚಿ ನಿನ್ನ ಆಕೃತಿಯನ್ನಾಗಿಸಿದೆ. ನೀನೇ ಆಕೃತಿ. ಕಾಲಾನಂತರದಲ್ಲಿ ಕಣ್ಮರೆಯಾಗುತ್ತೀಯ. ಉಳಿಯುವುದು ಮತ್ತದೇ. ಬಟ್ಟೆ ಬದಲಿಸಿದಂತೆ ಮತ್ತೊಂದು ದೇಹ ಬದಲಾಯಿಸುತ್ತದೆ. ನೀವು ಯಾವುದನ್ನು ಅಸ್ತಿತ್ವವಾಗಿ ನೋಡುತ್ತಿರುವಿರೋ ಅದು ಗೋಚರವಾದ ದೇಹ ಮಾತ್ರ. “ನಾಹಂ ಪ್ರಕಾಶಃ ಸರ್ವಸ್ಯ ಯೋಗಮಯಾ ಸಮಾವೃತಃ” ಎಂದು ಗೀತೆಯಲ್ಲಿ ಕೃಷ್ಣನಿಂದ ಅಂಗೀಕರಿಸಲ್ಪಟ್ಟಿದೆ. ಮಾಯೆಯ ಮುಸುಕಿನಿಂದಾಗಿ ಆತ್ಮವು ಗೋಚರಿಸುವುದಿಲ್ಲ. ನಮ್ಮ ಜೀವನವು ಆತ್ಮದ ಅಭಿವ್ಯಕ್ತಿಯಾಗಿದೆ. ಈ ವಿಷಯ ನಮ್ಮ ಗಮನಕ್ಕೆ ಬರುವುದು ಅಪರೂಪ. ನಾವು ನಮ್ಮನ್ನು ದೇಹವೆಂದು ಪರಿಗಣಿಸಿ ಬದುಕುತ್ತೇವೆ. ಶ್ರುತಿ ಜ್ಞಾಪಿಸುತ್ತಿರುತ್ತದೆ “ತತ್ ತ್ವಮ್ ಅಸಿ”. ಕೃಷ್ಣನು ಅರ್ಜುನನನ್ನು ಮತ್ತೆ ಮತ್ತೆ ನೆನಪಿಸುತ್ತಿದ್ದಾನೆ. ಜೀವನಕ್ಕೆ ಮೊದಲ ಅವಶ್ಯಕತೆಯೆಂದರೆ ನಾವು ನಮ್ಮ ನೈಸರ್ಗಿಕ ಸ್ವಭಾವವನ್ನು ತಿಳಿದುಕೊಳ್ಳುವುದು.
ಆತ್ಮವನ್ನು ತಿಳಿದುಕೊಳ್ಳಲು ಸಂವಹನವು ಸುಲಭವಾದ ಮಾರ್ಗವಾಗಿದೆ. ಅರ್ಥ (ದೇಹ) ಮತ್ತು ಮಾತು ಎಂಬ ಎರಡು ಸಂವಹನ ವಿಧಾನಗಳಿವೆ. ಎರಡೂ ಒಟ್ಟಿಗೆ ಕೆಲಸ ಮಾಡುತ್ತವೆ. ದೈಹಿಕ ಮಟ್ಟದಲ್ಲಿ, ದೇಹವು ಮಾತನಾಡುತ್ತದೆ ಮತ್ತು ಕೇಳಿಸಿಕೊಳ್ಳುತ್ತದೆ. ಪದಗಳು ಸಂಭಾಷಣೆಯಾಗುತ್ತವೆ. ಸೂಕ್ಷ್ಮ ಮಟ್ಟದಲ್ಲಿ, ಅರ್ಥವು ಪದದಲ್ಲಿಯೇ ಇರುತ್ತದೆ. ಮಡಕೆ, ಮನೆ, ಮರ ಇತ್ಯಾದಿಗಳು ಪದಗಳೂ ಹೌದು, ಅರ್ಥಗಳೂ ಹೌದು. ವೇದದಲ್ಲಿ, ಪ್ರತಿಯೊಂದು ಪದದಲ್ಲೂ ಅದರ ಆಳವಾದ ಅರ್ಥಗಳೂ ಅಡಗಿವೆ.
ಕಾರಣಶರೀರ ಕೇವಲ ಸ್ಪಂದನವಾಗಿದೆ. ಪ್ರಸರಣ ಮತ್ತು ಸಂಕೋಚನ ಅದರ ಸ್ವಭಾವ. ಇದೇ ಅಗ್ನಿ-ಸೋಮದ ಮೂಲ ಪ್ರಕೃತಿ. ಇದೇ ಮೂಲದಲ್ಲಿ ಪ್ರಾಣವಿದೆ. ಅಗ್ನಿಯು ಶಕ್ತಿ, ಸೋಮವು ವಸ್ತು. ಅಗ್ನಿಯು ಸ್ವತಃ ಮೇಲಕ್ಕೆ ಹೋಗುತ್ತದೆ ಮತ್ತು ಸೋಮದ ರೂಪವನ್ನು ಪಡೆದುಕೊಳ್ಳುತ್ತದೆ, ಕೆಳಗೆ ಹರಿಯಲು ಪ್ರಾರಂಭಿಸುತ್ತದೆ. ಅದು ಕೆಳಗೆ ಬರಬರುತ್ತಾ, ಅಗ್ನಿಯ ರೂಪವನ್ನು ಪಡೆಯುತ್ತದೆ. ಗಾಳಿಯೊಂದಿಗೆ ಸಂಘರ್ಷವಿರುತ್ತದೆ. ಮೂಲತಃ ಎರಡೂ ಒಂದೇ. ಇವೆರಡೂ ಪರಮೇಷ್ಠೀ ಲೋಕದಲ್ಲಿ ಭೃಗು-ಅಂಗಿರ ರೂಪ ತಾಳುತ್ತವೆ. ಭೃಗುವು ಸೋಮ, ಅಂಗಿರವು ಅಗ್ನಿ. ಎರಡರಲ್ಲಿ ಎರಡೂ ವಾಸಿಸುತ್ತವೆ. ಸೋಮದ ಪ್ರಮಾಣವು ಭೃಗುವಿನಲ್ಲಿ ಮತ್ತು ಅಗ್ನಿಯ ಪ್ರಮಾಣವು ಅಂಗಿರಾದಲ್ಲಿದೆ. ಸೋಮದಿಂದ ವಸ್ತು ಸೃಷ್ಟಿ ಮುಂದುವರಿಯುತ್ತದೆ ಮತ್ತು ಅಂಗಿರಾದಿಂದ ಶಬ್ದ-ಸೃಷ್ಟಿ. ಎರಡೂ ಮೂಲದಲ್ಲಿ ಒಂದೇ ಆಗಿವೆ. ವಾಕ್ಕಿನಲ್ಲಿ ಚಲನೆಯಿದೆ, ವಸ್ತುವಿಗೆ ಚಲನೆಯಿಲ್ಲ. ಆದರೆ ಪ್ರತಿಯೊಂದು ವಸ್ತುವಿನ ರಚನೆಯು ಅದರಲ್ಲಿ ಎರಡೂ ಭಾಗಗಳು ವಾಸಿಸುವಂತಿದೆ. ಒಳಗಡೆ ಸ್ಥಿತಿ, ಹೊರಗಡೆ ಗತಿ.
ಉದಾಹರಣೆಗೆ ‘ಹೃದಯ’ ಎಂಬ ಪದವನ್ನು ತೆಗೆದುಕೊಳ್ಳಿ. ಇದರಲ್ಲಿ ಮೊದಲ ಅಕ್ಷರವಾದ ʻಹೃ’ ಎಂಬುದು ʻಹೃಞ್ ಹರಣೇ’ ಧಾತುವಿನಿಂದ ರೂಪುಗೊಂಡಿದೆ. ʻದ’ ಎಂಬುದು ʻದೋ ಅವಖಂಡನೇ’ ಮತ್ತು ಮೂರನೇ ʻಯಮ್’ ಎಂಬುದು ನಿಯಾಮಕ ತತ್ವ. ಆದ್ದರಿಂದ, ಹೃದಯದ ಅರ್ಥವು ಆಹರಣ, ಖಂಡನ, ನಿಯಮನ. ವಸ್ತುವನ್ನು ಸಂಗ್ರಹಿಸುವ ಶಕ್ತಿ ʻಹೃ’. ಬಂದ ದ್ರವ್ಯಗಳನ್ನು ಹೊರಹಾಕುವ ಶಕ್ತಿಯೇ ʻದ’. ಎರಡನ್ನೂ ನಿಯಂತ್ರಿಸುವ, ಅದರ ಆಧಾರದ ಮೇಲೆ ವಿನಿಮಯ-ಪ್ರಸರಣ ಪ್ರಕ್ರಿಯೆಯನ್ನು ಆಯೋಜಿಸುವುದೇ ʻಯಮ್’. ದೇಹದಲ್ಲಿರುವ ಪ್ರಾಣವು ʻದ’, ಅಪಾನವು ʻಹೃ’ ಮತ್ತು ವ್ಯಾನವು ʻಯಮ್’. ಇದು ಹೃದಯ.
ಇದನ್ನೂ ಓದಿ | ಲೈಫ್ ಸರ್ಕಲ್ ಅಂಕಣ | ಧ್ಯಾನದ ಮೂಲಕ ಜ್ಞಾನದ ಬೆಳಕು
ಅಕ್ಷರ ಪುರುಷದ ಮೊದಲ ಮೂರು ಕಲೆಗಳಾದ ಬ್ರಹ್ಮ, ವಿಷ್ಣು, ಶಿವರೇ (ಇಂದ್ರ) ಹೃದಯದ ನಿಯಾಮಕ ಪ್ರಾಣಗಳು. ಇವುಗಳನ್ನು ಕ್ರಮವಾಗಿ ಸ್ಥಿತಿ, ಆಗತಿ, ಗತಿ ಎಂದು ಕರೆಯಲಾಗುತ್ತದೆ. ಒಂದೇ ತತ್ವದ ಮೂರು ರೂಪಗಳೇ ಮೂರು ದೇವತೆಗಳು- “ಏಕೋ ಮೂರ್ತಿಸ್ತ್ರಯೋಃ ದೇವಾ ಬ್ರಹ್ಮ-ವಿಷ್ಣು-ಮಹೇಶ್ವರಃ”. ಒಂದೇ ಗತಿ, ಒಂದೇ ಪ್ರಾಣತತ್ವ. ಅದೇ ಮೂರೂ ಭಾವಗಳಲ್ಲಿ ಬದಲಾಗುತ್ತಿದೆ.
ಯಾವುದೇ ಆಕಾರದ ನಿರ್ಮಾಣದಲ್ಲಿ ಎರಡು ಘಟಕಗಳು ರೂಪುಗೊಳ್ಳುತ್ತವೆ. ಒಂದು ಕೇಂದ್ರ, ಇನ್ನೊಂದು ಸುತ್ತಳತೆ. ಕೇಂದ್ರವನ್ನು ʻಋಕ್’, ಪರಿಧಿಯನ್ನು ʻಸಾಮ’ ಎನ್ನಲಾಗಿದೆ. ಮಧ್ಯದ ಪ್ರದೇಶವು ʻಯಜುಃ’. ಇದು ʻಯತ್’ ಮತ್ತು ʻಜೂ’ ವ್ಯತ್ಯಾಸದೊಂದಿಗೆ ಗತಿ ಮತ್ತು ಸ್ಥಿತಿ ಆಗಿದೆ. ಶಬ್ದವು ಗತಿ, ಸ್ಫೋಟವು ಸ್ಥಿತಿ. ಸಂವಹನವು ಗತಿಯ ಸೂಚಕವಾಗಿದೆ, ವಿಚಾರವು ಸ್ಥಿತಿಯಾಗಿದೆ. ಇದರಾಚೆಯ ಚಿಂತನೆಯಲ್ಲಿ ಪಶ್ಯಂತಿ ಗತಿಯಾದರೆ, ಪರಾ ಎಂಬುದೇ ಸ್ಥಿತಿ. ಅವ್ಯಯ ಮನದಲ್ಲಿ ಮೂಡುವ ಬಯಕೆಯು ಅಕ್ಷರ ಪ್ರಾಣಗಳಿಂದ ಗತಿ ಪಡೆದು, ಮಧ್ಯಮಾ ಮತ್ತು ವೈಖರಿಯಿಂದ ವ್ಯಕ್ತವಾಗುತ್ತದೆ. ಭಕ್ತಿ ಕ್ಷೇತ್ರದಲ್ಲಿ ವೈಖರಿಯಲ್ಲಿ ಪ್ರಾರಂಭವಾದ ಪ್ರಾರ್ಥನೆಯು ಕ್ರಮೇಣ ಮೌನವನ್ನು ಪಡೆದುಕೊಳ್ಳುತ್ತದೆ. ಕೊನೆಯಲ್ಲಿ ಅದು ಪರಾದಲ್ಲಿ ಲೀನವಾಗುತ್ತದೆ.
ಜೀವನದಲ್ಲಿ ಯಾವುದರೂ ಆತ್ಮವನ್ನು ತಲುಪಿದಾಗ, ಆತ್ಮವು ಏನನ್ನಾದರೂ ಹೇಳಲು ಬಯಸುತ್ತದೆ. ಇದಕ್ಕಾಗಿ ಶಾಬ್ದಿಕತೆಯು ಅನಿವಾರ್ಯವಲ್ಲ. ಮನುಷ್ಯನ ಹೊರಗೆ ಶಬ್ದವಿಲ್ಲ. ಹೆಚ್ಚಿನ ಜೀವಿಗಳಿಗೆ ಧ್ವನಿಯೂ ಇರುವುದಿಲ್ಲ. ಆದರೂ ಆತ್ಮವಿದೆ. ಅಭಿವ್ಯಕ್ತಿ ಇದೆ, ಸಂಪ್ರೇಷಣ ಇದೆ. ಅದು ಯಾರಿಗಾದರೂ ತಲುಪುತ್ತದೆಯೋ ಇಲ್ಲವೋ ಎಂಬುದು ಬೇರೆ ವಿಚಾರ. ಸೂರ್ಯನ ಉದಯವೂ ಒಂದು ಪ್ರಮುಖ ಸಂಪ್ರೇಷಣ. ಇಡೀ ಜಗತ್ತನ್ನು ಕೆಲಸಕ್ಕೆ ಹಚ್ಚಲು ಪ್ರೇರೇಪಿಸುತ್ತದೆ. ಹೂವು ಅರಳುವುದು, ಸುಗಂಧ ಪ್ರಸರಣೆ, ಮುಂಜಾನೆ ಕಳೆದು ಹೋಗುವುದು, ಚಿಟ್ಟೆಗಳ ಕುಣಿತ ಎಲ್ಲವೂ ಸಂಪ್ರೇಷಣ. ಇಷ್ಟೇ ಅಲ್ಲ, ಮರಗಳು ಮತ್ತು ಸಸ್ಯಗಳು ತಮ್ಮ ಸಂತೋಷ ಮತ್ತು ದುಃಖದ ಭಾವನೆಗಳನ್ನು ರವಾನಿಸುತ್ತಲೇ ಇರುತ್ತವೆ. ಮರವನ್ನು ಕಡಿದಾಗ ಅದರ ಕೋಪವನ್ನು ಅಳೆಯಬಹುದು. ಅಗ್ನಿ+ಧ್ವನಿಯ ಎಷ್ಟು ಪ್ರಯೋಗಗಳು ಆಗಿವೆಯೋ ಅಷ್ಟೇ ಪ್ರಯೋಗಗಳು ಜಲ+ಧ್ವನಿಯಲ್ಲೂ ಆಗಿಹೋಗಿವೆ. ಮಂತ್ರ+ಧ್ವನಿ ಬಳಕೆಗೆ ಭಾರತದಲ್ಲಿ ಮಹತ್ತರ ವಿಧಾನವಿದೆ.
ಇದನ್ನೂ ಓದಿ | ಲೈಫ್ ಸರ್ಕಲ್ | ಕಡುಗತ್ತಲೆಯು ಸೃಷ್ಟಿ ಸ್ಥಿತಿ ಲಯಗಳ ತಾಯಿ ಹೇಗೆ?
ಸ್ಥೂಲಾರ್ಥದಲ್ಲಿ ಸಂವಹನ/ಸಂಪ್ರೇಷಣ ಎಂದರೆ ಹೇಳಿದ ವಿಷಯವು ಅದೇ ಉದ್ದೇಶದಿಂದ ಇನ್ನೊಬ್ಬ ವ್ಯಕ್ತಿಯನ್ನು ತಲುಪುವುದು. ಇದು ಇಬ್ಬರು ವ್ಯಕ್ತಿಗಳ ನಡುವಿನ ಉಚ್ಚಾರಣಾ ಕೌಶಲ್ಯಗಳನ್ನು ಒಳಗೊಂಡ ವ್ಯಾಪಾರ-ವಹಿವಾಟು. ಸೂಕ್ಷ್ಮಾರ್ಥದಲ್ಲಿ ಸಂವಹನದ ಅರ್ಥವು ಗಹನ ಮತ್ತು ವ್ಯಾಪಕವಾಗಿದೆ. ಸಂವಹನವು ಆತ್ಮವನ್ನು ಆತ್ಮದೊಂದಿಗೆ ಸಂಪರ್ಕಿಸುವ ಭಾವನಾತ್ಮಕ ಕಾರ್ಯ-ವ್ಯವಹಾರವಾಗಿದೆ. ಅಂದರೆ, ಸಂವಹನವು ಉನ್ನತ ಆಧ್ಯಾತ್ಮಿಕ ಪ್ರಕ್ರಿಯೆಯಾಗಿದ್ದು ಅದು ಯಾವಾಗಲೂ ಆತ್ಮ-ಆತ್ಮಗಳ ನಡುವೆ ನಡೆಯುತ್ತದೆ. ಮಿಕ್ಕೆಲ್ಲವು ಮಾಧ್ಯಮ ಅಥವಾ ಉಪಕರಣಗಳು. ಉಪಕರಣಗಳ ನಡುವೆ ಸಂವಹನವನ್ನು ಎಂದಿಗೂ ಸ್ಥಾಪಿಸಲಾಗುವುದಿಲ್ಲ. ಆತ್ಮದಿಂದ ಆತ್ಮಕ್ಕೆ ಸಂವಹನವಿದ್ದರೆ, ಸ್ವೀಕರಿಸುವವರು ಸ್ವತಃ ಸಂಪ್ರೇಷಣವಾಗಿ ರೂಪಾಂತರಗೊಳ್ಳುತ್ತಾರೆ. ಇಬ್ಬರೂ ಒಂದಾಗುತ್ತಾರೆ. ಇದು ಭಾರತೀಯ ಗುರು-ಶಿಷ್ಯ ಪರಂಪರೆಯ ಆಧಾರಭೂತ ಸಿದ್ಧಾಂತವೂ ಆಗಿದೆ. ಎರಡು ಜೀವಿಗಳು ಒಂದಾದಾಗ ಅದೇ ಪರಾಕಾಷ್ಠೆಯು ಪ್ರೇಮದಲ್ಲಿ ಸಂಭವಿಸುತ್ತದೆ. ಅಂದರೆ ಕಳುಹಿಸುವವರು ಮತ್ತು ಸ್ವೀಕರಿಸುವವರು ಒಂದಾಗುತ್ತಾರೆ. ನಾವು ಈ ಪ್ರಕ್ರಿಯೆಯನ್ನು ಸಂಪ್ರೇಷಣದ ಸಾರ್ವಭೌಮೀಕರಣ ಎಂದು ಕರೆಯಬಹುದು. ಇದು ಎಲ್ಲಾ ಭಾಷೆಗಳು, ಗಡಿಗಳು, ರಾಜಕೀಯ, ದೇಶಕಾಲ ಇತ್ಯಾದಿಗಳಿಗಿಂತ ಮೇಲಿರುತ್ತದೆ.
ವ್ಯಕ್ತಿಯ ಅಹಂಕಾರವು ಅವರ ಆತ್ಮವನ್ನು ಆವರಿಸುತ್ತದೆ ಮತ್ತು ಆತ್ಮವನ್ನು ತಲುಪಲು ಸಂವಹನವನ್ನು ಅನುಮತಿಸುವುದಿಲ್ಲ. ಬುದ್ಧಿವಂತಿಕೆಯು ಮೇಲುಗೈ ಸಾಧಿಸುತ್ತದೆ. ತರ್ಕ ಮತ್ತು ವಿವಾದಗಳು ಹೇರಳವಾಗುತ್ತವೆ. ಸಂವಹನದ ಮೂಲ ಆಧಾರವೆಂದರೆ ನಾವು ಸಂವಹನದ ಭಾಗವಾಗಿ ಕಾರ್ಯನಿರ್ವಹಿಸದಿದ್ದರೆ, ಸಂವಹನ ಸಾಧ್ಯವಿಲ್ಲ. ಪ್ರತಿಯೊಬ್ಬರೂ ಸಂವಹನದ ಗುರಿಯ ಹಂತದಲ್ಲಿ ತಮ್ಮ ಉಪಸ್ಥಿತಿಯನ್ನು ನೋಡುವುದು ಮತ್ತು ಅನುಭವಿಸುವುದು ಬಹಳ ಮುಖ್ಯ. ಸಂವಹನವು ಕೇವಲ ಕಲೆ, ಕರಕುಶಲ ಅಥವಾ ದೈಹಿಕ ಶ್ರಮದ ಕೆಲಸವಲ್ಲ. ಇದೊಂದು ಧರ್ಮ. ಧರ್ಮ ಎಂದರೇನು? ಎಂಬ ಪ್ರಶ್ನೆ ಉದ್ಭವಿಸುತ್ತದೆ. ಸರಳವಾಗಿ ಹೇಳುವುದಾದರೆ, ಇದು ಜೀವನ ವಿಧಾನ. ಅದು ಸಂಪೂರ್ಣ ನೈತಿಕತೆ ಮತ್ತು ನೀತಿ ಸಂಹಿತೆಯನ್ನು ಒಪ್ಪಿಕೊಳ್ಳುವ, ಸ್ವಯಂಪ್ರೇರಣೆಯಿಂದ ಅಳವಡಿಸಿಕೊಂಡ, ಚೆನ್ನಾಗಿ ಯೋಚಿಸಿದ, ಉತ್ತಮವಾಗಿ ಯೋಜಿತ ಜೀವನ ವಿಧಾನ. ಸಂವಹನದಲ್ಲಿ ಅದು ಸ್ವೀಕರಿಸುವವರ ಆತ್ಮದ ಸಮತಲವನ್ನು ತಲುಪುತ್ತಿದೆಯೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಅವಶ್ಯಕ. ಆತ್ಮವು ಸಂವಹನದ ಅಂತಿಮ ತಾಣವಾಗಿದೆ. ನಮ್ಮ ಸಂವಹನವು ಕೊನೆಯ ಹಂತವನ್ನು ತಲುಪಲು, ಸರಿಯಾದ ಹರಿವು ಮತ್ತು ತೀವ್ರತೆಯನ್ನು ಹೊಂದಿರುವುದು ಅವಶ್ಯಕ. ಈ ಹರಿವು ಮತ್ತು ತೀವ್ರತೆಯು ಶ್ರೀಕೃಷ್ಣನ ಸಂದೇಶದಲ್ಲಿ ಇಲ್ಲದಿದ್ದರೆ, ಅರ್ಜುನನು ಯುದ್ಧಕ್ಕೆ ಸಿದ್ಧನಾಗಿರುತ್ತಿದ್ದನೇ? ದೈವಾರಾಧನೆಯಲ್ಲಿ ಕೋಲ ಕಟ್ಟುವವರು ಸಂಪ್ರೇಷಣದ ತುರೀಯ ಹಂತದಲ್ಲಿ ದೈವದ ಸ್ಪಂದನೆಯಲ್ಲಿ ಸಮ್ಮಿಳಿತವಾಗದಿದ್ದರೆ ನೆರೆದ ಜನರಿಗೆ ದೈವದ ನುಡಿ ದೊರಕಿ ಅದು ಸತ್ಯವಾಗುತ್ತಿತ್ತೇ? ದೈವದ ನುಡಿ ಸತ್ಯವಾಗುತ್ತಾ ಬಂದದ್ದಕ್ಕೆ ತಾನೇ ಈ ಪದ್ಧತಿಯೂ ಯಾವುದೋ ಕಾಲದಿಂದ ಇಂದಿನವರೆಗೂ ಪ್ರಸ್ತುತವಾಗಿದೆ.
ಇದನ್ನೂ ಓದಿ | ಲೈಫ್ ಸರ್ಕಲ್ ಅಂಕಣ | ಕತ್ತಲೆಗೆ ಕರೆದೊಯ್ಯುವುದೇ ಬೆಳಕು?
ನಿಜವಾದ ಮತ್ತು ಪರಿಣಾಮಕಾರಿ ಸಂವಹನವೆಂದರೆ ದೇಹ ಮತ್ತು ಇಂದ್ರಿಯಗಳ ಸಮತಲದಿಂದ ಶಕ್ತಿಯ ಸಮತಲಕ್ಕೆ ಪ್ರಯಾಣ. ನಾವೆಲ್ಲರೂ ಈ ಶಕ್ತಿಗಳ ವಾಹಕರು. ದೇಹದ ಹೊರಗೆ ಪ್ರಯಾಣಿಸಲು, ಶಕ್ತಿಗಳು ಸ್ಥೂಲ ಉಪಾಯಗಳನ್ನು ಅವಲಂಬಿಸಬೇಕಾಗುತ್ತದೆ. ಈ ರೀತಿಯಾಗಿ ಈ ಶಕ್ತಿಗಳು ಮೊದಲು ಸಾಧನಗಳಾಗಿ ಪರಿವರ್ತಿತವಾಗಿ ನಂತರ ಶಕ್ತಿಯಾಗಿ ರೂಪಾಂತರಗೊಳ್ಳುತ್ತದೆ. ಈ ಶಕ್ತಿಗಳು ಭೂಮಿಯ ಉನ್ನತ ಮಟ್ಟದ ಶಕ್ತಿಗಳೊಂದಿಗೆ ಸಂಬಂಧ ಹೊಂದಿವೆ ಮತ್ತು ನಮ್ಮ ಅಭಿವೃದ್ಧಿಯ ಪ್ರಕ್ರಿಯೆಯ ಆಧಾರವಾಗಿದೆ. ನಮ್ಮ ಈ ಶಕ್ತಿಗಳು (ಊರ್ಜೆಗಳು) ಒಂದೋ ವಸ್ತುವಾಗಿ ಪರಿವರ್ತನೆಯಾಗುತ್ತವೆ ಅಥವಾ ಸಂಗ್ರಹಿಸಲ್ಪಡುತ್ತವೆ. ಎಂದಿಗೂ ನಾಶವಾಗುವುದಿಲ್ಲ. ಸರಿಯಾದ ಸಮಯದಲ್ಲಿ, ಅವರು ನಮ್ಮ ಕನಸುಗಳೊಂದಿಗೆ ಸಂಪರ್ಕ ಹೊಂದುತ್ತವೆ, ಆಲೋಚನೆಗಳು ಸ್ಫೂರ್ತಿ ಪಡೆಯುತ್ತವೆ ಮತ್ತು ನಾವು ಸಕ್ರಿಯರಾಗುತ್ತೇವೆ. ನಮ್ಮ ಈ ಶಕ್ತಿಗಳು ವಿವಿಧ ಧರಾತಲಗಳಲ್ಲಿ ವಿಭಿನ್ನ ಗಾತ್ರಗಳು ಮತ್ತು ಆವರ್ತನಗಳನ್ನು ಹೊಂದಿವೆ. ನಮ್ಮ ಸಂವಹನವು ಯಾವುದೇ ಆಕಾರ ಅಥವಾ ಆವರ್ತನವನ್ನು ತೆಗೆದುಕೊಳ್ಳುತ್ತದೆಯೋ, ಅದು ಅದೇ ಸಮತಲದಲ್ಲಿ ಗ್ರಹಣಕರ್ತನನ್ನು ತಲುಪಿ ಒಂದಾಗುತ್ತದೆ. ಪ್ರಜ್ಞೆಯೊಂದಿಗೆ ಪ್ರಜ್ಞೆಯ, ಭಾವನೆಯೊಂದಿಗೆ ಭಾವನೆಯ ಮತ್ತು ಆತ್ಮದೊಂದಿಗೆ ಆತ್ಮದ ಸಂಪ್ರೇಷಣವೇ ಇಲ್ಲಿನ ಸ್ವಾರಸ್ಯ. ಸಂವಹನದಲ್ಲಿ ಆತ್ಮ-ತತ್ವವು ಇಲ್ಲದಿದ್ದರೆ, ಅದು ಇನ್ನೊಂದು ಆತ್ಮವನ್ನು ತಲುಪಲು ಸಾಧ್ಯವಿಲ್ಲ.