Site icon Vistara News

ಲೈಫ್‌ ಸರ್ಕಲ್‌ ಅಂಕಣ | ಒಳಹೊರಗಿರುವ ಎಲ್ಲರೊಂದಿಗೆ ಮಾತನಾಡುವ ಕಲೆ

life circle

ದೈವಿಕ ಮನಸ್ಸಿನಲ್ಲಿ ಪಂಚಭೂತಗಳು ಬಹಳ ಸೂಕ್ಷ್ಮ ಮತ್ತು ಅದೃಶ್ಯ ಧರಾತಲದಲ್ಲಿ ಇರುತ್ತವೆ. ಇವುಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ. ನಾವು ನಮ್ಮ ಹಣೆಬರಹ/ವಿಧಿಯ ನಿಯಂತ್ರಕರಾಗಿರುವುದರಿಂದ, ಆಸೆಗಳನ್ನು ಸ್ವೀಕಾರ ಅಥವಾ ತಿರಸ್ಕಾರ ಮಾಡಲಾಗುತ್ತದೆ. ನಮ್ಮ ಬಿತ್ತನೆಗೆ ಅನುಗುಣವಾಗಿ ಕೊಯ್ಲು ಇರುತ್ತದೆ. ನಮ್ಮ ಜೀವನದ ಯಾವುದಾದರೂ ಒಂದು ಗುರಿಯನ್ನು ನಿಗದಿಪಡಿಸಿದರೆ, ಈ ಎರಡೂ ಮನಸ್ಸುಗಳಿಂದ ಒಂದೇ ಸಮಯದಲ್ಲಿ ಆಸೆಗಳು ಉದ್ಭವಿಸಲು ಪ್ರಾರಂಭಿಸುತ್ತವೆ ಮತ್ತು ಅಂತಿಮವಾಗಿ ಒಂದಾಗುತ್ತವೆ. ಬಯಕೆ, ಕ್ರಿಯೆ ಮತ್ತು ಪ್ರಯತ್ನಗಳು ಸಂಪ್ರೇಷಣದಲ್ಲಿ ಒಟ್ಟಿಗೆ ಜೋಡಿಸಲ್ಪಟ್ಟಿರುತ್ತವೆ. ಇಲ್ಲಿ ಒಂಟಿತನವಿಲ್ಲ. ಆದ್ದರಿಂದ, ಸಂಪ್ರೇಷಣವು ಮನ, ಪ್ರಾಣ, ಮತ್ತು ವಾಕ್ಕಿನ ಸಮ್ಮಿಲಿತ ರೂಪವಾಗಿದೆ. ಇದು ವ್ಯಕ್ತಿಯ ಸಂಪೂರ್ಣ ವ್ಯಕ್ತಿತ್ವವನ್ನು ಒಳಗೊಂಡಿರುತ್ತದೆ.

ಅಂದರೆ, ಅವರ ದೇಹ, ಆಲೋಚನೆಗಳು, ಭಾವನೆಗಳು, ಅನುಭೂತಿಗಳು ಮತ್ತು ಅವರ ಆತ್ಮ. ಆತ್ಮೀಯ ಧರಾತಲವಿಲ್ಲದೆ ಸಂಪ್ರೇಷಣವು ನಡೆಯುವುದಿಲ್ಲ. ಭಾವನೆಗಳು ಮತ್ತು ಆಸೆಗಳನ್ನು ವ್ಯಕ್ತಪಡಿಸುವುದು ಸಂಪ್ರೇಷಣದ ಮೂಲಕ. ಮನಸ್ಸು ಅದರ ಅವಿಭಾಜ್ಯ ಅಂಗವಾಗಿದೆ. ಇಂದು ಟಿ.ವಿ, ರೇಡಿಯೋ, ಜಾಲತಾಣಗಳ ದುರ್ಬಳಕೆಯಿಂದ ಸಂಪ್ರೇಷಣವು ಹಾಳಾಗಿದೆ. ಭಾಷೆ ಮಾತ್ರ ಉಳಿದಿದೆ, ವ್ಯಕ್ತಿ ಕಣ್ಮರೆಯಾಗಿದ್ದಾನೆ. ಬರಹಗಾರರ ಮತ್ತು ಓದುಗರ ನಡುವೆ ಪರಕೀಯತೆಯ ಗೋಡೆಯನ್ನು ರಚಿಸಲಾಗಿದೆ. ಪ್ರಶ್ನೆ ಉದ್ಭವಿಸುತ್ತದೆ, ಯಾರು ಯಾರಿಗಾಗಿ ಸಂವಹನೆ ನಡೆಸುತ್ತಿದ್ದಾರೆ? ವ್ಯಕ್ತಿಗಳು ಪ್ರತ್ಯಕ್ಷವಾಗಿ ಎಲ್ಲೂ ಕಾಣುವುದಿಲ್ಲ.

ಸಂವಹನದ ಮೂಲ ಶಕ್ತಿ ವ್ಯಕ್ತಿ. ಇದು ಮಾನವೀಯ ಧರಾತಲದಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಅದರ ಪರಿಣಾಮಕಾರಿತ್ವವನ್ನು ಅದರ ಮೇಲಿನ ಪ್ರತಿಕ್ರಿಯೆಗಳಿಂದ ಪರೀಕ್ಷಿಸಲಾಗುತ್ತದೆ. ಇಂದು ನಾವು ವಿದ್ಯುತ್ ಅಲೆಗಳ ಮೂಲಕ ಶಬ್ದವನ್ನು ಕೇಳಿಸಿಕೊಳ್ಳುತ್ತೇವೆ. ಕೇಳುಗರ ಅಥವಾ ಓದುವವರ ಪ್ರತಿಕ್ರಿಯೆಗಳು ವಾಚಕರಿಗೆ ಅಥವಾ ಬರಹಗಾರರಿಗೆ ತಲುಪುವುದಿಲ್ಲ. ಮಾನವ ಸಂವಹನವು ಮಾನವ ವಿಹೀನವಾಗಿದೆ. ಹೀಗಾಗಿ, ಎಲ್ಲಾ ವಿಷಯಗಳು, ಎಲ್ಲಾ ಪ್ರಕರಣಗಳು, ಎಲ್ಲಾ ಭಾಷೆಗಳು ಮಾಹಿತಿಯ ಪ್ರಸಾರದ ಶೈಲಿಯಲ್ಲಿ ಮಾತ್ರ ಬಂದು ನಿಂತಿವೆ. ಸಂಪ್ರೇಷಣದ ವ್ಯಾಖ್ಯಾನವು ಇದಕ್ಕೆ ಅನ್ವಯಿಸುವುದಿಲ್ಲ. ಈಗ ಜನರು ನಿಧಾನವಾಗಿ ಇದರ ಬಗ್ಗೆ ಜಾಗೃತರಾಗುತ್ತಿದ್ದಾರೆ. ಈಗ ವಿನಿಮಯದ ಪಾತ್ರ – ʻಇಂಟರಾಕ್ಟೀವ್ ಮಾಧ್ಯಮ’ ಎಂಬ ಹೊಸ ಅಭಿಯಾನ ಪ್ರಾರಂಭವಾಗಿದೆ. ಮಾಧ್ಯಮಗಳು ಯಶಸ್ಸಿಗೆ ʻಇಂಟರಾಕ್ಟಿವ್’ ಆಗಿರಬೇಕು, ವ್ಯಕ್ತಿಯೊಂದಿಗೆ ಸಂಪರ್ಕ ಸಾಧಿಸಬೇಕು ಎಂದು ಎಲ್ಲರೂ ಹೇಳಲು ಪ್ರಾರಂಭಿಸಿದ್ದಾರೆ.

ಇಚ್ಛೆಯ ಸ್ಥಾನವೆಂದರೆ ಮನಸ್ಸು. ಮನಸ್ಸಿನ ಭಾರ ಹೆಚ್ಚಾದಂತೆ ಆಸೆಗಳೂ ಹೆಚ್ಚಾಗುತ್ತವೆ. ಆಸೆಗಳ ಮೇಲೆ ನಮಗೆ ನಿಯಂತ್ರಣವಿಲ್ಲ, ನಾವು ಅವುಗಳನ್ನು ರಚಿಸಲು ಸಾಧ್ಯವಿಲ್ಲ. ನಾವು ಅವುಗಳನ್ನು ಒಪ್ಪಿಕೊಳ್ಳಲು ಅಥವಾ ತಿರಸ್ಕರಿಸಲು ಸಾಧ್ಯವಿಲ್ಲ. ನಾವು ಒಪ್ಪಿಕೊಂಡರೆ ಅವುಗಳ ಅಭಿವ್ಯಕ್ತಿಗೆ ಹಲವು ವಿಧಾನಗಳಿವೆ. ಉದಾಹರಣೆಗೆ ದೇಹ, ಶಬ್ದ, ಬುದ್ಧಿ ಇತ್ಯಾದಿಗಳನ್ನು ಶೋಧಿಸಬೇಕಾಗುತ್ತದೆ. ನಾವು ಅವುಗಳನ್ನು ನಿಗ್ರಹಿಸಿದರೆ, ಅವು ಅತೃಪ್ತರಾಗುತ್ತವೆ ಮತ್ತು ತನ್ನೊಳಗೊಳಗೆ ವಿಭಿನ್ನ ರೂಪಗಳಲ್ಲಿ ಪ್ರಕಟವಾಗಲು ಶುರುವಾಗುತ್ತವೆ.

ಸಂವಹನದ ಪ್ರಕ್ರಿಯೆಯು ಗಂಡಾಗಲೀ ಹೆಣ್ಣಾಗಲೀ, ಒಬ್ಬ ವ್ಯಕ್ತಿಯಂತೆಯೇ ಸಂಕೀರ್ಣವಾಗಿದೆ. ಪ್ರಾಚೀನ ಭಾರತೀಯ ಸಾಹಿತ್ಯದಲ್ಲಿ ಮಾನವರನ್ನು ವಿವಿಧ ವರ್ಗಗಳಾಗಿ ವಿಂಗಡಿಸಲಾಗಿದೆ. ಪ್ರತಿಯೊಂದು ವರ್ಗವು ತನ್ನದೇ ಆದ ಸಂಪ್ರೇಷಣಾ ವಿಧಾನ ಮತ್ತು ಪಾತ್ರವನ್ನು ಹೊಂದಿದೆ. ಅದರಲ್ಲಿ ಕೆಲವು ವರ್ಗಗಳನ್ನು ಇಲ್ಲಿ ಉಲ್ಲೇಖಿಸಲು ಪ್ರಯತ್ನಿಸುತ್ತೇವೆ. ಇದರೊಂದಿಗೆ, ವ್ಯಕ್ತಿಯ ಹಿಂದಿನ ಜನ್ಮದ ಸಂಸ್ಕಾರಗಳು ಮತ್ತು ಪ್ರಸ್ತುತ ಕೌಟುಂಬಿಕ ಸಂಪ್ರದಾಯಗಳು, ಸಾಮಾಜಿಕ ಕಟ್ಟಲೆಗಳು, ತಿನ್ನುವ ಆಹಾರ, ವೈಯಕ್ತಿಕ ಪರಿಸರ, ವಯಸ್ಸು, ಲಿಂಗ, ಅಹಂಕಾರ, ಪ್ರಾಮಾಣಿಕತೆ ಮತ್ತು ಕೊನೆಗೆ ಸಂವಹನದಲ್ಲಿ ಪ್ರತಿಫಲಿಸುವ ದೃಷ್ಟಿ ಇತ್ಯಾದಿ ಹಲವು ಕಾರಣಗಳಿವೆ.

ಪರಿಣಾಮಕಾರಿ ಸಂವಹನವು ಇನ್ನೊಬ್ಬ ವ್ಯಕ್ತಿಯ ಆತ್ಮವನ್ನು ತಲುಪುವ ಒಬ್ಬ ವ್ಯಕ್ತಿಯ ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ ಮತ್ತು ಸಂವಹನಕಾರನಂತೆಯೇ ಸಂಕೀರ್ಣವಾಗಿರುತ್ತದೆ. ಇಲ್ಲಿ ಸ್ವೀಕರಿಸುವವರ ಮನಸ್ಸನ್ನು ಸ್ಪರ್ಶಿಸುವ ಶಕ್ತಿಯನ್ನು ಹೊಂದಿರುವ ಕಲೆ ಎಂದು ಸಂವಹನವನ್ನು ಅರ್ಥಮಾಡಿಕೊಳ್ಳುವುದು ಸೂಕ್ತವಾಗಿರುತ್ತದೆ. ಇದರಲ್ಲಿ, ಆ ವ್ಯಕ್ತಿಯು ಸಂದೇಶವನ್ನು ಸ್ವೀಕರಿಸಲು ಮತ್ತು ಅದರಂತೆ ವರ್ತಿಸುವುದು ಸಹ ಅಗತ್ಯವಾಗಿದೆ. ಸ್ವೀಕರಿಸುವವರು ಪ್ರತಿಕ್ರಿಯಿಸದಿದ್ದರೆ, ಸಂವಹನವು ನಿಷ್ಪರಿಣಾಮಕಾರಿಯಾಗಿದೆ ಎಂದರ್ಥ.

ಇಲ್ಲಿ ನಮ್ಮ ಮುಂದೆ ಎರಡು ಪದಗಳಿವೆ – ಮಾನವ ಮತ್ತು ಸಂವಹನ. ನಾವು ಈ ಎರಡನ್ನು ಸರಿಯಾಗಿ ವ್ಯಾಖ್ಯಾನಿಸಿದರೆ, ಈ ವಿಷಯವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತೇವೆ ಎಂದು ಹೇಳಬಹುದು. ಈ ಭೂಮಿಯ ಮೇಲೆ ಯಾವುದೇ ವಸ್ತು ಅಥವಾ ವ್ಯಕ್ತಿ ಅಸ್ತಿತ್ವದಲ್ಲಿದ್ದರೆ ಅವರು ನಿರಂತರವಾಗಿ ಪರಸ್ಪರ ಸಂವಹನ ನಡೆಸುತ್ತಾರೆ. ಯಾವುದೇ ಸಾಮಾನ್ಯ ಶಕ್ತಿಯೊಂದಿಗೆ ಅಲ್ಲ, ಬದಲು ಉನ್ನತ ಮಟ್ಟದ ಶಕ್ತಿಯೊಂದಿಗೆ. ನಾವು ನಿದ್ರಿಸುತ್ತಲೇ ಇರುವಾಗಲೂ ನಮ್ಮೊಳಗೆ ಕೆಲವು ಕ್ರಿಯೆಗಳು ನಡೆಯುತ್ತಿರುತ್ತವೆ. ಇದು ಹೃದಯ ಬಡಿತ ಅಥವಾ ಉಸಿರಾಟ ಮಾತ್ರವಲ್ಲ, ಇವುಗಳಲ್ಲದೆ ಬೇರೆ ಸ್ಥಿತಿಗಳೂ ಇವೆ. ಯಾವುದೇ ಮನುಷ್ಯ ಒಂದೇ ತತ್ವವಲ್ಲ. ಮನುಷ್ಯರು ಘನ, ದ್ರವಗಳು, ಅನಿಲಗಳು ಮತ್ತು ಅತ್ಯಂತ ಸೂಕ್ಷ್ಮ ತತ್ವಗಳ ಸಂಯೋಜನೆಯಿಂದ ಮಾಡಲ್ಪಟ್ಟಿದ್ದಾರೆ. ಈ ಸಂರಚನೆಯೇ ಸಂಪ್ರೇಷಣದ ಸಾಧನವಾಗಿದೆ. ಏನನ್ನು ತಿಳಿಸಲಾಗುತ್ತದೆಯೋ ಅದು ಇದರೊಳಗೆ ಆಳವಾಗಿ ತಲುಪುತ್ತದೆ. ಸಂಪ್ರೇಷಿತ ಸಂವಾದವು ವ್ಯಕ್ತಿಯ ಒಳಗಿನಿಂದಲೇ ಸ್ವೀಕಾರ ಅಥವಾ ತಿರಸ್ಕಾರವಾಗುತ್ತದೆ.

ಇದನ್ನೂ ಓದಿ | ಲೈಫ್‌ ಸರ್ಕಲ್‌ ಅಂಕಣ | ಧ್ಯಾನದ ಮೂಲಕ ಜ್ಞಾನದ ಬೆಳಕು

ಈ ಆಂತರಿಕ ಯಾರು ಎಂಬ ಪ್ರಶ್ನೆ ಉದ್ಭವಿಸುತ್ತದೆ. ವಾಸ್ತವವಾಗಿ, ಈ ಆಂತರಿಕವು ವಾಯವೀಯವಾಗಿದೆ. ಈ ಆಂತರಿಕವು ಭೌತಿಕವಲ್ಲದ ಸೂಕ್ಷ್ಮ ದೇಹ. ಈ ಆಂತರಿಕವು ಮಾನಸಿಕವಾಗಿದೆ. ಭಾರತೀಯ ಸಾಹಿತ್ಯದಲ್ಲಿ, ಈ ಆಂತರಿಕವನ್ನು ಮೂರು ರೂಪಗಳಲ್ಲಿ ಪರಿಗಣಿಸಲಾಗಿದೆ – ಮನಸ್ಸು, ಬುದ್ಧಿ ಮತ್ತು ಅಹಂ. ಪ್ರತಿಯೊಂದು ಸಂಪ್ರೇಷಣದಲ್ಲೂ ಈ ಮೂರು ಪರಸ್ಪರ ಸಂಬಂಧ ಹೊಂದಿವೆ. ನೀವು ಒಂದನ್ನು ದೂರವಿಟ್ಟರೆ, ಸಂವಹನವು ಪೂರ್ಣಗೊಳ್ಳುವುದಿಲ್ಲ. ಏಕೆಂದರೆ ಯಾವುದೇ ಸಂದೇಶವು ಭಾಷೆಯ ಒಂದು ಪುಂಜ. ಭಾಷೆಯು ಶಬ್ದಗಳ, ಹಾವ-ಭಾವಗಳ ಅಥವಾ ಮೌನದ್ದೂ ಆಗಿರಬಹುದು. ಸಂದೇಶವು ಮಾಹಿತಿಯಾಗಿದೆ, ಏಕಮುಖ ಮಾಹಿತಿಯಾಗಿದೆ. ಆದರೆ, ಸಂವಹನವು ದ್ವಿಮುಖ ಪ್ರಕ್ರಿಯೆಯಾಗಿದೆ. ನಾನು ಸೂಚನೆಗಳನ್ನು ಕೊಟ್ಟಿದ್ದೇನೆ ಎಂದು ಹೇಳಿದರೆ ಅದು ಪೂರ್ಣಗೊಳ್ಳುವುದಿಲ್ಲ. ಸ್ವೀಕರಿಸುವವರು ಸಂದೇಶವನ್ನು ಸ್ವೀಕರಿಸಿದ್ದಾರೆ ಎಂದು ತಿಳಿಸಲು ಅಥವಾ ಖಚಿತಪಡಿಸಲು ಸಹ ಇದು ಅಗತ್ಯವಾಗಿರುತ್ತದೆ. ಇದರರ್ಥ ಸ್ವೀಕರಿಸುವವರ ಉಪಸ್ಥಿತಿಯು ಸಂವಹನದಲ್ಲಿ ಅನಿವಾರ್ಯ ಶರತ್ತು.

ದೇಹವು ಸಂವಹನವನ್ನು ಸ್ವೀಕರಿಸುವುದಿಲ್ಲ. ಇದು ಕೇವಲ ಒಂದು ಸಾಧನವಾಗಿದೆ. ಉದಾಹರಣೆಗೆ ದೂರವಾಣಿ ಸಾಧನವು ಮಾಹಿತಿಯನ್ನು ಸ್ವೀಕರಿಸುತ್ತದೆ, ಅದನ್ನು ಅನುವಾದಿಸುತ್ತದೆ ಮತ್ತು ಅದನ್ನು ʻರಿಸೀವರ್’ಗೆ ರವಾನಿಸುತ್ತದೆ. ದೇಹದ ಕಿವಿ, ಕಣ್ಣು, ಚರ್ಮ, ಮೂಗು ಇತ್ಯಾದಿಗಳೆಲ್ಲವೂ ಸಂದೇಶವನ್ನು ಅನುವಾದಿಸಬೇಕು. ಇವೆಲ್ಲ ಉಪಕರಣಗಳು. ಈ ಸಂದೇಶವು ಸೂಕ್ತವೇ? ಈ ಸಂದೇಶ ನನ್ನ ಯೋಗಕ್ಷೇಮಕ್ಕಾಗಿಯೇ? ಇದು ನನ್ನ ಹಿತದಲ್ಲಿದೆಯೇ? ಇಂತಹ ಹಲವು ಪ್ರಶ್ನೆಗಳ ಪಟ್ಟಿ ಮೊದಲೇ ಮನಸ್ಸಿನಲ್ಲಿ ಸಿದ್ಧವಾಗಿರುತ್ತದೆ. ಪ್ರತಿಯೊಂದು ಸಂದೇಶವೂ ಈ ಪಟ್ಟಿಯ ಮೂಲಕ ಹಾದು ಹೋಗಬೇಕು. ಅಂತಹ ಕಾರ್ಯಕ್ರಮಗಳು ನಮ್ಮ ಇಷ್ಟಗಳು ಮತ್ತು ಇಷ್ಟಪಡದಿರುವಿಕೆಗಳು, ನಮ್ಮ ಪೂರ್ವಾಗ್ರಹಗಳು, ಆಸೆಗಳು ಮತ್ತು ಏಷಣಗಳು, ಅಥವಾ ನಮ್ಮ ಸ್ವಂತ ಹಿಂದಿನ ಅನುಭವಗಳಿಗೆ ಅನುಗುಣವಾಗಿ ಹಂತಹಂತವಾಗಿ ಮಾರ್ಪಡಿಸಲ್ಪಡುತ್ತವೆ.

ಸಂದೇಶವು ಅನುಕೂಲಕರವಾಗಿದ್ದರೆ, ಅದನ್ನು ಸುಲಭವಾಗಿ ಸ್ವೀಕರಿಸಲಾಗುತ್ತದೆ. ಪ್ರತಿ ಸಂದೇಶವು ಸ್ವೀಕರಿಸುವವರಿಗೆ ಸಂಬಂಧಿಸಿದ ಮೌಲ್ಯಗಳು, ಭಾವನೆಗಳು ಮತ್ತು ಭಾವನಾತ್ಮಕ ಸ್ಪರ್ಶಗಳಿಂದ ರಚಿಸಲಾದ ಆದ್ಯತೆಗಳ ಸಿಹಿ ಮುಸುಕಿನಿಂದ ಆವರಿಸಲ್ಪಟ್ಟಿರುತ್ತವೆ. ಯಶಸ್ವಿ ಮತ್ತು ಸಕಾರಾತ್ಮಕ ಸಂವಹನಕ್ಕಾಗಿ, ಸಂದೇಶವು ಅಂತಿಮವಾಗಿ ತಲುಪುವವರೆಗೆ ಮತ್ತು ಸ್ವೀಕರಿಸುವವರಿಂದ ಸ್ವೀಕರಿಸುವವರೆಗೆ ತುಂಬಾ ಆಸಕ್ತಿದಾಯಕವಾಗಿರಬೇಕು.‌

ಇದನ್ನೂ ಓದಿ | ಲೈಫ್‌ ಸರ್ಕಲ್‌ | ಕಡುಗತ್ತಲೆಯು ಸೃಷ್ಟಿ ಸ್ಥಿತಿ ಲಯಗಳ ತಾಯಿ ಹೇಗೆ?

ಈ ಗ್ರಹಿಸುವವನು ʻನಾನು’ ಸ್ವತಃ ವ್ಯಕ್ತಿ. ವ್ಯಕ್ತಿಯ ದೇಹ, ಮನಸ್ಸು ಮತ್ತು ಹೃದಯ (ಭೌತಿಕ ರೂಪದಲ್ಲಲ್ಲ) ಕೇವಲ ಸಾಧನಗಳು, ಒಂದೋ ಯೋಜಕರು ಅಥವಾ ಸಂವಹನದ ಉಪಕರಣಗಳು. ಹೀಗಾಗಿ ʻನಾನೇ’ ಸಂಪ್ರೇಷಕ, ʻನಾನೇ’ ಗ್ರಹಿಸುವವನು. ಪ್ರತಿಯೊಬ್ಬರೂ ಈ ಕೆಳಗಿನ ಧರಾತಲಗಳಲ್ಲಿ ವಾಸಿಸುತ್ತಾರೆ. ಪ್ರತಿಯೊಂದು ಧರಾತಲಕ್ಕೆ ತನ್ನದೇ ಆದ ಸಂಪ್ರೇಷಣ-ಮಾನದಂಡ ಇರುತ್ತದೆ. ಅದನ್ನು ಅದೇ ಧರಾತಲದಲ್ಲಿ ಗ್ರಹಿಸುವವರು ಸ್ವೀಕರಿಸುತ್ತಾರೆಯೇ ಹೊರತು ಅದಕ್ಕಿಂತ ಮೇಲಿನ ಅಥವಾ ಕೆಳಗಿನ ಧರಾತಲದಲ್ಲಲ್ಲ. ಹೀಗೆ ‘ನಾನು’ ಮಾತ್ರ ಸಂಪ್ರೇಷಣ ನಡೆಸಿದಾಗ ಅದು ‘ನನ್ನವರೆಗೆ’ ತಲುಪುತ್ತದೆ.

ಈ ʻನಾನು’ ಎಂಬುದರ ಮೂಲಕ ಬೌದ್ಧಿಕ ಸಂದೇಶಗಳ ವಿಶ್ಲೇಷಣೆಯನ್ನು ಕೇವಲ ಬುದ್ಧಿಯ ಮಟ್ಟದಲ್ಲಿ ಮಾತ್ರ ಮಾಡಲಾಗುತ್ತದೆ, ಅದನ್ನು ಮೀರಿ ಅಲ್ಲ. ಸ್ವೀಕರಿಸುವವರ ಬುದ್ಧಿಯು ಅದನ್ನು ಒಪ್ಪಿಕೊಳ್ಳಬಹುದೇ ಅಥವಾ ಇಲ್ಲವೇ? ಗೊತ್ತಿಲ್ಲ. ಅಂತೆಯೇ, ಭಾವನೆಗಳನ್ನು ಭಾವನಾತ್ಮಕ ಸಮತಲದಲ್ಲಿ ಮಾತ್ರ ಸಂವಹನ ಮಾಡಬಹುದು. ದೇಹ ಭಾಷೆಯ ವಿಷಯವೂ ಅದೇ, ಅದು ದೇಹವನ್ನು ಮೀರಿ ಪ್ರಯಾಣಿಸಲು ಸಾಧ್ಯವಿಲ್ಲ. ಹಾಗಾಗಿ ʻನಾನು’ ಮಾತ್ರ ಸಂವಹನ ನಡೆಸಿದಾಗ ಅದು ʻನನ್ನನ್ನು’ ತಲುಪುತ್ತದೆ. ಅಹಂ ಅಥವಾ ಅಹಂಕಾರ ಎಂದೂ ಕರೆಯಲ್ಪಡುವ ʻನಾನು’ ಪದವು ಧರಾತಲದೊಂದಿಗೆ ಸಂಪರ್ಕಗೊಂಡಾಗ ಮಾತ್ರ ಸಂಪ್ರೇಷಣವು ಪೂರ್ಣಗೊಳ್ಳುತ್ತದೆ. ಇದಕ್ಕಾಗಿ ನಮಗೆ ಸೂಚನೆ, ಅದರ ಔಚಿತ್ಯ, ಭಾವನೆಗಳು, ಭಾಷೆ ಮತ್ತು ಉಪಕರಣಗಳು ಬೇಕಾಗುತ್ತವೆ. ಅವೆಲ್ಲವೂ ಸಂಪೂರ್ಣವಾಗಿ ಕಾರ್ಯನಿರ್ವಹಿಸುವ ಅವಶ್ಯಕತೆಯಿದೆ. ಕೇವಲ ಮಾಹಿತಿಯ ಪ್ರಸಾರವು ಸಂಪ್ರೇಷಣವಲ್ಲ. ಸಂಪೂರ್ಣ ಸಂಪ್ರೇಷಣದಲ್ಲಿ ವ್ಯಕ್ತಿತ್ವದ ಎಲ್ಲಾ ನಾಲ್ಕು ಧರಾತಲಗಳು- ದೇಹ, ಬುದ್ಧಿ, ಮನಸ್ಸು ಮತ್ತು ಆತ್ಮ, ಒಟ್ಟಿಗೆ ಕೊಡುಗೆ ನೀಡುತ್ತವೆ.

ಆದರೆ, ಇಂದು ಈ ನಾಲ್ಕು ಸ್ತರಗಳ ವ್ಯಕ್ತಿತ್ವವನ್ನು ಸಮತೋಲನದಲ್ಲಿ ಇಟ್ಟುಕೊಳ್ಳುವುದು ಹೇಗೆ, ಅದನ್ನು ಸಂಪೂರ್ಣವಾಗಿ ಆರೋಗ್ಯವಾಗಿಟ್ಟುಕೊಳ್ಳುವುದು ಹೇಗೆ ಎಂಬುದು ಸವಾಲಾಗಿದೆ. ನಮ್ಮ ಶಿಕ್ಷಣ ವ್ಯವಸ್ಥೆಯು ಕೇವಲ ಎರಡನ್ನು ಪಕ್ವಗೊಳಿಸುತ್ತಿದೆ. ಅವುಗಳೆಂದರೆ- ಸ್ಥೂಲವಾಗಿ ದೈಹಿಕ ಆರೋಗ್ಯ ಮತ್ತು ಮಾಹಿತಿಯನ್ನು ವಿಶ್ಲೇಷಿಸುವ ಬುದ್ಧಿವಂತಿಕೆಯ ಸಾಮರ್ಥ್ಯದ ಬೆಳವಣಿಗೆ. ಇತರ ಎರಡು ಧರಾತಲಗಳಾದ ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಎಂಬವನ್ನು ಪ್ರಪಾತಕ್ಕೆ ಬೀಳಲೆಂದೇ ತಳ್ಳಿಬಿಟ್ಟಿದ್ದಾರೆ.

ಸಂಪ್ರೇಷಣದಲ್ಲೂ ಅನೇಕ ಧರಾತಲಗಳಿವೆ. ಅವುಗಳಲ್ಲಿ ಪ್ರಮುಖವಾದವು ತನ್ನೊಂದಿಗೆ ಮತ್ತು ತನ್ನ ದೇಹದೊಂದಿಗೆ ಸಂವಹನ ನಡೆಸುವುದು. ನಮ್ಮ ದೇಹ, ಮನಸ್ಸು ಮತ್ತು ಆಂತರಿಕ ಆತ್ಮದಿಂದ ನಾವು ಸ್ವೀಕರಿಸುವ ಸಂದೇಶಗಳು ಮತ್ತು ನಾವು ಮುಂದಕ್ಕೆ ಕಳುಹಿಸುವ ಸಂದೇಶಗಳು ಸಮಾಜದೊಂದಿಗಿನ ನಮ್ಮ ಬಾಹ್ಯ ಸಂವಹನದ ಅಡಿಪಾಯದ ಕಲ್ಲುಗಳಾಗಿವೆ. ಈ ಸಂಪ್ರೇಷಣ ಪದದ ಬಗ್ಗೆ ನಾವು ಎಷ್ಟು ಗಂಭೀರವಾಗಿರುತ್ತೇವೆ ಎಂಬುದರಿಂದಲೇ ಅದರ ಪರೀಕ್ಷೆಯಾಗುತ್ತದೆ. ದೇಹವು ಸಂದೇಶಗಳನ್ನು ಕಳುಹಿಸುವ ಮತ್ತು ಸ್ವೀಕರಿಸುವ ದೂರವಾಣಿಯಾಗಿದೆ. ಇದು ಸಂದೇಶದ ಅಗತ್ಯಕ್ಕೆ ಅನುಗುಣವಾಗಿ ಮಾತನಾಡುತ್ತದೆ ಮತ್ತು ಕಾರ್ಯನಿರ್ವಹಿಸುತ್ತದೆ, ಆದರೆ ಅದೇ ಸಮಯದಲ್ಲಿ ಮೌನವಾಗಿರುತ್ತದೆ. ದೇಹವು ಸಂದೇಶವಾಹಕ ಅಥವಾ ಸಂದೇಶವನ್ನು ಸ್ವೀಕರಿಸುವವನೂ ಅಲ್ಲ. ದೇಹದ ಕ್ರಿಯೆಗಳು ಮತ್ತು ಅವುಗಳೊಂದಿಗಿನ ಸಂಭಾಷಣೆಯ ವಿಷಯ, ಸ್ವರ ಇತ್ಯಾದಿಗಳನ್ನು ಮೆದುಳಿನಿಂದ, ದೇಹದ ಬೌದ್ಧಿಕ ಅಂಗಗಳಿಂದ ಅಂದರೆ ದೇಹದ ಗಣಕದಿಂದ ನೋಡಲಾಗುತ್ತದೆ, ಕೇಳಿಸಿಕೊಳ್ಳಲಾಗುತ್ತದೆ, ವಿಶ್ಲೇಷಿಸಲಾಗುತ್ತದೆ ಮತ್ತು ಅಂತಿಮವಾಗಿ ಸಂಕೇತಗಳನ್ನು ವಾಚಿಸಲಾಗುತ್ತದೆ ಅಥವಾ ಸ್ವೀಕರಿಸಿದ ಸಂದೇಶವಾಗಿ ಅನುವಾದಿಸಲಾಗುತ್ತದೆ; ಆದರೆ ಅಂತಹ ಯಾವುದೇ ಕ್ರಮವು ಸ್ಪಷ್ಟವಾಗಿ ಗೋಚರಿಸುವುದಿಲ್ಲ.

ಪ್ರತಿಯೊಂದು ಸಂದೇಶವು ಭೌತಿಕ ಭಾಗ, ಬೌದ್ಧಿಕ ಅರ್ಥ ಮತ್ತು ಭಾವನಾತ್ಮಕ ನಿವೇಶ ಹೊಂದಿರುತ್ತದೆ. ಆದ್ದರಿಂದ ಅದೇ ಸಮಯದಲ್ಲಿ ಆ ಸಂದೇಶವು ಅದರ ಪೂರ್ಣ ಉದ್ದೇಶ/ಗುರಿಯೊಂದಿಗೆ ಆತ್ಮವನ್ನು ತಲುಪುವುದೂ ಸಹ ಅವಶ್ಯಕ. ಈ ಭಾವನೆಗಳು ಮತ್ತು ಉದ್ದೇಶಗಳು ಸಾಮಾನ್ಯವಾಗಿ ಮನಸ್ಸಿನ ಮೂಲಕ ಮಾತ್ರ ಆತ್ಮವನ್ನು ತಲುಪುತ್ತವೆ. ಆಂಗ್ಲದಲ್ಲಿ ಇದಕ್ಕೆ ಬೇರೆ ಪದ ಇಲ್ಲದ ಕಾರಣ ತಲೆಗೆ ಸಂಬಂಧಿಸಿದಂತೆ ಮೈಂಡ್ ಎನ್ನಲಾಗುತ್ತದೆ. ಭಾರತೀಯ ದರ್ಶನದಲ್ಲಿ ಇದು ʻಮನ’ ಅಥವಾ ʻಮಾನಸ’ ಆಗಿದೆ. ಇದನ್ನು ಕಾಮನೆಗಳು, ಭಾವನೆಗಳು ಮತ್ತು ಸಂವಹನದ ಉಗ್ರಾಣವೆಂದು ಪರಿಗಣಿಸಲಾಗಿದೆ. ಬುದ್ಧಿಯಿಂದ ರವಾನೆಯಾಗುವ ಯಾವುದೇ ಸಂದೇಶವು ಮನಸ್ಸನ್ನು ತಲುಪುವುದಿಲ್ಲ, ಅದು ಸ್ವೀಕರಿಸುವವರ ಮಸ್ತಿಷ್ಕ ಅಥವಾ ಬುದ್ಧಿಯನ್ನು ಮಾತ್ರ ತಲುಪುತ್ತದೆ. ವಾದಗಳು, ಸ್ವೀಕಾರ-ತಿರಸ್ಕಾರ ಇತ್ಯಾದಿಗಳು ಸ್ವೀಕರಿಸುವವರ ಮನಸ್ಸಿನಲ್ಲಿ ಸುಲಭವಾಗಿ ಉದ್ಭವಿಸಬಹುದು. ಜೀವನದಲ್ಲಿ ಅನೇಕ ರೀತಿಯ ಅಂತರ್ದ್ವಂದ್ವಗಳಿಗೆ ಬುದ್ಧಿವಂತಿಕೆಯು ಮುಖ್ಯ ಕಾರಣವೆಂದು ಸಾಬೀತಾಗುತ್ತದೆ. ಈ ಬುದ್ಧಿಶಕ್ತಿಯ ಮೂಲಕ ನಮ್ಮ ಅಹಂಕಾರವನ್ನು ಹೆಚ್ಚಾಗಿ ವ್ಯಕ್ತಪಡಿಸಲಾಗುತ್ತದೆ. ಬುದ್ಧಿಯು ಸಾಮಾನ್ಯವಾಗಿ ವಿರುದ್ಧವಾದ ಅಭಿಪ್ರಾಯಗಳನ್ನು ಸುಲಭವಾಗಿ ಸ್ವೀಕರಿಸುವುದಿಲ್ಲ. ಪ್ರಪಂಚದ ಹೆಚ್ಚಿನ ಬುದ್ಧಿಜೀವಿಗಳು ಈ ವರ್ಗಕ್ಕೆ ಸೇರುತ್ತಾರೆ. ಆದರೆ ಇದಕ್ಕೆ ಅಪವಾದವಾಗಿರುವವರು ಋಷಿಗಳು ಮತ್ತು ವಿಜ್ಞಾನಿಗಳ ಎತ್ತರವನ್ನು ತಲುಪುವಲ್ಲಿ ಯಶಸ್ವಿಯಾಗುತ್ತಾರೆ.

ಇದನ್ನೂ ಓದಿ | ಲೈಫ್‌ ಸರ್ಕಲ್‌ ಅಂಕಣ | ಕತ್ತಲೆಗೆ ಕರೆದೊಯ್ಯುವುದೇ ಬೆಳಕು?

ಮತ್ತೊಂದೆಡೆ, ಮನಸ್ಸು ಆತ್ಮಕ್ಕೆ ಎಲ್ಲಕ್ಕಿಂತ ಹತ್ತಿರದಲ್ಲಿದೆ. ಇದು ಭಾವನೆಗಳು, ಆಲೋಚನೆಗಳು ಇತ್ಯಾದಿಗಳನ್ನು ಸ್ವೀಕರಿಸುವವರ ಮನಸ್ಸಿಗೆ ರವಾನಿಸುತ್ತದೆ. ಈ ಭಾವನೆಗಳು ಆ ಬೌದ್ಧಿಕ ಸಂದೇಶದ ಮೇಲೆ ಗೆಲುವು ಸಾಧಿಸುತ್ತವೆ. ಸ್ವೀಕರಿಸುವವರಿಂದ ಸಂದೇಶವನ್ನು ಸ್ವೀಕರಿಸಲು ಅಥವಾ ತಿರಸ್ಕರಿಸಲು ಈ ಭಾವನೆಗಳು ಮುಖ್ಯ ಆಧಾರವಾಗಿದೆ. ಈ ಭಾವನೆಗಳ ಬೆಂಬಲವಿಲ್ಲದೆ ಯಾವುದೇ ಸಂದೇಶವು ಪೂರ್ಣಗೊಳ್ಳುವುದಿಲ್ಲ. ಇದು ಕೇವಲ ಯಾಂತ್ರಿಕವಾದದ್ದೇ ಹೊರತು ಮಾನವೀಯವಲ್ಲ; ಆದರೆ ಅದರಲ್ಲಿ ಮಾನವ ಹೃದಯವೂ ಅಗತ್ಯ.

ನಮ್ಮ ಮನಸ್ಸು ನಮ್ಮ ಇಂದ್ರಿಯಗಳಿಂದ ನಿಯಂತ್ರಿಸಲ್ಪಡುತ್ತದೆ. ಅದು ನಮ್ಮ ದೇಹವನ್ನು ನಿಯಂತ್ರಿಸುತ್ತದೆ. ನಮ್ಮ ಕಿವಿ, ಮೂಗು, ಕಣ್ಣು, ಚರ್ಮ, ನಾಲಿಗೆ ಇತ್ಯಾದಿಗಳ ಮೂಲಕ ಈ ಮನಸ್ಸನ್ನು ತಲುಪುವ ಸಂದೇಶಗಳು ಮನಸ್ಸನ್ನು ನಿರಂತರವಾಗಿ ಕಾರ್ಯನಿರತವಾಗಿರಿಸುತ್ತದೆ. ಈ ಸಂದೇಶಗಳು ಹಲವಾರು; ವಿರೋಧಾತ್ಮಕ, ತಪ್ಪುದಾರಿಗೆಳೆಯುವ ಅಥವಾ ಅನಗತ್ಯವಾಗಿರಬಹುದು. ನಮ್ಮಲ್ಲಿ ಮೂಡುತ್ತಿರುವ ಭಾವನೆಗಳು ಹೇಗೆ ಸಂವಹನಗೊಳ್ಳುತ್ತಿವೆ? ಈ ಸೂಕ್ಷ್ಮ ಧರಾತಲಕ್ಕೆ ಹೋದರೆ ನಮಗೆ ತಿಳಿಯುತ್ತದೆ- ನನ್ನ ಆಲೋಚನೆಗಳು ನನ್ನ ದೇಹದ ರೋಮರೋಮಗಳಲ್ಲಿ ಪ್ರಕಟವಾಗುತ್ತವೆ. ನಾವು ಯಾವಾಗ ಏನನ್ನಾದರೂ ಬರೆಯುತ್ತೇವೆಯೋ, ಯಾವುದಾದರೂ ಚಿತ್ರವನ್ನು ಬಿಡಿಸುತ್ತೇವೆಯೋ, ಏನಾದರೂ ಸೃಜನಾತ್ಮಕ ರಚನೆಯನ್ನು ಮಾಡುತ್ತೇವೆಯೋ, ಆಗ ಆ ಭಾವನೆಗಳು ಸ್ವಯಂಚಾಲಿತವಾಗಿ ಮತ್ತಷ್ಟು ಹರಡುತ್ತವೆ. ಪ್ರಾರ್ಥನೆ, ಪೂಜೆ, ಪಠಣ, ಇತ್ಯಾದಿ, ನವವಿಧ ಭಕ್ತಿಯ ಎಲ್ಲಾ ಕಾರ್ಯಗಳು ಏಕಮುಖ ಸಂಪ್ರೇಷಣ. ಇವುಗಳಲ್ಲಿ ಮೌನ ಸಂಪ್ರೇಷಣ ಮತ್ತು ಆತ್ಮಸಂವಾದವೂ ಸೇರಿದೆ. ಇವೆಲ್ಲವೂ ಆತ್ಮದೊಂದಿಗೆ, ತಮ್ಮ ಇಷ್ಟದತ್ತ, ಪ್ರೀತಿಯತ್ತ, ಆತ್ಮೀಯರತ್ತ ಬೆಸೆದುಕೊಂಡ ಭಾವನಾತ್ಮಕ ಸಂಭಾಷಣೆಗಳಾಗಿವೆ. ಆದರೆ ನೀವು ಆಳವಾಗಿ ನೋಡಿದರೆ, ಇದು ಒಂದೇ ಮುಖದ ಸಂವಹನೆ ಅಲ್ಲ. ಯಾವುದಾದರೂ ಸೂತ್ರಗಳು ಮಾಧ್ಯಮದ ಪಾತ್ರವನ್ನು ನಿರ್ವವಹಿಸುತ್ತದೆ.

ಚಿತ್ರ ಅಥವಾ ವಿಗ್ರಹವನ್ನು ನೋಡಿದಾಗ, ಸಂತೋಷದ ಅಲೆ ಅಥವಾ ಭಾವನೆಯು ಮನಸ್ಸಿಗೆ, ಆತ್ಮಕ್ಕೆ ತಲುಪುತ್ತದೆ. ಇನ್ನೊಂದು ಕಡೆಯಿಂದ ಕೆಲವು ಸೂಚನೆಗಳು ಅಥವಾ ಸಂದೇಶಗಳು ನಿರಂತರವಾಗಿ ಸ್ವೀಕರಿಸುತ್ತಿರುವಂತೆ ತೋರುತ್ತಿರುತ್ತದೆ. ದಾರ್ಶನಿಕ ಭಾಷೆಯಲ್ಲಿ ಹೇಳುವುದಾದರೆ ಒಂದು ಅನುಭೂತಿಯು ಒಳಗಿನವರೆಗೆ ತಲುಪುತ್ತಿದೆ. ಇದೂ ಸಹ ಏಕಮುಖಿ ಎಂದು ಹೇಳಲಾಗದ ಸಂಪ್ರೇಷಣ. ಏಕೆಂದರೆ ನಾವು ನೋಡುತ್ತಿರುವ ವ್ಯಕ್ತಿಯ ಚಿತ್ರವು ನಮ್ಮ ಆತ್ಮದಲ್ಲಿಯೂ ಕುಳಿತಿದೆ ಮತ್ತು ನಾವು ಆತ್ಮದಲ್ಲಿ ಕುಳಿತಿರುವ ಮೂರ್ತಿಯೊಂದಿಗೆ ಸಂವಾದ ಮಾಡುತ್ತಿದ್ದೇವೆ, ನಾವು ನಮ್ಮೊಂದಿಗೆ ಮಾತನಾಡುತ್ತಿದ್ದೇವೆ.

Exit mobile version