| ಮಲ್ಲಿಕಾರ್ಜುನ ತಿಪ್ಪಾರ ಬೆಂಗಳೂರು
ಅಖಿಲ ಭಾರತ ಕಾಂಗ್ರೆಸ್ ಕಮಿಟಿ(Congress President)ಯ ಅಧ್ಯಕ್ಷ ಚುನಾವಣಾ ಕಣಕ್ಕೆ ಕರ್ನಾಟಕದ ಹಿರಿಯ ನಾಯಕ ಹಾಗೂ ರಾಜ್ಯಸಭೆಯಲ್ಲಿ ಪ್ರತಿಪಕ್ಷದ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಪ್ರವೇಶ ಪಡೆಯುವ ಮೂಲಕ ಹೊಸ ರಂಗು ಬಂದಿದೆ. ಮೇಲ್ನೋಟಕ್ಕೆ ಗಾಂಧಿ ಮನೆತನದ ನಿಷ್ಠನಿಗೆ ಹೈಕಮಾಂಡ್ ಮಣೆ ಹಾಕಿದೆ ಎನಿಸಿದರೂ, ಆಳದಲ್ಲಿ ಲೆಕ್ಕಾಚಾರಗಳು, ಸಮೀಕರಣಗಳು ಬೇರೆಯದ್ದೇ ಆಗಿವೆ. ಮಲ್ಲಿಕಾರ್ಜನ ಖರ್ಗೆ ಅವರು ತಮ್ಮ ರಾಜಕೀಯ ಜೀವನದಲ್ಲಿ ಬೆಳೆಸಿಕೊಂಡ ಬಂದಿರುವ ಕ್ಲೀನ್ ಇಮೇಜೇ ಇದಕ್ಕೆ ಕಾರಣ.
80 ವರ್ಷದ ಮಲ್ಲಿಕಾರ್ಜುನ ಖರ್ಗೆ ಅವರು ಗಾಂಧಿ ಕುಟುಂಬದೆಡೆಗೆ ಹೊಂದಿರುವ ನಿಷ್ಠೆ ಅಚಲ. ಒಂಚೂರು ಇಲ್ಲ ಚಂಚಲ. ಹೈಕಮಾಂಡ್ ಹೇಳಿದ ಅಥವಾ ವಹಿಸಿದ ಎಲ್ಲ ಜವಾಬ್ದಾರಿಯನ್ನು ಈವರೆಗೆ ಶೃದ್ಧೆಯಿಂದ ಮಾಡಿಕೊಂಡು ಬಂದಿದ್ದಾರೆ. ಹಾಗಾಗಿ, ಪಕ್ಷದೊಳಗೇ ಯಜಮಾನಿಕೆಯೇ ವ್ಯಕ್ತಿತ್ವ ಹರಳುಗಟ್ಟಿದೆ. ತತ್ಪರಿಣಾಮವೇ, ಗಾಂಧಿ ತಮ್ಮ ಅಭ್ಯರ್ಥಿಯನ್ನಾಗಿ ಖರ್ಗೆ ಅವರನ್ನು ಕಣಕ್ಕೆ ಇಳಿಸಿದೆ. ಪಕ್ಷದೊಳಗೇ ದಲಿತ ನಾಯಕನಾಗಿ ರೂಪುಗೊಂಡಿರುವ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗುವುದು ಖಚಿತ. ಈಗಾಗಲೇ, ಮಧ್ಯಪ್ರದೇಶದ ನಾಯಕ ದಿಗ್ವಿಜಯ್ ಸಿಂಗ್ ಅವರು ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ನಾಮಪತ್ರ ಸಲ್ಲಿಸಿರುವ ತಿರುವನಂಥಪುರಂ ಸಂಸದ ಶಶಿ ತರೂರ್ ಹಾಗೂ ಜಾರ್ಖಂಡ್ ಮಾಜಿ ಸಚಿವ ಕೆ.ಎನ್. ತ್ರಿಪಾಠಿ ಅವರು ತಮ್ಮ ನಾಮಪತ್ರ ಹಿಂಪಡೆಯಲು ಇನ್ನೂ ಎರಡ್ಮೂರು ದಿನಗಳ ಕಾಲ ಸಮಯವಿದೆ. ಒಂದೊಮ್ಮೆ ಇವರಿಬ್ಬರೂ ನಾಮಪತ್ರ ವಾಪಸ್ ಪಡೆದುಕೊಂಡರೇ, ಅವಿರೋಧವಾಗಿ ಖರ್ಗೆ ಆಯ್ಕೆಯಾಗಲಿದ್ದಾರೆ. ಎಲೆಕ್ಷನ್ ನಡೆದರೂ ಖರ್ಗೆ ಅವರದ್ದೇ ಗೆಲವು. ಅದರಲ್ಲೇನೂ ಅನುಮಾನವಿಲ್ಲ.
ಕರ್ನಾಟಕ ಎಲೆಕ್ಷನ್, ಕಾಂಗ್ರೆಸ್‌ಗೆ ಬಲ
8 ಬಾರಿ ಶಾಸಕರಾಗಿ ರಾಜ್ಯ ರಾಜಕಾರಣದಲ್ಲಿ ಸಕ್ರಿಯರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರು ಹೈಕಮಾಂಡ್ ಸೂಚನೆಯ ಮೇರೆಗೆ ರಾಷ್ಟ್ರ ರಾಜಕಾರಣಕ್ಕೆ ಅಡಿಯಿಟ್ಟರು. ಯುಪಿಎ 2ನೇ ಅವಧಿಯಲ್ಲಿ ರೈಲ್ವೆ ಹಾಗೂ ಕಾರ್ಮಿಕ ಸಚಿವರಾಗಿಯೂ ಕೆಲಸ ಮಾಡಿದ್ದಾರೆ. ಬಳಿಕ ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕಾರಾಗಿದ್ದರು. ಈಗ ರಾಜ್ಯಸಭೆಯಲ್ಲಿ ಕಾಂಗ್ರೆಸ್‌ನ ಗಟ್ಟಿ ಧ್ವನಿಯಾಗಿದ್ದಾರೆ.
ಖರ್ಗೆ ಅವರು ಕಾಂಗ್ರೆಸ್ ಅಧ್ಯಕ್ಷರಾದರೆ ಅದರ ನೇರ ಲಾಭ ಕರ್ನಾಟಕಕ್ಕೆ ದೊರೆಯಲಿದೆ. ಇನ್ನಾರು ತಿಂಗಳಲ್ಲಿ ವಿಧಾನಸಭೆ ಚುನಾವಣೆ ಎದುರಿಸಲಿರುವ ಕಾಂಗ್ರೆಸ್‌ಗೆ ಖಂಡಿತವಾಗಿಯೂ ಖರ್ಗೆ ಬಲ ತಂದುಕೊಡಲಿದ್ದಾರೆ. ವಿಶೇಷವಾಗಿ ದಲಿತ ಸಮುದಾಯವು ಈ ಚುನಾವಣೆಯಲ್ಲಿ ಮತ್ತಷ್ಟು ಗಟ್ಟಿಯಾಗಿ ಕಾಂಗ್ರೆಸ್ ಜತೆ ನಿಲ್ಲಲು ಖರ್ಗೆ ಕಾರಣವಾಗಲಿದ್ದಾರೆ. ಕಲ್ಯಾಣ ಕರ್ನಾಟಕ(ಹೈ-ಕ) ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೀಟುಗಳು ಕೈಗೆ ಲಭಿಸಿದರೆ, ಅಧಿಕಾರದ ಗುರಿಯನ್ನು ಕಾಂಗ್ರೆಸ್ ಸುಲಭವಾಗಿ ತಲುಪಬಲ್ಲದು. ಎಲ್ಲಕ್ಕಿಂತ ಹೆಚ್ಚಾಗಿ ಅವರ ಪಕ್ಷ ನಿಷ್ಠೆ ಮತ್ತು ಬದ್ಧತೆ ಕೈ ಕಾರ್ಯಕರ್ತರಿಗೆ ಬಲ ನೀಡಬಹುದು.
ರಾಷ್ಟ್ರಮಟ್ಟದಲ್ಲಿ ಒಂದಾಗಲು ನೆರವು
ದೇಶದಲ್ಲಿ ಈಗ ಪ್ರತಿಪಕ್ಷಗಳು ನಡೆಸುತ್ತಿರುವ ಚಟುವಟಿಕೆಗಳನ್ನು ಗಮನಿಸಿದರೆ, 2024ರ ಲೋಕಸಭೆ ಚುನಾವಣೆಗೆ ದೇಶದಲ್ಲಿ ಪ್ರಜಾಪ್ರಭುತ್ವ ಮತ್ತು ಸಂವಿಧಾನ ಉಳಿಸಿ ಎಂಬುದೇ ಚುನಾವಣೆ ವಿಷಯವಾಗಲಿದೆ. ಹಾಗೇನಾದರೂ ಆದರೆ ಪ್ರತಿಪಕ್ಷಗಳನ್ನು ಒಂದುಗೂಡಿಸಲು ಕಾಂಗ್ರೆಸ್‌ಗೆ ಮಲ್ಲಿಕಾರ್ಜುನ ಖರ್ಗೆ ಅವರಗಿಂತ ಮತ್ತೊಬ್ಬ ಸಮರ್ಥ ವ್ಯಕ್ತಿ ಇರಲಾರರು.
ನರೇಂದ್ರ ಮೋದಿ ಸರ್ಕಾರ ಅನುಸರಿಸುತ್ತಿರುವ ನೀತಿಗಳ ಕಡು ಟೀಕಾಕಾರಾಗಿ ಖರ್ಗೆ ಈಗಾಗಲೇ ಮುಂಚೂಣಿಯಲ್ಲಿದ್ದಾರೆ. ಜತಗೇ ಕ್ಲೀನ್ ಇಮೇಜ್ ಕೂಡ ಅವರನ್ನು ಎತ್ತಿ ಹಿಡಿಯಬಲ್ಲದು. ಚುನಾವಣೆ ಹತ್ತಿರವಾಗುತ್ತಿದ್ದಂತೆ ಪ್ರತಿಪಕ್ಷಗಳೆಲ್ಲ ಒಂದಾಗುವ ಹಂತಕ್ಕೆ ಬಂದರೆ, ಅದರ ನಾಯಕತ್ವ ಖರ್ಗೆ ಪಾಲಿಗೆ ಬಂದರೂ ಅಚ್ಚರಿ ಪಡಬೇಕಿಲ್ಲ. ಕಾಂಗ್ರೆಸ್ ಸತತವಾಗಿ ಎರಡು ಲೋಕಸಭೆ ಹಾಗೂ ಹಲವು ವಿಧಾನಸಭೆ ಚುನಾವಣೆಗಳನ್ನು ಸೋತಿದ್ದರೂ, ಅದಕ್ಕೆ ಪುಟಿದೇಳುವ ಸಾಮರ್ಥ್ಯ ಇದ್ದೇ ಇದೆ. ನಿತೀಶ್ ಕುಮಾರ್, ಮಮತಾ ಬ್ಯಾನರ್ಜಿ ಅಥವಾ ಇನ್ನಾವುದೇ ಪ್ರಾದೇಶಿಕ ಪಕ್ಷದ ನಾಯಕರು ರಾಷ್ಟ್ರವ್ಯಾಪಿ ಸಂಘಟನೆಯನ್ನೂ ಹೊಂದಿಲ್ಲ. ಹಾಗಾಗಿ, ಬಿಜೆಪಿಯ ವಿರುದ್ಧ ಪ್ರತಿಕ್ಷಗಳು ಒಂದಾಗುವುದಾದರೆ, ಅದು ಕಾಂಗ್ರೆಸ್ ಒಳಗೊಂಡೇ ಆಗಬೇಕು. ಕಾಂಗ್ರೆಸ್ ಹೊರಗಿಟ್ಟು ಪ್ರತಿಪಕ್ಷಗಳ ವೇದಿಕೆ ರೂಪುಗೊಳ್ಳಲು ಸಾಧ್ಯವಿಲ್ಲ. ಹಾಗಾಗಿ, ಕಾಂಗ್ರೆಸ್ ನೇತೃತ್ವದಲ್ಲಿ ಇಂಥ ಒಂದು ಬೆಳವಣಿಗೆ ನಡೆಯುವುದು ಪಕ್ಕಾ ಆದರೆ ಆಗ ಮಲ್ಲಿಕಾರ್ಜುನ ಖರ್ಗೆ ಅವರಿಗೇ ನಾಯಕತ್ವ ಒಲಿದು ಬರಬಹುದು. ದೇಶದ ಪ್ರಮುಖ ದಲಿತ ನಾಯಕರಾಗಿರುವ ಅವರನ್ನು ಇತರ ಪ್ರಾದೇಶಿಕ ಪಕ್ಷಗಳ ನಾಯಕರು ನಿರಾಕರಿಸಲು ಸಾಧ್ಯವಾಗದು! ಈ ಎಲ್ಲ ಮುಂದಾಲೋಚನೆಗಳನ್ನು ಮಾಡಿಯೇ ಖರ್ಗೆ ಅವರನ್ನು ಕಾಂಗ್ರೆಸ್ ಪಕ್ಷವು ಅಧ್ಯಕ್ಷ ಗಾದಿಗೆ ತರಲಾಗುತ್ತಿದೆ.
ದಲಿತ ಮತಗಳ ಧ್ರುವೀಕರಣ!
ಸಮಕಾಲೀನ ರಾಜಕಾರಣದಲ್ಲಿ ದಲಿತರಿಗೆ ರಾಷ್ಟ್ರಮಟ್ಟದಲ್ಲಿ ಹೇಳಿಕೊಳ್ಳುವ ನಾಯಕ ಅಂತ ಯಾರಾದರೂ ಇದ್ದಿದ್ದರೆ ಅದು ಬಿಎಸ್‌ಪಿಯ ಮಾಯಾವತಿ. ಆದರೆ, 2014ರಿಂದ ಉತ್ತರ ಪ್ರದೇಶದಲ್ಲಿ ಅವರು ದಯನೀಯ ಸೋಲು ಅನುಭವಿಸುತ್ತಿದ್ದಾರೆ. ಒಂದೂ ಸೀಟು ಗೆಲ್ಲಲಾಗದ ಸ್ಥಿತಿಗೆ ಬಂದಿದ್ದಾರೆ. ಅವರ ನಾಯಕತ್ವಕ್ಕೆ ಮಂಕು ಕವಿದಿದೆ. ಮಾಯಾವತಿ ಅವರು ಪ್ರಬಲರಾಗಿದ್ದಾಗ ಅನೇಕ ಕಡೆ ಕಾಂಗ್ರೆಸ್‌ಗೆ ಹೊಡೆತ ನೀಡಿದ್ದು ಸುಳ್ಳಲ್ಲ. ಈಗ ಅವರೇ ಮೇಲೇಳದ ಸ್ಥಿತಿಯಲ್ಲಿ ಸೋತು ಸುಣ್ಣವಾಗಿದ್ದಾರೆ. ಈ ಸಂದರ್ಭದಲ್ಲಿ ದಲಿತರಾಗಿರುವ ಖರ್ಗೆ ಕೈಗೆ ಕಾಂಗ್ರೆಸ್ ನಾಯಕತ್ವ ನೀಡಿದರೆ, ಕಾಂಗ್ರೆಸ್‌ನಿಂದ ಕೆಲವು ರಾಜ್ಯಗಳಲ್ಲಿ ದೂರವಾಗಿರುವ ದಲಿತರು ಮತ್ತೆ ಮರಳಬಹುದು. ಎಲ್ಲಕ್ಕಿಂತ ಹೆಚ್ಚಾಗಿ ರಾಷ್ಟ್ರಮಟ್ಟದಲ್ಲಿ ಅವರಿಗೊಬ್ಬ ಹೊಸ ನಾಯಕ ಸಿಗಬಹುದು. ಈ ತಂತ್ರವೇನಾದರೂ ಫಲಿಸಿದರೆ, 2024ರ ಚುನಾವಣೆ ಬಿಜೆಪಿ ಪಾಲಿಗೆ ತೀರಾ ಸುಲಭವಾಗಿಯೇನೂ ಇರಲಾರದು, ಅದೇ ವೇಳೆ ಕಾಂಗ್ರೆಸ್‌ಗೆ ಪುನಃಶ್ಚೇತನ ದೊರೆಯಬಹುದು. ಆದರೆ, ಈ ಅವಕಾಶವನ್ನು ಕಾಂಗ್ರೆಸ್ ಹೇಗೆ ಬಳಸಿಕೊಳ್ಳುತ್ತದೆ ಎಂಬುದರ ಮೇಲೆ ಇದು ನಿರ್ಧಾರವಾಗಲಿದೆ.
ಕಾಂಗ್ರೆಸ್ ನಾಯಕತ್ವ ವಹಿಸುತ್ತಿರುವ 2ನೇ ಕನ್ನಡಿಗ
ಕಾಂಗ್ರೆಸ್‌ಗೆ ಸ್ವತಂತ್ರ ಭಾರತದಲ್ಲಿ ಪ್ರಬಲ ನಾಯಕತ್ವ ವಹಿಸಿದವರು ನೆಹರು-ಗಾಂಧಿ ಮನೆತನದವರೇ. ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಮತ್ತು ಸೋನಿಯಾ ಗಾಂಧಿ. ಇದರ ಮಧ್ಯೆಯೂ ಗಾಂಧಿ ಮನೆತನ ಹೊರತುಪಡಿಸಿ ಕೆಲವರು ಪಕ್ಷದ ನಾಯಕತ್ವ ವಹಿಸಿದ್ದಾರೆ. ಆ ಪೈಕಿ ಎಸ್.ನಿಜಲಿಂಗಪ್ಪ ಅವರೂ ಒಬ್ಬರು. 1968ರಲ್ಲಿ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಮೊದಲ ಕರ್ನಾಟಕದ ನಾಯಕ. ಆ ಬಳಿಕ ಅಂಥ ಯಾವುದೇ ಭಾಗ್ಯ ಯಾವುದೇ ಕರ್ನಾಟಕ ಕಾಂಗ್ರೆಸ್ ನಾಯಕರಿಗೆ ಒಲಿದಿರಲಿಲ್ಲ. ಈಗ ಮಲ್ಲಿಕಾರ್ಜುನ ಖರ್ಗೆ ಅವರು ಆ ಜವಾಬ್ದಾರಿಯನ್ನು ನಿಭಾಯಿಸಲು ಸಿದ್ಧರಾಗುತ್ತಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಪಕ್ಷ ಸಂಕಟ ಎದುರಿಸುತ್ತಿರುವ ಕಾಲದಲ್ಲಿ ಅವರು ನಾಯಕತ್ವಕ್ಕೆ ನೊಗವಾಗುತ್ತಿದ್ದಾರೆ. ಇದರೊಂದಿಗೆ ಕಾಂಗ್ರೆಸ್ ಅಧ್ಯಕ್ಷರಾಗುತ್ತಿರುವ ಎರಡನೇ ನಾಯಕ ಎಂಬ ಖ್ಯಾತಿಗೂ ಪಾತ್ರರಾಗಲಿದ್ದಾರೆ.
ಎರಡು ಬಾರಿ ತಪ್ಪಿದ ಸಿಎಂ ಅವಕಾಶ
ಕಾಲೇಜು ದಿನಗಳಲ್ಲಿ ವಿದ್ಯಾರ್ಥಿ ನಾಯಕರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರು 1969ರಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾದರು. 1972ರಲ್ಲಿ ಗುರುಮಿಟಕಲ್ ಕ್ಷೇತ್ರದಿಂದ ವಿಧಾನಸಭೆ ಮೊದಲ ಬಾರಿಗೆ ಪ್ರವೇಶಿಸಿದರು. ಆ ಬಳಿಕ ಅವರು ರಾಜಕೀಯ ಹಿಂದಿರುಗಿ ನೋಡಲೇ ಇಲ್ಲ. ನಿಧಾನವಾಗಿ ರಾಜ್ಯ ಕಾರಣದಲ್ಲಿ ತಮ್ಮ ವರ್ಚಸ್ಸು ಹೆಚ್ಚಿಸಿಕೊಳ್ಳುತ್ತಾ ಬಂದ ಖರ್ಗೆ ಅವರಿಗೆ ಎರಡು ಬಾರಿ, ರಾಜ್ಯದ ಮುಖ್ಯಮಂತ್ರಿಯಾಗುವ ಅವಕಾಶ ಒದಗಿ ಬಂದಿತ್ತಾದರೂ, ಕೈಗೂಡಿರಲಿಲ್ಲ. 1999 ಮತ್ತು 2004ರಲ್ಲಿ ಇನ್ನೊಂದು ಚೂರು ಪ್ರಯತ್ನಪಟ್ಟಿದ್ದರೆ ಮುಖ್ಯಮಂತ್ರಿಯಾಗುತ್ತಿದ್ದರೇನೋ? 8 ಬಾರಿ ಎಂಎಲ್‌ಎಯಾಗಿ, ನಾನಾ ಇಲಾಖೆಗಳ ಸಚಿವರಾಗಿ, ವಿಧಾನಸಭೆ ಪ್ರತಿಪಕ್ಷ ನಾಯಕರಾಗಿ, ಕರ್ನಾಟಕ ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿ, ಲೋಕಸಭೆ ಮತ್ತು ಸದಸ್ಯರಾಗಿ-ಪ್ರತಿಪಕ್ಷದ ನಾಯಕಾರಾಗಿ, ಕೇಂದ್ರ ಸಚಿವರಾಗಿ ಅಪಾರ ಅನುಭವನ್ನು ಖರ್ಗೆ ಗಳಿಸಿದ್ದಾರೆ. ಆಡಳಿತಾತ್ಮಕವಾಗಿ ಅವರತ್ತ ಬೆರಳು ತೋರಿಸಲು ಸಾಧ್ಯವಿಲ್ಲ.
ಈಗ ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿ ಹೊಸ ಜವಾಬ್ದಾರಿಯನ್ನು ಹೊರಲು ಸನ್ನದ್ಧರಾಗಿರುವ ಖರ್ಗೆ ಅವರಿಗೆ ಅದೇನೂ ಹೊರೆಯಲಾಗಲಾರದರು. ಅವರ ನೇತೃತ್ವದಲ್ಲಾದರೂ ಕಾಂಗ್ರೆಸ್ ಪುಟಿದೇಳಲಿ ಎಂಬುದು ಕಾರ್ಯಕರ್ತರ ಅನಿಸಿಕೆ.
ಇದನ್ನೂ ಓದಿ | ಕಾಂಗ್ರೆಸ್ ಅಧ್ಯಕ್ಷ ಆಯ್ಕೆ ಚುನಾವಣೆ; ನೆಪಕ್ಕೆ ನಡೆಸುತ್ತಾರೋ ನೋಡುತ್ತೇವೆ ಎಂದ ಜಿ 23 ನಾಯಕರು