ಈ ಅಂಕಣವನ್ನು ಇಲ್ಲಿ ಆಲಿಸಿ:
ನನ್ನ ದೇಶ ನನ್ನ ದನಿ ಅಂಕಣ: ನಮ್ಮ ಪರಂಪರೆಯನ್ನು, ನಮ್ಮ ಶಾಸ್ತ್ರಗ್ರಂಥಗಳನ್ನು, ನಮ್ಮ ಆರ್ಷ ಚಿಂತನೆಯನ್ನು ನಾವು ಮರೆತೇಬಿಟ್ಟಿದ್ದೇವೆ. ಸಾಮುದಾಯಿಕವಾಗಿ ಸೂಕ್ತವಾಗಿ ಗೌರವಿಸುವುದೂ ಹಿನ್ನೆಲೆಗೆ ಸರಿದಿದೆ. ಯಾರಾದರೂ ನೆನಪು ಮಾಡಿದರೂ, ಉಲ್ಲೇಖಿಸಿದರೂ “ಬಿಡ್ರೀ, obsolete – old – outdated ವಿಚಾರಗಳನ್ನು ಒದರಬೇಡ್ರೀ” ಎಂದು ಝಾಡಿಸುತ್ತೇವೆ. ಹೌದು. ನಮ್ಮ “ಆಧುನಿಕ” ಶಿಕ್ಷಣ ವ್ಯವಸ್ಥೆಯು, ಭಾರತೀಯರಾದ ನಮ್ಮ ಮನೋಭೂಮಿಕೆಯನ್ನು ರೂಪಿಸಿರುವುದೇ ಹಾಗೆ. ಯಾರಾದರೂ ಅಂತಾರಾಷ್ಟ್ರೀಯ ರಾಜಕೀಯದ ಬಗೆಗೆ, ವಿಶ್ವ ಮಾರುಕಟ್ಟೆಯ ಬಗೆಗೆ, ಭಾರತೀಯ ಅರ್ಥ ವ್ಯವಸ್ಥೆಯ ಬಗೆಗೆ ಮಾತನಾಡುವಾಗ, ಅಪ್ಪಿತಪ್ಪಿ ಯಾರಾದರೂ “ಚತುರ್ವಿಧ ಪುರುಷಾರ್ಥ”ಗಳನ್ನು ಉಲ್ಲೇಖಿಸಿದರೆ, ಧರ್ಮ – ಅರ್ಥ – ಕಾಮ – ಮೋಕ್ಷಗಳಿಗೆ ನಮ್ಮ ಪೂರ್ವಿಕರು ಸಮಾನ ಮಹತ್ತ್ವ ನೀಡಿದ್ದರು, ಎಂದರೆ ಸೇರಿದವರು ಗಹಗಹಿಸಿ ನಗಬಹುದು. ಮೂರ್ನಾಲ್ಕು ದಶಕಗಳ ಹಿಂದೆ ವಿಜೃಂಭಿಸುತ್ತಿದ್ದ ಸಮಾಜವಾದಿ ಹಿನ್ನೆಲೆಯ ಕೆಲವು ಸಂಪಾದಕರೋ ಪತ್ರಕರ್ತರೋ ಈಗ ಇದ್ದಿದ್ದರೆ, ಉಲ್ಲೇಖಿಸಿದವರು “Get lost” “Get out” ಎಂದು ಅನ್ನಿಸಿಕೊಳ್ಳಬೇಕಾಗಿತ್ತೋ ಏನೋ!
ಕಾಲ ಬದಲಾಗಿದೆ, ಬಿಡಿ. 2014ರ ಅನಂತರ ತುಂಬ ತುಂಬ ಬದಲಾಗುತ್ತಲೂ ಇದೆ.
ಹಿಂದೊಮ್ಮೆ ವಾಜಪೇಯಿ ಅವರು ಹೇಳಿದ್ದರು, ನಾವು ಇತಿಹಾಸ ಬದಲಿಸಬಹುದು, ಆದರೆ, ಭೂಗೋಳವನ್ನು (Geography) ಬದಲಿಸಲಾರೆವು ಎಂದು. ಪಾಕಿಸ್ತಾನ, ಬಾಂಗ್ಲಾದೇಶ, ಚೀನಾ ದೇಶಗಳಂತಹ ಮಗ್ಗುಲ ಮುಳ್ಳುಗಳು ಆ ಉದ್ಗಾರಕ್ಕೆ ಕಾರಣವಾಗಿದ್ದವು. ಹಿಂದೂ ಸಮಾಜ ಎಚ್ಚೆತ್ತುಕೊಂಡರೆ, of course, ಜಡತ್ವವನ್ನು ಮೈಕೊಡವಿಕೊಂಡು ಎದ್ದರೆ ಅಸಾಧ್ಯವೂ ಸಾಧ್ಯವಾದೀತು.
ರಾಷ್ಟ್ರೀಯ ಅರ್ಥವ್ಯವಸ್ಥೆಯಿರಲಿ, ಅಂತಾರಾಷ್ಟ್ರೀಯ ಅರ್ಥವ್ಯವಸ್ಥೆಯಿರಲಿ, ಅರ್ಥ ಮಾಡಿಕೊಳ್ಳಲು ನಾವು ಸಾಮಾನು ಸರಂಜಾಮು ಸಾಗಿಸುವ ಹಡಗುಗಳನ್ನು, ಕಾರ್ಗೋ (cargo) ವಿಮಾನಗಳನ್ನು, ಗೂಡ್ಸ್ ಗಾಡಿಗಳನ್ನು, ದೊಡ್ಡ ದೊಡ್ಡ ಹೆದ್ದಾರಿಗಳನ್ನು ಒಂದಿಷ್ಟು ವಿಚಕ್ಷಣೆಯಿಂದ ನೋಡಬೇಕು. ತೈಲ ಸಾಗಣೆಯ ಹಡಗುಗಳನ್ನೂ, ಕಲ್ಲಿದ್ದಲು ಸಾಗಿಸುವ ರೈಲು ಗಾಡಿಗಳನ್ನೂ ಗಮನಿಸಬೇಕು. ಆಗ ಮನುಕುಲದ ಎಂಟು ಶತಕೋಟಿ ಮಾನವಜೀವಿಗಳ ಅಗತ್ಯಗಳನ್ನು ಪೂರೈಸುವ ವಿಶಾಲ ಅರ್ಥವ್ಯವಸ್ಥೆಯ ಸ್ಥೂಲ ನೋಟ ದೊರೆಯುತ್ತದೆ. ಈ ವ್ಯವಸ್ಥೆ ನಮ್ಮ ನರಮಂಡಲದಂತೆ. ಅರೆಕ್ಷಣವೂ ಸಹ ಈ ವ್ಯವಸ್ಥೆಯಿಲ್ಲದೆ ಮನುಷ್ಯ ಬದುಕಲಾರ. ಇತಿಹಾಸದ ಹಿನ್ನೋಟದಲ್ಲಿ ಸಾವಿರಾರು ವರ್ಷಗಳ ಹಿಂದೆ, ಜಾಗತಿಕ ಅರ್ಥವ್ಯವಸ್ಥೆಯಲ್ಲಿ ಭಾರತದ್ದೇ ಸಿಂಹಪಾಲು. ಅಂದಿನ ಸಿಲ್ಕ್ ರೂಟ್, ಸಾರ್ಥಗಳು, ಯೂರೋಪಿನಲ್ಲಿಯೂ ಹೆಸರು ಮಾಡಿದ್ದ ನಮ್ಮ ಸಿದ್ಧವಸ್ತುಗಳು, ಬಟ್ಟೆಗಳು ಎಲ್ಲವೂ ಜಗತ್ತಿನ ಆರ್ಥಿಕತೆಯ ಬಹು-ಆಯಾಮಗಳನ್ನು ನೆನಪಿಸುತ್ತವೆ. ಭಾರತ ಇದ್ದುದೇ ಹಾಗೆ. ಅಧ್ಯಾತ್ಮ – ಅರ್ಥ ವ್ಯವಸ್ಥೆ ಎರಡರಲ್ಲಿಯೂ ನಾವು ಔನ್ನತ್ಯ ಸಾಧಿಸಿದ್ದೆವು. ಶತ್ರುಗಳನ್ನು – ಪಾಶವೀ ರಿಲಿಜನ್ನುಗಳನ್ನು ಅರ್ಥ ಮಾಡಿಕೊಳ್ಳದೇ, ಶತಶತಮಾನಗಳ ಕಾಲ ಗುಲಾಮರಾಗಿಬಿಟ್ಟೆವು, ದರಿದ್ರರಾಗಿಬಿಟ್ಟೆವು, ಕಿಂಕರ್ತವ್ಯಮೂಢರಾಗಿಬಿಟ್ಟೆವು.
ಅರ್ಥ ವ್ಯವಸ್ಥೆ ಅಷ್ಟೇ ಅಲ್ಲ, ಜಗತ್ತಿನ ಅಂತಾರಾಷ್ಟ್ರೀಯ ಸಂಬಂಧಗಳು ತೀರಾ ತೀರಾ ಸಂಕೀರ್ಣ. ಅಂತಾರಾಷ್ಟ್ರೀಯ ಸ್ತರದಲ್ಲಿ ಕಳೆದ ನೂರು ವರ್ಷಗಳ ಭಾರತದ ಇತಿಹಾಸವನ್ನು ಗಮನಿಸಿದರೆ, ನಾವು ಉಳಿದಿರುವುದೇ ಹೆಚ್ಚು ಎಂಬುದು ಸ್ಪಷ್ಟವಾಗಿಬಿಡುತ್ತದೆ. ಐವತ್ತು ವರ್ಷಗಳ ಹಿಂದೆ, ಬ್ರಿಟಿಷರ ಪ್ರೀತಿಪಾತ್ರ ಪಕ್ಷವು ಅಧಿಕಾರದಲ್ಲಿದ್ದಾಗ, ಸಂಸತ್ತಿನಲ್ಲಿ ಅಕ್ಷರಶಃ ನೂರಾರು ಜನ ಸಂಸತ್ ಸದಸ್ಯರು CIA – KGB ಸಂಸ್ಥೆಗಳ Pay Rollನಲ್ಲಿದ್ದರಂತೆ. ಅವರಿಗೆ regular ಆಗಿ ವಿದೇಶೀ ಹಣ ಬರುತ್ತಿತ್ತು. ಕೆಲವು ವರ್ಷಗಳ ಹಿಂದೆ, ಈ ಗೂಢಚಾರೀ ಸಂಸ್ಥೆಗಳ ದಾಖಲೆಗಳು ಬಯಲಾದಾಗ (De-classification) ವಿಷಯ ತಿಳಿದ ನಾವೆಲ್ಲಾ ಚೇತರಿಸಿಕೊಳ್ಳಲು ಬಹಳ ಕಾಲವೇ ಹಿಡಿಯಿತು.
ಬಹಳ ವರ್ಷಗಳ ಕಾಲ ನಮ್ಮ ದೇಶದ ವಿದೇಶಾಂಗ ಮಂತ್ರಿಗಳು ಅಕ್ಷರಶಃ ಜೋಕರ್‌ಗಳಾಗಿಬಿಟ್ಟಿದ್ದರು. ತೈಲ ರಾಷ್ಟ್ರಗಳ ಮುಂದೆಹೋಗಿ, ಹಲ್ಲು ಗಿಂಜುತ್ತಿದ್ದರು, ಕರೆಯದಿದ್ದರೂ ಹೋಗಿ ಥೂ ಎನ್ನಿಸಿಕೊಂಡು ಬರುತ್ತಿದ್ದರು. ಅವರೆಲ್ಲಾ ಅಮೆರಿಕಾ ಇಲ್ಲವೇ ಸೋವಿಯತ್ ಒಕ್ಕೂಟದ ಆಜ್ಞಾನುವರ್ತಿಯಾಗಿರುವುದೇ ವಿದೇಶಾಂಗ ನೀತಿ ಎಂದುಕೊಂಡುಬಿಟ್ಟಿದ್ದರು. ಎರಡೂ ಶಕ್ತಿಕೇಂದ್ರದವರಿಂದ ಭಾರತ ಒದೆ ತಿಂದಿದ್ದೇ ಹೆಚ್ಚು. ಇಂಟೆಲಿಜೆನ್ಸ್ ಬ್ಯೂರೋ ಅಧಿಕಾರಿಗಳೂ, ಲೇಖಕರೂ, ಚಿಂತಕರೂ ಆಗಿದ್ದ ಆರ್.ಎನ್.ಕುಲಕರ್ಣಿಯವರು ವಿಷಾದದಿಂದ “ನಮ್ಮ ದೇಶಕ್ಕೆ ವಿದೇಶಾಂಗ ನೀತಿ ಎಂಬುದೇ ಇಲ್ಲ” ಎಂದಿದ್ದರು. ಹಲವಾರು ದೇಶಗಳಲ್ಲಿ ವಿದೇಶಾಂಗ ಇಲಾಖೆಯ ಅಧಿಕಾರಿಯಾಗಿಯೂ ಸೇವೆ ಸಲ್ಲಿಸಿ, ಕಟು-ಸತ್ಯಗಳನ್ನು ಕಂಡಿದ್ದ ಅವರಿಗೆ ಅಂದಿನ ಗೊಂದಲದ ವಿದೇಶಾಂಗ ನೀತಿ (?) ಭ್ರಮನಿರಸನ ಉಂಟುಮಾಡಿತ್ತು.
ಮೋದಿ ಸರ್ಕಾರದ ಪ್ರಥಮ ವಿದೇಶಾಂಗ ಮಂತ್ರಿಯಾಗಿ ಸುಷ್ಮಾ ಅದ್ಭುತವಾಗಿ ಕಾರ್ಯನಿರ್ವಹಿಸಿದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರ ಅನಂತರ ಉತ್ತರಾಧಿಕಾರಿ ಯಾರು ಎಂಬುದು ದೇಶಕ್ಕೆ ಚಿಂತೆಯ ಸಂಗತಿಯಾಗಿತ್ತು. ರಾಜಕಾರಣಿಗಳನ್ನು ಮಾತ್ರವೇ ವಿದೇಶಾಂಗ ಮಂತ್ರಿ ಸ್ಥಾನದಲ್ಲಿ ಕಲ್ಪಿಸಿಕೊಳ್ಳುತ್ತಿದ್ದವರಿಗೆ IFS ಅಧಿಕಾರಿಯೊಬ್ಬರು ಅತಿ-ಮಹತ್ತ್ವದ ಆ ಸ್ಥಾನಕ್ಕೆ ಆಯ್ಕೆ ಆಗಬಹುದು, ಎಂದು ಬಹಳ ಜನ ಪತ್ರಕರ್ತರೇ ಊಹಿಸಿರಲಿಲ್ಲ. ಇನ್ನು ಬಹುಪಾಲು ಕಾಂಗ್ರೆಸ್ ಆಡಳಿತದಲ್ಲಿಯೇ ವಿದೇಶಾಂಗ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ ಜೈಶಂಕರ್ ಅಂತಹವರು, ಬೇರೆಯೇ ಕಾರ್ಯಶೈಲಿಯ ಮೋದಿ ತಂಡದಲ್ಲಿ, ಸುಷ್ಮಾ ಅವರಿಗೆ ಸಮರ್ಥ ಉತ್ತರಾಧಿಕಾರಿಯಾಗಿ ಯಶಸ್ಸು ಪಡೆಯಬಲ್ಲರೇ ಎಂಬ ಸಂದೇಹ ಇದ್ದುದೂ ನಿಜವೇ.
ಯುದ್ಧಗಳು, ಅಂಟುರೋಗಗಳು, ಬದಲಾಗುವ ದೇಶ-ದೇಶಗಳ ನಡುವಿನ ಸಂಬಂಧಗಳು, ಔಷಧಿ – ಶಸ್ತ್ರಾಸ್ತ್ರಗಳನ್ನು ತಯಾರಿಸುವವರ ಕಟ್-ಥ್ರೋಟ್ ರಾಜಕೀಯಗಳ ನಡುವೆ ದೇಶವೊಂದರ ಪ್ರಧಾನಮಂತ್ರಿ – ವಿದೇಶಾಂಗ ಮಂತ್ರಿಗಳ ಪಾತ್ರ ಯಾವಾಗಲೂ ಕಷ್ಟತಮವಾದುದೇ, ಸಂಕೀರ್ಣವಾದುದೇ. ತುಂಬ ಯೋಚಿಸಿ ಇಟ್ಟ ಹೆಜ್ಜೆಯೂ ಕೆಲವೊಮ್ಮೆ ಮುಜುಗರಕ್ಕೆ ಕಾರಣವಾಗುತ್ತದೆ. ಭೂಕಂಪಕ್ಕೆ ತುತ್ತಾದ ಟರ್ಕಿ ದೇಶಕ್ಕೆ ತ್ವರಿತ ಸಹಾಯ ಹಸ್ತ ಚಾಚಿದ ಮತ್ತು ತುರ್ತು ಅಗತ್ಯಗಳನ್ನು ಪೂರೈಸಿದ ಭಾರತಕ್ಕೆ, ಕೆಲವೇ ದಿನಗಳಲ್ಲಿ ಆ ಜಿಹಾದೀ ಟರ್ಕಿ ದೇಶವು ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನವನ್ನು ಬೆಂಬಲಿಸಿ ದ್ರೋಹ ಬಗೆಯಿತು. ಮಾಲ್ಡೀವ್ಸ್ ನಂತಹ ಜಿರಳೆ ಗಾತ್ರದ ದೇಶವು ಭಾರತಕ್ಕೆ ಸೆಡ್ಡು ಹೊಡೆಯುತ್ತದೆ, ಸವಾಲು ಹಾಕುತ್ತದೆ, ಅವಮಾನ ಮಾಡುತ್ತದೆ. ಇಂತಹ ನೂರೆಂಟು ಅಪಸವ್ಯಗಳು ಅಂತಾರಾಷ್ಟ್ರೀಯ ರಾಜಕಾರಣದಲ್ಲಿ ಇರುವಂತಹುವೇ! ಈ ಹಿನ್ನೆಲೆಯಲ್ಲಿ ವಿದೇಶಾಂಗ ಖಾತೆಯನ್ನು ನಿಭಾಯಿಸುವುದು ಸರಳವೂ ಅಲ್ಲ, ಸುಲಭವೂ ಅಲ್ಲ.
ಅಪಾರ ಅನುಭವದ ಜೈಶಂಕರ್ ತಮ್ಮ “THE INDIA WAY” ಕೃತಿಯಲ್ಲಿ ಅಂತಾರಾಷ್ಟ್ರೀಯ ಜಗತ್ತಿನ ಅನೇಕ ಆಯಾಮಗಳ ಬಗೆಗೆ ಅದ್ಭುತವಾದ ವ್ಯಾಖ್ಯಾನ ನೀಡುತ್ತಾರೆ. ಅಮೆರಿಕದಂತಹ ದೇಶದ ಸ್ಥಾನಮಾನದ ಬಗೆಗೆ, ನಮ್ಮ ದೇಶದ ಕಾರ್ಯತಂತ್ರ ಸಂಸ್ಕೃತಿಯ ಬಗೆಗೆ, ಭಾರತದ ಮೇಲಿರುವ ಗತಕಾಲದ ಭಾರದ ಬಗೆಗೆ, ಜಾಗತಿಕ ಮಟ್ಟದಲ್ಲಿ ತಡವಾಗಿಯಾದರೂ ದೊರೆತಿರುವ – ದೊರೆಯುತ್ತಿರುವ ಅವಕಾಶಗಳ ಬಗೆಗೆ, ಅಂತಾರಾಷ್ಟ್ರೀಯ ಶಕ್ತಿಗಳ ಹೊಸ ಸಮೀಕರಣದ ಬಗೆಗೆ, ತುಂಬಾ ಮೌಲಿಕವಾದ ಬರೆಹವನ್ನು ನೀಡಿದ್ದಾರೆ. ಈ ಅಂತಾರಾಷ್ಟ್ರೀಯ ಸಂಗತಿಗಳ ಜಗತ್ತೇ ಹೀಗೆ, ದೇಶದೊಳಗಿನ ರಾಜಕಾರಣದ ಒಳಹೂರಣವನ್ನು ಬಗೆದು – ತೆಗೆದು ಬರೆದಂತೆ ಅಲ್ಲವೇ ಅಲ್ಲ. ಪ್ರತಿಯೊಂದು ಸಾಲಿಗೂ ಪ್ರತಿಯೊಂದು ಸಂಗತಿಗೂ, ಬಹು-ಆಯಾಮದ ಮುಖಗಳಿರುತ್ತವೆ, ಅಷ್ಟೇ ಅಲ್ಲ, ವೈಫಲ್ಯದ ವಿಸಂಗತಿಗಳೂ ಇರುತ್ತವೆ. ಏನೇ ನಿರ್ಧಾರ ತೆಗೆದುಕೊಂಡರೂ, ಅನಂತರ ಹೇಗೆ ವಿಶ್ಲೇಷಿಸಿದರೂ ಪ್ರತಿಯೊಂದಕ್ಕೂ ಕೊಂಕು ತೆಗೆಯುವ ಟೀಕಾಕಾರರೂ ಇರುತ್ತಾರೆ.
ವಿದೇಶಾಂಗ ವ್ಯವಹಾರ ಇರುವುದೇ ಹಾಗೆ.
ಜೈಶಂಕರ್ ತಮ್ಮ ಕಾರ್ಯನಿರ್ವಹಣೆಯಲ್ಲಿ ಯಶಸ್ಸು ಪಡೆದಂತೆಯೇ, ಈ ಕೃತಿ ರಚನೆಯಲ್ಲಿಯೂ ಔನ್ನತ್ಯ ಸಾಧಿಸಿದ್ದಾರೆ. ವಿಶೇಷವೆಂದರೆ ಕ್ಲಿಷ್ಟವೂ ಸಂಕೀರ್ಣವೂ, ಮುಖ್ಯವಾಗಿ ತುಂಬಾ ತಾಂತ್ರಿಕವೂ ಆದ ಇಂತಹ ಕೃತಿಗಳನ್ನು ಸಮರ್ಪಕವಾಗಿ ಕನ್ನಡಕ್ಕೆ ಭಾಷಾಂತರಿಸುವುದು ಬಹಳ ದೊಡ್ಡ ಸವಾಲಿನ ಕೆಲಸ. ಸಾಮಾನ್ಯ ಅನುವಾದವನ್ನು ಮೀರಿದ, ಇಂತಹ ರಾಜತಾಂತ್ರಿಕ ಮತ್ತು ವಿದೇಶಾಂಗ ಮಗ್ಗುಲುಗಳ ಗ್ರಂಥವೊಂದನ್ನು ಬಿ.ಎಸ್.ಜಯಪ್ರಕಾಶ ನಾರಾಯಣ ತುಂಬಾ ಚೆನ್ನಾಗಿ ಕನ್ನಡಕ್ಕೆ ತಂದಿದ್ದಾರೆ. ಮೂಲ ಇಂಗ್ಲಿಷ್ ಮತ್ತು ಕನ್ನಡಾನುವಾದದ ಎರಡೂ ಪಠ್ಯಗಳನ್ನು ಜೊತೆಜೊತೆಯಲ್ಲಿಯೇ ನೋಡಿದಾಗ, ಗಮನಿಸಿದಾಗ, ಹೋಲಿಸಿದಾಗ ಜಯಪ್ರಕಾಶರ ಶ್ರಮ ಎಂತಹುದು ಎಂಬುದು ತಿಳಿಯುತ್ತದೆ. ನಿಜಕ್ಕೂ JP ಅಭಿನಂದನೀಯರು.
ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಆ ಕರಾಳ ದಿನಗಳನ್ನು ನೆನಪಿಸಿ ಅಂತರಂಗ ಕಲಕುವ ಬುಗುರಿ
“…..ನಾವು ದೇಶಗಳ ಗಡಿ ಮತ್ತು ಸಾಂಪ್ರದಾಯಿಕ ಮಾದರಿಯ ರಾಜಕಾರಣದ ಆಚೆಗೆ ಕೂಡ ಮಾತನಾಡುತ್ತಿದ್ದೇವೆ. ಅಧಿಕಾರವನ್ನು ವ್ಯಾಖ್ಯಾನಿಸುತ್ತಿದ್ದ ಸಂಗತಿಗಳಾಗಲೀ, ರಾಷ್ಟ್ರೀಯ ನಿಲುವನ್ನು ನಿರ್ಧರಿಸುತ್ತಿದ್ದ ಸಂಗತಿಗಳಾಗಲೀ, ಈಗ ಹಿಂದಿನಂತೆಯೇ ಉಳಿದಿಲ್ಲ. ಅವುಗಳ ಜಾಗದಲ್ಲಿ ತಂತ್ರಜ್ಞಾನ, ಸಂಪರ್ಕ ಸೌಲಭ್ಯ ಮತ್ತು ವಾಣಿಜ್ಯ ವಹಿವಾಟುಗಳು ಮುನ್ನೆಲೆಗೆ ಬಂದಿವೆ. ನಿರ್ಬಂಧಿತವೂ ಅಂತರವಲಂಬಿತವೂ ಆಗಿರುವ ಸದ್ಯದ ಜಗತ್ತಿನಲ್ಲಿ ನಮಗೆ ಎದುರಾಗುವ ಸ್ಪರ್ಧೆಯನ್ನು ನಾವು ಹೆಚ್ಚು ಜಾಣ್ಮೆಯಿಂದ ಎದುರಿಸಬೇಕು. ಬಹುಧ್ರುವೀಯ ವ್ಯವಸ್ಥೆಯು ದುರ್ಬಲವಾಗುತ್ತಿದ್ದಂತೆಯೇ, ಜಾಗತಿಕ ಒಳಿತು ಎನ್ನುವುದು ಕೂಡ ಹೆಚ್ಚು ವಿವಾದಾಸ್ಪದವಾಗಿದೆ. ಒಂದು “ಆರ್ಕ್ಟಿಕ್ ಪ್ಯಾಸೇಜ್”ಅನ್ನು ತೆರೆಯುವ ಮೂಲಕ ಹವಾಮಾನ ಬದಲಾವಣೆಯಂತಹ ವಿಚಾರ ಕೂಡ ಜಾಗತಿಕ ರಾಜಕಾರಣಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿದೆ. ಇಷ್ಟೇ ಅಲ್ಲ, ಎಲ್ಲರ ನಿರೀಕ್ಷೆಯನ್ನು ಮೀರಿ ಕರೋನಾ ಸಾಂಕ್ರಾಮಿಕ ಕೂಡ ಇಲ್ಲಿ “ವೈಲ್ಡ್ ಕಾರ್ಡ್” ಆಗಿ ಹೊರಹೊಮ್ಮಿದೆ. ಚುಟುಕಾಗಿ ಹೇಳುವುದಾದರೆ, ಬದಲಾವಣೆಗಳು ಹಿಂದೆಂದೂ ಇಲ್ಲದಂತಹ ರೀತಿಯಲ್ಲಿ ಅಭೂತಪೂರ್ವವಾಗಿ ಸಂಭವಿಸುತ್ತಿವೆ……” (“ಭಾರತ ಪಥ” ಪುಟ ೧೧೮).
20ನೆಯ ಶತಮಾನದ ಪರಿಪ್ರೇಕ್ಷ್ಯದಲ್ಲಿ, ವಿದೇಶಾಂಗ – ಆರ್ಥಿಕ – ಅಂತಾರಾಷ್ಟ್ರೀಯ ಆಯಾಮಗಳ ಭಾರತೇತಿಹಾಸದ ಒಂದು ಮಹತ್ತ್ವದ ಚಿತ್ರ ನೀಡುವಲ್ಲಿ ಜೈಶಂಕರ್ ಯಶಸ್ವಿಯಾಗಿದ್ದಾರೆ ಮತ್ತು ಒಂದು ರೀತಿಯಲ್ಲಿ ಇತಿಹಾಸಕಾರರೂ ಆಗಿಬಿಟ್ಟಿದ್ದಾರೆ.
“ಭಾರತ ಪಥ” ನಾವೆಲ್ಲ ಗಮನಿಸಲೇಬೇಕಾದ ಕೃತಿಗಳಲ್ಲೊಂದು.
ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ವಾರಾಣಸಿಯ ನಂದಿ ಮುಖ ಮಾಡಿದ ಕಡೆಗೆ ಶಿವ ಬರಲು ಇನ್ನೆಷ್ಟು ಕಾಯಬೇಕು?